ದುಬಾರೆ, ಬರಪೊಳೆಯಲ್ಲಿ ರೋಚಕ ರಿವರ್ ರ‍್ಯಾಫ್ಟಿಂಗ್

ಮಡಿಕೇರಿ: ಈ ಬಾರಿ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ದುಬಾರೆ ಹಾಗೂ ಬರಪೊಳೆಯಲ್ಲಿ ರಿವರ್ ರ‍್ಯಾಫ್ಟಿಂಗ್ (ಜಲಕ್ರೀಡೆ) ಜೀವಕಳೆ ಪಡೆದುಕೊಂಡಿದೆ.
ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ರ‍್ಯಾಫ್ಟಿಂಗ್ ಮಾಡುವ ಪ್ರವಾಸಿಗರಿಗೆ ಇದು ಮತ್ತಷ್ಟು ಹೊಸ ಅನುಭವ ನೀಡುತ್ತಿದೆ. ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಜಲಸಾಹಸಗಳಲ್ಲಿ ಭಾಗವಹಿಸಲು ಪ್ರವಾಸಿಗರು ಮುಗಿ ಬೀಳುತ್ತಾರೆ.
ಮುಂಗಾರು ಸಂದರ್ಭದಲ್ಲಿ ಜಲಪಾತ ವೀಕ್ಷಣೆ ಹಾಗೂ ಜಲಸಾಹಸ ಕ್ರೀಡೆ ಆಕರ್ಷಣೀಯ ಹಾಗೂ ಪ್ರವಾಸಿಗರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಿವರ್ ರ‍್ಯಾಫ್ಟಿಂಗ್ ಒಂದು ಭಾಗವಾಗಿದ್ದು, ಪ್ರವಾಸಿಗರು ಜಲಕ್ರೀಡೆಯಲ್ಲಿ ಪಾಲ್ಗೊಳ್ಳಲು ಕಾತುರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಕೊಡಗಿನ ಪ್ರಕೃತಿಯ ನಡುವಿನ ಈ ಜಲಕ್ರೀಡೆ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ.
ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ರ‍್ಯಾಫ್ಟಿಂಗ್ ನಡೆಸುವವರಿಗೆ ಜಿಲ್ಲಾಡಳಿತ ಸೂಕ್ತ ಎಚ್ಚರಿಕೆಯನ್ನು ನೀಡಿದ್ದು, ರ‍್ಯಾಫ್ಟ್ ಮಾಲಕರು ಕಡ್ಡಾಯವಾಗಿ ಪರವಾನಗಿ ನವೀಕರಣ ಹಾಗೂ ಫಿಟ್ನೆಸ್ ಪ್ರಮಾಣಪತ್ರ ಪಡೆದು ಜಲಕ್ರೀಡೆ ನಡೆಸಲು ಸೂಚಿಸಲಾಗಿದೆ. ರಿವರ್ ರ‍್ಯಾಫ್ಟಿಂಗ್ ಸಂದರ್ಭದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಮತ್ತು ಜೀವರಕ್ಷಣೆ ಅತೀ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ರಿವರ್ ರ‍್ಯಾಫ್ಟರ್‌ಗಳು ಫಿಟ್ನೆಸ್ ಪ್ರಮಾಣಪತ್ರ ಕಡ್ಡಾಯವಾಗಿ ಪಡೆಯಬೇಕು. ಜೊತೆಗೆ ಪ್ರತೀ ವರ್ಷ ನವೀಕರಣ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಸೈನ್‌ಬೋರ್ಡ್ ಅಳವಡಿಕೆ: ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ ಹುಣಸೂರು ತಾಲೂಕಿನ ಬಿಳಿಕೆರೆ, ಮೈಸೂರು ರಸ್ತೆಯ ಹುಣಸೂರು-ಗೋಣಿಕೊಪ್ಪ ಜಂಕ್ಷನ್, ಪಿರಿಯಾಪಟ್ಟಣ ಸಿದ್ದಾಪುರ ಬಳಿಯ ಜಂಕ್ಷನ್‌ಗಳಲ್ಲಿ ಸೈನ್ ಬೋರ್ಡ್ ಅಳವಡಿಸುವಂತೆಯೂ ಜಿಲ್ಲಾಡಳಿತ ಹೇಳಿದ್ದು, ಹೆಚ್ಚಿನ ಪ್ರವಾಸಿಗರನ್ನು ಜಿಲ್ಲೆಯತ್ತ ಆಕರ್ಷಿಸಲು ಮುಂದಾಗಿದೆ.
