ಸುಳ್ಳು ಪ್ರಕರಣ ದಾಖಲು: 54 ದಿನಗಳನ್ನು ಜೈಲಲ್ಲಿ ಕಳೆದ ಯುವಕ

ತಾಜುದ್ದೀನ್
ಪೊಲೀಸ್ ಜೀಪ್ ತಳ್ಳಲು ನಿರಾಕರಿಸಿದ ಮಹಾಪರಾಧಕ್ಕಾಗಿ 54 ದಿನಗಳನ್ನು ಅನ್ಯಾಯವಾಗಿ ಜೈಲಲ್ಲಿ ಕಳೆದ ಅಮಾಯಕನ ಕತೆಯಿದು. ಖತರ್ನಲ್ಲಿ ಕೆಲಸ ಮಾಡುತ್ತಿದ್ದ ತಾಜುದ್ದೀನ್ ಮಗಳ ಮದುವೆಗೆಂದು ಊರಿಗೆ ಬಂದವರು, ಪೊಲೀಸರ ಕ್ರೌರ್ಯಕ್ಕೆ ಬಲಿಯಾಗಿ ಜೈಲು ಸೇರಬೇಕಾಯಿತು. ಇದರ ವಿರುದ್ಧ ಸುದೀರ್ಘ ಹೋರಾಟವನ್ನು ನಡೆಸಿದ ಬಳಿಕ ಸಂತ್ರಸ್ತ ತಾಜುದ್ದೀನ್ ನಿರಪರಾಧಿಯೆನ್ನುವುದನ್ನು ನ್ಯಾಯಾಲಯ ಘೋಷಿಸಿದೆ ಮಾತ್ರವಲ್ಲ, ಆತನಿಗೆ ಪರಿಹಾರ ನೀಡುವಂತೆಯೂ ಆದೇಶ ನೀಡಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ತಲಶೇರಿ ಈಸ್ಟ್ ಕದಿರೂರ್ ನಿವಾಸಿ ವಿ.ಕೆ.ತಾಜುದ್ದೀನ್ಗೆ ಹತ್ತು ಲಕ್ಷ ರೂ. ಹಾಗೂ ಅವರ ಪತ್ನಿ ಮತ್ತು ಮೂವರು ಮಕ್ಕಳಿಗೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ಮೊತ್ತ ನೀಡುವಂತೆ ಕಳೆದವಾರ ಜಸ್ಟೀಸ್ ಪಿ.ಎಂ.ಮನೋಜ್ ತೀರ್ಪು ನೀಡಿದ್ದಾರೆ.
ಕಣ್ಣೂರ್ ಚಕ್ಕರಯ್ಕಲ್ ಸ್ಟೇಶನ್ನ ಎಸ್ಐ, ಈಗ ಕಣ್ಣೂರ್ ಟ್ರಾಫಿಕ್ ಪೊಲೀಸ್ ಸ್ಟೇಶನ್ ಎಸ್ಐ ಪಿ.ಬಿಜು, ಚಕ್ಕರಯ್ಕಲ್ ಸ್ಟೇಶನ್ನಲ್ಲಿ ಎಎಸ್ಐಯಾಗಿದ್ದ ಯೋಗೇಶ್, ಟಿ.ಉಣ್ಣಿಕೃಷ್ಣನ್ ಎಂಬವರಿಂದ ಪರಿಹಾರ ಮೊತ್ತವನ್ನು ವಸೂಲು ಮಾಡಬೇಕು. ಆದರೆ ಪರಿಹಾರ ಮೊತ್ತವನ್ನು ಮೊದಲು ಸರಕಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತು. ಜೊತೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರುದಾರ ಸಿವಿಲ್ ನ್ಯಾಯಾಲಯವನ್ನು ಸಮೀಪಿಸಬಹುದು ಎಂದು ಹೈಕೋರ್ಟ್ ಹೇಳಿತು.
