Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜನರ ಆಹಾರ ಸ್ವಾತಂತ್ರ್ಯವನ್ನೇ ಕಸಿಯುವ...

ಜನರ ಆಹಾರ ಸ್ವಾತಂತ್ರ್ಯವನ್ನೇ ಕಸಿಯುವ ವಿಪರ್ಯಾಸವನ್ನು ಏನೆನ್ನಬೇಕು?

ಎಸ್. ಸುದರ್ಶನ್ಎಸ್. ಸುದರ್ಶನ್15 Aug 2025 9:40 AM IST
share
ಜನರ ಆಹಾರ ಸ್ವಾತಂತ್ರ್ಯವನ್ನೇ ಕಸಿಯುವ ವಿಪರ್ಯಾಸವನ್ನು ಏನೆನ್ನಬೇಕು?
ಆಹಾರದ ಸ್ವಾತಂತ್ರ್ಯ

ಪುರಸಭೆಗಳಂತಹ ಸ್ಥಳೀಯ ಸಂಸ್ಥೆಗಳು ಮಾಂಸ ಮಾರಾಟದ ನಿಷೇಧದ ಆದೇಶಗಳನ್ನು ಹೊರಡಿಸುವುದು ಸಂವಿಧಾನಬಾಹಿರ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ಅಣಕವೂ ಹೌದು.

ಯಾರದೋ ರಾಜಕೀಯ ಇಶಾರೆಯ ಮೇರೆಗೆ ಜನರ ತಟ್ಟೆಯ ಮೇಲೆ ನಿಯಂತ್ರಣ ಸಾಧಿಸಲು ಹೊರಟಿರುವುದು, ಆಡಳಿತಾತ್ಮಕ ಅಧಿಕಾರದ ಸಂಪೂರ್ಣ ದುರ್ಬಳಕೆಯಾಗಿದೆ.

ಈ ನಿಷೇಧದ ಹಿಂದಿನ ಉದ್ದೇಶ ಕೇವಲ ಒಂದು ದಿನ ಮಾಂಸ ಮಾರಾಟವನ್ನು ತಡೆಯುವುದಷ್ಟೇ ಅಲ್ಲ. ಇದರ ಹಿಂದೆ ಬಹುದೊಡ್ಡ ಹುನ್ನಾರವಿದೆ.

ಸ್ವಾತಂತ್ರ್ಯ ದಿನದ ಸಡಗರವನ್ನೂ ಬೇರೆಯವರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಮೂಲಕ ಕಲುಷಿತಗೊಳಿಸಬೇಕು ಎಂದು ಕೆಲವರು ಹೊಸ ದುಷ್ಟ ಆಟಕ್ಕೆ ಮುಂದಾದಂತಿದೆ. ಮತ್ತಿದನ್ನು ದೇಶಭಕ್ತಿಯ ನೆಪದೊಂದಿಗೆ ಆಡಲಾಗುತ್ತಿದೆ.

ಆಗಸ್ಟ್ 15ರಂದು ದೇಶವೇ ಸ್ವಾತಂತ್ರ್ಯ ದಿನ ಆಚರಿಸುವಾಗ ಈ ದೇಶದ ಬಹುಪಾಲು ಜನರ ಆಹಾರವನ್ನು ಕಸಿಯುವಂಥದ್ದೊಂದು ಪ್ರಯತ್ನ ನಡೆಯುತ್ತಿದೆ. ಅವತ್ತು ಅವರೇನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ಇನ್ಯಾರೋ ನಿರ್ದೇಶಿಸಲು ಮುಂದಾಗುತ್ತಿದ್ದಾರೆ.

ಒಂದೆಡೆ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವಿಚಿತ್ರ ಹೇರುವಿಕೆ ಮತ್ತು ದಬ್ಬಾಳಿಕೆ ನಡೆಯುತ್ತಿದೆ.ಇನ್ನೊಂದೆಡೆ ಆಹಾರದ ವಿಷಯ ಬಂದಾಗ ಬಹುಸಂಖ್ಯೆಯ ಜನರ ಆಹಾರ ಪದ್ಧತಿಯ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಮತ್ತು ಆ ಮೂಲಕ, ಆಹಾರ ಸ್ವಾತಂತ್ರ್ಯವನ್ನು ಮಾತ್ರವಲ್ಲ, ಬಹುಪಾಲು ಜನರ ಜೀವನೋಪಾಯದ ಮೇಲೆಯೂ ದಾಳಿ ನಡೆಯುತ್ತಿದೆ.

