Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜನಪದ ಕವಿ ಹೆಗ್ಗಣದೊಡ್ಡಿ ಹನುಮಂತರಾಯ...

ಜನಪದ ಕವಿ ಹೆಗ್ಗಣದೊಡ್ಡಿ ಹನುಮಂತರಾಯ ಕಟ್ಟಿದ ರೈತರ ಪದ

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ3 Dec 2024 11:49 AM IST
share
ಜನಪದ ಕವಿ ಹೆಗ್ಗಣದೊಡ್ಡಿ ಹನುಮಂತರಾಯ ಕಟ್ಟಿದ ರೈತರ ಪದ
ನಾಲ್ಕನೆಯ ತರಗತಿ ಓದಿದ ಹನುಮಂತರಾಯ ಅಭ್ಯಾಸದಿಂದ ಓದಲು ಬರೆಯಲು ಕಲಿತಿದ್ದಾರೆ. ಹೀಗಾಗಿ ರಿವಾಯ್ತ್ ಪದ ಕಟ್ಟುತ್ತಾರೆ. ಕಟ್ಟಿದ ಪದವನ್ನು ಜನ ಮೆಚ್ಚಿದರೆ ಬರೆದಿಡುತ್ತಾರೆ. ಈ ತನಕ ಇವರು 70ರಷ್ಟು ಪದ ಕಟ್ಟಿದ್ದಾರಂತೆ. ಜತೆಗೆ ಪದ ಹಾಡಲು ಮೂರ್ನಾಲ್ಕು ಜನ ಹಿರಿಯ ಕಲಾವಿದರಿದ್ದಾರೆ. ಹನುಮಂತರಾಯ ತನ್ನ ಕವಿತ್ವದ ಬಗ್ಗೆ ‘‘ನಾವು ಕಂಡಾಬಟ್ಟೆ ಕಲತವರಲ್ರೀ ಹಳ್ಳಿ ಲೆಕ್ಕದಾಗ ಹಾಡೋದು ಬರೆಯೋದು ಮಾಡತಾವ್ರೀ..’’ ಎಂದು ಮಾತನಾಡುತ್ತಾರೆ.

ಮುಹರ್ರಂ ಅಥವಾ ಅಲೆಹಬ್ಬಗಳಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಹಾಡಲ್ಪಡುವ ಜನಪದ ರಿವಾಯ್ತ್ ಪದಗಳಲ್ಲಿ ದುಖಾಂತ್ಯ ಹಾಡುಗಳ ಪ್ರಮಾಣ ದೊಡ್ಡದಿದೆ. ಇದಕ್ಕೆ ಮುಹರ‌್ರಂ ಆಚರಣೆಯ ಹಿನ್ನೆಲೆಯೂ ಕಾರಣ. ಹಾಗಾಗಿ ಸಾವು-ನೋವು, ಅಪಘಾತ ಮುಂತಾದ ಸಂಗತಿಗಳೇ ರಿವಾಯ್ತ್ ಹಾಡುಗಳಾಗಿ ಬದಲಾಗುತ್ತವೆ. ಹೀಗೆ ಯಾವ ಯಾವ ಬಗೆಯ ದುಃಖ ದುಮ್ಮಾನಗಳು ರಿವಾಯ್ತ್ ಪದಗಳಾಗಿವೆ ಎನ್ನುವುದೇ ಒಂದು ಕುತೂಹಲಕಾರಿ ಅಧ್ಯಯನವಾಗುತ್ತದೆ. ಪ್ರೊ.ರಹಮತ್ ತರೀಕೆರೆ ಅವರ ‘ಕರ್ನಾಟಕದ ಮೊಹರಂ’ ಕೃತಿಯಲ್ಲಿ ಇಂತಹ ಹಲವು ಸಾಧ್ಯತೆಗಳನ್ನು ಚರ್ಚಿಸಿದ್ದಾರೆ. ‘ಕರ್ನಾಟಕದ ಮೊಹರಂ’ ಯೋಜನೆಯ ಯೋಜನಾ ಸಹಾಯಕನಾಗಿ ಹಲವು ಕಡೆಗಳಲ್ಲಿ ತಿರುಗುವಾಗ ಸುರಪುರ ತಾಲೂಕಿನ ಹೆಗ್ಗಣದೊಡ್ಡಿ ಗ್ರಾಮದ ಹನುಮಂತರಾಯ ಕಟ್ಟಿದ ‘ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಮಾನಾ’ ಎನ್ನುವ ಪದವೊಂದು ಗಮನ ಸೆಳೆಯಿತು. ಇದು ಕಲ್ಯಾಣ ಕರ್ನಾಟಕದ ಸಾಹಿತಿಗಳು, ವಿದ್ವಾಂಸರು, ರೈತ ಚಳವಳಿಗಳು ಸಾರ್ವಜನಿಕವಾಗಿ ಚರ್ಚಿಸದ ಒಂದು ಗಂಭೀರ ಸಮಸ್ಯೆಯನ್ನು ಆಧರಿಸಿತ್ತು. ಕಲ್ಯಾಣ ಕರ್ನಾಟಕ ಹಿಂದುಳಿಯಲು ಕಾರಣವೇನು? ಎನ್ನುವ ಶೋಧ ಮಾಡಿದಂತಿತ್ತು. ನೀರಾವರಿ ಬಂದ ಮೇಲೆ ಇದರ ಲಾಭ ಯಾರ ಪಾಲಾಗುತ್ತಿದೆ ಎನ್ನುವುದರ ಬಗ್ಗೆ ಕವಿಗಾರ ಮಾತಾಡುತ್ತಿದ್ದಾನೆ.

