ಇ.ಎಸ್.ಟಿ.ಐ.ಸಿ. 2026: 'ವಿಕಸಿತ ಭಾರತ'ದ ಆಕಾಂಕ್ಷೆಗಳೊಂದಿಗೆ ವಿಜ್ಞಾನವನ್ನು ಜೋಡಿಸುತ್ತದೆ

Photo: estic2026.in
“ಸಾಮಾಜಿಕ ಪರಿವರ್ತನೆಗೆ ಅಗತ್ಯವಾದ ಪ್ರಮುಖ ಅಂಶವು ಮುಖ್ಯವಾಗಿ ವಿಜ್ಞಾನದಿಂದಲೇ ಬರುತ್ತದೆ.”
2006ರ ಫೆಬ್ರವರಿ 28ರಂದು, ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಈ ಮಾತುಗಳನ್ನು ಹೇಳಿದ್ದರು.
ಸುಮಾರು ಎರಡು ದಶಕಗಳ ನಂತರ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ‘ವಿಕಸಿತ ಭಾರತ’ದತ್ತ ಸಾಗುತ್ತಿರುವಾಗ ತಂತ್ರಜ್ಞಾನ ಆಧಾರಿತ ಈ ಪ್ರಯತ್ನವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಮತ್ತು ಎಲ್ಲರಿಂದಲೂ ಮನ್ನಣೆ ಪಡೆದಿದೆ; ಇದು ಡಾ. ಕಲಾಂ ಅವರ ಮಾತುಗಳು ಅಕ್ಷರಶಃ ಮತ್ತು ಭಾವಾರ್ಥದಲ್ಲಿ ಎಷ್ಟು ಸಮರ್ಥನೀಯ ಸತ್ಯವಾಗಿದ್ದವು ಎಂಬುದನ್ನು ಸಾಬೀತುಪಡಿಸುತ್ತದೆ.
ವಿಜ್ಞಾನವು ಕೇವಲ ನಾವು ಕಂಡುಕೊಳ್ಳುವ, ಅನ್ವೇಷಿಸುವ ವಿಷಯಗಳಿಗಷ್ಟೇ ಸೀಮಿತವಾಗಿ ಮಹತ್ವ ಪಡೆಯುವುದಲ್ಲ, ಬದಲಾಗಿ ಆ ಆವಿಷ್ಕಾರಗಳು ನಮ್ಮ ಜನರಿಗೆ ಯಾವೆಲ್ಲಾ ಸಾಧ್ಯತೆಗಳನ್ನು ಒದಗಿಸುತ್ತವೆ ಎಂಬ ಕಾರಣಕ್ಕೂ ಮಹತ್ವದ್ದಾಗಿದೆ. ವೈಜ್ಞಾನಿಕ ಪ್ರಗತಿಯ ನಿಜವಾದ ಮೌಲ್ಯವಿರುವುದು ಜನರ ಜೀವನವನ್ನು ಸುಧಾರಿಸುವ, ಸಮಸ್ಯೆಗಳನ್ನು ಪರಿಹರಿಸುವ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವ ಅದರ ಸಾಮರ್ಥ್ಯದಲ್ಲಿ.
ಭಾರತವು ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿರುವಾಗ, ಅಭಿವೃದ್ಧಿ ಹೊಂದಿದ ರಾಷ್ಟ್ರದ ಆಕಾಂಕ್ಷೆಗಳು ಆರ್ಥಿಕ ಬೆಳವಣಿಗೆ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಮೀರಿ ವಿಸ್ತರಿಸುತ್ತವೆ. ಇವುಗಳಲ್ಲಿ ಉತ್ತಮ ಆರೋಗ್ಯ ಸೇವೆ, ಹೆಚ್ಚು ಉತ್ಪಾದಕ ಕೃಷಿ, ಬಲವಾದ ಕೈಗಾರಿಕೆಗಳು, ಯುವಜನರಿಗೆ ಹೆಚ್ಚಿನ ಅವಕಾಶಗಳು ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಜೀವನಮಟ್ಟವನ್ನು ಕಲ್ಪಿಸುವುದು ಸೇರಿವೆ.
