4 ಕೋ. ರೂ. ಅನುದಾನದಲ್ಲಿ ರಾಯಚೂರು ಕೋಟೆ ಅಭಿವೃದ್ಧಿಗೆ ಜಿಲ್ಲಾಡಳಿತ ಪಣ
ಬಹುದಿನಗಳಿಂದ ನನೆೆಗುದಿಗೆ ಬಿದ್ದಿದ್ದ ಪ್ರವಾಸಿ ತಾಣ ಅಭಿವೃದ್ಧಿಗೆ ಮರುಜೀವ

ರಾಯಚೂರು : ಐತಿಹಾಸಿಕ ರಾಯಚೂರು ಕೋಟೆಯನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತ, ಪುರಾತತ್ವ ಇಲಾಖೆ ಮುಂದಾಗಿದ್ದು, ಕೋಟೆಯ ಬಳಿಯ ರಾಜಕಾಲುವೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರು ಒಳ ಚರಂಡಿ, ಸೇತುವೆ ಬಳಿ ಇರುವ ಕೋಟೆ ಬುರುಜ, ಕೋಟೆ ಗೋಡೆ ಸಂರಕ್ಷಣೆ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಕೆಇಬಿ ಕಚೇರಿ ತನಕ ದೊಡ್ಡ ಕಲ್ಲುಗಳನ್ನು ಜೋಡಿಸಿ ಗೋಡೆ ಗಟ್ಟಿಗೊಳಿಸುವ ಕೌಶಲ್ಯವಿರುವ ಇರುವ ಕಾರ್ಮಿಕರಿಂದ ಕೆಲಸವನ್ನು ಕೈಗೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆ ಇದಕ್ಕಾಗಿ 4.5 ಕೋಟಿ ರೂ.ಬಿಡುಗಡೆ ಮಾಡಿದೆ. ಜೆಸಿಬಿಗಳಿಂದ ಕೆಲ ದಿನಗಳಿಂದ ರಾಜಕಾಲುವೆಯಲ್ಲಿ ಸ್ವಚ್ಛತೆ ಕಾರ್ಯ ಮಾಡಲಾಗುತ್ತಿದೆ.
ನಗರದಲ್ಲಿರುವ ಪುರಾತನ ಸ್ಮಾರಕಗಳ ಸಂರಕ್ಷಣೆ ಮಾಡಿ ಪ್ರವಾಸಿಗರನ್ನು ಸೆಳೆಯುವ ದಿಸೆಯಲ್ಲಿ ರಾಯಚೂರು ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದ್ದು, ಮೊದಲ ಹಂತದಲ್ಲಿ ಕೋಟೆ ಮುಂಭಾಗದ ರಾಜ ಕಾಲುವೆಗೆ ಎರಡೂ ಬದಿಗೆ ತಡೆ ಗೋಡೆ ನಿರ್ಮಿಸಲು ಉದ್ದೇಶಿಸಿದೆ. ಇದೇ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಸಹಕಾರದೊಂದಿಗೆ ಕೋಟೆಗಳ ಸಂರಕ್ಷಣಾ ಕಾರ್ಯವನ್ನೂ ಆರಂಭಿಸಿದೆ.
ಜಿಲ್ಲಾಧಿಕಾರಿ ನಿತೀಶ್ ಹಾಗೂ ಮಹಾನಗರ ಪಾಲಿಕೆಯ ಜುಬಿನ್ ಮೋಹಾಪಾತ್ರ, ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡ್ವೆ ಅವರು ಜೂನ್ 5ರಂದು ಸಂಜೆ ರಾಯಚೂರ ನಗರದ ಕೋಟೆ ಹತ್ತಿರದ ರಾಜಕಾಲುವೆ ಪ್ರದೇಶಕ್ಕೆ ಭೇಟಿ ನೀಡಿ ಕಾಲುವೆಯ ದುರಸ್ಥಿ ಕಾರ್ಯ ವೀಕ್ಷಣೆ ನಡೆಸಿದರು. ಸ್ವಚ್ಛತಾ ಕಾಮಗಾರಿ ವೇಗವಾಗಿ ನಡೆಯುವಂತೆ ಸೂಚನೆ ನೀಡಿದ್ದಾರೆ.