ರೈತರ ಆತ್ಮಹತ್ಯೆಗಳಿಗೆ ರೈತರೇ ಕಾರಣ ಎನ್ನುವ ವರದಿಗಳು ಎಷ್ಟು ಅಮಾನವೀಯ ಎನ್ನುವುದರ ಬಗ್ಗೆ ಚರ್ಚೆಗಳು ನಡೆದಿವೆ. ಹೊರಗಿನ ವಿದ್ವಾಂಸರಾಗಿಯೋ, ಚಳವಳಿಯ ಕಾರ್ಯಕರ್ತರಾಗಿಯೋ, ಸರಕಾರಿ ಅಧಿಕಾರಿಗಳಾಗಿಯೋ, ಪತ್ರಕರ್ತರಾಗಿಯೋ ಕೆಲವು ಕಾರಣಗಳನ್ನು ಹುಡುಕಿದಾಗಲೂ, ಕೆಲವು ಸ್ಥಳೀಯ ಕಾರಣಗಳು ನಮಗೆ ತಿಳಿಯುವುದೇ ಇಲ್ಲ. ಅವು ಕಪ್ಪೆಚಿಪ್ಪಿನಲ್ಲಿ ಅವಿತಿಟ್ಟಂತೆ ಕೂತಿರುತ್ತವೆ. ಇಂತಹ ಕೆಲವು ಸಮಸ್ಯೆಗಳು ಆಯಾ ಭಾಗದ ಮೌಖಿಕ ರಚನೆಗಳಲ್ಲಿ, ಮಾತುಕತೆಗಳಲ್ಲಿ ವ್ಯಕ್ತವಾಗುವ ಸಾಧ್ಯತೆ ಇರುತ್ತವೆ. ಇವುಗಳನ್ನು ಸಂಗ್ರಹಿಸಿಯೋ ಅಥವಾ ಆಯಾ ಹಾಡುಗಾರಿಕೆ ಮಾತುಕತೆಯ ಸಂದರ್ಭದಲ್ಲಿ ಹಾಜರಿದ್ದು ಕೇಳಿಸಿಕೊಂಡಾಗ ಇಂತವುಗಳು ಅರಿವಿಗೆ ಬರುತ್ತವೆ.