ಈ ಪ್ರತಿಯೊಂದು ಆಕಾಂಕ್ಷೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಒಂದು ಪಾತ್ರವನ್ನು ವಹಿಸುತ್ತದೆ. ನಾವು ಸೃಷ್ಟಿಸುವ ಜ್ಞಾನವು ಅರ್ಥಪೂರ್ಣ ಬದಲಾವಣೆಗೆ ಒಂದು ಶಕ್ತಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕಾರ್ಯವಾಗಿದೆ.
ಇದು ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ (ಇ.ಎಸ್.ಟಿ.ಐ.ಸಿ) 2026ರ ವಿಸ್ತ್ರತ ಉದ್ದೇಶವಾಗಿದೆ. ಈಗ ಅದರ ಎರಡನೇ ಆವೃತ್ತಿಯು, ಇ.ಎಸ್.ಟಿ.ಐ.ಸಿ 2025 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸಂವಾದವನ್ನು ಆಧರಿಸಿದೆ ಮತ್ತು ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ನಾವೀನ್ಯತೆ ಮತ್ತು ಪ್ರಾಯೋಗಿಕ ಅನ್ವಯಿಕೆಯ ನಡುವಿನ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತದೆ. ಇದು ವಿಜ್ಞಾನಿಗಳು, ನೀತಿ ನಿರೂಪಕರು, ಉದ್ಯಮ ನಾಯಕರು, ಸ್ಟಾರ್ಟ್-ಅಪ್ಗಳು ಮತ್ತು ಯುವ ಸಂಶೋಧಕರನ್ನು ಹಂಚಿಕೆಯ ರಾಷ್ಟ್ರೀಯ ಮಹತ್ವಾಕಾಂಕ್ಷೆಯ ಸುತ್ತ ಒಟ್ಟುಗೂಡಿಸುತ್ತದೆ.
ನಮ್ಮ ಮುಂದಿರುವ ಅತ್ಯಂತ ಪ್ರಮುಖ ಪ್ರಶ್ನೆಗಳಲ್ಲಿ ಕೆಲವು, ತಕ್ಷಣವೇ ಗಮನಹರಿಸಬೇಕಾದಂತಹವುಗಳಾಗಿವೆ. ವೈಜ್ಞಾನಿಕ ಪ್ರಗತಿಗಳು ರೈತರಿಗೆ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಹೇಗೆ ಸಹಾಯ ಮಾಡಬಲ್ಲವು? ಸಂಶೋಧನೆಯ ಮೂಲಕ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮತ್ತು ಪರಿಣಾಮಕಾರಿಯಾಗಿಸುವುದು ಹೇಗೆ? ಭಾರತೀಯ ಕೈಗಾರಿಕೆಗಳು ಮುಂದುವರಿದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಹಾಗೂ ಪ್ರಮುಖ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹೇಗೆ ಸಾಧ್ಯ? ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಹೇಗೆ?
ಇವು ಯಾವುದೇ ಒಂದು ಸಂಸ್ಥೆ ಅಥವಾ ವಿಭಾಗವು ಸ್ವಂತವಾಗಿ ಉತ್ತರಿಸಬಹುದಾದ ಪ್ರಶ್ನೆಗಳಲ್ಲ. ವಿಜ್ಞಾನಿಗಳು ಉದ್ಯಮದೊಂದಿಗೆ ತೊಡಗಿಸಿಕೊಳ್ಳುವುದು, ಸಂಶೋಧಕರು ಪ್ರಾಯೋಗಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದನ್ನು ಮತ್ತು ಭರವಸೆದಾಯಕ ಚಿಂತನೆಗಳನ್ನು ಪರೀಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಸೃಷ್ಟಿಸುವ ನೀತಿ ನಿರೂಪಕರನ್ನು ಅವು ಬಯಸುತ್ತವೆ.
