ಸ್ವಾವಲಂಬಿ ಬದುಕಿಗೆ ಬೆಳಕಾದ ಪರಿಸರ ಸ್ನೇಹಿ ಬ್ಯಾಗ್‌ಗಳು; ಸ್ವಂತ ಉದ್ಯಮ ಆರಂಭಿಸಿ ನಾಲ್ಕು ಮಹಿಳೆಯರಿಗೆ ಆಸರೆಯಾದ ಕವನಾ

ಮೈಸೂರು: ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಬದಲು ಏನಾದರೂ ಮಾಡಬೇಕು ಎಂಬ ಹಂಬಲದೊಂದಿಗೆ ಮಹಿಳೆಯೊಬ್ಬರು ಹಳೆಯ ಬಟ್ಟೆಗಳನ್ನು ಉಪಯೊಗಿಸಿ ಸಣ್ಣ, ಸಣ್ಣ ಬ್ಯಾಗ್‌ಗಳನ್ನು ಪ್ರಾಯೋಗಿಕವಾಗಿ ತಯಾರು ಮಾಡುತ್ತಲೇ ಪರಿಸರ ಸ್ನೇಹಿ ಪ್ರೋಪ್ಯಾಕ್(ಬಟ್ಟೆ ಬ್ಯಾಗ್ಸ್) ತಯಾರು ಮಾಡುವ ಉದ್ಯಮವನ್ನೇ ಆರಂಭಿಸಿ ಯಶಸ್ವಿಯಾಗಿ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದಾರೆ.
ಮೈಸೂರಿನ ಗೋಕುಲಂನ ನಾಲ್ಕನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಶೆಡ್‌ನೊಂದಿಗೆ ಕವನಾ ಎಂಬ ಮಹಿಳೆ ಉದ್ಯಮವನ್ನು ಆರಂಭಿಸಿ ನಾಲ್ಕು ಮಂದಿ ಮಹಿಳೆಯರಿಗೆ ಉದ್ಯೋಗವನ್ನು ನೀಡುವ ಮೂಲಕ ಬದುಕು ಕಟ್ಟಿಕೊಟ್ಟಿದ್ದಾರೆ.
ಕವನಾ ಬಿ.ಕಾಂ. ಪದವಿ ಪಡೆದು ಸಿ.ಎ. ಮುಗಿಸುವ ಹಂತದಲ್ಲಿರುವಾಗಲೇ ವಿವಾಹವಾಗುತ್ತದೆ. ನಂತರ ಮಗ ಹುಟ್ಟಿದ ಮೇಲೆ ಅವನ ಪಾಲನೆಯಲ್ಲಿ ತೊಡಗುತ್ತಾರೆ. ಬಿಡುವಿನ ಸಮಯದಲ್ಲಿ ಏನಾದರೂ ಕಲಿಯೋಣ ಎಂದು ಫ್ಯಾಷನ್‌ಗಾಗಿ ಬಟ್ಟೆಗಳನ್ನು ಕತ್ತರಿಸಿ ಅದರಿಂದ ಬ್ಯಾಗ್ ಮಾಡುತ್ತಾರೆ. ನಂತರ ಇದೇ ಇವರ ಬದುಕಿಗೆ ಆಸರೆಯಾಗುತ್ತದೆ. ಈ ಉದ್ಯಮಕ್ಕೆ ತಂದೆ, ತಾಯಿಯ ಪ್ರೋತ್ಸಾಹವೇ ಕಾರಣ ಎಂದು ಕವನಾ ಸಂತಸದಿಂದ ಹೇಳುತ್ತಾರೆ.
ಪರಿಸರ ಸ್ನೇಹಿ ಪ್ರೋಪ್ಯಾಕ್(ಬಟ್ಟೆ ಬ್ಯಾಗ್ಸ್), ದೋಹರ್‌ಗಳನ್ನು ತಯಾರು ಮಾಡಿ ಮಾರಾಟ ಮಾಡುವ ಇವರು, ಮೊದಲಿಗೆ ಪರಿಸರ ಸ್ನೇಹಿ ಕ್ಯಾರಿ ಬ್ಯಾಗ್‌ಗಳನ್ನು ಆರಂಭಿಸಿ ನಾಲ್ಕು ವರ್ಷಗಳಿಂದ ಹಲವಾರು ಡಿಸೈನ್ಸ್‌ಗಳ ಬ್ಯಾಗ್‌ಗಳು, ದೋಹರ್, ಮಕ್ಕಳ ಲಂಚ್ ಬ್ಯಾಗ್, ಹ್ಯಾಂಡ್ ಬ್ಯಾಗ್, ಮಕ್ಕಳ ಆಕರ್ಷಣೀಯ ಲುಡೋಗಳನ್ನು ತಯಾರು ಮಾಡುತ್ತಿದ್ದಾರೆ. ಇದರ ಜೊತೆಗೆ ಬೇಡಿಕೆಗೆ ಅನುಗುಣವಾಗಿ ಬ್ಯಾಗ್‌ಗಳಿಗೆ ಎಂಬ್ರಾಯಿಡರಿ, ಪ್ರಿಂಟಿಂಗ್ ಮತ್ತು ಪೇಂಟಿಗ್ಸ್‌ಗಳನ್ನು ಮಾಡಿಕೊಡುತ್ತಾರೆ.
