ಅಗ್ನಿವೀರರ ಕನಸಿಗೆ ರೆಕ್ಕೆ: ಖಾಯಂ ಸೇರ್ಪಡೆಗೆ ಅವಕಾಶ!

ನಾಲ್ಕು ವರ್ಷಗಳ ಸೇವೆಯ ಬಳಿಕ, ಖಾಯಂ ನೇಮಕಾತಿ ಹೊಂದದ ಅಗ್ನಿವೀರರು ಬಯಸಿದರೆ ಇನ್ನೂ ಹೆಚ್ಚುವರಿ ಎರಡು ವರ್ಷಗಳ ಕಾಲ ಸೇವೆ ಮುಂದುವರಿಸಬಹುದು. ಈ ಹೆಚ್ಚುವರಿ ಎರಡು ವರ್ಷಗಳ ಸೇವೆಯ ಅಂತ್ಯದಲ್ಲಿ, ಅವರು ಮುಂದುವರಿಯಲು ಆಸಕ್ತಿ ಹೊಂದಿದ್ದು, ಸಾಮಾನ್ಯ ಆಯ್ಕೆ ಮಾನದಂಡಗಳನ್ನು ಪೂರೈಸಿದರೆ ಖಾಯಂ ಸೈನಿಕರಾಗುವ ಅವಕಾಶವೂ ಇದೆ. ಸರಳವಾಗಿ ಹೇಳುವುದಾದರೆ, ಅಗತ್ಯ ಸಾಮರ್ಥ್ಯವನ್ನು ಸಾಬೀತುಪಡಿಸಿದರೆ ಬಹುತೇಕ ಪ್ರತಿಯೊಬ್ಬ ಅಗ್ನಿವೀರನಿಗೂ ಸೈನಿಕ ಸಮವಸ್ತ್ರವನ್ನು ಶಾಶ್ವತವಾಗಿ ಧರಿಸುವ ಅವಕಾಶ ದೊರೆಯಲಿದೆ.
ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯು ಸೇನಾ ಶಿಬಿರಗಳಲ್ಲಿ ಕಠಿಣ ತರಬೇತಿ ಪಡೆಯುತ್ತಿರುವ ಮೂರು ಲಕ್ಷಕ್ಕೂ ಹೆಚ್ಚಿನ ಯುವಕ ಯುವತಿಯರಿಗೆ ನವೆಂಬರ್ 4ರ ಬುಧವಾರ ಒಂದು ಶುಭ ಸುದ್ದಿ ಲಭಿಸಿದೆ. ಕೇಂದ್ರ ಸಚಿವ ಸಂಪುಟ ತನ್ನ ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತಂದಿದ್ದು, ಇದು ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಅಗ್ನಿವೀರರಿಗೂ ಭಾರತದ ಖಾಯಂ ಯೋಧರಾಗುವ ನೈಜ ಅವಕಾಶ ಒದಗಿಸಲಿದೆ.
ಭಾರತೀಯ ಸೇನೆಯಲ್ಲಿ ಈಗಾಗಲೇ ಅಂದಾಜು 2.8 ಲಕ್ಷ ಅಗ್ನಿವೀರರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪೈಕಿ ಬಹುತೇಕ 19,000 ಜನರು ತಮ್ಮ ಮೊದಲ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದಾರೆ. ಹಳೆಯ ನಿಯಮಗಳ ಪ್ರಕಾರ, ನಾಲ್ಕು ವರ್ಷಗಳ ಸೇವೆಯ ಬಳಿಕ, ಅಗ್ನಿವೀರರ ಪೈಕಿ ಅತ್ಯುತ್ತಮ ಕಾರ್ಯನಿರ್ವಹಣೆ ನಡೆಸಿದ ಶೇ. 25 ಜನರು ಮಾತ್ರವೇ ಖಾಯಂ ಯೋಧರಾಗಿ ನೇಮಕಗೊಳ್ಳಲು ಅವಕಾಶವಿತ್ತು. ಅವರ ನೇಮಕಾತಿ ಯೋಧರ ಸಾಮರ್ಥ್ಯ ಮತ್ತು ಸೇನೆಯ ಅವಶ್ಯಕತೆಗಳನ್ನು ಅವಲಂಬಿಸಿತ್ತು. ಇನ್ನುಳಿದ ಶೇ. 75 ಅಗ್ನಿವೀರರಿಗೆ ಅವರ ಉಳಿತಾಯ ಮತ್ತು ಸರಕಾರದ ಪಾಲು ಸೇರಿ ಒಂದು ಇಡುಗಂಟು ಮೊತ್ತವನ್ನು ನೀಡಿ ಸೇನೆಯಿಂದ ಬೀಳ್ಕೊಡಲಾಗುತ್ತಿತ್ತು. ಸೇನೆಗೆ ಖಾಯಂ ನೇಮಕಾತಿಯ ಶೇ. 25 ಸಂಖ್ಯೆಯಲ್ಲಿ ಈಗ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಇನ್ನುಳಿದ ಶೇ. 75 ಅಗ್ನಿವೀರರಿಗೆ ಮಾತ್ರ ಹೊಸ ಹಾದಿ ತೆರೆಯಲಾಗಿದೆ.
