ಮಕ್ಕಳಿಗೆ ನಮ್ಮ ಬಹು ಪರಂಪರೆಗಳ ಅರಿವು ಬೇಡವೇ?

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಎಳೆಯ ತಲೆಮಾರಿನ ಮಕ್ಕಳು ಹೆಚ್ಚು ಭಾಗವಹಿಸುವುದಿಲ್ಲ. ಮುಖ್ಯವಾಗಿ ಹೈಸ್ಕೂಲು ಮತ್ತು ಕಾಲೇಜಿನ ಮಕ್ಕಳು ಹಾಡು ಕುಣಿತಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ತೋರಿಸುವ ಆಸಕ್ತಿಯನ್ನು ಭಾಷಣಗಳನ್ನು ಕೇಳಲು ತೋರಿಸುವುದಿಲ್ಲ. ಯುವ ತಲೆಮಾರು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳ ಬಗ್ಗೆ ಹಿರಿಯ ತಜ್ಞರಿಂದ ಭಾಷಣಗಳನ್ನು ಏರ್ಪಡಿಸಿದರೆ ಅವರು ಬರುವುದಿಲ್ಲ. ಅನೇಕ ವಿಚಾರಗೋಷ್ಠಿಗಳು ನಡೆಯುತ್ತವೆ. ನಮ್ಮ ಸುತ್ತಮುತ್ತಲಿನ ಭಾಷೆಗಳು, ಸಾಹಿತ್ಯ ಪರಂಪರೆಗಳು, ಹಿರಿಯ ಸಾಹಿತಿಗಳು, ವಿವಿಧ ಕ್ಷೇತ್ರಗಳ ಸಾಧಕರು, ಸಮಾಜ ಸುಧಾರಕರು ಇಂತಹ ವಿಷಯಗಳ ಕುರಿತಾಗಿ ನಡೆಯುವ ಕಾರ್ಯಗಳಲ್ಲಿ ವಯಸ್ಸಾದ ಹಿರಿಯರು ಭಾಗವಹಿಸುತ್ತಾರೆ. ಸ್ವಲ್ಪ ಮಟ್ಟಿಗೆ ತಿಳಿದ ವಿಷಯವೇ ಆದರೂ ಹಿರಿಯರು ಬರುತ್ತಾರೆ. ಸ್ವಲ್ಪವೂ ಮಾಹಿತಿ ಇಲ್ಲದ ಮಕ್ಕಳು ಬರುವುದಿಲ್ಲ. ಭಾಷೆ, ಸಾಹಿತ್ಯ, ರಂಗಭೂಮಿ, ಇತಿಹಾಸ, ಮಾಧ್ಯಮ, ಶಿಕ್ಷಣ, ವೃತ್ತಿಪರಂಪರೆ, ವಿಜ್ಞಾನ ಹೀಗೆ ಮಾನವಿಕ, ಸಮಾಜ ವಿಜ್ಞಾನ ಮತ್ತು ಭೌತಿಕ ವಿಜ್ಞಾನಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿಗಳನ್ನು, ಸಮ್ಮೇಳನಗಳನ್ನು ಅಕಾಡಮಿಗಳು, ಸಾಹಿತ್ಯ ಪರಿಷತ್ತು ಹಾಗೂ ಆಯಾ ವಿಷಯಗಳಲ್ಲಿ ಕೆಲಸಮಾಡುತ್ತಿರುವ ಬೇರೆ ಬೇರೆ ಸಂಘ ಸಂಸ್ಥೆಗಳು ಆಯೋಜಿಸುತ್ತಿರುತ್ತವೆ. ಅಲ್ಲಿ ಹಿರಿಯರು ಇರುತ್ತಾರೆ. ಕಿರಿಯರು ಇಲ್ಲ, ಇದ್ದರೂ ಅವರ ಸಂಖ್ಯೆ ಬಹಳ ಬಹಳ ಕಡಿಮೆ. ಅವರವರ ಓದು ಮತ್ತು ಆಸಕ್ತಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಾದರೂ ಭಾಗವಹಿಸಬೇಕಲ್ಲ. ಅದೂ ಇಲ್ಲ. ಇದಕ್ಕೆ ಇರುವ ಕಾರಣಗಳನ್ನು ಪಟ್ಟಿ ಮಾಡುವುದು ಇಲ್ಲಿ ನನ್ನ ಉದ್ದೇಶವಲ್ಲ. ಭಾಗವಹಿಸದೆ ಇರುವುದರಿಂದ ಯುವ ಜನಾಂಗಕ್ಕೆ ಆಗುವ ನಷ್ಟದ ಬಗ್ಗೆ ನಾವು ಗಮನ ಹರಿಸಬೇಕಾಗಿದೆ.
