ನಾರಾಯಣ ಗುರುಗಳ ಶೈಕ್ಷಣಿಕ ಕ್ರಾಂತಿ
ಇಂದು ನಾರಾಯಣ ಗುರು ಜಯಂತಿ

‘‘ದೇವಸ್ಥಾನಕ್ಕೆ ಪೂಜೆಗಾಗಿ ಭಕ್ತಿಯಿಂದ ಹೂ ಹಣ್ಣುಗಳನ್ನು ಕೊಂಡೊಯ್ಯುವಂತೆ ನಿಮ್ಮ ಮಕ್ಕಳನ್ನು ಶ್ರದ್ಧಾಭಕ್ತಿಯಿಂದ ಶಾಲೆಯೊಳಗೆ ಕರೆದೊಯ್ಯಿರಿ. ಸಂಘಟಿತರಾಗಿ ಶಕ್ತಿಯನ್ನು ಪಡೆದು ಆ ಶಕ್ತಿಯಿಂದಲೇ ಭವಿಷ್ಯದ ಜನಾಂಗಕ್ಕೆ ವಿದ್ಯೆ ಕೊಡಿಸಿರಿ’’ ಎಂದು ನಾರಾಯಣ ಗುರುಗಳು ಕರೆಯಿತ್ತರು. ಪ್ರತೀ ದೇವಸ್ಥಾನದಲ್ಲಿ ಗ್ರಂಥಾಲಯ, ಸಮೀಪದಲ್ಲೇ ಶಿಕ್ಷಣ ಸಂಸ್ಥೆ ಇದು ಗುರುಗಳ ಸೂತ್ರವಾಗಿತ್ತು.
ಯಾವುದೇ ಸಮಾಜವು ಹಳೆಯ ಅನಗತ್ಯ ಜಾಡ್ಯಗಳನ್ನು ಬಿಟ್ಟು ಬಿಡಲು ಮತ್ತು ಹೊಸತನವನ್ನು ರೂಢಿಸಿಕೊಳ್ಳಲು ಶಿಕ್ಷಣವೇ ಏಕಮಾತ್ರ ಮಾಧ್ಯಮ ಎನ್ನುವುದು ನಾರಾಯಣ ಗುರುಗಳ ಖಚಿತ ಅಭಿಪ್ರಾಯವಾಗಿತ್ತು.
ಮೌಲ್ಯಾಧಾರಿತ ಶಿಕ್ಷಣವು ವ್ಯಕ್ತಿಗೆ ಆಂತರಿಕ ವಿಶ್ವಸನೀಯ ಬಲಪಡೆಯಲು, ಬಾಹ್ಯ ಜಗತ್ತಿನ ತಿಳಿವಳಿಕೆಗಳನ್ನು ಅರಿಯಲು ಇರುವ ಏಕಮಾತ್ರ ಸಾಧನ.
ನಿರಂತರ ಬದಲಾಗುತ್ತಿರುವ ಪರಿಸರ ಮತ್ತು ಪರಿಸ್ಥಿತಿಗೆ ಸಮಾಜ ತನ್ನನ್ನು ಒಡ್ಡಿಕೊಂಡು, ತಿದ್ದಿಕೊಂಡು, ಪ್ರಗತಿಪರ ಉನ್ನತಿ ಸಾಧಿಸಲು ಆಧುನಿಕ ಶಿಕ್ಷಣದ ಅಗತ್ಯವಿದೆ. ಶಿಕ್ಷಣದಿಂದ ಶೂದ್ರರು ವಂಚಿತರಾದುದೇ ಅವರ ಹೀನ ಅಸ್ವಸ್ಥ ಸ್ಥಿತಿಗೆ ಕಾರಣ. ಸಮಾಜದ ಪುನರುತ್ಥಾನ ಆಗಬೇಕಾದರೆ ಪ್ರತೀ ಪುರುಷ ಮತ್ತು ಸ್ತ್ರೀಗೂ ಸಮಾನ ಶಿಕ್ಷಣ ಅಗತ್ಯ ಅನಿವಾರ್ಯವಾಗಿದೆ ಎಂದು ಕರೆ ನೀಡಿದರು.
