ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ವಿದ್ಯುತ್ ಸಂಪರ್ಕವಿಲ್ಲದ ರಾಮನಾಯಕ ದೊಡ್ಡಿ

ಲಿಂಗಸಗೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 77ವರ್ಷ ಕಳೆದರೂ ದೇಶದ ಹಲವು ಹಳ್ಳಿಗಳಿಗೆ ಇನ್ನೂ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಇದಕ್ಕೆ ಲಿಂಗಸಗೂರು ತಾಲೂಕಿನ ಹೊನ್ನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನಾಯಕ ದೊಡ್ಡಿಯೂ ಹೊರತಾಗಿಲ್ಲ. ರಾಮನಾಯಕ ದೊಡ್ಡಿಯಲ್ಲಿ 60ಕ್ಕೂ ಹೆಚ್ಚು ಕುಟುಂಬದ ಇನ್ನೂರು ಮಂದಿ ನೆಲೆಸಿದ್ದು, ಇಲ್ಲಿಯವರೆಗೆ ವಿದ್ಯುತ್ ಸಂಪರ್ಕ ಕೂಡ ಸಿಕ್ಕಿಲ್ಲ.
ಹಳ್ಳಿಗರು ಸಂಜೆ ಆಗುತ್ತಲೇ ಮೇಣದ ಬತ್ತಿಗಳು ಮತ್ತು ಎಣ್ಣೆ ದೀಪಗಳ ಮೊರೆ ಹೋಗುತ್ತಾರೆ. ಇದು ನಮ್ಮ ದೈನಂದಿನ ಜೀವನದ ಕ್ರಮ. ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಹಲವು ಬಾರಿ ಗ್ರಾಪಂಗೆ ಮನವಿ ಮಾಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಮೀಟರ್ ಅಳವಡಿಕೆ:
ದೊಡ್ಡಿಗೆ ವಿದ್ಯುತ್ ಸಂಪರ್ಕ ಇಲ್ಲ. ಆದರೂ ವಿದ್ಯುತ್ ಮೀಟರ್ ಅಳವಡಿಕೆಯ ಗುತ್ತಿಗೆ ಪಡೆದ ಜೆಸ್ಕಾಂ ಗುತ್ತಿಗೆದಾರ ಮನೆಗಳಿಗೆ ಮೀಟರ್ ಅಳವಡಿಸಿ ಕೈತೊಳೆದುಕೊಂಡಿರುವುದು ಮಾತ್ರ ಅಶ್ಚರ್ಯವಾದರೂ ಸತ್ಯ ಸಂಗತಿ.
ಅಂಗನವಾಡಿ ಹಾಗೂ ಶಾಲೆ ಸೌಕರ್ಯವಿಲ್ಲ: 200 ಜನ ವಾಸ ಮಾಡುವ ರಾಮನಾಯಕನ ದೊಡ್ಡಿಯ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂಗನವಾಡಿ ಇಲ್ಲ. ನಮ್ಮ ಮಕ್ಕಳು ಶಾಲೆ ಕಲಿಯಲು 2 ಕಿ.ಮೀ. ದೂರದ ಹೊನ್ನಹಳ್ಳಿಗೆ ಹೋಗಬೇಕು. ಆದ್ದರಿಂದ ಹಲವಾರು ಮಕ್ಕಳು ಅನಕ್ಷರಸ್ಥರಾಗುವಂತಾಗಿದೆ ಎನ್ನುವುದು ಇಲ್ಲಿನ ಪೋಷಕರ ದೂರಾಗಿದೆ.
