ಆದಿಲ್ ಶಾಹಿ ವೈಭವ - ಪತನಕ್ಕೆ ಸಾಕ್ಷಿಯಾಗಿರುವ ‘ಗಗನ್ ಮಹಲ್’

ವಿಜಯಪುರ: ಗುಮ್ಮಟನಗರಿ ವಿಜಯಪುರ ಎಂದರೆ ಐತಿಹಾಸಿಕ ವಿಸ್ಮಯಗಳ ನಗರಿ. ಇಲ್ಲಿನ ಪ್ರತಿಯೊಂದು ಸ್ಮಾರಕವೂ ತನ್ನದೇ ಆದ ಇತಿಹಾಸ ಮತ್ತು ವಾಸ್ತುಶಿಲ್ಪದ ಮೂಲಕ ಜಗತ್ತಿನಾದ್ಯಂತ ಪ್ರವಾಸಿಗರ ಗಮನ ಸೆಳೆಯುತ್ತದೆ. ಅಂತಹ ಸ್ಮಾರಕಗಳಲ್ಲಿ ಪ್ರಮುಖವಾದುದು ನಗರದ ಕೋಟೆ ಆವರಣದಲ್ಲಿರುವ ಗಗನ್ ಮಹಲ್. ಭವ್ಯ ಕಮಾನುಗಳು ಮತ್ತು ವಿಶಿಷ್ಟ ವಿನ್ಯಾಸದ ಮೂಲಕ ಇಂದಿಗೂ ಇತಿಹಾಸಾಸಕ್ತರನ್ನು ಆಕರ್ಷಿಸುತ್ತಿರುವ ಈ ಸ್ಮಾರಕ, ಆದಿಲ್ ಶಾಹಿ ಸಾಮ್ರಾಜ್ಯದ ವೈಭವ ಮತ್ತು ಪತನದ ಮೂಕ ಸಾಕ್ಷಿಯಾಗಿದೆ.
ಗುಮ್ಮಟಗಳ ನಗರಿ ವಿಜಯಪುರದ ಪ್ರತಿಯೊಂದು ಕಲ್ಲೂ ಒಂದು ರೋಚಕ ಕಥೆಯನ್ನು ಹೇಳುತ್ತದೆ. ಅಂತಹ ಕಥೆಗಳಲ್ಲಿ ಅತ್ಯಂತ ಭವ್ಯ ಹಾಗೂ ದುರಂತಮಯ ಇತಿಹಾಸವನ್ನು ಹೊತ್ತಿರುವ ಸ್ಮಾರಕವೇ ಗಗನ್ ಮಹಲ್. ‘ಆಕಾಶದ ಅರಮನೆ’ ಎಂದೇ ಖ್ಯಾತಿ ಪಡೆದ ಈ ಮಹಲ್ ನೂರಾರು ವರ್ಷಗಳ ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡಿದ್ದು, ಇಂದಿಗೂ ತನ್ನ ಗಾಂಭೀರ್ಯದಿಂದ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಐತಿಹಾಸಿಕ ಆದಿಲ್ ಶಾಹಿ ವೈಭವದ ರಾಜದರ್ಬಾರ್ ಆಗಿದ್ದ ಈ ಅರಮನೆ ನಿರ್ಮಾಣಗೊಂಡು ಇಂದಿಗೆ ನೂರಾರು ವರ್ಷಗಳು ಕಳೆದರೂ, ತನ್ನ ವಾಸ್ತುಶಿಲ್ಪದ ಗಾಂಭೀರ್ಯದಿಂದ ಇಂದಿಗೂ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ.
ಅಲಿ ಆದಿಲ್ ಶಾನ ಕಲಾತ್ಮಕ ಕನಸು..!