ನಾಲ್ಕು ವರ್ಷಗಳ ಸೇವೆಯ ಬಳಿಕ, ಖಾಯಂ ನೇಮಕಾತಿ ಹೊಂದದ ಅಗ್ನಿವೀರರು ಬಯಸಿದರೆ ಇನ್ನೂ ಹೆಚ್ಚುವರಿ ಎರಡು ವರ್ಷಗಳ ಕಾಲ ಸೇವೆ ಮುಂದುವರಿಸಬಹುದು. ಈ ಹೆಚ್ಚುವರಿ ಎರಡು ವರ್ಷಗಳ ಸೇವೆಯ ಅಂತ್ಯದಲ್ಲಿ, ಅವರು ಮುಂದುವರಿಯಲು ಆಸಕ್ತಿ ಹೊಂದಿದ್ದು, ಸಾಮಾನ್ಯ ಆಯ್ಕೆ ಮಾನದಂಡಗಳನ್ನು ಪೂರೈಸಿದರೆ ಖಾಯಂ ಸೈನಿಕರಾಗುವ ಅವಕಾಶವೂ ಇದೆ. ಸರಳವಾಗಿ ಹೇಳುವುದಾದರೆ, ಅಗತ್ಯ ಸಾಮರ್ಥ್ಯವನ್ನು ಸಾಬೀತುಪಡಿಸಿದರೆ ಬಹುತೇಕ ಪ್ರತಿಯೊಬ್ಬ ಅಗ್ನಿವೀರನಿಗೂ ಸೈನಿಕ ಸಮವಸ್ತ್ರವನ್ನು ಶಾಶ್ವತವಾಗಿ ಧರಿಸುವ ಅವಕಾಶ ದೊರೆಯಲಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಇದು ಏಕಾಏಕಿ ಕೈಗೊಂಡ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅಗ್ನಿವೀರರ ಕಾರ್ಯಕ್ಷಮತೆಯನ್ನು ಸಶಸ್ತ್ರ ಪಡೆಗಳು ಗಮನಿಸುತ್ತಿವೆ. ಈ ಬದಲಾವಣೆಯು ಸೇನೆಯ ಯುವ ಸ್ವರೂಪವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಈಗಾಗಲೇ ತರಬೇತಿ ಪಡೆದಿರುವ ಅನುಭವಿ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಅಗ್ನಿವೀರರ ವೇತನವೂ ಹೆಚ್ಚಳ ಕಾಣಲಿದೆ. ಹೆಚ್ಚುವರಿ ಎರಡು ವರ್ಷಗಳ ಸೇವೆ ಸಲ್ಲಿಸುವುದನ್ನು ಆರಿಸುವ ಅಗ್ನಿವೀರರಿಗೆ ಮೊದಲ ವರ್ಷದಲ್ಲಿ 43,500 ರೂ. ವೇತನ ನೀಡಲಾಗುತ್ತದೆ. ಎರಡನೇ ವರ್ಷದಲ್ಲಿ ಅವರು 47,500 ರೂ. ವೇತನ ಗಳಿಸಲಿದ್ದಾರೆ. ಅಗ್ನಿವೀರರ ಮೊದಲ ತಂಡ 30,000 ರೂ.ಗಳ ವೇತನದೊಡನೆ ಕಾರ್ಯಾರಂಭಿಸಿದ್ದು, ಈ ವೇತನ ಈಗ ಸಾಕಷ್ಟು ಹೆಚ್ಚಳವಾಗಿರುವುದು ನಿಚ್ಚಳವಾಗಿ ತೋರುತ್ತಿದೆ.
