ಬೆಸ್ಕಾಂ ವ್ಯಾಪ್ತಿಯಲ್ಲಿ ‘ಪಿಎಂ ಕುಸುಮ್ ಸಿ’ ಯೋಜನೆಯ ಪರಿಣಾಮಕಾರಿ ಅನುಷ್ಠಾನ

ಬೆಂಗಳೂರು : ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆಯೆ 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದರ ಜೊತೆಗೆ, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರಕಾರದ ‘ಪಿಎಂ ಕುಸುಮ್ ಸಿ’ ಯೋಜನೆಯನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರು ಸಮೀಪದ ನಲ್ಲಿಮರದಹಳ್ಳಿ ಉಪ ಕೇಂದ್ರದ ವ್ಯಾಪ್ತಿಯಲ್ಲಿರುವ ಹಿರಿಯಣ್ಣನಹಳ್ಳಿಯಲ್ಲಿ 40 ಎಕರೆ ಪ್ರದೇಶದಲ್ಲಿ 13 ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಘಟಕವನ್ನು ಮೆಗಾ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನವರು ಪ್ರಸಕ್ತ ಸಾಲಿನ ಜು.29ರಂದು ಕಾರ್ಯಾರಂಭಗೊಳಿಸಿದ್ದಾರೆ. 8 ಕೃಷಿ ಫೀಡರ್‌ಗಳ ಮೂಲಕ 27 ಗ್ರಾಮಗಳ 2,593 ಕೃಷಿ ಪಂಪ್ ಸೆಟ್‌ಗಳಿಗೆ ಸೌರ ವಿದ್ಯುತ್ ಪೂರೈಸಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಭಾಗದ ಕುಂದಾಣ ಕೆರೆಯ 40 ಎಕರೆ ಜಾಗದಲ್ಲಿ 3 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದೆ. ಇದರಿಂದ, 37 ಗ್ರಾಮಗಳ 797 ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಈ ಕೆರೆಯ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾದರೂ, ಸೌರ ಫಲಕಗಳಿಗೆ ಹಾನಿಯಾಗದಂತೆ ನೆಲಮಟ್ಟದಿಂದ 1.5 ಮೀಟರ್ ಎತ್ತರದಲ್ಲಿ ಅಳವಡಿಸಲಾಗಿದೆ.
ಈ ಘಟಕವು ಇಡೀ ದೇಶಕ್ಕೆ ಮಾದರಿಯಾಗಿದ್ದು, ಕೇಂದ್ರ ಸರಕಾರದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಸ್ಕಾಂ ವತಿಯಿಂದ ಸಣ್ಣ ನೀರಾವರಿ ಇಲಾಖೆಗೆ ಪ್ರತೀ ಎಕರೆಗೆ 25 ಸಾವಿರ ರೂ.ಗಳಂತೆ ವಾರ್ಷಿಕ ಬಾಡಿಗೆ ಪಾವತಿ ಮಾಡಲಾಗುತ್ತಿದೆ. ದೇವನಹಳ್ಳಿಯಲ್ಲಿ 13 ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಸ್ಥಾಪಿಸಲಾ ಗಿದ್ದು, 8 ಕೃಷಿ ಫೀಡರ್‌ಗಳ ಮೂಲಕ 68 ಗ್ರಾಮಗಳ 2,811 ಕೃಷಿ ಪಂಪ್ ಸೆಟ್‌ಗಳಿಗೆ ಸೌರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಕುಸುಮ್ ಸಿ ಯೋಜನೆಗೆ ವಿದ್ಯುತ್ ಉಪ ಕೇಂದ್ರದಿಂದ 5 ಕಿ.ಮೀ. ವ್ಯಾಪ್ತಿಯೊಳಗೆ ಇರುವ ಸರಕಾರಿ ಜಮೀನು ಲಭಿಸಿದರೆ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡುವ ಸಂಸ್ಥೆ ಪ್ರತೀ ಎಕರೆಗೆ ವಾರ್ಷಿಕ 25 ಸಾವಿರ ರೂ.ಗಳಂತೆ ಸ್ಥಳೀಯ ಗ್ರಾಮ ಪಂಚಾಯತ್‌ಗಳಿಗೆ ಪಾವತಿ ಮಾಡಲಾಗುತ್ತದೆ. ಆ ಹಣವನ್ನು ಗ್ರಾಮ ಪಂಚಾಯತ್‌ಗಳು ಸ್ಥಳೀಯವಾಗಿ ಸಾರ್ವಜನಿಕ ಉಪಯೋಗದ ಕೆಲಸಗಳಿಗೆ ಬಳಕೆ ಮಾಡಬೇಕು.
