ಚುನಾವಣಾ ಆಯೋಗದ ಸಂದೇಹಾಸ್ಪದ ಸಾಫ್ಟ್‌ವೇರ್ : ಪಶ್ಚಿಮ ಬಂಗಾಳ, ಮಧ್ಯಪ್ರದೇಶದ 3.66 ಕೋಟಿ ಮತದಾರರ ಹಕ್ಕು ಅಪಾಯದಲ್ಲಿ

ಹೊಸದಿಲ್ಲಿ, ಜ.6: ಭಾರತದ ಚುನಾವಣಾ ಆಯೋಗವು ಯಾವುದೇ ಲಿಖಿತ ಸೂಚನೆಗಳು, ಅಧಿಕೃತ ಕಾರ್ಯವಿಧಾನಗಳು ಮತ್ತು ಕೈಪಿಡಿಗಳಿಲ್ಲದೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಬಳಸಿದ ಪರೀಕ್ಷಿ ಸಲ್ಪಡದ ಸಾಫ್ಟ್‌ವೇರ್ ಪಶ್ಚಿಮ ಬಂಗಾಳದಲ್ಲಿ 1.31 ಕೋಟಿ ಮತ್ತು ಮಧ್ಯಪ್ರದೇಶದಲ್ಲಿ 2.35 ಕೋಟಿ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸುವ ಮೂಲಕ ಅವರ ಮತದಾನದ ಹಕ್ಕನ್ನು ಅಪಾಯದಲ್ಲಿ ಸಿಲುಕಿಸಿದೆ ಎಂದು reporters-collective.in ತನ್ನ ತನಿಖಾ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಚು.ಆಯೋಗ ಈ ಅನುಮಾನಾಸ್ಪದ ಮತದಾರರನ್ನು ‘ತಾರ್ಕಿಕ ವ್ಯತ್ಯಾಸಗಳನ್ನು’ ಹೊಂದಿರುವ ಪ್ರಕರಣಗಳು ಎಂದು ಕರೆದಿದೆ. ಡಿಸೆಂಬರ್ ಪೂರ್ವಾರ್ಧದಲ್ಲಿ ಸಿದ್ಧಪಡಿಸಲಾದ ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳ ಶಂಕಿತ ಮತದಾರ ಪಟ್ಟಿಯ ಸಾರಾಂಶ ‘ರಿಪೋರ್ಟರ್ಸ್ ಕಲೆಕ್ಟಿವ್’ಗೆ ಲಭ್ಯವಾಗಿದೆ. ಈ ದಾಖಲೆಗಳಲ್ಲಿನ ದತ್ತಾಂಶಗಳನ್ನು ಮೊದಲ ಬಾರಿಗೆ ಬಹಿರಂಗಗೊಳಿಸಲಾಗುತ್ತಿದೆ. ಚುನಾವಣಾ ಆಯೋಗ ಎಸ್‌ಐಆರ್ ನಡೆಯುತ್ತಿರುವ ಎಲ್ಲ 12 ರಾಜ್ಯಗಳ ಮತದಾರರ ಪಟ್ಟಿಗಳ ಇಂತಹ ವಿವರಗಳನ್ನು ಸಾರ್ವಜನಿಕ ಪರಿಶೀಲನೆಗೆ ಅಲಭ್ಯವಾಗಿಸಿದೆ.
ಮತದಾರರನ್ನು ಶಂಕಿತರು ಎಂದು ಗುರುತಿಸಲು ಬಳಸಲಾದ ಸಾಫ್ಟ್ ವೇರ್ 20 ವರ್ಷಗಳಿಗೂ ಹಳೆಯ ಮತ್ತು ಸ್ಪಷ್ಟವಲ್ಲದ ಮತದಾರರ ಪಟ್ಟಿಗಳ ಡಿಜಿಟಲೀಕರಣವನ್ನು ಅವಲಂಬಿಸಿತ್ತು. ಡಿಜಿಟಲೀಕರಣವನ್ನು 12 ರಾಜ್ಯಗಳಲ್ಲಿ ತರಾತುರಿಯಿಂದ ನಡೆಸಲಾಗಿತ್ತು.