ಈ ಹಾಡಿನ ಹಿನ್ನೆಲೆಯನ್ನು ನೋಡೋಣ. ಆಂಧ್ರದಿಂದ ಬಹುಪಾಲು ರೆಡ್ಡಿ ಸಮುದಾಯದ ರೈತರು ಹೈಕ ಭಾಗಕ್ಕೆ ಕೃಷಿ ಮಾಡಲು ವಲಸೆ ಬರುತ್ತಾರೆ. ಇಲ್ಲಿ ಹತ್ತರಿಂದ ಮೂವತ್ತು ಎಕರೆಯಷ್ಟು ಒಂದೊಂದು ಕುಟುಂಬ ದುಬಾರಿ ಬೆಲೆ ಕೊಟ್ಟು ಹತ್ತು ವರ್ಷಕ್ಕೋ ಹದಿನೈದು ವರ್ಷಕ್ಕೋ ಭೂಮಿಯನ್ನು ಲೀಸ್‌ಗೆ (ಗುತ್ತಿಗೆ) ಹಿಡಿಯುತ್ತಾರೆ. ತುಂಗಭದ್ರ ಕೃಷ್ಣ ಅಲಮಟ್ಟಿ ಡ್ಯಾಂ ನೀರು ಇರುವ ಕಡೆ ಹೀಗೆ ಲೀಸ್‌ಗೆ ಭೂಮಿ ತೆಗೆದುಕೊಳ್ಳುತ್ತಾರೆ. ನೀರಾವರಿ ಇಲ್ಲದ ಭೂಮಿಯಲ್ಲಿ ಬೋರ್ ಕೊರೆಸಿ ನೀರಾವರಿ ಮಾಡುತ್ತಾರೆ. ಈ ಭೂಮಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸುತ್ತಾರೆ. ವಿಪರೀತ ಗೊಬ್ಬರ ಕ್ರಿಮಿನಾಶಕ ಬಳಸಿ ಯಥೇಚ್ಛ ನೀರುಣಿಸಿ ಭೂಮಿಯ ಶಕ್ತಿಯನ್ನೆಲ್ಲಾ ಹೀರುತ್ತಾರೆ. ಈ ಭೂಮಿಯ ಹೆಸರಿಗೆ ಬ್ಯಾಂಕು ಲೇವಾದೇವಿಯವರ ಹತ್ತಿರ ಸಾಧ್ಯವಾದಷ್ಟು ಸಾಲ ಮಾಡುತ್ತಾರೆ. ಹೀಗೆ ಲೀಸ್ ಮುಗಿಯುವ ಮೊದಲೇ ಇದ್ದಕ್ಕಿದ್ದಂತೆ ಹೊಲಗಳಿಂದ ಆಂಧ್ರದ ಈ ಕುಟುಂಬ ಕಾಣೆಯಾಗುತ್ತದೆ. ಆಗ ಆ ಹೊಲದ ರೈತ ದಿಗ್ಭ್ರಮೆಗೊಳ್ಳುತ್ತಾನೆ. ಕಾರಣ ಹೊಲದ ಹೆಸರಲ್ಲಿ ಸಾಕಷ್ಟು ಸಾಲವಿರುತ್ತದೆ, ಅಂತೆಯೇ ಸದ್ಯಕ್ಕೆ ಬೆಳೆ ಬೆಳೆಯಲು ಸಾಧ್ಯವೇ ಇಲ್ಲದಷ್ಟು ಹೊಲ ಬಂಜರಾಗಿರುತ್ತದೆ. ಹೀಗೆ ರೆಡ್ಡಿಗಳು ಬಂಜರು ಮಾಡಿ ಬಿಟ್ಟುಹೋದ ಹೊಲದ ರೈತರು ಸಾಮಾನ್ಯ ವಾಗಿ ಕಡುಬಡವರಾಗುವ ಸಾಧ್ಯತೆಗಳಿರುತ್ತವೆ. ಇಂತಹ ಹಿನ್ನೆಲೆಯನ್ನು ಆಧರಿಸಿದ ರಿವಾಯ್ತ್ ಪದವು ಹೀಗಿದೆ:

ತಲಾಟಿ ಜನ ಗಿಲಾಟಿ ದುಡ್ಡು...

ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಮಾನಾ|

ಗಲಾಟಿಮಾಡಿ ಗದ್ದಲೆಬಿಸಿತು ನೀರಾವರಿ ಪೂರಣಾ

ಆಂಧರದಿಂದ ಬಂದಿತ್ತು ಬಾಳ ಜನಾ|

ಅಳಿಯದು ಬಂತು ಇದ್ದಂತ ಒಕ್ಕಲತನಾ॥

ಲೀಜಿಗಂತ ಹಿಡಿದರು ದೊಡ್ಡ ದೊಡ್ಡ ಜಮೀನಾ|

ಕೆಡಿಸಿ ಗದ್ದೆ ಮಾಡಿಬಿಟ್ಟರು ಅವರು ಸಂಪುರಣಾ

ಊರು ಬಿಟ್ಟು ದೂರ್ ದೂರ ಹಾಕ್ಯರ ತಮ್ಮಟಿ ಕಣಾ|

ಕೌಳಿ ಮಾಡಿ ಕೈತುಂಬಣ ಪಡೆದುಕೊಳ್ಳೋಣಾ॥

ದುಡ್ಡಿನ ಆಸೆ ಹಚ್ಚಿಬಿಟ್ಟರು ರೈತರಿಗಿನ್ನಾ|

ಅವರದೆಷ್ಟು ಹೇಳಲಿ ವೈಭವತನಾ

ನೋಡಲಿಕ್ಕೆ ಕಾಣವರು ಒಳ್ಳೇ ಜನಾ|

ತಿಳಿಯಲಿಲ್ಲೋ ರೈತರಿಗೆ ಅವರ ವರ್ತಮಾನ॥

ಇದ್ದ ಜಮೀನು ಎಲ್ಲ ಅವರಿಗೆ ಒತ್ತಿ ಹಾಕೋಣಾ|

ದುಡಿಮಿ ಇಲ್ಲದ ಈಗ ನಾವೂ ದುಡ್ಡು ಗಳಿಸೋಣ

ದೊಡ್ಡ ದೊಡ್ಡ ರೈತ ತೆಗೆದ ಒಕ್ಕಲತನಾ|

ಕಂತ್ರಿಕವಳಿ ಬಂದು ಮಾಡಿತು ಕಾರಸ್ತಾನ॥

ಬಸವನ ಬಾಯಿಗೆ ತುಸುಸೊಪ್ಪು ಇಲ್ಲದಂಗ ಖೂನಾ|

ತಿಳಿಯದಿಲ್ಲ ಮುಂದೇನಾ ವರ್ತಮಾನ

ಬೆಳೆಯದುಕಾ ಬೆಲೆಯಿಲ್ಲದಂಗ ಆಗ್ಯದ ಸಂಪುರಣಾ|

ಇದರಂತೆ ನಡದಿತ್ತು ಐದಾರು ವರುಷಾದ ತನಾ॥

ಕೆಡುಗಾಲಕ ಒದಗಿ ಬಂತು ಕವಳಿ ವರ್ತಮಾನ|

ಪೃಥ್ವಿ ಮೇಲೆ ಹುಟ್ಟಿತ್ತು ಬಿಳಿ ದ್ವಾಮಿನ್ನಾ

ಆಂಧರ ಜನ ನೋಡಿ ಅಂತಿತ್ತು ಒಂದೇ ಸವನಾ|

ತಿಳಿವಲ್ದು ಈ ರೋಗದ ಒಂದು ವರ್ತಮಾನ॥

ಬೆಳೆದ ಮಾಲು ನಾಶ ಮಾಡಿ ಹೋದಿತು ಸಂಪುರಣಾ|

ಕೊಟ್ಟ ಸವಕಾರ ಬರುತಾನ ಅವರ ಮನೆಯಾ ತನಾ

ಆಂಧರ ಜನಕ ಆಗಿಬಿಟ್ಟಿತು ದ್ವಾಮಿ ಹೈರಾಣಾ|

