ಸ್ವಾಮಿ ವಿವೇಕಾನಂದರ ವೈಚಾರಿಕ ಪ್ರಭಾವದಲ್ಲಿ ಬೆಳೆದ ಭಾರತದ ಮೊದಲ ಕಮ್ಯುನಿಸ್ಟ್ ಧೀಮಂತ, ಸ್ವಾತಂತ್ರ್ಯ ಹೋರಾಟಗಾರ ಭೂಪೇಂದ್ರನಾಥ ದತ್ತ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಭಾಗ - 22
ಭೂಪೇಂದ್ರನಾಥ ದತ್ತ ಅವರು ಹುಟ್ಟಿದ್ದು ಸೆಪ್ಟಂಬರ್ 4, 1880ರಂದು. ಆವರು ಸ್ವಾಮಿ ವಿವೇಕಾನಂದರ ಕಿರಿಯ ಸಹೋದರ. ವೈಚಾರಿಕ ಮಥನದ ಕಾಲಘಟ್ಟದ ಬೆಂಗಾಲದ ಕಾಲದಲ್ಲಿ ಬೆಳೆದವರು. ಅಣ್ಣ ವಿವೇಕಾನಂದರ ವೈಚಾರಿಕ ಪ್ರಭಾವವೂ ಇತ್ತು. ಕ್ರಾಂತಿಕಾರಿ ರಾಜಕೀಯ ಚಟುವಟಿಕೆಗಳಿಗಾಗಿ ಒಂದು ವೇದಿಕೆ ಸಜ್ಜುಗೊಳಿಸುವ ಇರಾದೆ ವಿವೇಕಾನಂದ ಅವರಿಗಿತ್ತು. ಆದರೆ ದುರದೃಷ್ಟವಶಾತ್ ಅವರ ದೇಹಾಂತ್ಯವಾಯಿತು. ಅವರ ನಿಧನದ ತರುವಾಯ ಭಗಿನಿ ನಿವೇದಿತಾ ಬಂಗಾಲದ ಊರುಗಳಲ್ಲಿ ವ್ಯಾಯಾಮ ಶಾಲೆ ಆರಂಭಿಸುವ ಪ್ರಸ್ತಾವ ಮುಂದಿಟ್ಟರು. ಅನುಶೀಲನ್ ಸಮಿತಿ (ಅನುಶೀಲನ್ ಅಂದರೆ ವ್ಯಾಯಾಮಶಾಲೆ) ಶುರುವಾಗಿದ್ದು ಹೀಗೆ. ಅಲ್ಪ ಸಮಯದಲ್ಲೇ ನೂರಾರು ಇಂತಹ ಅನುಶೀಲನ್ ಸಮಿತಿಯ ಶಾಖೆಗಳು ಬಂಗಾಲದಾದ್ಯಂತ ಆರಂಭವಾಯಿತು. ಇದರ ಬೆನ್ನಿಗೇ ಅರೊಬಿಂದೋ ಘೋಷ್ ‘ವಂದೇಮಾತರಂ’ ಮತ್ತು ‘ಜುಗಾಂತರ್’ ಎಂಬ ರ್ಯಾಡಿಕಲ್ ಪತ್ರಿಕೆಗಳನ್ನು ಶುರುಮಾಡಿದರು. 1906ರಲ್ಲಿ ಭೂಪೇಂದ್ರನಾಥ ದತ್ತ ಜುಗಾಂತರದ ಸಂಪಾದಕತ್ವ ವಹಿಸಿಕೊಂಡರು. ಅವರ ಸಂಪಾದಕತ್ವದ ಬಳಿಕ ಪತ್ರಿಕೆಯ ಪ್ರಸಾರ ಹತ್ತಾರು ಪಟ್ಟು ಹೆಚ್ಚಿತು. ಅವರ ಬೆಂಕಿ ಉಗುಳುವ ಕ್ರಾಂತಿಕಾರಿ ಲೇಖನಗಳ ಕಾರಣಕ್ಕೆ 1907ರಲ್ಲಿ ರಾಷ್ಟ್ರ ದ್ರೋಹದ ಆಪಾದನೆ ಮೇಲೆ ಭೂಪೇಂದ್ರನಾಥ ದತ್ತ ಅವರ ಬಂಧನವಾಯಿತು. ಒಂದು ವರ್ಷದ ಸಜೆಯೂ ಆಯಿತು.