ಮಗಳ ಮದುವೆ, 15 ದಿನಗಳ ರಜೆ, ಆದರೆ ಮುಂದೆ ನಡೆದದದ್ದು...! :
ಖತರ್ನಲ್ಲಿ ಕೆಲಸ ಮಾಡುತ್ತಿದ್ದ ತಾಜುದ್ದೀನ್ 2018ರ ಜೂನ್ 25ರಂದು ಊರಿಗೆ ಬಂದಿದ್ದರು. ಮಗಳ ಮದುವೆಯ ಕಾರಣಕ್ಕಾಗಿ ಅವರಿಗೆ 15 ದಿನಗಳ ರಜೆ ಸಿಕ್ಕಿತ್ತು. ಜುಲೈ 11ರಂದು ಸಂಬಂಧಿಕರ ಮನೆಯಿಂದ ಮನೆಗೆ ಹಿಂದಿರುಗುವಾಗ ಪೊಲೀಸ್ ಜೀಪೊಂದರ ಚಕ್ರಗಳು ಮಣ್ಣಿನಲ್ಲಿ ಹೋತು ಹೋಗಿದ್ದು ಕಂಡುಬಂತು. ಪೊಲೀಸರು ಇವರ ಕಾರನ್ನು ತಡೆದು ಜೀಪನ್ನು ಮೇಲೆತ್ತಲು ಸಹಾಯಮಾಡುವಂತೆ ಮನವಿ ಮಾಡಿದರು. ಅದರಂತೆ ಕಾರಿನಲ್ಲಿರುವವರೆಲ್ಲರೂ ಇಳಿದು ಪೊಲೀಸರ ಜೀಪನ್ನು ತಳ್ಳತೊಡಗಿದರು. ಆದರೆ ತಾಜುದ್ದೀನ್ ಕಾರಿನಿಂದ ಇಳಿದಿರಲಿಲ್ಲ. ಪೊಲೀಸರು ಕಾರಣ ಕೇಳಿದಾಗ ಸೊಂಟ ನೋವೆಂದು ತಾಜುದ್ದೀನ್ ಉತ್ತರಿಸಿದರಾದರೂ ಪೊಲೀಸರು ಬಿಡಲಿಲ್ಲ. ಅವರು ತಾಜುದ್ದೀನ್ನನ್ನು ಕಾರಿನಿಂದ ಎಳೆದು ಕೆಳಗೆ ಹಾಕಿ ಫೋಟೊ ತೆಗೆದರು. ಬಳಿಕ ಬಟ್ಟೆ ಬಿಚ್ಚುವಂತೆ ಹೇಳಿ ಆತ ಕಳವು ಪ್ರಕರಣದ ಆರೋಪಿ ಎಂದು ಘೋಷಿಸಿದರು. ಅನಂತರ ತಾಜುದ್ದೀನ್ನ ಕುಟುಂಬವನ್ನು ರಾತ್ರಿ ಒಂದು ಗಂಟೆಗೆ ಠಾಣೆಗೆ ಕರೆದೊಯ್ಯಲಾಯಿತು. ಚಿನ್ನದ ಸರವೊಂದನ್ನು ಎಗರಿಸಿ ಪರಾರಿಯಾಗುವ ಸಿಸಿಟಿವಿ ದೃಶ್ಯವೊಂದನ್ನು ತೋರಿಸಿ ಅದು ತಾಜುದ್ದೀನ್ ಎಂದು ಹೇಳಿ ಅವರನ್ನು ಪೊಲೀಸರು ಬಂಧಿಸಿದರು.
ಚಿನ್ನದ ಸರ ಎಗರಿಸಲಾಗಿದೆ ಎಂದು ಪೊಲೀಸರು ಹೇಳುವ ಸಂದರ್ಭದಲ್ಲಿ ತಾಜುದ್ದೀನ್ ಆ ಸ್ಥಳದಲ್ಲಿರಲಿಲ್ಲ. ಅದಕ್ಕಾಗಿ ಎಲೆಕ್ಟ್ರಾನಿಕ್ ಫೂಟೇಜ್ಗಳನ್ನು ಪರಿಶೀಲಿಸಬೇಕು ಎಂಬ ಕುಟುಂಬಸ್ಥರ ಬೇಡಿಕೆಯನ್ನು ಪೊಲೀಸರು ತಳ್ಳಿ ಹಾಕಿದರು. ಸಿಸಿಟಿವಿಯಲ್ಲಿ ಸ್ಕೂಟರ್ ಓಡಿಸುತ್ತಿರುವ ವ್ಯಕ್ತಿಯೊಂದಿಗೆ ತಾಜುದ್ದೀನ್ ಹೋಲಿಕೆಯಾಗುವುದಿಲ್ಲ ಎಂಬ ವಾದವನ್ನೂ ಪೊಲೀಸರು ನಿರಾಕರಿಸಿದರು.
ಜೈಲಿನಲ್ಲಿ ಕಳೆದದ್ದು 54 ದಿನಗಳು... :
ಕದಿರೂರ್ ಎಂಬಲ್ಲಿ ನಡೆದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿ ತಾಜುದ್ದೀನ್ರನ್ನು ಬಂಧಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹಾಗೂ ಸೆಶನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ತಾಜುದ್ದೀನ್ ಆಗಸ್ಟ್ನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ನ್ಯಾಯಾಲಯದ ಅನುಮತಿಯಿಲ್ಲದೆ ರಾಜ್ಯದ ಹೊರಗೆ ಹೋಗುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಈ ನಡುವೆ ತಾಜುದ್ದೀನ್ನ ಪತ್ನಿ ಮುಖ್ಯಮಂತ್ರಿಗೆ ನೀಡಿದ ದೂರಿನ ಮೇರೆಗೆ ಕಣ್ಣೂರು ಡಿವೈಎಸ್ಪಿಗೆ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಲಾಗಿತ್ತು. ಈ ತನಿಖೆಯಿಂದ ತಾಜುದ್ದೀನ್ ದೋಷಿಯಲ್ಲ ಎಂಬುದು ಬೆಳಕಿಗೆ ಬಂತು. ಆದರೆ ಜಾಮೀನು ಸಿಗುವವರೆಗೆ 54 ದಿನಗಳನ್ನು ತಾಜುದ್ದೀನ್ ಜೈಲಿನಲ್ಲಿ ಕಳೆದರು. ಜೊತೆಗೆ ಕೆಲಸಕ್ಕೆ ಹಾಜರಾಗುವುದು ತಡವಾಯಿತು ಎಂಬ ಕಾರಣಕ್ಕೆ ಖತರ್ನಲ್ಲಿಯೂ 23 ದಿನಗಳು ಜೈಲಿನಲ್ಲಿ ಕಳೆಯಬೇಕಾಗಿ ಬಂತು. ಬಳಿಕ ಕೆಲಸವೂ ಕೈತಪ್ಪಿತು ಎಂದು ತಾಜುದ್ದೀನ್ ಹೇಳುತ್ತಾರೆ. ಆದರೆ ತಾಜುದ್ದೀನ್ ಖತರ್ನಲ್ಲಿ ಜೈಲಿಗೆ ಹೋದದ್ದು ಹಣ ವ್ಯವಹಾರದ ವಿಷಯದಲ್ಲಿ ಎಂದು ಎಸ್ಐ ನ್ಯಾಯಾಲಯದಲ್ಲಿ ವಾದಿಸಿದ್ದರು.
