ನಾಗರಹೊಳೆಯಲ್ಲಿ ಅರಣ್ಯ ಭೂಮಿಗಾಗಿ ಜೇನು ಕುರುಬರ ಹೋರಾಟ

ಇತ್ತೀಚಿನ ಮಹತ್ವದ ಬೆಳವಣಿಗೆಯೊಂದ ರಲ್ಲಿ, ಕರ್ನಾಟಕದ ದುರ್ಬಲ ಬುಡಕಟ್ಟು ಪಂಗಡವಾಗಿರುವ ಜೇನು ಕುರುಬರು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಒಳಗೆ ಹೊಸದಾಗಿ ಹಾಡಿಯೊಂದನ್ನು ನಿರ್ಮಿಸಿ ಅದರಲ್ಲಿ ವಾಸಿಸಲು ಆರಂಭಿಸಿದ್ದಾರೆ. ತಮ್ಮ ಹಿರಿಯರು ಅದೇ ಸ್ಥಳದಲ್ಲಿ ತಲೆತಲಾಂತರದಿಂದ ವಾಸಿಸುತ್ತಾ ಬಂದಿದ್ದು, ಕೆಲ ದಶಕಗಳ ಹಿಂದೆ ಕಾಡಿನಿಂದ ಅವರನ್ನು ಹೊರದಬ್ಬಲಾಗಿತ್ತು ಎಂದು ಅವರು ಹೇಳಿದ್ದಾರೆ. ಈಗ ಮತ್ತೆ, ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ತಮ್ಮ ಪೂರ್ವಿಕರ ವಾಸಸ್ಥಾನಕ್ಕೆ ಅವರು ಮರಳಿದ್ದಾರೆ.
ಕಾಡಿನಿಂದ ಹೊರಗೆ ಬದುಕಲು ತಮಗೆ ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ತಮ್ಮ ಜೀವನ ಮತ್ತು ಜೀವನೋಪಾಯ ಕಾಡನ್ನೇ ಅವಲಂಬಿಸಿದೆ ಎನ್ನುವುದು ಅವರ ಖಚಿತ ನಿಲುವು. ಅದಕ್ಕಾಗಿ ಅವರು ಸುದೀರ್ಘ ಹೋರಾಟವನ್ನೇ ನಡೆಸಿದ್ದಾರೆ. ಈಗ ಅವರ ಹೋರಾಟ ಮಹತ್ವದ ಹಂತವೊಂದಕ್ಕೆ ಬಂದಿದೆ.
ಜೇನು ಕುರುಬರು ಐತಿಹಾಸಿಕವಾಗಿ ಕಾಡಿನಲ್ಲಿ ಜೇನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುವವರು. ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗಡಿಯ ಒಳಗಡೆ ಗುಡಿಸಲುಗಳನ್ನು ನಿರ್ಮಿಸಿ ಈಗ ಒಂದು ತಿಂಗಳಷ್ಟೇ ಕಳೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವು 643 ಚದರ ಕಿಲೋಮೀಟರ್ ವ್ಯಾಪ್ತಿಯ ಹುಲಿ ಅಭಯಾರಣ್ಯವಾಗಿದ್ದು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿದೆ.
ಈ ವರ್ಷ ಮಳೆ ಬೇಗನೇ ಬಂದಿದೆ. ಹಾಗಾಗಿ, ಅರಣ್ಯವು ಹಸಿರಿನಿಂದ ಕಂಗೊಳಿಸುತ್ತಿದೆ. ಅವರು ವಾಸಿಸುತ್ತಿರುವ ಈ ಶಿಬಿರವು ಕೆಲವೇ ವಾರಗಳಷ್ಟು ಹಳೆಯದಾಗಿರಬಹುದು, ಆದರೆ ಈ ತುಂಡು ಅರಣ್ಯ ಭೂಮಿಯೊಂದಿಗಿನ ಅವರ ಸಂಬಂಧ ಪ್ರಾಚೀನವಾಗಿದೆ. ಈ ಬಗ್ಗೆ ಅವರಲ್ಲಿ ಲಿಖಿತ ದಾಖಲೆಗಳಿವೆ ಮತ್ತು ತಲೆತಲಾಂತರದ ವ್ಯಾಖ್ಯಾನಗಳಿವೆ.
ತಮ್ಮ ವಾಸದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು 29 ವರ್ಷದ ಶಿವು ಜೇನುಕುರುಬ ಅಪ್ಪು ಹೊಂದಿದ್ದಾರೆ. ಶಿವು ಅವರ ದಾಖಲೆಗಳ ಪ್ರಕಾರ, ಅವರ ಸಮುದಾಯದ ವಿಳಾಸ ಹೀಗಿದೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಪಂಚಾಯತ್‌ನಲ್ಲಿರುವ ಕರಡಿ ಕಲ್ಲು ಅತ್ತೂರು ಕೊಲ್ಲಿ ಹಾಡಿ. ಈ ಹಾಡಿಯು ನಾಗರಹೊಳೆ ಅರಣ್ಯ ಚೆಕ್‌ಪೋಸ್ಟ್‌ನಿಂದ ಕೆಲವು ಕಿಲೋಮೀಟರ್‌ಗಳ ದೂರದಲ್ಲಿದೆ.
