ಪುಟ್ಟ ಬಾಲೆಯ ದೊಡ್ಡ ಸಾಧನೆಗೆ ಜಾಗತಿಕ ಮನ್ನಣೆ

ಆ ಬಾಲೆಗೆ ಇನ್ನೂ ಹದಿನೇಳೇ ವರ್ಷ. ಮಾಡಿದ್ದು ತನ್ನ ವಯಸ್ಸಿಗೆ ಮೀರಿದ ಸಾಮಾಜಿಕ ಸಾಧನೆ. ಹೆಸರು ದಿವಾ. ತಂದೆ ಉತ್ಕರ್ಷ ಬೆಂಗಳೂರಿನ ಪ್ರಸಿದ್ಧ ದಂತವೈದ್ಯರು.
ಇನ್ನೂ ಪರ್ಟಿಕ್ಯೂಲರ್ ಆಗಿ ಹೇಳಬೇಕೆಂದರೆ ಕನ್ನಡ ರಂಗಭೂಮಿಯಲ್ಲಿ ರಂಗ ಸಂಘಟಕರಾಗಿ ಹೆಸರು ಮಾಡಿರುವ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದ ಜೆ. ಲೋಕೇಶ್‌ರವರ ಮೊಮ್ಮಗಳು ದಿವಾ ಉತ್ಕರ್ಷ. ಈ ಹುಡುಗಿ ಅಜ್ಜ ಲೋಕೇಶ್‌ರವರಂತೆ ರಂಗಭೂಮಿಗೂ ಬರಲಿಲ್ಲ, ಅಜ್ಜಿಯಂತೆ ಚಿತ್ರಕಲಾವಿದೆಯೂ ಆಗಲಿಲ್ಲ. ತಂದೆಯಂತೆ ವೈದ್ಯಕೀಯ ರಂಗದಲ್ಲೂ ಆಸಕ್ತಿ ವಹಿಸಲಿಲ್ಲ. ಆದರೆ ಈ ಎಲ್ಲರೂ ಮಾಡದೇ ಇರುವಂತಹ ವಿಭಿನ್ನ ಕ್ಷೇತ್ರದಲ್ಲಿ ಅಂತರ್‌ರಾಷ್ಟ್ರೀಯವಾಗಿ ಹೆಸರು ಮಾಡಿದರು. ‘ಫೋಬ್ಸ್ ಅಂಡರ್ 30’ ಪಟ್ಟಿಯ ಸಾಮಾಜಿಕ ಪ್ರಭಾವ ವಿಭಾಗದಲ್ಲಿ ಸ್ಥಾನ ಪಡೆದರು. 2026ರಲ್ಲಿ ಈ ವಿಭಾಗದಲ್ಲಿ ಗುರುತಿಸಲ್ಪಟ್ಟ ಅತ್ಯಂತ ಕಿರಿಯ ಸಾಧಕಿ ಎಂದು ಹೆಸರಾದರು.
ಇಷ್ಟಕ್ಕೂ ಏನು ಸಾಧನೆ ಮಾಡಿದ್ದರು? ಅದ್ಯಾವ ಸಾಮಾಜಿಕ ವಿಭಾಗ? ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಾಗತಿಕವಾಗಿ ದೊಡ್ಡ ಸಾಧನೆ ಮಾಡಿದ್ದಾದರೂ ಹೇಗೆ?
ಆಗ ದಿವಾ ಇನ್ನೂ ಆರನೇ ತರಗತಿ ಓದುತ್ತಿದ್ದ 12 ವರ್ಷದ ಪುಟ್ಟ ಹುಡುಗಿ. ಅವಳಿಗೊಬ್ಬ 9 ವರ್ಷದ ಪುಟ್ಟ ತಮ್ಮ, ಹೆಸರು ಸೂರ್ಯ. ಇಷ್ಟು ಚಿಕ್ಕ ವಯಸ್ಸಿನ ಬಾಲಕನಿಗೆ ಮಧುಮೇಹ ಎನ್ನುವ ದೊಡ್ಡವರಿಗೆ ಬರುವ ಸಕ್ಕರೆ ಕಾಯಿಲೆ ಇರುವುದು ಗೊತ್ತಾಗಿ ಇಡೀ ಕುಟುಂಬಕ್ಕೆ ಬಲು ದೊಡ್ಡ ಆಘಾತ. ಆವತ್ತಿನಿಂದ ನಿಯಮಿತವಾಗಿ ಆ ಕಂದನ ರಕ್ತದಲ್ಲಿನ ಸಕ್ಕರೆ ಮಟ್ಟದ ತಪಾಸಣೆ, ಪ್ರತೀ ದಿನ ಇನ್ಸುಲಿನ್ ಇಂಜೆಕ್ಷನ್, ಆಹಾರದಲ್ಲಿ ಕಟ್ಟು ನಿಟ್ಟಾದ ಪಥ್ಯ, ಕಟ್ಟುಪಾಡಿನ ಜೀವನ ಶೈಲಿ, ನಿಯಮಿತವಾಗಿ ಆಸ್ಪತ್ರೆ ಚಿಕಿತ್ಸೆ.. ಆ ಮಗು ಅದು ಹೇಗೆ ಎಲ್ಲವನ್ನೂ ಸಹಿಸಿಕೊಂಡಿತೋ?