ವಿವೇಕವುಳ್ಳ ಸತ್ಸಾಂಸ್ಕೃತಿಕ ಕೌಟುಂಬಿಕ ಹಿನ್ನೆಲೆಯುಳ್ಳ ಉತ್ತಮ ಸಮಾಜದ ನಿರ್ಮಾಣಕ್ಕೆ ಉತ್ತಮ ಶಿಕ್ಷಣ ಅಗತ್ಯ ಎಂದರು. ಮಗುವಿನಲ್ಲಿ ಉತ್ತಮ ಸಂಸ್ಕಾರಗಳನ್ನು ರೂಢಿಸಬೇಕಾದರೆ ತಾಯಿ ವಿದ್ಯಾವಂತೆಯೂ, ಪ್ರಜ್ಞಾವಂತೆಯೂ, ಸುಸಂಸ್ಕೃತಳೂ ಆಗಬೇಕು. ಅಂತಹ ತಾಯಂದಿರಿಂದ ಉತ್ತಮ ವಿದ್ಯಾವಂತ, ಪ್ರಜ್ಞಾವಂತ ವ್ಯಕ್ತಿಗಳಿಂದ ಕೂಡಿದ ಸಮಾಜ ನಿರ್ಮಾಣ ಸಾಧ್ಯ. ಆಕೆಗೆ ಉತ್ತಮ ಶಿಕ್ಷಣ ಅನಿವಾರ್ಯತೆಯ ಅಗತ್ಯವಿದೆ. ಇದು ನಾರಾಯಣ ಗುರುಗಳ ಶಿಕ್ಷಣ ಕ್ರಾಂತಿಯ ತಳಹದಿಯಾಗಿತ್ತು.
ತ್ರಿಭಾಷಾ ಸೂತ್ರ
ಗುರುಗಳ ಶಿಕ್ಷಣ ಕ್ರಾಂತಿಯು ತ್ರಿಭಾಷಾ ಸೂತ್ರವಾಗಿದ್ದುದೇ ವಿಶೇಷವಾಗಿತ್ತು. ಮಾತೃಭಾಷೆಯಾದ ಮಲಯಾಳಂ, ಧಾರ್ಮಿಕ ವಿಧಿ-ವಿಧಾನಗಳನ್ನು ತಿಳಿದುಕೊಳ್ಳಲು ಸಂಸ್ಕೃತ, ಸರಕಾರಿ ಉದ್ಯೋಗ ಪಡೆಯಲು, ಸರಕಾರಿ ವ್ಯವಹಾರಗಳ ತಿಳಿವಳಿಕೆಗೆ ಇಂಗ್ಲಿಷ್ ಕಲಿಯಬೇಕೆಂದು ನಿರ್ದೇಶನ ಮಾಡಿದರು. ಸ್ವಾತಂತ್ರ್ಯೋತ್ತರ ಭಾರತ ಈ ತ್ರಿಭಾಷಾ ಸೂತ್ರವನ್ನು ಅಂಗೀಕರಿಸಿತು.
ವೃತ್ತಿಪರ ಶಿಕ್ಷಣ, ವಯಸ್ಕರ ಶಿಕ್ಷಣ ಮತ್ತು ರಾತ್ರಿ ಶಾಲೆ ಶಿಕ್ಷಣಕ್ಕೆ ಅನುವು ಮಾಡಿದರು. ಶಿಕ್ಷಣ ಬಹುಮೂಲ್ಯವಾದದ್ದು. ಅದನ್ನು ಕಲಿಯಲು ಪ್ರಾಯದ ಇತಿಮಿತಿ ಇರದು, ಇರಬಾರದು ಎಂದ ಅವರು ಶಿವಗಿರಿಯಲ್ಲಿ ವಯಸ್ಕರ ಶಿಕ್ಷಣವನ್ನು ಆರಂಭಿಸಿದರು. ಹಗಲು ಶಾಲೆಗೆ ಹೋಗಲು ಅನುಕೂಲವಿಲ್ಲದ ಮಕ್ಕಳಿಗಾಗಿ ರಾತ್ರಿ ಶಾಲೆಗಳನ್ನು ತೆರೆದರು. 1904ರಲ್ಲಿ ಚೆಂಬಳಂತಿಯಲ್ಲಿ ಪುಲಯ್ಯ ಜನಾಂಗದ ಮಕ್ಕಳಿಗಾಗಿ ಶಾಲೆಯನ್ನು ಇದೇ ಸಮಯದಲ್ಲಿ ಸ್ಥಾಪಿಸಿದರು. 