ಐತಿಹಾಸಿಕ ಕೋಟೆ ದ್ವಾರಕ್ಕೆ ಕಸದ ಬೆಂಕಿಯ ಮಸಿ!
ಕೃಷ್ಣಾನಗರದಲ್ಲಿ ತ್ಯಾಜ್ಯ ಹಾವಳಿ; ಸ್ಮಾರಕದ ಸಂರಕ್ಷಣೆಗೆ ಗ್ರಾಮಸ್ಥರ ಆಗ್ರಹ

ಸಂಡೂರು : ತಾಲೂಕಿನ ಕೃಷ್ಣಾನಗರ ಗ್ರಾಮದ ಮುಖ್ಯ ರಸ್ತೆಯುದ್ದಕ್ಕೂ ಕೋಳಿ ಅಂಗಡಿ, ಗ್ಯಾರೇಜ್ ಹಾಗೂ ಹೋಟೆಲ್ಗಳ ತ್ಯಾಜ್ಯ ಸುರಿಯುತ್ತಿರುವ ಆರೋಪ ಕೇಳಿಬಂದಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ, ಐತಿಹಾಸಿಕ ಕೋಟೆಯ ದ್ವಾರಬಾಗಿಲಿನ ಬಳಿ ಕಸ ಸುರಿದು ಸುಡುತ್ತಿರುವುದರಿಂದ ಹೊಗೆ ಆವರಿಸಿ ಬಾಗಿಲು ಕಪ್ಪಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆ ಬದಿಯಲ್ಲಿ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿದ್ದು, ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎನ್ನಲಾಗಿದೆ. ಸಮಸ್ಯೆ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೋಟೆಯ ದ್ವಾರಬಾಗಿಲಿನ ಬಳಿ ಕಸ ಸುಡುತ್ತಿರುವುದರಿಂದ ಸ್ಮಾರಕದ ಸೌಂದರ್ಯ ಹಾಗೂ ಸಂರಕ್ಷಣೆಗೆ ಧಕ್ಕೆಯಾಗುತ್ತಿದೆ. ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಂಡು, ಕೋಟೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವಂತೆ ಗ್ರಾಮಸ್ಥರು ಸಂಡೂರು ಉಪ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸಂಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಪ್ರತಿಕ್ರಿಯಿಸಿ, ಸಮಸ್ಯೆ ತಮ್ಮ ಗಮನಕ್ಕೆ ಇದೀಗ ಬಂದಿದ್ದು, ಸ್ಥಳ ಪರಿಶೀಲಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೋಟೆಯ ಸುತ್ತಮುತ್ತ ಕಾಮಗಾರಿ ಕೈಗೊಳ್ಳಲು ಪುರಾತತ್ವ ಇಲಾಖೆಯ ಅನುಮತಿ ಪಡೆದು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಭಿಯಂತರರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಕೃಷ್ಣಾನಗರ ಗ್ರಾಮ ಪಂಚಾಯಿತಿ ಪಿಡಿಒ ಫಕೀರಪ್ಪ ಮಾತನಾಡಿ, ಈ ಹಿಂದೆ ಹಲವು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರೂ ಮತ್ತೆ ತ್ಯಾಜ್ಯ ಸುರಿಯಲಾಗುತ್ತಿದೆ. ಇದೀಗ ಮತ್ತೊಮ್ಮೆ ಸ್ವಚ್ಛತಾ ಕಾರ್ಯ ನಡೆಸಿ, ಕಸ ಸುರಿದು ಸುಡುವುದನ್ನು ತಡೆಯಲು ಎಚ್ಚರಿಕೆ ಫಲಕ ಅಳವಡಿಸಲಾಗುವುದು. ಪಂಚಾಯಿತಿ ವಾಹನದ ಮೂಲಕ ಜಾಗೃತಿ ಘೋಷಣೆಗಳನ್ನೂ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೋಟೆಯ ಐತಿಹಾಸಿಕ ಮಹತ್ವವನ್ನು ಗಮನಿಸಿ ಅದರ ಸುತ್ತಮುತ್ತ ತ್ಯಾಜ್ಯ ಸುರಿಯುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗಾಗಲೇ ಇರುವ ತ್ಯಾಜ್ಯವನ್ನು ತೆರವುಗೊಳಿಸಿ, ಕೋಟೆಯ ಸಂರಕ್ಷಣೆಗೆ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಗ್ರಾಮಸ್ಥರಾದ ಸರ್ವೇಶ್ ಎಲೆಗಾರ್ ಹಾಗೂ ತಿಮ್ಮಪ್ಪ ಆಗ್ರಹಿಸಿದ್ದಾರೆ.
ಕೋಟೆಯ ಸುತ್ತಮುತ್ತ ಸ್ವಚ್ಛತಾ ಕಾಮಗಾರಿಗಳನ್ನು ಕೈಗೊಳ್ಳಲು ಪುರಾತತ್ವ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿದೆ. ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಂಬಂಧಪಟ್ಟ ಅಭಿಯಂತರರೊಂದಿಗೆ ಚರ್ಚಿಸಿ, ಅಗತ್ಯ ಅನುಮತಿ ಪಡೆದು ಕಾಮಗಾರಿಗಳನ್ನು ಕೈಗೊಳ್ಳಲು ಪ್ರಯತ್ನಿಸಲಾಗುವುದು. ಈ ಕಾರ್ಯಗಳಿಗೆ ವಿಬಿಜಿ ರಾಮ್ಜಿ ಯೋಜನೆಯಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು.
-ಮಡಗಿನ ಬಸಪ್ಪ
ಸಂಡೂರು ತಾ.ಪಂ. ಸಿಇಒ






