ಎಥೆನಾಲ್ ಮಿಶ್ರಿತ ಇಂಧನ: ವಾಹನಿಗರ ಕಿಸೆಗೆ ಕನ್ನ?

ಈಗ ದೇಶಾದ್ಯಂತ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ಪರಿಶುದ್ಧ ಇಂಧನಕ್ಕೆ ಉತ್ತೇಜನ ನೀಡುವ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಿರ್ಧಾರದ ಭಾಗವಾಗಿ ಎಥೆನಾಲ್ ಮಿಶ್ರಿತ ಇಂಧನಕ್ಕೆ ಒತ್ತು ನೀಡಲಾಗುತ್ತಿದೆ. ಎಥೆನಾಲ್ ಎನ್ನುವುದು ಕೃಷಿ ಉತ್ಪನ್ನಗಳು ಮತ್ತು ಜೈವಿಕ ತ್ಯಾಜ್ಯದಿಂದ ಉತ್ಪಾದನೆಯಾಗುವ ಜೈವಿಕ ಇಂಧನವಾಗಿದೆ.
ಸರಕಾರದ ಈ ಕ್ರಮವು ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಭಾರತದ 16 ಬಿಲಿಯ ಡಾಲರ್ (ಸುಮಾರು 1.51 ಲಕ್ಷ ಕೋಟಿ ರೂಪಾಯಿ)ಗೂ ಅಧಿಕ ವಿದೇಶಿ ವಿನಿಮಯವನ್ನು ಉಳಿಸಿದೆ ಎಂದು ಸರಕಾರದ ಅಧಿಕೃತ ಅಂಕಿಅಂಶಗಳು ಹೇಳುತ್ತವೆ. ಅಂದರೆ, ಭಾರತದ ಕಚ್ಚಾತೈಲ ಆಮದಿನಲ್ಲಿ 2.45 ಕೋಟಿ ಮೆಟ್ರಿಕ್ ಟನ್ ಕಡಿತವಾಗಿದೆ.
ಕಳೆದ ವರ್ಷ, ದೇಶಾದ್ಯಂತದ ಸುಮಾರು 90,000 ಪೆಟ್ರೋಲ್ ಪಂಪ್‌ಗಳಲ್ಲಿ ಎಥೆನಾಲ್ ಮಿಶ್ರಿತ ‘ಇ20 ಪೆಟ್ರೋಲ್’ ಏಕೈಕ ಇಂಧನ ಆಯ್ಕೆಯಾದಾಗ, ಅದು ತಮ್ಮ ಹಳೆಯ ವಾಹನಗಳ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಾಹನಿಗರು ಚಿಂತಿತರಾದರು. ಆಗ ವಕೀಲ ಅಕ್ಷಯ್ ಮಲ್ಹೋತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದನ್ನು ಸಲ್ಲಿಸಿ, ಎಥೆನಾಲ್ ಮುಕ್ತ ಪೆಟ್ರೋಲ್ ಮತ್ತು ಡೀಸೆಲ್ ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವಂತೆ ಪೆಟ್ರೋಲಿಯಂ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು. ಜೊತೆಗೆ, ಇಂಧನ ಹಾಕುವಾಗ ಗ್ರಾಹಕರ ವಾಹನಗಳು ಎಥೆನಾಲ್‌ಗೆ ಹೊಂದಿಕೊಳ್ಳುತ್ತವೆಯೇ ಎಂಬ ಬಗ್ಗೆಯೂ ಅವರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡುವಂತೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು.
ಆದರೆ, ದೇಶದ ಪರಮೋಚ್ಚ ನ್ಯಾಯಾಲಯವು ಆ ಅರ್ಜಿಯನ್ನು ತಿರಸ್ಕರಿಸಿತು. ಇ20 ಇಂಧನವು ಚೆನ್ನಾಗಿ ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿದೆ ಹಾಗೂ ಅದರಿಂದ ಕಬ್ಬು ಬೆಳೆಯುವ ರೈತರಿಗೂ ಪ್ರಯೋಜನವಾಗುತ್ತದೆ ಎಂದು ಹೇಳಿತು.
