‘ಅಕ್ಕ’ ಪಡೆ ಅನುಪಯುಕ್ತವಾಗದಿರಲಿ

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರಾಜ್ಯ ಸರಕಾರ ‘ಅಕ್ಕ’ ಪಡೆಯನ್ನು ಆರಂಭಿಸಿರುವುದು ಶ್ಲಾಘನೀಯ ಯೋಜನೆ. ಸಂಕಷ್ಟದಲ್ಲಿರುವ ಮಹಿಳೆ ಹಾಗೂ ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಉದ್ದೇಶದಿಂದ ‘ಅಕ್ಕ’ ಪಡೆಯನ್ನು ರಚಿಸಲಾಗಿದೆ. ಶಾಲೆ-ಕಾಲೇಜು, ಬಸ್ ನಿಲ್ದಾಣ, ರೈಲು ನಿಲ್ದಾಣ, ಹಾಸ್ಟೆಲ್‌ಗಳು ಮುಂತಾದ ಜನ ನಿಬಿಡ ಸ್ಥಳಗಳಲ್ಲಿ ಅಕ್ಕ ಪಡೆ ಕಾರ್ಯ ನಿರ್ವಹಿಸುವುದರಿಂದ ಮಹಿಳೆಯರು ಹಾಗೂ ಮಕ್ಕಳ ಆತ್ಮಸ್ಥೈರ್ಯ ಹೆಚ್ಚಲಿದೆ.
ಮಹಿಳೆ ಹಾಗೂ ಮಕ್ಕಳು ಇಂದು ಎಲ್ಲ ಸ್ಥಳಗಳಲ್ಲೂ ಒಂದಿಲ್ಲ ಒಂದು ರೀತಿಯ ಪೀಡನೆಗೆ ಒಳಗಾಗುತ್ತಿದ್ದಾರೆ. ಜನ ನಿಬಿಡ ಸ್ಥಳಗಳಾದ ಪೇಟೆ, ಜಾತ್ರೆ, ಉತ್ಸವಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ಕೀಟಲೆ ಮಾಡುವುದು, ಅಸಭ್ಯ ವರ್ತನೆಗಳನ್ನು ತೋರುವ ಪುಂಡರು ಹೆಚ್ಚಿಕೊಂಡಿದ್ದಾರೆ. ಅನುಚಿತವಾದ ವರ್ತನೆ ತೋರಿ ಕ್ಷಣಮಾತ್ರದಲ್ಲಿ ಇವರು ಮಾಯವಾಗಿ ಬಿಡುತ್ತಾರೆ. ಇದರಿಂದ ಹೆಣ್ಣು ಮಕ್ಕಳು ಅಸಹನೀಯವಾದ ಹಿಂಸೆಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ರಾತ್ರಿ ಇಡೀ ಬಸ್ಸು, ರೈಲುಗಳಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ಪ್ರಯಾಣಿಸಬೇಕಾಗುತ್ತದೆ. ಅನಿವಾರ್ಯವಾಗಿ ಗಂಡಸರ ಪಕ್ಕ ಕುಳಿತುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಇಂತಹ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಪುಂಡರು ತಮ್ಮ ಪಕ್ಕದಲ್ಲಿ ಕುಳಿತ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಎಲ್ಲರ ಕಣ್ಣಿಗೆ ಸಭ್ಯರಂತೆ ಕಾಣುವ ಇವರು ಯಾರಿಗೂ ಅನುಮಾನ ಬರದಂತೆ ತಮ್ಮ ತೆವಲನ್ನು ತೀರಿಸಿಕೊಳ್ಳುತ್ತಾರೆ. ಇದರಿಂದ ಪ್ರಯಾಣದುದ್ದಕ್ಕೂ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಹೆಣ್ಣು ಮಕ್ಕಳು. ಇಂತಹ ಹೇವರಿಕೆಯ ಸಂದರ್ಭಗಳಲ್ಲಿ ತಮಗಾಗುತ್ತಿರುವ ಹಿಂಸೆಯ ವಿರುದ್ಧ ಧ್ವನಿ ಎತ್ತಲೂ ಆಗದೆ ಖಂಡಿಸಲೂ ಧೈರ್ಯ ಸಾಲದೆ ಮರ್ಯಾದೆಗೆ ಹೆದರಿ ಸುಮ್ಮನಾಗುವವರೇ ಜಾಸ್ತಿ.