ಪ್ರತಿಯೊಂದು ರಾಜ್ಯದಲ್ಲಿಯೂ ಈ ಡಿಜಿಟಲೀಕರಣದ ಗುಣಮಟ್ಟವನ್ನು ಪರಿಶೀಲಿಸಲು ವಿವರವಾದ ಪರೀಕ್ಷೆಗಳನ್ನು ನಡೆಸಲಾಗಿರಲಿಲ್ಲ. ಇದು ಸಾಫ್ಟ್ ವೇರ್ ಮತದಾರರನ್ನು ಅನುಮಾನಾಸ್ಪದರೆಂದು ತಪ್ಪಾಗಿ ಗುರುತಿಸಲು ಕಾರಣವಾಗಿರಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೋರ್ವರು ‘ರಿಪೋರ್ಟರ್ಸ್ ಕಲೆಕ್ಟಿವ್’ಗೆ ದೃಢಪಡಿಸಿದ್ದಾರೆ.
ವಯಸ್ಸಿನ ಅಸಮಾನತೆ, ಹೆಸರುಗಳ ವ್ಯತ್ಯಾಸ, ಒಂದೇ ಕುಟುಂಬಕ್ಕೆ ಹೆಚ್ಚು ಮತದಾರರ ದಾಖಲೆಗಳಿರುವುದು ಮುಂತಾದವುಗಳನ್ನು ಸಾಫ್ಟ್‌ವೇರ್ ‘ತಾರ್ಕಿಕ ವ್ಯತ್ಯಾಸಗಳು’ ಎಂದು ಗುರುತಿಸಿದೆ. ಮತದಾರರ ಹಕ್ಕುಗಳ ಬಗ್ಗೆ ಸಂದೇಹಗಳು ಉದ್ಭವಿಸಿದಾಗ ಕ್ಷೇತ್ರ ಮಟ್ಟದಲ್ಲಿ ಚುನಾವಣಾಧಿಕಾರಿಗಳು ಔಪಚಾರಿಕ ವಿಚಾರಣೆಯ ಮೂಲಕ ಪರಿಹರಿಸಬೇಕು ಎಂದು ಚುನಾವಣಾ ಆಯೋಗದ ನಿಯಮಗಳು ಹೇಳುತ್ತವೆ. ತಮ್ಮ ಹಕ್ಕುಗಳ ಬಗ್ಗೆ ಕಂಪ್ಯೂಟರ್ ವ್ಯಕ್ತಪಡಿಸಿರುವ ಸಂದೇಹಗಳನ್ನು ಎದುರಿಸಲು ಮತದಾರರು ಯಾವ ಪುರಾವೆಗಳನ್ನು ಒದಗಿಸಬೇಕು ಎನ್ನುವುದನ್ನು ಚುನಾವಣಾ ಆಯೋಗ ಲಿಖಿತವಾಗಿ ಸೂಚಿಸಿರಲಿಲ್ಲ. ಸಾಫ್ಟ್‌ವೇರ್ ಗುರುತಿಸಿದ ಅನುಮಾನಾಸ್ಪದ ಮತದಾರರ ಅಭೂತಪೂರ್ವ ಪ್ರಮಾಣದಿಂದ ದಿಗ್ಭ್ರಮೆಗೊಂಡ ಚುನಾವಣಾ ಆಯೋಗ ಆರಂಭದಲ್ಲಿ ಅನುಮಾನಾಸ್ಪದರು ಎಂದು ಗುರುತಿಸಲ್ಪಟ್ಟ ಕೋಟ್ಯಂತರ ಮತದಾರರನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ರಾಜ್ಯಗಳಾದ್ಯಂತ ಎಸ್‌ಐಆರ್ ನಡುವೆಯೇ ಕೈಬಿಟ್ಟಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ಹೇಳಿದೆ.