ಮೇ 5ರಂದು, ತಮ್ಮ ಆರಾಧ್ಯ ದೇವರು ಬರಗೂರು ರಾಶಿ ಜಾದಲ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, 150 ಜೇನು ಕುರುಬರು ಅರಣ್ಯವನ್ನು ಪ್ರವೇಶಿಸಿದರು. ಆದರೆ, ಶಿಬಿರಗಳನ್ನು ನಿರ್ಮಿಸುವುದಕ್ಕಾಗಿ ಬಿದಿರಿನ ಕಂಬವನ್ನು ನೆಡುತ್ತಿದ್ದಾಗ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ದಾಳಿ ನಡೆಸಿದರು. ‘‘ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆಯು ಮೇ 6ರವರೆಗೆ ಮುಂದುವರಿಯಿತು. ತಹಶೀಲ್ದಾರ್, ಪೊಲೀಸರು ಮತ್ತು ಅರಣ್ಯ ಇಲಾಖೆ ಕಾವಲುಗಾರರು ನಮ್ಮನ್ನು ಬಲವಂತವಾಗಿ ಅಲ್ಲಿಂದ ಹೊರದಬ್ಬಲು ಪ್ರಯತ್ನಿಸಿದರು. ನಮ್ಮ ಎರಡು ಗುಡಿಸಲು ಗಳನ್ನು ನಾಶಮಾಡಿದರು. ಪತ್ರಕರ್ತರು ಮತ್ತು ವಕೀಲರಿಗೆ ಆ ದಿನ ಹಾಡಿ ಪ್ರವೇಶ ನಿಷೇಧಿಸಲಾಯಿತು’’ ಎಂದು ಶಿವು ಹೇಳಿದರು.
2006ರ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆಯು ಜಮೀನಿಗೆ ಸಂಬಂಧಿಸಿದ ಬುಡಕಟ್ಟು ಪಂಗಡಗಳ ಬೇಡಿಕೆಯನ್ನು ಮಾನ್ಯ ಮಾಡುತ್ತದೆ. ಈ ಕಾಯ್ದೆಯಡಿಯಲ್ಲಿ, ತಮ್ಮದೆಂದು ಬುಡಕಟ್ಟು ಪಂಗಡಗಳ ಜನರು ಹೇಳುವ ಜಮೀನುಗಳನ್ನು ನೀಡುವಲ್ಲಿ ವರ್ಷಗಳ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಆ ಜಮೀನುಗಳನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವುದು ಅನಿವಾರ್ಯವಾಯಿತು ಎಂದು ಶಿವು ಹೇಳುತ್ತಾರೆ.
ಮೇ 12ರಂದು ಈ ವಿಷಯವು ಸ್ಥಳೀಯ ಶಾಸಕ ಎ.ಎಸ್. ಪೊನ್ನಣ್ಣರನ್ನು ತಲುಪಿತು. ಜೇನು ಕುರುಬ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ನಡುವೆ ಸಭೆ ನಡೆದ ಬಳಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಗೊಂಡಿತು. ಸ್ಥಳವನ್ನು ತೆರವುಗೊಳಿಸುವಂತೆ ಕರ್ನಾಟಕ ಅರಣ್ಯ ಇಲಾಖೆಯು ನೋಟಿಸ್‌ಗಳನ್ನು ನೀಡಿರುವ ಹೊರತಾಗಿಯೂ, ಜೇನು ಕುರುಬರು ಅಲ್ಲಿ ತಮ್ಮ ವಾಸ್ತವ್ಯವನ್ನು ಮುಂದುವರಿಸಿದರು.
1970ರ ದಶಕದಲ್ಲಿ ವನ್ಯಜೀವಿ ರಕ್ಷಣಾ ಕಾಯ್ದೆ ಅಂಗೀಕಾರ ಗೊಂಡ ಸಂದರ್ಭದ ಸಂಗತಿಯೊಂದನ್ನು ನಾಗರಹೊಳೆ ಆದಿವಾಸಿ ಜೆಮ್ಮಾ ಪಾಳೆ ಹಕ್ಕು ಸ್ಥಾಪನಾ ಸಮಿತಿಯ ಅಧ್ಯಕ್ಷ ತಿಮ್ಮಾ ಜೆ.ಕೆ. ಸ್ಮರಿಸುತ್ತಾರೆ. ‘‘ಆ ದಿನಗಳಲ್ಲಿ ಕೆ.ಎಂ. ಚಿನ್ನಪ್ಪ ಎಂಬ ವಲಯ ಅರಣ್ಯಾಧಿಕಾರಿ ನಾಗರಹೊಳೆಯಲ್ಲಿದ್ದರು. ಅವರು ಕಾಡಿನ ಒಳಗಿದ್ದ ನಮ್ಮ ಹಾಡಿಗಳಿಂದ ನಮ್ಮನ್ನು ಹಿಂಸಾತ್ಮಕವಾಗಿ ಹೊರದಬ್ಬಿದರು. ನಮ್ಮ ಗುಡಿಸಲುಗಳನ್ನು ಧ್ವಂಸಗೊಳಿಸಲು ಆನೆಗಳನ್ನು ತರಲಾಯಿತು. ಅದರೊಂದಿಗೆ ನಮ್ಮ ಜಮೀನುಗಳ ಸಂಪರ್ಕವನ್ನು ನಾವು ಕಳೆದುಕೊಂಡು ಅನಾಥರಾದೆವು. ಆ ಕ್ರೂರ ಅವಧಿಯನ್ನು ನೆನೆದಾಗ ಕಣ್ಣೀರು ಬರುತ್ತದೆ’’ ಎಂದು ಅವರು ಹೇಳುತ್ತಾರೆ.
