ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಗಮನ ಸೆಳೆಯುತ್ತಿರುವ ಗಾಂಧೀಜಿ ವರ್ಣ ಚಿತ್ರಗಳು

ರಾಯಚೂರು : ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಗೆ ರಾಯಚೂರಿನ ಜನರಿಗೂ ವಿಶೇಷ ನಂಟಿದೆ. ಸ್ವಾತಂತ್ರ್ಯ ಹೋರಾಟದ ಭಾಗವಾಗಿ 1917ರಲ್ಲಿ ರೈಲಿನಲ್ಲಿ ಬಾಂಬೆಯಿಂದ ಮದ್ರಾಸ್‌ಗೆ ಹೋಗುವಾಗ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ನಿಂತು ಸಾರ್ವಜನಿಕರೊಂದಿಗೆ ಚರ್ಚೆ ಮಾಡಿದ್ದರು.
ಗಾಂಧೀಜಿ ಅವರ ರಾಯಚೂರು ಭೇಟಿ ಕೆಲವೇ ನಿಮಿಷಗಳ ಸಮಯವಾಗಿದ್ದರೂ ರಾಯಚೂರು ಸೇರಿದಂತೆ ಈ ಭಾಗದ ಅನೇಕರಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಳ್ಳಲು ಕಾರಣವಾಗಿತ್ತು.
ಗಾಂಧೀಜಿ ಅವರು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಗಾಂಧೀಜಿ ಅವರನ್ನು ನೋಡಲು ಅಪಾರ ಪ್ರಮಾಣದ ಜನಜಂಗುಳಿ ಕೂಡಿತ್ತು. ಅನೇಕರು ಗಾಂಧಿಜಿ ಅವರನ್ನು ನೋಡಿ ಕಣ್ತುಂಬಿಕೊಂಡಿದ್ದರು ಹಾಗೂ ಅವರ ಮಾತುಗಳನ್ನು ಆಲಿಸಿ ಸಂತಸಗೊಂಡಿದ್ದರು.ರಾಯಚೂರು ರೈಲ್ವೆ ನಿಲ್ದಾಣದ ಭೇಟಿಯ ಅನುಭವವನ್ನು ಸ್ವತಃ ಗಾಂಧೀಜಿಯವರು ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬರುತ್ತದೆ.
ಈ ವೇಳೆ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಭಾಗವಾದ ಸ್ವದೇಶಿ ಚಳವಳಿ, ಖಾದಿ ಬಳಕೆ ಹಾಗೂ ಅಸ್ಪೃಶ್ಯತೆ ಆಚರಣೆಯ ನಿರ್ಮೂಲದ ಬಗ್ಗೆ ಭಾಷಣ ಮಾಡಿದ್ದರು ಎಂದು ಹಿರಿಯ ನಾಗರಿಕರು, ಚಿತ್ರ ಕಲಾವಿದ ಎಚ್.ಎಚ್.ಮ್ಯಾದರ್ ಸಹಿತ ಅನೇಕರು ತಿಳಿಸಿದ್ದಾರೆ.
ಮಹಾತ್ಮಾ ಗಾಂಧೀಜಿ ಭೇಟಿಯಿಂದ ಬದಲಾದ ನಿಲ್ದಾಣದ ಚಿತ್ರಣ: ಗಾಂಧೀಜಿ ಅವರ ಭೇಟಿಯ ಸವಿನೆನಪಿಗಾಗಿ, 2018ರಲ್ಲಿ ದಕ್ಷಿಣ ಮಧ್ಯೆ ರೈಲ್ವೆ ವಲಯದಿಂದ ನವೀಕರಣ ಕಾರ್ಯ ಕೈಗೊಂಡು ನಿಲ್ದಾಣದ ಗೋಡೆಗಳಲ್ಲಿ ಗಾಂಧೀಜಿ ಜೀವನಚರಿತ್ರೆಯ ಮಹತ್ವದ ಘಟ್ಟಗಳನ್ನು ವರ್ಣಚಿತ್ರಗಳ ಮೂಲಕ ತೋರಿಸುವ ಪ್ರಯತ್ನವನ್ನು ರೈಲ್ವೆ ಇಲಾಖೆ ಮಾಡಿದೆ.
ರೈಲ್ವೆ ನಿಲ್ದಾಣದಲ್ಲಿ ಗಾಂಧೀಜಿ ಜೈಲಿಗೆ ಹೋಗಿದ್ದು, ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಗೆ ಕರೆ ನೀಡಿದ್ದು ಮುಂತಾದ ವಿವಿಧ ಘಟನೆಗಳ ಚಿತ್ರಣ ಮೂಡಿಸಲಾಗಿದೆ. ಪ್ಲಾಟ್ ಫಾರ್ಮ್ ನಂಬರ್ 1ರಲ್ಲಿ ಇಳಿಯುವ ಪ್ರಯಾಣಿಕರಿಗೆ ಮುಖ್ಯ ದ್ವಾರದವರೆಗೆ ಹೋಗಯವವರೆಗೆ ಗಾಂಧಿಜಿಯವರ ಚಿತ್ರಗಳು ಆಕರ್ಷಿಸುತ್ತದೆ.ಅಲ್ಲದೇ ರೈಲ್ವೆ ನಿಲ್ದಾಣದ ಹೊರಗಡೆ ದೊಡ್ಡ ಚಿತ್ರ ಜಗಮಗಿಸುವ ದೀಪಾಲಂಕಾರ ರಾತ್ರಿ ವೇಳೆ ನೋಡುಗರ ಕಣ್ಮನ ಸೆಳೆಯುತ್ತದೆ.
