ಹಿಂದುಳಿದ ರಾಜ್ಯದಲ್ಲಿ ‘ಗದ್ದುಗೆ’ಗೆ ಗುದ್ದಾಟ!

ಚುನಾವಣೆ ಏನಾಗಬಹುದು? ಯಾರು ಯಾರ ಕಾಲೆಳೆಯಬಹುದು? ಯಾರು ಯಾರಿಗೆ ಒಳ ಏಟು ಕೊಡಬಹುದು? ಎಂಬ ಅಂಶಗಳು ಆಸಕ್ತಿ ಕೆರಳಿಸಿವೆ. ಸದ್ಯದ ವಾತಾವರಣ ಗಮನಿಸಿದರೆ ಎನ್‌ಡಿಎ ಮತ್ತು ‘ಇಂಡಿಯಾ’ ಬ್ಲಾಕ್ ಮಧ್ಯೆ ಹಣಾಹಣಿ. ಅಕ್ರಮಕ್ಕೆ ಅವಕಾಶವಿಲ್ಲದೆ, ಎಲ್ಲವೂ ಪಾರದರ್ಶಕವಾಗಿ ನಡೆದರೆ ಫೋಟೊ ಫಿನಿಷ್ ಆಗಬಹುದು.
ಬಿಹಾರ ದೇಶದ ಅತೀ ಹಿಂದುಳಿದ ರಾಜ್ಯ. ಬಡತನವಿದೆ. ಹಸಿವಿದೆ. ನಿರುದ್ಯೋಗವಿದೆ. ಅನಕ್ಷರತೆಯಿದೆ. ಆರೋಗ್ಯದ ಸಮಸ್ಯೆಯಿದೆ. ಸಾರ್ವಜನಿಕ ಉದ್ಯಮಗಳಿದ್ದರೂ ಬಂದ್ ಆಗಿವೆ. ಉದ್ಯೋಗಕ್ಕಾಗಿ ದೊಡ್ಡ ನಗರಗಳಿಗೆ ಜನ ವಲಸೆ ಹೋಗಿದ್ದಾರೆ, ಹೋಗುತ್ತಿದ್ದಾರೆ. ದಿಲ್ಲಿ, ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಬಿಹಾರದಿಂದ ವಲಸೆ ಬಂದಿರುವ ಕಾರ್ಮಿಕರೇ ಹೆಚ್ಚು. ಬಡತನದ ತೀವ್ರತೆ ಅಳೆಯಲು ಇದೊಂದು ಮಾನದಂಡ ಸಾಕು.
ಇದರರ್ಥ ಬೇರೆ ರಾಜ್ಯಗಳು ಸುಭಿಕ್ಷವಾಗಿವೆ ಎಂದಲ್ಲ. ಬಿಹಾರಕ್ಕೆ ಹೋಲಿಸಿದರೆ ಪರಿಸ್ಥಿತಿ ಅಲ್ಪಸ್ವಲ್ಪ ಉತ್ತಮ. ಈವರೆಗೆ ಅಧಿಕಾರ ಹಿಡಿದವರು ಬಿಹಾರದ ಚಿತ್ರಣ ಬದಲಿಸಬಹುದಿತ್ತು. ಮನಸ್ಸು ಮಾಡಲಿಲ್ಲ. 1990ರವರೆಗೆ (ಅತ್ಯಲ್ಪ ಕಾಲ ಬಿಟ್ಟು) ಕಾಂಗ್ರೆಸ್ ಅಧಿಕಾರದಲ್ಲಿತ್ತು. ಮೂರೂವರೆ ದಶಕದಿಂದ ಬೇರೆ ಪಕ್ಷಗಳ ಸರಕಾರಗಳಿವೆ. ಮೊದಲ 15 ವರ್ಷ ಸಮಾಜವಾದಿ ಚಳವಳಿ ಹಿನ್ನೆಲೆಯ ಲಾಲು ಪ್ರಸಾದ್ ಯಾದವ್, ರಾಬ್ಡಿ ಸರಕಾರವಿತ್ತು. ಅದೇ ಪರಿಸರದಿಂದ ಬಂದ ನಿತೀಶ್ ಕುಮಾರ್ ಎರಡು ದಶಕಗಳಿಂದ ಆಡಳಿತ ನಡೆಸುತ್ತಿದ್ದಾರೆ. ನಡುನಡುವೆ ಜೆಡಿಯು-ಆರ್‌ಜೆಡಿ ಮೈತ್ರಿ ಸರಕಾರ ಕಂಡಿದೆ. ‘ರಾಜಕಾರಣದಲ್ಲಿ ಯಾರೂ ಖಾಯಂ ಶತ್ರುಗಳಲ್ಲ, ಖಾಯಂ ಮಿತ್ರರಲ್ಲ’ ಎಂಬ ಗಾದೆಗೆ ನಿತೀಶ್-ಲಾಲು ಅವರನ್ನೇ ಉದಾಹರಿಸಬಹುದು.