ಕಳ್ಳನೆಂಬ ಹಣೆಪಟ್ಟಿ, ಅವಮಾನ :
ಚಿನ್ನದ ಸರ ಕಳವಾಗಿದೆ ಎಂದು ಹೇಳಲಾದ ಚೂರಕ್ಕಳಂ ಎಂಬ ಸ್ಥಳಕ್ಕೆ ತನ್ನನ್ನು ಪೊಲೀಸರು ಜೀಪಲ್ಲಿ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ನೂರಾರು ಜನರ ಮುಂದೆಯೇ ತನ್ನನ್ನು ಪೊಲೀಸರು ನಡೆಸಿಕೊಂಡು ಹೋದರು. ಈ ವೇಳೆ ಸೇರಿದ ಜನ ತನ್ನನ್ನು ಕಳ್ಳನೆಂದು ಕೂಗಿ ಕರೆದರು. ಇದರಿಂದ ಮನಸ್ಸಿಗೆ ಉಂಟಾದ ನೋವು ಹಾಗೂ ಅಪಮಾನವನ್ನು ಮಾತಿನಲ್ಲಿ ಹೇಳಲಾಗದು. ಸ್ಕೂಟರನ್ನು ಹುಡುಕುವ ನೆಪದಲ್ಲಿ ತನ್ನನ್ನು ಸಂಬಂಧಿಕರ, ಸ್ನೇಹಿತರ, ಆಭರಣಗಳ ಅಂಗಡಿ ಹೀಗೆ ನೂರಾರು ಜನರ ಮುಂದೆ ತನ್ನನ್ನು ಕೊಂಡೊಯ್ಯಲಾಯಿತು. ತನಗುಂಟಾದ ನೋವು, ಭಯ, ಅಪಮಾನ, ಕೈತಪ್ಪಿದ ಕೆಲಸ, ಜೈಲಿನಲ್ಲಿ ಕಳೆದ ದಿನಗಳು ಇವುಗಳನ್ನೆಲ್ಲ ತೋರಿಸಿ ತನಗೆ ಒಂದು ಕೋಟಿ ರೂ. ನಷ್ಟ ಪರಿಹಾರ ಹಾಗೂ ತನ್ನ ಪತ್ನಿ ಮಕ್ಕಳಿಗೆ ತಲಾ ಹತ್ತು ಲಕ್ಷ ರೂ.ಗಳನ್ನು ನೀಡುವಂತೆ ತಾಜುದ್ದೀನ್ ನ್ಯಾಯಾಲಯದಲ್ಲಿ ಮನವಿ ಮಾಡಿದರು.
ದುರುದ್ದೇಶವಿರಲಿಲ್ಲ... :
ಸರ ಕಳೆದುಕೊಂಡ ಎರಡು ಪ್ರಕರಣಗಳಲ್ಲಿ ಸಿಲುಕಿದವರು ತಾಜುದ್ದೀನ್ ಆರೋಪಿ ಎಂದು ಗುರುತಿಸಿದ್ದರಿಂದ ತಾಜುದ್ದೀನ್ನನ್ನು ಬಂಧಿಸಲಾಯಿತು ಎಂಬುದು ಪೊಲೀಸರು ಕೊಟ್ಟ ವಿವರಣೆ. ಪ್ರಬಲ ಪುರಾವೆಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಹಿನ್ನೆಲೆಯಲ್ಲಿ ತಾಜುದ್ದೀನ್ನನ್ನು ಆರೋಪಿ ಎಂದು ಪರಿಗಣಿಸಲಾಯಿತೇ ಹೊರತು ಆತನನ್ನು ಸಾರ್ವಜನಿಕರ ಮುಂದೆ ಅಪಮಾನಿಸುವ ಯಾವುದೇ ಉದ್ದೇಶ ತನಗಿರಲಿಲ್ಲ. ಇದರ ಹಿಂದೆ ಸರಗಳವು ಪ್ರಕರಣವನ್ನು ಭೇದಿಸುವ ಸದುದ್ದೇಶ ಮಾತ್ರ ಇತ್ತಲ್ಲದೆ ತಾಜುದ್ದೀನ್ನ ಮೇಲೆ ತನಗೆ ಯಾವುದೇ ವಿರೋಧವಿರಲಿಲ್ಲ ಎಂಬುದು ಎಸ್ಐಯ ವಾದ.