ಕಲೆಯ ಬೀಡಾದ ವಿಜಯಪುರವನ್ನು ಆಳುತ್ತಿದ್ದ ಆದಿಲ್ ಶಾಹಿ ರಾಜವಂಶದ ಅತ್ಯಂತ ಪರಾಕ್ರಮಿ ಮತ್ತು ಕಲಾಪ್ರೇಮಿ ರಾಜನೆಂದರೆ ಮೊದಲನೇ ಅಲಿ ಆದಿಲ್ ಶಾ. ಆತ ತನ್ನ ಸಾಮ್ರಾಜ್ಯದ ವೈಭವವನ್ನು ಜಗತ್ತಿಗೆ ಸಾರಲು ಮತ್ತು ತನ್ನ ಆಡಳಿತಕ್ಕೆ ಒಂದು ಭವ್ಯವಾದ ಕೇಂದ್ರವನ್ನು ನಿರ್ಮಿಸಲು ಬಯಸಿದನು. ಈ ಆಲೋಚನೆಯಿಂದ ಕ್ರಿ.ಶ. 1561ರಲ್ಲಿ ಭವ್ಯ ಮಹಲ್ ಅನ್ನು ನಿರ್ಮಿಸಿದನು. ಪರ್ಷಿಯನ್ ಮತ್ತು ಹಿಂದೂ ವಾಸ್ತು ಶೈಲಿಯ ಸಮ್ಮಿಲನವಾಗಿರುವ ಈ ಮಹಲ್, ಅಂದಿನ ಕಾಲದ ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. ಗಗನ್ ಮಹಲ್‌ನ ಪ್ರಮುಖ ಆಕರ್ಷಣೆಯೇ ಅದರ ಮುಂಭಾಗದಲ್ಲಿರುವ ಬೃಹತ್ ಕಮಾನು. ಇಡೀ ಕಟ್ಟಡಕ್ಕೆ ಯಾವುದೇ ಮಧ್ಯಂತರ ಪಿಲ್ಲರ್‌ಗಳ (ಸ್ತಂಭಗಳ) ಬೆಂಬಲವಿಲ್ಲದೆ. ಕೇವಲ ಸುಣ್ಣ-ಗಾರೆ ಮತ್ತು ಕಲ್ಲುಗಳ ಸಹಾಯದಿಂದ ಸುಮಾರು 20 ಮೀಟರ್ ಎತ್ತರ ಹಾಗೂ 17 ಮೀಟರ್ ಅಗಲದ ಬೃಹತ್ ಕಮಾನನ್ನು ನಿರ್ಮಿಸಲಾಗಿದೆ. ಅಂದಿನ ಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಇದೊಂದು ಜೀವಂತ ಉದಾಹರಣೆ.
ವೈಭವದ ದರ್ಬಾರ್ ಮತ್ತು ಅಂತಃಪುರ ಮೂಲ ಗಗನ ಮಹಲ್ ಕೇವಲ ಕಲ್ಲಿನ ಕಟ್ಟಡವಾಗಿರಲಿಲ್ಲ. ಅದರ ನೆಲಮಹಡಿಯ ಮೇಲಿದ್ದ ಅಂತಃಪುರ, ವಿಶಾಲವಾದ ರಾಜದರ್ಬಾರ್‌ನ ಛಾವಣಿ, ಬೃಹತ್ ಸ್ತಂಭಗಳು ಮತ್ತು ರಾಣಿಯರ ಕೋಣೆಗಳ ಕಿಟಕಿ-ಬಾಗಿಲುಗಳನ್ನು ದುಬಾರಿ ಸಾಗುವಾನಿ ಮರಗಳಿಂದ ನಿರ್ಮಿಸಲಾಗಿತ್ತು. ಇವುಗಳ ಮೇಲೆ ಅದ್ಭುತ ಕೆತ್ತನೆಗಳನ್ನು ಮಾಡಿ, ಚಿನ್ನದ ಲೇಪನ ಮಾಡಲಾಗಿತ್ತು.
ಸಾಮ್ರಾಜ್ಯದ ಪತನಕ್ಕೆ ಸಾಕ್ಷಿಯಾದ ಕಪ್ಪು ದಿನ
ಗಗನ್ ಮಹಲ್ ಕೇವಲ ವೈಭವವನ್ನಷ್ಟೇ ನೋಡಲಿಲ್ಲ, ಆದಿಲ್ ಶಾಹಿ ಸಾಮ್ರಾಜ್ಯದ ಪತನದ ಕಣ್ಣೀರ ಕಥೆಗೂ ಸಾಕ್ಷಿಯಾಯಿತು. ಕ್ರಿ.ಶ. 1686ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನು ವಿಜಯಪುರದ ಮೇಲೆ ದಂಡೆತ್ತಿ ಬಂದಾಗ, ಸುಲ್ತಾನರ ಸೈನ್ಯ ಸೋಲೊಪ್ಪಿಸಬೇಕಾಯಿತು.
ಅಂದು ಆದಿಲ್ ಶಾಹಿ ವಂಶದ ಕೊನೆಯ ಯುವ ರಾಜ ಸಿಕಂದರ್ ಆದಿಲ್ ಶಾನನ್ನು ಸರಪಳಿಗಳಿಂದ ಬಂಧಿಸಿ, ಇದೇ ಗಗನ್ ಮಹಲ್‌ನ ದರ್ಬಾರ್‌ನಲ್ಲಿ ಔರಂಗಜೇಬನ ಮುಂದೆ ತಂದು ನಿಲ್ಲಿಸಲಾಯಿತು. ಅಂದು ಇಡೀ ವಿಜಯಪುರ ಸುಲ್ತಾನರ ಸಾಮ್ರಾಜ್ಯ ಮತ್ತು ಸ್ವಾಭಿಮಾನ ಇದೇ ಮಹಲ್‌ನ ಎದುರು ಮಣ್ಣು ಪಾಲಾಯಿತು. ಆ ಘಟನೆಯ ನೆನಪು ಇಂದಿಗೂ ಇತಿಹಾಸ ಪ್ರೇಮಿಗಳ ಕಣ್ಣು ತೇವಗೊಳಿಸುತ್ತದೆ.
