ಬೀದಿಬದಿ ವ್ಯಾಪಾರಿಗಳ ತೆರವು: ನಡೆಯುವ ಹಕ್ಕು ಮತ್ತು ಬದುಕುವ ಹಕ್ಕಿನ ನಡುವಿನ ಸಂಘರ್ಷ

ನಗರಗಳ ಬೆಳವಣಿಗೆಯೊಂದಿಗೆ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉದ್ಯೋಗಾವಕಾಶಗಳ ಕೊರತೆ, ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ, ಕಡಿಮೆ ಬಂಡವಾಳದಲ್ಲಿ ಜೀವನೋಪಾಯ ನಡೆಸುವ ಅನಿವಾರ್ಯತೆ ಇವುಗಳೆಲ್ಲ ಸಾವಿರಾರು ಜನರನ್ನು ಬೀದಿಬದಿ ವ್ಯಾಪಾರದತ್ತ ಸೆಳೆಯುತ್ತಿವೆ. ಮತ್ತೊಂದೆಡೆ, ಸಾರ್ವಜನಿಕ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸುವುದರಿಂದ ಪಾದಚಾರಿಗಳ ಸುರಕ್ಷತೆ, ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಇತ್ತೀಚೆಗೆ ಕರ್ನಾಟಕದ ಹಲವಾರು ನಗರಗಳಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವುದು ಈ ವಿಷಯವನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತಂದಿದೆ.
ಈ ಸಂದರ್ಭದಲ್ಲಿ ಮೂಲಭೂತ ಪ್ರಶ್ನೆಯೊಂದು ಉದ್ಭವಿಸುತ್ತದೆ. ನಡೆಯುವ ಹಕ್ಕು ಮುಖ್ಯವೇ ಅಥವಾ ಬದುಕುವ ಹಕ್ಕು ಮುಖ್ಯವೇ? ವಾಸ್ತವವಾಗಿ ಭಾರತದ ಸಂವಿಧಾನವು ಎರಡನ್ನೂ ಸಮಾನವಾಗಿ ಗೌರವಿಸುತ್ತದೆ. ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೆ ಜೀವಿಸುವ ಹಾಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡುತ್ತದೆ. ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿ ಸಂಚರಿಸುವ ಹಕ್ಕೂ ಪ್ರತಿಯೊಬ್ಬರಿಗೂ ಇದೆ. ಆದ್ದರಿಂದ ಈ ಸಮಸ್ಯೆಗೆ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸುವ ಪರವಾಗಿ ನಿಂತು ಬೀದಿಬದಿ ವ್ಯಾಪಾರಿಗಳ ಜೀವನೋಪಾಯವನ್ನು ನಿರ್ಲಕ್ಷಿಸುವುದು ಸರಿಯಾದ ಪರಿಹಾರವಾಗುವುದಿಲ್ಲ.
ಬೀದಿಬದಿ ವ್ಯಾಪಾರಿಗಳು ನಮ್ಮ ನಗರ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದ್ದಾರೆ. ತರಕಾರಿ, ಹಣ್ಣು, ಹೂವು, ತಿಂಡಿ, ಬಟ್ಟೆ, ಮನೆ ಬಳಕೆಯ ವಸ್ತುಗಳು ಸೇರಿದಂತೆ ನಿತ್ಯ ಜೀವನಕ್ಕೆ ಅಗತ್ಯವಾದ ಅನೇಕ ವಸ್ತುಗಳನ್ನು ಅವರು ಕಡಿಮೆ ದರದಲ್ಲಿ ಜನರಿಗೆ ಒದಗಿಸುತ್ತಾರೆ. ನಗರಗಳ ಅನೌಪಚಾರಿಕ ಆರ್ಥಿಕ ವ್ಯವಸ್ಥೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಲಕ್ಷಾಂತರ ಕುಟುಂಬಗಳು ಈ ವೃತ್ತಿಯನ್ನೇ ಅವಲಂಬಿಸಿ ಬದುಕುತ್ತಿವೆ. ಆದ್ದರಿಂದ ಯಾವುದೇ ಮುನ್ನೆಚ್ಚರಿಕೆ ಅಥವಾ ಪರ್ಯಾಯ ವ್ಯವಸ್ಥೆಯಿಲ್ಲದೆ ಅವರನ್ನು ತೆರವುಗೊಳಿಸುವುದು ಅವರ ಬದುಕಿನ ಹಕ್ಕಿನ ಮೇಲೆ ಹೊಡೆತ ನೀಡಿದಂತಾಗುತ್ತದೆ.