ಇಂಧನ ಸ್ವಾವಲಂಬನೆ ಮತ್ತು ಸುಸ್ಥಿರ ಬೆಳವಣಿಗೆಗೆ ಇ20 ಇಂಧನಕ್ಕೆ ಪರಿವರ್ತನೆಯಾಗುವುದು ಅನಿವಾರ್ಯವೇ ಎಂಬ ಬಗ್ಗೆ ಪರಿಸರವಾದಿಗಳು ಮತ್ತು ಕೈಗಾರಿಕಾ ಕ್ಷೇತ್ರದ ಪರಿಣತರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸುವುದು ಎಂದರೆ ವಾಹನಗಳಿಗೆ ಬೇರೆಯದೇ ಆದ ಇಂಧನ ವ್ಯವಸ್ಥೆಯೊಂದನ್ನು ಸೃಷ್ಟಿಸಿದಂತೆ ಎಂದು ಹೊಸದಿಲ್ಲಿಯ ಸರಕಾರೇತರ ಸಂಘಟನೆ ಸೆಂಟರ್ ಫಾರ್ ಸಯನ್ಸ್ ಆಂಡ್ ಎನ್‌ವಯರ್ನ್‌ಮೆಂಟ್‌ನ ಸಂಶೋಧನೆ ವಿಭಾಗದ ಕಾರ್ಯಕಾರಿ ನಿರ್ದೇಶಕಿ ಅನುಮಿತಾ ರಾಯ್‌ಚೌಧರಿ ಹೇಳುತ್ತಾರೆ.
‘‘ಇದಕ್ಕೆ, ವಾಹನದಿಂದ ಹೊರಬೀಳುವ ಹೊಗೆಯ ಮೇಲೆ ಎಥೆನಾಲ್ ಮಿಶ್ರಿತ ಇಂಧನ ಬೀರುವ ಸಂಭಾವ್ಯ ಪರಿಣಾಮಗಳ ಬಗ್ಗೆ ವಿವರವಾದ ಮತ್ತು ಸೂಕ್ಷ್ಮ ಅಧ್ಯಯನದ ಅಗತ್ಯವಿದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.
‘‘ಕಳಪೆ ಇಂಧನ ನಿರ್ವಹಣೆ (ಮೈಲೇಜ್ ಕುಸಿಯುವುದು), ಚಾಲನೆಯಲ್ಲಿರುವ ವಾಹನಗಳು ಸವೆಯುವುದು ಮತ್ತು ತುಕ್ಕು ಹಿಡಿಯುವುದು ಹಾಗೂ ಆಹಾರ ಭದ್ರತೆಯ ಮೇಲೆ ಪರಿಣಾಮಗಳು (ಯಾಕೆಂದರೆ ಆಹಾರ ಪದಾರ್ಥಗಳೇ ಈ ಇಂಧನದ ಪ್ರಾಥಮಿಕ ಮೂಲವಾಗಿದೆ) ಎಥೆನಾಲ್ ಮಿಶ್ರಿತ ಇಂಧನದ ಪ್ರಮುಖ ವ್ಯತಿರಿಕ್ತ ಪರಿಣಾಮಗಳಾಗಿವೆ’’ ಎಂದು ರಾಯ್‌ಚೌಧರಿ ಹೇಳುತ್ತಾರೆ.
ಎಥೆನಾಲ್ ಇಂಧನದ ಉದ್ದೇಶ ಇಂಧನ ಭದ್ರತೆಯನ್ನು ಬಲಪಡಿಸುವುದಾದರೂ, ಅನುದ್ದೇಶಿತ ಪರಿಣಾಮಗಳನ್ನು ನಿವಾರಿಸಲು ಅದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
ಇ20 ಇಂಧನದಲ್ಲಿ ವ್ಯಾಪಕ ಸಮಸ್ಯೆಗಳು
ಕಳೆದ ವರ್ಷ ದೇಶಾದ್ಯಂತ 37,000ಕ್ಕೂ ಅಧಿಕ ಪೆಟ್ರೋಲ್ ವಾಹನಗಳ ಮಾಲಕರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. 2022ರಲ್ಲಿ ಅಥವಾ ಅದಕ್ಕಿಂತಲೂ ಮೊದಲು ಖರೀದಿಸಲಾದ ವಾಹನಗಳ ಪೈಕಿ ಶೇ. 28 ವಾಹನಗಳು 2025ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸವೆತ ಮತ್ತು ದುರಸ್ತಿಗೆ ಒಳಗಾಗಿರುವುದು ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿತು. ಮುಖ್ಯವಾಗಿ ಇಂಜಿನ್, ಇಂಧನ ಕೊಳವೆಗಳು, ಟ್ಯಾಂಕ್‌ಗಳು ಮತ್ತು ಕಾರ್ಬ್ಯುರೇಟರ್‌ಗಳು ಹೆಚ್ಚಿನ ಪ್ರಮಾಣದ ಸವೆತಕ್ಕೆ ಒಳಗಾಗಿದ್ದವು.
