‘ಅಬಕಾರಿ ಇಲಾಖೆ’ 2025-26ನೇ ಸಾಲಿಗೆ 40 ಸಾವಿರ ಕೋಟಿ ರೂ.ಆದಾಯದ ಗುರಿ

ಸಾಂದರ್ಭಿಕ ಚಿತ್ರ PC: istockphoto
ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮುಂದಾಗಿರುವ ರಾಜ್ಯ ಸರಕಾರ, ಹೆಚ್ಚಿನ ಆದಾಯದ ಮೂಲ ಹೊಂದಿರುವ ಇಲಾಖೆಗಳಿಗೆ ಕೈಹಾಕಿದೆ. ಅದರಲ್ಲೂ ಸರಕಾರದ ಖಜಾನೆಗೆ ದೊಡ್ಡ ಮಟ್ಟದ ಆದಾಯ ತರುವ ‘ಅಬಕಾರಿ ಇಲಾಖೆ’ ಮೇಲೆ ಹೆಚ್ಚಿನ ಹೊರೆ ಹಾಕಲು ಮುಂದಾಗಿರುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸಕ್ತ 2025-26ರ ಆರ್ಥಿಕ ವರ್ಷದೊಳಗೆ ಬರೊಬ್ಬರಿ 40ಸಾವಿರ ಕೋಟಿ ರೂ. ಸಂಗ್ರಹದ ಬೃಹತ್ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದ್ದು, ಒಟ್ಟಾರೆ ಸರಕಾರದ ಆದಾಯದಲ್ಲಿ ಅಬಕಾರಿ ಪಾಲು ಶೇ.20ರಷ್ಟಾಗಬೇಕೆಂಬುದು ಸರಕಾರದ ಗುರಿಯಾಗಿದೆ. ಅದಕ್ಕೆ ತಕ್ಕಂತೆ ಹೆಚ್ಚುವರಿ ಅಬಕಾರಿ ಸುಂಕ, ಸನ್ನದು ಶುಲ್ಕ ಮತ್ತು ಇತರ ಸುಂಕಗಳ ಸಂಗ್ರಹ ಹೆಚ್ಚಳದ ಮೂಲಕ ಈ ಗುರಿ ಸಾಧಿಸುವ ಯೋಜನೆ ಹೊಂದಲಾಗಿದೆ.
ಈ ನಿಟ್ಟಿನಲ್ಲಿ ಸರಕಾರ ನೀಡಿರುವ 40ಸಾವಿರ ಕೋಟಿ ರೂ. ಗುರಿಯನ್ನು ತಲುಪಲು ಹೊರಟಿರುವ ಇಲಾಖಾ ಅಧಿಕಾರಿಗಳು ಮದ್ಯದಂಗಡಿಗಳ ಮಾಲಕರ ಮೇಲೆ ಅಗತ್ಯವಿಲ್ಲದಿದ್ದರೂ ಹೆಚ್ಚಿನ ಮದ್ಯ ಹಾಕಿಸಿಕೊಳ್ಳುವಂತೆ ಒತ್ತಡ ಹೇರಲಾರಂಭಿಸಿದ್ದಾರೆ. ಗುರಿ ತಲುಪುವುದಕ್ಕಾಗಿ ಹಳ್ಳಿ, ಹಳ್ಳಿಗೂ ಬೈಕ್ಗಳಲ್ಲಿ ಮದ್ಯ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತಿದೆ ಎಂಬುದು ರಾಜ್ಯದ ಬಹುತೇಕ ಬಾರ್ ಮಾಲಕರ ಅಳಲಾಗಿದೆ.
ಅಬಕಾರಿ ಇಲಾಖೆಗೆ ಪ್ರತಿವರ್ಷ ಸರಕಾರ ಒಂದೊಂದು ಟಾರ್ಗೆಟ್ ಅನ್ನು ನೀಡುತ್ತಲೇ ಬಂದಿದೆ. 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು 35,530 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. ಅದರ ಹಿಂದಿನ ಸಾಲಿನಲ್ಲಿ 34,629 ಕೋಟಿ ಸಂಗ್ರಹವಾಗಿತ್ತು. ‘ಗ್ಯಾರಂಟಿ’ ಯೋಜನೆಗಳಿಗೆ ಹಣ ಹೊಂದಿಸಲು ಸರಕಾರ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಸನ್ನದು ಶುಲ್ಕವನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಇನ್ನು, ಒಂದು ವರ್ಷದಿಂದ ಕಾರ್ಯಾರಂಭ ಮಾಡದ ಸುಮಾರು 579 ಮದ್ಯದಂಗಡಿಗಳ ಪರವಾನಿಗೆಗಳನ್ನು ಹರಾಜು ಹಾಕಲು ಅಬಕಾರಿ ಇಲಾಖೆ ನಿರ್ಧರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಮತ್ತಷ್ಟು ಮದ್ಯದಂಗಡಿಗಳು ಚಾಲ್ತಿಗೆ ಬರಲಿವೆ. ವ್ಯಸನವನ್ನು ತಡೆಯಬೇಕಾದ ಸರಕಾರವೇ ಈ ರೀತಿ ಹಳ್ಳಿ-ಹಳ್ಳಿಗಳಲ್ಲಿ ಮದ್ಯದಂಗಡಿಗಳ ಹೆಚ್ಚಿಸಿ ಕುಡಿತಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡುವ ಕೃತ್ಯಕ್ಕೆ ಮುಂದಾಗಿರುವುದು ಎಷ್ಟು ಸರಿ? ಎಂಬುದು ಹಲವರ ಪ್ರಶ್ನೆಯಾಗಿದೆ.
ಆದಾಯ ತೆರಿಗೆ ಹೆಚ್ಚಿಸುವ ಇಲಾಖೆಯ ಒತ್ತಡದಿಂದಾಗಿ ಗ್ರಾಮೀಣ ಭಾಗದಲ್ಲಿ ಕಾನೂನುಬಾಹಿರವಾಗಿ ಅಕ್ರಮ ಮದ್ಯ ಮಾರಾಟಗಳು ಹೆಚ್ಚಾಗಿವೆ. ಸರಕಾರ ತನ್ನ ಆದಾಯ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುವ ಭರದಲ್ಲಿ ಅಬಕಾರಿ ಇಲಾಖೆಗೆ ಒತ್ತಡ ಹೇರಿದರೆ ಮದ್ಯದ ಹಾವಳಿಗೆ ಸಿಲುಕಿ ಬಹುತೇಕ ಕುಟುಂಬಗಳು ಬೀದಿ ಪಾಲಾಗುವುದರಲ್ಲಿ ಸಂದೇಹವಿಲ್ಲ.







