ಬಡ ರೈತನ ಮಗಳ ಮುಡಿಗೆ ಎಂಟು ಚಿನ್ನದ ಪದಕ
ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪ್ರಥಮ ಸ್ಥಾನ, ಐಎಎಸ್ ಆಗುವ ಕನಸು

ಬೆಳಗಾವಿ: ಕನಸು ಕಾಣುವ ಧೈರ್ಯ, ಸಾಧಿಸುವ ಛಲ ಮತ್ತು ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸವೇ ಮಹಿಳೆಯ ನಿಜವಾದ ಶಕ್ತಿ ಎನ್ನುವ ಹಾಗೆ ತನ್ನ ಪ್ರತಿಭೆ ಹಾಗೂ ಪರಿಶ್ರಮದಿಂದ ಸಾಧನೆಯ ಶಿಖರಕ್ಕೇರುವ ರೈತನ ಮಗಳು ಸಾಕ್ಷಿ ಸುರೇಶ ಹಡಲಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಎಂಟು ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ಮತ್ತಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ಮೂಲತಃ ರೈತಾಪಿ ಕುಟುಂಬದಲ್ಲಿ ಜನಿಸಿದ ಸುರೇಶ್ ಹಡಲಗೆ ಹಾಗೂ ಜಯಶ್ರಿ ದಂಪತಿಯ ಮೊದಲನೆಯ ಪುತ್ರಿ ಸಾಕ್ಷಿ , ಕಡು ಬಡತನದಿಂದ ನಿರಂತರವಾಗಿ ವಿದ್ಯಾಭ್ಯಾಸ ನಡೆಸಿದರು. ಯುಪಿಎಸ್ಸಿ ಕನಸು ಕಂಡ ಅವರು ಇಂದು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿ.ಇ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದು ಎಂಟು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಸಾಕ್ಷಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಬಾಡ ಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಕೊಥಲಿ ನವೋದಯ ಶಾಲೆಯಲ್ಲಿ ಪೂರ್ಣಗೊಳಿಸಿ ಉನ್ನತ ಶಿಕ್ಷಣಕ್ಕಾಗಿ ನಿಪ್ಪಾಣಿಯ ವಿಎಸ್‌ಎಂಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದು ಪೂರ್ಣಗೊಳಿಸಿರುವ ಸಾಕ್ಷಿ ಯುಪಿಎಸ್ಸಿ ಕೋಚಿಂಗ್ ಪಡೆದು ಐಎಎಸ್ ಮಾಡಬೇಕು ಎಂಬ ಕನಸು ಕಂಡಿದ್ದಾರೆ.
ಸದ್ಯ ಬಡತನದ ಕೊರತೆಯಿಂದ ಕಳೆದ ನಾಲ್ಕು ತಿಂಗಳಿಂದ ಕ್ವೆಸ್ಟ್ ಗ್ಲೋಬಲ್ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ತಮ್ಮದೇ ವೇಳಾ ಪಟ್ಟಿಯಲ್ಲಿ ನಿತ್ಯವೂ ಯುಪಿಎಸ್ಸಿಗಾಗಿ 8 ಗಂಟೆಗಳ ಕಾಲ ನಿರಂತರವಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ನಿತ್ಯವೂ ಮಗಳು ವಿದ್ಯಾಭ್ಯಾಸದಲ್ಲಿ ತೊಡಗಿರುವುದನ್ನು ಕಂಡ ತಂದೆ ಅವಳ ಓದಿಗಾಗಿ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಬಂದ ಆದಾಯದಲ್ಲಿ ಮಗಳ ಉನ್ನತ ವಿಧ್ಯಾಭ್ಯಾಸದ ಕನಸಿಗೆ ಬೆಂಬಲವಾಗಿ ನಿಂತು ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ತಂದೆಯ
ಆಸೆಯಂತೆ ಕೆಲಸದ ಒತ್ತಡದ ಜೊತೆಗೆ ನಿರಂತರ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಯುಪಿಎಸ್ಸಿಯ ಕನಸು ಕಂಡ ಅವರಿಗೆ ಸರಕಾರದ ನೆರವಿನ ಅಗತ್ಯವಿದೆ.