ಒಕ್ಕಲೆಬ್ಬಿಸುವ ಇತಿಹಾಸ
1970ರ ದಶಕದಲ್ಲಿ ಆರಂಭಗೊಂಡ ಒಕ್ಕಲೆಬ್ಬಿಸುವಿಕೆಯು ಎರಡು ದಶಕಗಳ ಕಾಲ ಮುಂದುವರಿಯಿತು. 1985-86ರಲ್ಲಿ, ಶಿವು ಕುಟುಂಬವನ್ನು ಕರಡಿ ಕಲ್ಲಿನಲ್ಲಿ ಒಕ್ಕಲೆಬ್ಬಿಸಲಾಯಿತು. ತಾನು ಕರಡಿ ಕಲ್ಲು ಹಾಡಿಯಲ್ಲಿ ಜನಿಸಿದೆ ಹಾಗೂ ದಶಕಗಳ ಹಿಂದೆಯೇ ತನ್ನನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಯಿತು ಎಂದು ಜೇನುಕುರುಬ ಸಮುದಾಯದ ಹಿರಿಯ ಮಹಿಳೆಯಾಗಿರುವ ಸುಶೀಲಾ ಹೇಳುತ್ತಾರೆ. ಆದರೆ, ಒಕ್ಕಲೆಬ್ಬಿಸಿದ ಬಳಿಕ ಅವರಿಗೆ ಪರ್ಯಾಯ ಮನೆ ನೀಡಲಾಗಿಲ್ಲ ಅಥವಾ ಪುನರ್ವಸತಿ ಕಲ್ಪಿಸಲಾಗಿಲ್ಲ. ಇದನ್ನು ಪ್ರೊಫೆಸರ್ ಮುಜಾಫರ್ ಅಸ್ಸಾದಿ ನೇತೃತ್ವದಲ್ಲಿ ಕರ್ನಾಟಕ ಹೈಕೋರ್ಟ್ ನೇಮಿಸಿದ ಸಮಿತಿಯು 2014ರಲ್ಲಿ ನೀಡಿರುವ ವರದಿಯು ಖಚಿತಪಡಿಸಿದೆ. ಪುನರ್ವಸತಿ ಪ್ರಯತ್ನಗಳು 1999ರಲ್ಲಷ್ಟೇ ಆರಂಭಗೊಂಡವು ಎನ್ನುವುದನ್ನು ಸಮಿತಿಯು ಕಂಡುಕೊಂಡಿತು. ಇದರಿಂದಾಗಿ ಭಾರೀ ಸಂಖ್ಯೆಯ ಬುಡಕಟ್ಟು ಜನರು ಭಾರೀ ಸಂಕಷ್ಟಕ್ಕೊಳಗಾದರು ಎಂದು ವರದಿ ಹೇಳುತ್ತದೆ.
ರಾಷ್ಟ್ರೀಯ ಉದ್ಯಾನದಿಂದ ನಿರ್ವಸಿತರಾದ 3,418 ಕುಟುಂಬಗಳನ್ನು ಅಸ್ಸಾದಿ ಸಮಿತಿ ಪಟ್ಟಿ ಮಾಡಿದೆ. ಜೇನು ಕುರುಬರನ್ನು ಮಾತ್ರವಲ್ಲದೆ, ಬೆಟ್ಟ ಕುರುಬ, ಯೆರವ, ಪನಿಯ ಮತ್ತು ಸೋಲಿಗ ಸಮುದಾಯಗಳ ಜನರನ್ನೂ ಒಕ್ಕಲೆಬ್ಬಿಸಲಾಗಿತ್ತು.
ಶಿವು ಕುಟುಂಬವು ನಾಗರಹೊಳೆ ಗಡಿಯಲ್ಲಿ ಬರುವ ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸಕ್ಕೆ ಸೇರಿತು. ಶಿವು ಮತ್ತು ಅವರ ಸ್ನೇಹಿತರು ತೋಟದ ಕಾರ್ಮಿಕರಿಗಾಗಿ ನಿರ್ಮಿಸಲಾದ ಸಾಲು ಮನೆಗಳಲ್ಲಿ ಬೆಳೆದವರು. ಆದರೆ, ಕಾಫಿ ತೋಟಗಳಲ್ಲಿ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತದೆ ಎಂದು ಜೇನು ಕುರುಬರು ಆರೋಪಿಸುತ್ತಾರೆ. ಕೆಲವರು, ಅದನ್ನು ‘ಜೀತ’ ಎಂಬುದಾಗಿಯೂ ಬಣ್ಣಿಸುತ್ತಾರೆ.