ಇ.ಎಸ್.ಟಿ.ಐ.ಸಿ 2026 ಈ ಅಗತ್ಯವನ್ನು 12 ವಿಷಯಾಧಾರಿತ ಕ್ಷೇತ್ರಗಳ ಮೂಲಕ ಪರಿಹರಿಸುತ್ತದೆ, ಇದರಲ್ಲಿ ಮುಂದುವರಿದ ಆಧುನಿಕ ಉತ್ಪಾದನೆ, ಇಂಧನ ತಂತ್ರಜ್ಞಾನಗಳು, ಜೈವಿಕ ತಂತ್ರಜ್ಞಾನ, ಸಾಗರ ವಿಜ್ಞಾನ ಮತ್ತು ಕಡಲ ತಂತ್ರಜ್ಞಾನಗಳು, ಕ್ವಾಂಟಮ್ ಸಂವಹನ, ಅರೆವಾಹಕಗಳು, ಕೃಷಿ-ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಮುಂದುವರಿದ ಆಧುನಿಕ ಆರೋಗ್ಯ ರಕ್ಷಣೆ, ತಲ್ಲೀನಗೊಳಿಸುವ ತಂತ್ರಜ್ಞಾನಗಳು ಮತ್ತು ಬಾಹ್ಯಾಕಾಶ ವಿಜ್ಞಾನ ಸೇರಿವೆ.
ಈ ಪ್ರತಿಯೊಂದು ಕ್ಷೇತ್ರಗಳು ಪ್ರಯೋಗಾಲಯವನ್ನು ಮೀರಿ ವಿಸ್ತರಿಸುವ ಸಾಧ್ಯತೆಗಳನ್ನು ಹೊಂದಿವೆ. ಅರೆವಾಹಕಗಳಲ್ಲಿನ ಪ್ರಗತಿಗಳು ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸಬಹುದು. ಜೈವಿಕ ತಂತ್ರಜ್ಞಾನದಲ್ಲಿನ ಸಂಶೋಧನೆಯು ಆರೋಗ್ಯ ರಕ್ಷಣೆ ಮತ್ತು ಉತ್ಪಾದನೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯಬಹುದು. ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ನಲ್ಲಿನ ಬೆಳವಣಿಗೆಗಳು ಕೈಗಾರಿಕಾ ಪ್ರಕ್ರಿಯೆಗಳನ್ನು ಪರಿವರ್ತಿಸಬಹುದು, ಜೊತೆಗೆ ಕೃಷಿ ಮತ್ತು ಇಂಧನದಲ್ಲಿನ ವೈಜ್ಞಾನಿಕ ಕೆಲಸವು ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರ ಅಭ್ಯಾಸಗಳಿಗೆ ಕೊಡುಗೆ ನೀಡಬಹುದು.
ಸಾಧ್ಯತೆಯಿಂದ ಅನ್ವಯಕತೆಯತ್ತ ಚಲಿಸುವುದು ಸವಾಲು. ವೈಜ್ಞಾನಿಕ ಪ್ರಗತಿಗೆ ವರ್ಷಗಳ ಸಂಶೋಧನೆ ಬೇಕಾಗಬಹುದು, ಆದರೆ ಅದನ್ನು ದೈನಂದಿನ ಬಳಕೆಗೆ ತರಲು ಹೆಚ್ಚಾಗಿ ಹೆಚ್ಚಿನ ಪರೀಕ್ಷೆ, ಹೂಡಿಕೆ, ಎಂಜಿನಿಯರಿಂಗ್ ಮತ್ತು ಸಹಯೋಗದ ಅಗತ್ಯವಿರುತ್ತದೆ. ಮೊದಲ ಸಂಶೋಧನಾ ಪ್ರಶ್ನೆಯಿಂದ ಹಿಡಿದು ಸ್ಪಷ್ಟ ಪ್ರಯೋಜನಗಳನ್ನು ನೀಡುವ ತಂತ್ರಜ್ಞಾನದವರೆಗಿನ ಈ ಸಂಪೂರ್ಣ ಪ್ರಯಾಣವನ್ನು ನಾವು ಬಲಪಡಿಸಬೇಕು.