ತನಗೆ ಕೇವಲ ಮೂರು ವರ್ಷಗಳ ಸೇವಾ ಅನುಭವ ಮಾತ್ರ ಇದೆ ಎಂಬುದು ತನ್ನ ನಿಷ್ಕಳಂಕತೆ ಸಾಬೀತುಪಡಿಸಲು ಎಸ್ಐ ಹೇಳಿದ ಇನ್ನೊಂದು ಕಾರಣ. ಅಲ್ಲದೆ ತಾನು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಕಾಪಾಡುತ್ತಿದ್ದು, ಅಪರಾಧಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಶ್ರಮಿಸುತ್ತಿರುವುದಾಗಿ ಎಸ್ಐ ಹೇಳುತ್ತಾರೆ.
ಬಲೆಗೆ ಬಿದ್ದ ನೈಜ ಆರೋಪಿ :
ಮುಖ್ಯಮಂತ್ರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಡಿವೈಎಸ್ಪಿ, ಸರಕಳವು ಪ್ರಕರಣದ ನೈಜ ಆರೋಪಿಯನ್ನ್ನು ಬಂಧಿಸಿದರು. ಆತನ ಹೆಸರು ಶರತ್ ವಲ್ಸರಾಜ್. ಈತನ ಬಂಧನವಾಗುತ್ತಿದ್ದಂತೆಯೇ ಆರೋಪಿ ಪಟ್ಟಿಯಿಂದ ತಾಜುದ್ದೀನ್ ಹೆಸರನ್ನು ಕೈಬಿಡಲಾಯಿತು. ಸರಕಳವು ಪ್ರಕರಣದ ತನಿಖೆಯಲ್ಲಿ ಎಸ್ಐಯಿಂದ ಕರ್ತವ್ಯ ಲೋಪವಾಗಿದೆ. ಜೊತೆಗೆ ಮೇಲಧಿಕಾರಿಯಾದ ತನ್ನ ಆದೇಶಗಳನ್ನು ಧಿಕ್ಕರಿಸಲಾಗಿದೆ ಎಂದು ಡಿವೈಎಸ್ಪಿಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಯನ್ನು ವರ್ಗಾವಣೆ ಮಾಡಬೇಕು ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಡಿವೈಎಸ್ಪಿ ಶಿಫಾರಸಿನ ಮೇರೆಗೆ ಎಸ್ಐಯ ಭಾಗದಿಂದ ಕರ್ತವ್ಯ ಲೋಪವಾಗಿದ್ದು ದೃಢವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆದರೆ ವಿವಿಧ ಸನ್ನಿವೇಶಗಳ ಕಾರಣ ತನಿಖೆಯ ದಾರಿ ತಪ್ಪಿತ್ತು. ಅನುಭವವಿರುವ ಪೊಲೀಸ್ ಅಧಿಕಾರಿಗಳಿಗೂ ಇಂತಹ ತಪ್ಪುಗಳು ಸಂಭವಿಸಬಹುದು ಎಂದು ಅನಂತರ ಡಿವೈಎಸ್ಪಿ ಹೈಕೋರ್ಟ್ನಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಎಸ್ಐ ಕ್ರಮವನ್ನು ಡಿವೈಎಸ್ಪಿ ಬೆಂಬಲಿಸಿದ್ದಲ್ಲದೆ ತನ್ನ ಹಿಂದಿನ ನಿಲುವಿಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದರಿಂದ ಹೈಕೋರ್ಟ್ ಇದನ್ನು ತಳ್ಳಿ ಹಾಕಿತು.