1997ರಲ್ಲಿ, ಶಿವು ಶಿಶುವಾಗಿದ್ದಾಗ, ನಾಗರಹೊಳೆ ಬುಡಕಟ್ಟು ಗುಂಪುಗಳು ರಾಷ್ಟ್ರೀಯ ಉದ್ಯಾನದ ಹೃದಯ ಭಾಗದಲ್ಲಿ ತಾಜ್ ಹೋಟೆಲ್ಸ್ ಗುಂಪು ಸ್ಥಾಪಿಸಲು ಉದ್ದೇಶಿಸಿದ್ದ ಪಂಚತಾರಾ ರೆಸಾರ್ಟ್ ಒಂದರ ವಿರುದ್ಧ ಯಶಸ್ವಿ ಹೋರಾಟ ನಡೆಸಿದವು. ಮುಂದಿನ ವರ್ಷ ಸರಕಾರವು ಪುನರ್ವಸತಿ ಪ್ಯಾಕೇಜ್ ಘೋಷಿಸಿತು. ಅರಣ್ಯವನ್ನು ತೊರೆಯುವ ಕುಟುಂಬವೊಂದಕ್ಕೆ ಒಂದು ಲಕ್ಷ ರೂ. ನೀಡುವ ಕೊಡುಗೆಯನ್ನು ಅದು ನೀಡಿತು. ಪ್ಯಾಕೇಜ್ ಮೊತ್ತವು 2007-08ರಲ್ಲಿ 10 ಲಕ್ಷ ರೂ.ಗೆ ಮತ್ತು 2021ರಲ್ಲಿ 15 ಲಕ್ಷ ರೂ.ಗೆ ಏರಿತು. ಆದರೆ, ಹೆಚ್ಚಿನ ಒಕ್ಕಲುಗಳನ್ನು ಈ ಪ್ಯಾಕೇಜ್ ಜಾರಿಗೆ ಬರುವ ಮೊದಲೇ ಎಬ್ಬಿಸಲಾಗಿತ್ತು. ಹಾಗಾಗಿ, ಶಿವು ಅವರಂಥ ಕಟುಂಬಗಳಿಗೆ ಪರಿಹಾರ ಸಿಗಲಿಲ್ಲ.
ಅರಣ್ಯ ಹಕ್ಕುಗಳ ಕಾಯ್ದೆ (ಎಫ್‌ಆರ್‌ಎ) ಅಂಗೀಕಾರಗೊಂಡ ಬಳಿಕ, ತಮ್ಮ ಹಿರಿಯರ ಅರಣ್ಯ ಜಮೀನುಗಳ ಒಡೆತನಕ್ಕೆ ಬುಡಕಟ್ಟು ಸಮುದಾಯಗಳು ಬೇಡಿಕೆ ಸಲ್ಲಿಸಬಹುದು ಎಂಬ ಅರಿವು ಜೇನು ಕುರುಬ ಸಮುದಾಯವನ್ನೂ ತಲುಪಿತು. 2010ರಲ್ಲಿ, ಕರಡಿ ಕಲ್ಲು ಜೇನು ಕುರುಬ ಸಮುದಾಯವು ತನ್ನ ಮೊದಲ ಎಫ್‌ಆರ್‌ಎ ಅರ್ಜಿಯನ್ನು ಸಲ್ಲಿಸಿತು. 44 ಮಂದಿ ವ್ಯಕ್ತಿಗತ ನೆಲೆಯಲ್ಲಿ ಅರ್ಜಿಗಳನ್ನು ಸಲ್ಲಿಸಿದರು ಹಾಗೂ ಸಮುದಾಯ ಅರಣ್ಯ ಹಕ್ಕಿಗಾಗಿ ಒಂದು ಅರ್ಜಿ ಸಲ್ಲಿಸಲಾಯಿತು. ವೈಯಕ್ತಿಕ ನೆಲೆಯಲ್ಲಿ ಪ್ರತೀ ಕುಟುಂಬಕ್ಕೆ ವಾಸ ಅಥವಾ ಬೇಸಾಯಕ್ಕಾಗಿ ನಾಲ್ಕು ಎಕರೆಗಳವರೆಗೆ ಜಮೀನು ಮಂಜೂರು ಮಾಡಬಹುದಾಗಿದೆ. ಸಾಮುದಾಯಿಕ ನೆಲೆಯಲ್ಲಿ, ಜೀವನೋಪಾಯಕ್ಕಾಗಿ ಜೇನುತುಪ್ಪ, ಗಿಡಮೂಲಿಕೆಗಳು ಮತ್ತು ಇತರ ಕಿರು ಪ್ರಮಾಣದ ಅರಣ್ಯ ಉತ್ಪನ್ನಗಳ ಸಂಗ್ರಹದ ಹಕ್ಕನ್ನು ನೀಡಲಾಗುತ್ತದೆ.
ಎಫ್‌ಆರ್‌ಎ ವಿಧಿಗಳು ವನ್ಯಜೀವಿ ರಕ್ಷಣಾ ಕಾಯ್ದೆಯಿಂದ ವಿನಾಯಿತಿ ನೀಡಿ, ರಕ್ಷಿತಾರಣ್ಯದೊಳಗೆ ಶಾಲೆಗಳು ಮತ್ತು ವಿದ್ಯುತ್ ಮುಂತಾದ ಸೌಲಭ್ಯಗಳಿಗೆ ಅವಕಾಶ ನೀಡುತ್ತವೆ.
ಜಮೀನು ಗುರುತಿಗಾಗಿ 2013ರಲ್ಲಿ ನಡೆಯಬೇಕಾಗಿದ್ದ ಜಂಟಿ ಸಮೀಕ್ಷೆಯನ್ನು ಅರಣ್ಯ ಇಲಾಖೆಯು ತಡೆಯಿತು ಎನ್ನುವುದನ್ನು ಶಿವು ಸ್ಮರಿಸಿಕೊಳ್ಳುತ್ತಾರೆ. ಎಫ್‌ಆರ್‌ಎ ಅರ್ಜಿಗಳನ್ನು ಅರಣ್ಯ, ಬುಡಕಟ್ಟು ಕಲ್ಯಾಣ, ಕಂದಾಯ ಮತ್ತು ಪಂಚಾಯತ್ ರಾಜ್ ಒಳಗೊಂಡ ಒಂದಕ್ಕಿಂತ ಹೆಚ್ಚಿನ ಇಲಾಖೆಗಳು ಜಂಟಿಯಾಗಿ ಇತ್ಯರ್ಥಪಡಿಸಬೇಕಾಗುತ್ತದೆ.
