ಸಂಯಮ ಕಲಿತ ಸಂಭ್ರಮ ಈದುಲ್ ಫಿತ್ರ್

ಎಷ್ಟೋ ಮಂದಿಗೆ ರಮದಾನ್‌ನಲ್ಲಿ ತಮ್ಮ ಚಾರಿತ್ರ್ಯವನ್ನು ಸಂಸ್ಕರಿಸಿಕೊಳ್ಳುವುದಕ್ಕೆ, ಮಾತ್ರವಲ್ಲ, ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ರಮದಾನ್ ತಿಂಗಳಲ್ಲಿ ಕುಟುಂಬ ಮತ್ತು ಸಮಾಜದಲ್ಲಿ ಬೆಳೆದುಕೊಳ್ಳುವ ನಿರ್ಮಲವಾದ ಆಧ್ಯಾತ್ಮಿಕ ವಾತಾವರಣದಲ್ಲಿ ಎಷ್ಟೋ ಮಂದಿ ತಮ್ಮ ಮುಂದಿನ ಬದುಕನ್ನು ಸುಳ್ಳು, ವಂಚನೆ, ಮದ್ಯ, ಜೂಜು, ವ್ಯಭಿಚಾರ, ಮಾದಕವ್ಯಸನ ಮುಂತಾದ ಸಕಲ ಅನಿಷ್ಟಗಳಿಂದ ಮುಕ್ತವಾಗಿಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಹೆಚ್ಚಿನವರು ಆ ಪ್ರತಿಜ್ಞೆಯನ್ನು ಪಾಲಿಸುತ್ತಾರೆ. ಈ ರೀತಿ ತಮ್ಮ ಬದುಕಿನಲ್ಲಿ ಕ್ರಾಂತಿ ತಂದುಕೊಂಡವರು ಸಹಜವಾಗಿಯೇ ಈದುಲ್ ಫಿತ್ರ್‌ನ ದಿನ ಮನಸಾರೆ ಸಂಭ್ರಮಿಸುತ್ತಾರೆ.
ಇತರ ಸಮಾಜಗಳಿಗೆ ಹೋಲಿಸಿದರೆ ಮುಸ್ಲಿಮ್ ಸಮಾಜದಲ್ಲಿ ಹಬ್ಬಗಳ ಸಂಖ್ಯೆ ತುಂಬಾ ಕಡಿಮೆ. ಧರ್ಮಾನುಸಾರ, ಮುಸಲ್ಮಾನರಲ್ಲಿ ಇರುವ ಅಧಿಕೃತ ವಾರ್ಷಿಕ ಹಬ್ಬಗಳು ಎರಡು ಮಾತ್ರ. ಈ ಎರಡೂ ಹಬ್ಬಗಳು ಹಿಜರಿ ಕ್ಯಾಲೆಂಡರ್‌ನಲ್ಲಿ ವರ್ಷದ ಕೊನೆಯ ಮೂರು ತಿಂಗಳಲ್ಲಿ ಅಂದರೆ ಹತ್ತನೇ ಹಾಗೂ ಹನ್ನೆರಡನೇ ತಿಂಗಳಲ್ಲಿ ಬರುತ್ತವೆ. ಈ ಪೈಕಿ ಮೊದಲನೆಯ ಹಬ್ಬವೇ ಈದುಲ್ ಫಿತರ್ ಅಥವಾ ರಮದಾನ್ ಹಬ್ಬ. ರಮದಾನ್ ತಿಂಗಳುದ್ದಕ್ಕೂ 30 ದಿನಗಳ ಕಾಲ ಹಗಲು ಪೂರ್ತಿ ಉಪವಾಸ ವೃತವನ್ನು ಪಾಲಿಸಿ, ಆ ತಿಂಗಳು ಮುಗಿದಾಗ ಆರಂಭವಾಗುವ ಶವ್ವಾಲ್ ತಿಂಗಳ ಮೊದಲ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ರಮದಾನ್ ಹಬ್ಬ ಅಥವಾ ರಮಝಾನ್ ಹಬ್ಬ ಎಂದೂ ಕರೆಯಲಾಗುತ್ತದೆ. ಎಲ್ಲ ಉಪವಾಸ ಆಚರಿಸಿದವರು ಮತ್ತು