ಮಂದಿ ಜಮೀನು ಮೇಲೆ ಅವರು ಸಾಲ ಮಾಡಾಣಾ॥

ಸುಳ್ಳು ಮಾತು ಹೇಳಿ ಈಗ ಸಂಸರ ನಡಿಸೋಣಾ|

ಮುಂದಿನ ಮಾಲಿಗೆ ತಂದು ಕೊಡ್ತೀವಿ ನಿಮ್ಮ ದುಡ್ಡನ್ನು

ಅಷ್ಟರೊಳಗ ನೀರಿಗೆ ಬಂತು ಬಾಳ ಕಠಿಣಾ|

ಗೇಟು ಹಾಕಿ ನೀರಿನ ಕವಲುಗಾರ ಕುಂತಾ ಸುಮ್ಮನಾ॥

ಬಂದ ಮಾಲು ಬತ್ತಿ ಹೋಯ್ತು ನೀರಿಲ್ಲದಿನ್ನಾ|

ಆಂಧರ ಜನರಿಗಾದೀತು ಬಾಳ ಕಠೀಣಾ

ಗೋರಮೆಂಟಕೆ ಬರಲಿಲ್ರೀ ಅಂತಕರುಣಾ|

ಆಂದರ ಜನ ಹೌಹಾರಿ ನಿಂತು ಸಂಪುರಣಾ॥

ಆಂಧರ ಜನ ಕೂಡಿ ಅವರು ಮೀಟಿಂಗು ಮಾಡಾಣಾ|

ಸ್ಟ್ರೈಕು ಮಾಡಿ ಗೇಟು ಎತ್ತಿಸಿ ನೀರು ತರುವೋಣಾ

ಹಳ್ಳಿ ಹಳ್ಳಿ ವಾಹನ ಬಿಟ್ಟಾರ ಆಫೀಸತನಾ|

ನಡು ದಾರಿಯಲ್ಲಿ ಒಂದು ವಾಹನ ಪಳ್ಟಿ ಆಗೋಣಾ॥

ಅದರಲ್ಲಿದ್ದ ನಾಲ್ಕು ಜನ ಮೃತ ಹೊಂದಾಣಾ|

ಉಳಿದು ಜನಾ ಗಾಯಗೊಂಡು ನರಳುತ್ತಾವಿನ್ನಾ

ಇಷ್ಟೆಲ್ಲ ಆಂಧರ ಜನ ನೋಡ್ಯದ ಸಂಪುರಣಾ|

ಸಾಲ ಮಾಡಿ ಹೋಗ್ಯಾರೋ ಸಾವಿರಾರು ಜನಾ॥

ದೊಡ್ಡ ಸವುಕಾರ ಬರುತಾನ ಅವರ ಮನಿಯಾತನಾ|

ದಿಕ್ಕುತಪ್ಪಿದಂಗ ಬಡಿದು ನಿಂತ ಸುಮ್ಮನಾ

ನಡುಮನಿಯಲ್ಲಿ ತುಪ್ಪದ ದೀಪ ಇಟ್ಟು ಹೋಗೋಣಾ|

ಆಂಧರ ಜನ ಆದ ಇಂತ ಮೋಸತನಾ॥

ಕಂತ್ರಿ ಕೌಳೀದು ಸ್ವಲ್ಪ ತಿಳಿಸಿದೆ ಅದರ ವರ್ತಮಾನಾ|

ಆಂಧರ ಜನಕ ಆಸ್ಪದ ಗೋರ್ಮೆಂಟ್ ಕೊಡಲಿಲ್ಲಕೂನಾ

ಹೆಸರಾಯ್ತು ಹೆಗ್ಗಣದೊಡ್ಡಿ ಗ್ರಾಮ ವಾಹೀನಾ|

ರಾಜಭಕ್ಷರು ನೆಲಸಿದಾ ಸತ್ಯಳ್ಳ ಶರುಣಾ ॥

ಅವನ ಕರುಣಾ ನಮ್ಮ ಮ್ಯಾಲ ಅದ ಸಂಪುರುಣಾ|

ಹನುಂತರಾಯ ಬರೆದ ಕವನ ಮುತ್ತು ನವರತುನಾ॥

(ಕವಳಿ-ಬತ್ತ, ನೆಲ್ಲು)

