Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತ ಚುನಾವಣಾ ಆಯೋಗ: ಮತದಾರರನ್ನು...

ಭಾರತ ಚುನಾವಣಾ ಆಯೋಗ: ಮತದಾರರನ್ನು ಪ್ರತ್ಯೇಕಗೊಳಿಸುವ ಏಜೆನ್ಸಿ?

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್17 Aug 2025 10:37 AM IST
share
ಭಾರತ ಚುನಾವಣಾ ಆಯೋಗ: ಮತದಾರರನ್ನು ಪ್ರತ್ಯೇಕಗೊಳಿಸುವ ಏಜೆನ್ಸಿ?

ಕಳೆದ ಹತ್ತು ವರ್ಷಗಳ ಚುನಾವಣೆಗಳಲ್ಲಿ ಮೋದಿ ನೇತೃತ್ವ ಸರಕಾರದ ಜುಮ್ಲಾದಂತಹ, ಮತಧರ್ಮಾಂಧತೆಯಂತಹ ಉತ್ಪನ್ನಗಳ ಮಾರಾಟಕ್ಕೆ ಏಜೆನ್ಸಿಯಂತಿರುವ ಚುನಾವಣಾ ಆಯೋಗವು ‘ಬಗ್ಗು ಎಂದರೆ ತೆವಳುತ್ತೀನಿ’ ಎನ್ನುತ್ತಿದೆ. ಆಯೋಗವು ಪ್ರಭುತ್ವದ ನಿಯಂತ್ರಣಕ್ಕೆ ಒಳಪಟ್ಟಿರುವುದು ಮತ್ತು ಆಯೋಗವು ಚುನಾಯಿತ ಸರ್ವಾಧಿಕಾರದ ವಕ್ತಾರರಂತೆ ನಡೆದುಕೊಂಡಿರುವುದು ಬಹು ಚರ್ಚಿತ ವಿಷಯವಾಗಿದೆ. ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಲು ವಿಫಲರಾಗಿರುವ ಈಗಿನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುವಲ್ಲಿ ಸಫಲರಾಗಿದ್ದಾರೆ ಮತ್ತು ಅವರಿಗೆ ಆಯುಕ್ತ ವಿವೇಕ್ ಜೋಶಿಯವರ ಬೆಂಬಲವೂ ಇದೆ.

ಕತ್ತಲ ದಾರಿ ಬಲು ದೂರ

ಮೇ 7, 2019ರಂದು ಜವಾಹರ್ ಸರ್ಕರ್ ಅವರು ತಮ್ಮ ಟ್ವಿಟರ್‌ನಲ್ಲಿ ‘ಬ್ರೇಕಿಂಗ್ ಸುದ್ದಿ: ಭಾರತದ ಚುನಾವಣಾ ಆಯೋಗವು ತಾನು ಬಿಜೆಪಿ ಪಕ್ಷವನ್ನು ಸೇರಿದ್ದೇನೆ ಎನ್ನುವ ಸುದ್ದಿಯನ್ನು ನಿರಾಕರಿಸಿದೆ, ಆದರೆ ಬಿಜೆಪಿಗೆ ಬಾಹ್ಯ ಬೆಂಬಲ ಮಾತ್ರ ನೀಡುವುದಾಗಿ ಹೇಳಿದೆ’ ಎಂದು ಬರೆಯುತ್ತಾರೆ. ಇದು ಮೇಲ್ನೋಟಕ್ಕೆ ವ್ಯಂಗ್ಯೋಕ್ತಿಯಂತೆ ಕಾಣುತ್ತದೆಯಾದರೂ ವಾಸ್ತವವೂ ಹೌದು. ಇತಿಹಾಸದ ಕುರಿತಾಗಿ ಪುಸ್ತಕಗಳನ್ನು ಬರೆದಿರುವ ಡೇವಿಡ್ ರುಂಚಿಮನ್ ಅವರು ‘ಈ ಚುನಾವಣೆಗಳು ಯಾವ ಉತ್ಪನ್ನಗಳು ಮಾರಾಟವಾಗುತ್ತವೆ ಎನ್ನುವುದರ ಅಂತಿಮ ಪರೀಕ್ಷೆ’ ಎಂದು ಬರೆಯುತ್ತಾರೆ. ಕಳೆದ ಹತ್ತು ವರ್ಷಗಳ ಚುನಾವಣೆಗಳಲ್ಲಿ ಮೋದಿ ನೇತೃತ್ವ ಸರಕಾರದ ಜುಮ್ಲಾದಂತಹ, ಮತಧರ್ಮಾಂಧತೆಯಂತಹ ಉತ್ಪನ್ನಗಳ ಮಾರಾಟಕ್ಕೆ ಏಜೆನ್ಸಿಯಂತಿರುವ ಚುನಾವಣಾ ಆಯೋಗವು ‘ಬಗ್ಗು ಎಂದರೆ ತೆವಳುತ್ತೀನಿ’ ಎನ್ನುತ್ತಿದೆ. ಆಯೋಗವು ಪ್ರಭುತ್ವದ ನಿಯಂತ್ರಣಕ್ಕೆ ಒಳಪಟ್ಟಿರುವುದು ಮತ್ತು ಆಯೋಗವು ಚುನಾಯಿತ ಸರ್ವಾಧಿಕಾರದ ವಕ್ತಾರರಂತೆ ನಡೆದುಕೊಂಡಿರುವುದು ಬಹು ಚರ್ಚಿತ ವಿಷಯವಾಗಿದೆ. ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಲು ವಿಫಲರಾಗಿರುವ ಈಗಿನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುವಲ್ಲಿ ಸಫಲರಾಗಿದ್ದಾರೆ ಮತ್ತು ಅವರಿಗೆ ಆಯುಕ್ತ ವಿವೇಕ್ ಜೋಶಿಯವರ ಬೆಂಬಲವೂ ಇದೆ.