ಜೈಲುಶಿಕ್ಷೆ ಆದಾಗ ಅವರ ತಾಯಿಗೆ ಉಳಿದ ಕ್ರಾಂತಿಕಾರಿಗಳು ಒಂದು ಪುಟ್ಟ ಕಾಣಿಕೆ ನೀಡಿದ್ದರು.ಆಗ ಆಕೆ, ‘‘ಭೂಪೇನ್‌ನನ್ನು ದೇಶಕ್ಕಾಗಿ ಕಾಣಿಕೆ ನೀಡಿದ್ದೇನೆ’’ ಎಂದಿದ್ದರು. ಭೂಪೇಂದ್ರನಾಥ ಅದೆಷ್ಟು ಜನಪಿಯರಾಗಿದ್ದರು ಅಂದರೆ, ಸ್ವತಃ ಭೂಪೇಂದ್ರನಾಥ, ತನ್ನ ತಾಯಿಗೆ, ‘‘ನೋಡಮ್ಮಾ, ವಿವೇಕಾನಂದನ ತಾಯಿ ಅಂತ ನಿನ್ನ ಗುರುತಿಸಿದ್ದು ಅಷ್ಟರಲ್ಲೇ ಇದೆ. ಈಗ ನೋಡು ಭೂಪೇನ್ ತಾಯಿ ಅಂತ ಹೆಸರು ಬಂತಲ್ಲಾ’’ ಎಂದು ತಮಾಷೆ ಮಾಡಿದ್ದರಂತೆ.
ಬಿಡುಗಡೆಯ ಬಳಿಕ ಭೂಪೇಂದ್ರನಾಥ ಅವರ ಭವಿಷ್ಯದ ಬಗ್ಗೆ ಆತಂಕಗೊಂಡ ಭಗಿನಿ ನಿವೇದಿತಾ ಭೂಪೇಂದ್ರನಾಥ ಅವರನ್ನು ಉನ್ನತ ಶಿಕ್ಷಣದ ನೆಪದಲ್ಲಿ ಅಮೆರಿಕಕ್ಕೆ ಕಳಿಸಿದರು. ದತ್ತ ಅವರು ಬ್ರೌನ್ ವಿವಿಯಲ್ಲಿ ಎಂ.ಎ. ಪದವಿ ಗಳಿಸಿದರು. ಅಮೆರಿಕದಲ್ಲಿದ್ದಾಗ ಗದ್ಧಾರ್ ಪಾರ್ಟಿಯ ಕಾರ್ಯಕರ್ತರಾಗಿದ್ದ ದತ್ತ ಮೊದಲನೇ ವಿಶ್ವಯುದ್ಧ ಆರಂಭವಾದಾಗ ಜರ್ಮನಿಗೆ ತೆರಳಿ ಕ್ರಾಂತಿಕಾರಿ ಚಟುವಟಿಕೆಗಳ ತಂಡದ ಸದಸ್ಯರಾದರು. 1916ರಲ್ಲಿ ಬರ್ಲಿನ್‌ನಲ್ಲಿ ಅಸ್ತಿತ್ವಕ್ಕೆ ಬಂದ ‘ಇಂಡಿಯನ್ ಇಂಡಿಪೆಂಡೆನ್ಸ್ ಕಮಿಟಿ’ ಎಂಬ ವೇದಿಕೆಯ ಕಾರ್ಯದರ್ಶಿಯಾದರು. ಇದೇ ವೇಳೆಗೆ ಅವರು ಜರ್ಮನಿಯ ಆಂತ್ರೊಪೊಲೊಜಿಕಲ್ ಸೊಸೈಟಿಯ ಸದಸ್ಯರಾದರು.
