‘ಎಸ್‌ಐಆರ್’ ನೋಟಿಸ್ ನೀಡುವಲ್ಲಿ ಚುನಾವಣಾ ಆಯೋಗದ ಸಂಚು?: ‘ಇತರರು’ ಎಂದರೆ ಯಾರು?

ಬೆಂಗಳೂರು: ರಾಜ್ಯದಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ಮೊದಲ ಹಂತ ಮುಕ್ತಾಯಗೊಂಡಿದೆ. ಇದೀಗ ಮತದಾರರಿಗೆ ನೋಟಿಸ್ ನೀಡುವ ಹಂತದಲ್ಲಿ ಮುಖ್ಯ ಚುನಾವಣಾಧಿ
ಕಾರಿ ವಿ.ಅನ್ಬುಕುಮಾರ್, ಮ್ಯಾಪಿಂಗ್ ಆಗದವರು ಮತ್ತು ಲಾಜಿಕಲ್ ಡಿಸ್ಕ್ರಿಪೆನ್ಸಿ(ತಾರ್ಕಿಕ ವ್ಯತ್ಯಾಸ) ಕುರಿತು ಮಾಹಿತಿ ನೀಡಿ, ‘ಇತರರು’ (ಅದರ್ಸ್) ಎಂಬ ವರ್ಗದ ಬಗ್ಗೆ ಯಾವುದೇ ಸ್ಪಷ್ಟನೆ ಅಥವಾ ಮಾಹಿತಿ ನೀಡದೇ, ನೋಟಿಸ್ ಹಂತದಲ್ಲೂ ಅರ್ಹ ಮತದಾರರನ್ನು ಹೊರಗಿಡುವ ರೀತಿಯಲ್ಲಿ ಪ್ರಕ್ರಿಯೆ ರೂಪಿಸಲಾಗಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.
ಮುಖ್ಯ ಚುನಾವಣಾಧಿಕಾರಿ ಪೂರ್ವ ಕರಡುಪಟ್ಟಿ ಪ್ರಕಟನೆಯ ಚಟುವಟಿಕೆಗಳ ಕುರಿತು ಆ.20ರಂದು ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ತರಬೇತಿ ಪ್ರಸ್ತುತಿಯಲ್ಲಿರುವ ‘ಯಾರಿಗೆ ನೋಟಿಸ್ ನೀಡಲಾಗುತ್ತದೆ?’ ಎಂಬ ಪುಟದಲ್ಲಿ ಮೂರು ವರ್ಗಗಳನ್ನು ಉಲ್ಲೇಖಿಸಲಾಗಿದೆ. ‘ಮ್ಯಾಪಿಂಗ್ ಆಗದವರು’ ಮತ್ತು ‘ಮ್ಯಾಪಿಂಗ್‌ನಲ್ಲಿ ವ್ಯತ್ಯಾಸ ಇರುವವರು’ ಎಂಬ ಎರಡು ವರ್ಗಗಳಿಗೆ ನೋಟಿಸ್ ನೀಡುವುದು ಕಡ್ಡಾಯ ಎಂದು ಹೇಳಲಾಗಿದೆ. ಆದರೆ ವರ್ಗದಲ್ಲಿ ‘ಇತರರು’ ಎಂಬ ಮೂರನೇ ವರ್ಗವು ಒಂದಿದೆ.
