ಡಾ. ಎಂ.ಎಂ. ಕಲಬುರ್ಗಿ ಎಂಬ ಬಯಲ ಬೆಳಕು

ಮತೀಯವಾದಿಗಳು ಯಾವತ್ತೂ ವಿಚಾರಗಳಿಗೆ ಮಾತ್ರ ಹೆದರುತ್ತಾರೆ. ಹೌದು, ಕಲಬುರ್ಗಿಯವರ ಸತ್ಯದ ನಿಲುವುಗಳಿಂದ ವಿಚಲಿತರಾದ ಹೆಂಬೇಡಿಗಳು ವಿದ್ಯಾರ್ಥಿಗಳ ವೇಷದಲ್ಲಿ ಬಂದು ಗುಂಡಿಟ್ಟು ಕೊಂದರು. ಅವರು ವಿಚಾರ ಮಾಡುವ ಮೆದುಳಿಗೆ ಹೆದರಿಯೇ ಸರಿಯಾಗಿ ಹಣೆಗೆ ಹೊಡೆದರು. ಬಸವ ನಾಡಿನ ಕಪ್ಪು ಮಸಾರಿ ಮಣ್ಣಿನ ಬೆಳಕನ್ನು ಕೆಂಪು ಮಣ್ಣಿನ ಹೂ ಬನದಲ್ಲಿ ನಂದಿಸಲಾಯಿತು. ಧಾರವಾಡದ ಕೆಂಪು ಮಣ್ಣು ಎಂ.ಎಂ. ಕಲಬುರ್ಗಿಯವರ ರುಧಿರ ಧಾರೆಯಿಂದ ಇನ್ನಷ್ಟು ಕೆಂಪಾಗಿದೆಯೇ? ಕೆಂಪು ಜೀವಪರ ಹೋರಾಟದ ಸಂಕೇತವಲ್ಲವೇ?
ಭಾರತವೆಂಬ ಭವ್ಯದೇಶದಲ್ಲಿ ಸತ್ಯ ಪ್ರತಿಪಾದನೆ ಮಾಡಿದ್ದಕ್ಕಾಗಿಯೇ ಪ್ರಾಣ ಕಳೆದುಕೊಂಡವರ ಪಟ್ಟಿಯೂ ದೊಡ್ಡದೆ ಇದೆ. ಪ್ರಾಚೀನ ಕಾಲದ ಮಾತಂತಿರಲಿ. ಸಂಪೂರ್ಣ ನಾಗರಿಕರಾಗಿದ್ದೇವೆ ಎಂಬ ಆಧುನಿಕ ಕಾಲಘಟ್ಟದ ಒಂದೇ ಶತಮಾನದ ಅವಧಿಯಲ್ಲಿ ಮಹಾತ್ಮಾ ಗಾಂಧಿಯಿಂದ ಆರಂಭಗೊಂಡು ಹಲವು ವಿಚಾರವಾದಿಗಳನ್ನು ದೇಶ ಬಲಿ ತೆಗೆದುಕೊಂಡಾಗಿದೆ. ಇವರನ್ನೆಲ್ಲ ಗಾಂಧಿಯನ್ನು ಕೊಲೆಗೈದ ಮೂಲಭೂತವಾದಿ ಕರ್ಮಠರೇ ಹುತಾತ್ಮರಾಗಿಸಿದ್ದು ಕಾಕತಾಳೀಯವೇನಲ್ಲ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನರಭಕ್ಷಕ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿ ಜೀವತೆತ್ತ ಅಮಾಯಕರಿಗಂತೂ ಲೆಕ್ಕವೇ ಇಲ್ಲ. ಆದರೂ ಈ ದೇಶ ಮಹಾನ್ ಎಂದು ಗುಡುಗಲಾಗುತ್ತಿದೆ. ಈ ದೇಶದಲ್ಲಿ ತಮ್ಮ ವಿಚಾರಗಳನ್ನು ಒಪ್ಪದವರ ಬಲಿ ಪಡೆಯುವುದನ್ನು ದೇಶಭಕ್ತಿ, ಧರ್ಮಬೀರುತ್ವ ಎಂದು ಕರೆಯಲಾಗುತ್ತಿದೆ.
‘ಬಾಗಿದ ತಲೆ ಮುಗಿದ ಕೈಯಾಗಿರಿಸಯ್ಯಾ’ ಎಂಬಂತೆ ಸರಳ ಸಜ್ಜನಿಕೆಯ ಮನುಷ್ಯರಾಗಿದ್ದ ಕಲಬುರ್ಗಿಯವರನ್ನು ಪಿಸ್ತೂಲು ಹಣೆಗೆ ಹಚ್ಚಿ ಭ್ರೂಮಧ್ಯಕ್ಕೆ ಗುರಿಯಿಟ್ಟು ಹೊಡೆಯುವಷ್ಟು ಕ್ರೌರ್ಯವನ್ನು ಮೆರೆದದ್ದಾರೂ ಏಕೆ? ಕಲಬುರ್ಗಿ ಉಗ್ರವಾದಿ ಹೋರಾಟಗಾರರಾಗಿದ್ದರೇ? ಅಥವಾ ಅಧಿಕಾರಕ್ಕಾಗಿ ಕುತಂತ್ರ ನಡೆಸಿದ ರಾಜಕಾರಣಿಯಾಗಿದ್ದರೇ? ಇಲ್ಲ. ಧನ ಸಂಪತ್ತು ಇತ್ಯಾದಿ ಭೌತಿಕ ದಾಹಕ್ಕಾಗಿ ಯಾರನ್ನಾದರೂ ಪೀಡಿಸಿದವರಾಗಿದ್ದರೇ? ಇಲ್ಲ. ಶಾಸನಗಳು, ಹಸ್ತಪ್ರತಿಗಳು, ಪುಸ್ತಕ, ಪೆನ್ನು, ವ್ಯಾಸಂಗ ಬಿಟ್ಟು ಒಂದಿಂಚೂ ಆಚೆ ಈಚೆ ಸುಳಿದಾಡಿರದ ಉದ್ದ ಮೂಗಿನ, ಸಪೂರ ದೇಹದ, ಹಿಡಿಯಷ್ಟು ಮಾಂಸ ಖಂಡ ಹೊಂದಿದ ಈ ಮನುಷ್ಯನನ್ನು ಬೆಳ್ಳಂಬೆಳಗಿನ ಜಾವದಲ್ಲಿ ಹಾಗೇ ಸುಮ್ಮನೆ ಪಿಕ್ನಿಕ್‌ಗೆ ಬಂದಷ್ಟು ಸರಳವಾಗಿ ಬಂದು ಹೊಡೆದು ಹೋದರಲ್ಲ! ಅದು ಹೇಗೆ ಸಾಧ್ಯವಾಯಿತು? ಅಷ್ಟಕ್ಕೂ ಜೀವಮಾನದುದ್ದಕ್ಕೂ ಈ ಮನುಷ್ಯ ಮಾಡಿದ್ದಾದರೂ ಏನು? ಸಕಲ ಜೀವಾತ್ಮರಿಗೆ ಲೇಸು ಬಯಸುವ ಕೂಡಲಸಂಗನ ಶರಣರ ಕುಲಜರಾಗಿದ್ದ ಕಲಬುರ್ಗಿಯವರು ಅಖಂಡ ಜೀವಪರ ಚಿಂತಕರಾಗಿದ್ದರು. ಮಾನವ ವಿರೋಧಿ ಎನಿಸುವ ಸ್ವಾರ್ಥ, ಕುತಂತ್ರ ಮೆರೆಯುವ ಎಲ್ಲ ಬಗೆಯ ಸಿದ್ಧಾಂತ ಮತ್ತು ನಡೆಗಳನ್ನು ಅವರು ವೈಚಾರಿಕ ಹತ್ಯಾರುಗಳಿಂದಲೇ ಖಂಡಿಸಿದ್ದರು.
ಮಲ್ಲಪ್ಪ ಕಲಬುರ್ಗಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುಟ್ಟ ಹಳ್ಳಿ ಯರಗಲ್ ಎಂಬಲ್ಲಿ. ತಂದೆ ಮಡಿವಾಳಪ್ಪ, ತಾಯಿ ಗುರಮ್ಮ. ದಿನಾಂಕ 28-11-1938ರಂದು ತಾಯಿಯ ತವರು ಮನೆಯಾದ ಗುಬ್ಬೇವಾಡದಲ್ಲಿ ಹುಟ್ಟಿದ ಇವರು 1ರಿಂದ 4ನೇ ಇಯತ್ತೆವರೆಗೆ ಯರಗಲ್‌ದಲ್ಲಿ ಓದಿದ ಅಪ್ಪಟ ದೇಶಿ ಪ್ರತಿಭೆ. ಪ್ರೌಢ ವಿದ್ಯಾಭ್ಯಾಸವನ್ನು ಸಿಂದಗಿಯಲ್ಲಿ ಮುಗಿಸಿದರೆ ವಿಜಾಪುರದ ವಿಜಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಕೊಂಡರು. ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ತೆರಳಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 1962ರಲ್ಲಿ ಕನ್ನಡ ಸಾಹಿತ್ಯದಲ್ಲಿ ಜಯಚಾಮರಾಜ ಒಡೆಯರ್ ಸ್ಮಾರಕ ಸುವರ್ಣ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಎಂ.ಎ. ಪದವಿ ಪಡೆದ ದಿನದಿಂದಲೇ ಆಗಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಆರ್. ಸಿ. ಹಿರೇಮಠರ ಗರಡಿಯಲ್ಲಿ ಸೇರಿಕೊಂಡರು. ಕನ್ನಡ ಅಧ್ಯಯನ ಪೀಠದ ಸಮಗ್ರ ವಚನ ವ್ಮಾಯ ಸಂಶೋಧನೆ, ಸಂಸ್ಕರಣ ಮತ್ತು ಪ್ರಕಟಣ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿ ಅಕ್ಷರದ ನೊಗ ಹೊತ್ತವರು ಕೊನೆ ಉಸಿರಿನವರೆಗೂ ನೊಗ ಬಿಚ್ಚಿರಲೇ ಇಲ್ಲ. 1962ರಿಂದ 1966ರವರೆಗೆ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಮುಂದೆ ಇವರ ಅಧ್ಯಯನ ಮತ್ತು ಅಧ್ಯಾಪನಾ ಆಸಕ್ತಿಯನ್ನು ಮನಗಂಡು 1966ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ನೇಮಿಸಿಕೊಳ್ಳಲಾಯಿತು. 1968ರಲ್ಲಿ ತಮ್ಮ ಮೆಚ್ಚಿನ ಗುರುಗಳಾದ ಆರ್. ಸಿ. ಹಿರೇಮಠರ ಮಾರ್ಗದರ್ಶನದಲ್ಲಿ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ವಿಷಯ ಕುರಿತು ಸಂಶೋಧನೆಗಯ್ದು ಮಹಾಪ್ರಬಂಧವನ್ನು ಮಂಡಿಸಿದರು. ಇವತ್ತಿಗೂ ಸಂಶೋಧನಾ ವ್ಯಾಸಂಗದಲ್ಲಿ ಅದೊಂದು ಮೈಲಿಗಲ್ಲಾಗಿದೆ. ಸಂಶೋಧನೆಯ ಶಿಸ್ತು, ವಿಚಕ್ಷಣ ದೃಷ್ಟಿಕೋನ, ವಸ್ತುನಿಷ್ಠತೆ, ನಿಖರತೆ ಮುಂತಾದ ಅಂಶಗಳಿಗೆ ಕಲಬುರ್ಗಿಯವರ ಈ ಕೃತಿಯು ಮಾದರಿಯಾಗಿದ್ದನ್ನು ವಿದ್ವಾಂಸರಾರೂ ಅಲ್ಲಗಳೆಯಲಾರರು.
ನಿರಂತರ ಓದು ಮತ್ತು ಅದಮ್ಯ ಉತ್ಸಾಹ ಇವೆರಡೂ ಇವರ ಚಹರೆಗಳಾಗಿದ್ದವು. ಓದಲು ಮತ್ತು ಬರೆಯಲೆಂದೇ ಹುಟ್ಟಿದ ಮನುಷ್ಯನೇನೋ ಎಂಬಷ್ಟು ಹಟದಲ್ಲಿ ಮುಂದುವರಿದ ಇವರು ಬರೆದ ಪುಸ್ತಕಗಳ ಸಂಖ್ಯೆ 115. ಸುಮಾರು 700ಕ್ಕೂ ಹೆಚ್ಚು ಬಿಡಿಬರಹಗಳನ್ನು ಪ್ರಕಟಿಸಿದ್ದಾರೆ. ಇನ್ನೂ ಬರೆಯಬಹುದಾಗಿದ್ದ ಅವೆಷ್ಟು ಕೃತಿಗಳು ಅಂತರ್‌ಧ್ಯಾನದಲ್ಲಿ ಲೀನವಾದವೊ? ಗೊತ್ತಿಲ್ಲ. ಇವರ ಪ್ರಮುಖ ಆಸಕ್ತಿ ವಚನ ಸಾಹಿತ್ಯ ಮತ್ತು ಶಾಸನ ಸಾಹಿತ್ಯ. ತುಂಬು ಹರೆಯದಲ್ಲಿಯೇ 1968ರಲ್ಲಿ ‘ಶಾಸನಗಳಲ್ಲಿ ಶಿವಶರಣರು’ ಎಂಬ ಕೃತಿಯನ್ನು ಹೊರ ತಂದರು. ಇದು ಇವತ್ತಿಗೂ ಶಾಸನಗಳ ಮೂಲಕ ಐತಿಹಾಸಿಕ ತಥ್ಯಗಳನ್ನು ಅನ್ವೇಷಣೆ ಮಾಡುವ ವಿಧಾನಕ್ಕೆ ಮಾದರಿಯಾಗಿದೆ. ಅದೇ ಹೊತ್ತಿಗೆ 12ನೇ ಶತಮಾನದ ಶಿವಶರಣರ ಕುರಿತು ಚಾರಿತ್ರಿಕ ಸಂಗತಿಗಳನ್ನು ಕಂಡುಕೊಳ್ಳುವವರಿಗೆ ಆಕರವಾಗಿದೆ. ಆದ್ದರಿಂದ ಇದು ಶೋಧ ಮಾರ್ಗದ ಆಚಾರ ಕೃತಿಯಾಗಿದೆ. 1974ರಲ್ಲಿ ಶಾಸನವ್ಯಾಸಂಗ ಕೃತಿ ಪ್ರಕಟಿಸಿ ಮುಂದೆ ಶಾಸನಗಳಲ್ಲಿ ಅಧ್ಯಯನ ಮಾಡುವವರಿಗೆ ಒಂದು ರಹದಾರಿಯನ್ನು ತೆರೆದು ತೋರಿಸಿದರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯು ದಕ್ಕಿತು. ಸಂಪಾದನೆ ಇವರ ಇನ್ನೊಂದು ಆಸಕ್ತಿ ಕ್ಷೇತ್ರ. ದಣಿವರಿಯದ ಈ ಸಂಪಾದಕ ಪ್ರಾಚೀನ ಸಾಹಿತ್ಯದ 34 ಕೃತಿಗಳನ್ನು ಸಂಪಾದಿಸಿದರೆ ಆಧುನಿಕ ಸಾಹಿತ್ಯದ 10 ಕೃತಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಗ್ರಂಥ ಸಂಪಾದನೆಯನ್ನು ಒಂದು ಅಧ್ಯಯನ ಶಿಸ್ತಾಗಿ ಅಭಿವೃದ್ಧಿಪಡಿಸುವಲ್ಲಿ ಕಲಬುರ್ಗಿ ವಹಿಸಿದ ಶ್ರಮ ಮತ್ತು ಎಚ್ಚರ ಇವೆರಡೂ ಚರಿತಾರ್ಹ, 1972ರಲ್ಲಿ ಬರೆದ ಕನ್ನಡ ಗ್ರಂಥ ಸಂಪಾದನ ಶಾಸ್ತ್ರ ಕೃತಿಯು ಸಂಪಾದನಕಾರರ ಕೈಪಿಡಿಯೇ ಆಗಿದೆ. ನಾಮವಿಜ್ಞಾನವು ಅವರ ಇನ್ನೊಂದು ಕುತೂಹಲದ ಕ್ಷೇತ್ರ, ಕನ್ನಡದಲ್ಲಿ ನಾಮವಿಜ್ಞಾನ ಕುರಿತು ಅವರಷ್ಟು ಸ್ವಾರಸ್ಯಪೂರ್ಣವಾಗಿ ಅಧ್ಯಯನ ಮಾಡಿದವರಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಮನೆಯ ಹೆಸರುಗಳ (ಅಡ್ಡಹೆಸರು) ಬಗೆಗೆ ಪ್ರಥಮ ಬಾರಿಗೆ ತುಂಬಾ ಕುತೂಹಲವಾದ ಅಂಶಗಳನ್ನು ನಮೂದಿಸಿದ್ದಾರೆ. ಇದರ ಪ್ರತಿಫಲವೆಂಬಂತೆ ಅವರು ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಅಖಿಲ ಭಾರತ ನಾಮವಿಜ್ಞಾನ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಜ್ಞಾನಶಾಖೆಗಳನ್ನು ಇವರು ಮುಟ್ಟಿ ಮೌಲಿಕ ಕೊಡುಗೆ ಇತ್ತಿದ್ದಾರೆ. ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಅಲಂಕಾರ ಶಾಸ್ತ್ರ, ಮೀಮಾಂಸೆ, ವಿಮರ್ಶೆ ಮುಂತಾದ ಹಲವು ಕ್ಷೇತ್ರಗಳ ಹರಹಿನಲ್ಲಿ ಈಜಾಡಿ ಜಯಿಸಬಲ್ಲವರಾಗಿದ್ದರು.
ಸಾಹಿತ್ಯ ಮತ್ತು ಇತಿಹಾಸದ ಅಂತರ್‌ಸಂಬಂಧವನ್ನು ಮೂರ್ತರೂಪದಲ್ಲಿ ಸಾಕಾರಗೊಳಿಸಿದ ಇವರು ಸಾಂಸ್ಕೃತಿಕ ಶೋಧವು ಜನಾಂಗ ಬದುಕಿನ ಭಾವಕೋಶದ ಶೋಧವೇ ಆಗಿರುತ್ತವೆ ಎಂಬುದನ್ನು ಎತ್ತಿ ತೋರಿಸಿದರು. ಕಲಬುರ್ಗಿ ಅವರ ಶೋಧಗಳು ಕನ್ನಡ ಸಾಹಿತ್ಯಕಷ್ಟೇ ಅಲ್ಲ, ಕನ್ನಡ ನಾಡು, ನುಡಿ, ಸಂಸ್ಕೃತಿಯ ಶೋಧಗಳಿಗೂ ಮಾದರಿಯಾಗಿವೆ. ಹೀಗೆಂದೇ 1991ರಲ್ಲಿ ಬಳ್ಳಾರಿಯ ಸೊಂಡೂರಿನಲ್ಲಿ ನಡೆದ ಇತಿಹಾಸ ಸಮ್ಮೇಳನದ ಅಧ್ಯಕ್ಷತೆಗೂ ಭಾಜನರಾಗಿದ್ದರು.
ಇವರು ಶಾಸನ ಕುರಿತು 10 ಕೃತಿಗಳು, ಸಂಶೋಧನೆಗೆ ಸಂಬಂಧಪಟ್ಟಂತೆ 17 ಕೃತಿಗಳು, ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 6 ಕೃತಿಗಳು ಮತ್ತು 50 ಸಂಪಾದಿತ ಕೃತಿಗಳು, 4 ಅಭಿನಂದನಾ ಗ್ರಂಥಗಳ ಸಂಪಾದನೆ, 14 ವಿವಿಧ ಸ್ಮರಣಿಕೆ, ಪತ್ರಿಕೆ, ವಾಚಿಕೆ, ವಿಚಾರ ಸಂಕಿರಣಗಳ ಸಂಪಾದಿತ ಕೃತಿಗಳನ್ನು ಹೊರ ತಂದಿದ್ದಾರೆ. 2 ಜಾನಪದ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಪಾರ ವಿದ್ವತ್ತು ಮತ್ತು ದಣಿವರಿಯದ ಶ್ರಮವನ್ನು ಬಯಸುವ ಸಂಶೋಧನೆ, ಸಂಪಾದನೆ ಮುಂತಾದ ಶಾಸ್ತ್ರ ಶೋಧದಲ್ಲಿ ಇವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದರಿಂದ ಸೃಜನ ಸಾಹಿತ್ಯದತ್ತ ಹೊರಳಲು ಅವಕಾಶವೇ ಸಿಗಲಿಲ್ಲವೇನೊ? ಆದರೆ ಸಂಶೋಧನೆಯು ಸೃಜನದ ಆತ್ಯಂತಿಕ ಸ್ಥಿತಿಯೆಂಬುದನ್ನು ಕಲಬುರ್ಗಿ ಮಾಸ್ತರ್ ವಿದ್ವತ್ ಲೋಕಕ್ಕೆ ತೆರೆದು ತೋರಿಸಿದರು. ಆದರೂ ಕಲಬುರ್ಗಿಯೊಳಗಿನ ಕವಿಮನ ‘ಕೆಟ್ಟಿತ್ತು ಕಲ್ಯಾಣ’ ‘ಖರೇ ಖರೇ ಸಂಗ್ಯಾಬಾಳ್ಯಾ’ ಎಂಬ ಎರಡು ನಾಟಕಗಳನ್ನು, ‘ನೀರು ನೀರಡಿಸಿತ್ತು’ ಎಂಬ ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿತು. ಈ ಮೂಲಕ ಕಲಬುರ್ಗಿ ತಾವೊಬ್ಬ ಸವ್ಯಸಾಚಿ ಎಂಬುದನ್ನು ಸಾಬೀತು ಪಡಿಸಿದರು. ಪ್ರಾಯಶಃ ವ್ಯಕ್ತಿಯೊಬ್ಬರ ಬದುಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಬರೆಯಬಹುದಾದದ್ದನ್ನು ಕಲಬುರ್ಗಿ ಬರೆದರು. ಆದರೆ ಅವರ ಕೃತಿಗಳು ಸಂಖ್ಯಾತ್ಮಕವಾಗಿ ಗಮನ ಸೆಳೆಯದೆ ಅವುಗಳ ಒಳಗಿನ ತಿರುಳು ಮತ್ತು ಸಾಹಿತ್ಯಕ ಮೌಲ್ಯದಿಂದಾಗಿ ಗಮನ ಸೆಳೆಯುತ್ತವೆ. ಹಲವು ಕೃತಿಗಳು ಬರೆದ ತೂಕದ ಸಾಹಿತಿಗಳು ಹಲವರಿರಬಹುದು. ಆದರೆ ಗಂಭೀರ ಶಾಸ್ತ್ರೀಯ ಅಧ್ಯಯನ ಕೈಕೊಂಡು ಕರಾರುವಾಕ್ಕಾದ ಫಲಿತಗಳನ್ನು ಕೊಡುವುದಿದೆಯಲ್ಲ ಅದಕ್ಕೆ ಕನ್ನಡದ ಮಹಾಕವಿ ‘ರನ್ನ’ ಹೇಳುವಂತೆ ಎಂಟೆರ್ದೆಯ ಬೇಕು. ಈ ಎದೆಗಾರಿಕೆಯಿಂದಾಗಿಯೇ ಕಲಬುರ್ಗಿಯವರು ಧರ್ಮಾಂಧರ ಮತ್ತು ಶಾಸ್ತ್ರಜ್ಞರ ವಿರೋಧವನ್ನು, ಮಾರಣಾಂತಿಕ ಹಲ್ಲೆಗಳನ್ನು ಎದುರಿಸಬೇಕಾಯಿತು. ಎಂತಲೇ ಅವರು ತಮ್ಮ ಕೃತಿಯೊಂದರ ಪ್ರಸ್ತಾವನೆಯಲ್ಲಿ ‘‘ಭಾರತದಂಥ ಭಾವನಿಷ್ಟ ರಾಷ್ಟ್ರದಲ್ಲಿ ಸಂಶೋಧನೆ ಸರಳ ಹಾದಿಯಲ್ಲ. ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಭಾರತೀಯ ಸಂಶೋಧಕ ಅನೇಕ ಅಗ್ನಿ ಕುಂಡಗಳನ್ನು ದಾಟಬೇಕಾಗುತ್ತದೆ’’ ಎಂದು ಬರೆದರು. ಕಾರಣ ಕಲಬುರ್ಗಿಯವರು ವಚನಕಾರರಾದ ‘ನೀಲಾಂಬಿಕೆ’, ‘ಚೆನ್ನಬಸವಣ್ಣ’, ಬಸವಾದಿಗಳ ಕುರಿತು ಅನ್ವೇಷಿಸಿ ಬರೆದ ಕೆಲವು ಲೇಖನಗಳಿಂದಾಗಿ ವಿವಾದಕ್ಕೆ ಸಿಲುಕಿದ್ದರು. ಕರ್ಮಠ ಮಠೀಯವಾದಿಗಳಿಂದ ಕ್ರೂರ ದಬ್ಬಾಳಿಕೆ, ಪ್ರತಿರೋಧಕ್ಕೂ ಒಳಗಾಗಿದ್ದರು. ಆ ಸಂದರ್ಭದಲ್ಲಿ ಅವರು ಅನುಭವಿಸಿದ ನೋವು, ಆಘಾತಗಳು ಅಸದಳವಾಗಿದ್ದವು.
ಕಲಬುರ್ಗಿ ಅಧ್ಯಯನಶೀಲರಷ್ಟೇ ಅಲ್ಲ ಅವರೊಬ್ಬ ಸಮರ್ಥ ಸಂಘಟಕರೂ ಆಗಿದ್ದರೆಂಬುದಕ್ಕೆ ಅವರು ಕಟ್ಟಿ ಬೆಳೆಸಿದ ಸಾಹಿತ್ಯಕ, ಸಾಂಸ್ಕೃತಿಕ ಸಂಘಟನೆಗಳೇ ಸಾಕ್ಷಿಯಾಗಿವೆ. 1975ರಲ್ಲಿ ಗದಗ ತೋಂಟದಾರ್ಯ ಮಠದಲ್ಲಿ ‘ವೀರಶೈವ ಅಧ್ಯಯನ ಸಂಸ್ಥೆ’, 1991ರಲ್ಲಿ ನಾಗನೂರ ಮಠದಿಂದ ‘ವೀರಶೈವ ಅಧ್ಯಯನ ಅಕಾಡಮಿ’, ಅದೇ ವರ್ಷ ಶಿವಮೊಗ್ಗದ ಆನಂದ ಮಠದಿಂದ ‘ಮಲೆನಾಡ ವೀರಶೈವ ಅಧ್ಯಯನ ಸಂಸ್ಥೆ’, 1993ರಲ್ಲಿ ನಿಡಸೋಸಿ ಶಿವಲಿಂಗೇಶ್ವರ ಮಠದಿಂದ ‘ಶರಣ ಸಂಸ್ಕೃತಿ ಅಕಾಡಮಿ’, 1994ರಲ್ಲಿ ಸಿಂದಗಿ ಸಾರಂಗ ಮಠದಿಂದ ‘ಪೂಜ್ಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ’, 1996ರಲ್ಲಿ ಕೊಡೆಕಲ್ ಮಠದಿಂದ ‘ಬಸವೇಶ್ವರ ಅಧ್ಯಯನ ಸಂಸ್ಥೆ’ ಹೀಗೆ ಪುಂಖಾನುಪುಂಖವಾಗಿ ಸಂಸ್ಥೆಗಳನ್ನು ಸ್ಥಾಪಿಸಿ ಮಠಗಳಿಗೆ ಸಾಹಿತ್ಯಕ ಮೌಲ್ಯವನ್ನು ತಂದುಕೊಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅವರು ಮಾಡಿದ ಪುಸ್ತಕ ವ್ಯವಸಾಯವಂತೂ ಚರಿತ್ರಾರ್ಹವೇ ಹೌದು. ಕಾಲಗರ್ಭದಲ್ಲಿ ಹೂತು ಹೋಗಬಹುದಾಗಿದ್ದ ಹಲವು ಅಮೂಲ್ಯ ಕೃತಿಗಳನ್ನು ಹುಡುಕಿಸಿ ಪ್ರಕಟಿಸಿ ಕನ್ನಡ ವಿಶ್ವವಿದ್ಯಾನಿಲಯವೊಂದು ಮಾಡಬೇಕಾದ ಕೆಲಸಗಳಿಗೆ ದಿಕ್ಕೂಚಿ ಒದಗಿಸಿದರು. ದೇಶಿ ಸಮ್ಮೇಳನಗಳನ್ನು ನಡೆಸಿ ಜಾನಪದಕ್ಕೆ ವಿಶಾಲ ನೆಲೆ ಒದಗಿಸಿದರು. ಅವರ ಸಾಹಿತ್ಯ ಕೈಂಕರ್ಯವನ್ನು ಅಲಕ್ಷಿಸುವುದು ಸಾಧ್ಯವೇ ಇರಲಿಲ್ಲ. ಹೀಗಾಗಿಯೇ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳಿಗೂ ಲೆಕ್ಕವಿಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಪಂಪ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಕಲಬುರ್ಗಿಯವರು ಮಾತ್ರ ಈ ಎಲ್ಲ ಪುರಸ್ಕಾರ ಪ್ರಶಸ್ತಿಗಳನ್ನು ಮೀರಿ ಶುದ್ಧ ಅಧ್ಯಯನ ದಾಹಿಯಾಗಿಯೇ ಮುಂದುವರಿದಿದ್ದರು. ಶರಣರ ಕಾಯಕ ಪ್ರಜ್ಞೆಯೇ ಅವರಲ್ಲಿ ಘನೀಕೃತವಾಗಿತ್ತು.
ಸಮಕಾಲೀನ ಕನ್ನಡದ ಸಂದರ್ಭದಲ್ಲಿ ಅವರಷ್ಟು ಜ್ಞಾನದಾಹಿ ಗಳಾಗಿದ್ದವರನ್ನು ಕಾಣಲಾರೆವು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಕುರಿತು ಅವರು ಹೇಳಿದ ಕೆಲವು ಸತ್ಯಗಳನ್ನು ಸಂಪ್ರದಾಯವಾದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ವೈದಿಕ ಸಾಹಿತ್ಯ ಮತ್ತು ತತ್ವಸಿದ್ಧಾಂತಗಳ ಮನುಷ್ಯ ವಿರೋಧಿ ನಿಲುವು ನೆಲೆಗಳನ್ನು ಅವರು ಯಾವ ಎಗ್ಗಿಲ್ಲದೆ ಬಟಾಬಯಲುಗೊಳಿಸಿದ್ದರು. ಇದು ವರ್ತಮಾನದ ಸಾಂಸ್ಕೃತಿಕ ರಾಜಕಾರಣಕ್ಕೆ ಅರಗದ ತುತ್ತಾಗಿತ್ತು. ಮತೀಯವಾದಿಗಳು ಯಾವತ್ತೂ ವಿಚಾರಗಳಿಗೆ ಮಾತ್ರ ಹೆದರುತ್ತಾರೆ. ಹೌದು, ಕಲಬುರ್ಗಿಯವರ ಸತ್ಯದ ನಿಲುವುಗಳಿಂದ ವಿಚಲಿತರಾದ ಹೆಂಬೇಡಿಗಳು ವಿದ್ಯಾರ್ಥಿಗಳ ವೇಷದಲ್ಲಿ ಬಂದು ಗುಂಡಿಟ್ಟು ಕೊಂದರು. ಅವರು ವಿಚಾರ ಮಾಡುವ ಮೆದುಳಿಗೆ ಹೆದರಿಯೇ ಸರಿಯಾಗಿ ಹಣೆಗೆ ಹೊಡೆದರು. ಬಸವ ನಾಡಿನ ಕಪ್ಪು ಮಸಾರಿ ಮಣ್ಣಿನ ಬೆಳಕನ್ನು ಕೆಂಪು ಮಣ್ಣಿನ ಹೂ ಬನದಲ್ಲಿ ನಂದಿಸಲಾಯಿತು. ಧಾರವಾಡದ ಕೆಂಪು ಮಣ್ಣು ಎಂ.ಎಂ. ಕಲಬುರ್ಗಿಯವರ ರುಧಿರ ಧಾರೆಯಿಂದ ಇನ್ನಷ್ಟು ಕೆಂಪಾಗಿ ದೆಯೇ? ಕೆಂಪು ಜೀವಪರ ಹೋರಾಟದ ಸಂಕೇತವಲ್ಲವೇ?
ದೇಹಗಳನ್ನು ನಾಶ ಮಾಡುವುದರಿಂದ ವಿಚಾರಗಳನ್ನು ಕೊಲ್ಲಲಾಗದು ಎಂಬ ಸತ್ಯವು ಇತಿಹಾಸದಲ್ಲಿ ಮತ್ತೆ ಮತ್ತೆ ಸ್ಥಾಪಿತವಾಗುತ್ತಿದೆಯಾದರೂ ಸಂಪ್ರದಾಯವಾದಿಗಳು ಮಾತ್ರ ತಮ್ಮ ದುಷ್ಟ ಕಾರ್ಯಾಚರಣೆಯನ್ನು ನಿಲ್ಲಿಸುವುದೇ ಇಲ್ಲ. ವರ್ತಮಾನದ ಈ ಕ್ಷಣದ ಸಂಕಟವೇನೆಂದರೆ ಪ್ರಭುತ್ವವೇ ಹಿಂಸೆಯನ್ನು ತಾತ್ವಿಕಗೊಳಿಸುತ್ತಿರುವುದು. ಕಲಬುರ್ಗಿಯಂತಹ ಚಿಂತಕರ ಹತ್ಯೆಗಳು ನಾಗರಿಕತೆಯ ಬಗೆಗೆ ದೊಡ್ಡ ಪ್ರಶ್ನೆಗಳನ್ನು ಇದಿರು ನಿಲ್ಲಿಸುತ್ತಿವೆ.
(ಡಾ. ರಾಜೇಂದ್ರ ಚೆನ್ನಿ, ಡಾ. ರಹಮತ್ ತರೀಕೆರೆ, ಡಾ. ಮೀನಾಕ್ಷಿ ಬಾಳಿ ಸಂಪಾದಿಸಿದ ‘ನಾನು ಕಲಬುರ್ಗಿ’ ಕೃತಿಯಲ್ಲಿನ ಆಯ್ದ ಭಾಗ)







