ಪ್ರಜ್ಞೆಯನ್ನೇ ಕಾಡುವ ಅನುಭವ ಕಥನಗಳು

ಕನ್ನಡ ಸಾಹಿತ್ಯದಲ್ಲಿ ನವೋದಯ ಪೂರ್ವದಿಂದ ವರ್ತಮಾನದ ಡಿಜಿಟಲ್ ಯುಗದವರೆಗೂ ಕಥಾ ಸಾಹಿತ್ಯ ತನ್ನದೇ ಆದ ವೈವಿಧ್ಯ ಮತ್ತು ವೈಶಿಷ್ಟ್ಯವನ್ನು ಕಾಪಾಡಿಕೊಂಡು ಬಂದಿದೆ. ಸಾಮಾನ್ಯ ಜನಜೀವನದ ಪ್ರಸಂಗಗಳ ಸುತ್ತ ಹೆಣೆಯುವ ಕತೆಯ ಒಳಗೇ ಪ್ರಚಲಿತ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಬಿಂಬಿಸುವ ಶೈಲಿಯನ್ನು ದಾಟಿ ಬಹುದೂರ ಬಂದಿರುವ ಕಥಾ ಸಾಹಿತ್ಯ 21ನೇ ಶತಮಾನದಲ್ಲಿ ಶೋಷಿತ ಸಮಾಜಗಳ ಒಳಸಂಕಟಗಳನ್ನು ಭೇದಿಸಿ ನೋಡಲು ಬದುಕಿನ ಹೆಜ್ಜೆ ಗುರುತುಗಳನ್ನು ಸೇತುವೆಯಾಗಿ ಬಳಸಿಕೊಳ್ಳುವ ಹಂತಕ್ಕೆ ತಲುಪಿದೆ. ಇಂದಿಗೂ ಶೋಷಣೆಗೊಳಗಾಗುತ್ತಿರುವ ತಳಸ್ತರದ ಸಮುದಾಯಗಳ ನೋವು, ಸಂಕಟ ಮತ್ತು ತಳಮಳಗಳನ್ನು ದಾಖಲಿಸುವ ಒಂದು ಸಾಹಿತ್ಯಿಕ ಸಾಧನವಾಗಿ ಕಥಾ ಸಾಹಿತ್ಯ ಬೆಳೆಯುತ್ತಿರುವುದು ಸ್ವಾಗತಾರ್ಹ.
ಇಂತಹುದೇ ಒಂದು ಸಂವೇದನಾಶೀಲ ಪ್ರಯತ್ನವನ್ನು ಜಡೇಕುಂಟೆ ಮಂಜುನಾಥ್ ತಮ್ಮ ‘ಕಾಡು ಕಾಯುವ ಮರ’ ಕಥಾ ಸಂಕಲನದಲ್ಲಿ ಪ್ರಾಮಾಣಿಕವಾಗಿ ಮಾಡಿದ್ದಾರೆ. ಈಗಾಗಲೇ ಕಾವ್ಯ, ಕಾದಂಬರಿ ಲೋಕದಲ್ಲಿ ಹೆಜ್ಜೆ ಊರಿರುವ ಮಂಜುನಾಥ್ ತಮ್ಮ ಎರಡನೇ ಸಣ್ಣ ಕತೆಗಳ ಸಂಕಲನವನ್ನು ಓದುಗರ ಮುಂದಿಟ್ಟಿದ್ದಾರೆ. ಅವರ ಬಾಲ್ಯ-ಯೌವ್ವನದಲ್ಲಿ ಕಂಡಂತಹ ಸಮಾಜದ ವಿಭಿನ್ನ ಆಯಾಮಗಳನ್ನು 12 ಕತೆಗಳಲ್ಲಿ ಮಂಜುನಾಥ್ ಮನಮುಟ್ಟುವ ಹಾಗೆ ಹಿಡಿದಿಟ್ಟಿದ್ದಾರೆ. ಪೀಳಿಗೆಯ ಅಂತರ ಎಂಬ ಸಾಮಾಜಿಕ ವಿದ್ಯಮಾನವನ್ನು ಅನುಭವಾತ್ಮಕವಾಗಿ ಹಿಡಿದಿಡುವ ‘ಅಪ್ಪನ ತಪ್ಪಡಿ’ ಇಂದಿನ ತಲೆಮಾರು ಸಮಾಜವನ್ನು ನೋಡುವ ಹಾಗೂ ಶೋಷಣೆಯನ್ನು ನಿರ್ವಚಿಸುವ ಮಾದರಿಗೆ ಕನ್ನಡಿ ಹಿಡಿದಂತಿದೆ. ಕಸುಬು, ವೃತ್ತಿಯ ಹೆಸರಿನಲ್ಲಿ ತುಳಿತಕ್ಕೊಳಗಾದವರನ್ನು ಅಧೀನ ಸ್ಥಿತಿಯಲ್ಲೇ ಕಾಪಾಡಲು ಬಯಸುವ ಯಜಮಾನಿಕೆಯ ಸಂಸ್ಕೃತಿಯನ್ನು ಧಿಕ್ಕರಿಸುವ ಏಕಾಂತನ ಸಿಟ್ಟಿನ ಅಭಿವ್ಯಕ್ತಿಯಲ್ಲಿ ‘ತಪ್ಪಡಿ’ ಎಂಬ ಚರ್ಮವಾದ್ಯ ಶೋಷಣೆಯ ಸಂಕೇತವಾಗಿ ಕಾಣುವುದು ಕತೆಗಾರನ ಸೂಕ್ಷ್ಮ ಪ್ರಜ್ಞೆಯನ್ನು ಸೂಚಿಸುವಂತಿದೆ.