ಸರಕಾರಿ ಜಮೀನುಗಳು ಲಭ್ಯವಿಲ್ಲದ ಕಡೆ ರೈತರಿಂದ 25 ವರ್ಷಗಳ ಕಾಲ ಜಮೀನು ಗುತ್ತಿಗೆಗೆ ಪಡೆದು ಘಟಕ ಸ್ಥಾಪನೆ ಮಾಡಲಾಗುವುದು. ಸಂಸ್ಥೆಗಳು ಭೂಮಿ ನೀಡುವಂತಹ ರೈತರೊಂದಿಗೆ ಚರ್ಚಿಸಿ ಕನಿಷ್ಠ 25 ಸಾವಿರ ರೂ.ಗಳಿಗಿಂತ ಕಡಿಮೆಯಿಲ್ಲದಂತೆ ಗುತ್ತಿಗೆ ಮೊತ್ತದ ಒಪ್ಪಂದ ಮಾಡಿಕೊಳ್ಳುತ್ತವೆ. ಹಿರಿಯಣ್ಣನಹಳ್ಳಿ ಗ್ರಾಮದಲ್ಲಿ ಮೆಗಾ ಇಂಜಿನಿಯರಿಂಗ್ ಪ್ರೈವೇಟ್ ಸಂಸ್ಥೆಯವರು ಪ್ರತೀ ಎಕರೆಗೆ 60 ಸಾವಿರ ರೂ.ಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಮೊತ್ತ ಪ್ರತೀ ಎರಡು ವರ್ಷಗಳಿಗೊಮ್ಮೆ ಶೇ.5ರಷ್ಟು ಹೆಚ್ಚಳವಾಗುತ್ತದೆ.
ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುತ್ತಿದ್ದರಿಂದ ರೈತರು ನಿದ್ದೆಗೆಟ್ಟು ಹೊಲ, ತೋಟಗಳಿಗೆ ನೀರು ಪೂರೈಕೆ ಮಾಡಬೇಕಿತ್ತು. ಅನೇಕ ಕಡೆ ಹಾವು, ಚೇಳು, ಕಾಡು ಪ್ರಾಣಿಗಳ ದಾಳಿಯಿಂದಾಗಿ ರೈತರ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ನಾವು ಎರಡು, ಮೂರು ತಲೆ ಮಾರುಗಳಿಂದ ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕುಸುಮ್ ಸಿ ಯೋಜನೆಯ ಬಗ್ಗೆ ಬೆಸ್ಕಾಂ ನವರು ನಮಗೆ ಮಾಹಿತಿ ನೀಡಿದಾಗ, ಈ ನಮ್ಮ ಭಾಗದ 27 ಹಳ್ಳಿಗಳಿಗೆ ಪ್ರಯೋಜನವಾಗಲಿ ಎಂದು ನಮ್ಮ 40 ಎಕರೆ ಜಮೀನನ್ನು ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡಲು ನೀಡಿದ್ದೇವೆ. ಈ ಭಾಗದ ರೈತರು ಹಗಲು ಹೊತ್ತಿನಲ್ಲೆ ವಿದ್ಯುತ್ ಸಿಗುತ್ತಿರುವುದರಿಂದ ಯಾವುದೇ ಸಮಸ್ಯೆಯಿಲ್ಲದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗಿದೆ.