ಈಗ ನಿಯೋಜಿಸಿರುವ ಯೋಜನೆಯನ್ನು ಜನ ನಿಬಿಡ ಸ್ಥಳಗಳ ಜೊತೆಗೆ ಪ್ರತೀ ಬಸ್ಸು, ರೈಲಿನ ಬೋಗಿಯೊಳಗಡೆ ಒಬ್ಬರು ಇಲ್ಲವೇ ಇಬ್ಬರ ‘ಅಕ್ಕ’ ಪಡೆಯನ್ನು ನಿಯೋಜಿಸುವ ಅಗತ್ಯವಿದೆ. ಇವರು ಕೇವಲ ಸಮವಸ್ತ್ರವನ್ನು ಧರಿಸಿ ಲಾಠಿ ಹಿಡಿದು ನಿಂತರಷ್ಟೇ ಸಾಲದು. ಬಸ್ಸು ಹಾಗೂ ರೈಲುಗಳಲ್ಲಿ ಅತ್ತಿಂದಿತ್ತ ಸಂಚರಿಸುತ್ತ ತಾವು ಯಾರು, ಯಾವ ಉದ್ದೇಶದಿಂದ ತಮ್ಮನ್ನು ನೇಮಿಸಲಾಗಿದೆ ಹಾಗೂ ಕಿರುಕುಳ ನೀಡುವ ದುರುಳರಿಗೆ ಯಾವ ಶಿಕ್ಷೆ ನೀಡಲಾಗುತ್ತದೆ ಎಂಬುದನ್ನು ಪ್ರಯಾಣಿಕರಿಗೆ ತಿಳಿಸಬೇಕು. ಹೆಣ್ಣು ಮಕ್ಕಳು ಪ್ರಯಾಣಿಸುವಾಗ ಯಾರಿಂದಲಾದರೂ ಪೀಡನೆಗೊಳಗಾದರೆ ಧೈರ್ಯದಿಂದ ‘ಅಕ್ಕ’ ಪಡೆಗೆ ತಕ್ಷಣ ತಿಳಿಸಬೇಕೆಂದು ಹೇಳಬೇಕು. ದುರ್ವರ್ತನೆ ತೋರುವ ಪುಂಡರು ಸಿಕ್ಕಿ ಬಿದ್ದಾಗ ಅವರನ್ನು ಬಂಧಿಸಿ ಕಾನೂನಿನ ಕೈಗೆ ಒಪ್ಪಿಸಿದಾಗ ಮಾತ್ರ ಈ ಯೋಜನೆಯ ಉದ್ದೇಶ ಸಫಲವಾಗಲು ಸಾಧ್ಯ.
‘ಅಕ್ಕ’ ಪಡೆಯ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಸಹೋದರಿಯರು ತಮ್ಮನ್ನು ತಾವು ರಕ್ಷಿಕೊಳ್ಳಲು ಲಾಠಿಯ ಜೊತೆಗೆ ಬಂದೂಕಿನಂತಹ ಆಯುಧಗಳನ್ನು ಕೊಟ್ಟಾಗ ಪುಂಡರ ಉಪಟಳಕ್ಕೆ ಕಡಿವಾಣ ಬೀಳಬಹುದು.
