ಜಾಗತಿಕ ವೈಜ್ಞಾನಿಕ ಜನಸಂಖ್ಯಾ ನೀತಿ ಅಭಿವೃದ್ಧಿಗೆ ಬುನಾದಿ

ಜನಸಂಖ್ಯಾ ಸಮಸ್ಯೆಯ ಸ್ವರೂಪ ಮತ್ತು ಸಂಕೀರ್ಣತೆ ದಶಕದಿಂದ ದಶಕಕ್ಕೆ, ದೇಶದಿಂದ ದೇಶಕ್ಕೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಜನಸಂಖ್ಯಾ ಸಮಸ್ಯೆ ಕೇವಲ ಅಂಕಿ ಅಂಶಗಳ ವಿಚಾರವಲ್ಲ; ಪರಿಸರ ಮಾಲಿನ್ಯ ಸಮಸ್ಯೆಯಂತೆ, ಇದು ಕೂಡ ಜಾಗತಿಕ ಸ್ವರೂಪವನ್ನು ಪಡೆದುಕೊಂಡಿದೆ. ಜಗತ್ತು ಸಾಮೂಹಿಕ ಯತ್ನದಿಂದ ಮಾತ್ರ ಜನಸಂಖ್ಯಾ ಸಮಸ್ಯೆಯನ್ನು ನಿಭಾಯಿಸಬಹುದು. ಜಾಗತಿಕ ವೈಜ್ಞಾನಿಕ ಜನಸಂಖ್ಯಾ ನೀತಿ ಅಭಿವೃದ್ಧಿಗೆ ಬುನಾದಿ. ಪ್ರಪಂಚದ ಶೇ. 25ರಷ್ಟು ಜನಸಂಖ್ಯೆ ದಕ್ಷಿಣ ಏಶ್ಯ, 9ರಷ್ಟು ಆಗ್ನೇಯ ಏಶ್ಯ, 16ರಷ್ಟು ಆಫ್ರಿಕಾದ ಉಪ ಸಹರಾ ಭಾಗ, 18.4ರಷ್ಟು ಭಾರತದಲ್ಲಿ ಮತ್ತು ಶೇ. 17.5ರಷ್ಟು ಚೀನಾದಲ್ಲಿ ಕೇಂದ್ರೀಕೃತವಾಗಿದೆ. ಜಗತ್ತಿನ ಶೇ. 90ರಷ್ಟು ಜನಸಂಖ್ಯೆ ಆರ್ಥಿಕವಾಗಿ ಹಿಂದುಳಿದಿರುವ ಶೇ. 10 ಭೂಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ! ದೀರ್ಘಕಾಲದಲ್ಲಿ ಜನಸಂಖ್ಯಾ ಸ್ಫೋಟವೂ ಈ ವಿಪರೀತ ಜನಸಂಖ್ಯಾ ಕೇಂದ್ರೀಕೃತ ಪ್ರದೇಶದ ಬೆಳವಣಿಗೆಯ ಮೇಲೆ ಜನಸಂಖ್ಯಾ ಬಾಂಬ್ ಆಗಿ ಪರಿಣಾಮ ಬೀರುತ್ತಿದೆ. ಆದರೆ ಇನ್ನೊಂದು ಕಡೆ, ಜಗತ್ತಿನ ಶೇ. 90 ಭಾಗದಲ್ಲಿ ಜನಸಂಖ್ಯೆಯ ಕೊರತೆ (Population bust) ಇದೆ. ಇಂತಹ ಜನಸಂಖ್ಯೆ ಕೊರತೆ ಇರುವ ದೇಶಗಳ ಜನಸಂಖ್ಯಾ ಸಮತೋಲನವನ್ನು ಸಕಾರಾತ್ಮಕ ವಲಸೆ ನೀತಿಯಿಂದ (Immigration policy) ಮಾತ್ರ ಸುಧಾರಿಸಬಹುದು. ಆದರೆ ಇದು ಅಂಥ ದೇಶದಲ್ಲಿ ಜನಾಂಗೀಯ ಮತ್ತು ಸಾಂಸ್ಕೃತಿಕ ಸಂಘರ್ಷಕ್ಕೆ ಕಾರಣವಾಗಬಹುದು. ವಿಶ್ವಸಂಸ್ಥೆಯ ಪ್ರಕಾರ ಜನಸಂಖ್ಯಾ ಹೆಚ್ಚಳದ ಗತಿ 2080(1300 ಕೋಟಿ ಜನಸಂಖ್ಯೆ)ರವರೆಗೂ ಮುಂದುವರಿದು ಆನಂತರ ನಿಧಾನವಾಗಿ ಕ್ಷೀಣಿಸುತ್ತದೆ.