ದುಡಿಯುವ ಜನರಿಗೆ ಸುಸ್ಥಿರ ಬದುಕು ಕಟ್ಟಿಕೊಡಲಾಗದ ಸಮಾಜ ಎಷ್ಟೇ ಸಮೃದ್ಧವಾಗಿದ್ದರೂ ತಳಸ್ತರದಲ್ಲಿ ಭ್ರಮಾಧೀನ ಪ್ರಪಂಚವನ್ನೇ ಕಾಪಾಡಿಕೊಳ್ಳುತ್ತದೆ. ಅನಿಶ್ಚಿತ ಭವಿಷ್ಯ, ಅಭದ್ರ ಜೀವನ ಯೌವ್ವನವನ್ನು ಭ್ರಮಾಧೀನಗೊಳಿಸುತ್ತದೆ. ‘ಭ್ರಾಂತಿ’ ಕತೆಯಲ್ಲಿ ಮಂಜುನಾಥ್ ಇಂತಹುದೇ ತಳಮಳಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತಾರೆ. ಸಮಾಜದಲ್ಲಿ ಭ್ರಾಂತಿ ಆಳಕ್ಕಿಳಿಯುತ್ತಿರುವ ಹೊತ್ತಿನಲ್ಲೇ ಪ್ರಬಲ ವರ್ಗಗಳು ತಮ್ಮ ಜಾತಿ-ಅಂತಸ್ತು ಮತ್ತು ಸ್ಥಾನಮಾನಗಳನ್ನೇ ಗುರಾಣಿಯನ್ನಾಗಿ ಬಳಸಿ, ದೇವರು ಧರ್ಮ ಮತ್ತು ಆಚರಣೆಗಳಿಗೂ ವಾರಸುದಾರಿಕೆಯನ್ನು ಪಡೆದುಕೊಳ್ಳುತ್ತವೆ. ಇಂತಹ ಊಳಿಗಮಾನ್ಯ ಸಮಾಜವನ್ನು ಧಿಕ್ಕರಿಸಲು ಲೇಖಕ ಮಂಜುನಾಥ್ ‘ದೇಗುಲದ ಘಂಟೆ...’ಯನ್ನೇ ಸಂಕೇತವಾಗಿ ಬಳಸಿಕೊಳ್ಳುತ್ತಾರೆ. ಪ್ರತಿರೋಧ ಧ್ವನಿಗೆ ದನಿಯಾಗುವ ಒಂದು ಬಹುಜನ ಸಮಾಜವನ್ನು ಸದ್ದು ಮಾಡದ ಘಂಟೆಯ ಛಾಯೆಯಲ್ಲಿ ಮಂಜುನಾಥ್ ಕಲ್ಪಿಸಿಕೊಳ್ಳುವುದು ಅವರ ಸೃಜನಶೀಲತೆಯ ಸಂಕೇತ.