ಈ ಹಿಂದೆ ‘ಅಕ್ಕ’ ಪಡೆಯನ್ನೇ ಹೋಲುವ ಓಬವ್ವ, ರಾಣಿ ಅಬ್ಬಕ್ಕ ಹಾಗೂ ಚೆನ್ನಮ್ಮ ಪಡೆಗಳು ಆಯ್ದ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇವುಗಳಿಂದ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಲಾಗಲಿ ಅಥವಾ ದುರುಳರಿಗೆ ಬುದ್ಧಿ ಕಲಿಸುವಲ್ಲಿ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೇವಲ ಹೊಸ ಹೊಸ ಯೋಜನೆಗಳನ್ನು ಬೇರೆ ಬೇರೆ ಹೆಸರುಗಳಿಂದ ಹುಟ್ಟು ಹಾಕುವ ಬದಲು ಇರುವ ಯೋಜನೆಗಳನ್ನೇ ಇನ್ನಷ್ಟು ಬಿಗಿಗೊಳಿಸಿ ಅವಶ್ಯವಿರುವ ಬದಲಾವಣೆಗಳೊಂದಿಗೆ ತಿದ್ದುಪಡಿ ಮಾಡುವ ಅಗತ್ಯವಿದೆ. ಹಾಗೆಯೇ ತಮಗಾಗಿ ಯೋಜಿತಗೊಂಡ ಯೋಜನೆಗಳ ಕುರಿತು ಎಷ್ಟೋ ಜನರಿಗೆ ಅರಿವು ಇರುವುದಿಲ್ಲ. ಸಾರ್ವಜನಿಕರಿಗೆ ಈ ಯೋಜನೆಯ ಕುರಿತು ಅರಿವು ಮೂಡಿಸುವುದೂ ಅಷ್ಟೇ ಅವಶ್ಯವಿದೆ.
‘ಅಕ್ಕ’ ಪಡೆಯ ವಾಹನ ಕೇವಲ ಗಸ್ತು ತಿರುಗುವುದರಿಂದ ಅಪರಾಧಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗದು. ಆಯಕಟ್ಟಿನ ಸ್ಥಳಗಳಲ್ಲಿ ಸದಾ ಬೀಟ್ ಮಾಡುವುದರಿಂದ ಅಪರಾಧಿ ಪ್ರವೃತ್ತಿಯವರು ಅಪರಾಧವನ್ನೆಸಗಲು ಭಯ ಪಡುತ್ತಾರೆ. ಅಲ್ಲದೆ ಈ ಪಡೆ ಕರ್ತವ್ಯ ನಿರ್ವಹಿಸುವ ಅವಧಿ ಬೆಳಗಿನ ಏಳು ಗಂಟೆಯಿಂದ ರಾತ್ರಿ ಎಂಟು ಗಂಟೆಗೆ ನಿಗದಿ ಪಡಿಸಲಾಗಿದೆ. ಆದರೆ ಇಂದಿನ ದಿನಗಳಲ್ಲಿ ದುಡಿಯಲು ಹೋದ ಮಹಿಳೆಯರು ರಾತ್ರಿ ಎಂಟು ಗಂಟೆಯ ನಂತರವೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಾರೆ. ಕೆಲ ಹೆಣ್ಣು ಮಕ್ಕಳು ರಾತ್ರಿ ಪಾಳಿ ಮುಗಿಸಿ ತಡ ರಾತ್ರಿಯಲ್ಲಿ ಮನೆಗೆ ಮರಳುತ್ತಾರೆ. ರಾತ್ರಿ ಎಂಟರ ನಂತರವೇ ಮಹಿಳೆಯರು ಅಸುರಕ್ಷತೆಯ ಭಾವವನ್ನು ಅನುಭವಿಸುತ್ತಾರೆ ಹಾಗೂ ದೌರ್ಜನ್ಯಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಅಕ್ಕ ಪಡೆಯ ಕೆಲಸದ ಅವಧಿಯನ್ನು ರಾತ್ರಿ ಎಂಟರ ಬದಲು ರಾತ್ರಿ ಹನ್ನೆರಡು ಗಂಟೆಗೆ ವಿಸ್ತರಿಸುವುದು ಉಚಿತ.
ನೂರಾರು ಕೋಟಿ ಹಣವನ್ನು ಈ ಯೋಜನೆಗೆ ವ್ಯಯಿಸಲಾಗುತ್ತಿದ್ದು, ಅದರ ಉದ್ದೇಶ ಸರಿಯಾದ ರೂಪದಲ್ಲಿ ಕಾರ್ಯರೂಪಕ್ಕೆ ಬರಬೇಕಿದೆ. ಮಹಿಳೆಯರು ಕೂಡ ಈ ಯೋಜನೆಯ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಇಲ್ಲದೇ ಹೋದಲ್ಲಿ ಹತ್ತರ ಜೊತೆ ಹನ್ನೊಂದು ಎನ್ನುವಂತೆ ಈ ಯೋಜನೆ ಅನುಪಯುಕ್ತವಾಗಬಹುದು.