ಎಫ್‌ಆರ್‌ಎನ ಮಹತ್ವ ಶಿವುಗೆ ಅರ್ಥವಾಗಿದ್ದು 2016ರಲ್ಲಿ. ‘‘ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಆಗಿರುವ ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಎಫ್‌ಆರ್‌ಎ ನಮಗೆ ಹಕ್ಕುಗಳನ್ನು ನೀಡುತ್ತದೆ. ನನಗೆ ಈ ಸಾಂವಿಧಾನಿಕ ಖಾತರಿ ಇರುವಾಗ ನಾನು ಇತರರಿಗಾಗಿ ಯಾಕೆ ಕೆಲಸ ಮಾಡಬೇಕು ಎಂದು ಯೋಚಿಸಲು ಆರಂಭಿಸಿದೆ’’ ಎಂದು ಅವರು ಹೇಳಿದರು.
ಜೇನು ಕುರುಬ ಸಮುದಾಯವು ಪೂರ್ವಿಕರು ನೆಲೆಸಿದ ಅರಣ್ಯ ಭೂಮಿಗಾಗಿ ಮತ್ತೆ ಅರ್ಜಿ ಹಾಕಿತು. ‘‘ಆಗ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಆದರೆ ನಮಗೆ ಅದರ ಬಗ್ಗೆ ಸೂಚನೆ ನೀಡಲಿಲ್ಲ. ಹಾಗಾಗಿ, ಸಮೀಕ್ಷೆಗಾಗಿ ಅಧಿಕಾರಿಗಳು ಬಂದಾಗ ಇಲ್ಲಿ ಯಾರೂ ಇರಲಿಲ್ಲ’’ ಎಂದು ಶಿವು ಹೇಳಿದರು.
2021ರಲ್ಲಿ ಕರಡಿ ಕಲ್ಲಿನಲ್ಲಿ ಅರಣ್ಯ ಹಕ್ಕುಗಳ ಸಮಿತಿಯೊಂದನ್ನು ರಚಿಸಲಾಯಿತು. ವೈಯಕ್ತಿಕ ಮತ್ತು ಸಾಮುದಾಯಿಕ ಅರಣ್ಯ ಹಕ್ಕುಗಳ ಬೇಡಿಕೆಯನ್ನು ಗ್ರಾಮ ಸಭೆಯು ಪುನರುಚ್ಚರಿಸಿತು. 2022 ಜನವರಿಯಲ್ಲಿ, ಉಪ ವಿಭಾಗೀಯ ಮಟ್ಟದ ಸಮಿತಿ (ಎಸ್‌ಡಿಎಲ್‌ಸಿ)ಯ ಸಭೆಯೊಂದು ಅರ್ಜಿಗಳನ್ನು ಮರುಪರಿಶೀಲಿಸಿ ತಿರಸ್ಕರಿಸಿತು. ‘‘ಸಮುದಾಯದ ಹಿರಿಯರು ಸಾಕ್ಷಿಗಳಾಗಿ ನೀಡಿದ ಹೇಳಿಕೆಗಳು, ಗ್ರಾಮ ಗುರುತುಗಳು, ಸ್ಮಶಾನ ಮತ್ತು ದೇವಾಲಯ ಸ್ಥಳಗಳ ಮಾಹಿತಿ ಮತ್ತು ಅಸ್ಸಾದಿ ವರದಿಯ ಹೊರತಾಗಿಯೂ, ಈ ಸ್ಥಳವು ಐತಿಹಾಸಿಕವಾಗಿ ಅರ್ಜಿದಾರರಿಗೆ ಸೇರಿದೆ ಎನ್ನುವುದಕ್ಕೆ ಸಾಕ್ಷಿ ಇಲ್ಲ ಎಂಬುದಾಗಿ ಎಸ್‌ಡಿಎಲ್‌ಸಿ ಸಭೆ ನಿರ್ಧರಿಸಿತು’’ ಎಂದು ಶಿವು ಹೇಳಿದರು.
ಇಲ್ಲಿ ಅಸ್ಸಾದಿ ವರದಿಯು ಮಹತ್ವದ್ದಾಗಿತ್ತು. ಯಾಕೆಂದರೆ, ನಿರ್ವಸಿತ ಬುಡಕಟ್ಟು ಜನರು ಅಭಿವೃದ್ಧಿಯಿಂದ ವಂಚಿತವಾಗಿರುವುದರಿಂದ ಎಫ್‌ಆರ್‌ಎನ ‘ಪರಿಣಾಮಕಾರಿ ಅನುಷ್ಠಾನ’ಕ್ಕೆ ಅದು ಶಿಫಾರಸು ಮಾಡಿತ್ತು.