ಈ ಬದಲಾವಣೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು, ಅಗ್ನಿಪಥ್ ಜಾರಿಗೆ ಬರುವ ಮೊದಲಿದ್ದ ನೇಮಕಾತಿ ವ್ಯವಸ್ಥೆಯನ್ನು ನೆನಪಿಸಿಕೊಳ್ಳಬೇಕು. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಸೇನಾ ನೇಮಕಾತಿ ಸ್ಥಗಿತಗೊಂಡಿತ್ತು. ಸಶಸ್ತ್ರ ಪಡೆಗಳು ಮತ್ತೆ ನೇಮಕಾತಿ ಆರಂಭಿಸಲು ಸಿದ್ಧವಾದಾಗ, ಆರು ತಿಂಗಳ ತರಬೇತಿ ಸೇರಿದಂತೆ ನಾಲ್ಕು ವರ್ಷಗಳ ಸೇವಾವಧಿಯ ಅಗ್ನಿಪಥ ಯೋಜನೆಯನ್ನು ಘೋಷಿಸಲಾಯಿತು. ಹೊಸ ಸೈನಿಕರು, ನಾವಿಕರು ಮತ್ತು ವಾಯುಸೇನೆಯ ಸಿಬ್ಬಂದಿ ಸೇರ್ಪಡೆಗೊಳ್ಳಲು ಇದು ಏಕೈಕ ಮಾರ್ಗವಾಯಿತು. ವೈದ್ಯಕೀಯ ವಿಭಾಗದ ತಾಂತ್ರಿಕ ಸಿಬ್ಬಂದಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದ್ದು, ಅವರನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಯೋಜನೆ ಮಹಿಳೆಯರಿಗೂ ಬಾಗಿಲು ತೆರೆದಿದ್ದು, ಅವರೀಗ ಅಗ್ನಿವೀರರ ರೂಪದಲ್ಲಿ ನೌಕಾಪಡೆ ಮತ್ತು ವಾಯುಪಡೆಗೆ ಸೇರ್ಪಡೆಯಾಗಬಹುದು. ಇನ್ನು ಭೂಸೇನೆ 2019ರಿಂದಲೇ ಮಹಿಳೆಯರನ್ನು ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ಗೆ ನೇಮಕಗೊಳಿಸಲು ಆರಂಭಿಸಿತ್ತು.
ಅಗ್ನಿವೀರ ಮತ್ತು ಖಾಯಂ ಸೈನಿಕನ ನಡುವಿನ ಬಹುದೊಡ್ಡ ವ್ಯತ್ಯಾಸವೆಂದರೆ ಪಿಂಚಣಿ. ಖಾಯಂ ಸೈನಿಕರಿಗೆ ನಿವೃತ್ತಿಯ ನಂತರ ಜೀವನಪರ್ಯಂತ ಪಿಂಚಣಿ ದೊರೆಯುತ್ತದೆ. ಆದರೆ, ನಾಲ್ಕು ವರ್ಷಗಳ ನಂತರ ಸೇವೆಯಿಂದ ನಿರ್ಗಮಿಸುವ ಅಗ್ನಿವೀರರಿಗೆ ಪಿಂಚಣಿ ಸೌಲಭ್ಯವಿರುವುದಿಲ್ಲ. ಆದರೆ, ಖಾಯಂ ಸೈನಿಕರಾಗಿ ಆಯ್ಕೆಯಾದವರು ತಮ್ಮ ಸೇವಾವಧಿ ಪೂರ್ಣಗೊಳಿಸಿ ನಿವೃತ್ತರಾದಾಗ ಪಿಂಚಣಿಗೆ ಅರ್ಹರಾಗುತ್ತಾರೆ. ಆದ್ದರಿಂದಲೇ ಈ ಬದಲಾವಣೆ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿರುವ ಕುಟುಂಬಗಳಿಗೆ ಮುಖ್ಯವೆನಿಸಿದೆ. ಕೆಲವೇ ವರ್ಷಗಳ ಉದ್ಯೋಗಾವಕಾಶಕ್ಕೂ ಜೀವನಪರ್ಯಂತದ ಆರ್ಥಿಕ ಭದ್ರತೆಗೂ ಇರುವ ವ್ಯತ್ಯಾಸ ಬಹಳ ಪ್ರಮುಖ ವಿಚಾರವೇ.