ಅದೂ ಅಲ್ಲದೆ, 2022ರಲ್ಲಿ ಅಥವಾ ಅದಕ್ಕಿಂತಲೂ ಮೊದಲು ಖರೀದಿಸಲಾಗಿರುವ ಮೂರನೇ ಎರಡರಷ್ಟು ವಾಹನಗಳ ಇಂಧನ ಕ್ಷಮತೆ ಕುಸಿದಿದೆ ಎನ್ನುವುದೂ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
‘‘ಎಥೆನಾಲ್ ವಾಹನಗಳಿಗೆ ಹೊಂದಿಕೆಯಾಗುವ ಇಂಧನ ಎನ್ನುವುದು ಸಮರ್ಪಕವಾಗಿ ಸಾಬೀತಾಗಿದೆ. ಆದರೆ, ವಾಹನಗಳ ಇಂಧನ ಕೊಳವೆಯಲ್ಲಿ ರಬ್ಬರ್ ಭಾಗಗಳು ಇರಬಾರದು. ಯಾಕೆಂದರೆ ಇವುಗಳನ್ನು ಎಥೆನಾಲ್ ಕರಗಿಸಬಲ್ಲದು’’ ಎಂದು ವಾಹನ ಕ್ಷೇತ್ರದ ಪರಿಣತ ಮುರಾದ್ ಅಲಿ ಬೇಗ್ ಹೇಳುತ್ತಾರೆ. ಎಥೆನಾಲ್ ಸಾಮಾನ್ಯ ಪೆಟ್ರೋಲಿಯಂ ಇಂಧನಕ್ಕಿಂತ 30 ಶೇ. ಕಡಿಮೆ ಶಕ್ತಿಯನ್ನು ಉತ್ಪಾದಿಸುತ್ತದೆ. ‘‘ಹಾಗಾಗಿ, ವಾಹನಗಳ ವೇಗವನ್ನು ಹೆಚ್ಚಿಸುವಾಗ ಸಮಸ್ಯೆ ತಲೆದೋರಬಹುದು ಹಾಗೂ ಕಾರುಗಳು ಕಡಿಮೆ ಶಕ್ತಿಯನ್ನು ಹೊಂದುತ್ತವೆ’’ ಎಂದು ಅವರು ಹೇಳುತ್ತಾರೆ.
ಸುರಕ್ಷಿತ, ಹಸಿರು ಭವಿಷ್ಯಕ್ಕೆ ಇ20 ಅಗತ್ಯವೇ?
ಇತರ ದೇಶಗಳಲ್ಲಿ ಎಥೆನಾಲ್ ಇಂಧನ ಯಶಸ್ವಿಯಾಗಿರುವುದರತ್ತ ಭಾರತದಲ್ಲಿ ಇದನ್ನು ಅನುಷ್ಠಾನಕ್ಕೆ ತಂದವರು ಬೆಟ್ಟುಮಾಡುತ್ತಾರೆ. ಉದಾಹರಣೆಗೆ; ಬ್ರೆಝಿಲ್‌ನ ಎಥೆನಾಲ್ ಇಂಧನ ಕಾರ್ಯಕ್ರಮ ಆರಂಭದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು ಎಂದು ಅವರು ಹೇಳುತ್ತಾರೆ. ಅದನ್ನು ಮುಖ್ಯವಾಗಿ ತಾಂತ್ರಿಕ ಸುಧಾರಣೆಗಳ ಮೂಲಕ ಸರಿಪಡಿಸಲಾಯಿತು. ಆದರೆ, ಈಗ ಬ್ರೆಝಿಲ್ ಇಂಧನ ಕ್ಷೇತ್ರದಲ್ಲಿ ಪ್ರತೀ ವರ್ಷ 10ರಿಂದ 15 ಬಿಲಿಯ ಡಾಲರ್ (ಸುಮಾರು 94,675 ಕೋಟಿಯಿಂದ 1.42 ಲಕ್ಷ ಕೋಟಿ ರೂಪಾಯಿ)ವರೆಗೆ ಉಳಿತಾಯ ಮಾಡುತ್ತಿದೆ.
‘‘ಪ್ರಸಕ್ತ ಜಾಗತಿಕ ವಿದ್ಯಮಾನದಲ್ಲಿ, ಇಂಥ ಕ್ರಮಗಳ ಮೂಲಕ ಸ್ವಾವಲಂಬನೆ ಮತ್ತು ಇಂಧನ ಭದ್ರತೆಯತ್ತ ಮುನ್ನಡೆಯುತ್ತಿರುವ ದೇಶಗಳನ್ನು ವೈಯಕ್ತಿಕ ಮತ್ತು ರಾಜಕೀಯ ನಿಲುವುಗಳನ್ನು ಮೀರಿ ಬೆಂಬಲಿಸಬೇಕಾಗಿದೆ’’ ಎಂದು ಹೊಗೆ ನಿಯಂತ್ರಣ ಸಲಕರಣೆಗಳ ಉತ್ಪಾದಕರ ಸಂಘದ ನೀಲಕಂಠ ಮರಾಠೆ ಹೇಳುತ್ತಾರೆ.