1905ರಲ್ಲಿ ಗುರುಗಳ 50ನೆಯ ಜನ್ಮೋತ್ಸವದ ಸಂದರ್ಭದಲ್ಲಿ ವರ್ಕಳದ ಸಮೀಪದ ವೆಟ್ಟೂರು ಗ್ರಾಮದಲ್ಲಿ ಪರಯ್ಯ ಮತ್ತು ಪುಲಯ್ಯರ ಮಕ್ಕಳಿಗಾಗಿ ಒಂದು ರಾತ್ರಿ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗಳಲ್ಲಿ ಗುರುಗಳ ಶಿಷ್ಯರು ಉಪಾಧ್ಯಾಯರಾಗಿ ಕಲಿಸುತ್ತಿದ್ದರು. ಸಿಲೋನಿನಲ್ಲಿ ತನ್ನ ಶಿಷ್ಯ ಸತ್ಯವೃತ ಸ್ವಾಮಿಗಳಿಂದ 42ಕ್ಕೂ ಹೆಚ್ಚು ರಾತ್ರಿ ಶಾಲೆ ಮತ್ತು ಪ್ರಾರ್ಥನಾ ಮಂದಿರಗಳನ್ನು ಸ್ಥಾಪನೆ ಮಾಡಿಸಿದರು.
1916ರಲ್ಲಿ ಕಾಂಚೀಪುರಂ ಮತ್ತು ಚೆನ್ನೈಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಅದರ ನಿರ್ವಹಣೆಗೆ ಸ್ಥಳೀಯ ಸಮಿತಿಗಳನ್ನು ರಚಿಸುತ್ತಾರೆ. ಮದುರೈಯಲ್ಲಿ ಹೆಣ್ಣಮಕ್ಕಳಿಗೋಸ್ಕರವೇ ಪ್ರಾಥಮಿಕ ಶಾಲೆ ಪ್ರಾರಂಭಿಸಿದರು.
ವಸತಿ ಸೌಕರ್ಯವುಳ್ಳ ಶಾಲೆಗಳ ಸ್ಥಾಪನೆ ಮಾಡಿದ್ದು ಮತ್ತು ಅಂತಹ ಶಾಲೆಗಳಿಗೆ ಆದ್ಯತೆ ಕೊಟ್ಟಿದ್ದು ನಾರಾಯಣಗುರುಗಳು ಶಿಕ್ಷಣ ರಂಗದಲ್ಲಿ ಮಾಡಿದ ಪರಿವರ್ತನಾಶೀಲ ಮಹಾಕ್ರಾಂತಿಯ ಮಹತ್ವದ ಹೆಜ್ಜೆಯಾಗಿತ್ತು. ಆಲುವ ಮತ್ತು ವರ್ಕಲದಲ್ಲಿ ವಸತಿ ಸೌಕರ್ಯವುಳ್ಳ ಶಾಲೆಗಳನ್ನು ತೆರೆದರು.
1903ರಲ್ಲಿ ಎಸ್‌ಎನ್‌ಡಿಪಿಯ ಸಂಘಟನೆ ಆದ ಮೇಲೆ ಅದರ ಮೂಲಕ ಶಿಕ್ಷಣಕ್ಕೆ ಸಂಬಂಧಪಟ್ಟ ಸಂದೇಶಗಳನ್ನು ಕೊಡುತ್ತಿದ್ದರು. ಆ ಸಂದೇಶಗಳನ್ನು ವಿವೇಕೋದಯ, ಮಿತವಾದಿ, ಧರ್ಮಪತ್ರಿಕೆ, ದೇಶಾಭಿಮಾನಿ, ಕೇರಳ ಕೌಮುದಿ ಮುಂತಾದ ಪತ್ರಿಕೆಗಳು ಮನೆ ಮನೆಗಳಿಗೆ ಹೊತ್ತೊಯ್ಯುತ್ತಿದ್ದವು.