ಹಕ್ಕುಗಳಿಗಾಗಿ ಹೋರಾಟ
2023ರಲ್ಲಿ, ಜೇನು ಕುರುಬರು ನಾಗರಹೊಳೆ ವಲಯ ಅರಣ್ಯ ಕಚೇರಿಯ ಎದುರು 13 ದಿನಗಳ ಧರಣಿ ನಡೆಸಿದರು ಮತ್ತು ಪಾದಯಾತ್ರೆ ಕೈಗೊಂಡರು. ಅದಕ್ಕಾಗಿ ಕಾಫಿ ತೋಟದಲ್ಲಿನ ತಮ್ಮ ಕೆಲಸಕ್ಕೆ ಅವರು ಗೈರು ಹಾಜರಾಗಬೇಕಾಯಿತು. ಹಾಗಾಗಿ, ಅವರನ್ನು ಕೆಲಸದಿಂದ ತೆಗೆಯಲಾಯಿತು. ಆ ಸಂದರ್ಭದಲ್ಲಿ ಸಮುದಾಯವು ನೆರೆಯ ನಾನಚಿ ಗದ್ದೆ ಹಾಡಿಯಲ್ಲಿ ವಾಸಿಸಿತು.
ಅವರ ಅರ್ಜಿಗಳ ಮರುಪರಿಶೀಲನೆಗಾಗಿ 2024 ಅಕ್ಟೋಬರ್‌ನಲ್ಲಿ ಜಂಟಿ ಸಮೀಕ್ಷೆಯೊಂದು ನಡೆಯಿತಾದರೂ ಅದು ಫಲ ನೀಡಲಿಲ್ಲ. ‘‘ಬೇರೆಯವರ ಹಾಡಿಯಲ್ಲಿ ನಾವು ಎಷ್ಟು ದಿನ ವಾಸಿಸಬಹುದು? ನಮ್ಮ ಜಮೀನು ನಮಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ನಾವು ಎರಡು ವರ್ಷ ಕಾದೆವು. ಇದು ಸಂಭವಿಸದಿದ್ದಾಗ, ಜಿಲ್ಲಾ ಮಟ್ಟದ ಸಮಿತಿ ಮತ್ತು ಎಸ್‌ಡಿಎಲ್‌ಸಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ನಾವು ಮೇ 5ರಂದು ಕರಡಿ ಕಲ್ಲನ್ನು ನಮ್ಮ ವಶಕ್ಕೆ ತೆಗೆದುಕೊಂಡೆವು’’ ಎಂದು ಶಿವು ಹೇಳಿದರು.
ಜೇನು ಕುರುಬರ ಈ ನಿಲುವನ್ನು ಕರ್ನಾಟಕ ಅರಣ್ಯ ಇಲಾಖೆ ಪ್ರಶ್ನಿಸಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)ಯ ಮೇ 17ರ ‘ವಾಸ್ತವಿಕ ಸ್ಥಿತಿಗತಿ ವರದಿ’ಯು ಜೇನು ಕುರುಬರು ಕರಡಿ ಕಲ್ಲು ಹಾಡಿಯನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದೆ. ಅದು ಎರಡು ಮುಖ್ಯ ಅಂಶಗಳನ್ನು ಮುಂದಿಡುತ್ತದೆ: ಒಂದು, ಅವರ ಬೇಡಿಕೆಯನ್ನು ಡಿಎಲ್‌ಸಿ 2011ರಲ್ಲಿ ಮತ್ತು ಎಸ್‌ಡಿಎಲ್‌ಸಿಯು ಮತ್ತೊಮ್ಮೆ 2022ರಲ್ಲಿ ತಿರಸ್ಕರಿಸಿದೆ ಹಾಗೂ ಎರಡು, ಅತ್ತೂರು ಕೊಲ್ಲಿ ಬುಡಕಟ್ಟು ಹಾಡಿ ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ ಮತ್ತು ಅರಣ್ಯ ಹಕ್ಕುಗಳನ್ನು ಅಕ್ರಮವಾಗಿ ಪಡೆದುಕೊಳ್ಳುವುದಕ್ಕಾಗಿ ಅದನ್ನು ದಾಖಲೆಗಳಲ್ಲಿ ಮಾತ್ರ ಸೃಷ್ಟಿಸಲಾಗಿದೆ.
ಕರ್ನಾಟಕದ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಕ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಸುಭಾಶ್ ಕೆ. ಮಲ್ಖೇಡೆ ಹೀಗೆ ಹೇಳುತ್ತಾರೆ: ‘‘ಎಫ್‌ಆರ್‌ಎ ನಿಯಮಗಳು ಸ್ಪಷ್ಟವಾಗಿವೆ. ಕಾಯ್ದೆಯು ಜಾರಿಗೆ ಬಂದ ದಿನ (2005 ಡಿಸೆಂಬರ್ 13)ದ ಪರಿಸ್ಥಿತಿಯನ್ನು ಜಾರಿಗೊಳಿಸಲಾಗುವುದು. ಅವರು (ಕರಡಿ ಕಲ್ಲಿನ ಜೇನು ಕುರುಬರು) ವ್ಯವಸಾಯ ಮಾಡುತ್ತಿದ್ದರೇ? ಅದನ್ನು ಸಾಬೀತುಪಡಿಸುವ ದಾಖಲೆಗಳಿಲ್ಲ. ಇದು ಅಕ್ರಮ ವಾಸವಾಗಿದೆ, ಅದು ಸರಿಯಲ್ಲ. ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನರು ಅಮಾಯಕರು. ಹೊರಗಿನವರು ಅವರನ್ನು ಪ್ರಚೋದಿಸುತ್ತಿದ್ದಾರೆ. ಬುಡಕಟ್ಟು ಜನರನ್ನು ಪ್ರಚೋದಿಸಿ ಶಾಂತಿ ಕದಡುತ್ತಿರುವುದಕ್ಕಾಗಿ ಐವರು ವ್ಯಕ್ತಿಗಳ ವಿರುದ್ಧ ಮೇ 7ರಂದು ಪೊಲೀಸರಿಗೆ ದೂರು ನೀಡಲಾಗಿದೆ’’.
