ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಇನ್ನೂ ಬಿಡುಗಡೆಯಾಗದ ಹಣ

ಕರ್ನಾಟಕದ ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ದೊಡ್ಡ ಮೊತ್ತವನ್ನು ಇನ್ನೂ ಬಿಡುಗಡೆಗೊಳಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ರ ಮುಂಗಡಪತ್ರದಲ್ಲಿ ಅಲ್ಪಸಂಖ್ಯಾತರಿಗೆ ಹಂಚಿಕೆಯನ್ನು ಶೇ.33ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದ್ದರು. ಆದರೆ ಲಭ್ಯ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೈಫಲ್ಯ ಮತ್ತು ಕರ್ನಾಟಕ ಸರಕಾರದಿಂದ ಅಲ್ಪ ನಿಧಿ ಹಂಚಿಕೆಯಿಂದಾಗಿ ಭಾರೀ ಪ್ರಚಾರದೊಂದಿಗೆ ಆರಂಭಿಸಲಾಗಿದ್ದ ಹಲವಾರು ಪ್ರಮುಖ ಕಾರ್ಯಕ್ರಮಗಳು ಮತ್ತು ಯೋಜನೆಗಳು ಈಗಲೂ ದಡವನ್ನು ತಲುಪಿಲ್ಲ.
ಮುಖ್ಯಮಂತ್ರಿಗಳು ತನ್ನ 2025-26ರ ಬಜೆಟ್ ಭಾಷಣದಲ್ಲಿ ಭರವಸೆ ನೀಡಿದ್ದ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳು:
►2025-26ನೇ ಸಾಲಿನಲ್ಲಿ ಅನುಷ್ಠಾನಗೊಳ್ಳಬೇಕಾದ ಬಹು ಕಾಮಗಾರಿಗಳೊಂದಿಗೆ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಯಡಿ 1,000 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ
►ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲು ರಾಜ್ಯಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳಿಗಾಗಿ ಬಹುಪಯೋಗಿ ಸಭಾಂಗಣಗಳ ನಿರ್ಮಾಣ
►ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿನಿಯರಿಗಾಗಿ ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಹಾಸ್ಟೆಲ್ ಸೌಲಭ್ಯದೊಂದಿಗೆ ಪದವಿಪೂರ್ವ ಕಾಲೇಜು ಆರಂಭ
► ಅಲ್ಪಸಂಖ್ಯಾತ ಮಹಿಳೆಯರ ಉನ್ನತ ಶಿಕ್ಷಣವನ್ನು ಬೆಂಬಲಿಸಲು ವಕ್ಫ್ ಸಂಸ್ಥೆಗಳ ಖಾಲಿ ನಿವೇಶನಗಳಲ್ಲಿ 16 ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆ
ಪ್ರಮುಖ ಕಾರ್ಯಕ್ರಮಗಳ ಘೋಷಣೆ, ಆದರೆ ಅಲ್ಪ ಮೊತ್ತಗಳ ಬಿಡುಗಡೆ:
ಅಲ್ಪಸಂಖ್ಯಾತರ ಇಲಾಖೆಯ ಅಕ್ಟೋಬರ್‌ವರೆಗಿನ ವರದಿಯಂತೆ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳು ಅಲ್ಪಸಂಖಾತರಿಗೆ ಹಂಚಿಕೆ ಮಾಡಲಾಗಿದ್ದ ಹಣದಲ್ಲಿ ಗಮನಾರ್ಹ ಪಾಲನ್ನು ಇನ್ನಷ್ಟೇ ಪಡೆಯಬೇಕಿವೆ.
► ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ವಿಶೇಷ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹಂಚಿಕೆ ಮಾಡಲಾಗಿದ್ದ 715 ಕೋಟಿ ರೂ.ಗಳ ಪೈಕಿ ಕೇವಲ 178.75 ಕೋಟಿ ರೂ.ಗಳನ್ನು(ಶೇ.25) ಬಿಡುಗಡೆ ಮಾಡಲಾಗಿದೆ.
► ಇದೇ ರೀತಿ, ನಗರ ಪ್ರದೇಶಗಳಲ್ಲಿನ ಅಲ್ಪಸಂಖ್ಯಾತರ ಕೊಳಗೇರಿ ಮತ್ತು ಕಾಲನಿ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಹಂಚಿಕೆ ಮಾಡಲಾಗಿದ್ದ 400 ಕೋಟಿ ರೂ.ಗಳ ಪೈಕಿ ಕೇವಲ 100 ಕೋ.ರೂ.ಗಳನ್ನು (ಶೇ.25) ಬಿಡುಗಡೆ ಮಾಡಲಾಗಿದೆ.
► ಮೌಲಾನಾ ಆಝಾದ್ ಶಾಲೆಗಳಲ್ಲಿ ಹೆಚ್ಚುವರಿ ತರಗತಿ ಕೋಣೆಗಳ ನಿರ್ಮಾಣಕ್ಕಾಗಿ ಹಂಚಿಕೆ ಮಾಡಲಾಗಿದ್ದ 100 ಕೋಟಿ ರೂ.ಗಳಲ್ಲಿ ಕೇವಲ 50 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರ ಇಲಾಖೆಯು ಬಿಡುಗಡೆಗೊಳಿಸಿದೆ.