ಕೆಲವು ಕಾರ್ಯಕ್ರಮಗಳನ್ನು ಪ್ರಸ್ತಾವಿಸುತ್ತೇನೆ. ಕರಾವಳಿ ವಲಯಕ್ಕೆ ಮಿತಗೊಳಿಸಿ ನಿದರ್ಶನಗಳನ್ನು ಕೊಡುತ್ತೇನೆ. ಕರಾವಳಿ ವಲಯದ ಸಾಹಿತ್ಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ಅದ್ಭುತವಾಗಿ ನಿರ್ಮಾಣ ಮಾಡಿದ ಹಿರಿಯ ಸಾಧಕರಿದ್ದರು, ಈಗಲೂ ಈ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುವ ಕನ್ನಡ, ತುಳು, ಬ್ಯಾರಿ, ಕೊಂಕಣಿ ಮೊದಲಾದ ಭಾಷೆ ಮತ್ತು ಸಮುದಾಯಗಳ ಸಾಂಸ್ಕೃತಿಕ ನಾಯಕರು ಇದ್ದಾರೆ. ಕುದ್ಮಲ್ ರಂಗರಾಯರು, ಮೊಳಹಳ್ಳಿ ಶಿವರಾಯರು, ಕಾರ್ನಾಡು ಸದಾಶಿವ ರಾಯರು ಮೊದಲಾದ ಸಮಾಜ ಸುಧಾರಕರಿದ್ದರು, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯನವರಿಂದ ತೊಡಗಿ ಶಿವರಾಮ ಕಾರಂತರವರೆಗೆ ಪಟ್ಟಿಮಾಡಿದರೆ ಹತ್ತಾರು ಸಾಹಿತಿಗಳಿದ್ದರು. ಶೇಣಿ, ಪೆರ್ಲ, ದೇರಾಜೆ, ಸಾಮಗ ಹೀಗೆ ಯಕ್ಷಗಾನ ಕಲಾವಿದರಿದ್ದರು, ಪ್ರಸಂಗಕರ್ತರಿದ್ದರು. ಕರಾವಳಿಯ ಅಭಿವೃದ್ಧಿಗೆ ಶ್ರಮಿಸಿದ ರಾಜಕಾರಣಿಗಳಿದ್ದರು. ಶಿಕ್ಷಣ ಸಮುಚ್ಚಯಗಳನ್ನು ಕಟ್ಟಿದ ಶಿಕ್ಷಣ ಪ್ರೇಮಿಗಳಿದ್ದರು. ಔದ್ಯೋಗಿಕ ರಂಗದ ನಾಯಕರಿದ್ದರು. ರಂಗಭೂಮಿ, ಸಿನೆಮಾ, ಮಾಧ್ಯಮಗಳಲ್ಲಿ ಸಾಧನೆ ಮಾಡಿದವರಿದ್ದರು. ಆರ್ಥಿಕ ತಜ್ಞರಿದ್ದರು. ಜನಪದ ಕಲಾವಿದರಿದ್ದರು, ಗಾಯಕರಿದ್ದರು. ಅತ್ಯುತ್ತಮ ಶಿಕ್ಷಕರಿದ್ದರು. ಇಂಥವರ ಬದುಕು, ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಜನ್ಮ ದಿನಾಚರಣೆ, ಸಂಸ್ಥೆಗಳ ಬೆಳ್ಳಿ ಹಬ್ಬ, ಸುವರ್ಣ, ವಜ್ರ ಮತ್ತು ಶತಮಾನೋತ್ಸವ ಆಚರಣೆಗಳು, ಸಾಧಕರ ಹೆಸರಿನ ಪ್ರಶಸ್ತಿ ಸಮಾರಂಭಗಳು, ಸಾಹಿತ್ಯ ಸಮ್ಮೇಳನಗಳು ಅದ್ದೂರಿಯಾಗಿ ನಡೆಯುತ್ತಿರುತ್ತವೆ. ಅಲ್ಲಿಗೆ ಹೋದರೆ ಬಹಳ ಕಡೆಗಳಲ್ಲಿ ಯುವ ಸಮುದಾಯದ ಗೈರುಹಾಜರಿ ಎದ್ದು ಕಾಣುತ್ತದೆ. ನಿಜವಾಗಿ ಯುವ ತಲೆಮಾರಿನವರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕಾದ ಸಮಾರಂಭಗಳಿವು. ಇಂತಹ ಸಮಾರಂಭಗಳಲ್ಲಿ ಹಿಂದಿನಿಂದಲೂ ಭಾಗವಹಿಸುತ್ತಾ ಬಂದ ಹಿರಿಯರು ತಪ್ಪದೆ ಹಾಜರಿರುತ್ತಾರೆ. ಭಾಷಣಕಾರರು ಕಾರ್ಯಕ್ರಮದ ವಿಷಯದ ಹಿಂದಣ ಇತಿಹಾಸವನ್ನು ಪ್ರಸ್ತಾವಿಸಿ ‘‘ಈ ಪರಂಪರೆಯನ್ನು ಮುಂದುವರಿಸುವ ಅಗತ್ಯವಿದೆ. ಯುವ ತಲೆಮಾರು ಇದಕ್ಕೆ ತಯಾರಾಗಬೇಕು. ಹಿರಿಯರ ಸಾಧನೆಯನ್ನು ಕಿರಿಯರು ಅರಿತಿರಬೇಕು. ಯುವ ತಲೆಮಾರು ಅಭಿಮಾನ ಪಡುವ ಪರಂಪರೆಯನ್ನು ಹಿರಿಯರು ಕಟ್ಟಿ ಬೆಳೆಸಿದ್ದಾರೆ. ನಮ್ಮ ಪರಂಪರೆಯನ್ನು ಅರಿತು ಮುನ್ನಡೆಯಬೇಕು. ಬೇರೆ ಬೇರೆ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರ ಜೀವನ ಚರಿತ್ರೆಯನ್ನು ಓದಬೇಕು. ಅದರಿಂದ ಪ್ರೇರಿತರಾಗಿ ನೀವು ಕೂಡ ಸಾಧನೆ ಮಾಡಬೇಕು. ನಮ್ಮ ಪರಂಪರೆಯ ಮುಂದಿನ ವಾರಸುದಾರರು ನೀವು’’ ಎಂದು ಕರೆ ಕೊಡುತ್ತಾರೆ. ವಾಸ್ತವಿಕವಾಗಿ ಇವು ಸಮಾರಂಭದ ಆಶಯಕ್ಕೆ ಒಪ್ಪುವ ಮಾತುಗಳೇ ಆಗಿರುತ್ತವೆ. ಆದರೆ ಈ ಕರೆಯನ್ನು ಸ್ವೀಕರಿಸಲು ಅಲ್ಲಿ ಮಕ್ಕಳೇ ಇರುವುದಿಲ್ಲ! ಹಿರಿಯರು ತಲೆತೂಗುತ್ತಾ ಕುಳಿತಿರುತ್ತಾರೆ. ಹೀಗಾಗಿ ಇಂತಹ ಸಮಾರಂಭಗಳ ಉದ್ದೇಶವೂ ಈಡೇರುವುದಿಲ್ಲ. ಕಿರಿಯರು ಹೊಂದಿರಬೇಕಾದ ಪರಂಪರೆಯ ಪ್ರಜ್ಞೆಯೂ ಸಾಕಾರಗೊಳ್ಳುವುದಿಲ್ಲ. ಯುವ ಸಮುದಾಯ ಈ ಮಾತುಗಳನ್ನು ಕೇಳಬೇಕಿತ್ತು ಎಂದು ಹಿರಿಯರು ಗೊಣಗುತ್ತಾರೆ!