ಭಾರತದ ವೈಜ್ಞಾನಿಕ ಮಹತ್ವಾಕಾಂಕ್ಷೆಗಳು ಅಂತಿಮವಾಗಿ ಅದರ ಯುವ ಜನರ ಪ್ರತಿಭೆ ಮತ್ತು ಕಲ್ಪನೆಯ ಮೇಲೆ ಅವಲಂಬಿತವಾಗಿರುತ್ತವೆ. ಭರವಸೆದಾಯಕ ಕಲ್ಪನೆಯನ್ನು ಹೊಂದಿರುವ ಯುವ ಸಂಶೋಧಕನಿಗೆ ಅದನ್ನು ಪ್ರಸ್ತುತಪಡಿಸಲು, ಅನುಭವಿ ವಿಜ್ಞಾನಿಗಳಿಂದ ಕಲಿಯಲು ಮತ್ತು ಅದನ್ನು ಉಪಯುಕ್ತವಾಗಿ ಪರಿವರ್ತಿಸಲು ಸಹಾಯ ಮಾಡುವವರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವಿರಬೇಕು.
ಇ.ಎಸ್.ಟಿ.ಐ.ಸಿ 2026 "ಫ್ರಾಂಟಿಯರ್ಸ್ ಇನ್ ಫೋಕಸ್" ಸೆಷನ್ಗಳು ಮತ್ತು "ಯಂಗ್ ರಿಸರ್ಚರ್ಸ್ ಅಂಡ್ ಇನ್ನೋವೇಟರ್ಸ್ ಪಿಚ್ ಕಾರ್ನರ್" ಮೂಲಕ ಈ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ. "ನೆಕ್ಸ್ಟ್-ಜನ್ ಡಿಸ್ಕವರಿ ಎಕ್ಸ್ ಪೋ" ಭಾರತದ ಸಂಶೋಧನಾ ಸಾಮರ್ಥ್ಯಗಳು ಮತ್ತು ಉದಯೋನ್ಮುಖ ಡೀಪ್-ಟೆಕ್ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸುತ್ತದೆ, ಜೊತೆಗೆ "ಇನ್ನೋವೇಷನ್ ಎಕ್ಸ್ ಚೇಂಜ್ ಹಬ್" ತಂತ್ರಜ್ಞಾನಗಳು ಮತ್ತು ಸಂಭಾವ್ಯ ಸಹಯೋಗಗಳ ಸುತ್ತ ಸಂವಹನವನ್ನು ಸುಗಮಗೊಳಿಸುತ್ತದೆ.
ವೈಜ್ಞಾನಿಕ ಸಂಶೋಧನೆ ಮತ್ತು ಉದ್ಯಮಶೀಲತೆ ಒಂದಕ್ಕೊಂದು ಪೂರಕವಾಗಿರಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಡೀಪ್-ಟೆಕ್ ಉದ್ಯಮಗಳಿಗೆ ಮಾರುಕಟ್ಟೆಗೆ ತಂತ್ರಜ್ಞಾನವನ್ನು ತರುವ ಮೊದಲು ವಿಶೇಷ ಮೂಲಸೌಕರ್ಯ, ತಾಳ್ಮೆಯ ಹೂಡಿಕೆ ಮತ್ತು ನಿರಂತರ ಸಹಯೋಗದ ಅಗತ್ಯವಿರುತ್ತದೆ.
ಸಂಶೋಧನಾ ಸಂಸ್ಥೆಗಳು ವೈಜ್ಞಾನಿಕ ಪರಿಣತಿಯನ್ನು ಹೊಂದಿರುತ್ತವೆ; ನವೋದ್ಯಮಗಳು ಉದ್ಯಮಶೀಲತಾ ಶಕ್ತಿಯನ್ನು ತರುತ್ತವೆ; ಉದ್ಯಮವು ಉತ್ಪಾದನಾ ಅವಶ್ಯಕತೆಗಳು ಮತ್ತು ಮಾರುಕಟ್ಟೆ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ; ಮತ್ತು ಹೂಡಿಕೆದಾರರು ಪ್ರಯಾಣಕ್ಕೆ ಹಣಕಾಸು ಒದಗಿಸಲು ಸಹಾಯ ಮಾಡಬಹುದು. ಈ ಸಾಮರ್ಥ್ಯಗಳು ಒಟ್ಟಿಗೆ ಸೇರಿದಾಗ, ಸಂಶೋಧನೆಯನ್ನು ಉಪಯುಕ್ತ ಉತ್ಪನ್ನಗಳು ಮತ್ತು ಸೇವೆಗಳಾಗಿ ಪರಿವರ್ತಿಸುವ ನಿರೀಕ್ಷೆಗಳು ಸುಧಾರಿಸುತ್ತವೆ.