‘‘ದೇವಸ್ಥಾನಕ್ಕೆ ಪೂಜೆಗಾಗಿ ಭಕ್ತಿಯಿಂದ ಹೂ ಹಣ್ಣುಗಳನ್ನು ಕೊಂಡೊಯ್ಯುವಂತೆ ನಿಮ್ಮ ಮಕ್ಕಳನ್ನು ಶ್ರದ್ಧಾಭಕ್ತಿಯಿಂದ ಶಾಲೆಯೊಳಗೆ ಕರೆದೊಯ್ಯಿರಿ. ಸಂಘಟಿತರಾಗಿ ಶಕ್ತಿಯನ್ನು ಪಡೆದು ಆ ಶಕ್ತಿಯಿಂದಲೇ ಭವಿಷ್ಯದ ಜನಾಂಗಕ್ಕೆ ವಿದ್ಯೆ ಕೊಡಿಸಿರಿ’’ ಎಂದು ಕರೆಯಿತ್ತರು. ಪ್ರತೀ ದೇವಸ್ಥಾನದಲ್ಲಿ ಗ್ರಂಥಾಲಯ, ಸಮೀಪದಲ್ಲೇ ಶಿಕ್ಷಣ ಸಂಸ್ಥೆ ಇದು ಗುರುಗಳ ಸೂತ್ರವಾಗಿತ್ತು.
ಶಿಶುಗಳು ತಾಯಿ-ತಂದೆಯ ನೇರ ಆಶ್ರಯದಲ್ಲಿ ಬೆಳೆಯುವುದೇ ಲೇಸು. ಮಕ್ಕಳ ಶಿಕ್ಷಣದ ಬೇಕು, ಬೇಡಗಳ ಬಗ್ಗೆ ತಂದೆಯ ಆಶ್ರಯದಲ್ಲಿ ತಾಯಿಯೇ ನಿಗಾವಹಿಸಬೇಕು. ಹಾಗಾಗಬೇಕಾದರೆ ಹೆಂಡತಿಗೆ ಗಂಡನ ದುಡಿಮೆಯಲ್ಲಿ ಅಧಿಕಾರವಿರಬೇಕು. ಅದಕ್ಕಾಗಿ ಅವಿಭಕ್ತ ಅಳಿಯ ಸಂತಾನದ ದೊಡ್ಡ ಕುಟುಂಬಗಳು ಮಕ್ಕಳ ಸಂತಾನವಾಗಿ, ಚಿಕ್ಕ ಕುಟುಂಬಗಳಾಗಿ ಬದಲಾಗಬೇಕು. ಹಾಗಾದಾಗಲೇ ವ್ಯಕ್ತಿ ವಿಕಾಸಕ್ಕೆ, ಮಕ್ಕಳ ಶಿಕ್ಷಣಕ್ಕೆ ಆಸ್ಪದವಾಗುತ್ತದೆ ಎಂದು ಕರೆಕೊಟ್ಟರು. ಗುರುಗಳ ಆ ಆದರ್ಶ ಕುಟುಂಬದ ಅನುಕರಣೆಯನ್ನು ಈಳವರಲ್ಲದೆ, ನಾಯರ್‌ರು, ಬ್ರಾಹ್ಮಣರು, ಪುಲಯ್ಯನವರು ಮುಂತಾದ ಎಲ್ಲ ಪಂಗಡದವರು ಅನುಸರಿಸಿದರು. ಸಾರ್ವಜನಿಕರ ಒತ್ತಾಯದ ಮೇಲೆ ಸರಕಾರವೂ ಕೊನೆಗೆ ಇದಕ್ಕೆ ಅಗತ್ಯವಾದ ಕಾಯ್ದೆಗಳನ್ನು ಜಾರಿಗೆ ತಂದಿತು.