ಅಗ್ನಿವೀರರು ತಿಂಗಳಿಗೆ 30,000ದಿಂದ 40,000ರೂ.ಗಳ ತನಕ ಮಾಸಿಕ ವೇತನ ಪಡೆಯುತ್ತಾರೆ. ಅಪಾಯಕಾರಿ ಅಥವಾ ಕಠಿಣ ಪ್ರದೇಶಗಳಲ್ಲಿ ನಿಯೋಜನೆಗೊಂಡಾಗ ಹೆಚ್ಚುವರಿ ಭತ್ತೆಗಳೂ ಲಭ್ಯವಿರುತ್ತವೆ. ಇದರ ಜೊತೆಗೆ ‘ಸೇವಾ ನಿಧಿ’ ಎಂಬ ಯೋಜನೆಯೂ ಇದೆ. ಇದನ್ನು ಸರಕಾರ ಮತ್ತು ಯೋಧರು ಸಮಾನ ಮೊತ್ತವನ್ನು ಒದಗಿಸುವ ಜಂಟಿ ಉಳಿತಾಯ ಖಾತೆ ಎಂದು ಪರಿಗಣಿಸಬಹುದು. ಪ್ರತೀ ತಿಂಗಳು ಅಗ್ನಿವೀರರ ವೇತನದ ಶೇ. 30 ಮೊತ್ತವನ್ನು ಈ ನಿಧಿಗೆ ಜಮೆ ಮಾಡಲಾಗುತ್ತದೆ. ಸರಕಾರವೂ ಅಷ್ಟೇ ಮೊತ್ತವನ್ನು ತನ್ನ ಪಾಲಿನ ಕೊಡುಗೆಯಾಗಿ ಸೇರಿಸುತ್ತದೆ. ನಾಲ್ಕು ವರ್ಷಗಳ ಸೇವೆಯ ನಂತರ ಬಡ್ಡಿ ಸೇರಿದಂತೆ ಸುಮಾರು 11.71 ಲಕ್ಷ ರೂ. ಮೊತ್ತವನ್ನು ಅಗ್ನಿವೀರರು ಪಡೆಯುತ್ತಾರೆ. ಈ ಮೊತ್ತದಿಂದ ಆದಾಯ ತೆರಿಗೆಯೂ ಕಡಿತಗೊಳ್ಳುವುದಿಲ್ಲ.
ಇನ್ನು ಅಗ್ನಿವೀರರಿಗೆ ಅಪಾಯದಲ್ಲೂ ಆರ್ಥಿಕ ಭದ್ರತೆಯಿದೆ. ಕರ್ತವ್ಯದಲ್ಲಿರುವಾಗ ಅಗ್ನಿವೀರ ಮೃತಪಟ್ಟರೆ, ಅವರ ಕುಟುಂಬಕ್ಕೆ ಒಂದು ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಪರಿಹಾರ ದೊರೆಯುತ್ತದೆ. ಇದರಲ್ಲಿ ಸೇವಾ ನಿಧಿಯ ಮೊತ್ತದ ಜೊತೆಗೆ, ಅವರು ಸೇವಾವಧಿಯ ಉಳಿದ ಅವಧಿಯಲ್ಲಿ ಗಳಿಸಬಹುದಾಗಿದ್ದ ಪೂರ್ಣ ವೇತನವೂ ಸೇರಿರುತ್ತದೆ. ಸೇನಾ ಸೇವೆಯಲ್ಲಿ ಅಂಗವೈಕಲ್ಯ ಉಂಟಾದರೆ ಅಥವಾ ಉಲ್ಬಣಗೊಂಡರೆ, ಗಾಯದ ತೀವ್ರತೆಯನ್ನು ಆಧರಿಸಿ ಗರಿಷ್ಠ 44 ಲಕ್ಷ ರೂ. ತನಕ ಪರಿಹಾರ ನೀಡಲಾಗುತ್ತದೆ.