ಲಾಲು ಪ್ರಸಾದ್ ಅಭಿವೃದ್ಧಿ ಹರಿಕಾರರಾಗಬಹುದಿತ್ತು. ಆದರೆ, ತಮ್ಮ ಜನರನ್ನು ಕತ್ತಲಲ್ಲೇ ಇಟ್ಟರು. ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದರು. ‘ಹಿಂದುಳಿದವರಿಗೆ ಅಭಿವೃದ್ಧಿಗಿಂತ ಘನತೆ ಬದುಕು ಮುಖ್ಯ’ ಎಂದು ಪ್ರತಿಪಾದಿಸಿದರು. ಈ ಸಮುದಾಯಗಳಿಗೆ ಆತ್ಮವಿಶ್ವಾಸ ತುಂಬಿದ್ದು ಸುಳ್ಳಲ್ಲ. ಯಾದವರು ಸ್ವಲ್ಪ ಹೆಚ್ಚೇ ಆತ್ಮವಿಶ್ವಾಸ ಪ್ರದರ್ಶಿಸಿದರು. ಸಣ್ಣಪುಟ್ಟ ಜಾತಿಗಳ ಮೇಲೆ ದೌರ್ಜನ್ಯ ಮಾಡಿದರು. ದರ್ಪ ತೋರಿದರು. ಇದರಿಂದ ಅತೀ ಹಿಂದುಳಿದ ವರ್ಗಗಳು ಪರ್ಯಾಯವಾಗಿ ಸಂಘಟಿತವಾದವು. ಪರಿಣಾಮವಾಗಿ 2005ರಲ್ಲಿ ಆರ್‌ಜೆಡಿ ಸೋತಿದ್ದು.
ಧರ್ಮದ ಹೆಸರಲ್ಲಿ ಲಾಲು ಎಂದೂ ರಾಜಕಾರಣ ಮಾಡಲಿಲ್ಲ. ಮತೀಯವಾದಿಗಳ ಜತೆ ಕೈ ಜೋಡಿಸಲಿಲ್ಲ. ಇದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ಆದರೆ, ಅವರ ಸರಕಾರದಲ್ಲಿ ಕಾನೂನು-ವ್ಯವಸ್ಥೆ ಮರೀಚಿಕೆ. ಅಪಹರಣ, ಸುಲಿಗೆ, ಕೊಲೆ ಪ್ರಕರಣ ವಿಪರೀತವಾಗಿದ್ದವು. ಇದರಿಂದ ‘ಜಂಗಲ್‌ರಾಜ್ ಕಿರೀಟ’ ತೊಡಿಸಲಾಯಿತು. ಆರ್‌ಜೆಡಿ ಸರಕಾರ ಹೋಗಿ 20 ವರ್ಷವಾಗಿದೆ. ಆದರೂ ಜಂಗಲ್ ರಾಜ್ ಹಣೆಪಟ್ಟಿ ಕಳಚಿಕೊಂಡು ಹೊರಬರಲಾಗಿಲ್ಲ. ಆ ಪಾಪದ ಹೊರೆ ಹೊತ್ತೇ ತೇಜಸ್ವಿ ಚುನಾವಣೆ ಎದುರಿಸುತ್ತಿದ್ದಾರೆ.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹೋದೆಡೆ ಜಂಗಲ್‌ರಾಜ್ ಬಗ್ಗೆಯೇ ಪ್ರಸ್ತಾಪ. ತಮಾಷೆ ಎಂದರೆ, ಹೊಸ ಮತದಾರರಿಗೆ ಜಂಗಲ್‌ರಾಜ್ ಕಲ್ಪನೆ ಇಲ್ಲ. ಬಿಜೆಪಿ ನಾಯಕರು ಹೇಳುವ ಕಥೆಗಳನ್ನಷ್ಟೇ ಕೇಳುತ್ತಿದ್ದಾರೆ. ಇದು ಚುನಾವಣೆಯ ಮೇಲೆ ಅಷ್ಟೇನು ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಇದೇ ಚುನಾವಣೆಯಲ್ಲಿ ಪ್ರಮುಖ ವಿಷಯವಾಗುತ್ತಿದ್ದರೆ 2015ರ ಚುನಾವಣೆಯಲ್ಲಿ ಆರ್‌ಜೆಡಿ 80 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಗುತ್ತಿರಲಿಲ್ಲ. ಶೇ. 18 ಮತ ಪಡೆಯುತ್ತಿರಲಿಲ್ಲ. 2020ರ ಚುನಾವಣೆಯಲ್ಲಿ ಶೇ. 23ರಷ್ಟು ಮತಗಳೊಂದಿಗೆ 75 ಸ್ಥಾನ ಬರುತ್ತಿರಲಿಲ್ಲ. ಆಗಲೂ ತೇಜಸ್ವಿ ಎದುರಿಸಿದ್ದು ಇದೇ ಆರೋಪವನ್ನೇ. ಇನ್ನೊಂದು ಸಂಗತಿ ಭ್ರಷ್ಟಾಚಾರ.