1921ರಲ್ಲಿ ಕಮ್ಯುನಿಸ್ಟ್ ಇಂಟರ್‌ನಾಷನಲ್ ನಲ್ಲಿ ಭಾಗವಹಿಸಲು ದತ್ತ ಮಾಸ್ಕೊಗೆ ತೆರಳಿದರು. ಎಂ.ಎನ್.ರಾಯ್ ಮತ್ತು ಬೀರೇಂದ್ರನಾಥ್ ಕೂಡಾ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. 1923ರಲ್ಲಿ ದತ್ತ ಅವರು ಹ್ಯಾಂಬರ್ಗ್ ವಿವಿಯಿಂದ ಆಂತ್ರೊಪಾಲಜಿಯಲ್ಲಿ ಪಿಎಚ್. ಡಿ. ಪದವಿಯನ್ನೂ ಪಡೆದರು
1925ರಲ್ಲಿ ಭಾರತಕ್ಕೆ ಮರಳಿದ ಅವರು ಭಾರತದ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವಲ್ಲಿ ತೊಡಗಿಸಿಕೊಂಡರು. Workers & Peasants Partyಯಲ್ಲೂ ಸಕ್ರಿಯರಾಗಿದ್ದರು. ಮುಖ್ಯವಾಗಿ ಪಕ್ಷದ ಯುವ ಸದಸ್ಯರಿಗೆ ಅಧ್ಯಯನ ಶಿಬಿರಗಳನ್ನು ದತ್ತ ಸಂಘಟಿಸುತ್ತಿದ್ದರು. 1929ರಲ್ಲಿ ಎಐಸಿಸಿ ಸದಸ್ಯರಾದರು. 1930ರ ಕರಾಚಿ ಕಾಂಗ್ರೆಸ್ ಅಧಿವೇಶನದಲ್ಲಿ ಅವರು ರೈತರ ಮೂಲಭೂತಹಕ್ಕುಗಳ ಸನ್ನದನ್ನು ಪ್ರಸ್ತಾಪಿಸಿದರು. ಎಐಟಿಯುಸಿಯ ಎರಡು ಅಧಿವೇಶನಗಳ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
ಭೂಪೇಂದ್ರನಾಥ ದತ್ತ ಸತತವಾಗಿ ಎಡಪಂಥೀಯ ಸಂಘಟನೆಗಳನ್ನು ಕಟ್ಟುವಲ್ಲಿ, ತರಬೇತಿ ಶಿಬಿರಗಳನ್ನು ಸಂಘಟಿಸುವಲ್ಲಿ ಕ್ರಿಯಾಶೀಲರಾಗಿದ್ದರು. ಸಮಾಜವಾದಿ ಯುವ ಕಾಂಗ್ರೆಸನ್ನು 1927ರಲ್ಲಿ ಸ್ಥಾಪಿಸುವಲ್ಲಿ ಅವರ ಪಾತ್ರ ಹಿರಿದು. ಜವಾಹರಲಾಲ್ ನೆಹರೂ ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಬಂಗಾಳ ಯುವ ಸಂಘಟನೆ 1928ರಲ್ಲಿ ಆರಂಭವಾದಾಗ ಭೂಪೇಂದ್ರನಾಥ ಅದರ ಅಧ್ಯಕ್ಷರಾಗಿದ್ದರು. 1930ರಲ್ಲಿ ಜರುಗಿದ ಯಂಗ್ ಕಾಮ್ರೇಡ್ಸ್ ಸಮಾವೇಶದಲ್ಲೂ ಅವರು ಮುಖ್ಯ ಭಾಷಣಕಾರರಾಗಿದ್ದರು.
30ರ ದಶಕದ ಬಹುತೇಕ ಕಾರ್ಮಿಕ ಸಂಘಟನೆಗಳನ್ನು ಸಂಘಟಿಸುವಲ್ಲಿ ಭೂಪೇಂದ್ರನಾಥ ಮುಖ್ಯ ಪಾತ್ರ ವಹಿಸಿದ್ದರು. ಖರಗಪುರ ರೈಲ್ವೆ ಕಾರ್ಮಿಕರ ಸಂಘ, ಕೈಗಾಡಿ ಎಳೆಯುವ ಕಾರ್ಮಿಕರ ಸಂಘ, ಜಮ್ಶೆಡ್‌ಪುರದ ಟಿಸ್ಕೊ ಕಾರ್ಮಿಕ ಸಂಘ ಇತ್ಯಾದಿಗಳು ಅವುಗಳಲ್ಲಿ ಕೆಲವು. ಂIಖಿUಅಯ ಉಪಾಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು. 1941ರಲ್ಲಿ ಸ್ಥಾಪನೆಯಾದ ಫ್ರೆಂಡ್ಸ್ ಆಫ್ ಸೋವಿಯೆತ್ ಯೂನಿಯನ್ ವೇದಿಕೆಯ ಮೊದಲ ಅಧ್ಯಕ್ಷರೂ ಆಗಿದ್ದರು.