ಅನಾರೋಗ್ಯ, ಪ್ರಯಾಣ ಇತ್ಯಾದಿ ಯಾವುದಾದರೂ ಕಾರಣದಿಂದ ಉಪವಾಸ ಆಚರಿಸಲಾಗದೆ ಇದ್ದವರು ಅವರೆಲ್ಲಾ ಹಬ್ಬದ ಆಚರಣೆಯಲ್ಲಿ ಒಂದಾಗುತ್ತಾರೆ. ಆ ದಿನ ಉಪವಾಸ ನಿಷಿದ್ಧವಾಗಿದೆ. ದೇವಾದೇಶ ಪಾಲನೆಯೇ ಮುಸ್ಲಿಮರ ಪಾಲಿನ ಪರಮ ಕರ್ತವ್ಯವಾದ್ದರಿಂದ ಮತ್ತು ಚಿತ್ತದ ಆದೇಶಗಳಿಗೆ ವಿರುದ್ಧವಾಗಿ ದೇವಾದೇಶಗಳನ್ನು ಪಾಲಿಸುವ ತರಬೇತಿ ಪಡೆಯುವುದೇ ರಮದಾನ್ ತಿಂಗಳಲ್ಲಿ ಆಚರಿಸುವ ಉಪವಾಸಗಳ ಉದ್ದೇಶವಾದ್ದರಿಂದ ತಿಂಗಳಾದ್ಯಂತ ಉಪವಾಸ ಆಚರಿಸಬೇಕೆಂಬ ಆದೇಶವನ್ನು ಪಾಲಿಸಿದಷ್ಟೇ ನಿಷ್ಠೆಯಿಂದ ಅವರು, ಶವ್ವಾಲ್ ತಿಂಗಳ ಮೊದಲ ದಿನ ಉಪವಾಸದ ಮೇಲಿರುವ ನಿಷೇಧವನ್ನೂ ಪಾಲಿಸುತ್ತಾರೆ.
ಈದುಲ್ ಫಿತ್ರ್ ಎಂಬ ಪದದ ಅರ್ಥ ಗಮನಾರ್ಹವಾಗಿದೆ. ಅರಬಿ ಭಾಷೆಯಲ್ಲಿ ಹೆಚ್ಚಿನೆಲ್ಲ ಪದಗಳ ಹಿಂದೆ ಮೂರಕ್ಷರಗಳ ಒಂದು ಮೂಲ ಪದವಿರುತ್ತದೆ. ಆ ಮೂಲ ಪದವೇ, ಅದರಿಂದ ಮೂಡಿದ ಇತರ ಪದಗಳ ತಾತ್ಪರ್ಯ ನಿರ್ಣಯಕ್ಕೆ ಅತ್ಯಧಿಕ ಸಹಾಯಕವಾಗುತ್ತದೆ. ‘ಫಿತ್ರ್’ ಪದದ ಹಿಂದಿರುವ ಮೂಲ ಪದ ‘ಫತ್ರ್’ ಅಥವಾ ‘ಫತರ’ ಎಂಬ ಮೂರಕ್ಷರದ ಪದ. ಅದಕ್ಕೆ ಮುರಿಯು, ಮುಗಿಸು, ಪ್ರತ್ಯೇಕಿಸು, ಸೀಳು, ಸಿಡಿಯು ಮುಂತಾದ ಹಲವು ಅರ್ಥಗಳಿವೆ. ಹಗಲಿಡೀ ಉಪವಾಸ ಆಚರಿಸಿದವನು ಸೂರ್ಯಾಸ್ತಮಾನದ ಸಮಯದಲ್ಲಿ ತನ್ನ ಉಪವಾಸವನ್ನು ಮುಗಿಸುವ ಪ್ರಕ್ರಿಯೆಗೆ ‘ಇಫ್ತಾರ್’ ಎನ್ನುತ್ತಾರೆ. ಈ ಇಫ್ತಾರ್ ಕೂಡಾ ಅದೇ ಮೂಲದಿಂದ ಬಂದ ಪದ. ನಿತ್ಯದ ಉಪವಾಸವನ್ನು ಆಯಾದಿನ ಸೂರ್ಯಾಸ್ತಮಾನದ ಬಳಿಕ ಕೊನೆಗೊಳಿಸುವ ಪ್ರಕ್ರಿಯೆಗೆ ಇಫ್ತಾರ್ ಎನ್ನುವಂತೆ, ತಿಂಗಳ ಕೊನೆಯಲ್ಲಿ, ಸಂಪೂರ್ಣ ತಿಂಗಳ ಉಪವಾಸವನ್ನು ಮುಗಿಸುವ ಪ್ರಕ್ರಿಯೆಗೆ ‘ಫಿತ್ರ್’ ಎನ್ನುತ್ತಾರೆ. ಇದುವೇ ಈದುಲ್ ಫಿತ್ರ್ ಎಂಬ ಪದದ ಹಿನ್ನೆಲೆ.