ಚುನಾವಣಾ ಆಯೋಗ ಕನಿಷ್ಠ ಒಂದು ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಸಾಫ್ಟ್‌ವೇರ್ ಅನ್ನು ಪದೇ ಪದೇ ಪರಿಷ್ಕರಿಸಿತ್ತು ಎನ್ನುವುದನ್ನು ‘ರಿಪೋರ್ಟರ್ಸ್ ಕಲೆಕ್ಟಿವ್’ ದೃಢಪಡಿಸಿಕೊಂಡಿದೆ. ಇದು ಕ್ರಮೇಣ ಅನುಮಾನಾಸ್ಪದ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಿತ್ತು. ಈ ನಡುವೆ ಯಾವುದೇ ಸ್ಥಾಪಿತ ಕಾರ್ಯವಿಧಾನದ ಬದಲು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತ್ತು ಕ್ಷೇತ್ರ ಮಟ್ಟದ ಚುನಾವಣಾಧಿಕಾರಿಗಳಿಗೆ ಬಿಡಲಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ ಮಧ್ಯದ ವೇಳೆಗೆ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ 1.31 ಕೋಟಿ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸಲಾಗಿದ್ದು, ಜ.2ರ ವೇಳೆಗೆ ಈ ಸಂಖ್ಯೆ 95 ಲಕ್ಷಕ್ಕೆ ಇಳಿದಿದೆ. ಆದರೆ ಸಾಫ್ಟ್‌ವೇರ್ ಶಂಕಿತರೆಂದು ಗುರುತಿಸಿದ್ದ ಈ ಪ್ರಕರಣಗಳನ್ನು ಹೇಗೆ ಪರಿಹರಿಸಲಾಗಿದೆ ಎನ್ನುವುದನ್ನು ವಿವರಿಸಲು ಇಸಿ ಯಾವುದೇ ವರದಿಗಳನ್ನು ಬಿಡುಗಡೆಗೊಳಿಸಿಲ್ಲ.
ಭಾರತದಲ್ಲಿ ಚುನಾವಣಾ ಆಯೋಗವು ಸ್ಥಾಪಿತ ಕಾರ್ಯವಿಧಾನಗಳಿಲ್ಲದೆ, ಅಪಾರದರ್ಶಕ ಅಲ್ಗಾರಿದಮ್‌ಗಳ ಮೂಲಕ ಅಸ್ತಿತ್ವದಲ್ಲಿರುವ ಕೋಟ್ಯಂತರ ಮತದಾರರ ಹಕ್ಕುಗಳ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿರುವುದು ಇದೇ ಮೊದಲು. ಇದು ಮತದಾನದ ಹಕ್ಕು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ತನ್ನ ವರದಿಯಲ್ಲಿ ಹೇಳಿದೆ.
ಪಶ್ಚಿಮ ಬಂಗಾಳದ ಒಟ್ಟು ಮತದಾರರ ಪೈಕಿ ಶೇ.17.11ರಷ್ಟು ಮತ್ತು ಮಧ್ಯಪ್ರದೇಶದಲ್ಲಿ ಶೇ.41.22ರಷ್ಟು ಜನರು ಸಂಶಯದ ಸುಳಿಗೆ ಸಿಲುಕಿದ್ದಾರೆ. ಎಸ್‌ಐಆರ್ ಭಾಗವಾಗಿ ಮತ ದಾರರ ನೋಂದಣಿ ನಡೆಯುತ್ತಿರುವ ಇತರ 10 ರಾಜ್ಯಗಳಲ್ಲಿಯೂ ಕೋಟ್ಯಂತರ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸಲಾಗಿದೆ ಎಂದು ಸ್ವತಂತ್ರ ಮೂಲಗಳು ದೃಢಪಡಿಸಿವೆ.