ಭಾರತದ ಚುನಾವಣಾ ಆಯೋಗವು ಜೂನ್ 24, 2025ರಂದು ಬಿಹಾರ ರಾಜ್ಯದ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)’ ನಡೆಸಲಾಗುತ್ತದೆ ಎಂದು ಆಡಳಿತಾತ್ಮಕ ಆದೇಶ ಹೊರಡಿಸಿತು. ಇದಕ್ಕಾಗಿ ತನಗೆ ಸಂವಿಧಾನದ ವಿಧಿ 324ರ ಅಡಿಯಲ್ಲಿ ಅಧಿಕಾರವಿದೆ ಎಂದು ಹೇಳಿಕೊಂಡಿದೆ. ವಿಧಿ 326ರ ನೀತಿಯು 18ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಮತದಾನದ ಹಕ್ಕನ್ನು ಖಚಿತಪಡಿಸಿದರೆ ವಿಧಿ 324 ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಕಾರ್ಯವಿಧಾನ ರೂಪಿಸಲು ಚುನಾವಣಾ ಆಯೋಗಕ್ಕೆ ಜವಾಬ್ದಾರಿ ಕೊಟ್ಟಿದೆ. ಆದರೆ ಈಗಿನ ಆಯೋಗವು ತನಗೆ ಕೊಟ್ಟ ಜವಾಬ್ದಾರಿಯನ್ನು ಮಾತ್ರ ಹೇಳಿಕೊಳ್ಳುತ್ತಿದೆಯೇ ಹೊರತು ವಿಧಿ 326ರ ಪ್ರಕಾರ ಪ್ರತಿಯೊಬ್ಬ ಅರ್ಹರಿಗೂ ಮತದಾನದ ಹಕ್ಕಿದೆ ಎನ್ನುವ ನೀತಿಯನ್ನು ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ(ಎಪಿಕ್), ಪಡಿತರ ಚೀಟಿ ಮುಂತಾದವುಗಳನ್ನು ಆಧರಿಸಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸುವುದರ ಮೂಲಕ ಉಲ್ಲಂಘಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ 65 ಲಕ್ಷ ಜನಸಂಖ್ಯೆಯನ್ನು ‘ಮರಣ ಹೊಂದಿದ್ದಾರೆ, ಪತ್ತೆ ಇಲ್ಲ, ವಲಸೆ ಹೋಗಿದ್ದಾರೆ’ ಮುಂತಾದ ಕಾರಣಗಳನ್ನು ನೀಡಿ ಮತದಾರರ ಪಟ್ಟಿಯಿಂದ ತೆಗೆದು ಹಾಕಿದೆ. ಇದು ಅಕ್ರಮ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