ಆದರೆ ಸಮಸ್ಯೆಯ ಮತ್ತೊಂದು ಮುಖವೂ ಇದೆ. ಅನೇಕ ಕಡೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ವ್ಯಾಪಾರಿಗಳು ಆಕ್ರಮಿಸಿಕೊಂಡಿರುವುದರಿಂದ ಜನರು ರಸ್ತೆಯಲ್ಲಿಯೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ವೃದ್ಧರು, ಮಹಿಳೆಯರು, ಶಾಲಾ ಮಕ್ಕಳು ಹಾಗೂ ಅಂಗವಿಕಲರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕ ರಸ್ತೆಗಳು ವ್ಯಾಪಾರದ ಕೇಂದ್ರಗಳಾಗಿ ಬದಲಾಗುವುದರಿಂದ ವಾಹನ ದಟ್ಟಣೆ, ಮಾಲಿನ್ಯ ಮತ್ತು ತುರ್ತು ಸೇವೆಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
ಇನ್ನೊಂದು ಪ್ರಮುಖ ವಿಷಯವೆಂದರೆ ಸಾರ್ವಜನಿಕ ಆರೋಗ್ಯ. ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅನೇಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು ಕಂಡುಬರುತ್ತದೆ. ರಸ್ತೆಯ ಧೂಳು, ವಾಹನಗಳ ಹೊಗೆ, ಕಸದ ರಾಶಿ, ಕೊಳಚೆ ನೀರು ಇವುಗಳ ನಡುವೆ ಆಹಾರ ಮಾರಾಟವಾಗುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇಂತಹ ಪರಿಸ್ಥಿತಿಯಿಂದ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿಯೂ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳ ಮೇಲಿದೆ.
ಆದರೂ, ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ಒಂದೇ ದೃಷ್ಟಿಯಿಂದ ನೋಡುವುದು ನ್ಯಾಯಯುತವಲ್ಲ. ಅನೇಕ ವ್ಯಾಪಾರಿಗಳು ಸಮಾಜಮುಖಿ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿರುತ್ತಾರೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ ನೆರವು ನೀಡುವುದು, ಅಸ್ವಸ್ಥರಾದವರಿಗೆ ಕುಡಿಯುವ ನೀರು ಒದಗಿಸುವುದು, ಆಂಬುಲೆನ್ಸ್‌ಗೆ ಮಾಹಿತಿ ನೀಡುವುದು, ಕಳ್ಳತನ ಅಥವಾ ಅನಾಹುತಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು, ತಪ್ಪಿಸಿಕೊಂಡ ಮಕ್ಕಳನ್ನು ರಕ್ಷಿಸುವುದು ಮುಂತಾದ ಅನೇಕ ಸಂದರ್ಭಗಳಲ್ಲಿ ಬೀದಿಬದಿ ವ್ಯಾಪಾರಿಗಳು ಸಮಾಜಕ್ಕೆ ನೆರವಾಗಿರುವ ಉದಾಹರಣೆಗಳು ಸಾಕಷ್ಟಿವೆ. ದಿನವಿಡೀ ರಸ್ತೆಯ ಬದಿಯಲ್ಲೇ ಇರುವ ಕಾರಣ ಅವರು ಒಂದು ರೀತಿಯಲ್ಲಿ ಸಾರ್ವಜನಿಕ ಸ್ಥಳಗಳ ಅನೌಪಚಾರಿಕ ಕಾವಲುಗಾರರಂತೆಯೇ ಕಾರ್ಯನಿರ್ವಹಿಸುತ್ತಾರೆ.