ರಾಯಚೂರು ನಗರದ ಮೆಕ್ಕಾ ದರ್ವಾಜಾ ಸಮೀಪದ ಕಂದಕ ಸ್ವಚ್ಛತೆ ಹಾಗೂ ಒಳ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಪ್ರತ್ಯೇಕವಾಗಿ 1 ಕೋಟಿ ರೂ.ತೆಗೆದಿರಿಸಲಾಗಿದೆ. ಈ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು. ‘ರಾಜ್ಯ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ನೆರವಿನಿಂದ ಮಲಿಯಾಬಾದ್ ಕೋಟೆ ಪ್ರದೇಶವನ್ನೂ ಅಭಿವೃದ್ಧಿ ಪಡಿಸಲು ಅವಕಾಶ ಇದೆ. ಅದಕ್ಕೆ ಅಂದಾಜು 2 ಕೋಟಿ ರೂ.ಬೇಕಾಗಲಿದೆ. ಕೋಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು.
-ಪ್ರೇಮಲತಾ ಬಿ.ಎಂ., ರಾಜ್ಯ ಪುರಾತತ್ವ ಇಲಾಖೆಯ ಅಭಿಯಂತರೆ
ಕಾಲುವೆಯ ಸ್ವಚ್ಛತಾ ಕಾರ್ಯವು ಈಗ ಆರಂಭವಾಗಿದ್ದರಿಂದಾಗಿ ರಾಯಚೂರ ನಿಗರದ ನಿವಾಸಿಗಳಿಗೆ ಸಂತಸ ತಂದಿದೆ. ಈ ಕಾಲುವೆಯ ಸ್ವಚ್ಛತಾ ಕಾರ್ಯವು ವೈಜ್ಞಾನಿಕ ರೀತಿಯಲ್ಲಿ ಆಗಬೇಕು. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
-ಮೋಸಿನ್ ಖಾನ್, ಸಮಾಜ ಸೇವಕ ರಾಯಚೂರು
ರಾಜಕಾಲುವೆಗಳ ಸ್ವಚ್ಛತೆ ಮಾಡುತ್ತಿದ್ದು, 20 ಸಾವಿರ ಟನ್‌ನಷ್ಟು ಪ್ಲಾಸ್ಟಿಕ್ ಹೊರ ಬಂದಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಹೆಚ್ಚಾಗಿ ಬಳಸಬಾರದು ಹಾಗೂ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು. ರಾಯಚೂರನ್ನೂ ಹಸಿರು ನಗರ ನಿರ್ಮಾಣಕ್ಕೆ ಪಣ ತೊಟ್ಟಿದ್ದು ಸಾರ್ವಜನಿಕರು ಸಹಕಾರ ನೀಡಬೇಕು.
-ಜುಬಿನ್ ಮೋಹಾಪಾತ್ರ, ಆಯುಕ್ತ, ರಾಯಚೂರು ಮಹಾನಗರಪಾಲಿಕೆ
ರಾಯಚೂರು ನಗರದಲ್ಲೇ ಕೋಟೆ ಕೊತ್ತಲಗಳ ನಾಡಾಗಿದೆ. ಹಲವೆಡೆ ಕೋಟೆಯ ಜಾಗ ಒತ್ತುವರಿಯಾಗಿದೆ. ಇತಿಹಾಸದ ಕುರುಹುಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಕೇಂದ್ರ ಬಸ್ ನಿಲ್ದಾಣ ಬಳಿಯಲ್ಲೇ ದೊಡ್ಡದಾದ ಅಪರೂಪದ ಶಾಸನ ಇದೆ. ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಅದನ್ನು ಉಳಿಸಿಕೊಳ್ಳಲು ಮುಂದಾಗಬೇಕು.
-ಸೈಯದ್ ಹಫೀಝುಲ್ಲಾ, ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ







