ನಾಚವಾರ ಗ್ರಾಮದಲ್ಲಿ ಒಳಚರಂಡಿ ಸಮಸ್ಯೆ
ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಸೇಡಂ: ತಾಲೂಕಿನ ದುಗನೂರ ಗ್ರಾಪಂ ವ್ಯಾಪ್ತಿಯ ನಾಚವಾರ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ಒಳಚರಂಡಿಯನ್ನು ಸ್ವಚ್ಛಗೊಳಿಸದ ಪರಿಣಾಮ ಕೊಳಚೆ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ನಾಚವಾರ ಗ್ರಾಮದಲ್ಲಿ ಮೂಲಭೂತ ಸ್ವಚ್ಛತಾ ವ್ಯವಸ್ಥೆಯೇ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮದ ಕಮಲಾಕರ ರೆಡ್ಡಿ ದೇಶಮುಖ ಅವರ ಮನೆಯಿಂದ ಬಾಬು ವಡ್ಡರ್ ಅವರ ಮನೆವರೆಗೆ ಇರುವ ಮುಖ್ಯರಸ್ತೆಯಲ್ಲಿ ಒಳಚರಂಡಿ ನೀರು ತುಂಬಿಕೊಂಡಿದ್ದು, ಹೂಳು ಹಾಗೂ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ನೂರಾರು ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಪ್ರತಿನಿತ್ಯ ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕವೂ ಗ್ರಾಮಸ್ಥರಲ್ಲಿ ಮನೆಮಾಡಿದೆ.
ಗ್ರಾಮೀಣ ಭಾಗದ ಜನರಿಗೆ ಯಾವುದೇ ತೊಂದರೆಯಾಗದಂತೆ ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಕಾರ್ಯವನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಚಾಚೂ ತಪ್ಪದೆ ನಿರ್ವಹಿಸಬೇಕು ಎಂದು ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರು ಸೂಚನೆ ನೀಡಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮುಂದುವರಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಚವಾರ ಗ್ರಾಮದಲ್ಲಿ ಒಳಚರಂಡಿಯ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ಕುರಿತು ಸ್ವಚ್ಛತೆ ಕೈಗೊಳ್ಳುವಂತೆ ಕೇಳಿದಾಗ, ದುಗನೂರ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿ ನನಗೆ ಇನ್ನೂ ಚಾರ್ಜ್ ನೀಡಿಲ್ಲ. ಚಾರ್ಜ್ ನೀಡಿದ ನಂತರ ನೋಡೋಣ ಎಂದು ಹಗುರವಾಗಿ ಉತ್ತರಿಸಿದ್ದಾರೆ. ಚಾರ್ಜ್ ಇದ್ದರೂ ಸಮಸ್ಯೆ ಪರಿಹರಿಸಲು ನೆಪ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಚವಾರ ಗ್ರಾಮದಲ್ಲಿ ಒಳಚರಂಡಿ ನೀರು ತುಂಬಿಕೊಂಡು, ಆರು ತಿಂಗಳು ಕಳೆದರೂ ಸ್ವಚ್ಛಗೊಳಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಂಕ್ರಾಮಿಕ ರೋಗಗಳ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಸೆ.29ರಂದು ಗ್ರಾಮಸ್ಥರು ಒಟ್ಟಾಗಿ ದುಗನೂರ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.
-ರವಿ ರಾಮಲಿಂಗಪುರ, ನಾಚವಾರ ಗ್ರಾಮಸ್ಥ