ರಸ್ತೆ ಸೌಕರ್ಯ ಕಾಣದಂತಾಗಿದೆ ನಮ್ಮ ಸ್ಥಿತಿ: ಮೂಲಭೂತ ಸೌಕರ್ಯವಾದ ರಸ್ತೆ ಸೌಲಭ್ಯವೂ ದೊಡ್ಡಿ ನಮಗಿಲ್ಲ. ಜಮೀನುಗಳ ಕಾಲುದಾರಿಯೇ ಈ ದೊಡ್ಡಿಯ ಜನರಿಗೆ ಮುಖ್ಯರಸ್ತೆಯಾಗಿದೆ. ನಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ 7 ಕಿ.ಮೀ.ದೂರದ ಲಿಂಗಸುಗೂರಿಗೆ ನಡೆದುಕೊಂಡೇ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶುದ್ಧ ಕುಡಿಯುವ ನೀರು ನಮ್ಮ ಕನಸು: ರಾಮನಾಯಕನ ದೊಡ್ಡಿಯಲ್ಲಿ ಶುದ್ಧ ಕುಡಿಯುವ ನೀರು ಸಿಗುವುದು ನಮಗೆ ಕನಸಿನ ಮಾತೇ ಸರಿ. ಕಳೆದ 4-5 ತಿಂಗಳುಗಳ ಹಿಂದೆ ತಾಲೂಕು ಪಂಚಾಯತ್ ವತಿಯಿಂದ ಕೊಳವೆ ಬಾವಿ ಕೊರೆಯಿಸಿ ನೀರಿನ ಗುಮ್ಮಿ (ಸಿಸ್ಟರ್ನ್) ಅಳವಡಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ನೀರಿನ ಗುಮ್ಮಿ ಹನಿ ನೀರು ಕಂಡಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಜಾಣ ಕುರುಡರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ಚುನಾವಣೆ ಬಂದಾಗ ಮಾತ್ರ ಈ ದೊಡ್ಡಿಗೆ ಬರುವಜನಪ್ರತಿನಿಧಿಗಳು, ಮತ್ತೆ ಚುನಾವಣೆ ಬರುವವರೆಗೂ ಇತ್ತಕಡೆ ಸುಳಿಯುವುದಿಲ್ಲ. ಅದರಂತೆ ಅಧಿಕಾರಿಗಳೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇನ್ನು ಲಿಂಗಸುಗೂರು ಮೀಸಲು ಕ್ಷೇತ್ರವಾಗಿ 20 ವರ್ಷಗಳಾಗುತ್ತ ಬಂತು. 12 ವರ್ಷ ಶಾಸಕರಾಗಿರುವವರು ಈ ಕ್ಷೇತ್ರವನ್ನು ಮಾದರಿ ಮಾಡುತ್ತೇನೆಂದು ಹೇಳುತ್ತಾರೆೆ. ಆದರೆ ಇಲ್ಲಿಯ ಜನ ‘ನಮಗೆ ಮೂಲಭೂತ ಸೌಲಭ್ಯ ಕಲ್ಪಿಸಿ, ಅಷ್ಟೇ ಸಾಕು’ ಎನ್ನುತ್ತಾರೆ.
ಇನ್ನಾದರೂ ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ರಾಮನಾಯಕ ದೊಡ್ಡಿಗೆ ವಿದ್ಯುತ್, ರಸ್ತೆ, ಅಂಗನವಾಡಿ, ಶಾಲೆಯು ಸೇರಿ ಮೂಲಸೌಲಭ್ಯ ಕಲ್ಪಿಸಬೇಕಿದೆ.
ಲಿಂಗಸಗೂರು ತಾಲೂಕಿನಿಂದ ಕೂಗಳತೆ ದೂರದಲ್ಲಿರುವ ರಾಮನಾಯಕನ ದೊಡ್ಡಿ ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರು, ಅಂಗನವಾಡಿ, ಶಾಲೆ ಸೇರಿ ಇತರ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದೇವೆ. ಶಾಸಕರು ಹಾಗೂ ಅಧಿಕಾರಿಗಳು ಇನ್ನಾದರೂ ಕಣ್ತೆರೆದು ನಮಗೆ ಮೂಲಸೌಲಭ್ಯಗಳನ್ನು ಕಲ್ಪಿಸಿ ಅನುಕೂಲ ಮಾಡಿಕೊಡಲು ಇಚ್ಛಾಶಕ್ತಿ ಪ್ರದರ್ಶಿಸಬೇಕು.
-ರಾಮು ನಾಯಕ, ರಾಮನಾಯಕನ ದೊಡ್ಡಿಯ ನಿವಾಸಿ