ಇ.ಎಸ್.ಟಿ.ಐ.ಸಿ 2026 ಇಂತಹ ಪಾಲುದಾರಿಕೆಗಳನ್ನು ಪ್ರೋತ್ಸಾಹಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಇದರ ತಾಂತ್ರಿಕ ಅಧಿವೇಶನಗಳು ಮತ್ತು ಪ್ರದರ್ಶನಗಳು ಕೇವಲ ಸಾಧನೆಗಳನ್ನು ಪ್ರದರ್ಶಿಸುವ ಉದ್ದೇಶವನ್ನಷ್ಟೇ ಹೊಂದಿಲ್ಲ; ಬದಲಾಗಿ, ಸಹಯೋಗಕ್ಕೆ ದಾರಿ ಮಾಡಿಕೊಡುವಂತಹ ವಿನಿಮಯಗಳಿಗೆ ವೇದಿಕೆಯಾಗುವ ಗುರಿಯನ್ನೂ ಹೊಂದಿವೆ.
'ವಿಕಸಿತ ಭಾರತ @2047'ರ ಪಯಣವನ್ನು ಕೇವಲ ಸರ್ಕಾರವೊಂದೇ ರೂಪಿಸಲು ಸಾಧ್ಯವಿಲ್ಲ, ಹಾಗೆಯೇ ಕೇವಲ ಪ್ರತ್ಯೇಕವಾಗಿ ವೈಜ್ಞಾನಿಕ ಸಂಶೋಧನೆಗಳ ಮೂಲಕವಷ್ಟೇ ಇದನ್ನು ಸಾಧಿಸಲಾಗದು. ಇದಕ್ಕೆ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕೈಗಾರಿಕಾ ವಲಯ, ಉದ್ಯಮಿಗಳು ಮತ್ತು ಯುವ ಆವಿಷ್ಕಾರಕರ ಸಂಘಟಿತ ಪ್ರಯತ್ನಗಳ ಅಗತ್ಯವಿದೆ.
ವಿಜ್ಞಾನವು ಅಂತಿಮವಾಗಿ ಸಮಾಜದ ಸೇವೆಗೆ ಮೀಸಲಾಗಿರಬೇಕು ಎಂಬುದನ್ನು ಡಾ. ಕಲಾಂ ಅವರ ಮಾತುಗಳು ನಮಗೆ ನಿರಂತರವಾಗಿ ನೆನಪಿಸುತ್ತವೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದತ್ತ ನಾವು ಸಾಗುತ್ತಿರುವಾಗ, ನಮ್ಮ ಯಶಸ್ಸು ಕೇವಲ ನಾವು ಕಂಡುಕೊಳ್ಳುವ ಆವಿಷ್ಕಾರಗಳ ಮೇಲೆ ಮಾತ್ರವಲ್ಲದೆ, ಆ ಆವಿಷ್ಕಾರಗಳು ಜನರ ಜೀವನದಲ್ಲಿ ಉಂಟುಮಾಡುವ ಬದಲಾವಣೆಯ ಮೇಲೆಯೂ ಅವಲಂಬಿತವಾಗಿರುತ್ತದೆ. ಇ.ಎಸ್.ಟಿ.ಐ.ಸಿ 2026ರ ಹಿಂದಿರುವ ವಿಶಾಲ ಆಶಯವೂ ಇದೇ ಆಗಿದೆ. ಭಾರತದ ವೈಜ್ಞಾನಿಕ ಸಾಮರ್ಥ್ಯಗಳನ್ನು ಜನರ ಅಗತ್ಯಗಳಿಗೆ ಹತ್ತಿರವಾಗಿಸುವುದು ಮತ್ತು ನಾವೀನ್ಯತೆಯ ಭರವಸೆಯನ್ನು ರಾಷ್ಟ್ರದ ಪ್ರಗತಿಯನ್ನಾಗಿ ಪರಿವರ್ತಿಸುವುದು.






