ಯುಪಿಐ ವಹಿವಾಟಿಗೆ ಶುಲ್ಕ; ಜನರ ಮೇಲೆ ಮತ್ತಷ್ಟು ಆರ್ಥಿಕ ಹೊರೆ

ಲೋಕಸಭೆಯ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಆಳುವ ಮತ್ತು ವಿರೋಧ ಪಕ್ಷಗಳ ಸಂಘರ್ಷದ ನಡುವೆ ಬಿಜೆಪಿ ಸರಕಾರ ತಮಗೆ ಬೇಕಾದ ಮಸೂದೆಗಳನ್ನು ವಿರೋಧ ಪಕ್ಷಗಳ ವಿರೋಧದ ನಡುವೆಯೂ ಏಕಪಕ್ಷೀಯವಾಗಿ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಪಡೆಯುತ್ತಿದೆ. ಅದರಲ್ಲಿ ಆಗಸ್ಟ್ 6ರಂದು ‘ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ-2026’ ಕೂಡಾ ಒಂದು. ಈ ಅನುಮೋದಿತ ಬಿಲ್ ಮುಖ್ಯವಾಗಿ ಯುಪಿಐ ಸೇರಿದಂತೆ ಡಿಜಿಟಲ್ ಪಾವತಿಗಳ ಮೇಲೆ ಶುಲ್ಕದ ನಿಯಮಗಳನ್ನು ಬದಲಾಯಿಸುವುದಾಗಿದೆ.
ದೇಶವಾಸಿಗಳ ಮೇಲೆ ನೋಟು ಅಮಾನ್ಯ ಎನ್ನುವ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಿದ ಮೋದಿ ಸರಕಾರವು ‘ಡಿಜಿಟಲ್ ಇಂಡಿಯಾ’ ಎನ್ನುವ ಕಾನ್ಸೆಪ್ಟನ್ನು ವ್ಯಾಪಕವಾಗಿ ಪ್ರಚಾರ ಮಾಡಿತು. ನಗದು ಹಣದ ಚಲಾವಣೆಯ ಬದಲಾಗಿ ಮೊಬೈಲ್ ಫೋನ್ ಬಳಸಿ ಜೀಪೇ, ಗೂಗಲ್ ಪೇ ಮುಂತಾದ ಯುಪಿಐ ಮೂಲಕ ಉಚಿತವಾಗಿ ಬೇಕಾದಷ್ಟು ವಹಿವಾಟುಗಳನ್ನು ಮಾಡಬೇಕೆಂದು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಒತ್ತಡ ಹೇರಿತು. ಸಾವಕಾಶವಾಗಿ ಜನರೂ ಈ ವಹಿವಾಟಿಗೆ ಒಗ್ಗಿಕೊಂಡರು. ನಗದು ಪಾವತಿ ಬದಲಾಗಿ ಡಿಜಿಟಲ್ ಹಣ ಪಾವತಿಸತೊಡಗಿದರು. ಯಾಕೆಂದರೆ ಈ ಡಿಜಿಟಲ್ ಪೇಮೆಂಟ್ ವ್ಯವಹಾರ ಸಂಪೂರ್ಣವಾಗಿ ಉಚಿತವಾಗಿತ್ತು ಹಾಗೂ ಚಿಲ್ಲರೆ ಸಮಸ್ಯೆಗೆ ಪರಿಹಾರವೂ ಆಗಿತ್ತು. ಈಗಾಗಲೇ ಬಳಸುತ್ತಿದ್ದ ಬ್ಯಾಂಕಿನ ಕ್ರೆಡಿಟ್, ಡೆಬಿಟ್ ಕಾರ್ಡುಗಳ ವಹಿವಾಟಿಗೆ ಬಳಕೆ ಶುಲ್ಕ ವಿಧಿಸಲಾಗುತ್ತಿತ್ತು. ಯಾವುದೇ ಕಾರ್ಡುಗಳ ಹಂಗಿಲ್ಲದೇ ಮೊಬೈಲ್ ಮೂಲಕ ಕ್ಷಣಾರ್ಧದಲ್ಲಿ ವಹಿವಾಟು ಮಾಡಲು ಸಾಧ್ಯವಾಗಿದ್ದರಿಂದ ಬಹುತೇಕರು ಡಿಜಿಟಲ್ ಪೇಮೆಂಟ್‌ಗಳನ್ನು ವ್ಯಾಪಕವಾಗಿ ಬಳಸತೊಡಗಿದರು.
