ಫೆಡರಲ್ ಸಿಸ್ಟಮ್‌ನಲ್ಲಿ ದಕ್ಷಿಣ ಭಾರತಕ್ಕೆ ಬಹಳ ದೊಡ್ಡ ಅಪಾಯ ಉಂಟಾಗುತ್ತಿದೆಯೆ?

ಮೊನ್ನೆ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸಿಮೆಂಟ್ ಬೆಂಚ್ ಮೇಲೆ ಕುಳಿತು ಬಿಸಿಲು ಕಾಯುತ್ತಿದ್ದ ಬಿಹಾರದ ನಿವೃತ್ತ ಅಧಿಕಾರಿಯೊಬ್ಬರು ಸುಮ್ಮನಿರದೇ ವಾಕ್ ಮಾಡುತ್ತಿದ್ದ ನನ್ನನ್ನು ಹತ್ತಿರಕ್ಕೆ ಕರೆದು ಕೂರಿಸಿಕೊಂಡು ನನ್ನ ಬಗ್ಗೆ ನನ್ನ ಮೂಲದ ಬಗ್ಗೆ ಕೆದಕಿದರು. ನಂತರ ನಾನು ಅವರ ಮೂಲವನ್ನು ಕೆದಕಿದಾಗ, ಅವರು ಬಿಹಾರದ ಸಮಸ್ತಿಪುರಕ್ಕೆ ಸೇರಿದವರಾಗಿದ್ದು ಬಿಹಾರ ಸರಕಾರದಲ್ಲಿ ವಾಣಿಜ್ಯ ಅಧಿಕಾರಿಯಾಗಿ ನಿವೃತ್ತಿಯಾಗಿರುವುದಾಗಿ ತಿಳಿಸಿದರು. ಮುಂದುವರಿದು ಅವರ ಇಬ್ಬರು ಗಂಡು ಮಕ್ಕಳು ಹೈದರಾಬಾದ್‌ನ ಖಾಸಗಿ ಕಂಪೆನಿಗಳಲ್ಲಿ, ಒಬ್ಬಳು ಮಗಳು ಮತ್ತು ಅಳಿಯ ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ತಮ್ಮ ಮೂವರು ಮಕ್ಕಳನ್ನೂ ಬೆಂಗಳೂರಿನಲ್ಲಿ ಓದಿಸಿದ್ದಾಗಿ ಹೇಳಿದರು.
ನಾನು, ‘ಬಿಹಾರದಲ್ಲಿ ಐಟಿ/ಬಿಟಿ ಕಂಪೆನಿಗಳು ಏನಾದರು ಇವೆಯೇ?’ ಎಂದಾಗ, ‘ಇಲ್ಲ ಯಾವ ಐಟಿ/ಬಿಟಿ ಕಂಪೆನಿಗಳೂ ಇಲ್ಲ’ ಎಂಬ ಉತ್ತರ ಬಂದಿತು.
ಮತ್ತೆ ‘ಇನ್ನೇನು ಅಭಿವೃದ್ಧಿ
ಯಾಗಿದೆ?’ ಎಂದಾಗ, ‘ರಸ್ತೆಗಳು’ ಎಂದರು. ‘ರಸ್ತೆಗಳು ಬಿಟ್ಟು?’ ‘ರಸ್ತೆಗಳನ್ನು ಬಿಟ್ಟರೆ
ಲಾ ಆಂಡ್ ಆರ್ಡರ್. ಮೊದಲು ಎಲ್ಲೆಲ್ಲೂ ಗಲಭೆಗಳು, ಗೂಂಡಾಗಳೇ ತುಂಬಿಕೊಂಡಿರುತ್ತಿದ್ದರು. ಈಗ ರಾತ್ರಿ ಯಾವುದೇ ವೇಳೆಯಲ್ಲೂ ಕರೆದರೂ ಸಾಕು ಪೊಲೀಸರು ಬಂದುಬಿಡುತ್ತಾರೆ’ ಎಂದರು. ‘ಅಂದರೆ ರಸ್ತೆಗಳನ್ನು ಬಿಟ್ಟರೆ ಮತ್ತೇನು ಅಭಿವೃದ್ಧಿ
ಯಾಗಿಲ್ಲ?’ ಮತ್ತೆ ಕೆಣಕಿದೆ. ತುಸು ಹೊತ್ತು ಆಲೋಚಿಸಿ ಆಕಾಶ ಕಡೆಗೆ ನೋಡಿದರು. ಮತ್ತೆ ಸುಮ್ಮನಿರದ ನಾನು ‘ಖಾಸಗಿ ಕಂಪೆನಿಗಳು ಯಾಕೆ ಬಿಹಾರ ಮತ್ತು ಯು.ಪಿ. ರಾಜ್ಯಗಳ ಕಡೆಗೆ ತಲೆ ಹಾಕುತ್ತಿಲ್ಲ?’ ಎಂದು ಕೇಳಿಯೇಬಿಟ್ಟೆ. ಅವರಿಗೆ ಈಗ ಏನು ಹೇಳಬೇಕು ಅರ್ಥವಾಗದೆ ನನ್ನ ಕಡೆಗೆ ನೋಡಿ ನಕ್ಕರು. ಇನ್ನು ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ ಎಂದುಕೊಂಡು ಮಾತು ಬದಲಾಯಿಸಿದೆ.