ನಾವು ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ಅದು ಹೊರಬಹುದಾದ ಭಾರದ ಒಂದು ಮಿತಿ ಇದೆ. ಲೋಕದಲ್ಲಿ ಇರುವ ಎಲ್ಲಾ ವಿಷಯಗಳನ್ನು ತರಗತಿಯೊಳಗೆ ತಂದು ಕಲಿಸಲು ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿ ನಮ್ಮ ಮಕ್ಕಳು ಕಲಿಯಬೇಕಾದ ನೂರಾರು ವಿಷಯಗಳಿವೆ. ಎಲ್ಲರೂ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ಬಹುಶಃ ಕಲಿಯುವ ಅಗತ್ಯವೂ ಇಲ್ಲ. ಕೆಲವು ವಿಷಯಗಳು ವೃತ್ತಿಪರವಾಗಿದ್ದರೆ ಇನ್ನು ಕೆಲವು ಅವರವರ ಆಸಕ್ತಿಗೆ ಸಂಬಂಧಪಟ್ಟಿರುತ್ತವೆ. ಮಕ್ಕಳಿಗೆ ಆಸಕ್ತಿ ಮೂಡಿಸುವ, ಕುತೂಹಲ ಅರಳಿಸುವ ಕೆಲಸವನ್ನು ಕಲಿಕೆಯಲ್ಲಿ ಒಂದು ಹಂತದವರೆಗೆ ಮಾಡಬಹುದು. ಪ್ರತೀ ಮನೆಯ ಹೆತ್ತವರಲ್ಲಿ ಅವರ ಮಕ್ಕಳು ಕಲಿಯಬೇಕಾದ ವಿಷಯಗಳ ಒಂದು ದೊಡ್ಡ ಪಟ್ಟಿಯೇ ಇರುತ್ತದೆ. ಮುಖ್ಯವಾಗಿ ಅದು ಹೆತ್ತವರ ಆಸಕ್ತಿಯ ವಿಷಯವಾಗಿರುತ್ತದೆಯೇ ಹೊರತು ಮಕ್ಕಳ ಆಸಕ್ತಿಯ ಸಂಗತಿಯಾಗಿರುವುದಿಲ್ಲ. ಪಠ್ಯ ವಿಷಯಕ್ಕೆ ಲಲಿತ ಕಲೆಗಳೆಲ್ಲವೂ ಸೇರಬೇಕು. ಯೋಗ ಸೇರಬೇಕು, ಕಂಬಳ ಸೇರಬೇಕು, ನಮ್ಮ ನಾಡಿನ ಎಲ್ಲ ಸಾಧಕರು ಬರಬೇಕು, ಅದು ಇದು ಅವರು ಇವರು ಎಲ್ಲವೂ ಪಠ್ಯಕ್ರಮದಲ್ಲಿ ಇರಬೇಕು ಎಂದರೆ ಅದು ವಾಸ್ತವಿಕವಿಲ್ಲ. ಪ್ರತೀ ಸಾಹಿತ್ಯ ಪ್ರಕಾರಕ್ಕೆ, ಪ್ರತೀ ರಂಗಪ್ರಕಾರಕ್ಕೆ, ಪ್ರತೀ ಕ್ರೀಡಾಪ್ರಕಾರಕ್ಕೆ, ಪ್ರತೀ ಬೆಳೆಗೆ ಒಂದೊಂದು ವಿಶ್ವವಿದ್ಯಾನಿಲಯ ಬೇಕು ಎಂದು ಬಯಸುವುದು ಈ ಬಯಕೆಯ ಒಂದು ಭಾಗವೇ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ತಪ್ಪು ಎನ್ನುವುದಕ್ಕಿಂತ ಅವಾಸ್ತವ ಎಂದು ಹೇಳಬಹುದು. ಇಂತಹ ನಮ್ಮ ಬಯಕೆಯನ್ನು ಪೂರೈಸುವ ಉದ್ದೇಶದಿಂದಲೇ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತವೆ. ಇದರ ಲಾಭವನ್ನು ಪಡೆಯಬೇಕಾದರೆ ನಮ್ಮ ಮಕ್ಕಳು ತರಗತಿಗಳ ಹೊರಗಿನ ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಶಿಕ್ಷಣ ಸಂಸ್ಥೆಗಳಿಂದ ಹೊರಗೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಕ್ಕಳು ಮಾಹಿತಿಗಳನ್ನು ಸಂಗ್ರಹಿಸಬೇಕು. ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು.
