ಶಿಥಿಲಾವಸ್ಥೆಯಲ್ಲಿ ದುಬಲಗುಂಡಿ ಸರಕಾರಿ ಉರ್ದು ಶಾಲಾ ಕಟ್ಟಡ

ಹುಮನಾಬಾದ್: ತಾಲೂಕಿನ ದುಬಲಗುಂಡಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಭೀತಿಯಲ್ಲಿದೆ. ಇದರಿಂದಾಗಿ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಪಾಠ ಬೋಧಿಸುವ ಶಿಕ್ಷಕರು ತೀವ್ರ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
1ರಿಂದ 8ನೇ ತರಗತಿ ವರೆಗೆ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಯಲ್ಲಿ 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಈ ಶಾಲೆಗೆ ಕೇವಲ ನಾಲ್ವರು ಶಿಕ್ಷಕರೇ ಇದ್ದು, ಶಿಕ್ಷಕರ ಕೊರತೆಯೂ ಸ್ಪಷ್ಟವಾಗಿ ಕಂಡುಬರುತ್ತಿದೆ. ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಈ ಸರಕಾರಿ ಶಾಲೆಯ ಕಟ್ಟಡ ಸಂಪೂರ್ಣವಾಗಿ ಹದಗೆಟ್ಟಿದ್ದು, ಶಿಕ್ಷಣ ವ್ಯವಸ್ಥೆಯ ಮೇಲೆಯೇ ದುಷ್ಪರಿಣಾಮ ಬೀರುತ್ತಿದೆ.
ಶಾಲೆಯ ಎಲ್ಲ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಛಾವಣಿಯಿಂದ ನೀರು ಸೋರಿಕೆಯಾಗಿ ತರಗತಿಗಳಲ್ಲೇ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ನೆಲದಲ್ಲಿ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಎದುರಾಗಿದೆ. ಶಿಕ್ಷಕರೂ ಸಹ ಜೀವಭಯದಲ್ಲಿಯೇ ಪಾಠ ಹೇಳುವಂತಾಗಿದೆ. ಕೆಲ ಸಂದರ್ಭಗಳಲ್ಲಿ ಹೆಚ್ಚಿನ ಮಳೆಯಾದಾಗ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ರಜೆ ಘೋಷಿಸಿ ಮನೆಗೆ ಕಳುಹಿಸಿದ ಘಟನೆಗಳೂ ನಡೆದಿವೆ.
ಶಾಲಾ ಕಟ್ಟಡದ ದುಸ್ಥಿತಿಯ ಕುರಿತು ಶಾಲೆಯ ಮುಖ್ಯಗುರುಗಳು ಶಾಸಕರಿಗೂ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೂ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಲಾಗಿದೆ. ಈ ಉರ್ದು ಮಾಧ್ಯಮ ಸರಕಾರಿ ಶಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಲ್ಪಸಂಖ್ಯಾತ ಹಾಗೂ ಬಡ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ನೋವಿನ ಸಂಗತಿಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಶಾಲಾ ಕಟ್ಟಡ ಕುಸಿದು ವಿದ್ಯಾರ್ಥಿಗಳು ಸಾವನ್ನಪ್ಪಿದ ಅಥವಾ ಗಂಭೀರವಾಗಿ ಗಾಯಗೊಂಡ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ದುಬಲಗುಂಡಿ ಶಾಲೆಯಲ್ಲಿಯೂ ಅಂತಹ ದುರ್ಘಟನೆ ನಡೆಯುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ನಮ್ಮ ಗ್ರಾಮದಲ್ಲಿರುವ ಈ ಉರ್ದು ಮಾಧ್ಯಮ ಶಾಲೆ ಬಹಳ ಹಳೆಯದು. ನೂತನ ಶಾಲಾ ಕಟ್ಟಡದ ತುರ್ತು ಅಗತ್ಯವಿದೆ. ಸರಕಾರ, ಶಾಸಕರು ಹಾಗೂ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು.
-ಮುನೀರ್ ಬಾಗವಾನ್, ಪೋಷಕ
ದುಬಲಗುಂಡಿ ಸರಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಕಟ್ಟಡದ ಸ್ಥಿತಿಯನ್ನು ಪರಿಶೀಲನೆ ನಡೆಸಲಾಗುವುದು.
-ಸುರೇಶ್, ಡಿಡಿಪಿಐ, ಬೀದರ್
ಅತ್ಯಂತ ಹಳೆಯದಾದ ಈ ಉರ್ದು ಶಾಲೆಯ ಕಟ್ಟಡ ಸಂಪೂರ್ಣವಾಗಿ ಹದಗೆಟ್ಟಿದೆ. ಮಕ್ಕಳು ಜೀವಭಯದಲ್ಲಿ ಓದುತ್ತಿದ್ದಾರೆ. ಸರಕಾರಿ ಶಾಲೆ ಎಂದರೆ ಈಗಾಗಲೇ ಹಾಜರಾತಿ ಕಡಿಮೆಯಾಗುತ್ತಿದೆ. ಇಂತಹ ಕಟ್ಟಡವನ್ನು ನೋಡಿ ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಶಾಸಕರಿಗೆ ಮನವಿ ನೀಡಿದ್ದರೂ ಪ್ರತಿಕ್ರಿಯೆ ಇಲ್ಲ.
-ಚಾಂದ್ ಪಾಷಾ, ಎಸ್‌ಡಿಎಂಸಿ ಅಧ್ಯಕ್ಷ