ಆದರೆ.. ಆಡುತ್ತಾ ಬೆಳೆಯಬೇಕಾದ ಪುಟ್ಟ ತಮ್ಮನಿಗೆ ತಗುಲಿದ ಅಕಾಲಿಕ ಕಾಯಿಲೆಯ ಕುರಿತು ಅತೀ ಹೆಚ್ಚು ಆತಂಕಪಟ್ಟಿದ್ದು ಅಕ್ಕ ದಿವಾ.
ತಾವೇನೋ ಸ್ಥಿತಿವಂತರಾಗಿದ್ದೇವೆ, ತಂದೆ ತಾಯಿ ವೈದ್ಯರಾಗಿದ್ದಾರೆ, ತಾತನಿಗೂ ಉತ್ತಮ ಹೆಸರಿದೆ. ಸೂರ್ಯನಿಗೆ ಕವಿದಿರುವ ಮಧುಮೇಹ ಎನ್ನುವ ಮೋಡವನ್ನು ದೂರಮಾಡಬಹುದು. ಉತ್ತಮ ಚಿಕಿತ್ಸೆ ಕೊಡಿಸಬಹುದು. ಆದರೆ.. ತಮ್ಮನ ವಯಸ್ಸಿನ ಅದೆಷ್ಟು ಮಕ್ಕಳಿಗೆ ಈ ಕಾಯಿಲೆ ಬಾಧಿಸಿರಬಹುದು, ಅವರೆಲ್ಲಾ ಚಿಕಿತ್ಸೆಗಾಗಿ ಅದೆಷ್ಟು ಬಾಧೆ ಪಟ್ಟಿರಬಹುದು ಎನ್ನುವ ಆತಂಕ ಎಡಬಿಡದೇ ಕಾಡಿದ್ದು ಆರನೇ ಕ್ಲಾಸಿನ ಅಪ್ರಾಪ್ತ ವಯಸ್ಸಿನ ದಿವಾಳಿಗೆ.
ಯಾವಾಗ ಈ ಆತಂಕ ಕಾಡತೊಡಗಿತೋ ಆಗ ಸೈಲೆಂಟಾಗಿ ಸತಾಯಿಸುವ ಟೈಪ್ 1 ಮಧುಮೇಹ ಎನ್ನುವ ಕಾಯಿಲೆ ಬಗ್ಗೆ ತಿಳಿದುಕೊಳ್ಳತೊಡಗಿದ ದಿವಾ ಆಸ್ಪತ್ರೆಗಳಲ್ಲಿ ಈ ಕಾಯಿಲೆ ಪೀಡಿತ ಮಕ್ಕಳು ಹಾಗೂ ಪೋಷಕರ ಸಂಕಷ್ಟವನ್ನು ಕಣ್ಣಾರೆ ಕಂಡು ನೊಂದುಕೊಂಡಳು. ಈ ಕಾಯಿಲೆ ಮಕ್ಕಳ ಆರೋಗ್ಯದ ಮೇಲೆ, ಆ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಎಷ್ಟೆಲ್ಲಾ ನಕಾರಾತ್ಮಕ ಪರಿಣಾಮ ಬೀಳುತ್ತದೆ ಎಂದು ತಿಳಿದು ತಲ್ಲಣಗೊಂಡ ದಿವಾ ಏನಾದರೂ ಮಾಡಬೇಕೆಂದು ನಿರ್ಧರಿಸಿದಳು. ಆಗ ತನ್ನ ತಮ್ಮ ಸೂರ್ಯನ ಹೆಸರಲ್ಲಿ ಆರಂಭಿಸಿದ್ದೇ ‘ಪ್ರಾಜೆಕ್ಟ್ ಸೂರ್ಯ’.
