ವಿಜಯಪುರ ಒಣದ್ರಾಕ್ಷಿಗೆ ಜಿಐ ಟ್ಯಾಗ್ ಸನ್ನಿಹಿತ?

ವಿಜಯಪುರ: ಇಂಡಿ ಭಾಗದಲ್ಲಿ ಬೆಳೆಯುವ ಲಿಂಬೆಗೆ ಜಿಐ ಟ್ಯಾಗ್ ಈಗಾಗಲೇ ದೊರಕಿದೆ. ಇದೀಗ, ಅನೇಕ ದೇಶಗಳಿಗೆ ರಫ್ತಾಗುತ್ತಿರುವ ಒಣದ್ರಾಕ್ಷಿಗೂ ಜಿಐ ಟ್ಯಾಗ್ ದೊರಕುವ ದಿನಗಳು ದೂರವಿಲ್ಲ. ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾದ ಇಲ್ಲಿನ ಒಣದ್ರಾಕ್ಷಿಗೆ ಜಿಐ ಟ್ಯಾಗ್ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಶರವೇಗದಿಂದ ನಡೆಯುತ್ತಿದ್ದು, ಇದು ರೈತರಿಗೆ ಹೊಸ ಆರ್ಥಿಕ ಬಲ ನೀಡುವ ನಿರೀಕ್ಷೆ ಮೂಡಿಸಿದೆ.
ಅನೇಕ ಉಪ ಉತ್ಪನ್ನಗಳಿಗೆ ‘ಒಣದ್ರಾಕ್ಷಿ’ ಅದರಲ್ಲೂ ವಿಜಯಪುರ ಒಣ ದ್ರಾಕ್ಷಿಯೇ ಆಧಾರವಾಗಿದ್ದು, ಈ ಟ್ಯಾಗ್ ದೊರಕಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇನ್ನಷ್ಟೂ ವಿಸ್ತರಣೆಯಾಗಲಿದ್ದು, ಬೆಳೆಗಾರರಲ್ಲಿ ಆನೆ ಬಲ ತರಲಿದೆ.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಬಿ.ಫಕ್ರುದ್ದೀನ್ ನೇತೃತ್ವದ 9 ಸದಸ್ಯರ ಸಮಿತಿಯು ವಿಜಯಪುರದ ಒಣದ್ರಾಕ್ಷಿಗೆ ಜಿಐ ಟ್ಯಾಗ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಾಗುತ್ತಿದೆ. ಜಿಲ್ಲಾದ್ಯಂತ 17 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆ ಇದೆ. ವಾರ್ಷಿಕವಾಗಿ 5 ಲಕ್ಷ ಟನ್‌ಗಿಂತ ಹೆಚ್ಚು ಒಣದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ಜಿಐ ಟ್ಯಾಗ್ ಸಿಕ್ಕರೆ ವಿಜಯಪುರ ದ್ರಾಕ್ಷಿಗೆ ಜಾಗತಿಕ ಮಾರುಕಟ್ಟೆ ಸಂಪರ್ಕ ಇನ್ನಷ್ಟು ವಿಸ್ತಾರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸವಣೂರಿನ ವೀಳದ್ಯೆಲೆ, ಕುಮುಟಾದ ಈರುಳ್ಳಿ, ತೆಂಗು, ತಿಪಟೂರಿನ ತೆಂಗು, ಕೊಬ್ಬರಿ, ಗೌರಿಬಿದನೂರಿನ ಮೆಣಸಿನಕಾಯಿ ಸೇರಿದಂತೆ 23 ಬೆಳೆಗಳಿಗೆ ಜಿಐ ಟ್ಯಾಗ್ ಕೊಡಿಸುವ ಪ್ರಯತ್ನ ನಡೆದಿದೆ. ಇದರ ಜೊತೆಗೆ ಈ ಒಣದ್ರಾಕ್ಷಿಗೂ ಸಹ ಟ್ಯಾಗ್ ದೊರಕುವ ದಟ್ಟ ಸಾಧ್ಯತೆ ಇದೆ.
ಹಣ್ಣು ವಿಜ್ಞಾನ, ಅರ್ಥಶಾಸ್ತ್ರ, ಮಾರುಕಟ್ಟೆ, ಜೀವ ರಸಾಯನ ಶಾಸ್ತ್ರ, ತಳಿಶಾಸ್ತ್ರ, ತೋಟಗಾರಿಕೆ ತಜ್ಞರನ್ನೊಳಗೊಂಡ ಸಮಿತಿಯು ಜಿಐ ಟ್ಯಾಗ್ ಪ್ರಸ್ತಾವಸಿದ್ಧಪಡಿಸಲು ಕಳೆದ 6 ತಿಂಗಳಿಂದ ವಿಜಯಪುರದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಮೇಲೆ ಅಧ್ಯಯನ ಕೈಗೊಂಡಿದೆ. ಈ ಭಾಗದ ದ್ರಾಕ್ಷಿಯು ವೈಜ್ಞಾನಿಕವಾಗಿ ಹಾಗೂ ಐತಿಹಾಸಿಕವಾಗಿ ಇತರೆ ಭಾಗದ ದ್ರಾಕ್ಷಿಗಿಂತ ವಿಭಿನ್ನ, ವಿಶೇಷತೆ ಹೊಂದಿದೆ ಎಂಬುದರ ಬಗ್ಗೆ ದಾಖಲೆ ಸಮೇತ ಮಾಹಿತಿ ಕಲೆಹಾಕುತ್ತಿದೆ.
ವಿಜಯಪುರ ದ್ರಾಕ್ಷಿಯು ಇತರೆ ಭಾಗದ ದ್ರಾಕ್ಷಿಗಿಂತ ವಿಶೇಷತೆ ಹೊಂದಿದ್ದರ ಬಗ್ಗೆ ತಾಂತ್ರಿಕವಾಗಿ ಹಾಗೂ ಐತಿಹಾಸಿಕ ದಾಖಲೆ ಒದಗಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ತಂಡವು ರೈತರಿಂದ ಮಾಹಿತಿ ಸಂಗ್ರಹ ಹಾಗೂ ಈ ಭಾಗದಲ್ಲಿ ದ್ರಾಕ್ಷಿ ಬೆಳೆ ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದರ ಬಗ್ಗೆ ಐತಿಹಾಸಿಕ ದಾಖಲೆಗಳನ್ನು ಹುಡುಕುತ್ತಿದೆ ಎಂದು ಸಮಿತಿಯ ಮುಖ್ಯಸ್ಥ ಡಾ.ಫಕ್ರುದ್ದೀನ್ ತಿಳಿಸಿದರು.
ಒಣದ್ರಾಕ್ಷಿಯಲ್ಲಿನ ಪೌಷ್ಟಿಕಾಂಶ ಹಾಗೂ ಅದರಲ್ಲಿ ಉಳಿದುಕೊಳ್ಳುವ ರಾಸಾಯನಿಕ ಅಂಶದ ಬಗ್ಗೆ ಪರೀಕ್ಷೆ ಆಗಬೇಕಿದೆ. ಇದು ಮಧ್ಯಪ್ರಾಚ್ಯ, ಯುರೋಪ್ ಹಾಗೂ ಉತ್ತರ ಅಮೆರಿಕ ರಾಷ್ಟ್ರಗಳಿಗೆ ರಫ್ತು ಮಾಡಲು ಸಹಕಾರಿಯಾಗಲಿದೆ. ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಆಗಾಗ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ತೋಟಗಾರಿಕೆ ವಿವಿ, ಸರಕಾರಿ ಸಂಸ್ಥೆಗಳು ಹಾಗೂ ರೈತ ಉತ್ಪಾದಕ ಕಂಪನಿಗಳ ಸಹಯೋಗದಲ್ಲಿ ಸಾವಯವ ದ್ರಾಕ್ಷಿ ಬೆಳೆಯಲು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯ ಪ್ರಗತಿಯಲ್ಲಿದೆ.
ವಿಜಯಪುರದ ದ್ರಾಕ್ಷಿ ಹಾಗೂ ಒಣದ್ರಾಕ್ಷಿಗೆ ಜಿಐ ಟ್ಯಾಗ್ ಪಡೆದುಕೊಳ್ಳಲು ತಜ್ಞರ ಸಮಿತಿಯಿಂದ ಅಧ್ಯಯನ, ತಾಂತ್ರಿಕ ಹಾಗೂ ಐತಿಹಾಸಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಸ್ತಾವನೆಗೆ ಸಿದ್ಧತೆ ಕೈಗೊಳ್ಳಲಾಗಿದೆ.
-ಡಾ.ಬಿ.ಫಕ್ರುದ್ದೀನ್, ಸಂಶೋಧನಾ ನಿರ್ದೇಶಕತೋಟಗಾರಿಕೆ ವಿವಿ