ಸಣ್ಣದಾಗಿ ಪ್ರಾರಂಭ ಮಾಡಿದ ಇವರ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ. ಬದುಕುವ ಚಾಲೆಂಜ್ ಒಂದು ಕಡೆಯಾದರೆ ಪರಿಸರ ಉಳಿಸಬೇಕು ಎಂಬ ಆಸೆಯೊಂದಿಗೆ ಪ್ರೋಪ್ಯಾಕ್ ಉದ್ಯಮವನ್ನು ಆರಂಭಿಸಿ ಕಡಿಮೆ ದರದಲ್ಲಿ ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ.
ಮೈಸೂರು ನಗರದಲ್ಲೇ ನಾಲ್ಕಾರು ಅಂಗಡಿಗಳಿಗೆ ನಿರಂತರವಾಗಿ ಪ್ರೋಪ್ಯಾಕ್ (ಬಟ್ಟೆ ಬ್ಯಾಗ್) ಗಳನ್ನು ನೀಡುತ್ತಾರೆ. ಇದರ ಜೊತೆಯಲ್ಲಿ ಮದುವೆ, ಹುಟ್ಟುಹಬ್ಬ, ಗೃಹಪ್ರವೇಶ, ಕಾರ್ಯಕ್ರಮಗಳಿಗೆ ಅವರು ಕೇಳಿದ ರೀತಿಯ ಬ್ಯಾಗ್‌ಗಳನ್ನು ತಯಾರು ಮಾಡುಕೊಡುತ್ತಿದ್ದಾರೆ. ಕಟಿಂಗ್ ಮತ್ತು ಡಿಸೈನ್ ಅನ್ನು ಕವನಾ ಅವರೇ ಮಾಡಿಕೊಡಲಿದ್ದು, ಮೂವರು ಮಹಿಳೆಯರು ಸ್ಟಿಚಿಂಗ್ ಮಾಡಿದರೆ ಓರ್ವ ಮಹಿಳೆ ಡಿಸೈನ್ ಮಾಡುತ್ತಾರೆ. ಮೊದಲು ಒಂದೇ ಡಿಸೈನ್ ಮಾಡುತ್ತಿದ್ದೆವು ಈಗ 60 ಕ್ಕೂ ಹೆಚ್ಚು ಡಿಸೈನ್‌ಗಳನ್ನು ಮಾಡುತ್ತೇವೆ ಎಂದು ಕವನಾ ಹೇಳುತ್ತಾರೆ.
ಹೊರ ರಾಜ್ಯಗಳಿಂದ ಕಚ್ಚಾವಸ್ತು
ಕವನಾ ಅವರು ತಯಾರು ಮಾಡಿದ ಬ್ಯಾಗ್‌ಗಳನ್ನು ಮೈಸೂರಿನ ವಸ್ತುಪ್ರದರ್ಶನ, ಮೈಸೂರು ಸಂತೆ, ಮಹಿಳಾ ಉದ್ಯಮಶೀಲತೆಗಳಲ್ಲೂ ಕಳೆದ ವರ್ಷದಿಂದ ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಿದ್ದಾರೆ. ಇವರ ಉದ್ಯಮಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ತಮಿಳುನಾಡು, ಸೂರತ್, ಜೈಪುರ್ ಮತ್ತು ಬೆಂಗಳೂರುಗಳಿಂದ ತರಿಸಿ ಬೇಡಿಕೆಗೆ ಅನುಗುಣವಾಗಿ ಬ್ಯಾಗ್‌ಗಳನ್ನು ತಯಾರು ಮಾಡಿಕೊಟ್ಟು ಯಶಸ್ಸಿನ ದಾಪುಗಾಲು ಇಡುತ್ತಿದ್ದಾರೆ.