‘‘ವಿದ್ಯೆಯಿಂದ ಸ್ವತಂತ್ರರಾಗಿರಿ’’ ಎಂದ ಗುರು 1905ರಲ್ಲಿ ಕ್ವಿಲಾನಿನಲ್ಲಿ ನಡೆದ ಸಭೆಯಲ್ಲಿ ಶಿಕ್ಷಣದ ಬಗೆಗೆ ಹೇಳಿಕೆ ಕೊಟ್ಟರು. ‘‘ವಿದ್ಯಾಭ್ಯಾಸದ ಅಮೂಲ್ಯ ಗುಣಗಳನ್ನು ಜನರಿಗೆ ತಿಳಿಸಿ ಹೇಳಬೇಕು. ವಿದ್ಯಾಭ್ಯಾಸ ಇಲ್ಲದ್ದರಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಬೇಕು. ಕನಿಷ್ಠ ಪಕ್ಷ ಪ್ರಾಥಮಿಕ ವಿದ್ಯಾಭ್ಯಾಸವಾದರೂ ಎಲ್ಲರಿಗೂ ಸಿಗುವಂತಾಗ ಬೇಕು. ಕಲಿಯಿರಿ ಮತ್ತು ಕಲಿಸಿರಿ. ಬೆಳೆಯಿರಿ ಮತ್ತು ಬೆಳೆಸಿರಿ. ಯೋಚಿಸಿರಿ ಮತ್ತು ಯೋಜಿಸಿರಿ. ಚೈತನ್ಯವಂತರಾಗಿ ಕಾರ್ಯತತ್ಪರರಾಗಿರಿ. ಒಗ್ಗಟ್ಟಿನಿಂದ ಕರ್ತವ್ಯ ಪ್ರಜ್ಞೆಗಳನ್ನು ಹೊಂದಿರಿ. ಜನ್ಮಜಾತ ಹಕ್ಕುಗಳನ್ನು ಪಡೆಯಿರಿ’’ ಗುರುಗಳ ಈ ಸಂದೇಶಗಳು ಜನಮನಗಳಲ್ಲಿ ಸ್ಪಂದನಗೊಂಡವು. ಬಡವರನ್ನು ಹೆಚ್ಚೆಚ್ಚು ವಿದ್ಯಾವಂತರನ್ನಾಗಿ ಮಾಡಿದರೆ ಸಮುದಾಯ ಸುರಕ್ಷಿತವಾಗುತ್ತದೆ. ಅಸ್ಪಶ್ಯರು ಹಾಗೂ ಮೈಲಿಗೆಯರು ಎಂದು ಭಾವಿಸುವ ದಲಿತರ ಮಕ್ಕಳಿಗೆ ಶಿಕ್ಷಣದೊಂದಿಗೆ ಸಭ್ಯ ಸಂಸ್ಕೃತಿ, ಶುಚಿತ್ವ ಕಲಿಸಬೇಕು ಎಂದು ಚಳವಳಿಯಂತೆ ಕೆಲಸಗಳಾದವು.
ಅಂದಿನ ತಿರುವಾಂಕೂರು ಸರಕಾರವು ಗುರುಗಳು ಮತ್ತು ಅವರ ಶಿಷ್ಯರ ಸುಧಾರಣಾ ಚಳವಳಿಯನ್ನು ಸುಲಭದಲ್ಲಿ ಒಪ್ಪಿಕೊಳ್ಳಲಿಲ್ಲ. ಡಾ. ಪಲ್ಸು ಸರಕಾರಕ್ಕೆ ಅರ್ಪಿಸಿದ ಈಳವ ಸಂಕಟ ಅರ್ಜಿಗೆ ಉತ್ತರವಾಗಿ ದಿವಾನ ವೆಂಕಟ ಸುಬ್ಬಯ್ಯನವರಿಂದ ‘ಈಳವರು ವಿದ್ಯಾಭ್ಯಾಸವನ್ನು ಮಾಡಿ ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡುವುದಕ್ಕಿಂತ ತಲೆತಲಾಂತರಗಳಿಂದ ಮಾಡಿಕೊಂಡು ಬಂದ ಕೃಷಿ, ತೆಂಗಿನ ನಾರಿನ ಕೈಗಾರಿಕೆ ಮತ್ತು ಮೂರ್ತೆಗಾರಿಕೆಯನ್ನು ಮಾಡುವುದು ಲೇಸು’ ಎನ್ನುವ ಉತ್ತರ ಅಂದಿನ ಹಿಂದೂ ಸವರ್ಣರ ಸರಕಾರ ಹೇಗೆ ಹಿಂದುಳಿದ ಜಾತಿಯವರನ್ನು ಶಿಕ್ಷಣದಿಂದ ದೂರ ಇಡಲು ಬಯಸುತ್ತಿತ್ತು ಎನ್ನುವುದಕ್ಕೆ ಜೀವಂತ ಉದಾಹರಣೆಯಾಗಿ ಉಳಿದಿದೆ.
