ಜೆಸ್ಕಾಂ: 35 ಲಕ್ಷಕ್ಕೂ ಹೆಚ್ಚು ಗ್ರಾಹಕರು : ಸಹಾಯವಾಣಿಗೆ ಕೇವಲ 20 ಸಿಬ್ಬಂದಿ!

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 35.85 ಲಕ್ಷಕ್ಕೂ ಅಧಿಕ ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿರುವ ಜೆಸ್ಕಾಂನ 1912 ಗ್ರಾಹಕ ಸಹಾಯವಾಣಿ ಕೇಂದ್ರದಲ್ಲಿ ಕೇವಲ 20 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ತುರ್ತು ಸಂದರ್ಭಗಳಲ್ಲಿ ಗ್ರಾಹಕರ ಕರೆಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಸಹಾಯವಾಣಿ ಕೇಂದ್ರಕ್ಕೆ ಕನಿಷ್ಠ 100 ಸಿಬ್ಬಂದಿಯನ್ನು ನೇಮಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮಳೆಗಾಲದಲ್ಲಿ ವಿದ್ಯುತ್ ಕಡಿತ, ತಾಂತ್ರಿಕ ದೋಷ, ನೆಟ್‌ವರ್ಕ್ ಸಮಸ್ಯೆ, ಬಿಲ್ಲಿಂಗ್ ಸೇರಿದಂತೆ ವಿವಿಧ ದೂರುಗಳನ್ನು ದಾಖಲಿಸಲು 24 ಗಂಟೆಯೂ ಕಾರ್ಯನಿರ್ವಹಿಸುವ 1912 ಸಹಾಯವಾಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಏಳು ಜಿಲ್ಲೆಗಳ ಲಕ್ಷಾಂತರ ಗ್ರಾಹಕರ ಅಗತ್ಯಕ್ಕೆ ಹೋಲಿಸಿದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದ ಅನೇಕ ಸಂದರ್ಭಗಳಲ್ಲಿ ಗ್ರಾಹಕರ ಕರೆಗಳು ಸಂಪರ್ಕಕ್ಕೆ ಸಿಗದೆ, ಅವರ ಸಮಸ್ಯೆಗಳು ಜೆಸ್ಕಾಂನ ಗಮನಕ್ಕೆ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ದೂರು ನೀಡಿದರೂ ಸರಿಯಾದ ಸಮಯದಲ್ಲಿ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂಬ ಆರೋಪಗಳು ಹೆಚ್ಚಾಗಿವೆ.
ಜೆಸ್ಕಾಂ ವ್ಯಾಪ್ತಿಯಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಸೇರಿದಂತೆ ಏಳು ಜಿಲ್ಲೆಗಳಿದ್ದು, ಒಟ್ಟು 8 ವೃತ್ತಗಳು, 34 ವಿಭಾಗಗಳು ಹಾಗೂ 148 ಉಪವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಈ ಬೃಹತ್ ವ್ಯಾಪ್ತಿಯಲ್ಲಿ 35.85 ಲಕ್ಷಕ್ಕೂ ಅಧಿಕ ಸಕ್ರಿಯ ವಿದ್ಯುತ್ ಸಂಪರ್ಕಗಳಿವೆ ಎಂದು ಮೂಲಗಳು ತಿಳಿಸಿವೆ.