‘ಈದುಲ್ ಫಿತ್ರ್’ ಆಚರಣೆಯ ಹಿಂದೆ ಹಲವು ಔಚಿತ್ಯಗಳಿವೆ. ಯಾರೂ ಇದನ್ನು ಒಂದು ತಿಂಗಳ ನಿತ್ಯ ಉಪವಾಸದ ಕರ್ತವ್ಯದಿಂದ ಮುಕ್ತಿ ಸಿಕ್ಕಿದ್ದಕ್ಕಾಗಿ ಸಂಭ್ರಮಿಸುವ ದಿನ ಎಂಬಂತೆ ಕಾಣುವುದಿಲ್ಲ. ನಿಜವಾಗಿ ಮುಸ್ಲಿಮರಲ್ಲಿ ಹೆಚ್ಚಿನವರು ರಮದಾನ್ ತಿಂಗಳ ಆಗಮನಕ್ಕಾಗಿ ಬಹುಕಾಲದಿಂದ ಕಾತರದಿಂದ ಕಾದಿರುತ್ತಾರೆ. ಸಾಮಾನ್ಯವಾಗಿ ರಮದಾನ್ ತಿಂಗಳ ಆಗಮನಕ್ಕೆ ಒಂದೆರಡು ತಿಂಗಳ ಮುನ್ನವೇ ಜನರು, ನಮಗೆ ರಮದಾನ್ ತಿಂಗಳನ್ನು ಪಡೆಯುವ ಸೌಭಾಗ್ಯವನ್ನು ನೀಡು ಎಂದು ದೇವರಲ್ಲಿ ಪ್ರಾರ್ಥಿಸತೊಡಗುತ್ತಾರೆ. ರಮದಾನ್ ತಿಂಗಳ ಚಂದ್ರದರ್ಶನವಾದಾಗ ಸಂತುಷ್ಟರಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಈ ತಿಂಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಆರಾಧನೆ, ದಾನಧರ್ಮ, ಜನಸೇವೆ ಇತ್ಯಾದಿ ಚಟುವಟಿಕೆಗಳಲ್ಲಿ ನಿರತರಾಗಿರುವ ಸೌಭಾಗ್ಯವನ್ನು ನಮಗೆ ಕರುಣಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಸುಳ್ಳು, ವಂಚನೆ, ಅನ್ಯಾಯ, ಪರದೂಷಣೆ, ಪರನಿಂದನೆ ಮತ್ತಿತರ ಎಲ್ಲ ಬಗೆಯ ದುಷ್ಕರ್ಮಗಳಿಂದ ದೂರವಿರಲು ನಮಗೆ ನೆರವಾಗು ಎಂದು ಪ್ರಾರ್ಥಿಸುತ್ತಾರೆ. ಅಷ್ಟೊಂದು ಧಾರ್ಮಿಕರಲ್ಲದ ಮುಸ್ಲಿಮರಿಗೂ ಉಪವಾಸದ ತಿಂಗಳೊಂದಿಗೆ ಒಂದು ಭಾವನಾತ್ಮಕ ನಂಟು ಇರುತ್ತದೆ. ವರ್ಷವೆಲ್ಲಾ ಮಸೀದಿಯಿಂದ ದೂರವಿದ್ದವರು ಕೂಡಾ ರಮದಾನ್ ತಿಂಗಳು ಬಂತೆಂದರೆ ಐದೂ ಹೊತ್ತು ಮಸೀದಿಯಲ್ಲಿ ಕಂಡು ಬರುತ್ತಾರೆ. ಅಂಥವರು ತಮ್ಮ ಬದುಕಿನಲ್ಲಿ ರಮದಾನ್ ಎಂಬ, ಹಲವು ಸತ್ಕರ್ಮಗಳ ಸಂಪನ್ನ ಋತುವನ್ನು ಕಾಣುವ ಸೌಭಾಗ್ಯ ಮತ್ತೊಮ್ಮೆ ಪ್ರಾಪ್ತವಾಯಿತಲ್ಲಾ ಎಂಬ ಕೃತಾರ್ಥ ಭಾವದೊಂದಿಗೆ ಈದ್ ಆಚರಿಸುತ್ತಾರೆ.