ನಾರಾಯಣ ಗುರುಗಳ ಶೈಕ್ಷಣಿಕ ಚಿಂತನೆಗಳು ಬಹಳ ದೂರಗಮನದವುಗಳಾಗಿವೆ. ಅಸ್ಪಶ್ಯತೆಯ ನಿವಾರಣೆಯಲ್ಲಿ ಗುರುಗಳು ಮಾಡಿದ ತಂತ್ರಗಾರಿಕೆ ಮುಂದೆ ಅದು ದೇಶದ ಗಮನ ಸೆಳೆದ ಚಳವಳಿಯಾಗಿ ರೂಪುಗೊಂಡಿತು. ಅವರ ಮದ್ಯಪಾನ ನಿಷೇಧ ತಳಸಮುದಾಯಗಳ ಮೂಲಭೂತ ಸಮಸ್ಯೆಗೆ ಪರಿಹಾರವಾಯಿತು. 1925ರಲ್ಲಿ ವೈಕಂ ಚಳವಳಿಗೆ ಬೆಂಬಲವಾಗಿ ಗಾಂಧೀಜಿ ಭೇಟಿ ಕೊಟ್ಟದ್ದು ಮತ್ತು ಪ್ರಭಾವಿತರಾಗಿ ಗಾಂಧೀಜಿ ಮುಂದೆ ತಾವು ಮದ್ಯಪಾನ ನಿಷೇಧ ಚಳವಳಿಯನ್ನೇ ಆರಂಭಿಸಿದ್ದು, ತಮ್ಮಲ್ಲಿ ಗುರುಗಳು ಅಸ್ಪಶ್ಯರನ್ನು ಅಡುಗೆಯವರನ್ನಾಗಿ ಮಾಡಿಕೊಂಡಿದ್ದ ಮಾದರಿಯನ್ನು ಕಂಡು ಮುಂದೆ ಗಾಂಧಿ ತಮ್ಮ ಸಾಬರ್ಮತಿ ಆಶ್ರಮದಲ್ಲಿ ಅಡುಗೆಗೆ ಅಸ್ಪಶ್ಯರನ್ನು ನೇಮಿಸಿಕೊಳ್ಳು ವಂತಾಯಿತು. ಇದರಿಂದ ಗುರುಗಳ ವ್ಯಕ್ತಿತ್ವದ ಮಹತ್ವ ಅರಿವಾಗುತ್ತದೆ.
ನಾರಾಯಣ ಗುರುಗಳಿದ್ದ ಕಾಲದ ತಳಸಮುದಾಯ ಗಳ ಕರಾಳತೆಯ ಹಿಂದೆ ಮೂಢನಂಬಿಕೆ, ಅನಗತ್ಯ ಆಡಂಬರದ ಆಚರಣೆಗಳು ಕಾರಣವಾಗಿದ್ದವು. ಈ ನೆಲೆಗಳಲ್ಲಿ ಸುಧಾರಣೆಗಳಾಗಬೇಕಾದ ಅಗತ್ಯಗಳನ್ನು ಕಂಡ ಗುರುಗಳು ಸೂಕ್ತವಾದ ಪರಿಹಾರಗಳನ್ನು ಸೂಚಿಸಿದರು. ದೇವದಾಸಿ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ನಿಷೇಧಿಸಿದರು. ಹೆಣ್ಣಿನ ಜೀವನಾವರ್ತನದಲ್ಲಿ ನಡೆಯುವ ಋತುಮತಿ, ವಿವಾಹ ಇತ್ಯಾದಿ ಆಚರಣೆಗಳ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರು. ಕೆಲವೇ ಜನ ಆಪ್ತರು ಮಾತ್ರ ಸೇರಿ ಆಗುವ ಸರಳವಾದ ವಿವಾಹ ನೀತಿಗೆ ಮಾನ್ಯತೆ ನೀಡಿದರು.