ಮೊನ್ನೆ ಕೆಜಿಎಫ್ ತಾಲೂಕಿನ ಬೇತಮಂಗಳದಲ್ಲಿ (ಗಡಿಭಾಗ) ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಚರ್ಚೆಯಲ್ಲಿ ಭಾಷಣ ಮಾಡುವಾಗ ದಕ್ಷಿಣ ಭಾರತದಲ್ಲಿ ತುಂಬಿಕೊಂಡಿರುವ ಉತ್ತರ ಭಾರತದ ವಲಸಿಗರ ಬಗ್ಗೆ ಒಬ್ಬರು ಪ್ರಶ್ನೆ ಎತ್ತಿದರು. ಅಲ್ಲಿನ ಮಾತುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳುತ್ತಿದ್ದೇನೆ. ಪ್ರಸ್ತುತ ಭಾರತದಲ್ಲಿ ದಕ್ಷಿಣ ಭಾರತದ ಜೊತೆಗೆ ಮಹಾರಾಷ್ಟ್ರ , ಗುಜರಾತ್ ಮತ್ತು ದಿಲ್ಲಿ ಬಿಟ್ಟರೆ ಇತರ ಯಾವುದೇ ರಾಜ್ಯಗಳಿಂದಲೂ ಕೇಂದ್ರ ಸರಕಾರಕ್ಕೆ ಯಾವುದೇ ಹೇಳಿಕೊಳ್ಳುವಂತಹ ಆದಾಯ ಬರುತ್ತಿಲ್ಲ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಒಟ್ಟು ಜನಸಂಖ್ಯೆ ಸುಮಾರು 30 ಕೋಟಿ. ಇನ್ನು 120 ಕೋಟಿ ಜನಸಂಖ್ಯೆ ಉಳಿದ ರಾಜ್ಯಗಳದ್ದು. ದಕ್ಷಿಣ ರಾಜ್ಯಗಳಿಗೆ ಹೋಲಿಸಿದಾಗ ಉತ್ತರ ಭಾರತದ ಅಭಿವೃದ್ಧಿ ತೀರಾ ಹಿಂದುಳಿದಿದೆ. ಹಾಗಾಗಿ ಅಲ್ಲಿನ ಜನರು ದಕ್ಷಿಣಕ್ಕೆ ವಲಸೆ ಬರುವುದು ಆಶ್ಚರ್ಯವೇನಲ್ಲ. ವಲಸೆ ಬರುವವರಲ್ಲಿ ಎರಡು ವಿಧ. ಒಂದು ಅಪಾರ್ಟ್‌ಮೆಂಟ್‌ಗಳಲ್ಲಿ ತುಂಬಿಹೋಗಿರುವ ಹಣವಂತರು ಮತ್ತು ಅವರ ಮಕ್ಕಳು (ಖಾಸಗಿ ಕಂಪೆನಿಗಳ ಉದ್ಯೋಗಿಗಳು). ಎರಡು, ಎಲ್ಲಾ ರೀತಿಯ ಕೂಲಿಗಳು ಮತ್ತು ಜಿಗ್ ಕೆಲಸಗಾರರು.