ಯಾವಾಗ ಡಿಜಿಟಲ್ ವಹಿವಾಟಿಗೆ ಜನರು ಒಗ್ಗಿಕೊಂಡರೋ, ಯಾವಾಗ ಯುಪಿಐ ಪೇಮೆಂಟ್‌ಗಳಿಂದ ದಿನನಿತ್ಯ ಬಹುಕೋಟಿಗಳ ಟ್ರಾನ್ಸಾಕ್ಷನ್ ದೇಶಾದ್ಯಂತ ನಡೆಯಿತೋ ಆಗ ಕೇಂದ್ರ ಸರಕಾರದ ಕಾಕದೃಷ್ಟಿ ಈ ವ್ಯವಹಾರಗಳ ಮೇಲೆ ಬಿತ್ತು. ಯುಪಿಐ ವಹಿವಾಟುಗಳ ಮೇಲೆ ತೆರಿಗೆ ಹೇರುವ ಹುನ್ನಾರಕ್ಕೆ ಚಾಲನೆ ಕೊಡಲಾಯಿತು. ಅದಕ್ಕಾಗಿ ಮಸೂದೆಯನ್ನು ಮಂಡಿಸಲಾಯಿತು. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ-2007ರ ಸೆಕ್ಷನ್ 10ಎ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಈ ಕಾಯ್ದೆಯಲ್ಲಿ ಯುಪಿಐ ಪಾವತಿಗಳ ಮೇಲೆ ಬ್ಯಾಂಕುಗಳು ಅಥವಾ ಯಾವುದೇ ಪೇಮೆಂಟ್ ಸಿಸ್ಟಂ ಪ್ರೊವೈಡರ್‌ಗಳು ಯಾವುದೇ ರೀತಿಯ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಶುಲ್ಕ ವಿಧಿಸಲು ಸಾಧ್ಯವಿರಲಿಲ್ಲ. (ಜೀರೋ MDR).
ಆದರೆ ಈಗ ಈ ಕಾಯ್ದೆಗೆ ಕೇಂದ್ರ ಸರಕಾರವು ತಿದ್ದುಪಡಿ ತಂದು ಯಾವ ಇಲೆಕ್ಟ್ರಾನಿಕ್ ಪಾವತಿ ವಿಧಾನಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂದು ನಿರ್ಧರಿಸುವ ಅಧಿಕಾರ ಪಡೆದುಕೊಂಡಿದೆ. ಇದರಿಂದ ಆಯ್ದ ವಹಿವಾಟುಗಳಿಗೆ ಎಂಡಿಆರ್ (Merchant Discount Rate) ವಿಧಿಸಲು ಅವಕಾಶ ಗಿಟ್ಟಿಸಿಕೊಂಡಿದೆ. ಈ ಮಸೂದೆಯ ಹಿಂದೆ ಜೀಪೇನಂತಹ ಅಂತರ್‌ರಾಷ್ಟ್ರೀಯ ಡಿಜಿಟಲ್ ಪ್ರೊವೈಡರ್ ಗಳ ಒತ್ತಡವೂ ಸಾಕಷ್ಟಿದೆ.
ಏಕಾಏಕಿ ಡಿಜಿಟಲ್ ಪೇಮೆಂಟ್‌ಗಳಿಗೆ ಶುಲ್ಕ ವಿಧಿಸಿದರೆ ಜನರು ತಿರುಗಿ ಬೀಳಬಹುದು ಎಂಬುದನ್ನು ಅರಿತ ಸರಕಾರವು ಮೊದಲ ಹಂತದಲ್ಲಿ ಡಿಜಿಟಲ್ ಪಾವತಿ ಮೂಲಕ ಹಣ ಪಡೆಯುವ ವ್ಯಾಪಾರಿಗಳಿಗೆ ಮಾತ್ರ ಶುಲ್ಕ ವಿಧಿಸುತ್ತಿದೆ. ಎಂಡಿಆರ್ ಶುಲ್ಕವು ಗ್ರಾಹಕರಿಗೆ ಹಾಗೂ ಬಳಕೆದಾರರಿಗೆ ಅನ್ವಯಿಸುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಈಗ ಕೇಂದ್ರ ಸರಕಾರದ NPCI ನೇತೃತ್ವದ UPI & Services Streaming Committee ಅಂತಾ ಒಂದಿದೆ. ಎಷ್ಟು ಶುಲ್ಕ ವಿಧಿಸಬೇಕು ಎಂಬುದನ್ನು ಈ ಸಮಿತಿ ನಿರ್ಧರಿಸುತ್ತದೆ. ಈಗ 2,000 ರೂ. ಮೊತ್ತದ ಒಳಗಿನ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಹಾಗೂ ಅದಕ್ಕೆ ಮೀರಿದ ವಹಿವಾಟುಗಳಿಗೆ ವ್ಯಾಪಾರಿಗಳು ಶೇ. 0.3ರಿಂದ ಶೇ. 0.5ರಷ್ಟು ಶುಲ್ಕವನ್ನು ತೆರಬೇಕಾಗುವುದು. ಸದ್ಯ ಗ್ರಾಹಕರು ಹಾಗೂ ಬಳಕೆದಾರರಿಗೆ ಶುಲ್ಕ ವಿಧಿಸಿಲ್ಲವೆಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಯಾವುದೇ ವ್ಯಾಪಾರಿ ಯಾಕೆ ಗ್ರಾಹಕರು ಖರೀದಿಸಿದ್ದಕ್ಕೆ ತೆರಿಗೆ ಪಾವತಿಸಲು ಸಾಧ್ಯ? ಹಾಗೆ ಪಾವತಿಸಿದ ಶುಲ್ಕದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ ಹಾಗೂ ಶುಲ್ಕವನ್ನು ವ್ಯಾಪಾರಿಗಳೇ ಪಾವತಿಸಬೇಕೆಂದು ಕಡ್ಡಾಯ ಮಾಡಿದ್ದೇ ಆದರೆ ಆ ವ್ಯಾಪಾರಿ ಯುಪಿಐ ವಹಿವಾಟನ್ನೇ ನಿರಾಕರಿಸಿ ನಗದು ಹಣ ಕೊಡಲು ಒತ್ತಾಯಿಸುತ್ತಾನೆ. ಆಗ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಹಳ್ಳ ಹಿಡಿಯುತ್ತದೆ. ಮತ್ತೆ ನಗದು ವಹಿವಾಟು ಆರಂಭವಾಗುತ್ತದೆ.
ಇದು ಆರಂಭವಷ್ಟೇ. ಸಾವಕಾಶವಾಗಿ ಗ್ರಾಹಕರಿಗೂ ಹಾಗೂ ಬಳಕೆದಾರರಿಗೂ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ದೂರದೃಷ್ಟಿಯಿಂದಲೇ ಹಳೆಯ ಕಾನೂನಿಗೆ ತಿದ್ದುಪಡಿ ತಂದು ಹೊಸ ಕಾಯ್ದೆ ಜಾರಿಗೆ ತರಲು ಕೇಂದ್ರ ಸರಕಾರ ಆತುರದಲ್ಲಿದೆ. ಹೀಗಾಗಿ ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ತರಾತುರಿಯಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಮಸೂದೆ ಪಾಸ್ ಮಾಡಿಕೊಳ್ಳಲಾಗಿದೆ. ಇನ್ನು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದು ಕಾನೂನು ಆಗುವುದಷ್ಟೇ ಬಾಕಿ ಇದೆ. ಯುಪಿಐ ಶುಲ್ಕದ ಹೆಸರಲ್ಲಿ ನೇರವಾಗಿ ವ್ಯಾಪಾರಿಗಳ ಹಾಗೂ ಪರೋಕ್ಷವಾಗಿ ಬಳಕೆದಾರರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನವೇ ಈ ಜನವಿರೋಧಿ ಕಾಯ್ದೆಯಾಗಿದೆ.
ಜನರು ಈಗಾಗಲೇ ಸರಕಾರದ ತೆರಿಗೆಗಳ ಭಾರದಿಂದ ಸಂಕಷ್ಟದಲ್ಲಿದ್ದಾರೆ. ನೌಕರಿ ಮಾಡಿದರೂ ತೆರಿಗೆ, ಯಾವುದೇ ವಸ್ತು ಖರೀದಿಸಿದರೂ ತೆರಿಗೆ, ವಾಹನ ಕೊಂಡರೆ ತೆರಿಗೆ, ಪೆಟ್ರೋಲ್ ಹಾಕಿಸಿದರೆ ತೆರಿಗೆ, ರಸ್ತೆ ಬಳಸಿದರೆ ತೆರಿಗೆ, ಮನೆ ಕಟ್ಟಿದರೆ, ನೀರು ವಿದ್ಯುತ್ ಬಳಸಿದರೆ.. ಹೀಗೆ ಎಲ್ಲದಕ್ಕೂ ತೆರಿಗೆ ಹಣ ಕಟ್ಟುತ್ತಲೇ ಬಂದಿರುವ ಜನರು ಇನ್ನು ಮೇಲೆ ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸುವ ಎಲ್ಲಾ ರೀತಿಯ ಲೇವಾದೇವಿ ವಹಿವಾಟುಗಳಿಗೂ ಶುಲ್ಕ ಪಾವತಿಸಬೇಕಿದೆ. ‘ಅಚ್ಛೇ ದಿನ್’ ಅಂದರೆ ಇದೆಯೇ?
ಈಗಾಗಲೇ ಜನರು ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿದ್ದಾರೆ. ನೋಟ್ ಬಂದಿ ಮಾಡಿದಾಗಿನಿಂದ ಕಾರ್ಪೊರೇಟ್ ದಿಗ್ಗಜರು ಮತ್ತು ಬಂಡವಾಳಿಗರನ್ನು ಹೊರತುಪಡಿಸಿ ದೇಶವಾಸಿಗಳು ಆರ್ಥಿಕವಾಗಿ ತೊಂದರೆಗೊಳಗಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವ ಮೂಲಕ ಜನರ ಜೇಬಿಗೆ ಕೈಹಾಕುವ ಕೇಂದ್ರ ಸರಕಾರದ ಹುನ್ನಾರವನ್ನು ವಿರೋಧಿಸಬೇಕಿದೆ. ಈ ಡಿಜಿಟಲ್ ಪಾವತಿಗಳನ್ನೇ ಬಹಿಷ್ಕರಿಸಿ ನಗದು ವ್ಯವಹಾರ ನಡೆಸಬೇಕಿದೆ. ಆದರೇನು ಮಾಡುವುದು ಹೆಚ್ಚಿನ ನಗದು ವ್ಯವಹಾರಕ್ಕೂ ಕೇಂದ್ರ ಸರಕಾರ ಮಿತಿಯನ್ನು ಹೇರಿದೆ.






