ಸಿಮೆಂಟ್ ಕಾರ್ಖಾನೆಯ ಕಲುಷಿತ ನೀರು ಸೇವಿಸಿ ಬಾಲಕಿ ಮೃತ್ಯು

ಕಲಬುರಗಿ : ಸೇಡಂ ತಾಲೂಕಿನ ಮಳಖೇಡ್ ಗ್ರಾಪಂ ವ್ಯಾಪ್ತಿಯಲ್ಲ್‌ರುವ ಸಿಮೆಂಟ್ ಫ್ಯಾಕ್ಟರಿಯ ಕಲುಷಿತ ನೀರು ಸೇವಿಸಿ ಹುಡಾ-ಬಿ ಗ್ರಾಮದ 5 ವರ್ಷದ ಬಾಲಕಿ ಮೃತಪಟ್ಟು ವರ್ಷ ಕಳೆದರೂ ಬಾಲಕಿಯ ಕುಟುಂಬಕ್ಕೆ ಪರಿಹಾರ ಮತ್ತು ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಆಶ್ಚರ್ಯಕರ ಮಾಹಿತಿ ಬೆಳಕಿಗೆ ಬಂದಿದೆ.
2024 ಅಕ್ಟೋಬರ್ 29 ರಂದು ಮಳಖೇಡ್ ಪಂಚಾಯತ್ ವ್ಯಾಪ್ತಿಯ ಹುಡಾ-ಬಿ ಗ್ರಾಮದ ಭೀಮಾನಗರ ನಿವಾಸಿ ಮಮತಾ ತಂದೆ ಸುಭಾಷ್ ಜೋಗುರ್ ತಳವಾರ. ಗ್ರಾಮಕ್ಕೆ ಸರಬರಾಜಾಗಿರುವ ಕಾರ್ಖಾನೆಯ ಕಲುಷಿತ ನೀರು ಸೇವಿಸಿ ಅಸ್ವಸ್ಥಳಾಗಿ ಅಸುನಿಗಿದ್ದಳು. ಅಲ್ಲದೇ ಗ್ರಾಮದ 70ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಘಟನೆ ವರದಿಯಾಗಿತ್ತು.
ಸಿಮೆಂಟ್ ಕಾರ್ಖಾನೆಯು ತ್ಯಾಜ್ಯ ರಾಸಾಯನಿಕವನ್ನು ನದಿಗೆ ಬಿಡುತ್ತಿರುವುದು, ನದಿಯ ಕಲುಷಿತ ನೀರು ಸೇವಿಸಿ 5 ವರ್ಷದ ಬಾಲಕಿ ಮೃತಪಟ್ಟಿರುವುದು ಮತ್ತು ಹುಡಾ-ಬಿ ಗ್ರಾಮದ 200ಕ್ಕೂ ಹೆಚ್ಚು ನಿವಾಸಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವ ಬಗ್ಗೆ, ಸ್ಥಳೀಯ ಶಾಸಕರ ರಾಜಕೀಯ ಒತ್ತಡದಿಂದಾಗಿ, ಗ್ರಾಮಸ್ಥರು ದೂರು ನೀಡಲು ಹೆದರುತ್ತಿರುವ ಬಗ್ಗೆ ಜನತಾ ಪರಿವಾರ ಸಂಘಟನೆಯ ಮುಖಂಡರು ದೂರು ನೀಡಿದ್ದರು.
ಸೇಡಂ ಆಯುಕ್ತರು, ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ವೈದ್ಯಾಧಿಕಾರಿಗಳು ಮತ್ತು ಗ್ರಾ.ಪಂ. ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾರ್ಖಾನೆ ವತಿಯಿಂದ ಸರಬರಾಜಾಗುವ ಕಲುಷಿತ ನೀರು ಶುದ್ಧೀಕರಿಸಿದೆ ನದಿ ನೀರನ್ನು ನೇರವಾಗಿ ಸರಬರಾಜು ಮಾಡಿದ್ದು ಮತ್ತು ಬೋರವೆಲ್ ಹತ್ತಿರ ರೈಸಿಂಗ್ ಮೈನ್ ಪೈಪ್ ಲೈನ್ ಒಡೆದು ನೀರು ಸೋರಿಕೆಯಾಗಿರುವುದರಿಂದ ಈ ಘಟನೆ ನಡೆದಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ವೈದ್ಯಾಧಿಕಾರಿಗಳು ಜಂಟಿ ವರದಿ ಸರಕಾರಕ್ಕೆ ನೀಡಿದ್ದರು.