ಹಾಡಿಕೆ ಕೇಳಲು ಈ ಕೊಂಡಿ ಒತ್ತಿ: https://youtu.be/2iL42C7b2sE

(ಪದ ಕಟ್ಟಿದವರು: ಹನುಮಂತರಾಯ ಪೂಜಾರಿ, ಸಂಗಡಿಗರು: ಚನ್ನಬಸಪ್ಪ ಪೂಜಾರಿ, ಶೇಖಣ್ಣ ಗೌಂಡಿ, ಡಾ.ಅಮರೇಶ ಕೆಂಬಾವಿ, ಹಿನ್ನೆಲೆ ಗಾಯನ: ಗೊಲ್ಲಾಳಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಲಕ್ಷ್ಮಣ ಅಡ್ಡಮನಿ, ದೇವಣ್ಣ ಚೌಕರಿ, ಹೆಗ್ಗಣದೊಡ್ಡಿ)

ಈ ಪದ ಕಟ್ಟಿದ ಹೆಗ್ಗಣದೊಡ್ಡಿಯ ಜನಪದ ಕವಿ ಹನುಮಂತರಾಯ ಅವರನ್ನು ಈ ಪದವನ್ನು ಹೇಗೆ ಕಟ್ಟಿದಿರಿ ಎಂದು ಕೇಳಿದರೆ ‘‘ಒನ್ ಟೈಂ ನೀರ್ ಬಿಟ್ಟಿದ್ದಿಲ್ಲ ಸರ್, ಚಾನಲ್ ಸ್ಟ್ರೈಕ್‌ಗೆ ಅಂತ ಹೊಂಟಿದ್ರು ಸಾ, ನಮ್ಮ ಬಾಜು ಸುರಪುರ ತಾಲೂಕು ಕಣ್ಣಳ್ಳಿಯ ರೈತರು ಚಾನಲ್ ಗೇಟ್ ಇರುವ ಶಾಪುರ ತಾಲೂಕ್ ವನದುರ್ಗ ದಾಟಿ ಹೋಗುವಾಗ ಆಕ್ಸಂಟ್ ಆಗಿ ಸತ್ರು..ಅದೊಂದು ಕತಿ ಸಾರಾಂಶದ ಮೇಲೆ ಈ ಪದ ಬರದದ್ದು ಸರ್’’ ಎನ್ನುತ್ತಾರೆ. ನಾಲ್ಕನೆಯ ತರಗತಿ ಓದಿದ ಹನುಮಂತರಾಯ ಅಭ್ಯಾಸದಿಂದ ಓದಲು ಬರೆಯಲು ಕಲಿತಿದ್ದಾರೆ. ಹೀಗಾಗಿ ರಿವಾಯ್ತ್ ಪದ ಕಟ್ಟುತ್ತಾರೆ. ಕಟ್ಟಿದ ಪದವನ್ನು ಜನ ಮೆಚ್ಚಿದರೆ ಬರೆದಿಡುತ್ತಾರೆ. ಈ ತನಕ ಇವರು 70ರಷ್ಟು ಪದ ಕಟ್ಟಿದ್ದಾರಂತೆ. ಜತೆಗೆ ಪದ ಹಾಡಲು ಮೂರ್ನಾಲ್ಕು ಜನ ಹಿರಿಯ ಕಲಾವಿದರಿದ್ದಾರೆ. ಹನುಮಂತರಾಯ ತನ್ನ ಕವಿತ್ವದ ಬಗ್ಗೆ ‘‘ನಾವು ಕಂಡಾಬಟ್ಟೆ ಕಲತವರಲ್ರೀ ಹಳ್ಳಿ ಲೆಕ್ಕದಾಗ ಹಾಡೋದು ಬರೆಯೋದು ಮಾಡತಾವ್ರೀ..’’ ಎಂದು ಮಾತನಾಡುತ್ತಾರೆ.