ರಮದಾನ್ ತಿಂಗಳಲ್ಲಿ ನಿಷ್ಠೆಯಿಂದ ಉಪವಾಸ ಆಚರಿಸಿ ಎಲ್ಲ ಬಗೆಯ ಆರಾಧನೆ ಮತ್ತು ಸತ್ಕಾರ್ಯಗಳಲ್ಲಿ ನಿರತರಾಗಿದ್ದವರು, ತಿಂಗಳ ಅರ್ಧ ಭಾಗ ಮುಗಿಯುತ್ತಿದ್ದಂತೆ, ಇನ್ನೇನು ಈ ತಿಂಗಳು ನಮ್ಮಿಂದ ದೂರವಾಗುತ್ತಿದೆಯಲ್ಲಾ ಎಂದು ಚಿಂತಿತರಾಗುತ್ತಾರೆ. ಅವರು ಈದ್‌ನ ದಿನವನ್ನು ಕೃತಜ್ಞತೆಯ ದಿನವಾಗಿ ಕಾಣುತ್ತಾರೆ. ಎಷ್ಟೋ ಮಂದಿಗೆ ರಮದಾನ್‌ನಲ್ಲಿ ತಮ್ಮ ಚಾರಿತ್ರ್ಯವನ್ನು ಸಂಸ್ಕರಿಸಿಕೊಳ್ಳುವುದಕ್ಕೆ, ಮಾತ್ರವಲ್ಲ, ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ರಮದಾನ್ ತಿಂಗಳಲ್ಲಿ ಕುಟುಂಬ ಮತ್ತು ಸಮಾಜದಲ್ಲಿ ಬೆಳೆದುಕೊಳ್ಳುವ ನಿರ್ಮಲವಾದ ಆಧ್ಯಾತ್ಮಿಕ ವಾತಾವರಣದಲ್ಲಿ ಎಷ್ಟೋ ಮಂದಿ ತಮ್ಮ ಮುಂದಿನ ಬದುಕನ್ನು ಸುಳ್ಳು, ವಂಚನೆ, ಮದ್ಯ, ಜೂಜು, ವ್ಯಭಿಚಾರ, ಮಾದಕವ್ಯಸನ ಮುಂತಾದ ಸಕಲ ಅನಿಷ್ಟಗಳಿಂದ ಮುಕ್ತವಾಗಿಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಹೆಚ್ಚಿನವರು ಆ ಪ್ರತಿಜ್ಞೆಯನ್ನು ಪಾಲಿಸುತ್ತಾರೆ. ಈ ರೀತಿ ತಮ್ಮ ಬದುಕಿನಲ್ಲಿ ಕ್ರಾಂತಿ ತಂದುಕೊಂಡವರು ಸಹಜವಾಗಿಯೇ ಈದುಲ್ ಫಿತ್ರ್‌ನ ದಿನ ಮನಸಾರೆ ಸಂಭ್ರಮಿಸುತ್ತಾರೆ. ಅನೇಕರು ಈ ತಿಂಗಳನ್ನು ಒಂದು ಪರೀಕ್ಷೆಯ ಹಾಗೂ ತರಬೇತಿಯ ಅವಧಿಯಾಗಿ ಕಾಣುತ್ತಾರೆ. ಒಂದು ತಿಂಗಳ ನಿತ್ಯ ಕಠಿಣ ತರಬೇತಿಯ ಅವಧಿಯನ್ನು ಯಶಸ್ವಿಯಾಗಿ ಮುಗಿಸಲು ತಮಗೆ ಸಾಧ್ಯವಾದುದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಪ್ರಕಟಿಸುತ್ತಾರೆ. ಇನ್ನು ಕೆಲವರು ಇದನ್ನು, ಸಾಮಾನ್ಯ ಜೀವನದಲ್ಲಿ ಮತ್ತು ವಿಶೇಷವಾಗಿ ರಮಝಾನ್ ತಿಂಗಳಲ್ಲಿ ತಮ್ಮಿಂದ ಸಂಭವಿಸಿರಬಹುದಾದ ಕುಂದು ಕೊರತೆಗಳ ಕುರಿತು ದೇವರಲ್ಲಿ ಕ್ಷಮೆ ಯಾಚಿಸುವ ದಿನವಾಗಿ ಕಾಣುತ್ತಾರೆ.