ಚಿಕ್ಕ ಹುಡುಗಿಯ ದೊಡ್ಡ ಯೋಚನೆಗೆ ಸ್ನೇಹಿತರು ಹಾಗೂ ಕುಟುಂಬದವರು ಕೈಜೋಡಿಸಿದರು. ಯೋಚನೆ ಯೋಜನೆಯಾಯಿತು, ಯೋಜನೆ ನಿಧಾನಕ್ಕೆ ಚಳವಳಿಯಾಯಿತು.
ಐದು ವರ್ಷಗಳ ಹಿಂದೆ ಆರಂಭವಾದ ‘ಪ್ರಾಜೆಕ್ಟ್ ಸೂರ್ಯ’ ಇಲ್ಲಿವರೆಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಸಹಾಯ ಹಸ್ತ ಚಾಚಿದೆ. ಟೈಪ್ 1 ಮಧುಮೇಹದಿಂದ ಬಳಲುತ್ತಿರುವ ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನೆರವಾಗಿದೆ. ಇಲ್ಲಿವರೆಗೂ ರೂ. 20 ಲಕ್ಷಕ್ಕೂ ಹೆಚ್ಚು ನಿಧಿಯನ್ನು ಸಂಗ್ರಹಿಸಿದೆ. ಅಗತ್ಯ ಇರುವವರಿಗೆ ಇನ್ಸುಲಿನ್, ಗ್ಲುಕೋಸ್, ಮಾನಿಟರಿಂಗ್ ಸಾಧನಗಳನ್ನು ಕೊಡಮಾಡಿದೆ. ಬೇಕಾದ ವೈದ್ಯಕೀಯ ನೆರವನ್ನೂ ತಲುಪಿಸಿದೆ. ದಿವಾ ನೇತೃತ್ವದ ‘ಪ್ರಾಜೆಕ್ಟ್ ಸೂರ್ಯ’ದಲ್ಲಿ 120ಕ್ಕೂ ಹೆಚ್ಚು ಸ್ವಯಂಸೇವಕರು ದೇಶಾದ್ಯಂತ ಸ್ವಾರ್ಥರಹಿತವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಮುಂಬೈ, ದಿಲ್ಲಿ, ವಾರಣಾಸಿ, ಘಾಝಿಯಾಬಾದ್‌ನಲ್ಲಿ ಶಾಖೆಗಳಿವೆ. ಅಷ್ಟೇ ಅಲ್ಲ... ಅಮೆರಿಕ, ಕೆನಡಾ, ಮೊರಾಕ್ಕೊ, ಯುಎಇ, ನೈಜೀರಿಯಾದಲ್ಲೂ ಚಟುವಟಿಕೆಗಳನ್ನು ವಿಸ್ತರಿಸಲಾಗಿದೆ.
ಮಾಹಿತಿ ಕೊರತೆ, ಮೂಢನಂಬಿಕೆ ಹಾಗೂ ಆರ್ಥಿಕ ಸಮಸ್ಯೆಗಳಿಂದಾಗಿ ಅದೆಷ್ಟೋ ಜನರು ಸಕಾಲದಲ್ಲಿ ಚಿಕಿತ್ಸೆ ಪಡೆಯಲಾಗದೆ ಪರದಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ, ಜಾಗೃತಿ ಮೂಡಿಸಿ, ಚಿಕಿತ್ಸೆಗೆ ಸಹಾಯ ಮಾಡುವ ಸ್ತುತ್ಯರ್ಹ ಕೆಲಸವನ್ನು ‘ಪ್ರಾಜೆಕ್ಟ್ ಸೂರ್ಯ’ ಮಾಡುತ್ತಿದೆ.
ಇದುವರೆಗೂ ಇನ್ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಮಧುಮೇಹ ಕುರಿತು ತಿಳುವಳಿಕೆ ಹಾಗೂ ತರಬೇತಿ ನೀಡಲಾಗಿದೆ. ಉಚಿತ ಆರೋಗ್ಯ ಶಿಬಿರಗಳು ಹಾಗೂ ಸಮುದಾಯ ಕಾರ್ಯಾಗಾರಗಳ ಮೂಲಕ ಜನರಲ್ಲಿ ಮಧುಮೇಹದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಕೊಡಮಾಡುವ ತರಬೇತಿಯಲ್ಲಿ ಮಧುಮೇಹ ಕುರಿತ ಶಿಕ್ಷಣವನ್ನು ಕಡ್ಡಾಯಗೊಳಿಸುವುದು ಹಾಗೂ ಅಗತ್ಯ ಇರುವವರಿಗೆ ಇನ್ಸುಲಿನ್ ಹಾಗೂ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಲಭ್ಯತೆಯನ್ನು ಖಚಿತ ಪಡಿಸುವುದು ‘ಪ್ರಾಜೆಕ್ಟ್ ಸೂರ್ಯ’ದ ಮುಂದಿನ ಗುರಿಗಳಾಗಿವೆ. ಈ ಕುರಿತು ಸರಕಾರದೊಂದಿಗೆ ಮಾತುಕತೆಗಳು ಜಾರಿಯಲ್ಲಿವೆ.