ಪ್ರಾಥಮಿಕ ಪ್ರಶ್ನೆ
ಕರಡಿ ಕಲ್ಲಿನ ಇತ್ಯರ್ಥಗೊಳ್ಳದ ಸ್ಥಿತಿಗತಿಗೆ ಸಂಬಂಧಿಸಿ ಅಧಿಕಾರಿಗಳು ನೀಡುವ ವಿವರಣೆಯನ್ನೂ ಮೀರಿ ಪ್ರಾಥಮಿಕ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ: ಅರಣ್ಯವಾಸಿ ಬುಡಕಟ್ಟು ಜನರ ಹಕ್ಕುಗಳು ಮತ್ತು ಸಂರಕ್ಷಣೆ ವಿಷಯಗಳ ನಡುವೆ ಅಂತರ್ಗತ ವೈರುಧ್ಯಗಳು ಇವೆಯೇ? ಅರಣ್ಯವು ಯಾರಿಗೆ ಸೇರಿದೆ? ಉತ್ತರ ಸಂಕೀರ್ಣವಾಗಿದೆ.
ತಮ್ಮ ಮತ್ತು ಅರಣ್ಯದ ನಡುವೆ ಪ್ರಾಚೀನ ಕೊಂಡಿಯೊಂದು ಇದೆ, ತಮ್ಮ ಹಾಡಿಗಳೊಂದಿಗಿನ ಆಳವಾದ ಸಂಬಂಧದಿಂದಲೇ ತಮ್ಮ ಅಸ್ತಿತ್ವವಿದೆ ಮತ್ತು ಈ ಸಂಬಂಧವು ಪರ್ವತಗಳಷ್ಟೇ ಪ್ರಾಚೀನವಾದುದು ಎಂದು ಜೇನು ಕುರುಬರು ಹೇಳುತ್ತಾರೆ. ಜೆಮ್ಮ (ಸಾಂಪ್ರದಾಯಿಕ ಭೂಪ್ರದೇಶ)ದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮರ ಮತ್ತು ಸ್ಥಳಕ್ಕೆ ಪವಿತ್ರ ಸಂಕೇತಗಳಿವೆ ಎಂದು ಅವರು ಅಭಿಪ್ರಾಯಪಡುತ್ತಾರೆ.
‘‘ಜೇನು ನೊಣಗಳು ಗೂಡು ಕಟ್ಟುವ ಪ್ರತಿಯೊಂದು ಮರ ನಮಗೆ ಗೊತ್ತಿದೆ. ನಮಗೆ ಆನೆಗಳು ಮತ್ತು ಹುಲಿಗಳ ಚಲನವಲನಗಳು ಗೊತ್ತಿವೆ. ಕೆಲವು ದಿನಗಳ ಹಿಂದೆ, ದಂತವಿಲ್ಲದ ಸಲಗವೊಂದು ಕರಡಿ ಕಲ್ಲಿಗೆ ಬಂದಿತ್ತು. ಅದು ನಮ್ಮ ದೇವತೆಯ ಎದುರು ನಿಂತು ಸೊಂಡಿಲು ಎತ್ತಿ ಹೊರಟು ಹೋಯಿತು. ನಾಗರಹೊಳೆಯ ಪರಿಧಿಯಲ್ಲಿ ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ಸಾಮಾನ್ಯವಾದರೂ, ನಮಗೆ ಯಾರಿಗೂ ಆನೆ ಹಾನಿ ಮಾಡಲಿಲ್ಲ. ನಾವು ಇಲ್ಲಿ ನಿಜವಾದ ಬದುಕು ಸಾಗಿಸಬಹುದು. ಅರಣ್ಯದ ಹೊರಗಿನ ಜೀವನವು ನಮ್ಮ ಜೀವನವೆಂದು ಅನಿಸುವುದಿಲ್ಲ’’ ಎಂದು ಜೇನು ಕುರುಬರೊಬ್ಬರು ಹೇಳುತ್ತಾರೆ.
ಅಸಮರ್ಪಕ ಅನುಷ್ಠಾನ
ಈ ಬಾಂಧವ್ಯವನ್ನು ಎಫ್‌ಆರ್‌ಎ ದೃಢೀಕರಿಸುತ್ತದೆ. ಆದರೆ, ಕರ್ನಾಟಕದ ಈ ಕಾಯ್ದೆಯ ಅಸಮರ್ಪಕ ಅನುಷ್ಠಾನದತ್ತ ಹೋರಾಟಗಾರರು ಬೆಟ್ಟು ಮಾಡುತ್ತಾರೆ. ಕರ್ನಾಟಕದಲ್ಲಿ ಎಪ್ರಿಲ್ 1ರವರೆಗೆ, ಕೇವಲ 5 ಶೇಕಡಾ ವೈಯಕ್ತಿಕ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಅಂದರೆ, 2,88,549 ಅರ್ಜಿಗಳ ಪೈಕಿ 14,981 ಅರ್ಜಿದಾರರಿಗೆ ಅರಣ್ಯ ಹಕ್ಕುಗಳನ್ನು ನೀಡಲಾಗಿದೆ ಎನ್ನುವುದನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತೋರಿಸುತ್ತವೆ. ಬುಡಕಟ್ಟು ಸಮುದಾಯಗಳು ಸುಭದ್ರ ಭೂಮಿ ಹಕ್ಕುಗಳನ್ನು ಹೊಂದಿರುವಲ್ಲಿ ಅರಣ್ಯನಾಶ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎನ್ನುವುದನ್ನು ಸಾಬೀತುಪಡಿಸುವ ಅಂತರ್‌ರಾಷ್ಟ್ರೀಯ ಸಂಶೋಧನೆಗಳತ್ತವೂ ಹೋರಾಟಗಾರರು ಬೆಟ್ಟು ಮಾಡುತ್ತಾರೆ.