ಈ ‘ಇತರರು’ ವರ್ಗದಲ್ಲಿ ‘ನೋ ಮ್ಯಾಪಿಂಗ್’ ವರ್ಗದಲ್ಲಿ ಇಲ್ಲದೇ ಇರುವರು ಮತ್ತು ‘ತಾರ್ಕಿಕ ವ್ಯತ್ಯಾಸಕ್ಕೆ’ ಒಳಗಾಗದೇ ಇರುವರನ್ನು ಇಆರ್‌ಒಗಳು ತಮ್ಮ ಪರಮಾಧಿಕಾರವನ್ನು ಬಳಸಿಕೊಂಡು ‘ಇತರರು’ ಪಟ್ಟಿಯಲ್ಲಿ ಗುರುತಿಸುವ ಅಧಿಕಾರವನ್ನು ಹೊಂದಿದ್ದಾರೆ. ಅಲ್ಲದೇ, ‘ನೋ ಮ್ಯಾಪಿಂಗ್’ ಮತ್ತು ‘ತಾರ್ಕಿಕ ವ್ಯತ್ಯಾಸ’ದಲ್ಲಿ ಬರುವ ಮತದಾರರಿಗೆ ನೋಟಿಸ್ ನೀಡಿ, ಅಹವಾಲನ್ನು ಸಲ್ಲಿಸಲು ಕಡ್ಡಾಯವಾಗಿ ವೇಳಾಪಟ್ಟಿ ನೀಡುತ್ತಾರೆ. ಆದರೆ, ಈ ‘ಇತರರು’ ವರ್ಗದಲ್ಲಿರುವರಿಗೆ ನೋಟಿಸ್ ನೀಡಿದ ನಂತರವೂ, ಅವರ ಅಹವಾಲನ್ನು ಕೇಳದೆಯೇ ಅವರನ್ನು ತಿರಸ್ಕರಿಸುವ ಅಧಿಕಾರವನ್ನು ಇಆರ್‌ಒ’ಗಳು ಹೊಂದಿರುತ್ತಾರೆ.
ಇಂತಹ ‘ಇತರರು’ ಎಂಬ ಮಹತ್ವದ ವರ್ಗದ ಕುರಿತು ಕಾರ್ಯಾಗಾರದಲ್ಲಿ ಅಧಿಕಾರಿಗಳು ಮಾಹಿತಿ ನೀಡದಿರುವುದು ಹಾಗೂ ಪ್ರಕಟನೆಯಲ್ಲೂ ಇದರ ಅಂಕಿಅಂಶಗಳನ್ನು ನೀಡದಿರುವುದು ಪ್ರಶ್ನಾರ್ಹವಾಗಿದೆ?.
ಎಎಸ್‌ಡಿಡಿಒ ಪಟ್ಟಿಯಲ್ಲಿ ‘ಇತರರು’ ಎಂದರೆ ‘ಗಣತಿ ನಮೂನೆಗೆ ಸಹಿ ಹಾಕಲು ಒಪ್ಪದವರು’ ಎಂದು ಹೇಳಲಾಗಿತ್ತು. ಆದರೆ, ಇಲ್ಲಿ ‘ಇತರರು’ ಎಂದರೆ ಯಾರು? ಈ ವರ್ಗದಲ್ಲಿ ಎಷ್ಟು ಮತದಾರರಿದ್ದಾರೆ? ಯಾರಿಗೆ ನೋಟಿಸ್ ನೀಡಲಾಗುತ್ತದೆ? ಯಾವ ಮಾನದಂಡದ ಆಧಾರದ ಮೇಲೆ ನೋಟಿಸ್ ನೀಡಲಾಗುತ್ತದೆ? ಅಧಿಕಾರಿಯ ವಿವೇಚನೆಗೆ ಯಾವ ಮಿತಿ ಇದೆ? ಎಂಬ ಪ್ರಶ್ನೆಗಳಿಗೆ ಆಯೋಗ ಸ್ಪಷ್ಟ ಉತ್ತರ ನೀಡಬೇಕಿದೆ.
ಅಂದರೆ, ಹಿಂದಿನ ಮತದಾರರ ಪಟ್ಟಿಯೊಂದಿಗೆ ಸಂಬಂಧವನ್ನು ಗುರುತಿಸುವ ವಿವರಗಳನ್ನು ನೀಡಿರುವ ಮತ್ತು ಯಾವುದೇ ತಾರ್ಕಿಕ ವ್ಯತ್ಯಾಸ ಕಂಡುಬರದ ಮತದಾರರಿಗೂ ಅಧಿಕಾರಿಯ ವಿವೇಚನೆಯ ಆಧಾರದ ಮೇಲೆ ನೋಟಿಸ್ ನೀಡಬಹುದಾಗಿದೆ. ಇಆರ್‌ಒಗಳು ನೋಟಿಸ್ ನೀಡುವಾಗ ಕಾರಣವನ್ನು ದಾಖಲಿಸಬೇಕೇ? ಎಲ್ಲ ಚುನಾವಣಾ ನೋಂದಣಾಧಿಕಾರಿಗಳೂ ಒಂದೇ ಮಾನದಂಡವನ್ನು ಅನುಸರಿಸುವ ಸ್ಪಷ್ಟ ಮಾರ್ಗಸೂಚಿ ಇದೆಯೇ? ಎನ್ನುವ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ.