ಈ ರಿವಾಯ್ತ್ ಕಲ್ಯಾಣ ಕರ್ನಾಟಕ ಭಾಗದ ಕೃಷಿ ಬಿಕ್ಕಟ್ಟುಗಳನ್ನು ಹೇಳುತ್ತಿದೆ. ‘ಅಳಿಯದು ಬಂತು ಇದ್ದಂತ ಒಕ್ಕಲತನಾ..’ ಎನ್ನುವ ಆತಂಕ ಈ ರಿವಾಯ್ತ್‌ಕಾರನದು. ಇಲ್ಲಿ ದುಡಿಯದೆ ಹಣ ಗಳಿಸುವ ಜನರ ಮನಸ್ಥಿತಿಯೇ ಇದಕ್ಕೆ ಕಾರಣ ಎನ್ನುವುದನ್ನೂ ಈ ಹಾಡು ಹೇಳುತ್ತಿದೆ. ಲೀಸ್‌ಗೆ ಭೂಮಿ ಕೊಟ್ಟ ನಂತರ ಮನೆಯಲ್ಲಿನ ಜಾನುವಾರಿಗೆ ಮೇವು ಇಲ್ಲದ ವಾತಾವರಣ ಸೃಷ್ಟಿಯಾಗಿದ್ದನ್ನು ಗಮನಿಸಲಾಗಿದೆ. ಅಂದರೆ ಹೊಲ ಕೇವಲ ಮನುಷ್ಯರ ಅಗತ್ಯವನ್ನು ಮಾತ್ರ ತೀರಿಸುವುದಿಲ್ಲ, ಬದಲಾಗಿ ಜಾನುವಾರುಗಳ ಅಗತ್ಯವನ್ನೂ ಪೂರೈಸುತ್ತಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ. ಅಂತೆಯೇ ಭೂಮಿಯಲ್ಲಿ ಹಣದಾಸೆಗೆ ಕೇವಲ ವಾಣಿಜ್ಯ ಬೆಳೆ ಬೆಳೆಯುವ ಬದಲಾದ ಮನಸ್ಥಿತಿಯನ್ನು ಕಾಲದ ಬದಲಾವಣೆ ಎಂಬಂತೆ ಚಿತ್ರಿಸಲಾಗಿದೆ.

ಇಲ್ಲಿ ಬಿಳಿದ್ವಾಮಿ ಎನ್ನುವ ಕೀಟ ಬಾಧೆಯಿಂದಲೂ ನೀರಿನ ಕೊರತೆಯಿಂದಲೂ ಬೆಳೆ ನಾಶವಾಯಿತು ಎನ್ನುವ ವಿವರ ಇದೆ. ಈ ಎಲ್ಲಾ ವಿವರಗಳು ಕಲ್ಯಾಣ ಕರ್ನಾಟಕ ಭಾಗದ ಕೃಷಿ ಸ್ಥಿತ್ಯಂತರವನ್ನು ಹೇಳುತ್ತಿದೆ. ಮುಂದುವರಿದು ಹೇಳುವುದಾದರೆ ಹೀಗೆ ಭೂಮಿಯನ್ನು ಲೀಸ್‌ಗೆ ಕೊಟ್ಟ ರೈತರು ನಿರಾಳವಾಗುವ ಕಾರಣಕ್ಕೆ ಈ ಭಾಗದಲ್ಲಿ ವಲಸೆ ಹೋಗುವವರ ಸಂಖ್ಯೆಯೂ ಹೆಚ್ಚಿರಬಹುದು. ಈ ಬಗೆಯ ಆಲೋಚನೆಗಳನ್ನು ಈ ಪದ ಹುಟ್ಟಿಸುತ್ತದೆ. ಅಂತೆಯೇ ಗ್ರಾಮೀಣ ಜನರಲ್ಲಿ ಈ ಪದ ಅರಿವು ಮೂಡಿಸುತ್ತದೆ.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X