ಈ ಸಲ ಸ್ವಾತಂತ್ರ್ಯ ದಿನದಂದು ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ದೇಶದ ಹಲವಾರು ಪುರಸಭೆಗಳು ಆದೇಶಿಸಿವೆ. ಇದು ದೊಡ್ಡ ರಾಜಕೀಯ ವಿವಾದ ಭುಗಿಲೇಳುವುದಕ್ಕೆ ಕಾರಣವಾಗಿದೆ.

ಹಲವಾರು ಹಿರಿಯ ರಾಜಕಾರಣಿಗಳು ಪಕ್ಷಾತೀತವಾಗಿ ಈ ನಿಷೇಧವನ್ನು ಜನರ ಆಹಾರ ಪದ್ಧತಿಯ ಮೇಲಿನ ದಬ್ಬಾಳಿಕೆ ಎಂದು ಟೀಕಿಸಿದ್ದಾರೆ. ದೇಶವು ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅವರೆಲ್ಲ ಹೇಳಿದ್ದಾರೆ.

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಮತ್ತು 16 ರಂದು ಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಆ ಎರಡೂ ದಿನ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆದೇಶ ಹೊರಡಿಸಿದೆ.

ಈ ಆದೇಶವನ್ನು ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಟೀಕಿಸಿ ‘‘ಇದು ಕ್ರೂರ ಮತ್ತು ಸಂವಿಧಾನಬಾಹಿರವಾಗಿದೆ’’ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಂಸ ತಿನ್ನುವುದಕ್ಕೂ ಸ್ವಾತಂತ್ರ್ಯ ದಿನ ಆಚರಿಸುವುದಕ್ಕೂ ಏನು ಸಂಬಂಧ ಎಂದು ಅವರು ಕೇಳಿರುವುದು ಸರಿಯಾಗಿಯೇ ಇದೆ.

ತೆಲಂಗಾಣದ ಶೇ. 99 ಜನರು ಮಾಂಸ ತಿನ್ನುತ್ತಾರೆ. ಹೀಗಿರುವಾಗ ಈ ಮಾಂಸ ನಿಷೇಧ ಜನರ ಸ್ವಾತಂತ್ರ್ಯ, ಜೀವನೋಪಾಯ ಮತ್ತು ಧರ್ಮದ ಹಕ್ಕಿನ ಉಲ್ಲಂಘನೆ ಎಂದು ಉವೈಸಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಲ್ಯಾಣ್-ಡೊಂಬಿವಿಲಿ, ಛತ್ರಪತಿ ಸಂಭಾಜಿನಗರ, ಮಾಲೆಗಾಂವ್ ಮತ್ತು ನಾಗ್ಪುರ ಸೇರಿದಂತೆ ವಿವಿಧ ಪುರಸಭೆಗಳು ಇಂಥದೇ ಆದೇಶ ಹೊರಡಿಸಿವೆ ಮತ್ತು ಈ ಆದೇಶ ಅಲ್ಲಿ ಆಡಳಿತಾರೂಢ ಮಹಾಯುತಿಯಲ್ಲೇ ವಿಭಜನೆ ತಂದಿದೆ.

ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ಬಿಜೆಪಿಯನ್ನು ಟೀಕಿಸಿದ್ದು, ಈ ವಿಷಯವಾಗಿ ಎಂವಿಎ ಜೊತೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಸೇರಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮಾಂಸ ನಿಷೇಧ ಆದೇಶ ಹೊರಡಿಸಲಾಗಿದ್ದು, ಈ ನಿಷೇಧ ಆದೇಶಕ್ಕೆ ಸ್ವತಃ ಡಿಸಿಎಂ ಅಜಿತ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘‘ಇಂಥ ನಿಷೇಧ ಹೇರುವುದು ತಪ್ಪು. ಪ್ರಮುಖ ನಗರಗಳಲ್ಲಿ ವಿವಿಧ ಜಾತಿ, ಧರ್ಮಗಳ ಜನರಿದ್ದಾರೆ. ಅದು ಭಾವನಾತ್ಮಕ ಧಾರ್ಮಿಕ ವಿಷಯವಾಗಿದ್ದರೆ ಜನರು ನಿಷೇಧವನ್ನು ಒಂದು ದಿನದ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ. ಆದರೆ ನೀವು ಮಹಾರಾಷ್ಟ್ರ ದಿನ, ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನ ಎಂದೆಲ್ಲ ನೆಪ ಮುಂದಿಟ್ಟು ನಿಷೇಧ ಹೇರಿದರೆ ಅದು ಕಷ್ಟ’’ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಮುಂಬೈ ಬಳಿಯ ಥಾಣೆಯಲ್ಲಿರುವ ಕಲ್ಯಾಣ್ ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಷನ್ ಕೂಡ ನಿಷೇಧ ಹೇರಿ ಆದೇಶ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಪುರಸಭೆ ಆಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

‘‘ಯಾರು ಏನು ತಿನ್ನುತ್ತಾರೆ ಎಂಬುದನ್ನು ನಿರ್ಧರಿಸುವುದು ಅವರ ಕೆಲಸವಲ್ಲ. ನಾವು ಏನು ತಿನ್ನುತ್ತೇವೆ ಎಂಬುದು ನಮ್ಮ ಹಕ್ಕು, ನಮ್ಮ ಸ್ವಾತಂತ್ರ್ಯ. ತಿನ್ನಬೇಕೆೇ ಬೇಡವೇ ಎಂದು ಇನ್ನಾರೋ ಹೇಳಲು ಸಾಧ್ಯವಿಲ್ಲ’’ ಎಂದಿದ್ದಾರೆ ಆದಿತ್ಯ ಠಾಕ್ರೆ.

‘‘ನಮ್ಮ ಮನೆಯಲ್ಲಿ ನವರಾತ್ರಿಯ ಸಮಯದಲ್ಲಿಯೂ ಸಿಗಡಿ ಮತ್ತು ಮೀನು ಇರುತ್ತದೆ ಮತ್ತು ಅದು ನಮ್ಮ ಸಂಪ್ರದಾಯವಾಗಿದೆ’’ ಎಂಬುದನ್ನೂ ಆದಿತ್ಯ ಠಾಕ್ರೆ ಹೇಳಿದ್ಧಾರೆ.

‘‘ನೀವು ನಮ್ಮ ಮನೆಗಳೊಳಗೂ ಏಕೆ ಹೊಕ್ಕುತ್ತಿದ್ದೀರಿ? ಮೊದಲು ರಸ್ತೆಗಳಲ್ಲಿನ ಗುಂಡಿಗಳನ್ನು ಸರಿ ಮಾಡಿ’’ ಎಂದು ಅವರು ಹೇಳಿದ್ದಾರೆ.

‘‘ಸರಕಾರ ಎಲ್ಲ ಬಿಟ್ಟು ಜನರ ಮನೆಯ ಮೆನು ನಿಭಾಯಿಸಲು ತೊಡಗುವುದು ಜನರ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ’’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಟೀಕಿಸಿದ್ದಾರೆ.

ರಸ್ತೆಗಳು ಹದಗೆಟ್ಟಿವೆ. ಸಂಚಾರ ದಟ್ಟಣೆಯಿದೆ. ಮಾಲಿನ್ಯ ಹೆಚ್ಚುತ್ತಿದೆ. ಆದರೆ ಪುರಸಭೆ ಜನರು ಏನು ತಿನ್ನಬೇಕು ಎಂದು ಆದೇಶ ಕೊಡಲು ನಿಂತಿದೆ. ಇದು ಅತಿಯಾಯಿತು ಎಂದು ಅವರು ಹೇಳಿದ್ದಾರೆ.

