ಬಾಂಗ್ಲಾದ ದೀಪುವಿನಿಂದ ಹುಬ್ಬಳ್ಳಿಯ ಮಾನ್ಯವರೆಗೆ...

ಹುಬ್ಬಳ್ಳಿಯ ಮಾನ್ಯ ಮತ್ತು ಬಾಂಗ್ಲಾದೇಶದ ದೀಪು
ಬಾಂಗ್ಲಾದೇಶದ ಪೊಲಿಟಿಕಲ್ ಆಕ್ಟಿವಿಸ್ಟ್ ಷರೀಫ್ ಉಸ್ಮಾನ್ ಹಾದಿ ಎನ್ನುವ ಯುವಕ ಡಿಸೆಂಬರ್ 12, 2025ರಂದು ನಮಾಝ್ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದ ಸಮಯದಲ್ಲಿ ಆತನ ಸೈದ್ಧಾಂತಿಕ ವಿರೋಧಿಗಳು ಅಂದರೆ ಭಯೋತ್ಪಾದಕರು ಆತನ ಮೇಲೆ ಗುಂಡು ಹಾರಿಸುತ್ತಾರೆ. ತಕ್ಷಣ ಆತನನ್ನು ಏರ್ಲಿಫ್ಟ್ ಮೂಲಕ ಸಿಂಗಾಪುರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಡಿಸೆಂಬರ್ 18ರಂದು ಸಾವನ್ನಪ್ಪುತ್ತಾನೆ.
ಈತನ ಹತ್ಯೆಯಿಂದ ಕ್ರೋಧಗೊಂಡ ಆತನ ಅನುಯಾಯಿಗಳು ಬೀದಿಗಿಳಿದು ಪ್ರತಿಭಟಿಸುತ್ತಾರೆ. ಯಾರದ್ದೇ ನಾಯಕತ್ವವಿಲ್ಲದ ಆ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡು ಮೀಡಿಯಾ ಹೌಸ್ಗಳ ಮೇಲೆ ದಾಳಿ ಮಾಡಲಾರಂಭಿಸುತ್ತದೆ, ಬಸ್ಸುಗಳಿಗೆ ಬೆಂಕಿ ಹಚ್ಚಲಾಗುತ್ತದೆ, ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಪ್ರತಿಭಟನೆಯಲ್ಲಿ ನುಸುಳಿದ ಮೂಲಭೂತವಾದಿಗಳು ಹಿಂಸಾತ್ಮಕ ಕೃತ್ಯಗಳನ್ನು ಪ್ರಚೋದಿಸಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಲಾ ಆಂಡ್ ಆರ್ಡರ್ನ ವಿಫಲತೆ, ವ್ಯವಸ್ಥೆಯ ವಿಫಲತೆ ಮತ್ತು ಜನರಲ್ಲಿರುವ ಅಜ್ಞಾನ ಮತ್ತು ಮೂಲಭೂತವಾದ.
ಯಾವುದೇ ದೇಶವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಇಂತಹ ಉಗ್ರ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಾಗ ಅಲ್ಲಿ ಬಲಿಪಶುಗಳಾಗುವುದು ಅಲ್ಲಿನ ಅಲ್ಪಸಂಖ್ಯಾತರು ಮತ್ತು ದುರ್ಬಲರು. ಬಾಂಗ್ಲಾದೇಶದಲ್ಲಿಯೂ ಇದೇ ಆಗಿದ್ದು. ಫ್ಯಾಕ್ಟರಿ ಒಂದರಲ್ಲಿ ದಿನಗೂಲಿ ಕಾರ್ಮಿಕನಾಗಿದ್ದ 27 ವರ್ಷದ ದೀಪು ಚಂದ್ರದಾಸ್ ಎಂಬ ಯುವಕನಿಗೂ ಮತ್ತು ಉಸ್ಮಾನ್ ಷರೀಫ್ ಹಾದಿಯ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ದೀಪು ಚಂದ್ರ ದಾಸ್ ತನ್ನ ಹೊಟ್ಟೆಪಾಡಿಗಾಗಿ ದಿನಗೂಲಿ ನೌಕರಿ ಮಾಡುತ್ತಿದ್ದ ಒಬ್ಬ ಅಮಾಯಕ ಯುವಕನಷ್ಟೇ ಆಗಿದ್ದ. ಆದರೆ ಶರೀಫ್ ಉಸ್ಮಾನ್ ಹಾದಿಯ ಹತ್ಯೆಯಿಂದ ರೊಚ್ಚಿಗೆದ್ದಿದ್ದ ಅಲ್ಲಿನ ಮೂಲಭೂತವಾದಿ ಪ್ರತಿಭಟನಾಕಾರರ ಕಣ್ಣಿಗೆ ಬಿದ್ದ ಒಬ್ಬ ದುರ್ಬಲ ಅಲ್ಪಸಂಖ್ಯಾತ ಅಮಾನುಷವಾಗಿ ಬಲಿಯಾಗಿ ಹೋದ. ಅಲ್ಲಿನ ಮತೀಯವಾದಿಗಳು ಅನೇಕ ಅಲ್ಪಸಂಖ್ಯಾತರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗುತ್ತಿವೆೆ. ಪೊಲಿಟಿಕಲ್ ಆಕ್ಟಿವಿಸ್ಟ್ ಆಗಿದ್ದ ಷರೀಫ್ ಹಾದಿಗೆ ಭಾರತದ ಕೆಲವು ಅಂತರ್ರಾಷ್ಟ್ರೀಯ ಪಾಲಿಸಿಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಆತ ಹಿಂದೂ ವಿರೋಧಿ ಆಗಿರಲಿಲ್ಲ ಎಂದು ಅನೇಕ ಪತ್ರಿಕೆಗಳು ವರದಿ ಮಾಡಿವೆ. ಆದರೆ ಷರೀಫ್ ಹಾದಿಯ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮತೀಯವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಅಲ್ಪಸಂಖ್ಯಾತ ಹಿಂದೂಗಳು ಮತ್ತು ಬೌದ್ಧರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಯುವಕ ದೀಪು ಚಂದ್ರ ದಾಸ್ನ ದಾರುಣ ಹತ್ಯೆಯನ್ನು ನಾವೆಲ್ಲರೂ ಖಂಡಿಸಲೇಬೇಕು. ಈಗಾಗಲೇ ದೇಶದಾದ್ಯಂತ ಇದನ್ನು ಖಂಡಿಸಿ ಪ್ರತಿಭಟನೆಗಳು, ಖಂಡನಾ ಸಭೆಗಳು ನಡೆಯುತ್ತಿವೆ. ದಿಲ್ಲಿಯಲ್ಲಿ ಬಾಂಗ್ಲಾದೇಶದ ಈ ಘಟನೆಯನ್ನು ಖಂಡಿಸಿ ದೊಡ್ಡ ಮಟ್ಟದ ಕೂಗು ಎದ್ದಿದೆ. ಭಾರತದ ಡಿಪ್ಲೊಮೇಟ್ ಕೂಡ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮತ್ತು ಬೌದ್ಧರ ರಕ್ಷಣೆಗೆ ಮುಂದಾಗಬೇಕೆಂದು ಸಮಾನತಾವಾದಿಗಳಾದ ನಾವು ಬಯಸುತ್ತೇವೆ.
ಬಾಂಗ್ಲಾದೇಶದಲ್ಲಿ ಈ ದಾರುಣ ಘಟನೆ ನಡೆಯುತ್ತಿರುವ ಸಮಯದಲ್ಲಿಯೇ ಕರ್ನಾಟಕದ ಹುಬ್ಬಳ್ಳಿಯಲ್ಲಿ ದಲಿತ ಯುವಕನೊಬ್ಬ ಮೇಲ್ಜಾತಿ ಲಿಂಗಾಯತ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಗರ್ಭಿಣಿಯಾಗಿದ್ದ ಆಕೆಯನ್ನು ಸ್ವತಃ ಆಕೆಯ ತಂದೆ ಮತ್ತು ಕುಟುಂಬದವರೇ ಕೊಚ್ಚಿ ಕೊಲೆಮಾಡಿರುವ ಘಟನೆ ಬೆಚ್ಚಿಬೀಳಿಸಿದೆ. ಬಾಂಗ್ಲಾದೇಶದಲ್ಲಿ ಹತ್ಯೆಗೀಡಾದ ದೀಪು ಚಂದ್ರ ದಾಸ್ ಎನ್ನುವ ಅಲ್ಲಿನ ಯುವಕನ ಹತ್ಯೆಯು ಅಂತರ್ರಾಷ್ಟ್ರೀಯ ಸುದ್ದಿಯಾಗುತ್ತದೆ, ಪ್ರತಿಭಟನೆಗಳು ನಡೆಯುತ್ತವೆ, ಕ್ಯಾಂಡಲ್ ಲೈಟ್ ಮಾರ್ಚ್ ಗಳು ನಡೆಯುತ್ತವೆ, ನ್ಯಾಯಕ್ಕಾಗಿ ಇಡೀ ದೇಶವೇ ಧ್ವನಿಗೂಡಿಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿಯೇ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಗರ್ಭಿಣಿ ಯುವತಿಯೊಬ್ಬಳು ಬರ್ಬರವಾಗಿ ಮರ್ಯಾದೆಗೇಡು ಹತ್ಯೆಯಾಗಿದ್ದು ಯಾಕೆ ಇಲ್ಲಿನ ಸೋ ಕಾಲ್ಡ್ ಮೇಲ್ಜಾತಿಗಳಿಗೆ ನಿದ್ದೆ ಕೆಡಿಸುವುದಿಲ್ಲ? ಯಾಕೆ ಇಂತಹ ಘಟನೆ ಅಂತರ್ರಾಷ್ಟ್ರೀಯ ನ್ಯೂಸ್ ಆಗುವುದಿರಲಿ ರಾಷ್ಟ್ರೀಯ ನ್ಯೂಸ್ ಕೂಡ ಆಗುವುದಿಲ್ಲ?