ಕಾಲದ ಹೊಡೆತ ಹಾಗೂ ಯುದ್ಧಗಳ ಭೀಕರತೆಗೆ ಸಿಲುಕಿ ಗಗನ್ ಮಹಲ್‌ನ ಮೇಲಿನ ಮಹಡಿಗಳು ಮತ್ತು ಸುಂದರವಾದ ಮರದ ಕೆತ್ತನೆಗಳು ಇಂದು ನಾಶವಾಗಿವೆ. ಸುಲ್ತಾನರ ಸಾಮ್ರಾಜ್ಯದ ಪತನದ ಕಾಲದಲ್ಲಿ ಸಂಭವಿಸಿದ ಭೀಕರ ಯುದ್ಧಗಳು ಮತ್ತು ದಾಳಿಗಳ ಸಂದರ್ಭದಲ್ಲಿ ಈ ಇಡೀ ಮಹಲ್‌ಗೆ ಬೆಂಕಿ ಇಡಲಾಯಿತು. ಮರದಿಂದಲೇ ಕೂಡಿದ್ದ ಇಡೀ ಅರಮನೆ ದಿನಗಟ್ಟಲೆ ಹೊತ್ತಿ ಉರಿದು, ಸಂಪೂರ್ಣವಾಗಿ ಭಸ್ಮವಾಯಿತು ಎಂಬ ಉಲ್ಲೇಖಗಳು ಇವೆ. ಬೆಂಕಿಯ ಜ್ವಾಲೆಗಳು ಎಷ್ಟು ಭೀಕರವಾಗಿದ್ದವೆಂದರೆ, ಇಡೀ ಅರಮನೆಯ ಒಳಾಂಗಣ ಸೌಂದರ್ಯ, ಬೆಲೆಬಾಳುವ ಪೀಠೋಪಕರಣಗಳು ಮತ್ತು ದಾಖಲೆಗಳು ಬೂದಿಯಾಗಿ ಹೋದವು. ಮುಂಭಾಗದ ಆ ಬೃಹತ್ ಕಲ್ಲಿನ ಕಮಾನು ಮತ್ತು ಗಾರೆಯ ಗೋಡೆಗಳು ಮಾತ್ರ ಬೆಂಕಿಯ ಕೆನ್ನಾಲಿಗೆಗೆ ಮಣಿಯದೆ ಹಾಗೇ ಉಳಿದುಕೊಂಡವು. ಬೆಂಕಿಯಿಂದ ಬದುಕುಳಿದ ಆ ದೈತ್ಯ ಕಮಾನುಗಳೇ ಇಂದು ಇತಿಹಾಸದ ಕ್ರೌರ್ಯವನ್ನು ಜಗತ್ತಿಗೆ ಸಾರುತ್ತಾ ನಿಂತಿವೆ.
ಗಗನ ಮಹಲ್‌ಗೆ ಬೆಂಕಿ ಇಟ್ಟಿದ್ದು ಯಾರು..?