ಮುಸ್ಲಿಮರೆಲ್ಲರೂ ಪವಿತ್ರ ಕುರ್‌ಆನ್ ಗ್ರಂಥವನ್ನು, ಮಾನವ ಸಮಾಜಕ್ಕೆ ಅಲ್ಲಾಹನು ನೀಡಿದ ಕೊಡುಗೆಗಳ ಪೈಕಿ ಅತ್ಯಮೂಲ್ಯ ಕೊಡುಗೆ ಎಂದು ಪರಿಗಣಿಸುತ್ತಾರೆ. ರಮದಾನ್ ತಿಂಗಳು ಕುರ್‌ಆನ್ ಗ್ರಂಥವು ಅನಾವರಣಗೊಂಡ ತಿಂಗಳಾದ್ದರಿಂದ ಈ ಅನುಗ್ರಹಕ್ಕಾಗಿ ರಮಝಾನ್ ತಿಂಗಳುದ್ದಕ್ಕೂ ಮತ್ತು ವಿಶೇಷವಾಗಿ ಈದ್‌ನ ದಿನ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಿರುತ್ತಾರೆ. ರಮದಾನ್ ತಿಂಗಳಾದ್ಯಂತ ಕುರ್‌ಆನ್‌ನ ಪಠನ, ಅಧ್ಯಯನ, ಆ ಕುರಿತು ಪಾಠ, ಪ್ರವಚನ, ವ್ಯಾಖ್ಯಾನ, ವಿಶ್ಲೇಷಣೆ ಮತ್ತು ಚರ್ಚೆಗಳಲ್ಲಿ ನಿರತರಾಗಿರುತ್ತಾರೆ. ಹೆಚ್ಚಿನ ಕಡೆಗಳಲ್ಲಿ ಈ ತಿಂಗಳಲ್ಲಿ ಕುರ್‌ಆನ್ ಅನ್ನು ಕಲಿಯುವ ಮತ್ತು ಕಲಿಸುವ ವಿಶೇಷ ತರಗತಿಗಳು ನಡೆಯುತ್ತವೆ. ಜೊತೆಗೆ ಮುಸ್ಲಿಮರು, ಕುರ್‌ಆನ್‌ನ ಮಾರ್ಗದರ್ಶನ ಪ್ರಕಾರ ಬದುಕುತ್ತೇವೆಂಬ ಸಂಕಲ್ಪಮಾಡುತ್ತಾರೆ.
ಈದುಲ್ ಫಿತ್ರ್‌ನ ಅತ್ಯಂತ ಅನುಪಮ ವಿಶೇಷತೆ ಇರುವುದು ಝಕಾತ್ ಅಲ್ ಫಿತ್ರ್‌ನಲ್ಲಿ. ಮುಸ್ಲಿಮ್ ಸಮಾಜದಲ್ಲಿ ಹಬ್ಬಗಳ ಸಂಭ್ರಮವು ಕೇವಲ ಸಮಾಜದ ಸಂಪನ್ನರಿಗೆ ಮಾತ್ರ ಮೀಸಲಾಗಿ ಉಳಿಯದಂತೆ ನೋಡಿಕೊಳ್ಳುವ ಕೆಲವು ವಿಶೇಷ ಏರ್ಪಾಡುಗಳಿವೆ. ನಿತ್ಯಜೀವನದಲ್ಲಿ ಹಂಚಿ ತಿನ್ನುವ ಸಂಸ್ಕೃತಿಯನ್ನು ಪೋಷಿಸುವ ಇಸ್ಲಾಮ್ ಧರ್ಮದಲ್ಲಿ ಹಬ್ಬದ ದಿನ ಆ ಸಂಸ್ಕೃತಿಗೆ ಅಸಾಮಾನ್ಯ ಮಹತ್ವ ನೀಡಲಾಗಿದೆ. ಆದ್ದರಿಂದಲೇ ಮುಸ್ಲಿಮರಲ್ಲಿ, ಹಬ್ಬದ ದಿನಗಳೆಂದರೆ ಹೆಚ್ಚು ಸಂಪನ್ನರು ಕಡಿಮೆ ಸಂಪನ್ನರ ಜೊತೆ ಸೇರಿ, ತಮ್ಮ ಬಳಿ ಇದ್ದುದನ್ನು ಹಂಚಿ ತಿನ್ನುವ ದಿನಗಳಾಗಿರುತ್ತವೆ.