ನಿತೀಶ್ ಆಡಳಿತದಲ್ಲೂ ಅಪರಾಧಗಳು ನಡೆಯುತ್ತಿವೆ. ಕಳೆದ ವಾರ ಮೊಕಾಮ ಕ್ಷೇತ್ರದಲ್ಲಿ ‘ಜನ ಸುರಾಜ್ ಪಕ್ಷ’ದ ಬೆಂಬಲಿಗ ದುಲಾರ್‌ಚಂದ್ ಯಾದವ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಬಂಧನವಾಗಿದೆ. ಜುಲೈನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಚಿರಾಗ್ ಪಾಸ್ವಾನ್ ಅವರೇ ಬಿಹಾರದಲ್ಲಿ ಕಾನೂನು-ವ್ಯವಸ್ಥೆ ಇಲ್ಲ ಎಂದು ಟೀಕಿಸಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್ ‘ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯುರೊ’ (ಎನ್‌ಸಿಆರ್‌ಬಿ) ಅಂಕಿಅಂಶ ಉಲ್ಲೇಖಿಸಿ ನಿತೀಶ್ ಆಡಳಿತದಲ್ಲಿ ನಡೆದಿರುವ ಅಪರಾಧಗಳನ್ನು ಬಿಚ್ಚಿಡುತ್ತಿದ್ದಾರೆ.
ಬಿಹಾರದ ಮತದಾರರ ಮನವೊಲಿಸಲು ಎಲ್ಲ ಪಕ್ಷಗಳು ಇನ್ನಿಲ್ಲದ ಸರ್ಕಸ್ ಮಾಡುತ್ತಿವೆ. ಎನ್‌ಡಿಎ ಮತ್ತು ‘ಇಂಡಿಯಾ’ ಬ್ಲಾಕ್ ಪ್ರಣಾಳಿಕೆಗಳು ಭರವಸೆಗಳ ಮಹಾಪೂರ ಹರಿಸಿವೆ. ಕನಸುಗಳನ್ನು ಬಿತ್ತಿವೆ. ‘ಭರವಸೆಗಳ ಜಾರಿ ಆರ್ಥಿಕವಾಗಿ ಕಾರ್ಯಸಾಧುವೇ?’ ಎಂದು ಚಿಂತಿಸುವ ಗೋಜಿಗೂ ಹೋಗಿಲ್ಲ. ಮತದಾರರಿಗೆ ಭ್ರಮೆ ಹುಟ್ಟಿಸಲಾಗಿದೆ. ಕರ್ನಾಟಕದ ಕಾರ್ಯಕ್ರಮಗಳನ್ನೇ ನೋಡುವುದಾದರೆ, ಶಕ್ತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ ಯೋಜನೆಗಳ ಹೊರೆ ಸರಿದೂಗಿಸಲು ಸಿದ್ದರಾಮಯ್ಯನವರ ಸರಕಾರ ಒದ್ದಾಡುತ್ತಿದೆ. ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹಣ ವಿಲ್ಲದೆ ಪರದಾಡುತ್ತಿದೆ. ಇನ್ನು ಬಿಹಾರ ನಾಯಕರು ಇವೆಲ್ಲ ಭರವಸೆಗಳನ್ನು ಅನುಷ್ಠಾನಗೊಳಿಸಲು ಹೇಗೆ ಸಂಪನ್ಮೂಲ ಹೊಂದಿಸುತ್ತಾರೊ?