ಅಲ್ಪಸಂಖ್ಯಾತರ ಇಲಾಖೆ ಲಭ್ಯವಿರುವ ಹಣವನ್ನು ಬಳಸಿಕೊಳ್ಳುವಲ್ಲಿ ವಿಫಲಗೊಂಡಿದೆ, ಇದಕ್ಕೆ ಯಾರು ಹೊಣೆ?
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಭರವಸೆ ನೀಡಿದ್ದ ಹಣವನ್ನು ಬಿಡುಗಡೆ ಮಾಡುವಲ್ಲಿ ಸರಕಾರವು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದರೆ ಅಲ್ಪಸಂಖ್ಯಾತರ ಇಲಾಖೆಯು ಸ್ವೀಕರಿಸಿದ್ದ ಸೀಮಿತ ಹಣವನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ದಯನೀಯವಾಗಿ ವಿಫಲಗೊಂಡಿದೆ.
ಇಂತಹ ಅಧಿಕಾರಶಾಹಿ ನಿರ್ಲಕ್ಷ್ಯ ಮತ್ತು ಅದಕ್ಷತೆಯು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಅಡಚಣೆಯಾಗುತ್ತಿವೆ. ಕೆಲವು ಉದಾಹರಣೆಗಳು ಇಲ್ಲಿವೆ:
► ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಮಾಸಿಕ 1,500 ರೂ.ಗಳ ಸ್ಟೈಪೆಂಡ್ ನೀಡುವ, ಅವರಿಗೆ ಆಹಾರ ಮತ್ತು ವಸತಿ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಹೊಂದಿರುವ ವಿದ್ಯಾಸಿರಿ ಯೋಜನೆಗಾಗಿ ಶೇ.50ರಷ್ಟು,ಅಂದರೆ 25 ಕೋ.ರೂ.ಗಳನ್ನು ಸರಕಾರವು ಬಿಡುಗಡೆ ಮಾಡಿದೆ. ಆಘಾತಕಾರಿಯಾಗಿ ಅಕ್ಟೋಬರ್‌ವರೆಗೆ ಇದರಲ್ಲಿ ಒಂದೇ ಒಂದು ಪೈಸೆಯೂ ಬಳಕೆಯಾಗಿಲ್ಲ.
► ಮದ್ರಸಾಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆಯಡಿ ಅಲ್ಪಸಂಖ್ಯಾತರ ಇಲಾಖೆಯು ಕೇವಲ ಶೇ.50ರಷ್ಟು ಹಣವನ್ನು,ಅಂದರೆ 17.5 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಇಲ್ಲಿಯೂ ಒಂದೇ ಒಂದು ಪೈಸೆ ಬಳಕೆಯಾಗಿಲ್ಲ.
► ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ವಿಶೇಷ ಅಭಿವೃದ್ಧಿ ಯೋಜನೆಗಾಗಿ ಇಲಾಖೆಯು 178.75 ಕೋಟಿ ರೂ.ಗಳನ್ನು ಸ್ವೀಕರಿಸಿದೆ,ಆದರೆ ಬಳಕೆಯಾಗಿದ್ದು ಶೇ.57.6ಷ್ಟು ಮಾತ್ರ.
ತಡವಾಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಸರಿಪಡಿಸುವ ಅಗತ್ಯ:
ಅರ್ಧ ವರ್ಷ ಈಗಾಗಲೇ ಕಳೆದು ಹೋಗಿದ್ದು, ಅಲ್ಪಸಂಖ್ಯಾತರ ಏಳಿಗೆಗಾಗಿ ಉದ್ದೇಶಿತ ಕಾರ್ಯಕ್ರಮಗಳು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವಲ್ಲಿ ಸರಕಾರವು ಹಿಂದುಳಿದಿದೆ. ಈ ವಿಳಂಬವು ಕಳಪೆ ಯೋಜನೆ, ಉತ್ತರದಾಯಿತ್ವದ ಕೊರತೆ ಅಥವಾ ಉದ್ದೇಶಪೂರ್ವಕ ಅದಕ್ಷತೆಯ ಪರಿಣಾಮವೇ?
ಪರಿಸ್ಥಿತಿಯನ್ನು ಸರಿಪಡಿಸಲು ಸರಕಾರವು ಏನು ತಪ್ಪಾಗಿದೆ ಎಂಬ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಳ್ಳುವ,ಸಂಪೂರ್ಣ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸುವ ಮತ್ತು ಶೇ.100ರಷ್ಟು ಬಳಕೆಯನ್ನು ಖಚಿತಪಡಿಸಿಕೊಳ್ಳುವ ಬಲವಾದ ಅಗತ್ಯವಿದೆ.
ಮೇಲ್ವಿಚಾರಣೆ ಮತ್ತು ಅಧ್ಯಯನ ಹಾಗೂ ಅಲ್ಪಸಂಖ್ಯಾತರಿಗಾಗಿ ಎಲ್ಲ ಕಲ್ಯಾಣ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳುತ್ತಿವೆ ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ್ದೂ ಕರ್ತವ್ಯವಾಗಿದೆ.