ಕಮ್ಯುನಿಟಿ ನೆಟ್‌ವರ್ಕ್ಸ್ ಅಗೆನ್‌ಸ್ಟ್ ಪ್ರೊಟೆಕ್ಟಡ್ ಏರಿಯಾಸ್ ಮತ್ತು ಸರ್ವೈವಲ್ ಇಂಟರ್‌ನ್ಯಾಶನಲ್ ಮುಂತಾದ ಸರಕಾರೇತರ ಸಂಘಟನೆಗಳು ಕರಡಿ ಕಲ್ಲಿನ ಜೇನು ಕುರುಬರ ಹೋರಾಟಕ್ಕೆ ನೆರವು ನೀಡುತ್ತಿವೆ.
ಕಾಡಿನ ಉಸ್ತುವಾರಿ ಬುಡಕಟ್ಟು ಜನರಿಗೆ
‘‘ಈಗ ನೀಲಗಿರಿ ಜೈವಿಕ ವಲಯ ಮೀಸಲು ಅರಣ್ಯ ಎಂದು ಕರೆಯಲ್ಪಡುವ ಸ್ಥಳವನ್ನು ಒಂದು ಕಾಲದಲ್ಲಿ ಬುಡಕಟ್ಟು ಜನರು ಕಾಟು ನಾಡು (ಅರಣ್ಯ ದೇಶ) ಎಂಬುದಾಗಿ ಕರೆಯುತ್ತಿದ್ದರು. ಎಲ್ಲಾ ಭೂಮಿ ಬುಡಕಟ್ಟು ಜನರಿಗೆ ಸೇರಿತ್ತು. ದಕ್ಷಿಣ ಭಾರತದಲ್ಲಿ ಐದನೇ ಶೆಡ್ಯೂಲ್ ಪ್ರದೇಶ ಎನ್ನುವುದು ಇಲ್ಲ ಮತ್ತು ಒಂಭತ್ತು ಜಿಲ್ಲೆಗಳಲ್ಲಿ 1,500 ಬುಡಕಟ್ಟು ಗ್ರಾಮಗಳು ವ್ಯಾಪಿಸಿವೆ. ಹಾಗಾಗಿ, ಈ ಸ್ಥಳವನ್ನು ಶೆಡ್ಯೂಲ್ಡ್ ಏರಿಯ ಎಂಬುದಾಗಿ ಯಾಕೆ ಘೋಷಿಸಬಾರದು? ಆಗ ಪಂಚಾಯತ್‌ಗಳ (ಶೆಡ್ಯೂಲ್ಡ್ ಏರಿಯ ವಿಸ್ತರಣೆ) ಕಾಯ್ದೆಯ ಮೂಲಕ ನಾವು ಸ್ವಯಮಾಡಳಿತವನ್ನು ಹೊಂದಬಹುದು. ಆದರೆ, ಆಗ ನಾವು ಇಲ್ಲಿರುವ ಎಲ್ಲಾ ಲಾಬಿಗಳಿಂದ ವಿರೋಧವನ್ನು ಎದುರಿಸುತ್ತೇವೆ- ಅರಣ್ಯ ಇಲಾಖೆ, ವನ್ಯಜೀವಿ ಸಂರಕ್ಷಕರು, ಎಸ್ಟೇಟ್ ಮಾಲಕರು, ದೊಡ್ಡ ರೈತರು ಮತ್ತು ಪ್ರವಾಸೋದ್ಯಮ. ಭಾರತದ ಅರಣ್ಯ ಇಲಾಖೆ ಕೇವಲ 160 ವರ್ಷಗಳಿಂದ ಇದೆ. ಆದರೆ ಬುಡಕಟ್ಟು ಜನರು ಅರಣ್ಯಗಳಲ್ಲಿ ಸಾವಿರಾರು ವರ್ಷಗಳಿಂದ ಬದುಕಿದ್ದಾರೆ. ಅರಣ್ಯಗಳನ್ನು ನಾಶ ಮಾಡದೆ ಅವುಗಳ ಸಂಪನ್ಮೂಲಗಳನ್ನು ಬಳಸುತ್ತಾ ಬದುಕುವುದು ಹೇಗೆಂದು ಅವರಿಗೆ ಗೊತ್ತಿದೆ’’ ಎಂದು ಹುಣಸೂರಿನ ಸರಕಾರೇತರ ಸಂಘಟನೆ ಡೆವೆಲಪ್‌ಮೆಂಟ್ ಥ್ರೂ ಎಜುಕೇಶನ್‌ನ ನಿರ್ದೇಶಕ ಶ್ರೀಕಾಂತ್ ಎಸ್. ಹೇಳುತ್ತಾರೆ.