ದಿವಾರವರ ಇಚ್ಛಾಶಕ್ತಿ ಹಾಗೂ ಸಾಮಾಜಿಕ ಕಾಳಜಿಯ ನಿಸ್ವಾರ್ಥ ಕಾಯಕಕ್ಕೆ ಅಂತರ್‌ರಾಷ್ಟ್ರೀಯ ಮಾನ್ಯತೆ ದೊರೆತಿದೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರ್‌ರಾಷ್ಟ್ರೀಯ ಮಧುಮೇಹ ಒಕ್ಕೂಟ ಆಯೋಜಿಸಿದ್ದ ವೇದಿಕೆಯಲ್ಲಿ ‘ಪ್ರಾಜೆಕ್ಟ್ ಸೂರ್ಯ’ದ ಸೇವಾ ಕಾರ್ಯವೈಖರಿಯನ್ನು ಪ್ರಸ್ತುತಪಡಿಸಲಾಗಿದೆ.
ದಿವಾ ಸಾಧನೆಗೆ 2023ರಲ್ಲಿ ಡಯಾನಾ ಪ್ರಶಸ್ತಿ ದೊರೆತಿದೆ. 140 ದೇಶಗಳಿಂದ ಆಯ್ಕೆಯಾದ ‘ಚೆಗ್ ಗ್ಲೋಬಲ್ ಸ್ಟೂಡೆಂಟ್ ಪ್ರೈಸ್’ನಲ್ಲಿ ಜಾಗತಿಕವಾಗಿ ಹತ್ತು ಫೈನಲಿಸ್ಟ್‌ಗಳಲ್ಲಿ ದಿವಾ ಸ್ಥಾನ ಪಡೆದು ಭಾರತದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಆಮ್ ಸ್ಟರ್ ಡ್ಯಾಮ್‌ನಲ್ಲಿ ನಡೆದ ‘ವಿಶ್ವ ಸುಸ್ಥಿರತೆ’ ಪ್ರಶಸ್ತಿಯೂ ದಿವಾರವರಿಗೆ ದೊರಕಿದೆ. ಈಗ ಫೋರ್ಬ್ಸ್ ಅಂಡರ್ 30 ಏಶ್ಯ ಪಟ್ಟಿಯಲ್ಲಿ ಈ 17ರ ಬಾಲೆ ಸ್ಥಾನ ಪಡೆದು ದೇಶಕ್ಕೂ, ರಾಜ್ಯಕ್ಕೂ ಕುಟುಂಬಕ್ಕೂ ಹೆಮ್ಮೆ ತಂದಿದ್ದಾರೆ.
ದಿವಾ ರಾಜ್ಯಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ್ತಿ. ಅದರಲ್ಲೇ ಮುಂದುವರಿದು ಸಾಧನೆ ಮಾಡುವ ಸಾಧ್ಯತೆ ಇದ್ದರೂ ಮಧುಮೇಹ ಪೀಡಿತರ ಸೇವೆಗಾಗಿ ತಮ್ಮನ್ನು ತೊಡಗಿಸಿ ಕೊಂಡರು. ಈಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾ ನಿಲಯವಾದ ಜಾರ್ಜಿಯ ಟೆಕ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆಯಲು ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವ ದಿವಾಳಿಗೆ ಶುಭವಾಗಲಿ ಹಾಗೂ ಅವರ ಬದುಕು ಮತ್ತು ಸಾಧನೆ ಯುವಜನರಿಗೆ ಮಾದರಿಯಾಗಲಿ. ಅನಾರೋಗ್ಯದ ಆತಂಕದಲ್ಲಿ ಅಸಹಾಯಕರಾದವರ ಕತ್ತಲ ಬದುಕಿಗೆ ‘ಪ್ರಾಜೆಕ್ಟ್ ಸೂರ್ಯ’ ಬೆಳಕಾಗಲಿ.