ಮುಖ್ಯ ಭಾಷೆ ಕನ್ನಡವೂ ಸೇರಿದಂತೆ ನಮ್ಮ ನಾಡಿನಲ್ಲಿ ಹಲವು ಭಾಷೆಗಳಿವೆ. ಕರಾವಳಿಯಲ್ಲಿ ತುಳು, ಕೊಂಕಣಿ, ಬ್ಯಾರಿ, ಹವ್ಯಕ, ಗೌಡ ಕನ್ನಡ, ಕುಂದಾಪುರ ಕನ್ನಡ, ಚಿತ್ಪಾವನ, ಕೊರಗತುಳು, ಮರಾಟಿ, ಕೊಡಗು, ಮಲಯಾಳಂ, ಮೋಯ ಮಲಯಾಳಂ ಮೊದಲಾದ ಭಾಷೆಗಳನ್ನಾಡುವ ಜನರಿದ್ದಾರೆ. ಕರ್ನಾಟಕದಲ್ಲಿ ಸುಮಾರು ನೂರೈವತ್ತು ಭಾಷೆಗಳನ್ನು ಮಾತನಾಡುವ ವಿವಿಧ ಸಮುದಾಯಗಳಿವೆ. ಈ ಎಲ್ಲ ಭಾಷೆಗಳನ್ನು ವಿದ್ಯಾಭ್ಯಾಸದ ಭಾಗವಾಗಿ ಓದಲು, ಕಲಿಯಲು ಸಾಧ್ಯವಿಲ್ಲ. ಕೆಲವು ಭಾಷೆಗಳನ್ನು ಸಂಪರ್ಕದಿಂದ ಕಲಿಯಲು ಸಾಧ್ಯ. ಭಾಷೆಗಳ ಜಾಯಮಾನ ಹಾಗೂ ಸೊಬಗನ್ನು ಅರಿಯಲು ಭಾಷಾ ಸಂಬಂಧವಾಗಿ ನಡೆಯುವ ಕಾರ್ಯಕ್ರಮಗಳಿಗೆ ಮಕ್ಕಳು ಹೋಗಬೇಕು. ಬೇರೆ ಬೇರೆ ಭಾಷೆಗಳಲ್ಲಿ ಬರೆಯುವ ಲೇಖಕರಿದ್ದಾರೆ. ಭಾಷೆಗಳಲ್ಲಿ ದೀರ್ಘವಾದ ಲಿಖಿತ ಸಾಹಿತ್ಯ ಪರಂಪರೆ ಮಾತ್ರವಲ್ಲ ಮೌಖಿಕ ಪರಂಪರೆಯ ಕಾವ್ಯಗಳಿವೆ. ತುಳುವಿನ ಪಾಡ್ದನಗಳು, ಕೆಲಸದ ಹಾಡುಗಳು, ಅಜ್ಜಿಕತೆಗಳು ವಿದೇಶೀ ವಿದ್ವಾಂಸರ ಗಮನ ಸೆಳೆದಿವೆ. ಪ್ರಾದೇಶಿಕ ಭಾಷೆಗಳಲ್ಲಿ ವಿಶಿಷ್ಟವಾದ ಕಾವ್ಯ, ಕಾದಂಬರಿ, ನಾಟಕಗಳು ರಚನೆಯಾಗಿವೆ. ಇಂತಹ ನಾಟಕಗಳ ಪ್ರದರ್ಶನಗಳು ನಡೆಯುತ್ತಿವೆ. ಸ್ಥಳೀಯ ಭಾಷೆಗಳ ಸಿನೆಮಾಗಳು ಹೆಸರು ಮಾಡುತ್ತಿವೆ. ಪರಿಸರದ ಭಾಷೆಗಳ ಸಾಹಿತ್ಯವನ್ನು ಓದಿ, ನಾಟಕ, ಸಿನೆಮಾಗಳನ್ನು ನೋಡಿ, ಸಾಹಿತಿಗಳ, ನಿರ್ದೇಶಕರ ಜೊತೆ ಸಂವಾದ ನಡೆಸಿ ನಮ್ಮ ಮಕ್ಕಳು ಬೆಳೆಯಬೇಕು. ಇದನ್ನೇ ನಾವು ಸಾಂಸ್ಕೃತಿಕ ಪ್ರೀತಿ ಎಂದು ಕರೆಯುವುದು. ಈ ಸಾಂಸ್ಕೃತಿಕ ಪ್ರೀತಿ ಕೇವಲ ಸಾಹಿತ್ಯ, ನಾಟಕ, ಸಿನೆಮಾಗಳಿಗೆ ಸೀಮಿತವಾಗಿ ಇರುವುದಿಲ್ಲ. ಅದರಲ್ಲಿ ಪರಿಸರ, ಆಹಾರ, ಕ್ರೀಡೆ, ಆರೋಗ್ಯ, ಕೃಷಿ, ವೈದ್ಯ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ ಹೀಗೆ ಅನೇಕ ಜ್ಞಾನಶಿಸ್ತುಗಳು ಸೇರಿರುತ್ತವೆ. ಆಧುನಿಕ ಜ್ಞಾನ ಶಾಖೆಗಳು ಮಾತ್ರವಲ್ಲ ದೇಶೀಯ ಜ್ಞಾನ ಪರಂಪರೆಗಳ ಸಂತುಲಿತ ತಿಳುವಳಿಕೆ ನಮ್ಮ ವಿದ್ಯಾರ್ಥಿಗಳಿಗೆ ಬರಬೇಕಾದರೆ ಇರುವ ಮುಖ್ಯವಾದ ಮಾರ್ಗವೆಂದರೆ ಅವರು ತರಗತಿಯಿಂದ ಹೊರಗಿನ ವಲಯದ ಸಂಪರ್ಕವನ್ನು ಹೊಂದುವುದೇ ಆಗಿದೆ. ನಾವು ಭಾಷೆಗಳನ್ನು ಕಳೆದುಕೊಳ್ಳುತ್ತಿದ್ದೇವೆ, ಭಾಷೆಗಳಲ್ಲಿ ಹುದುಗಿರುವ ಅರಿವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರೆ ಸಾಲದು. ಕಂಪ್ಯೂಟರ್ ಕಲಿಸುವ ಆಟಗಳಲ್ಲಿ ಮಕ್ಕಳು ಮೈಮರೆತು ಹಿಂದಿನ ಕಾಲದಲ್ಲಿ ಆಡುತ್ತಿದ್ದ ನೂರೈವತ್ತಕ್ಕಿಂತ ಹೆಚ್ಚು ಆಟಗಳನ್ನು ಕಳೆದುಕೊಂಡದ್ದಾಗಿದೆ. ಐವತ್ತಕ್ಕಿಂತ ಹೆಚ್ಚು ಜನಪದ ಕುಣಿತದ ಮಾದರಿಗಳು ಕಣ್ಮರೆಯಾಗಿವೆ. ಪರಿಸರ ನಾಶವಾಗುತ್ತಿದೆ. ಭೌತಿಕ ಸುಖದ ಅಮಲು ನೆತ್ತಿಗೇರಿದೆ. ಹಿಂಸೆ ಮತ್ತು ಕ್ರೌರ್ಯ ಲೋಕದ ನೆತ್ತಿ ಕುಕ್ಕುತ್ತಿವೆ. ಮಾನವೀಯ ಮೌಲ್ಯಗಳು ನೇಪಥ್ಯಕ್ಕೆ ಸರಿಯುತ್ತಿವೆ. ಇಂತಹ ಕಾಲಘಟ್ಟದಲ್ಲಿ ಯುವ ಮನಸ್ಸುಗಳನ್ನು ಪ್ರೀತಿ, ಕನಸು ಮತ್ತು