ಬೀದಳ್ಳಿಯಲ್ಲಿ ವೈಟ್ ವಾಟರ್ ರ‍್ಯಾಫ್ಟಿಂಗ್‌ಗೆ ಅನುಮತಿ
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತದ ಕುಮಾರಧಾರ ನದಿಯಲ್ಲಿ ವೈಟ್ ವಾಟರ್ ರ್ಯಾಫ್ಟಿಂಗ್‌ಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ವಿದ್ಯುತ್ ಉತ್ಪಾದನಾ ಕೇಂದ್ರದ ಬಳಿಯ ಪ್ರಸಿದ್ಧ ಮಲ್ಲಳ್ಳಿ ಜಲಪಾತದ ಹಿಂದೆ, ರಮಣೀಯ ಪುಷ್ಪಗಿರಿ ಪರ್ವತಗಳ ತಪ್ಪಲಿನಲ್ಲಿ ರ್ಯಾಫ್ಟಿಂಗ್‌ಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ರಾಫ್ಟಿಂಗ್ ಕುಮಾರಳ್ಳಿಯಿಂದ ಪ್ರಾರಂಭವಾಗಿ ಮಲ್ಲಳ್ಳಿ ಜಲಪಾತದ ಬಳಿಯ ಬೀದಳ್ಳಿ ಮಿನಿ ಹೈಡಲ್ ಯೋಜನೆಯ ಹಿಂಭಾಗ ಕೊನೆಗೊಳ್ಳುತ್ತದೆ.
ಕಯಾಕಿಂಗ್ ಜಲಕ್ರೀ ಡೆಗೆ ಸಿದ್ಧತೆ
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಡಿ ಜಲ ಸಾಹಸ ಕ್ರೀಡೆಯಲ್ಲಿ ಒಂದಾದ ಕಯಾಕಿಂಗ್ ನಡೆಸಲು ಅವಕಾಶವಿದೆ. ಈ ಸಂಬಂಧ ಜಿಲ್ಲೆಯಲ್ಲಿ 11 ಅರ್ಜಿಗಳು ಸಲ್ಲಿಕೆಯಾಗಿವೆ. ಹೇಮಾವತಿ ನದಿ ಪಾತ್ರ ಕೊಡ್ಲಿಪೇಟೆ ದೊಡ್ಡಕುಂದ, ಹಟ್ಟಿಹೊಳೆ ಬಳಿಯ ದೇವಸ್ತೂರು ನದಿ, ಕಾವೇರಿ ನದಿ ಪಾತ್ರದ ಐವತ್ತೊಕ್ಲು, ಹೊದ್ದೂರು, ಹಾರಂಗಿ ಹಿನ್ನೀರು ಪ್ರದೇಶದ ಹೆರೂರು, ನಾಕೂರು ಶಿರಂಗಾಲ, ಬೈರಂಪಾಡ, ಚಿಕ್ಕಬೆಟ್ಟಗೇರಿ ಪ್ರದೇಶಗಳಲ್ಲಿ ಕಯಾಕಿಂಗ್ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ಸಂಬಂಧ ಕಾರ್ಯ ಸಾಧ್ಯತಾ ವರದಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದ್ದಾರೆ.
ರ‍್ಯಾಫ್ಟಿಂಗ್ ಫಿಟ್ನೆಸ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿ (ಜೇತ್ನ) ಯಿಂದ ಪಡೆಯಬೇಕು. ಜೊತೆಗೆ ಪೊಲೀಸ್ ಇಲಾಖೆಯಿಂದಲೂ ಪರಿಶೀಲನೆ ನಡೆಸಬೇಕು. ಜಲಕ್ರೀಡೆ ಸಂದರ್ಭದಲ್ಲಿ ಜೀವರಕ್ಷಕ ಜಾಕೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಗೈಡ್‌ಗಳು ಕೌಶಲ್ಯ ಪರೀಕ್ಷೆ ಮಾಡಿಸಿರಬೇಕು. ಸಮವಸ್ತ್ರವನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು.
-ಮಂತರ್ ಗೌಡ, ಶಾಸಕ