ಗಗನ ಮಹಲ್ ಅಂದು ದ್ವೇಷದ ಬೆಂಕಿಗೆ ಆಹುತಿಯಾಗಿ ಕರಕಲಾದ ಮಹಲ್, ಇಂದು ತನ್ನ ಕಲ್ಲಿನ ಅಸ್ಥಿಪಂಜರದಡಿಯಲ್ಲೇ ಪ್ರವಾಸಿಗರ ಪ್ರೀತಿಯ ನೆರಳಾಗಿ ಮಾರ್ಪಟ್ಟಿರುವುದು ಇತಿಹಾಸದ ಒಂದು ವಿಪರ್ಯಾಸ. ಗಗನ ಮಹಲ್ ಸುಟ್ಟ ಘಟನೆಯ ಹಿಂದೆ ಇತಿಹಾಸಕಾರರಲ್ಲಿ ಎರಡು ಪ್ರಮುಖ ವಾದಗಳಿವೆ: ಮೊಘಲರ ದಾಳಿ
(ಕ್ರಿ.ಶ. 1686); ಒಂದು ವಾದದ ಪ್ರಕಾರ, ಔರಂಗಜೇಬನು ವಿಜಯಪುರವನ್ನು ವಶಪಡಿಸಿಕೊಂಡಾಗ ಆತನ ಸೈನಿಕರು ಸಾಮ್ರಾಜ್ಯದ ಶಕ್ತಿಯ ಸಂಕೇತವಾಗಿದ್ದ ಈ ರಾಜಮಹಲ್‌ಗೆ ಬೆಂಕಿ ಹಚ್ಚಿ ಅದರ ವೈಭವವನ್ನು ನಾಶಪಡಿಸಿದರು. ಇನ್ನೊಂದು, ಆದಿಲ್ ಶಾಹಿಗಳ ಪತನದ ನಂತರ ವಿಜಯಪುರವು ಮರಾಠರು, ನಿಜಾಮರು ಮತ್ತು ಬ್ರಿಟಿಷರ ಕೈ ಬದಲಾಗುವಾಗ ನಡೆದ ಆಂತರಿಕ ಕಲಹಗಳು ಮತ್ತು ಲೂಟಿಯ ಸಂದರ್ಭದಲ್ಲಿ ಈ ಸ್ಮಾರಕಕ್ಕೆ ಬೆಂಕಿ ಬಿದ್ದಿರಬಹುದು ಎನ್ನಲಾಗುತ್ತದೆ. ಯಾರು ಬೆಂಕಿ ಇಟ್ಟಿದ್ದಾರೆಂಬ ಬಗ್ಗೆ ಇನ್ನೂ ಗೊಂದಲ ಇದೆ.
ಇತಿಹಾಸದ ಜೀವಂತ ಸಾಕ್ಷಿ
ಇಂದು ಗಗನ್ ಮಹಲ್ ಕೇವಲ ಕಲ್ಲು-ಗಾರೆಗಳ ಕಟ್ಟಡವಲ್ಲ. ಅದು ವಿಜಯಪುರದ ಸುಲ್ತಾನರ ಕಲಾತ್ಮಕ ಕನಸು, ಆದಿಲ್ ಶಾಹಿ ವೈಭವ, ಸಾಮ್ರಾಜ್ಯದ ಪತನ ಮತ್ತು ಇತಿಹಾಸದ ಏಳುಬೀಳುಗಳ ಜೀವಂತ ಸಾಕ್ಷಿಯಾಗಿದೆ. ಬೆಂಕಿ, ಯುದ್ಧ ಮತ್ತು ಕಾಲದ ಹೊಡೆತಗಳ ನಡುವೆಯೂ ಉಳಿದು ನಿಂತಿರುವ ಅದರ ಬೃಹತ್ ಕಮಾನುಗಳು ವಿಜಯಪುರದ ವೈಭವವನ್ನು ಇಂದಿಗೂ ಜಗತ್ತಿಗೆ ಸಾರುತ್ತಿವೆ.
ಇತಿಹಾಸದಿಂದ ಜನಸಾಮಾನ್ಯರ ಅಂಗಳಕ್ಕೆ
ಒಂದು ಕಾಲದಲ್ಲಿ ರಾಜರು, ಮಂತ್ರಿಗಳು ಮತ್ತು ವಿದೇಶಿ ರಾಯಭಾರಿಗಳ ಸಭೆಗಳು ನಡೆಯುತ್ತಿದ್ದ ಗಗನ್ ಮಹಲ್ ಹಾಗೂ ಅದರ ಆವರಣದಲ್ಲಿರುವ ಹಸಿರು ಉದ್ಯಾನವನ ಸಾರ್ವಜನಿಕರ ನೆಚ್ಚಿನ ತಾಣವಾಗಿದೆ. ಪ್ರತಿದಿನ ಸಂಜೆ ನೂರಾರು ಜನರು, ಪ್ರವಾಸಿಗರು ಹಾಗೂ ಕುಟುಂಬಗಳು ಇಲ್ಲಿ ಸೇರಿ ಇತಿಹಾಸದ ನೆನಪುಗಳ ನಡುವೆ ಸಮಯ ಕಳೆಯುತ್ತಾರೆ. ಅಂದು ಅಧಿಕಾರದ ಸಭೆಗಳು ನಡೆಯುತ್ತಿದ್ದ ಜಾಗದಲ್ಲಿ, ಪ್ರಜೆಗಳು ಇಂದು ಮುಕ್ತವಾಗಿ ಪ್ರಕೃತಿಯ ಮಡಿಲಿನಲ್ಲಿ ಕೂಡುತ್ತಿದ್ದಾರೆ. ಗಗನ ಮಹಲ್ ಕಾಲಾಂತರದಲ್ಲಿ ಪಡೆದುಕೊಂಡಿರುವ ಒಂದು ಸುಂದರ ಬದಲಾವಣೆ ಎನ್ನಬಹುದು!