ಬಿಹಾರದ ಸಾರ್ವಜನಿಕ ವೆಚ್ಚ ಈಗಾಗಲೇ ಮಿತಿ ಮೀರಿದೆ. ಆದಾಯ ಸಂಗ್ರಹ ಪಾತಾಳಕ್ಕೆ ಇಳಿದಿದೆ. ಉಳಿದ ರಾಜ್ಯಗಳನ್ನು ಜತೆಯಲ್ಲಿಟ್ಟು ವಿಶ್ಲೇಷಿದರೆ ಕಡಿಮೆಯಿದೆ. ತಲಾ ಆದಾಯ ರಾಷ್ಟ್ರದ ಸರಾಸರಿಗಿಂತ ಅರ್ಧದಷ್ಟಿದೆ. ನಿರುದ್ಯೋಗ ಸಮಸ್ಯೆಯಂತೂ ಹೇಳದಿರುವುದೇ ಒಳ್ಳೆಯದು. ಇಷ್ಟೊಂದು ಆರ್ಥಿಕ ಸಂಕಷ್ಟದ ನಡುವೆಯೂ ಎನ್‌ಡಿಎ, ‘ಇಂಡಿಯಾ’ ಬ್ಲಾಕ್ ಜನರ ಮೂಗಿಗೆ ತುಪ್ಪ ಸವರಿವೆ. ಮತದಾರರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಕ್ಷಣದ ಲಾಭಕ್ಕೇ ಹಾತೊರೆಯುತ್ತಾರೆ.
ತೇಜಸ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ‘ಇಂಡಿಯಾ’ ಬ್ಲಾಕ್ ಘೋಷಿಸಿದೆ. ನಿತೀಶ್ ನೇತೃತ್ವದಲ್ಲಿ ಎನ್‌ಡಿಎ ಚುನಾವಣೆಗೆ ಹೋಗುತ್ತಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಲ್ಲ. ಎದುರಾಳಿ ಪಾಳಯದಲ್ಲಿ ಎಲ್ಲ ಸರಿಯಿಲ್ಲ ಎನ್ನುವುದಕ್ಕೆ ಇದೊಂದೇ ಸಂಗತಿ ಸಾಕು. ಮುಖ್ಯಮಂತ್ರಿ ನಿತೀಶ್‌ಗೆ ಇದು ಗೊತ್ತಿದ್ದರೂ ರಾಡಿ- ರಂಕಲು ಮಾಡಿಲ್ಲ. ಚುನಾವಣೆ ಮುಗಿಯುವವರೆಗೂ ಕಾಯಬಹುದು.
ಜೆಡಿಯು ‘ಲಗಾಮು’ ಇರುವುದು ಬಿಜೆಪಿ ಕೈಯಲ್ಲಿ. ನಿತೀಶ್ ಅವರನ್ನು ಬಿಜೆಪಿ ನಾಯಕರು ಗಂಭೀರವಾಗಿ ತೆಗೆದುಕೊಂಡಂತೆ ಕಾಣುವುದಿಲ್ಲ. ಲೋಕ ಜನಶಕ್ತಿ (ಎಲ್‌ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಸಿಕ್ಕಿರುವಷ್ಟು ಮಹತ್ವ ಇವರಿಗಿಲ್ಲ. ಎಷ್ಟೇ ಆಗಲಿ ಮೋದಿ ಅವರಿಗೆ ಚಿರಾಗ್ ‘ಹನುಮಾನ್’ ಅಲ್ಲವೇ? ಹೀಗಾಗಿ ಅವರಿಗೆ 29 ಕ್ಷೇತ್ರ ಬಿಡಲಾಗಿದೆ. ಇದೂ ಜೆಡಿಯು ನಾಯಕನ ಕಸಿವಿಸಿಗೆ ಕಾರಣವಾಗಿದೆ.