ಇಡೀ ಸಂಕಲನದಲ್ಲಿ ಓದುಗರ ಮನಸ್ಸನ್ನು ಹಿಡಿದಿಡುವುದು ‘ಕಳೆದು ಹೋದವಳ ಗುರುತು’ ಎಂಬ ಹೃದಯಸ್ಪರ್ಶಿ ಕತೆ. ಕಾರಣ, ಈ ಕತೆಯಲ್ಲಿ ಮಂಜುನಾಥ್ ತಮ್ಮ ಕತೆ ಕಟ್ಟುವ ಕೌಶಲ, ನಿರೂಪಣೆಯ ಜಾಣ್ಮೆ ಮತ್ತು ಸೂಕ್ಷ್ಮ ಮನುಜ ಸಂಬಂಧಗಳನ್ನು ಹಿಡಿದಿಡುವ ಸಂವೇದನೆಯ ಭಾಷೆ ಎಲ್ಲವನ್ನೂ ಹೊರಹಾಕಿದ್ದಾರೆ. ಒಬ್ಬ ತಾಯಿ ತನ್ನ ಕಾಣೆಯಾದ ಮಗನಿಗಾಗಿ ಹಪಹಪಿಸುವುದು, ಒಂದು ಅನಾಥ ಶಿಶು ಹೆತ್ತ ತಾಯಿಯ ಮಡಿಲಿಗಾಗಿ ಹಂಬಲಿಸುವುದು ಈ ಎರಡೂ ಸಹ ಮನುಷ್ಯ ಸಂಬಂಧಗಳನ್ನು ನಿರ್ವಚಿಸುವ ತಳಪಾಯಗಳು. ಈ ಕತೆಯಲ್ಲಿ ಮಂಜುನಾಥ್ ಸಂವಾದಿಸಿರುವ ವೈಖರಿ ಓದುಗರನ್ನು ಹಿಡಿದು ಕೂರಿಸುತ್ತದೆ. ಹೆತ್ತ ಜೀವ, ಅನಾಥ ಶಿಶುವನ್ನು ರಕ್ಷಿಸಿ ಸಾಕಿದ ಉದಾತ್ತ ಹೃದಯ ಮತ್ತು ತಾಯಿಮಮತೆಗಾಗಿ ತುಡಿಯುವ ಬಾಲಕ ಸಂಬಂಧಗಳೇ ನಮ್ಮ ಸಮಾಜದ ಕಣ್ತೆರೆಸುವಂತಹುದು.
ಇದೇ ಧ್ವನಿಯ ಮತ್ತೊಂದು ಆಯಾಮವನ್ನು ‘ಮೊಳಕೆಯೊಡೆಯಿತು ಬೀಜ’ ಕತೆಯಲ್ಲಿ ಮಂಜುನಾಥ್ ತೆರೆದಿಡುತ್ತಾರೆ. ಹೆತ್ತ ಮಕ್ಕಳು ಮಾತ್ರ ಮಕ್ಕಳಲ್ಲ ಅಥವಾ ಹೆತ್ತೊಡಲು ಮಾತ್ರವೇ ಅಮ್ಮನೂ ಅಲ್ಲ ಈ ಔದಾತ್ಯವನ್ನು 21ನೇ ಶತಮಾನದಲ್ಲೂ ನಮ್ಮ ಸಮಾಜ ಅರಿತುಕೊಂಡಿಲ್ಲ. ಇದು ವಾಸ್ತವ. ಆದರೆ ಈ ಸಮಾಜದೊಳಗಿನ ಕೆಲವು ಬೆಳಕಿಂಡಿಗಳು ನೆಲದ ವಾಸ್ತವಗಳನ್ನು ಭೇದಿಸಿರುವುದನ್ನೂ ಕಾಣಬಹುದು. ಇಂತಹ ಒಂದು ಮನಸ್ಪರ್ಶಿ ಕತೆಯನ್ನು ಮಂಜುನಾಥ್ ಹೆಣೆದಿದ್ದಾರೆ. ಅನಾಥ ಶಿಶುವನ್ನು ದತ್ತುಪಡೆಯುವ ಸುಮತಿ ಮತ್ತು ಆಕೆಯ ಪತಿ ಆದರ್ಶಪ್ರಾಯರಾಗಿ ಕಾಣುವುದು ಸಹಜವೇ ಅಲ್ಲವೇ?