ಎಲ್ಲ ವಿವಾದಗಳ ನಂತರ, ಈಗ ಸರಕಾರ ಸಸ್ಯಾಹಾರ-ಮಾಂಸಾಹಾರ ಎಂದು ಜನರನ್ನು ಒಡೆಯುವುದಕ್ಕೆ ನಿಂತಿದೆ ಎಂದು ಎನ್‌ಸಿಪಿ ಶರದ್ ಪವಾರ್ ಬಣದ ನಾಯಕ ಡಾ. ಜಿತೇಂದ್ರ ಅವ್ಹಾದ್ ಆರೋಪಿಸಿದ್ದಾರೆ. ಈ ಆದೇಶ ಧಿಕ್ಕರಿಸಲು ಸ್ವಾತಂತ್ರ್ಯ ದಿನದಂದು ಮಟನ್ ಪಾರ್ಟಿ ಆಯೋಜಿಸುವುದಾಗಿ ಅವರು ಘೋಷಿಸಿದ್ಧಾರೆ.

‘‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವೇ, ನಮ್ಮ ಆಹಾರದ ಸ್ವಾತಂತ್ರ್ಯವನ್ನು ನೀವು ಕಸಿದುಕೊಳ್ಳುತ್ತಿದ್ದೀರಿ?’’ ಎಂದು ಜಿತೇಂದ್ರ ಅವ್ಹಾದ್ ಗುಡುಗಿದ್ದಾರೆ.

ಇದು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ಅವರು ಟೀಕಿಸಿದ್ದಾರೆ.

ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಶಾಸಕ ಅಬು ಅಸೀಮ್ ಅಜ್ಮಿ ಕೂಡ ಈ ನಿಷೇಧವನ್ನು ಖಂಡಿಸಿದ್ದಾರೆ.

ಈ ನಡುವೆ, ಏಕನಾಥ ಶಿಂದೆ ನೇತೃತ್ವದ ಶಿವಸೇನೆಯ ವಕ್ತಾರ ಅರುಣ್ ಸಾವಂತ್, ಮಾಂಸ ನಿಷೇಧವನ್ನು ಮಹಾರಾಷ್ಟ್ರ ಸರಕಾರ ಅನುಮೋದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಬಿಜೆಪಿಯದ್ದು ಮಾತ್ರ ಬೇರೆಯದೇ ರಾಗ.

ಸ್ವಾತಂತ್ರ್ಯ ದಿನದಂದು ಮಾಂಸ ನಿಷೇಧಿಸುವ ನಿರ್ಧಾರ ಈಗಿನದ್ದಲ್ಲ, 80ರ ದಶಕದ್ದು ಎಂದು ಕಥೆ ಹೇಳುವ ಮೂಲಕ ಬಿಜೆಪಿ ವಿಪಕ್ಷ ಎಂವಿಎಯನ್ನು ಟೀಕಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ, ಸರಕಾರವನ್ನು ಪ್ರಶ್ನಿಸಲು ಆದಿತ್ಯ ಠಾಕ್ರೆ, ಜಿತೇಂದ್ರ ಅವ್ಹಾದ್ ಯಾರು ಎಂದು ಕೇಳಿದ್ದಾರೆ.

ಇನ್ನು ಮಧ್ಯಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಮಾಂಸ ಮಾರಾಟ ನಿಷೇಧ ಕುರಿತು ಸರಕಾರ ಯಾವುದೇ ಅಧಿಸೂಚನೆ ಹೊರಡಿಸದಿದ್ದರೂ, ಆಡಳಿತಾರೂಢ ಬಿಜೆಪಿ ನಾಯಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ.

ಭೋಪಾಲ್‌ನ ಹುಜೂರ್ ಕ್ಷೇತ್ರದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ, ಮಹಾರಾಷ್ಟ್ರದ ಹೈದರಾಬಾದ್ ಮತ್ತು ಕಲ್ಯಾಣ್‌ನಂತಹ ಸ್ಥಳಗಳಲ್ಲಿ ಮಾಂಸ ನಿಷೇಧಿಸಿರುವುದನ್ನು ರಾಜಕೀಯ ವಿವಾದವಾಗಿಸದೆ, ಮೆಚ್ಚಿಕೊಳ್ಳಬೇಕು ಎಂದಿದ್ದಾರೆ.

ಅಸದುದ್ದೀನ್ ಉವೈಸಿ ಅಶಾಂತಿಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಉವೈಸಿ ವಿರುದ್ಧ ಶರ್ಮಾ ಆರೋಪಿಸಿದ್ದಾರೆ.

ಈ ಆದೇಶದ ಹಿಂದೆ ಒಂದು ವ್ಯವಸ್ಥಿತ ಹುನ್ನಾರ ಕಾಣಿಸುತ್ತಿದೆ.

ಮೇಲ್ನೋಟಕ್ಕೆ ಇದು ಪುರಸಭೆಗಳು ನೀಡಿರುವ ಆದೇಶ.

ಆದರೆ ನಿಜವಾಗಿಯೂ ಇದರ ಹಿಂದೆ ಕೆಲಸ ಮಾಡಿರುವುದು ಯಾರ ಇಶಾರೆ?

ಸ್ವಾತಂತ್ರ್ಯ ದಿನದಂದೇ ಜನರ ಆಹಾರದ ಸ್ವಾತಂತ್ರ್ಯವನ್ನು ಕಸಿಯುವುದು ಕೇವಲ ವಿಪರ್ಯಾಸವಲ್ಲ, ಅದು ನಮ್ಮ ಸಂವಿಧಾನದ ಆಶಯಗಳನ್ನೇ ಅಣಕಿಸುವ ಒಂದು ವ್ಯವಸ್ಥಿತ ಪ್ರಹಸನ.

ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯವೂ ಒಂದು.

ಸಂವಿಧಾನದ 21ನೇ ವಿಧಿಯು ಖಾತರಿಪಡಿಸುವ ‘ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ’ದ ವ್ಯಾಪ್ತಿಯಲ್ಲಿ ತಮಗಿಷ್ಟದ ಆಹಾರವನ್ನು ಸೇವಿಸುವ ಹಕ್ಕೂ ಸೇರಿದೆ ಎಂದು ಸರ್ವೋಚ್ಚ ನ್ಯಾಯಾಲಯ ಕೂಡ ಹಲವು ಬಾರಿ ಸ್ಪಷ್ಟಪಡಿಸಿದೆ.

ಹೀಗಿರುವಾಗ, ಪುರಸಭೆಗಳಂತಹ ಸ್ಥಳೀಯ ಸಂಸ್ಥೆಗಳು ಇಂತಹ ಆದೇಶಗಳನ್ನು ಹೊರಡಿಸುವುದು ಸಂವಿಧಾನಬಾಹಿರ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ಅಣಕವೂ ಹೌದು.

ಯಾರದೋ ರಾಜಕೀಯ ಇಶಾರೆಯ ಮೇರೆಗೆ ಜನರ ತಟ್ಟೆಯ ಮೇಲೆ ನಿಯಂತ್ರಣ ಸಾಧಿಸಲು ಹೊರಟಿರುವುದು, ಆಡಳಿತಾತ್ಮಕ ಅಧಿಕಾರದ ಸಂಪೂರ್ಣ ದುರ್ಬಳಕೆಯಾಗಿದೆ.

ಈ ನಿಷೇಧದ ಹಿಂದಿನ ಉದ್ದೇಶ ಕೇವಲ ಒಂದು ದಿನ ಮಾಂಸ ಮಾರಾಟವನ್ನು ತಡೆಯುವುದಷ್ಟೇ ಅಲ್ಲ. ಇದರ ಹಿಂದೆ ಬಹುದೊಡ್ಡ ಹುನ್ನಾರವಿದೆ.

ಬಹುಸಂಖ್ಯಾತರಾಗಿರುವ ಮಾಂಸಾಹಾರಿಗಳಲ್ಲಿ ಒಂದು ರೀತಿಯ ಅಪರಾಧಿ ಪ್ರಜ್ಞೆ ಮೂಡಿಸುವುದು, ಅವರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವಂತೆ ಮಾಡುವುದು ಮತ್ತು ನಿರ್ದಿಷ್ಟ ಆಹಾರ ಪದ್ಧತಿಯನ್ನೇ ‘ಶುದ್ಧ’, ‘ಸಂಸ್ಕಾರಯುತ’ ಮತ್ತು ‘ದೇಶಭಕ್ತ’ ಆಹಾರ ಪದ್ಧತಿ ಎಂದು ಬಿಂಬಿಸುವುದು ಇದರ ಹಿಂದಿನ ತಂತ್ರ.

ಸ್ವಾತಂತ್ರ್ಯ ದಿನದಂದು ಪ್ರಾಣಿಹಿಂಸೆ ಮಾಡಬಾರದು ಎಂಬ ಭಾವನಾತ್ಮಕ ವಾದವನ್ನು ಮುಂದಿಟ್ಟು, ಮಾಂಸ ಸೇವಿಸುವವರನ್ನು ದೇಶಭಕ್ತಿಯ ವಿರೋಧಿಗಳಂತೆ ಚಿತ್ರಿಸುವ ದುಷ್ಟ ಪ್ರಯತ್ನ ಇದು.

ಈ ಮೂಲಕ, ಆಹಾರದ ಆಧಾರದ ಮೇಲೆ ಸಮಾಜವನ್ನು ವಿಭಜಿಸಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುಟಿಲ ತಂತ್ರಗಾರಿಕೆ ಸ್ಪಷ್ಟವಾಗಿ ಕಾಣುತ್ತಿದೆ.

ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಮೇಲ್ನೋಟಕ್ಕೆ ಇದು ಸ್ಥಳೀಯ ಆಡಳಿತದ ನಿರ್ಧಾರದಂತೆ ಕಾಣುತ್ತದೆ.

ಆದರೆ ದೇಶದ ವಿವಿಧೆಡೆ, ಅದರಲ್ಲೂ ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪ್ರಭಾವವಿರುವ ಕಡೆಗಳಲ್ಲಿ ಏಕಕಾಲಕ್ಕೆ ಒಂದೇ ರೀತಿಯ ಆದೇಶಗಳು ಹೊರಬರುತ್ತಿರುವುದನ್ನು ಗಮನಿಸಿದರೆ, ಇದರ ಹಿಂದೆ ಒಂದು ಅಗೋಚರ ರಾಜಕೀಯ ಶಕ್ತಿಯ ಇಶಾರೆ ಇರುವುದು ಸ್ಪಷ್ಟವಾಗುತ್ತದೆ.

ಸ್ಥಳೀಯ ಸಂಸ್ಥೆಗಳನ್ನು ಕೇವಲ ಒಂದು ಮುಖವಾಡವಾಗಿ ಬಳಸಿಕೊಂಡು, ತಮ್ಮ ಸೈದ್ಧಾಂತಿಕ ಅಜೆಂಡಾವನ್ನು ಜನರ ಮೇಲೆ ಹೇರುವ ವ್ಯವಸ್ಥಿತ ಪಿತೂರಿ ಇದು.

ಇದು ಕೇವಲ ಆಹಾರದ ಮೇಲಿನ ಹಲ್ಲೆಯಲ್ಲ, ಇದು ದೇಶದ ಬಹುಸಂಸ್ಕೃತಿಯ ಬೇರುಗಳ ಮೇಲಿನ ದಾಳಿ.

ದೇಶಭಕ್ತಿಯನ್ನು ಜನರ ತಟ್ಟೆಯಲ್ಲಿರುವ ಆಹಾರದಿಂದ ಅಳೆಯುವ ಪರಿಪಾಠ ಶುರುವಾದರೆ, ಅದು ದೇಶದ ಬೌದ್ಧಿಕ ಮತ್ತು ನೈತಿಕ ಪತನದ ಸಂಕೇತ.

ನಿಜವಾದ ದೇಶಭಕ್ತಿ ಇರುವುದು ಸಂವಿಧಾನವನ್ನು ಗೌರವಿಸುವುದರಲ್ಲಿ, ದೇಶದ ವೈವಿಧ್ಯವನ್ನು ಸಂಭ್ರಮಿಸುವುದರಲ್ಲಿ ಮತ್ತು ಪ್ರತಿಯೊಬ್ಬ ಪ್ರಜೆಯ ಹಕ್ಕುಗಳನ್ನು ಜಾತಿ, ಧರ್ಮ, ಆಹಾರ ಪದ್ಧತಿಯ ಭೇದವಿಲ್ಲದೆ ಕಾಪಾಡುವುದರಲ್ಲಿ.


share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X