ಮೊಹಿಂದರ್ ಸಿಂಗ್ ಗಿಲ್ ವರ್ಸಸ್ ಮುಖ್ಯ ಚುನಾವಣಾ ಅಧಿಕಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ‘ವಿಧಿ 324ನ್ನು ನಿರ್ದಿಷ್ಟ ಮಿತಿಯೊಳಗೆ ಬಳಸಬೇಕು. ಸಂಸತ್ತು ಅಥವಾ ಶಾಸಕಾಂಗವು ಜಾರಿಗೊಳಿಸಿದ ಕಾಯ್ದೆಯ ನೀತಿ ನಿರೂಪಣೆಯ ಚೌಕಟ್ಟಿನ ಒಳಗೆ ಕ್ರಮ ತೆಗೆದುಕೊಳ್ಳಬೇಕೇ ಹೊರತು ಅದನ್ನು ಉಲ್ಲಂಘಿಸಿ ಅಲ್ಲ’ ಎಂದು ಹೇಳಿದೆ. ಆದರೆ ಆಯೋಗದ ಬಿಹಾದ ಎಸ್‌ಐಆರ್ ಈ ತೀರ್ಪಿನ ವಿರುದ್ಧವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಕಾನೂನು ಅನ್ವಯವಾಗುತ್ತದೆ ಎನ್ನುವ ವಿಧಿ 14, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಧಿ 19(1), ಬದುಕುವ ಹಕ್ಕಿನ ವಿಧಿ 21ರ ಉಲ್ಲಂಘನೆಯಾಗಿದೆ. ಮುಖ್ಯವಾಗಿ ಚುನಾವಣಾ ಆಯೋಗಕ್ಕೆ ಪೌರತ್ವವನ್ನು ನಿರ್ಧರಿಸುವ ಅಧಿಕಾರವಿಲ್ಲ. ಆದರೆ ನ್ಯಾಯಾಂಗವೂ ಇದನ್ನು ಹೇಳುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಆಯೋಗವು ಎಸ್‌ಐಆರ್‌ನ್ನು ಸಾಮಾನ್ಯ ಕ್ರಮ ಎಂದು ಹೇಳಿಕೊಂಡರೂ ಸಹ ಕೆಲವೇ ದಿನಗಳಲ್ಲಿ ನಿರ್ದಿಷ್ಠ ಸಮುದಾಯಗಳನ್ನು ಮತದಾನದಿಂದಲೇ ಹೊರಗಿಡುವ ತಂತ್ರ ಎನ್ನುವ ಆರೋಪಗಳು ಕೇಳಿಬಂದಿತು. ಆಯೋಗವು ಎಸ್‌ಐಆರ್ ಮೂಲಕ ಸಂವಿಧಾನದ ಚೌಕಟ್ಟನ್ನು ಉಲ್ಲಂಘಿಸುವ ಪ್ರಯತ್ನ ನಡೆಸುತ್ತಿದೆ. ಈ ಎಸ್‌ಐಆರ್‌ನ ಅಕ್ರಮಗಳು ಮತ್ತು ಗುಪ್ತ ಕಾರ್ಯಸೂಚಿಯನ್ನು ಪ್ರಶ್ನಿಸಿ ಅನೇಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಇದರ ಭಾಗವಾಗಿ ನ್ಯಾಯಮೂರ್ತಿ ಸೂರ್ಯಕಾಂತ್, ಜಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ಜುಲೈ 10, 2025ರಂದು ‘ಆಧಾರ್ ಮತ್ತು ಗುರುತಿನ ಚೀಟಿ(ಎಪಿಕ್) ಮಾನ್ಯಗೊಂಡ ದಾಖಲೆಗಳಾಗಿ ಸೇರಿಸಿ’ ಎಂದು ತಾತ್ಕಾಲಿಕ ಪರಿಹಾರ ನೀಡಿದೆ. ನಂತರ ಆಗಸ್ಟ್ 8, 2025ರಂದು ತನ್ನ ವಿಚಾರಣೆಯನ್ನು ಮುಂದುವರಿಸಿದ ಪೀಠವು ‘ಆಧಾರ್ ಕಾರ್ಡ್ ಅಂತಿಮವಾಗಿ ನಿರ್ಣಾಯಕವಲ್ಲ’ ಎಂದು ಅಭಿಪ್ರಾಯಪಟ್ಟಿದೆ(ನ್ಯಾ.ಸೂರ್ಯಕಾಂತ್). ಆಯೋಗಕ್ಕೆ ತೀವ್ರವಾದ ಪರಿಷ್ಕರಣೆ ನಡೆಸುವ ಅಧಿಕಾರವನ್ನು ಪ್ರಶ್ನಿಸಿದ ಅರ್ಜಿದಾರರಿಗೆ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 21(3)ರ ‘ಆಯೋಗವು ಅಗತ್ಯವಿದೆ ಎನಿಸಿದರೆ ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯನ್ನು ವಿಶೇಷವಾಗಿ ಪರಿಷ್ಕರಿಸಬಹುದು’ ಎನ್ನುವ ವ್ಯಾಖ್ಯಾನವನ್ನು ಉದಾಹರಿಸಿ ಆಯೋಗದ ನಿಲುವನ್ನು ಸಮರ್ಥಿಸಿದೆ. ಆದರೆ ಆಗಸ್ಟ್ 14, 2025ರಂದು ‘ನೀವು ತೆಗೆದು ಹಾಕಿದ 65 ಲಕ್ಷ ಮತದಾರರ ಜಿಲ್ಲಾವಾರು ಪಟ್ಟಿಯನ್ನು ಬಿಹಾರ ಜಿಲ್ಲಾ ಚುನಾವಣಾ ಅಧಿಕಾರಿಗಳ ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕು, ಮರಣ, ವಲಸೆ, ದ್ವಿ-ನೋಂದಣಿ ಇತ್ಯಾದಿಗಾಗಿ ಪಟ್ಟಿಯಿಂದ ಕೈಬಿಟ್ಟ ಕಾರಣಗಳನ್ನು ಸ್ಪಷ್ಟಪಡಿಸಬೇಕು. ಈ ಮಾಹಿತಿಯನ್ನು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಬೇಕು’ ಎಂದು ಆದೇಶಿಸಿದೆ.

‘ದ ವೈರ್’ಗೆ ನೀಡಿದ ಸಂದರ್ಶನದಲ್ಲಿ ಹಿಂದಿನ ಆಯುಕ್ತ ಅಶೋಕ್‌ಲಾವಾಸ ಅವರು ಈ ಎಸ್‌ಐಆರ್ ಅನ್ನು ‘‘ಆಕ್ರಮಣಕಾರಿ, ಹಠಾತ್ ಆಗಿ ನಿರ್ಧರಿಸಲಾಗಿದೆ ಮತ್ತು ಇದನ್ನು ತಪ್ಪಿಸಬಹುದಾಗಿತ್ತು’’ ಎಂದು ಹೇಳಿದ್ದಾರೆ. ಆದರೆ ಆಯೋಗವು ಇಂತಹ ಸ್ಥಿತಿಗೆ ತಲುಪಿದ್ದು ಹೇಗೆ?

ಹಿಂದಣ ನೋಟ

1952-56 ಮತ್ತು 2004ರ ಎಸ್‌ಐಆರ್‌ಗಳು ಈಗಿನಷ್ಟು ವಿವಾದಾತ್ಮಕವಾಗಿರಲಿಲ್ಲ. ಆಗಲೂ ಅರ್ಹ ಮತದಾರರನ್ನು ಹೊರ ತಳ್ಳಿದ ಉದಾಹರಣೆಗಳಿದ್ದವು. ಅದು ಆಯೋಗದ ಕಾರ್ಯ ನಿರ್ವಹಣೆಯಲ್ಲಿನ ದೋಷವಾಗಿತ್ತು, ತಾಂತ್ರಿಕ ದೋಷವಾಗಿತ್ತು. ಆದರೆ ಈಗಿನಂತೆ ಪಕ್ಷಪಾತ ಧೋರಣೆ ಹೊಂದಿರಲಿಲ್ಲ. ಚುನಾವಣಾ ಆಯೋಗದ ಸಮಸ್ಯೆಗಳು ಕಾಂಗ್ರೆಸ್ ಕಾಲದಿಂದಲೂ ಪ್ರಾರಂಭವಾಗಿದ್ದವು ಎನ್ನುವುದು ನಿಜವಾದರೂ ಅದು ಚುನಾಯಿತ ಸರ್ವಾಧಿಕಾರದ ಅಡಿಯಾಳಾಗಿರಲಿಲ್ಲ. ಅದು ತಾತ್ಕಾಲಿಕವಾಗಿತ್ತು. ಆದರೆ ಈಗ ಶಾಶ್ವತವಾಗಿ ಪ್ರಭುತ್ವದ ವಕ್ತಾರರಾಗಿ ಬದಲಾಗಿದೆ.