ವಿವಿಧ ಸಂಸ್ಥೆಗಳಿಂದ ಚಿನ್ನದ ಪದಕ :
► ವಿಟಿಯು ಚಿನ್ನದ ಪದಕ
► ಹಿರಾಶುಗರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಡಸೋಶಿ ಚಿನ್ನದ ಪದಕ
► ಮೂರ್ತಿ ಅವರ ಶ್ರೇಷ್ಠತೆಯ ಪದಕ
► ಶ್ರೀ ಸಂಜಯ್ ಕೇಶವ್ರಾವ್ ಅಗರ್ಖೇಡ್ ಸ್ಮಾರಕ ಚಿನ್ನದ ಪದಕ
► ಜೈನ್ ವಿಶ್ವವಿದ್ಯಾಲಯ ಚಿನ್ನದ ಪದಕ
► ಜ್ಯೋತಿ ಚಿನ್ನದ ಪದಕ
►ಶ್ರೀ ಲಿಯೋ ಮುತ್ತು - ಸಾಯಿರಾಮ್ ಸಂಸ್ಥೆಗಳ ಸ್ಥಾಪಕ ಚಿನ್ನದ ಪದಕ
►ಜಯಲಕ್ಷ್ಮಿ ಮತ್ತು ಶ್ರೀ ಎ.ವಿ. ದಾಸಪ್ಪ ಸ್ಮಾರಕ ಚಿನ್ನದ ಪದಕ
ಬಡತನದ ನಡುವೆಯೂ ತಂದೆ-ತಾಯಿ ನೀಡಿದ ಪ್ರೋತ್ಸಾಹವೇ ನನ್ನ ಸಾಧನೆಗೆ ದೊಡ್ಡ ಶಕ್ತಿಯಾಗಿದೆ. ಎಂಟು ಚಿನ್ನದ ಪದಕಗಳು ನನ್ನ ಪರಿಶ್ರಮಕ್ಕೆ ಸಿಕ್ಕ ಗೌರವ. ಮುಂದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಐಎಎಸ್ ಅಧಿಕಾರಿಯಾಗುವುದು ನನ್ನ ಗುರಿ. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಕೂಡ ದೊಡ್ಡ ಕನಸು ಕಾಣಬೇಕು, ನಿರಂತರ ಪರಿಶ್ರಮ, ಆತ್ಮವಿಶ್ವಾಸವಿದ್ದರೆ ಯಾವುದೇ ಗುರಿ ಸಾಧಿಸಬಹುದು.
-ಸಾಕ್ಷಿ , ವಿದ್ಯಾರ್ಥಿನಿ
ಮಗಳು ಎಂಟು ಚಿನ್ನದ ಪದಕಗಳನ್ನು ಪಡೆದಿರುವುದು ತಂದೆಯಾಗಿ ನನಗೆ ಹೆಮ್ಮೆ ಇದೆ. ಕಷ್ಟಗಳ ನಡುವೆಯೂ ಓದಿನ ಮೇಲೆ ಅವಳು ಇಟ್ಟಿರುವ ಶ್ರದ್ಧೆ, ಪರಿಶ್ರಮ ಮತ್ತು ಗುರಿ ಸಾಧಿಸುವ ಛಲವೇ ಈ ಯಶಸ್ಸಿಗೆ ಕಾರಣ. ಅವಳ ಯುಪಿಎಸ್ಸಿ ಕನಸು ನನಸಾಗಲಿ ಎಂಬುದೇ ನನ್ನ ಆಶಯ.
-ಸುರೇಶ್ ಹಡಲಗೆ, ತಂದೆ