ಕಳ್ಳನೆಂದು ಒಪ್ಪಿಕೊಳ್ಳುವಂತೆ ಒತ್ತಡ :
ತಾಜುದ್ದೀನ್ನನ್ನು ಬಂಧಿಸಿ ಕೇರಳ ಪೊಲೀಸರು ಬೆಂಗಳೂರಿನ ಮನೆಯೊಂದರ ಇಕ್ಕಟ್ಟಾದ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ತಪ್ಪಿತಸ್ಥನಲ್ಲ ಎಂದು ದೃಢಪಟ್ಟಾಗಲೂ ಕಳವು ಮಾಡಿದ್ದನ್ನು ಒಪ್ಪಿಕೊಳ್ಳುವಂತೆ ತಾಜುದ್ದೀನ್ ಮೇಲೆ ಒತ್ತಡ ಹೇರಲಾಯಿತು. ಎಲ್ಲಿಯವರೆಗೆ ಎಂದರೆ ಕೆಲ ದಿನಗಳ ಹಿಂದೆ ವಿವಾಹಿತೆಯಾದ ಮಗಳ ಬದುಕನ್ನೇ ನಾಶ ಮಾಡುವುದಾಗಿ ಬೆದರಿಕೆಯೊಡ್ಡಲಾಯಿತು. ಊರಿನಲ್ಲಿ 54 ದಿನಗಳ ಜೈಲು ವಾಸ ಅನುಭವಿಸಿ ಖತರ್ಗೆ ಮರಳಿದ ತಾಜುದ್ದೀನ್ಗೆ ಕೆಲಸ ಮರಳಲು ತಡವಾಯಿತು ಎಂಬ ಕಾರಣಕ್ಕೆ ಅಲ್ಲಿಯೂ ಜೈಲು ಕಾದಿತ್ತು. ಹತ್ತು ಕೋಟಿ ರೂ.ಗಳ ವ್ಯಾಪಾರ ಕುಸಿಯಿತು. ಆರೋಗ್ಯ ಕ್ಷೀಣಿಸಿತು. ವಾಸಿಸುತ್ತಿದ್ದ ಮನೆಯನ್ನು ಸಾಲಗಾರರಿಗೆ ಅಡವಿಡಬೇಕಾಗಿ ಬಂತು.
ಹೋರಾಟ ಮುಂದುವರಿಸಲು ನಿರ್ಧಾರ :
ಸುಳ್ಳು ಪ್ರಕರಣದಲ್ಲಿ ಸಿಲುಕಿ 54 ದಿನಗಳ ಕಾಲ ಜೈಲಲ್ಲಿದ್ದ ತಾಜುದ್ದೀನ್ ಕಾನೂನು ಹೋರಾಟ ಮುಂದುವರಿಸಲಿದ್ದಾರೆ. ಕೆಳಗಿನ ನ್ಯಾಯಾಲಯದಲ್ಲಿ ಹೆಚ್ಚಿನ ಪರಿಹಾರ ಪಡೆಯಬಹುದು ಎಂಬ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅವರು ಹೋರಾಟ ಮುಂದುವರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಹಿಂದೆ ತಾಜುದ್ದೀನ್ ಮತ್ತು ಕುಟುಂಬಕ್ಕೆ 14 ಲಕ್ಷ ರೂ.ಗಳ ಪರಿಹಾರ ಮೊತ್ತ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು.
ಹೈಕೋರ್ಟ್ ತೀರ್ಪಿನಲ್ಲಿ ತೃಪ್ತಿಯಿದೆ. ವಕೀಲರೊಂದಿಗೆ ಚರ್ಚಿಸಿ ಕೆಳನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ತಾಜುದ್ದೀನ್ ನಿರ್ಧರಿಸಿದ್ದಾರೆ. ಪೊಲೀಸರಿಂದ ತನಗುಂಟಾದ ಅತ್ಯಂತ ಕ್ರೂರ ಅನುಭವ ಇನ್ಯಾರದೇ ಬದುಕಲ್ಲಿ ನಡೆಯದಿರಲು ಕಾನೂನು ಹೋರಾಟ ಮುಂದುವರಿಸಲು ಪ್ರೇರಣೆ ಎಂದು ಅವರು ಹೇಳಿದ್ದಾರೆ.
ಕೃಪೆ : ಮನೋರಮಾ ಆನ್ಲೈನ್