ಜಪಾನ್, ಕೊರಿಯಾ ಮತ್ತು ಐರೋಪ್ಯ ದೇಶಗಳು ವಯಸ್ಕ ಜನಸಂಖ್ಯೆ ಹೆಚ್ಚಳ ಮತ್ತು ತೀಕ್ಷ್ಣ ಜನ್ಮದರ ಕುಸಿತದಿಂದ ಬಳಲುತ್ತಿದ್ದರೆ, ದಕ್ಷಿಣ ಏಶ್ಯ ಮತ್ತು ಆಫ್ರಿಕಾದ ಉಪ ಸಹರಾ ಭಾಗಗಳು ತೀಕ್ಷ್ಣ ಜನಸಂಖ್ಯೆ ಹೆಚ್ಚಳದಿಂದ ನಲುಗಿ ಹೋಗಿವೆ.
ಭಾರತವು ಪ್ರಪಂಚದಲ್ಲಿ ಅತ್ಯಂತ ಯುವ ದೇಶ. ದೇಶದ ಶೇ. 65ರಷ್ಟು ಜನಸಂಖ್ಯೆ ಕೇವಲ 35 ವರ್ಷದ ಒಳಗಿದ್ದಾರೆ. ದೇಶದಲ್ಲಿ ನಗರ ಜನಸಂಖ್ಯೆ ಶೇ. 36ರಷ್ಟಿದೆ. ವಯಸ್ಕರ ಆರೋಗ್ಯ ಪಾಲನೆ, ಸಾಮಾಜಿಕ ಭದ್ರತೆ, ಮತ್ತು ಯುವಕರಿಗೆ ಉದ್ಯೋಗ ನೀಡಿ, ಸಕ್ರಿಯ ಕ್ರಿಯಾತ್ಮಕ ಶಕ್ತಿಗಳಾಗಿ ಪರಿವರ್ತಿಸುವುದು ಸರಕಾರದ ಪ್ರಮುಖ ಜವಾಬ್ದಾರಿಯಾಗಿದೆ.
ಭಾರತದಲ್ಲಿ ಈಗಾಗಲೇ 53 ಮೆಗಾ ನಗರ (10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ)ಗಳಿವೆ. ಇದಕ್ಕೆ ಮುಖ್ಯ ಕಾರಣ ಜನರು ಉದ್ಯೋಗ ಆರಿಸಿಕೊಂಡು ಜನರು ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಹೋಗುವುದು. ಬಹುತೇಕ ಈ ಮೆಗಾ ನಗರಗಳು ಮೂಲಭೂತ ಸೌಕರ್ಯಗಳ ವ್ಯವಸ್ಥೆಯ ಕೊರತೆಯಿಂದ ನಲುಗಿ ಹೋಗಿವೆ. ಈ ಹಿನ್ನೆಲೆಯಲ್ಲಿ ಸರಕಾರಗಳು ಹೊಸ ಮೆಗಾ ನಗರಗಳಿಗೆ ಅಡಿಪಾಯವನ್ನು ಹಾಕಿ (ಉದಾ: ಉದ್ದೇಶಿತ ಬಿಡದಿ ಟೌನ್‌ಶಿಪ್) ಸಮಸ್ಯೆಯನ್ನು ಸಂಕೀರ್ಣಗೊಳಿಸುವುದು ಬೇಡ. ಏರುತ್ತಿರುವ ಜನಸಂಖ್ಯೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ನೈಸರ್ಗಿಕ ಸಂಪತ್ತಿನ ಮೇಲೆ ಅಪಾರ ಒತ್ತಡದಿಂದ ಪ್ರಾಕೃತಿಕ ವಿಕೋಪಗಳು ವಿಪರೀತ ಹೆಚ್ಚುತ್ತಿದೆ, ಅಲ್ಲದೆ ವಿಚಿತ್ರ ಹೊಸ ಕಾಯಿಲೆಗಳ ಉಗಮಕ್ಕೂ ನಾಂದಿ ಹಾಡಿದೆ. ಜಾಗತಿಕ ವಿಕೃತ ಜನಸಂಖ್ಯಾ ಅಸಮತೋಲನದಿಂದ ದೇಶ ದೇಶಗಳ ಮತ್ತು ಜನರ ಮಧ್ಯ ವಿಪರೀತ ಆರ್ಥಿಕ ಅಸಮತೋಲನವು ಜಗತ್ತಿನಲ್ಲಿ ಏರ್ಪಟ್ಟಿದೆ.