ಅಗ್ನಿವೀರರಾಗಲು ಅರ್ಜಿ ಸಲ್ಲಿಸಲು ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆಗಳು ನೇಮಕಾತಿಯ ವರ್ಷ ಹಾಗೂ ಸೇವಾ ವಿಭಾಗವನ್ನು ಅವಲಂಬಿಸಿ ಸ್ವಲ್ಪ ಬದಲಾಗಬಹುದು. ಆದ್ದರಿಂದ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ನೇಮಕಾತಿ ವೆಬ್ಸೈಟ್ನಲ್ಲಿ ಪ್ರಕಟವಾಗುವ ನಿಯಮಗಳನ್ನು ಪರಿಶೀಲಿಸಬೇಕು. ಸ್ಥೂಲವಾಗಿ ಹೇಳುವುದಾದರೆ, ಅಭ್ಯರ್ಥಿಗೆ ಕನಿಷ್ಠ 17 ವರ್ಷ 6 ತಿಂಗಳು ವಯಸ್ಸಾಗಿದ್ದು, ಗರಿಷ್ಠ ಮಿತಿ 21 ಅಥವಾ 22 ವರ್ಷಗಳಾಗಿರುತ್ತವೆ. ಇನ್ನು ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯೂ ಬದಲಾಗುತ್ತದೆ.
ಸಾಮಾನ್ಯ ಕರ್ತವ್ಯಕ್ಕೆ (ಜನರಲ್ ಡ್ಯೂಟಿ) 10ನೇ ತರಗತಿಯನ್ನು ಒಟ್ಟಾರೆ ಶೇ. 45 ಅಥವಾ ಪ್ರತೀ ವಿಷಯದಲ್ಲಿ ಕನಿಷ್ಠ ಶೇ. 33 ಅಂಕಗಳೊಡನೆ ಪೂರ್ಣಗೊಳಿಸಿರಬೇಕು. ತಾಂತ್ರಿಕ ಹುದ್ದೆಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಒಟ್ಟಾರೆ ಶೇ. 50 ಮತ್ತು ಪ್ರತೀ ವಿಷಯದಲ್ಲಿ ಶೇ. 40 ಅಂಕಗಳನ್ನು ಪಡೆದಿರಬೇಕು. ಕೆಲವು ನಿಯಮಗಳಡಿ ಹತ್ತನೇ ತರಗತಿಯ ನಂತರ ಒಂದು ವರ್ಷದ ಐಟಿಐ ಕೋರ್ಸ್ ಪೂರ್ಣಗೊಳಿಸಿದವರೂ ಅರ್ಹರಾಗಬಹುದು. ಕ್ಲರ್ಕ್ ಮತ್ತು ಸ್ಟೋರ್ ಕೀಪರ್ ತಾಂತ್ರಿಕ ಹುದ್ದೆಗಳಿಗೆ ಕಲಾ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯನ್ನು ಶೇ. 60 ಅಂಕದೊಡನೆ ಪೂರೈಸಿರಬೇಕು. ಟ್ರೇಡ್ಸ್ಮೆನ್ ಹುದ್ದೆಗೆ 10ನೇ ತರಗತಿ ಅಥವಾ 8ನೇ ತರಗತಿಯನ್ನು ಪ್ರತೀ ವಿಷಯದಲ್ಲೂ ಕನಿಷ್ಠ ಶೇ. 33 ಅಂಕದೊಡನೆ ಪೂರ್ಣಗೊಳಿಸಿರಬೇಕು.
ನಾಲ್ಕು ವರ್ಷಗಳ ಹಿಂದೆ, ಭಾರತೀಯ ಸೇನೆಯ ಮೂಲ ಸತ್ವವನ್ನು ಬದಲಿಸದೆ ಸೇನಾ ವಿಭಾಗಗಳನ್ನು ಯುವ ಪಡೆಗಳಾಗಿ ಮುಂದುವರಿಸಲು ಸಾಧ್ಯವೇ ಎನ್ನುವುದನ್ನು ಅರಿಯುವ ಪ್ರಯೋಗದ ರೂಪದಲ್ಲಿ ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈ ವಾರ ಸರಕಾರ ಕೈಗೊಂಡಿರುವ ನಿರ್ಣಯ ಅಗ್ನಿಪಥ್ ಯೋಜನೆಯ ಕರೆಗೆ ಓಗೊಟ್ಟ ಯುವ ಜನತೆಗೆ ಸೇನೆಯಲ್ಲಿ ಮುಂದುವರಿಯುವ ಇನ್ನೊಂದು ನ್ಯಾಯಯುತ ಅವಕಾಶ ಒದಗಿಸಲಿದೆ.