ಬೆಂಗಳೂರಿನ ಹೊರವಲಯದಿಂದ ಬೆಂಗಳೂರಿಗೆ ಬರುತ್ತಿದ್ದಾಗ ರಸ್ತೆ ಬದಿಯಲ್ಲಿ ಸೊಪ್ಪು ಮಾರುತ್ತಿದ್ದ ಸ್ವಲ್ಪ ವಯಸ್ಸಾದ ಮಹಿಳೆಯ ಹತ್ತಿರಕ್ಕೆ ಹೋಗಿ ಕನ್ನಡದಲ್ಲಿ ‘ಎಷ್ಟಮ್ಮ ಸೊಪ್ಪು ಕಟ್ಟು?’ ಎಂದೆ. ಆಕೆ ‘ಬೀಸ್ ರೂಪಾಯಿ.. ತೀಸ್ ರೂಪಾಯಿ..’ ಎಂದಳು. ‘ಅಲ್ಲಮ್ಮ ನಾನು ಕನ್ನಡದಲ್ಲಿ ಕೇಳಿದರೆ ನೀನು ಹಿಂದಿಯಲ್ಲಿ ಹೇಳ್ತಾಇದ್ದೀಯಲ್ಲ?’ ಎಂದೆ. ತಲೆ ಎತ್ತಿ ನೋಡಿದ ಆಕೆ, ‘ಕನ್ನಡದಲ್ಲಿ ಕೇಳಿದರಾ ಸ್ವಾಮಿ? ಇಲ್ಲಿ ಬರೋರೆಲ್ಲ ಹಿಂದಿಯೊರೆ’ ಎಂದಳು. ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಮೊನ್ನೆ ಕೋಲಾರ ಹೋಟೆಲ್‌ನ ಒಂದು ಕೋಣೆಯಲ್ಲಿ ರಾತ್ರಿ ಒಂಭತ್ತು ಗಂಟೆಗೆ ಗೆಳೆಯರೆಲ್ಲ ಕುಳಿತುಕೊಂಡಿದ್ದೆವು. ಊಟ ತರಿಸಲು ಕೋಣೆಯ ಮೇಜಿನ ಮೇಲಿದ್ದ ಫೋನ್ ತೆಗೆದುಕೊಂಡು ರಿಂಗ್ ಮಾಡಿದೆ. ಆ ಕಡೆ ಫೋನ್ ತೆಗೆದುಕೊಂಡವನು ನಾನು ಆರ್ಡರ್ ಮಾಡುತ್ತಿದ್ದಂತೆ ‘ಹಿಂದಿ, ಹಿಂದಿ ಹಿಂದಿಮೆ ಬೋಲ್’ ಎಂದ. ಅದು ಮರ್ಯಾದೆಯಿಂದ ಕೂಡಿದ ಹಿಂದಿಯೂ ಅಲ್ಲ. ಹೋಟೆಲ್ ಮಾಲಕರು ತೀರಾ ಕಡಿಮೆ ಸಂಬಳ ಕೊಡುವ ಕಾರಣ ಕರ್ನಾಟಕದ
ರಸ್ತೆಗಳ ಉದ್ದಕ್ಕೂ ಉತ್ತರ ಭಾರತದವರೇ ತುಂಬಿಕೊಂಡಿದ್ದಾರೆ.
ನಾನು 1980ರ ದಶಕದಲ್ಲಿ ಲಕ್ನೊದಲ್ಲಿ ಮೊದಲಿಗೆ ಭೂವಿಜ್ಞಾನಿಯಾಗಿ ಕೆಲಸಕ್ಕೆ ಸೇರಿಕೊಂಡಾಗ ನನಗೂ, ನನ್ನ ಪತ್ನಿಗೆ ಏನೇನೂ ಹಿಂದಿ ಬರುತ್ತಿರಲಿಲ್ಲ. ಜೊತೆಗೆ ಒಂದೂವರೆ ವರ್ಷದ ಗಂಡು ಮಗು ಕೂಡ ಇತ್ತು. ನಾವು ಆರು ತಿಂಗಳಲ್ಲಿ ಸಂಪೂರ್ಣವಾಗಿ ಹಿಂದಿ ಮಾತನಾಡಲು ಪ್ರಾರಂಭಿಸಿಬಿಟ್ಟೆವು. ಅಲ್ಲಿ ಹಿಂದಿ ಬಿಟ್ಟರೆ ಬೇರೆ ಯಾರೂ ಯಾವ ಭಾಷೆಯನ್ನು ಮಾತನಾಡುತ್ತಿರಲಿಲ್ಲ. ನಮ್ಮ ಮಗನೂ ಕನ್ನಡಕ್ಕಿಂತ ಮೊದಲು ಹಿಂದಿಯನ್ನು ಸ್ವಚ್ಛವಾಗಿ ಮಾತನಾಡತೊಡಗಿದ. ಇಲ್ಲಿ ಬೆಂಗಳೂರಿನಲ್ಲಿ ಅಂತಹ ವಾತಾವರಣವೇ ಇಲ್ಲ. ಇದು ಯಾರ ತಪ್ಪು? ನಮ್ಮದೇ? ಇಲ್ಲ, ಇಲ್ಲಿಗೆ ಬರುವ ವಲಸಿಗರದೇ? ಇನ್ನು ಗ್ರಾಮೀಣ ಶಾಲೆಗಳ ಪರಿಸ್ಥಿತಿಯನ್ನು ನೋಡಿಯೇ ತಿಳಿಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಇಂಗ್ಲಿಷ್ ಶಾಲೆಗಳು ನಾಯಿಕೊಡೆಗಳಂತೆ ಎದ್ದುನಿಂತಿವೆ. ಮೊನ್ನೆ ಕೋಲಾರದ ಒಂದು ಕಾಲೇಜಿಗೆ ಹೋಗಿದ್ದೆ. ಅಲ್ಲಿನ ಅಧ್ಯಾಪಕರ ಜೊತೆಗೆ ಕುಳಿತು ಸಮಾಲೋಚನೆ ಮಾಡುತ್ತಿರುವಾಗ, ‘ಈ ಇಂಗ್ಲಿಷ್ ಶಾಲೆಗಳಲ್ಲಿ ಓದುವ ಗ್ರಾಮೀಣ ಮಕ್ಕಳ ಇಂಗ್ಲಿಷ್ ಸ್ಟ್ಯಾಂಡರ್ಡ್ ಹೇಗಿದೆ?’ ಎಂದು ಕೇಳಿದೆ. ‘ಸರ್, ಟೀಚರ್ಸ್‌ಗೆ ಸರಿಯಾಗಿ ಇಂಗ್ಲಿಷ್ ಬಂದರೆ ತಾನೇ ಮಕ್ಕಳಿಗೆ ಹೇಳಿಕೊಡುವುದು?’ ಎಂದು ಒಂದು ಬಾಂಬ್ ಹಾಕಿದರು. ‘ಈಗ ವಿದ್ಯಾರ್ಥಿಗಳು ಯಾರ ಮಾತನ್ನೂ ಕೇಳುವುದಿಲ್ಲ ಸರ್, ಪಾಠ ಹೇಳುವುದು ಹೇಗೆ?’ ಎಂಬುದಾಗಿ ಪಕ್ಕದಲ್ಲಿದ್ದ ಅಧ್ಯಾಪಕರು ತಮ್ಮ ಅಳಲನ್ನು ತೋಡಿಕೊಂಡರು. ಇನ್ನೊಬ್ಬ ಸೀನಿಯರ್ ಅಧ್ಯಾಪಕರು ‘ಈಗಿನ ಜನರೇಷನ್ ಡ್ರಿಗ್ರಿಡೇಶನ್ ಆಗ್ತಾ ಇದೆ ಸರ್’ ಎಂದರು. ಈ ಮಾತು ಕೇಳಿದ ನನಗೆ ಸ್ವಲ್ಪ ಆತಂಕವಾಗಿ ಮನೆಗೆ ಬಂದು ಮೊಬೈಲ್‌ನಲ್ಲಿ ‘ಈಸ್ ಡಿ.ಎನ್.ಎ. ಡಿಗ್ರೇಡಿಂಗ್?’ ಎಂಬ ಪ್ರಶ್ನೆ ಕೇಳಿದೆ. ಅದಕ್ಕೆ ‘ಎಸ್...’ ಎಂಬ ಉತ್ತರ ಬಂದಿತು ಮೊಬೈಲ್‌ನಲ್ಲಿ. ಅದರಲ್ಲಿದ್ದ ಇನ್ನಷ್ಟು ವಿಷಯಗಳನ್ನು ಓದಿದ ನನಗೆ ಗಾಬರಿಯಾಯಿತು.