ಈ ಕಥಾ ಸಂಕಲನದಲ್ಲಿ ಮಂಜುನಾಥ್ ಅವರು ಪ್ರೀತಿ ಪ್ರೇಮ ಮತ್ತು ಬಾಂಧವ್ಯಗಳ ಸುತ್ತಲೂ ಕೆಲವು ಪ್ರಸಂಗಗಳನ್ನು ಕಥನವಾಗಿಸಿದ್ದಾರೆ. ‘ಕಾಡು ಕಾಯುವ ಮರ’ ಅಂತಹ ಒಂದು ಕತೆ. ಮತ್ತೊಂದೆಡೆ ಈ ಮನುಷ್ಯ ಸಂಬಂಧಗಳ ಸೂಕ್ಷ್ಮತೆಗಳ ಒಳಗೇ ಅಡಗಿರಬಹುದಾದ ಒಂದು ವಂಚಕ ಜಗತ್ತನ್ನೂ ‘ಅಂತರ್ಮುಖಿ’ ಕತೆಯಲ್ಲಿ ಮಂಜುನಾಥ್ ತೆರೆದಿಡುತ್ತಾರೆ. ಹಣ ಎನ್ನುವುದು ಬಾಂಧವ್ಯಗಳನ್ನು ವ್ಯಾವಹಾರಿಕಗೊಳಿಸುತ್ತದೆ, ಪ್ರೀತಿ ವಾತ್ಸಲ್ಯಗಳನ್ನು ವಾಣಿಜ್ಯೀಕರಣಗೊಳಿಸುತ್ತದೆ. ಔದಾರ್ಯ, ದಯೆ ಮುಂತಾದ ಔದಾತ್ಯಗಳು ವ್ಯಾವಹಾರಿಕ ಬದುಕಿನಲ್ಲಿ ಮಾರುಕಟ್ಟೆಯ ಸರಕುಗಳಾಗುವುದನ್ನು ಈ ಕತೆಯಲ್ಲಿ ಮೌನಶ್ರೀ ಮೌನವಾಗಿ ಅನುಭವಿಸುವ ಮಾನಸಿಕ ಯಾತನೆಯ ಮೂಲಕ ಅಭಿವ್ಯಕ್ತಿಸಿರುವುದು ಉತ್ತಮ ಪ್ರಯತ್ನ.
ಈ ಕಥಾ ಸಂಕಲನದಲ್ಲಿ ಕೆಲವು ಸಾಧಾರಣ ಎನಿಸಬಹುದಾದ ಕತೆಗಳೂ ಇರುವುದು ಸಹಜ. ಇದಕ್ಕೆ ಯಾವ ಸಂಕಲನವೂ ಹೊರತಾಗುವುದಿಲ್ಲ. ಸಮಕಾಲೀನ ಬದುಕಿನಲ್ಲಿ ಎದುರಾಗುವ ಜಟಿಲ ಸಿಕ್ಕುಗಳೇ ಇಡೀ ಸಂಕಲನದ ಮೂಲ ಧಾತು ಆಗಿರುವುದು, ಜಡೇಕುಂಟೆ ಮಂಜುನಾಥ್ ಅವರ ಕಥಾ ವಿನ್ಯಾಸವನ್ನು ಪ್ರಭಾವಿಸಿದೆ. ಕತೆಗಾರರು ಅನುಸರಿಸುವ ಶೈಲಿ ಮತ್ತು ಸೃಜನಾತ್ಮಕತೆಯನ್ನು ಗಮನಿಸಿದರೆ, ವರ್ತಮಾನದ ಸಮಾಜದಲ್ಲಿ ತಳಸಮುದಾಯಗಳು ಮತ್ತು ಕೆಳವರ್ಗಗಳು ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳನ್ನೂ ಸಾಹಿತ್ಯಿಕವಾಗಿ ಮರುಕಟ್ಟುವ ಕ್ಷಮತೆ ಅವರಲ್ಲಿ ಗುರುತಿಸಬಹುದು. ಡಿಜಿಟಲ್ ಯುಗದ ಅಸಮಾನತೆ ಮತ್ತು ದೌರ್ಜನ್ಯಗಳ ಚೌಕಟ್ಟುಗಳಲ್ಲಿ ಕಾಣುವ ದಟ್ಟಾರಣ್ಯಗಳನ್ನು ಭೇದಿಸುವ ಸೃಜನಶೀಲ ಅಕ್ಷರ ಕಲೆ ಮಂಜುನಾಥ್ ಅವರಲ್ಲಿರುವುದನ್ನು ‘ಕಾಡು ಕಾಯುವ ಮರ’ ದೃಢೀಕರಿಸುತ್ತದೆ. ಈ ದೃಷ್ಟಿಯಿಂದ ಮಂಜುನಾಥ್ ಅಭಿನಂದನಾರ್ಹರು.