1962ರಲ್ಲಿ ಆಗಿನ ಮುಖ್ಯ ಚುನಾವಣಾ ಅಧಿಕಾರಿ ಕೆ.ವಿ.ಕೆ. ಸುಂದರಂ ಅವರು ಲೋಕಸಭಾ ಚುನಾವಣೆಗೂ ಮುಂಚೆ ಚುನಾವಣಾ ಸಂದರ್ಭದಲ್ಲಿ ಮಾಡಬೇಕಾದ ಮತ್ತು ಮಾಡಬಾರದ (DOs and DON’Ts) ಗೊತ್ತುವಳಿಗಳನ್ನು ಬಿಡುಗಡೆ ಮಾಡಿದರು. ಅವುಗಳನ್ನು ಮತ್ತಷ್ಟು ವಿಸ್ತರಿಸಿ ‘ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮಾದರಿ ನೀತಿಸಂಹಿತೆಗಳು’ ಎಂದು ಕಾಯ್ದೆ ರೂಪಿಸಲಾಯಿತು. ಇದರ ಜೊತೆಗೆ ವಿಧಿ 324 ಚುನಾವಣಾ ಆಯೋಗಕ್ಕೆ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುವ, ನಿಯಂತ್ರಿಸುವ ಸಂಪೂರ್ಣ ಅಧಿಕಾರವನ್ನು ನೀಡಿತ್ತು. ಆದರೆ ತೊಂಭತ್ತರ ದಶಕದ ಆರಂಭದಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡ ಟಿ.ಎನ್. ಶೇಷನ್ ಅವರು ಮೊತ್ತ ಮೊದಲ ಬಾರಿಗೆ ಆಯೋಗಕ್ಕೆ ಅದರ ಜವಾಬ್ದಾರಿಗಳನ್ನು ನೆನಪಿಸಿಕೊಟ್ಟರು. 1991ರಲ್ಲಿ ‘ಮಾದರಿ ನೀತಿ ಸಂಹಿತೆ’ಯನ್ನು ಮರುರೂಪಿಸಿ ಮತ್ತೆ ಬಿಡುಗಡೆ ಮಾಡಲಾಯಿತು. ಇದನ್ನು ಸಾರ್ವತ್ರಿಕ ನಡತೆ, ಸಭೆಗಳು, ಮೆರವಣಿಗೆಗಳು, ಮತದಾನ ದಿನದ ನಡಾವಳಿ, ಮತದಾನ ಬೂತ್‌ಗಳ ನಡಾವಳಿ, ವೀಕ್ಷಕರು, ಅಧಿಕಾರದಲ್ಲಿರುವ ಪಕ್ಷದ ನಿಯಂತ್ರಣ, ಚುನಾವಣಾ ಪ್ರಣಾಳಿಕೆಗೆ ಮಾರ್ಗದರ್ಶನ ಸೂತ್ರಗಳು ಎಂದು ಎಂಟು ಭಾಗಗಳಾಗಿ ವಿಂಗಡಿಸಲಾಯಿತು ಮತ್ತು ಎಲ್ಲದಕ್ಕೂ ಶಾಸನಬದ್ಧ ಅಧಿಕಾರ ನಿಡುವುದರ ಬದಲಾಗಿ ಚುನಾವಣಾ ಆಯೋಗಕ್ಕೆ ವಿವೇಚನಾಧಿಕಾರ ಕೊಡಬೇಕೆಂದು ಶಿಫಾರಸು ಮಾಡಲಾಯಿತು.