ಇಷ್ಟಾಗಿಯೂ ಭೂಪೇಂದ್ರನಾಥ ದತ್ತ ಎಡಪಂಥೀಯ ಪಕ್ಷಗಳ ಔಪಚಾರಿಕ ಸದಸ್ಯರಾಗಿರಲಿಲ್ಲ. ಕಾಂಗ್ರೆಸ್ ಜೊತೆ ಕೈಗೂಡಿಸಿ ಕೆಲಸ ಮಾಡಬೇಕು ಎಂಬುದು ಅವರ ನಿಲುವಾಗಿತ್ತು.
ಸ್ವಾತಂತ್ರ್ಯಾನಂತರ ಭೂಪೇಂದ್ರನಾಥ ಬರವಣಿಗೆಯಲ್ಲಿ ತೊಡಗಿದರು. ಅವರು ಬಂಗಾಳಿಯಲ್ಲಿ ಬರೆದ ಸ್ವಾತಂತ್ರ್ಯ ಹೋರಾಟದ ಕುರಿತ ಸಂಶೋಧನಾತ್ಮಕ ಕೃತಿಗಳು ಮುಂದಿನ ತಲೆಮಾರಿಗೆ ಆಕರ ಕೃತಿಗಳಾಗಿದ್ದವು.
‘Dialectics of Land Economics of India’ ಅವರ ಇನ್ನೊಂದು ಮಹತ್ವದ ಕೃತಿ.
ಆದರೆ ಅವರ ಮ್ಯಾಗ್ನಂ ಓಪಸ್ ಎಂದು ಕರೆಯಬಹುದಾದ ವಿವೇಕಾನಂದರ ಜೀವನ ಚರಿತ್ರೆ 1953ರಲ್ಲಿ ಪ್ರಕಟವಾಯಿತು. Swami Vivekananda, Patriot-prophet: A Study (ವಿವೇಕಾನಂದ- ರಾಷ್ಟ್ರಭಕ್ತ ಪ್ರವಾದಿ) ಇಂದಿಗೂ ವಿವೇಕಾನಂದರ ಮೇಲೆ ಬಂದ ಅಥೆಂಟಿಕ್ ಜೀವನ ಚರಿತೆಯೆಂದು ಪರಿಗಣಿತವಾಗಿದೆ.
ನೊಂದ ದಮನಿತ ಕೂಲಿ ಕಾರ್ಮಿಕರನ್ನು ನಾಗರಿಕತೆಯ ಕೇಂದ್ರವಾಗಿ ಕಲ್ಪಿಸಿಕೊಂಡ ಮೊದಲಿಗ ವಿವೇಕಾನಂದ ಎಂದು ಭೂಪೇಂದ್ರನಾಥಹೇಳುತ್ತಾರೆ.
ಯಾವ ಸ್ಥಾನ ಮಾನ ಸವಲತ್ತನ್ನು ನಿರೀಕ್ಷಿಸದೆ, ನಿರಾಕರಿಸಿ ಬದುಕಿದವರು ಭೂಪೇಂದ್ರನಾಥ. ಈ ಮೂವರು ಸಹೋದರರೂ ಒಂದೇ ಮೂಸೆಯಲ್ಲಿ ಅರಳಿದವರು. ವಿವೇಕಾನಂದರ ಬಗ್ಗೆ ನಮಗೆ ಗೊತ್ತು. ವಿವೇಕಾನಂದರ ಅಣ್ಣ ಮಹೇಂದ್ರನಾಥ ರಾಮಕೃಷ್ಣ ಆಶ್ರಮದ ನಿರ್ವಹಣೆ ನೋಡಿಕೊಳ್ಳುತ್ತಾ ವಿರಾಗಿಯಾಗಿ 1956ರಲ್ಲಿ ಕೊನೆ ಉಸಿರು ಎಳೆದರು. ಅವರಂತೆಯೇ ಬದುಕಿದ ಭೂಪೇಂದ್ರನಾಥ ದತ್ತ 1961ರಲ್ಲಿ ನಿಧನ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನೂ ಅವರು ನಿರಾಕರಿಸಿದ್ದರು.