ವರದಿ ಬಂದ ಬಳಿಕವೂ ಇಲ್ಲಿವರಿಗೆ ಪೊಲೀಸರು ಬಾಲಕಿ ಮೃತಪಟ್ಟರು ಬಗ್ಗೆ ಪ್ರಕರಣ ದಾಖಲಿಸಿಕೊಂಡಿಲ್ಲ. ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಪರಿಶೀಲನಾ ವರದಿ ಆಧರಿಸಿ ಕಾರ್ಖಾನೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರಲ್ಲಿಯೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಿಂದೇಟು ಹಾಕಿರುವುದು ಮತ್ತು ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಜನತಾ ಪರಿವಾರ ಸಂಘಟನೆ ಮುಖಂಡ ಸಿರಾಜ್ ಶಾಬ್ದಿ ಆರೋಪಿಸಿದ್ದಾರೆ.
ಬಾಲಕಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಮೆಂಟ್ ಫ್ಯಾಕ್ಟರಿ, ತಾಲ್ಲೂಕು ಆರೋಗ್ಯ ಇಲಾಖೆ, ನೀರು ಸರಬರಾಜು ಮಂಡಳಿ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಶಾಸಕರ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇವೆ. ತಪ್ಪಿತಸ್ಥರೆಲ್ಲರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರಿಗೆ ಮತ್ತು ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಸುತ್ತೇವೆ.
-ಸಿರಾಜ್ ಶಾಬ್ದಿ, ಜಿಲ್ಲಾಧ್ಯಕ್ಷರು, ಜನತಾ ಪರಿವಾರ ಸಂಘಟನೆ ಕಲಬುರಗಿ
ಒಂದು ವರ್ಷದ ಹಿಂದೆ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಘಟನೆ ನಡೆದಿತ್ತು. ಈ ವೇಳೆ ತಾಲೂಕು ಆಡಳಿತ ಆರೋಗ್ಯ ಇಲಾಖೆ ಮತ್ತು ನೀರು ಸರಬರಾಜು ಮಂಡಳಿ ಮೂಲಕ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ಇಂತಹ ಘಟನೆ ಮರುಕಳಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಇಓ ಮೂಲಕ ಪಿಡಿಓಗೆ ನೋಟಿಸ್ ನೀಡಲು ಸೂಚನೆ ನೀಡಲಾಗಿತ್ತು. ಕೈಗೊಂಡಿರುವ ಕ್ರಮದ ಬಗ್ಗೆ ಗೊತ್ತಿಲ್ಲ. ಮೃತ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.
-ಶ್ರೀಯಾಂಕ್ ಧನಶ್ರೀ, ತಹಶೀಲ್ದಾರರು ಸೇಡಂ
ಸಿಮೆಂಟ್ ಫ್ಯಾಕ್ಟರಿಯ ರಾಸಾಯನಿಕ ನೀರು ಕುಡಿದು ತೀವ್ರ ಅಸ್ವಸ್ಥಳಾಗಿ ಮಗಳಾದ ಮಮತಾ (5) ಮೃತಪಟ್ಟು ವರ್ಷ ಕಳೆದಿದೆ. ಪೊಲೀಸರಿಗೂ ದೂರು ನೀಡಿದೆವು. ಇಲ್ಲಿಯವರೆಗೆ ಪ್ರಕರಣ ದಾಖಲಿಸಿಕೊಂಡಿಲ್ಲ. ಮಗಳ ಸಾವಿಗೆ ಕಾರಣ ಕುರಿತು ತನಿಖೆ ನಡೆಸಿಲ್ಲ. ಸಿಮೆಂಟ್ ಫ್ಯಾಕ್ಟರಿ ಸೇರಿ ಇತರರ ಒತ್ತಡಕ್ಕೆ ಒಳಗಾಗಿ ನಮ್ಮನ್ನು ಅನ್ಯಾಯಕ್ಕೆದೂಡಲಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ಒದಗಿಸಬೇಕು.
-ಸುಭಾಷ್ ಜೋಗುರ್ ತಳವಾರ, ಮೃತ ಬಾಲಕಿಯ ತಂದೆ