ಹೀಗಾಗಿ, ಈ ಸಮಸ್ಯೆಗೆ ಶಾಶ್ವತ ಪರಿಹಾರವು ತೆರವು ಕಾರ್ಯಾಚರಣೆ ಮಾತ್ರವಾಗಿರಬಾರದು. ಭಾರತ ಸರಕಾರವು ಬೀದಿಬದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯ್ದೆ-2014 ಅನ್ನು ಜಾರಿಗೊಳಿಸಿದೆ. ಈ ಕಾಯ್ದೆಯ ಉದ್ದೇಶ ವ್ಯಾಪಾರಿಗಳನ್ನು ರಕ್ಷಿಸುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯನ್ನೂ ಕಾಪಾಡುವುದು. ನಗರ ಮಾರಾಟ ಸಮಿತಿಗಳ ಮೂಲಕ ಸಮೀಕ್ಷೆ ನಡೆಸಿ, ಗುರುತಿನ ಚೀಟಿ ನೀಡುವುದು, ಸೂಕ್ತ ವ್ಯಾಪಾರ ವಲಯಗಳನ್ನು ಗುರುತಿಸುವುದು ಮತ್ತು ಎಲ್ಲರಿಗೂ ಅನುಕೂಲವಾಗುವ ವ್ಯವಸ್ಥೆ ರೂಪಿಸುವುದನ್ನು ಕಾಯ್ದೆ ಒತ್ತಿಹೇಳುತ್ತದೆ. ಈ ಕಾಯ್ದೆಯನ್ವಯ ರಾಜ್ಯ ಸರಕಾರಗಳು ತಮ್ಮದೇ ಆದ ನಿಯಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಬೇಕೆಂದು ತಿಳಿಸಿದೆ.
ಅದರಂತೆ ಕರ್ನಾಟಕ ಸರಕಾರವು ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮಗಳು, 2019ಅನ್ನು ಜಾರಿಗೊಳಿಸಿತು. ನಂತರ ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ, ಬೀದಿ ವ್ಯಾಪಾರಿಗಳ ನಿಯಂತ್ರಣ ಮತ್ತು ಪರವಾನಿಗೆ) ಯೋಜನೆ, 2020ಅನ್ನು ಜಾರಿಗೊಳಿಸಿದೆ. ಈ ಯೋಜನೆಯ ಉದ್ದೇಶ ನಗರ ಮಾರಾಟ ಸಮಿತಿಗಳ ರಚನೆ ಮಾಡಿ, ಅದರ ಮೂಲಕ ಎಲ್ಲಾ ಬೀದಿಬದಿ ವ್ಯಾಪಾರಿಗಳನ್ನು ಸಮೀಕ್ಷೆ ಮಾಡಿ ಅವರಿಗೆ ಪರವಾನಗಿ ನೀಡುವುದು, ಮಾರಾಟ ವಲಯಗಳು, ನಿರ್ಬಂಧಿತ ವಲಯ ಮತ್ತು ಮಾರಾಟ ಮಾಡಲಾಗದ ವಲಯವನ್ನು ಗುರುತಿಸುವುದು, ಪರವಾನಿಗೆ ಪಡೆದ ವ್ಯಾಪಾರಿಗಳನ್ನು ಕಾರಣವಿಲ್ಲದೆ ತೆರವುಗೊಳಿಸದಿರುವುದು ಮತ್ತು ಸ್ಥಳಾಂತರ ಅಗತ್ಯವಾದರೆ ಪರ್ಯಾಯ ಸ್ಥಳ ಕಲ್ಪಿಸಿ ಜೀವನೋಪಾಯವನ್ನು ರಕ್ಷಿಸುವುದರ ಜೊತೆಗೆ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ, ಸಂಚಾರ ಸುರಕ್ಷತೆ ಮತ್ತು ನಿಯಮ ಪಾಲನೆಗೆ ವ್ಯಾಪಾರಿಗಳ ಹೊಣೆಗಾರಿಕೆ ನಿಗದಿಪಡಿಸುವುದು ಕೂಡ ಈ ಯೋಜನೆಯ ಪ್ರಮುಖ ಅಂಶವಾಗಿದೆ. ಆದ್ದರಿಂದ ಸಮೀಕ್ಷೆ ನಡೆಸದೆ, ಪರವಾನಿಗೆ ಹೊಂದಿರುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸುವುದು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಬಹುದು. ಆದ್ದರಿಂದ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕೈಗೊಳ್ಳುವಾಗ ಅಧಿಕಾರಿಗಳು ಕೇವಲ ಅತಿಕ್ರಮಣ ತೆರವಿನ ದೃಷ್ಟಿಕೋನದಿಂದ ನಡೆದುಕೊಳ್ಳಬಾರದು. ಈ ಕಾನೂನಿನ ಮೂಲ ಉದ್ದೇಶ ರಸ್ತೆಗಳನ್ನು ಅತಿಕ್ರಮಣಕ್ಕೆ ಬಿಡುವುದು ಅಲ್ಲ; ಬೀದಿಬದಿ ವ್ಯಾಪಾರಿಗಳ ಜೀವನೋಪಾಯವನ್ನು ರಕ್ಷಿಸುತ್ತಲೇ ಸಾರ್ವಜನಿಕರ ನಡೆಯುವ ಹಕ್ಕು, ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ನಡುವೆ ಸಮತೋಲನ ಸಾಧಿಸುವುದು ಎಂಬುದಾಗಿದೆ. ಇದೇ ದೃಷ್ಟಿಕೋನದಿಂದ ಆಡಳಿತ ಮತ್ತು ವ್ಯಾಪಾರಿಗಳು ಇಬ್ಬರೂ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದಾಗ ಮಾತ್ರ ಕಾನೂನಿನ ಆಶಯ ಸಾರ್ಥಕವಾಗುತ್ತದೆ. ದುರದೃಷ್ಟವಶಾತ್ ಅನೇಕ ನಗರಗಳಲ್ಲಿ ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಇನ್ನೂ ಆಗಿಲ್ಲ.
ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ವ್ಯಾಪಾರಿಗಳನ್ನು ಶತ್ರುಗಳಂತೆ ನೋಡುವ ಬದಲು ಪಾಲುದಾರರಂತೆ ಪರಿಗಣಿಸಬೇಕು. ವ್ಯಾಪಾರ ವಲಯಗಳನ್ನು ವೈಜ್ಞಾನಿಕವಾಗಿ ಗುರುತಿಸುವುದು, ಪಾದಚಾರಿ ಮಾರ್ಗಗಳಿಗೆ ಕನಿಷ್ಠ ಅಗಲವನ್ನು ಕಡ್ಡಾಯವಾಗಿ ಉಳಿಸುವುದು, ಆಹಾರ ಮಾರಾಟಗಾರರಿಗೆ ಸ್ವಚ್ಛತಾ ತರಬೇತಿ ನೀಡುವುದು, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು, ನೋಂದಾಯಿತ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಡಿಜಿಟಲ್ ಪಾವತಿ ಸೌಲಭ್ಯ ಒದಗಿಸುವುದು, ನಿಯಮ ಉಲ್ಲಂಘಿಸುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವುದು ಹೆಚ್ಚು ಪರಿಣಾಮಕಾರಿ ಮಾರ್ಗವಾಗುತ್ತದೆ.