ಈದುಲ್ ಫಿತ್ರ್‌ನ ಹಗಲು ಆರಂಭವಾಗುವ ಮುನ್ನವೇ ‘ಸದಕಃ ಫಿತ್ರ್’ ಅಥವಾ ‘ಫಿತ್ರ್ ಝಕಾತ್’ ಎಂಬ ಒಂದು ವಿಶೇಷ ದಾನವನ್ನು ಸಮಾಜದ ಎಲ್ಲ ಬಡ ವ್ಯಕ್ತಿ ಮತ್ತು ಕುಟುಂಬಗಳಿಗೆ ತಲುಪಿಸುವ ಕ್ರಮವಿದೆ. ಕೆಲವರು ಝಕಾತ್ ಮತ್ತು ಝಕಾತ್ ಅಲ್ ಫಿತ್ರ್‌ಗಳ ನಡುವಣ ವ್ಯತ್ಯಾಸ ಅರಿಯದೆ ಗೊಂದಲಕ್ಕೊಳಗಾಗುವುದುಂಟು. ನಿಜವಾಗಿ ‘ಝಕಾತ್’ ಮತ್ತು ‘ಝಕಾತ್ ಅಲ್ ಫಿತ್ರ್’ ನಡುವೆ ದೊಡ್ಡ ವ್ಯತ್ಯಾಸವಿದೆ. ಆದ್ದರಿಂದಲೇ ಹಲವರು ಈದುಲ್ ಫಿತ್ರ್‌ಗೆ ಮುನ್ನ ನೀಡುವ ದಾನವನ್ನು ‘ಝಕಾತ್ ಅಲ್ ಫಿತ್ರ್’ ಎಂದು ಕರೆಯುವ ಬದಲು ‘ಸದಕ ಅಲ್ ಫಿತ್ರ್’ ಎಂದು ಕರೆಯುತ್ತಾರೆ. ಝಕಾತ್ ಎಂಬುದು ಸಮಾಜದಲ್ಲಿರುವ ಸ್ಥಿತಿವಂತರ ಮೇಲೆ, ಅಂದರೆ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಸಂಪತ್ತು ಉಳ್ಳ ವಯಸ್ಕರ ಮೇಲೆ ಮಾತ್ರ ಕಡ್ಡಾಯ. ಆದರೆ ಝಕಾತ್ ಅಲ್ ಫಿತ್ರ್ ಎಂಬುದು, ನೇರವಾಗಿ ಈದುಲ್ ಫಿತ್ರ್ ಹಬ್ಬಕ್ಕೆ ಸಂಬಂಧಿಸಿದ್ದು. ಅದು ಯಾರೆಲ್ಲರ ಬಳಿ ಹಬ್ಬದ ದಿನದ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸಾಮಗ್ರಿ ಅಥವಾ ಅದನ್ನು ಖರೀದಿಸುವ ಸಾಮರ್ಥ್ಯ ಇದೆಯೋ ಅವರೆಲ್ಲರ ಮೇಲೆ ಕಡ್ಡಾಯ. ಅಂದರೆ ಸಂಪನ್ನರು ಮತ್ತು ಮೇಲ್ಮಧ್ಯಮ ವರ್ಗದವರು ಮಾತ್ರವಲ್ಲ, ಕೆಳ ಮಧ್ಯಮ ವರ್ಗದವರೆಲ್ಲಾ ಇದನ್ನು ಕೊಡಲೇ ಬೇಕಾದವರ ವ್ಯಾಪ್ತಿಯಲ್ಲಿ ಬರುತ್ತಾರೆ. ಝಕಾತ್ ಅಲ್ ಫಿತ್ರ್ ಅನ್ನು ಪ್ರತಿಯೊಬ್ಬ ಸಮರ್ಥ ವಯಸ್ಕನು ತನ್ನ ಪರವಾಗಿ ಮಾತ್ರವಲ್ಲ ತನ್ನ ಮನೆಯವರ ಅಂದರೆ ತನ್ನ ಪೋಷಣೆಯಲ್ಲಿರುವ ತನ್ನ ತಂದೆ, ತಾಯಿ, ಪತ್ನಿ ಮತ್ತು ವಯಸ್ಕರಲ್ಲದ ಮಕ್ಕಳ ಪೈಕಿ ಪ್ರತಿಯೊಬ್ಬರ ಪರವಾಗಿಯೂ ಪಾವತಿಸಬೇಕು. ಝಕಾತ್ ಅಲ್ ಫಿತ್ರ್ ಅನ್ನು ಸಾಮಾನ್ಯವಾಗಿ ಆಯಾ ಊರಿನಲ್ಲಿ ಆಹಾರವಾಗಿ ಬಳಸಲಾಗುವ ಅಕ್ಕಿ, ಗೋಧಿ, ಜೋಳ ಮುಂತಾದ ದವಸ ಧಾನ್ಯಗಳ ರೂಪದಲ್ಲಿ ಪಾವತಿಸಲಾಗುತ್ತದೆ. ಸಮಾಜದ ತೀರಾ ಬಡ ವರ್ಗದವರನ್ನು ಹಬ್ಬದ ಸಂಭ್ರಮದಲ್ಲಿ ಸಹಭಾಗಿಗಳಾಗಿಸುವುದೇ ಝಕಾತ್ ಅಲ್ ಫಿತ್ರ್‌ನ ಮೂಲ ಉದ್ದೇಶವಾದ್ದರಿಂದ ಧಾನ್ಯದ ಬದಲು ಅದರ ಮೌಲ್ಯವನ್ನು ನಗದಾಗಿ ಪಾವತಿಸುವುದಕ್ಕೂ ಅವಕಾಶವಿದೆ. ಆಧುನಿಕ ಕಾಲದ ಹೆಚ್ಚಿನ ವಿದ್ವಾಂಸರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ತನ್ನ ಪರಿಸರದಲ್ಲಿ ಹೆಚ್ಚು ಬಳಕೆಯಲ್ಲಿರುವ ಧಾನ್ಯವನ್ನು ಆರಿಸಿ, ಕನಿಷ್ಠ 2.25 ಕಿಲೋಗ್ರಾಮ್‌ನಷ್ಟು ಪ್ರಮಾಣದ ಆ ಧಾನ್ಯಕ್ಕೆ ಆಯಾ ಪ್ರದೇಶದ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ತನ್ನ ಹಾಗೂ ತನ್ನ ಪೋಷಣೆಯಲ್ಲಿರುವ ಪ್ರತಿಯೊಬ್ಬ ಹಿರಿಯ ಮತ್ತು ಕಿರಿಯ ಸದಸ್ಯರ ಪರವಾಗಿ ಝಕಾತ್ ಅಲ್ ಫಿತ್ರ್ ರೂಪದಲ್ಲಿ ಪಾವತಿಸಬೇಕು. ಭಾರತದಲ್ಲಿ ಹಲವು ವಿದ್ವಾಂಸರು ಆ ಕನಿಷ್ಠ ಮೊತ್ತ 80 ರೂಪಾಯಿಯಷ್ಟಾಗುತ್ತದೆಂದು ಅಂದಾಜಿಸುತ್ತಾರೆ. (ಈ ಕುರಿತು ಇನ್ನಷ್ಟು ನಿಖರ ಮಾಹಿತಿ ಬೇಕಾದವರು ತಮ್ಮ ಸಮೀಪದ ತಜ್ಞ ವಿದ್ವಾಂಸರನ್ನು ಸಂಪರ್ಕಿಸಬೇಕಾಗಿ ವಿನಂತಿ.)
ಝಕಾತ್ ಅಲ್ ಫಿತ್ರ್ ಅನ್ನು, ಹಬ್ಬದ ನಮಾಝ್‌ಗೆಂದು ಜನರು ತಮ್ಮ ಮನೆಗಳಿಂದ ಹೊರಡುವ ಮುಂಚೆಯೇ ಅರ್ಹರಿಗೆ ಪಾವತಿಸಬೇಕು. ಇದು ಸಾಧ್ಯವಾಗಬೇಕಾದರೆ ಹಬ್ಬಕ್ಕಿಂತ ಕೆಲವು ದಿನ ಮುಂಚಿತವಾಗಿಯೇ ಈ ಕುರಿತು ಸಿದ್ಧತೆ ಆರಂಭವಾಗಬೇಕು. ಪಾವತಿಸುವವರು ತಾವೆಷ್ಟು ಪಾವತಿಸಬೇಕೆಂಬುದನ್ನು ವಿವರವಾಗಿ ಲೆಕ್ಕ ಹಾಕಬೇಕು. ಅರ್ಹರು ಯಾರು ಎಂಬುದನ್ನು ಗುರುತಿಸುವ ಪ್ರಕ್ರಿಯೆ ಕೂಡಾ ಮುಂಗಡವಾಗಿ ಮತ್ತು ಸಂಘಟಿತ ರೂಪದಲ್ಲಿ ನಡೆಯಬೇಕು. ಆಗ ಹಬ್ಬಕ್ಕೆ ಮುನ್ನವೇ ಎಲ್ಲ ಅರ್ಹರಿಗೆ ಅವರ ಪಾಲಿನ ಝಕಾತ್ ಅಲ್ ಫಿತ್ರ್ ಸಿಕ್ಕಿ ಬಿಡುತ್ತದೆ.