146 ಕೋಟಿ ಜನಸಂಖ್ಯೆಯ ಭಾರತ, ಪ್ರಪಂಚದ ಶೇ. 17.79 ಜನಸಂಖ್ಯೆಯನ್ನು ಹೊಂದಿ ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ. ರಾಷ್ಟ್ರೀಯ ಫಲವತ್ತತೆಯ ದರದ(TFR) ಗುರಿ 2.1 ಅನ್ನು ಸಾಧಿಸಿ, ದರ 1.9 ಅನ್ನು ಮುಟ್ಟಿದ್ದರೂ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ರಾಷ್ಟ್ರೀಯ ಜನನ ದರ ಗುರಿ (2.1)ಗಿಂತ ಅತಿ ಹೆಚ್ಚು ಜನನ ದರವನ್ನು ಹೊಂದಿ ದೇಶದ ಜನಸಂಖ್ಯಾ ಹೆಚ್ಚಳಕ್ಕೆ ಪ್ರಮುಖ ಕಾರಣೀಭೂತ ರಾಜ್ಯಗಳಾಗಿದ್ದಾವೆ. ಬಡತನ, ನಿರುದ್ಯೋಗ ಸಮಸ್ಯೆಗಳಿಂದ ಬಳಲುತ್ತಿರುವ ಈ ರಾಜ್ಯಗಳ ಜನರು ಕಡಿಮೆ ಜನನ ಪ್ರಮಾಣವನ್ನು ಸಾಧಿಸಿ, ಅಭಿವೃದ್ಧಿ ಪಥದಲ್ಲಿರುವ ಮತ್ತು ಕಾರ್ಮಿಕ ಶಕ್ತಿಯ ಕೊರತೆಯನ್ನು ಅನುಭವಿಸುತ್ತಿರುವ ದಕ್ಷಿಣ ಭಾರತದ ರಾಜ್ಯಗಳ ಕಡೆಗೆ ಗುಳೆ ಹೋಗುತ್ತಿದ್ದಾರೆ. ಇದು ವಲಸಿಗರಲ್ಲಿ ವಸತಿ, ಭಾಷಾ ಸಂಘರ್ಷ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಭಾರತದ ಸರಾಸರಿ ಜೀವಿತಾವಧಿ (Life expectancy) 70.2 ವರ್ಷಗಳನ್ನು ಸಾಧಿಸಿದ್ದರೂ ಹಿರಿಯ ನಾಗರಿಕರಿಗೆ (17 ಕೋಟಿ) ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಸವಲತ್ತುಗಳಿಗೆ ಸಿಗಬೇಕಾದ ಲಕ್ಷ ಸರಕಾರದಿಂದ ಸಿಗುತ್ತಿಲ್ಲ.
ರಾಷ್ಟ್ರಮಟ್ಟದಲ್ಲಿ ಕ್ಷೀಣಿಸುತ್ತಿರುವ ಲಿಂಗಾನುಪಾತ (929/1000), ಅದರಲ್ಲಿಯೂ ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ಮತ್ತು ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಇದು ವಿಪರೀತ ಕ್ಷೀಣಿಸುತ್ತಿರುವುದು (ಸ್ತ್ರೀಯ ಅನುಪಾತ ಸಾವಿರ ಪುರುಷರಿಗೆ 900ಕ್ಕಿಂತ ಕಡಿಮೆ ಇರುವುದು) ಆಘಾತಕಾರಿಯಾಗಿದೆ.
‘ಇಂದಿನ ಮತ್ತು ಭವಿಷ್ಯಕ್ಕಾಗಿ ಯುವಶಕ್ತಿಯ ನಿರೀಕ್ಷೆ ಮತ್ತು ಆಕಾಂಕ್ಷೆಗಳ ಈಡೇರಿಕೆ’ ಎಂಬ ಈ ವರ್ಷದ ಜನಸಂಖ್ಯಾ ದಿನದ ಧ್ಯೇಯ ವಾಕ್ಯದಂತೆ, ದೇಶದ ಯುವಶಕ್ತಿಯನ್ನು ಕೌಶಲಶೀಲ ಕ್ರಿಯಾಶಕ್ತಿಯನ್ನಾಗಿ ಪರಿವರ್ತಿಸಿ, ದೇಶ ನಿರ್ಮಾಣದಲ್ಲಿ ಸಜ್ಜುಗೊಳಿಸುವ ಕ್ರಿಯಾತ್ಮಕ ಸರಕಾರದ ನೀತಿಯು ಜನಸಂಖ್ಯಾ ನೀತಿಯ ಕೇಂದ್ರ ಗುರಿಯಾಗಬೇಕಾಗಿದೆ.






