ಇಳಿ ವಯಸ್ಸಿನಲ್ಲೂ ಮಿಶ್ರ ಬೇಸಾಯದ ಮೂಲಕ ಇತರ ಕೃಷಿಕರಿಗೆ ಮಾದರಿಯಾದ ರೈತ ಕೃಷ್ಣಪ್ಪ

ಮಂಡ್ಯ: ಕೃಷಿ ಜತೆಗೆ ಪಶುಸಂಗೋಪನೆ, ಮೀನು ಸಾಕಣಿಕೆ ಮಾಡುವ ಮೂಲಕ ಮದ್ದೂರು ತಾಲೂಕು ಉಪ್ಪಿನಕೆರೆ ಗ್ರಾಮದ ಹಿರಿಯ ರೈತ ಸಿ.ಕೃಷ್ಣಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ. ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಈ ಇಳಿ ವಯಸ್ಸಿನಲ್ಲೂ ಉತ್ಸುಕರಾಗಿದ್ದಾರೆ.
ಇಷ್ಟಪಟ್ಟು, ಕಷ್ಟಪಟ್ಟು ಬೇಸಾಯ ಮಾಡಿದರೆ ಕೃಷಿ ಕೈ ಹಿಡಿಯುತ್ತದೆ ಎಂಬುದಾಗಿ ಬಲವಾಗಿ ಪ್ರತಿಪಾದಿಸುವ ಕೃಷ್ಣಪ್ಪ ಅವರಿಗೆ ಇರುವುದು ನಾಲ್ಕು ಎಕರೆ ಭೂಮಿ. ಕೆಆರ್‌ಎಸ್ ನಾಲಾ ಅಚ್ಚುಕಟ್ಟು ಪ್ರದೇಶವಾದ್ದರಿಂದ ನೀರಿಗೆ ತೊಂದರೆ ಇಲ್ಲ. ಕೃಷಿ ಹೊಂಡ ಬೇಸಗೆ ಕಾಲದ ನೀರಿನ ಬವಣೆ ನೀಗುತ್ತಿದೆ. ಹೆಚ್ಚು ಹಸುಗಳನ್ನು ಸಾಕಿರುವುದರಿಂದ ತನ್ನ ಭೂಮಿಯ ಅರ್ಧಭಾಗವನ್ನು ರಾಸುಗಳ ಮೇವಿಗೆ ಬಳಸಿಕೊಂಡಿದ್ದಾರೆ. ಎರಡು ಎಕರೆಯಲ್ಲಿ ಮುಸುಕಿನ ಜೋಳ ಮತ್ತು ಸೀಮೆಹುಲ್ಲು ಬೆಳೆಸಿದ್ದರೆ, ಉಳಿದ ಎರಡು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಜಮೀನಿನ ಸುತ್ತ ಮತ್ತು ಮುಖ್ಯ ಬದುಗಳ ಮೇಲೆ ನೀಲಗಿರಿ ಮರ ಬೆಳೆಸಿದ್ದಾರೆ.
ಐದಾರು ಇಲಾತಿ ಹಸು, ಎರಡು ಮಲೆನಾಡು ಗಿಡ್ಡ, ಒಂದಷ್ಟು ಕುರಿ, ಮೇಕೆ ಮತ್ತು ಮೊಲಗಳನ್ನೂ ಸಾಕುತ್ತಿದ್ದಾರೆ. ನಾಟಿ ಕೋಳಿಗಳಿಂದಲೂ ಲಾಭ ಬರುತ್ತಿದೆ. ಹೆಚ್ಚು ರಾಸುಗಳು ಇರುವುದರಿಂದ ಕೊಟ್ಟಿಗೆ ಗೊಬ್ಬರ ಸಾಕಷ್ಟು ಸಿಗುತ್ತಿದೆ. ತನ್ನ ಜಮೀನಿಗೆ ಬಳಸಿ, ಉಳಿದ ಹೆಚ್ಚುವರಿ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ದೊಡ್ಡದಾದ ಕೃಷಿಹೊಂಡ ನಿರ್ಮಿಸಿದ್ದಾರೆ. ಇದರಿಂದ ಬೇಸಾಯಕ್ಕೆ ಅಗತ್ಯ ನೀರು ದೊರೆಯುತ್ತಿದೆ. ಇದೀಗ ಮೀನು ಮರಿಗಳನ್ನು ಬಿಟ್ಟಿದ್ದಾರೆ. ಕೆಲವು ತಿಂಗಳಲ್ಲಿ ಮೀನು ಕೃಷಿಯಿಂದಲು ಲಾಭ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪತ್ನಿ, ಮಕ್ಕಳ ಸಹಕಾರ ಕೃಷ್ಣಪ್ಪ ಅವರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.
ಸುಮಾರು 50 ವರ್ಷದಿಂದ ಬೇಸಾಯ ಮಾಡುತ್ತಿದ್ದೇನೆ. ಇದರಲ್ಲಿ ಖುಷಿ ಕಂಡಿದ್ದೇನೆ. ಶ್ರೀಮಂತನಾಗದಿದ್ದರೂ, ಕೃಷಿಯು ಸಂಸಾ ರವನ್ನು ಸುಖವಾಗಿ ಸಾಗಿಸುತ್ತಿದೆ. ಕೆಲವು ಬಾರಿ ಮಳೆ ಸರಿಯಾಗಿ ಆಗುತ್ತಿಲ್ಲವಾದ್ದರಿಂದ ಒಂದು ಕೊಳವೆ ಬಾವಿ ತೋಡಿಸಬೇಕೆಂದುಕೊಂಡಿದ್ದೇನೆ. ಕೃಷಿ, ತೋಟಗಾರಿಕೆ, ಪಶಸಂಗೋಪನಾ ಇಲಾಖೆಗಳಿಂದ ಸಿಗುವ ಸೌಲಭ್ಯ ಮತ್ತು ಸಲಹೆ ಪಡೆಯುತ್ತಿದ್ದೇನೆ.
-ಸಿ.ಕೃಷ್ಣಪ್ಪ, ಉಪ್ಪಿನಕೆರೆ ರೈತ