ಭರವಸೆಗಳ ಜಾಲದಲ್ಲಿ ಬೆಸೆಯಬೇಕಾಗಿದೆ. ಹೀಗೆ ಮಾಡಲು ಅನೇಕ ದಾರಿಗಳಿವೆ. ಅದರಲ್ಲಿ ಬಹುಮುಖ್ಯವಾದ ದಾರಿ ಎಂದರೆ ಯುವ ಪೀಳಿಗೆಯನ್ನು ತರಗತಿ ಮತ್ತು ಮನೆಯ ಹೊರಗಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದೇ ಆಗಿದೆ. ಹಿರಿಯ ಮತ್ತು ಕಿರಿಯ ತಲೆಮಾರುಗಳ ನಡುವೆ ಸಂವಾದ ನಡೆಯಬೇಕಾದುದು ಇಂದಿನ ತುರ್ತು ಅಗತ್ಯ.
ಕರಾವಳಿಗೆ ಬಹುತ್ವದ ನೆಲೆಗಳಿವೆ. ಕರಾವಳಿ ಪರಂಪರೆಯಲ್ಲಿ ಕನ್ನಡ ಮಾತ್ರವಲ್ಲ, ತುಳು, ಬ್ಯಾರಿ, ಕೊಂಕಣಿ, ಹವ್ಯಕ, ಅರೆಬಾಸೆ ಇನ್ನೂ ಅನೇಕ ಭಾಷಿಕ ಪರಂಪರೆಗಳಿವೆ, ಸಾಂಸ್ಕೃತಿಕ ಪರಂಪರೆಗಳಿವೆ, ವೃತ್ತಿ ಪರಂಪರೆಗಳಿವೆ, ಬದುಕನ್ನು ಬಹುಬಗೆಗಳಲ್ಲಿ ಕಟ್ಟಿದ ಪರಂಪರೆಗಳಿವೆ. ಕರಾವಳಿಯ ಇಂತಹ ಹಲವು ಪರಂಪರೆಗಳ ನಡುವೆ ಗೋಡೆಗಳನ್ನು ಕಟ್ಟಲಾಗಿದೆ. ಇವುಗಳನ್ನು ಹಿಂದೂ ಪರಂಪರೆ, ಇಸ್ಲಾಂ ಪರಂಪರೆ, ಕ್ರೈಸ್ತ ಪರಂಪರೆ, ಜೈನ ಪರಂಪರೆ ಹೀಗೆಲ್ಲ ಸ್ಥೂಲವಾಗಿ ಕರೆದರೂ ಅವುಗಳನ್ನು ಜಾತಿಗಳ ಆಧಾರದ ಮೇಲೆ ಬ್ರಾಹ್ಮಣ, ಗೌಡ, ಬಂಟ, ಬಿಲ್ಲವ, ಹವ್ಯಕ, ಶಿವಳ್ಳಿ ಹೀಗೆ ಜಾತಿಗೊಂದು ಪರಂಪರೆ ಎಂದು ಗುರುತಿಸಲಾಗಿದೆ. ಹೀಗೆ ಗುರುತಿಸಲಾದ ಜಾತಿ ಪರಂಪರೆಗಳಿಗೆ ಅವುಗಳದ್ದೇ ಆದ ಅನನ್ಯತೆಗಳಿವೆ. ಇಂತಹ ಅನನ್ಯತೆಗಳು ಬಹುಜಾತಿ, ಬಹು ಧರ್ಮಗಳಿರುವ ಸಮಾಜದ ಶಕ್ತಿಯಾಗಬೇಕೇ ಹೊರತು ದೌರ್ಬಲ್ಯವಾಗಬಾರದು. ಅಂದರೆ ಬಹುತ್ವ ನಮ್ಮ ಕರಾವಳಿಯ/ಸಮಾಜದ ಶಕ್ತಿ. ಇದು ದುರ್ಬಲಗೊಳ್ಳದ ಹಾಗೆ ಮಾಡುವ ದಾರಿ ಯಾವುದೆಂದರೆ ಬಹು ಭಾಷಿಕ, ಬಹು ಧಾರ್ಮಿಕ ಸಮುದಾಯಗಳ ಪರಂಪರೆಯ ತಿಳುವಳಿಕೆ ನೀಡುವ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚು ಭಾಗವಹಿಸುವಂತೆ ಮಾಡಬೇಕು. ಕನ್ನಡ ಸಾಹಿತಿಗಳ ಸಾಹಿತ್ಯ ಚರ್ಚೆಯಲ್ಲಿ, ಹಿಂದೂ ಸಮಾಜ ಸುಧಾರಕರ ಮಾಹಿತಿ ನೀಡುವ ಸಮಾರಂಭಗಳಲ್ಲಿ ಕ್ರೈಸ್ತ, ಮುಸ್ಲಿಮ್ ಮಕ್ಕಳು ಭಾಗವಹಿಸಬೇಕು. ಮುಸ್ಲಿಮ್ ಮತ್ತು ಕ್ರೈಸ್ತ ಸಾಹಿತ್ಯ ಸಾಧಕರು, ಸಮಾಜ ಸುಧಾರಕರು, ಶಿಕ್ಷಣ ತಜ್ಞರು, ಉದ್ಯಮಿಗಳ ಸಾಧನೆಗಳನ್ನು ತಿಳಿಸುವ ಸಮಾರಂಭಗಳಲ್ಲಿ ಹಿಂದೂ ಸಮುದಾಯಗಳ ಮಕ್ಕಳು ಪಾಲ್ಗೊಳ್ಳಬೇಕು. ಬಹುತ್ವದ ನೆಲೆಗಳಲ್ಲಿ ನಿರ್ಮಾಣಗೊಂಡ ಪರಂಪರೆಗಳ ಜ್ಞಾನ ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಸಿಗಬೇಕು. ಮಕ್ಕಳಿಗೆ ಮಾತ್ರ ಅಲ್ಲ, ಎಲ್ಲ ಸಮುದಾಯಗಳ ಜನರಿಗೂ ಸಿಗಬೇಕು. ನಿದರ್ಶನ ಕೊಟ್ಟು ಹೇಳುವುದಾದರೆ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಎಲ್ಲ ಸಮುದಾಯಗಳ ಮಕ್ಕಳು ಅವರೊಬ್ಬ ಆದರ್ಶವ್ಯಕ್ತಿ ಎಂದು ಪರಿಗಣಿಸುವಂತಾಗಬೇಕು. ಹೀಗೆ ಆಗಬೇಕಾದರೆ ಸಾರ್ವಜನಿಕ ಮಹತ್ವ ಇರುವ ಸಮಾರಂಭಗಳು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದೆ ನಿಜವಾದ ಅರ್ಥದಲ್ಲಿ ಸಾರ್ವಜನಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಆಯೋಜನೆಗೊಳ್ಳಬೇಕು.