ಮೂಲನಂಬಿಕೆಗಿಂತ ಭಿನ್ನವಾದ, ಅನಿಷ್ಟ ಮೂಢನಂಬಿಕೆ ಮೂಲದ ಹಿಂಸಾಮೂಲ ಆಚರಣೆಗಳನ್ನು ನಿಯಂತ್ರಿಸಿ ಅವುಗಳು ಹಲವೆಡೆ ಸಾತ್ವಿಕ ಆಚರಣೆಗಳಿಗೆ ಸೀಮಿತವಾದುವು. ಈ ಮೂಲಕ ಗುರುನಾರಾಯಣರು ಸಾಂಸ್ಕೃತಿಕವಾಗಿಯೂ ಮೌನ ಕ್ರಾಂತಿಯನ್ನೇ ಮಾಡಿದರು. ಹೆಂಡ ಇಳಿಸುವ ಸಮುದಾಯದಿಂದ ಒಡಮೂಡಿ ಬಂದ ಗುರು ನಾರಾಯಣರು ಜನಮೂಲ ಆಚರಣೆಯಲ್ಲಿ ಹೆಂಡ ನಿಷೇಧಕ್ಕೆ ಮುಂದಾದದ್ದು ಗಮನಾರ್ಹ ವಿಚಾರವಾಗಿದೆ.
ಹಿಂದುಳಿದ ಸಮುದಾಯಗಳ ಉದ್ಧಾರಕ್ಕಾಗಿ ಉದಿಸಿ ಬಂದ ಅನೇಕ ಸುಧಾರಕರು ಇತಿಹಾಸದಲ್ಲಿ ದಾಖಲಾಗಿದ್ದಾರೆ. ಆದರೆ ನಾರಾಯಣ ಗುರುಗಳು ಅವರಿಂದೆಲ್ಲ ತೀರ ಭಿನ್ನ. ಕರ್ನಾಟಕದಲ್ಲಿ ದೇವರಾಜ ಅರಸು ಕಾಲದಲ್ಲಿ ಅಸ್ಪಶ್ಯರಿಗೆ ದೇವಸ್ಥಾನ ಪ್ರವೇಶಕ್ಕೆ ಸಂವಿಧಾನ ನಿರ್ದೇಶಿತ ಕಾನೂನನ್ನು ಮಾಡಲಾಯಿತು. ಮನುಸ್ಮತಿಯಲ್ಲಿ ಜೀವವಿರೋಧಿಯಾದ ಅನಧಿಕೃತ ಶಾಸನಗಳಿವೆ ಎನ್ನುವ ಕಾರಣಕ್ಕಾಗಿ ದಲಿತ ಮೂಲದ ಬಿ.ಆರ್. ಅಂಬೇಡ್ಕರ್ ಅದನ್ನು ನಡುಬೀದಿಯಲ್ಲಿ ಸುಟ್ಟು ಪ್ರತಿಭಟಿಸಿದರು. ಪೆರಿಯಾರ್ ರಾಮಸ್ವಾಮಿಯವರದ್ದು ಬೇರೆ ತೀವ್ರಗಾಮಿ ನಡೆ. ಆದರೆ ಕರ್ನಾಟಕದ, 12ನೇ ಶತಮಾನದ ಬಸವಣ್ಣನವರ ಸುಧಾರಣೆಯ ಅನೇಕ ವಿಚಾರಗಳು ನಾರಾಯಣ ಗುರುಗಳಲ್ಲಿ ಸಮನ್ವಯವಾಗುತ್ತವೆ.
ಕಾನೂನಿನ ಹಂಗಿಲ್ಲದೆ, ಯಾರ ಬಲತ್ಕಾರವೂ ಇಲ್ಲದೆ, ಜಾತಿ ಮತದ ಯಾವುದೇ ಕುರುಹುಗಳನ್ನು ಮೈಮೇಲೆ ಧಾರಣೆ ಮಾಡದೆ, ಎಲ್ಲವೂ ನಿರಾಕಾರ ಸುಂದರ ಶಿವ ತತ್ವವಾದ ಅದ್ವೈತದಲ್ಲಿಯೇ ಒಪ್ಪಿತವಾಗಿ, ‘‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’’ ಎನ್ನುವ ತತ್ವದಲ್ಲಿ ಮಾನವ ಕುಲದ ಉದ್ಧಾರವನ್ನು ಕಂಡ ನಾರಾಯಣ ಗುರುಗಳು ಅವರೆಲ್ಲರಿಗಿಂತಲೂ ಪ್ರತ್ಯೇಕವಾಗಿ ನಿಲ್ಲುತ್ತಾರೆ.
(‘ಅರಿವಿನ ಬೆಳಕು ನಾರಾಯಣಗುರು’ ಕೃತಿಯಿಂದ ಆಯ್ದ ಭಾಗ)