ಪ್ರೊ. ಮಂಜರಿ ಕಾಟ್ಜು ಅವರು ‘‘ಈ ಮಾದರಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷವೊಂದನ್ನು ಮಾನ್ಯ ಮಾಡುವ ಅಥವಾ ಅಮಾನ್ಯ ಮಾಡುವ ಅಧಿಕಾರವಿದೆ. ಆದರೆ ರಾಜಕೀಯ ಪಕ್ಷಗಳಿಂದ ಅಧಿಕಾರದ ದುರುಪಯೋಗ ಮತ್ತು ನಿಯಮಗಳ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಆಯೋಗವು ನಿಷ್ಕ್ರಿಯಗೊಂಡಿದೆ. ಅನೇಕ ಸಂದರ್ಭಗಳಲ್ಲಿ ಆರೋಪಗಳಿಗೆ ಗುರಿಯಾದ ಪಕ್ಷಗಳಿಗೆ ಸ್ಪಷ್ಟೀಕರಣ ಕೇಳಿದಾಗ ಅವು ರಕ್ಷಣಾತ್ಮಕವಾಗಿ ವರ್ತಿಸಿವೆ. ಒಲ್ಲದ ಮನಸ್ಸಿನಿಂದ, ಗೊಣಗುಟ್ಟುತ್ತಲೆ ಆಯೋಗದ ನಿರ್ಣಯಗಳನ್ನು ಒಪ್ಪಿಕೊಂಡಿವೆ, ಅಧಿಕಾರಶಾಹಿ ಮತ್ತು ಪೊಲೀಸರಂತೆ ಚುನಾವಣಾ ಆಯೋಗವು ಸಹ ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರುತ್ತದೆ. ಆದರೆ ಅವುಗಳಂತೆ ಕಠಿಣ, ಪೀಡಕ ಸಂಸ್ಥೆಯಲ್ಲ. ಆಯೋಗಕ್ಕೆ ಚುನಾಯಿತ ಸರಕಾರಗಳಂತೆ ಸ್ವೇಚ್ಛಾಚಾರದ ಅಧಿಕಾರವಿಲ್ಲ. ಇದು ಸಂವಿಧಾನಾತ್ಮಕ ಸಂಸ್ಥೆ ಮತ್ತು ನೀತಿ ನಿಯಮಾವಳಿಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಈ ಕಾರಣಗಳಿಗೆ ಜನತೆ ಚುನಾವಣಾ ಆಯೋಗದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ’’ ಎಂದು ಹೇಳುತ್ತಾರೆ. ಪ್ರಜೆಗಳು ತಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬರದಂತೆ ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಬೇಕಾದ ಆಯೋಗವು ಈ ಬಾರಿ ಅದಕ್ಕೆ ತದ್ವಿರುದ್ಧವಾಗಿ ವರ್ತಿಸಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದರ ಬದಲು ಸಂಪೂರ್ಣ ರಾಜಕೀಕರಣಗೊಂಡಿದೆ.

1993ರಲ್ಲಿ ಮತದಾರರ ಗುರುತಿನ ಚೀಟಿ ಮತ್ತು 2004ರಲ್ಲಿ ಇಲೆಕ್ಟ್ರಾನಿಕ್ ಉಪಕರಣ ‘ಇವಿಎಂ’ನ್ನು ತಂದರೂ ಸಹ ಮತದಾನದಲ್ಲಿನ ಮೋಸ, ವಂಚನೆ ತಡೆಗಟ್ಟುವಲ್ಲಿ ವಿಫಲವಾಗಿವೆ. ಈಗ ‘ಮತಗಳ್ಳತನ’ಕ್ಕೆ ಸಹಕಾರ ಕೊಟ್ಟಿರುವ ಆರೋಪ ಎದುರಿಸುತ್ತಿರುವ ಆಯೋಗ ಪ್ರಜಾಪ್ರಭುತ್ವಕ್ಕೆ ಒಂದು ಕಳಂಕವಾಗಿದೆ ಎನ್ನುವ ಹಂತಕ್ಕೆ ತಲುಪಿದೆ. ಇದು ವಿಷಾದನೀಯ.