ಪಕ್ಕದ ದೇಶದಲ್ಲಿರುವ ಹಿಂದೂಗಳ ಮೇಲೆ ದಾಳಿಯಾದಾಗ ಮಿಡಿಯುವ ನಮ್ಮ ಕರುಳು ನಮ್ಮದೇ ದೇಶದಲ್ಲಿ, ನಮ್ಮದೇ ಕಣ್ಣೆದುರು ಜಾತಿಯ ಕಾರಣಕ್ಕೆ ಇಂತಹ ಘಟನೆಗಳು ನಡೆದಾಗ ಮಿಡಿಯುವುದಿಲ್ಲ. ಹತ್ಯೆಯಾದ ಯುವತಿ ಕೂಡ ಹಿಂದೂ ಧರ್ಮದವಳೇ, ಆಕೆ ಪ್ರೀತಿಸಿದ್ದು ಕೂಡ ಹಿಂದೂ ಯುವಕನನ್ನೇ. ಹಿಂದೂ ನಾವೆಲ್ಲ ಒಂದು ಎನ್ನುವ ಸೋ ಕಾಲ್ಡ್ ದೇಶಭಕ್ತ ಸಂಘಟನೆಗಳು ಜಾತಿ ಹೆಸರಿನಲ್ಲಿ ನಡೆಯುವ ಇಂತಹ ಕ್ರೌರ್ಯವನ್ನು ಯಾಕೆ ಖಂಡಿಸುವುದಿಲ್ಲ? ಭಾರತ ಹಿಂದೂರಾಷ್ಟ್ರ ಆಗಲು ಸಂವಿಧಾನದ ಮಾನ್ಯತೆ ಬೇಕಾಗಿಲ್ಲ ಎಂದು ಹೇಳುವ ಸಂಘಪರಿವಾರದ ಪ್ರಮುಖ್ ಮೋಹನ್ ಭಾಗವತ್ ಅವರು, ರಾಜ್ಯದ ಸಂಘಪರಿವಾರದ ನಾಯಕರು ಸೇರಿ ಇಂತಹ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಿ ಈ ದೇಶದಲ್ಲಿರುವ ಹಿಂದೂಗಳೆಲ್ಲರೂ ಅಣ್ಣತಮ್ಮಂದಿರು ಅವರ ನಡುವೆ ಜಾತಿ ಎನ್ನುವ ಅಡ್ಡಗೋಡೆ ಇರಕೂಡದು, ಇನ್ನು ಮೇಲೆ ಜಾತಿ ಹೆಸರಿನಲ್ಲಿ ಇಂತಹ ಮರ್ಯಾದೆಗೇಡು ಹತ್ಯೆಗಳು ನಡೆಯ ಕೂಡದು ಎಂದು ಕರೆಕೊಡಲು ಸಾಧ್ಯವಿಲ್ಲವೇ?
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗೆ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಖಂಡಿತ ಸಮರ್ಥನೆಯಲ್ಲ. ಆದರೆ ಬೇರೆ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಹತ್ಯೆಯಾದಾಗ ಮಿಡಿಯುವ ನಮ್ಮ ಮನಸ್ಸು ನಮ್ಮದೇ ದೇಶದಲ್ಲಿ ಬಹುಸಂಖ್ಯಾತ ದಲಿತರ ಹತ್ಯೆಯಾದಾಗ ಯಾಕೆ ಮಿಡಿಯುವುದಿಲ್ಲ ಎನ್ನುವುದಷ್ಟೇ ನನ್ನ ಆತಂಕ.
ಬಾಂಗ್ಲಾದೇಶದಲ್ಲಿನ ಧಾರ್ಮಿಕ ಮೂಲಭೂತವಾದ ಮತ್ತು ಭಾರತದಲ್ಲಿನ ಜಾತೀಯತೆ ಇವೆರಡೂ ಮನುಷ್ಯಕುಲಕ್ಕೆ ಮಾರಕ. ಧಾರ್ಮಿಕ ಮೂಲಭೂತವಾದ ಹೆಚ್ಚಾದರೆ ಅದರಿಂದಾಗುವ ಅನಾಹುತಗಳ ಬಗ್ಗೆ ನಮ್ಮ ನೆರೆಹೊರೆಯ ದೇಶಗಳನ್ನು ನೋಡಿಯೂ ನಾವು ಬುದ್ಧಿ ಕಲಿಯದಿದ್ದರೆ
ಮುಂದೆ ಅಂತಹ ಅನಾಹುತಗಳನ್ನು ಸ್ವಾಗತಿಸುವುದಕ್ಕೆ ನಾವು ತಯಾರಾಗಬೇಕಾಗುತ್ತದೆ.