ಫಲಿತಾಂಶ ಪ್ರಕಟವಾದ ಬಳಿಕ ರಾಜಕೀಯ ಮರು ಹೊಂದಾಣಿಕೆ ಆಗಬಹುದು. ದೋಸ್ತಿಗಳು ಬದಲಾಗಬಹುದು. ಇದು ಆಮೇಲಿನ ಮಾತು. ಚುನಾವಣೆ ಏನಾಗಬಹುದು? ಯಾರು ಯಾರ ಕಾಲೆಳೆಯಬಹುದು? ಯಾರು ಯಾರಿಗೆ ಒಳ ಏಟು ಕೊಡಬಹುದು? ಎಂಬ ಅಂಶಗಳು ಆಸಕ್ತಿ ಕೆರಳಿಸಿವೆ. ಸದ್ಯದ ವಾತಾವರಣ ಗಮನಿಸಿದರೆ ಎನ್‌ಡಿಎ ಮತ್ತು ‘ಇಂಡಿಯಾ’ ಬ್ಲಾಕ್ ಮಧ್ಯೆ ಹಣಾಹಣಿ. ಅಕ್ರಮಕ್ಕೆ ಅವಕಾಶವಿಲ್ಲದೆ, ಎಲ್ಲವೂ ಪಾರದರ್ಶಕವಾಗಿ ನಡೆದರೆ ಫೋಟೊ ಫಿನಿಷ್ ಆಗಬಹುದು.
2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಎರಡೂ ಮೈತ್ರಿಕೂಟಗಳ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಬಿಜೆಪಿಗಿಂತ ಜೆಡಿಯು ಕಡಿಮೆ ಸ್ಥಾನ ಪಡೆದರೂ ನಿತೀಶ್ ಮುಖ್ಯಮಂತ್ರಿ ಆದರು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಅಂತರ ಕೇವಲ 15 ಸ್ಥಾನ. ಮತಗಳ ವ್ಯತ್ಯಾಸ ಶೇ 0.03. ‘ಇಂಡಿಯಾ’ ಬ್ಲಾಕ್ ಮುಸ್ಲಿಮರು- ಯಾದವರ ಸಮೀಕರಣವನ್ನೇ ಹೆಚ್ಚು ನೆಚ್ಚಿಕೊಂಡಿದೆ. ಅತೀ ಹಿಂದುಳಿದ ವರ್ಗಗಳ ಬೆಂಬಲವೂ ಇದೆ. ಎನ್‌ಡಿಎ ಅತೀ ಹಿಂದುಳಿದ ವರ್ಗದ ಜತೆ ಬ್ರಾಹ್ಮಣ, ರಜಪೂತ, ಭೂಮಿಹಾರ್ ಜಾತಿಗಳನ್ನು ನಂಬಿಕೊಂಡಿದೆ. ನಿತೀಶ್ ಸ್ವತಃ ಕುರ್ಮಿ ಜಾತಿಯವರು. ಇದೂ ಒಬಿಸಿ ವ್ಯಾಪ್ತಿಯಲ್ಲಿದ್ದು, ಒಟ್ಟು ಜನಸಂಖ್ಯೆಯ ಶೇ. 4ರಷ್ಟಿದೆ. ಅತೀ ಹಿಂದುಳಿದ ವರ್ಗಗಳ ಬುಟ್ಟಿಗೆ ಎಲ್ಲರೂ ಕೈ ಹಾಕಿದ್ದಾರೆ. ಪರಿಶಿಷ್ಟ ಜಾತಿ-ಪಂಗಡದಲ್ಲೂ ಉಭಯ ಮೈತ್ರಿ ಕೂಟಗಳ ಪಾಲಿದೆ. ಯಾರು ಎಷ್ಟು ಬಾಚಿಕೊಳ್ಳುತ್ತಾರೊ? ಇವೆಲ್ಲವೂ ಬಹಿರಂಗವಾಗುವುದು ಈ ತಿಂಗಳ 14ಕ್ಕೆ. ಫಲಿತಾಂಶ ಘೋಷಣೆಯ ಬಳಿಕ. ಆ ಕ್ಷಣಕ್ಕಾಗಿ ಇಡೀ ದೇಶದ ಜನ ಎದುರು ನೋಡುತ್ತಿದ್ದಾರೆ.