-ನಾರಾಯಣಸ್ವಾಮಿ, ಪ್ರಗತಿಪರ ರೈತ, ಹಿರಿಯಣ್ಣನಹಳ್ಳಿ
‘ಕುಸುಮ್ ಬಿ ಮತ್ತು ಕುಸುಮ್ ಸಿ’ ಯೋಜನೆಗೆ ವೇಗ
ಕೇಂದ್ರ ಸರಕಾರದ ಕುಸುಮ್ ಬಿ(ವೈಯಕ್ತಿಕ ಘಟಕ) ಮತ್ತು ಕುಸುಮ್ ಸಿ(ಸಾಮುದಾಯಿಕ ಘಟಕ)ಯೋಜನೆಗಳು ನಮ್ಮ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದವು. ಕೆ.ಜೆ.ಜಾರ್ಜ್ ಇಂಧನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಎರಡು ಯೋಜನೆಗಳಿಗೆ ವೇಗ ಸಿಕ್ಕಿದೆ. ಕುಸುಮ್ ಸಿ ಯೋಜನೆಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಈಗ ನಮ್ಮ ರಾಜ್ಯ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ ಕನಿಷ್ಠ ಮೂರುವರೆ ಎಕರೆ ಜಾಗ ಬೇಕಾಗಿದ್ದು, ಸುಮಾರು 4 ಕೋಟಿ ರೂ.ವೆಚ್ಚವಾಗುತ್ತದೆ. ಕುಸುಮ್ ಬಿ ಯೋಜನೆಯು ರೈತರು ವೈಯಕ್ತಿಕವಾಗಿ ನಮ್ಮ ಜಮೀನುಗಳಲ್ಲಿ ಕೃಷಿ ಪಂಪ್ ಸೆಟ್‌ಗಳನ್ನು ಸೌರೀಕರಣ ಮಾಡುವುದಾಗಿದೆ. ಇದಕ್ಕೆ, ಕೇಂದ್ರ ಸರಕಾರ ಶೇ.30, ರಾಜ್ಯ ಶೇ.50ರಷ್ಟು ಸಹಾಯಧನ ನೀಡುತ್ತದೆ. ಫಲಾನುಭವಿ ರೈತರ ಶೇ.20ರಷ್ಟು ಮೊತ್ತವನ್ನು ಭರಿಸಬೇಕಾಗುತ್ತದೆ.
-ಡಾ.ಎನ್.ಶಿವಶಂಕರ್, ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ
ಮೊದಲು ರಾತ್ರಿ ವೇಳೆ 1, 2 ಗಂಟೆಗೆ ವಿದ್ಯುತ್ ನೀಡುತ್ತಿದ್ದರು. ನಾವು ಆ ಹೊತ್ತಲ್ಲಿ ಹೊಲಗಳಿಗೆ ಹೋಗಿ ಬೆಳೆಗಳಿಗೆ ನೀರು ಹಾಯಿಸಬೇಕಿತ್ತು. ಆದರೆ, ಈಗ ಕುಸುಮ್ ಸಿ ಯೋಜನೆಯಡಿ ನಮಗೆ ಹಗಲು ಹೊತ್ತಲ್ಲಿ ಗುಣಮಟ್ಟದ ವಿದ್ಯುತ್ ನಿರಂತರವಾಗಿ ಸಿಗುತ್ತಿದೆ. ಇದರಿಂದ, ನಾವು ಹೊಲಗಳಲ್ಲಿ ತರಕಾರಿ, ಹಣ್ಣು ಬೆಳೆಯಲು ಅನುಕೂಲವಾಗಿದೆ.
-ಮುನಿರಾಜು, ರೈತ, ಹಿರಿಯಣ್ಣನಹಳ್ಳಿ