ಮತ್ತೆ ಮೂಲ ಪ್ರಶ್ನೆಗೆ ಬಂದರೆ, ಫೆಡರಲ್ ಸಿಸ್ಟಮ್‌ನಲ್ಲಿ ದಕ್ಷಿಣ ಭಾರತಕ್ಕೆ ಬಹಳ ದೊಡ್ಡ ಅಪಾಯ ಉಂಟಾಗುತ್ತಿದೆ. ಇಂತಹದ್ದೇ ಪರಿಸ್ಥಿತಿ ಮುಂಬೈನಲ್ಲಿ ಬಹಳ ವರ್ಷಗಳ ಹಿಂದೆಯೇ ಸೃಷ್ಟಿಯಾಗಿತ್ತು. ಈಗ ಲಂಡನ್‌ನ ಮಧ್ಯ ಭಾಗದಲ್ಲಿ ಅಲ್ಲಿನ ಮೂಲಸ್ಥರನ್ನು ಹೊರಹಾಕಿ ಇಂಡಿಯನ್ಸ್, ಚೀನಾ ಮತ್ತು ಇತರ ದೇಶಗಳವರು ತುಂಬಿಕೊಂಡಿದ್ದಾರೆ. ಫ್ರಾನ್ಸ್, ಜರ್ಮನಿ ದೇಶಗಳ ಕತೆಯೂ ಅದೇ ಆಗಿದೆ. ಅಷ್ಟೇಕೆ ಅಮೆರಿಕದಲ್ಲಿ ಯಾವುದೇ ಒಂದು ಅಪಘಾತ ನಡೆದರೂ ಅಲ್ಲಿ ಭಾರತಕ್ಕೆ ಸೇರಿದವರು ಒಬ್ಬರು ಇರುತ್ತಾರೆ. ಇತ್ತೀಚೆಗೆ ಆಯ್ಕೆಯಾದ ನ್ಯೂಯಾರ್ಕ್ ಮೇಯರ್ ಶ್ರೀ ರೊಹ್ರಾನ್ ಮಮ್ದಾನಿಯ ತಂದೆ ಉಗಾಂಡ ಮತ್ತು ತಾಯಿ ಭಾರತ ಮೂಲದವರು. ಪ್ರಸ್ತುತ ಮುದುಕರ ರಾಜಕಾರಣ ಮತ್ತು ಕುರ್ಚಿಯ ಆಸೆಯಿಂದ ಲಕ್ಷಾಂತರ ಯುವಕರು ಜಗತ್ತಿನಾದ್ಯಂತ ಯುದ್ಧಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರು, ಮಕ್ಕಳು ದಿಕ್ಕಿಲ್ಲದೇ ಬೀದಿಗೆ ಬೀಳುತ್ತಿದ್ದಾರೆ. ಇದರ ನಡುವೆ ಅನೇಕ ದೇಶಗಳಲ್ಲಿ ಬಂಡುಕೋರರ ದಾಳಿಗಳು ನಡೆಯುತ್ತಿವೆ. ಬಾಂಬ್‌ಗಳು ಎಲ್ಲೆಂದರಲ್ಲಿ ಸಿಡಿಯುತ್ತಿವೆ.
ಭಾರತದಲ್ಲಿ ಈಗ ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಲ್ಲೂ ಉತ್ತರದವರೇ ಕಾಣಿಸಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ಕೇಂದ್ರ ಸರಕಾರದ ಇಚ್ಛೆಯಂತೆ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದಾರೆ. ಹಿಂದಿ ಮಾತ್ರ ರಾಷ್ಟ್ರೀಯ ಭಾಷೆ ಎಂದು ಬಿಂಬಿಸಲಾಗುತ್ತಿದೆ. ಇನ್ನೊಂದು ಮುಖ್ಯ ವಿಷೆಯವೆಂದರೆ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಇನ್ನಿತರ ಉತ್ತರ, ಈಶಾನ್ಯ ರಾಜ್ಯಗಳಿಂದ ಕೇಂದ್ರಕ್ಕೆ 100 ರೂಪಾಯಿಗಳ ಆದಾಯ ಬಂದರೆ ಕೇಂದ್ರ ಸರಕಾರ ಆ ರಾಜ್ಯಗಳಿಗೆ 200-300 ರೂಪಾಯಿಗಳನ್ನು ವಾಪಸ್ ನೀಡುತ್ತದೆ. ದಕ್ಷಿಣ ರಾಜ್ಯಗಳು; ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಕೇಂದ್ರಕ್ಕೆ 100 ರೂಪಾಯಿಗಳು ಹೋದರೆ ವಾಪಸ್ ಬರುವುದು ಕೇವಲ ಹತ್ತೋ ಇಪ್ಪತ್ತೋ ರೂಪಾಯಿಗಳು. ಈ ಐದಾರು ರಾಜ್ಯಗಳು ದುಡಿಯುವುದನ್ನು ಫೆಡರಲ್ ಸಿಸ್ಟಮ್‌ನಲ್ಲಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಇನ್ನಿತರ ಹಿಂದುಳಿದ ರಾಜ್ಯಗಳು ಕುಳಿತುಕೊಂಡು ತಿನ್ನುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಬಡವರಿಗೆ ಕೊಡುತ್ತಿರುವ ಐದು ಗ್ಯಾರಂಟಿಗಳು ಎಲ್ಲಾ ರೀತಿಯಲ್ಲೂ ನ್ಯಾಯಸಮ್ಮತವೇ ಆಗಿದೆ ಎನಿಸುತ್ತದೆ.