ವಿಶೇಷವಾಗಿ ಮಳೆ, ಗಾಳಿ ಸೇರಿದಂತೆ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದಾಗ 1912ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕರೆ ಮಾಡುತ್ತಾರೆ. ಆದರೆ, ಸಹಾಯವಾಣಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಬಹುತೇಕ ಕರೆಗಳು ಕಾರ್ಯನಿರತವಾಗಿರುವುದು ಅಥವಾ ಸಂಪರ್ಕ ಕಡಿತಗೊಳ್ಳುತ್ತಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇದಲ್ಲದೆ, ಜೆಸ್ಕಾಂನ ಸಹಾಯವಾಣಿ ಮಾರ್ಗಗಳು ಕಾರ್ಯನಿರತವಾಗಿರುವ ಸಂದರ್ಭದಲ್ಲಿ ಕೆಲವು ಕರೆಗಳು ತಾಂತ್ರಿಕ ಕಾರಣಗಳಿಂದ ಬೆಂಗಳೂರಿನ ಬೆಸ್ಕಾಂ ಸಹಾಯವಾಣಿಗೆ ವರ್ಗಾವಣೆಯಾಗುತ್ತಿವೆ ಎನ್ನಲಾಗಿದ್ದು, ಇದರಿಂದ ಸ್ಥಳೀಯ ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಸಮರ್ಪಕ ಮಾಹಿತಿ ಹಾಗೂ ತ್ವರಿತ ಸ್ಪಂದನ ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಸಹಾಯವಾಣಿ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಕರೆ ನಿರ್ವಹಣಾ ವ್ಯವಸ್ಥೆಯನ್ನು ತಾಂತ್ರಿಕವಾಗಿ ಉನ್ನತೀಕರಿಸಬೇಕು. ತುರ್ತು ಸಂದರ್ಭಗಳಲ್ಲಿ ಗ್ರಾಹಕರ ಕರೆಗಳು ಅನಗತ್ಯವಾಗಿ ಬೇರೆ ಸಂಸ್ಥೆ ಅಥವಾ ಪ್ರದೇಶದ ಸಹಾಯವಾಣಿಗೆ ವರ್ಗಾವಣೆಯಾಗದಂತೆ ಕ್ರಮ ಕೈಗೊಂಡು, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಒದಗಿಸುವ ವ್ಯವಸ್ಥೆ ರೂಪಿಸಬೇಕು ಎಂಬುದು ಗ್ರಾಹಕರ ಆಗ್ರಹವಾಗಿದೆ. ಈ ಬಗ್ಗೆ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಒಂದು ಶಿಫ್ಟ್ ನಲ್ಲಿ 20 ಜನ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದು, ಆದರೆ ಒಟ್ಟು ಸಿಬ್ಬಂದಿಗಳ ಬಗ್ಗೆ ಮಾಹಿತಿ ಬಿಟ್ಟುಕೊಡಲಿಲ್ಲ. ಈ ಕುರಿತು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳಗೆ ಹಲವು ಬಾರಿ ಸಂಪರ್ಕಿಸಿದರೂ ಕರೆಗೆ ಸ್ಪಂದಿಸಲಿಲ್ಲ.
ಸಿಬ್ಬಂದಿ ನೇಮಕಕ್ಕೆ ಒತ್ತಾಯ :
ಜೆಸ್ಕಾಂ ಗ್ರಾಹಕಸ್ನೇಹಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಾದರೆ ದೂರು ಸ್ವೀಕಾರ ಮತ್ತು ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಗ್ರಾಹಕರಿಗೆ ಸಮರ್ಪಕವಾಗಿ ಸ್ಪಂದಿಸಲು ಕೇವಲ 20 ಸಿಬ್ಬಂದಿ ಸಾಕಾಗುವುದಿಲ್ಲ. ಹೀಗಾಗಿ 1912 ಸಹಾಯವಾಣಿ ಕೇಂದ್ರದ ನಿರ್ವಹಣೆಗೆ ಕನಿಷ್ಠ 100 ಸಿಬ್ಬಂದಿಯನ್ನು ತಕ್ಷಣ ನೇಮಕ ಮಾಡಿ, ದೂರುಗಳನ್ನು ತ್ವರಿತವಾಗಿ ಸ್ವೀಕರಿಸಿ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ರವಾನಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಏಳು ಜಿಲ್ಲೆಯನ್ನೊಳಗೊಂಡ ಜೆಸ್ಕಾಂ ಕಂಪೆನಿಯಲ್ಲಿ ಲಕ್ಷಾಂತರ ಗ್ರಾಹಕರಿದ್ದಾರೆ, ಅವರ ಕುಂದುಕೊರತೆಗಳನ್ನು ನೀಗಿಸುವಲ್ಲಿ ಅಧಿಕಾರಿ, ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಸಹಾಯವಾಣಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಗ್ಗೆ ಸಮರ್ಪಕ ಮಾಹಿತಿ ಪಡೆದು ನೀಡಲಾಗುವುದು.
-ಶಶಿಧರ್ ಕುರೇರ, ವ್ಯವಸ್ಥಾಪಕ ನಿರ್ದೇಶಕ, ಜೆಸ್ಕಾಂ
ಜೆಸ್ಕಾಂನ ಜಾಲ ದೊಡ್ಡದಾಗಿದೆ. ಆದರೆ ಸೂಕ್ತ ಸಮಯದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಹಾಯವಾಣಿ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿದರೆ ತುರ್ತು ಸಂದರ್ಭಗಳಲ್ಲಿ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ಗ್ರಾಹಕರಿಗೂ ಅನುಕೂಲವಾಗಲಿದೆ. ಜೆಸ್ಕಾಂ ಕೂಡಲೇ ಗಮನಹರಿಸಿ ಸಿಬ್ಬಂದಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.
-ರಾಜಕುಮಾರ ಸೀರಿ, ಗ್ರಾಹಕರು, ಬೇಂದ್ರೆ ನಗರ, ಕಲಬುರಗಿ