ಕಾರ್ಯಾಗಾರದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವಿವಿಧ ಪ್ರಕ್ರಿಯೆಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿ ಪ್ರಮುಖವಾಗಿರುವ ‘ಇತರರು’ ಎಂಬ ವರ್ಗದ ಕುರಿತು ಮತ್ತು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿಯೂ ಈ ವರ್ಗಕ್ಕೆ ಸಂಬಂಧಿಸಿದ ಪ್ರತ್ಯೇಕ ಅಂಕಿಅಂಶಗಳನ್ನು ಯಾಕೆ ನೀಡಿಲ್ಲ? ಇದರ ಹಿಂದಿರುವ ಹುನ್ನಾರವೇನು? ಸಾರ್ವಜನಿಕವಾಗಿ ಚರ್ಚೆಯಾಗಬೇಕಾದ ಇಂತಹ ಪ್ರಮುಖ ವರ್ಗದ ಮಾಹಿತಿಯನ್ನು ಚುನಾವಣಾ ಆಯೋಗ ಯಾಕೆ ಬಹಿರಂಗಪಡಿಸುತ್ತಿಲ್ಲ? ಎಂದು ಮತದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಚುನಾವಣಾ ಆಯೋಗ ಎಸ್‌ಐಆರ್ ಕುರಿತು ಮತದಾರರಿಗೆ ಸರಿಯಾದ ಮಾಹಿತಿ ನೀಡದೇ ಈಗಾಗಲೇ ಗಣತಿ ನಮೂನೆಯ ಮೊದಲ ಹಂತದಲ್ಲಿ ಕರ್ನಾಟಕದ 1.07 ಕೋಟಿ ಮತದಾರರನ್ನು ಅವೈಜ್ಞಾನಿಕವಾಗಿ ಡಿಲೀಟ್ ಮಾಡಿ ಅನ್ಯಾಯ ಮಾಡಿದೆ. ಈಗ ಕರಡುಪಟ್ಟಿ ಪ್ರಕಟನೆ ಮಾಡುವ ಹಂತದಲ್ಲಿ ಯಾರಿಗೆಲ್ಲ ನೋಟಿಸ್ ನೀಡಲಾಗುತ್ತದೆ ಎಂಬ ವಿಷಯದಲ್ಲಿಯೂ ‘ಇತರರು’ ಎಂಬ ವರ್ಗದ ಕುರಿತು ಮಾಹಿತಿ ನೀಡದೇ, ಇನ್ನಷ್ಟು ಅರ್ಹ ಮತದಾರರನ್ನು ಡಿಲೀಟ್ ಮಾಡುವ ಹುನ್ನಾರ ನಡೆಸುತ್ತಿವೆ.
-ಕೆ.ವಿ.ಭಟ್,
ರಾಜ್ಯ ಸಂಚಾಲಕರು, ಜೆಸಿಟಿಯು
ಎಸ್‌ಐಆರ್‌ನಲ್ಲಿ ಬಾಧಿತರ ಸಂಖ್ಯೆ 1.51 ಕೋಟಿ
ಕರ್ನಾಟಕದ ಒಟ್ಟು ಮತದಾರರ ಸಂಖ್ಯೆ 5,54,32,314. ಗಣತಿ ನಮೂನೆ ಪ್ರಕ್ರಿಯೆಯ ಮೊದಲ ಹಂತದಲ್ಲಿ ಎಎಸ್‌ಡಿಡಿಒ ಪಟ್ಟಿಯಲ್ಲಿ ಬಂದವರು 1,07,96,415(ಶೇ.19.47). ಮ್ಯಾಪಿಂಗ್ ಆಗದವರು 23,45,428 (ಶೇ.4.23) ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರಿಪೆನ್ಸಿ) ದಲ್ಲಿ ಬಂದ ಮತದಾರರ ಸಂಖ್ಯೆ 20,35,312 (ಶೇ.3.67). ಈ ಮೂಲಕ ಒಟ್ಟು ಬಾಧಿತರ ಸಂಖ್ಯೆ 1,51,77,155(ಶೇ.27.38).