ಆದರೂ, ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ, ಅಂದರೆ ಸಾಮಾನ್ಯವಾಗಿ ಶೇ. 15ಕ್ಕೂ ಅಧಿಕ ಪ್ರಮಾಣದಲ್ಲಿ ಮಿಶ್ರಣ ಮಾಡುವಾಗ ತಾಂತ್ರಿಕ ಸಮಸ್ಯೆಗಳು ತಲೆದೋರುವುದನ್ನು ಅವರು ಒಪ್ಪಿಕೊಂಡರು.
‘‘ಎಥೆನಾಲ್ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅದು ಸಂಬಂಧಿತ ಇಂಜಿನ್ ಭಾಗಗಳ ಸವೆತಕ್ಕೆ ಹಾಗೂ ಸೀಲ್‌ಗಳು ಮತ್ತು ಗ್ಯಾಸ್ಕೆಟ್‌ಗಳ ಬಿಗಿತಕ್ಕೆ ಕಾರಣವಾಗಬಹುದು. ಇದು ಸೋರಿಕೆ ಮತ್ತು ಒತ್ತಡ ನಷ್ಟಕ್ಕೆ ಕಾರಣವಾಗಬಹುದು. ಇದು ಅಂತಿಮವಾಗಿ ಇಂಜಿನ್ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ’’ ಎಂದು ಅವರು ಹೇಳಿದರು. ಸರಿಹೊಂದುವ ದರ್ಜೆಯ ವಸ್ತುಗಳಿಂದ ತಯಾರಿಸಿದ ಬಿಡಿಭಾಗಗಳನ್ನು ವಾಹನಗಳಿಗೆ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ವಿದ್ಯುತ್ ಚಾಲಿತ ವಾಹನಗಳೇ ಆಸರೆ
ಶೇ. 20 ಎಥೆನಾಲ್ ಮಿಶ್ರಿತ ಇಂಧನಗಳು ಇಂಗಾಲದ ಡೈ ಆಕ್ಸೈಡ್ ಅನಿಲದ ಹೊರಸೂಸುವಿಕೆಯ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸುತ್ತವೆಯಾದರೂ, ಸಾರಿಗೆ ಕ್ಷೇತ್ರವನ್ನು ಇಂಗಾಲಮುಕ್ತಗೊಳಿಸುವ ಪ್ರಕ್ರಿಯೆಗೆ ವೇಗ ನೀಡಲು ವಿದ್ಯುತ್ ಚಾಲಿತ (ಇವಿ) ವಾಹನಗಳಿಗೆ ಪರಿವರ್ತನೆಯಾಗುವುದು ಅಗತ್ಯವಾಗಿದೆ ಎಂದು ರಾಯ್‌ಚೌಧರಿ ಅಭಿಪ್ರಾಯಪಡುತ್ತಾರೆ. ಈ ಮೂಲಕ, ಭಾರತದ ದೀರ್ಘಾವಧಿ ಹವಾಮಾನ ಗುರಿಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳುತ್ತಾರೆ.
‘‘ವಾಯು ಮಾಲಿನ್ಯ, ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಮತ್ತು ಭಾರತದಲ್ಲಿ ವಾಹನಗಳಿಗೆ ಬೇಕಾಗುವ ಅಗಾಧ ಪ್ರಮಾಣದ ಇಂಧನ ಸವಾಲನ್ನು ನಿಭಾಯಿಸಲು ಶೂನ್ಯ ಹೊಗೆಯ ಇಲೆಕ್ಟ್ರಿಕ್ ವಾಹನ (ಇವಿ)ಗಳತ್ತ ಕ್ಷಿಪ್ರವಾಗಿ ಹೊರಳುವುದು ಹಾಗೂ ಅದಕ್ಕಾಗಿ ಮಾರ್ಗನಕ್ಷೆಯನ್ನು ಸಿದ್ಧಪಡಿಸುವುದು ಈಗಿನ ಅಗತ್ಯವಾಗಿದೆ’’ ಎಂದು ರಾಯ್‌ಚೌಧರಿ ಅಭಿಪ್ರಾಯಪಡುತ್ತಾರೆ.