ರಮದಾನ್ ತಿಂಗಳಲ್ಲಿ ಪ್ರತಿದಿನ ‘ಇಫ್ತಾರ್’ ಸಮಯದಲ್ಲಿ ಅಂದರೆ ಉಪವಾಸ ಮುಗಿಸುವ ವೇಳೆ ಬಡ ಉಪವಾಸಿಗರಿಗೆ, ಪೌಷ್ಟಿಕ ಆಹಾರವನ್ನು ಒದಗಿಸುವ ಒಂದು ಸಂಪ್ರದಾಯ ಮುಸ್ಲಿಮ್ ಸಮಾಜದಲ್ಲಿ ಪರಂಪರಾಗತವಾಗಿ ಜನಪ್ರಿಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನೆಲ್ಲೆಡೆ ಈಚಟುವಟಿಕೆಯನ್ನು ‘ಇಫ್ತಾರ್ ಕಿಟ್ ವಿತರಣೆ’ ಎಂದು ಕರೆಯಲಾಗುತ್ತದೆ. ಇಫ್ತಾರ್ ಕಿಟ್ ಅನ್ನು ಪಡೆಯಲು ಬಡವರು ಮಾತ್ರವಲ್ಲದೆ ಸಾಮಾನ್ಯ ಉಪವಾಸಿಗರೂ ಅರ್ಹರಾಗಿರುತ್ತಾರೆ. ಆದರೆ ಝಕಾತ್ ಅಲ್ ಫಿತ್ರ್ ಅನ್ನು ಪಡೆಯುವುದಕ್ಕೆ ಸಮಾಜದ ಬಡವರು ಮಾತ್ರ ಅರ್ಹರಾಗಿರುತ್ತಾರೆ. ಆದ್ದರಿಂದ ಝಕಾತ್ ಅಲ್ ಫಿತ್ರ್‌ಗೆ ಅರ್ಹರಾದವರನ್ನು ಪ್ರತ್ಯೇಕವಾಗಿ ಗುರುತಿಸಿ ಸಾಧ್ಯವಾದರೆ ಹಬ್ಬಕ್ಕಿಂತ ಒಂದೆರಡು ದಿನ ಮುನ್ನವೇ ಅದನ್ನು ನಗದು ರೂಪದಲ್ಲಿ ಅವರಿಗೆ ತಲುಪಿಸುವ ಏರ್ಪಾಟು ಮಾಡಬಹುದು. ಈ ಕಾರ್ಯದಲ್ಲಿ ಪ್ರಚಾರಪ್ರಿಯರಲ್ಲದ, ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತರು ಮತ್ತು ದಕ್ಷ ಸ್ವಯಂಸೇವಕರ ಜಾಲ ಇರುವ ಸೇವಾ ಸಂಸ್ಥೆಗಳ ಸೇವೆ ಪಡೆದುಕೊಳ್ಳುವುದು ಒಳ್ಳೆಯದು. ಈ ಸತ್ಕಾರ್ಯವು ಪುಣ್ಯಕಾರ್ಯವಾಗಿ ಸ್ವೀಕೃತವಾಗಬೇಕಿದ್ದರೆ, ಅದನ್ನು ಕೊಟ್ಟವರು ಯಾರು ಮತ್ತು ಪಡೆದವರು ಯಾರು ಎಂಬುದು ಚರ್ಚೆಯಾಗದಂತೆ ನೋಡಿಕೊಳ್ಳಬೇಕು.
ಇಸ್ಲಾಮ್ ಧರ್ಮದ ಚೌಕಟ್ಟಿನೊಳಗೆ ಇದ್ದು ಹಬ್ಬ ಆಚರಿಸಬಯಸುವವರು ತಮ್ಮ ಹಬ್ಬವು ಮದ್ಯಪಾನ, ಅನಿಯಂತ್ರಿತ ಮೋಜು, ದುಂದುವೆಚ್ಚ, ಎಲ್ಲ ಬಗೆಯ ಅಸಭ್ಯ ಹಾಗೂ ಅನೈತಿಕ ಚಟುವಟಿಕೆಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಹಬ್ಬದ ಹೆಸರಲ್ಲಿ ಶೃಂಗಾರ, ಅಲಂಕಾರಗಳಿಗಾಗಿ ಅಪವ್ಯಯ ಮಾಡುವುದು, ಸಿಡಿಮದ್ದುಗಳಿಗಾಗಿ ಹಣ ಪೋಲು ಮಾಡುವುದು, ಬಣ್ಣ ಎರಚಿ ಜನರಿಗೆ ಕಿರುಕುಳ ಕೊಡುವುದು, ಜನಸಂಚಾರವನ್ನು ತಡೆಯುವುದೇ ಮುಂತಾದ ಚಟುವಟಿಕೆಗಳಿಗೆ ಕಿಂಚಿತ್ತೂ ಅವಕಾಶ ನೀಡಬಾರದು. ಹಂಚಿಕೊಳ್ಳುವುದರಿಂದ ಸಂಭ್ರಮ ಹೆಚ್ಚುತ್ತದೆ. ಆದ್ದರಿಂದ ಹಬ್ಬದ ದಿನ ನಮ್ಮ ಮೂಲಕ ಸಮಾಜದ ಗರಿಷ್ಠ ಮಂದಿಗೆ ಸಂತಸ, ಸಂಭ್ರಮ ಸಿಗುವಂತಹ ಚಟುವಟಿಕೆಗಳಲ್ಲಿ ನಿರತರಾಗಿರಬೇಕು.