1990ರಲ್ಲಿ ದಿನೇಶ್ ಗೋಸ್ವಾಮಿ ಸಮಿತಿಯು ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಕಾರದ ಪ್ರಭಾವ ಕಡಿಮೆ ಮಾಡಬೇಕು ಎಂದು ಶಿಫಾರಸು ಮಾಡಿತ್ತಾದರೂ ಸಹ ಅದಕ್ಕೆ ಯಾವುದೇ ಬೆಲೆ ಇಲ್ಲದೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರ ನೇಮಕಾತಿಯು ಸಂಪೂರ್ಣ ರಾಜಕೀಯ ನೇಮಕಾತಿಯಾಗಿ ಮುಂದುವರಿದಿದೆ. ಆಡಳಿತದಲ್ಲಿರುವ ಸರಕಾರ ಬಯಸುವ ಐಎಎಸ್ ಅಧಿಕಾರಿಗಳು ಆಯುಕ್ತರಾಗಿ ನೇಮಕಗೊಳ್ಳುತ್ತಾರೆ. ಪ್ರತಿಯೊಂದು ನೇಮಕಾತಿಯ ಹಿಂದೆ ರಾಜಕೀಯವಿರುತ್ತದೆ. ಈ ರೀತಿ ನೇರವಾಗಿ ಸರಕಾರದ ಕೃಪಕಟಾಕ್ಷದಿಂದ ನೇಮಕಗೊಂಡ ಆಯುಕ್ತರು ತಮ್ಮ ದಣಿಗಳಿಗೆ ನಿಯತ್ತು ಪ್ರದರ್ಶಿಸುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಈಗಿನ ಚುನಾವಣಾ ಆಯೋಗ. ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಬಿ.ಬಿ. ಟಂಡನ್ ಅವರು ‘‘ಈ ತೊಡಕನ್ನು ನಿವಾರಿಸಲು ಲೋಕಸಭಾ ಸ್ಪೀಕರ್, ಲೋಕಸಭೆೆಯ ವಿರೋಧಪಕ್ಷದ ನಾಯಕರು, ರಾಜ್ಯಸಭೆಯ ವಿರೋಧಪಕ್ಷದ ನಾಯಕರು, ಕಾನೂನು ಮಂತ್ರಿ, ರಾಜ್ಯಸಭೆಯ ಉಪಾಧ್ಯಕ್ಷರು, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ಒಳಗೊಂಡ ಒಂದು ಆಯ್ಕೆ ಸಮಿತಿ ರಚಿಸಬೇಕು’’ ಎಂದು ಶಿಫಾರಸು ಮಾಡಿದ್ದರು. ಆದರೆ ಇದನ್ನು ಸಹ ಕಸದ ಬುಟ್ಟಿಗೆ ಎಸೆಯಲಾಯಿತು.

ಮಾರ್ಚ್ 2, 2023ರಂದು ಆಗಿನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠವು ಭಾರತದ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಸೂಚಿಸಿತು. ಮತ್ತಷ್ಟು ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ನೀತಿ ತರಲು ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು(ಸಿಜೆಐ) ಒಳಗೊಂಡ ಸಮಿತಿಯು ರಾಷ್ಟ್ರಪತಿಗಳಿಗೆ ತಮ್ಮ ಆಯ್ಕೆಯನ್ನು ಕಳಿಸಿಕೊಡಬೇಕೆಂದು ನಿರ್ದೇಶನ ನೀಡಿತು. ಆದರೆ ತನ್ನ ನಿರ್ದೇಶನವು ‘ಸಂಸತ್ತು ಕಾಯ್ದೆ ರೂಪಿಸುವವರೆಗೆ ಮಾತ್ರ ಮಾನ್ಯವಾಗಿರುತ್ತದೆ’ ಎಂದು ಸೇರಿಸಿತು. ಇದನ್ನೇ ನೆಪ ಮಾಡಿಕೊಂಡ ಆಗಿನ ಮೋದಿ ನೇತೃತ್ವದ ಸರಕಾರವು 28 ಡಿಸೆಂಬರ್ 2023ರಂದು ಮುಖ್ಯ ಚುನಾವಣಾ ಅಯುಕ್ತ ಮತ್ತು ಇತರ ಆಯುಕ್ತರು(ನೇಮಕಾತಿ, ಸೇವೆ, ಟರ್ಮ್ಸ್ ಆಫ್ ಆಫೀಸ್) 2023 ಕಾಯ್ದೆಯನ್ನು ಜಾರಿಗೆ ತಂದರು. ಈ ಕಾಯ್ದೆಯಲ್ಲಿ ಸಿಜೆಐಯವರನ್ನು ಆಯ್ಕೆ ಸಮಿತಿಯಿಂದ ಕೈಬಿಟ್ಟು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಪಿಎಂ ನಾಮನಿರ್ದೇಶನ ಮಾಡುವ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಯಿತು. ಈ ಕಾಯ್ದೆಯನ್ನು ಜನವರಿ 2, 2024ರಂದು ಜಾರಿಗೊಳಿಸಲಾಯಿತು. ಇದನ್ನು ವಿಧಿ 32ರ ಅಡಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಯಾ ಠಾಕೂರ್, ಎಡಿಆರ್ ಸಂಸ್ಥೆ ಮತ್ತು ಇತರರು ‘ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿ ಸಿಜೆಐಯವರನ್ನು ಹೊರಗಿಟ್ಟು ಆಯ್ಕೆ ಸಮಿತಿಯನ್ನು ರಚನೆ ಮಾಡಿದ್ದು ನ್ಯಾಯಾಂಗ ನಿಂದನೆಯಾಗಿದೆ. ಈ ಸಮಿತಿಯು ಸಂಪೂರ್ಣವಾಗಿ ಪ್ರಧಾನ ಮಂತ್ರಿಗಳ ಮರ್ಜಿಗೆ ಒಳಪಟ್ಟಿರುತ್ತದೆ, ಈ ಕಾರಣ ಅದು ಪಾರದರ್ಶಕವಾಗಿರುವುದಿಲ್ಲ ಮತ್ತು ಪಕ್ಷಪಾತದಿಂದ ಕೂಡಿರುತ್ತದೆ’ ಎಂದು ಆ ಕಾಯ್ದೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದರು.

ಮಾರ್ಚ್ 13, 2024ರಂದು ಆಯುಕ್ತ ಅರುಣ್ ಗೋಯಲ್ ದಿಢೀರನೆ ರಾಜಿನಾಮೆ ಸಲ್ಲಿಸಿದರು. ಆಗ 11 ಮತ್ತು 12 ಮಾರ್ಚ್ 2024ರ ನಡುವೆ ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾತ್ರ ಅಧಿಕಾರದಲ್ಲಿದ್ದರು. ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಆಯುಕ್ತರ ನೇವಕಾತಿ ಮಾಡದಂತೆ ನಿರ್ಬಂಧಿಸಬೇಕೆಂದು ಅರ್ಜಿ ಸಲ್ಲಿಸಲಾಯಿತು. ಆದರೆ ಮಾರ್ಚ್ 14ರಂದು ರಾಷ್ಟ್ರಪತಿಗಳು ಮೋದಿ ಸರಕಾರ ಆಯ್ಕೆ ಮಾಡಿದ ಇಬ್ಬರು ಆಯುಕ್ತರ ನೇಮಕಾತಿಗೆ ಒಪ್ಪಿಗೆ ನೀಡಿದರು. ಸಂವಿಧಾನ ಪೀಠವು ಈ ಆಯ್ಕೆಗೆ ತಡೆ ನೀಡಲು ನಿರಾಕರಿಸಿತು. ನಂತರ 2023ರ ಕಾಯ್ದೆಯನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆಗೆ ಮೇ, 14 2025ರಂದು ನಿಗದಿಪಡಿಸಿತು.

ಒಟ್ಟಾರೆ ಚುನಾವಣಾ ಆಯೋಗದ ಪಕ್ಷಪಾತ, ಅಳುಕು, ಭಯದಿಂದ ಕಾರ್ಯನಿರ್ವಹಿಸುವ ಸ್ಥಿತಿಯಿಂದ ಬಿಡುಗಡೆ ಸಾಧ್ಯವಾಗಲೇ ಇಲ್ಲ. ಅದಕ್ಕೆ ಸ್ವಾಯತ್ತೆ ಎನ್ನುವುದು ಕನಸಿನ ಮಾತಾಗಿದೆ.

ಕೊನೆಯಲ್ಲದ ಪ್ರಶ್ನೆಗಳು

ಬ್ರೆಕ್ಟ್ ‘‘ಸತ್ಯ ಗೊತ್ತಿಲ್ಲದವನು ಮೂರ್ಖ ಎನಿಸಿಕೊಳ್ಳುತ್ತಾನೆ, ಆದರೆ ಸತ್ಯ ಗೊತ್ತಿದ್ದೂ ಅದನ್ನು ಸುಳ್ಳು ಅಂತ ಹೇಳುವವನು ಅಪರಾಧಿ’’ ಎಂದು ಹೇಳುತ್ತಾನೆ. ಇಲ್ಲಿ ಯಾರು ಅಪರಾಧಿಗಳು ಎಂದು ನಿರ್ಧರಿಸುವುದು ಕಷ್ಟವಲ್ಲ ಅಲ್ಲವೇ? ಕಡೆಗೂ ರುಂಚಿಮನ್ ಹೇಳಿದಂತೆ ‘‘ಪ್ರಜಾಪ್ರಭುತ್ವವು ಸೋಲುತ್ತದೆ, ಆದರೆ ಮಿಕ್ಕಂತೆ ಎಲ್ಲವೂ ಘಾಸಿಗೊಳ್ಳದೆ ಅಖಂಡವಾಗಿ ಉಳಿದುಕೊಳ್ಳುತ್ತದೆ.’’

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X