ಮನವಿ: ರಾಯಚೂರಿನಿಂದ ಕರ್ನೂಲಿಗೆ ರೈಲು ಒದಗಿಸುವುದು ದಿನನಿತ್ಯದ ಪ್ಯಾಸೆಂಜರ್ ರೈಲು ಗುಂತಕಲ್ ನಿಂದ ಕಲಬುರಗಿ ಮತ್ತು ಕಲಬುರಗಿಯಿಂದ ಗುಂತಕಲ್ ರಾಯಚೂರು ಮೊದಲು ಓಡುತ್ತಿತ್ತು ಇದನ್ನು ಸ್ಥಗಿತಗೊಳಿಸಿದ್ದರಿಂದ ಈ ಭಾಗದ ಜನರಿಗೆ ಸಮಸ್ಯೆಯಾಗಿದೆ. ರಾಯಚೂರು ಮಾರ್ಗವಾಗಿ ಜೋಧಪುರಗೆ ಹೊಸ ರೈಲ್ವೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಬೇಕು. ಚೆನ್ನೈ, ಬೆಂಗಳೂರು, ಬಿಕ್ ನೇರ್ ಯಾವ ಮಾರ್ಗವಾದರೂ ಸರಿ ಜೋಧಪುರಗೆ ಒಂದು ರೈಲು ಓಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಮಹಾತ್ಮಾಗಾಂಧಿ ಭೇಟಿ ನೀಡಿದ ರಾಯಚೂರು ರೈಲ್ವೆ ನಿಲ್ದಾಣಕ್ಕೆ ಐತಿಹಾಸಿಕ ಹಿನ್ನಲೆಯಿದ್ದರೂ ಸಾಕಷ್ಟು ಸೌಲತ್ತುಗಳಿಲ್ಲದೇ ನಲುಗುವಂತಾಗಿದೆ. ಕಳೆದ 6 ತಿಂಗಳಿನಿಂದ ಲಿಫ್ಟ್ ಕಾಮಗಾರಿ ನಡೆಯುತ್ತಿದ್ದರೂ ಪೂರ್ಣಗೊಂಡಿಲ್ಲ, ಇದರಿಂದ ಹಿರಿಯ ನಾಗರಿಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ರಾಯಚೂರು ರೈಲು ನಿಲ್ದಾಣದಲ್ಲಿ ಒಂದು ಹೆಚ್ಚುವರಿ ಮೀಸಲಾತಿ ಬುಕಿಂಗ್ ಕೌಂಟರ್‌ಅನ್ನು ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುಂತಕಲ್ ವಿಭಾಗೀಯ ವ್ಯವಸ್ಥಾಪಕರಿಗೆ ರೈಲ್ವೆ ಬೋರ್ಡ್ ಸದಸ್ಯರಾದ ಎ.ಚಂದ್ರಶೇಖರ, ಎಂ.ಮಾರೆಪ್ಪ, ರಮೇಶ, ಮಹೇಶ್ ಕುಮಾರ್ ಸಹಿತ ಹಲವರು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಆಧುನಿಕ ಯುಗದಲ್ಲಿ ಈಗಿನ ಯುವ ಪೀಳಿಗೆ ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನೀಯರು ಹೆಸರನ್ನು ಕೆಲವರು ತಿಳಿದಿರುವುದು ಹೊರತು ಇತಿಹಾಸದ ಪರಿಚಯದಿಂದ ದೂರ ಉಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ರಾಷ್ಟ್ರಪಿತ ಮಹಾತ್ಮಾಗಾಂಧಿಜಿಯವರ ಹೋರಾಟದ ಸನ್ನಿವೇಶಗಳನ್ನು ವರ್ಣಚಿತ್ರಗಳನ್ನು ಬಿಡಿಸುವ ಮೂಲಕ ಸಾರ್ವಜನಿಕವಾಗಿ ಪರಿಚಯಿಸುವ ಕಾರ್ಯ ಮೆಚ್ಚುಗೆಯಾಗಿದೆ.
-ಸೈಯದ್ ಹಫೀಝುಲ್ಲಾ, ಶಿಕ್ಷಣ ತಜ್ಞ, ರಾಯಚೂರು
ಗಾಂಧೀಜಿ ನಮ್ಮ ರಾಯಚೂರು ಜಿಲ್ಲೆಗೆ ಕಾಲಿಟ್ಟಿದ್ದು ನಮಗೆ ಹೆಮ್ಮೆಯ ವಿಷಯ. ಅವರ ಭೇಟಿ ಈ ಭಾಗದ ಸಾವಿರಾರು ಯುವಕರಿಗೆ ಸ್ವಾತಂತ್ರ್ಯ ಹೋರಾಟದ ಚಳವಳಿಗೆ ಸ್ಪೂರ್ತಿ ನೀಡಿತ್ತು. ಅವರ ಪಾದಸ್ಪರ್ಶ ಐತಿಹಾಸದ ಮಹತ್ವದ ದಾಖಲೆಯಾಗಿ ಅಚ್ಚಳಿಯದೆ ಉಳಿದುಕೊಂಡಿದೆ. ಇಂದಿನ ಪೀಳಿಗೆಗೆ ಗಾಂಧೀಜಿಯವರ ತತ್ವ ಆದರ್ಶ, ಅವರ ಅಹಿಂಸಾ ಮಾರ್ಗ ತಿಳಿಸಲು ರೈಲ್ವೆ ಇಲಾಖೆಯಿಂದ ವರ್ಣಚಿತ್ರ ಅಳವಡಿಸಲಾಗಿದೆ. ಗಾಂಧಿಜಿಯವರ ತತ್ವಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಿದೆ.
-ಎ.ಚಂದ್ರಶೇಖರ, ಸದಸ್ಯ, ರೈಲ್ವೆ ಸಲಹಾ ಸಮಿತಿ ರಾಯಚೂರು