ಇದರ ಜೊತೆಗೆ ಬೀದಿಬದಿ ವ್ಯಾಪಾರಿಗಳಿಗೂ ಕೆಲವು ಸಾಮಾಜಿಕ ಹೊಣೆಗಾರಿಕೆಗಳಿವೆ. ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಆಕ್ರಮಿಸದೆ ವ್ಯಾಪಾರ ನಡೆಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಬೇಕು. ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ತಮ್ಮ ವ್ಯಾಪಾರವನ್ನು ನಿರ್ವಹಿಸಬೇಕು. ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛ ಆಹಾರವನ್ನು ಮಾರಾಟ ಮಾಡಬೇಕು. ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ತಮ್ಮ ಉತ್ತಮ ಪರಂಪರೆಯನ್ನು ಮುಂದುವರಿಸಬೇಕು.
ಸಮಸ್ಯೆಯನ್ನು ರಾಜಕೀಯ ದೃಷ್ಟಿಯಿಂದ ನೋಡುವ ಬದಲು ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕಾಗಿದೆ. ನಗರದ ಸೌಂದರ್ಯ ಮತ್ತು ಸುಗಮ ಸಂಚಾರ ಎಷ್ಟು ಮುಖ್ಯವೋ, ಬಡವರ ಜೀವನೋಪಾಯವೂ ಅಷ್ಟೇ ಮುಖ್ಯ. ಸರಕಾರದ ಕರ್ತವ್ಯ ಕೇವಲ ತೆರವುಗೊಳಿಸುವುದಲ್ಲ; ಪರ್ಯಾಯ ಜೀವನೋಪಾಯದ ವ್ಯವಸ್ಥೆ ಕಲ್ಪಿಸುವುದೂ ಆಗಿದೆ. ಅದೇ ರೀತಿ ವ್ಯಾಪಾರಿಗಳ ಕರ್ತವ್ಯ ಸಾರ್ವಜನಿಕ ಹಕ್ಕುಗಳಿಗೆ ಧಕ್ಕೆಯಾಗದಂತೆ ತಮ್ಮ ಉದ್ಯೋಗವನ್ನು ನಡೆಸುವುದಾಗಿದೆ.
ನಡೆಯುವ ಹಕ್ಕು ಮತ್ತು ಬದುಕುವ ಹಕ್ಕು ಪರಸ್ಪರ ವಿರೋಧಿಗಳಲ್ಲ. ಇವೆರಡೂ ಭಾರತದ ಸಂವಿಧಾನವು ನೀಡಿರುವ ಸಮಾನ ಮಹತ್ವದ ಹಕ್ಕುಗಳು. ಆದ್ದರಿಂದ ಪರಿಹಾರವು ಒಬ್ಬರ ಗೆಲುವು, ಮತ್ತೊಬ್ಬರ ಸೋಲು ಎಂಬ ರೀತಿಯಲ್ಲಿರಬಾರದು. ಬದಲಾಗಿ, ಸುರಕ್ಷಿತ ಪಾದಚಾರಿ ಮಾರ್ಗ, ವ್ಯವಸ್ಥಿತ ಬೀದಿಬದಿ ವ್ಯಾಪಾರ ಮತ್ತು ಮಾನವೀಯ ಆಡಳಿತ ಎಂಬ ತ್ರಿಸೂತ್ರವನ್ನು ಅನುಸರಿಸಿದಾಗ ಮಾತ್ರ ಎಲ್ಲರ ಹಿತಾಸಕ್ತಿ ಕಾಪಾಡಲು ಸಾಧ್ಯ. ಇದೇ ಸಮತೋಲನದ ಮಾರ್ಗವು ಅಭಿವೃದ್ಧಿಶೀಲ, ಮಾನವೀಯ ಮತ್ತು ಸಮಗ್ರ ನಗರ ನಿರ್ಮಾಣಕ್ಕೆ ದಾರಿಯಾಗುತ್ತದೆ.






