ಅಗ್ಗದ ಚೀನೀ ಎಐಗೆ ಜೈ ಎಂದ ಗ್ಲೋಬಲ್ ಸೌತ್

ಎಐ ಸ್ಪರ್ಧೆ ಎನ್ನುವುದು ಇಂದು ಯಾರ ಬಳಿ ಅತ್ಯಂತ ಶಕ್ತಿಶಾಲಿ ಚಿಪ್ ಇದೆ, ಯಾರ ಬಳಿ ಅತ್ಯಂತ ಬುದ್ಧಿಶಾಲಿ ಎಐ ಮಾಡೆಲ್ ಇದೆ ಎನ್ನುವುದಕ್ಕೆ ಸೀಮಿತವಾಗಿಲ್ಲ. ಇದು ಯಾರ ಎಐ ಜಗತ್ತಿಗೆ ದಿನಬಳಕೆಗೆ ಸೂಕ್ತ ಎನ್ನುವ ಅಂಶವನ್ನೂ ಒಳಗೊಂಡಿದೆ. ಒಂದು ವೇಳೆ ಚೀನೀ ಎಐ ಮೌನವಾಗಿಯೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೊದಲ ಆಯ್ಕೆಯಾದರೆ, ಬೀಜಿಂಗ್ ಮುಂದಿನ ಹಲವು ದಶಕಗಳ ಕಾಲ ಬಲವಾದ ಜಾಗತಿಕ ಪ್ರಭಾವ ಹೊಂದಿರಲಿದೆ.
ನೀವು ಅಮೆರಿಕ ಅಥವಾ ಯುರೋಪ್‌ನಲ್ಲಿ ಯಾವ ಎಐ ಟೂಲ್ ಇಂದು ಅತ್ಯಂತ ಜನಪ್ರಿಯ ಎಂದು ಪ್ರಶ್ನಿಸಿದರೆ, ಅಲ್ಲಿನ ಜನರು ತಕ್ಷಣವೇ ಚಾಟ್ ಜಿಪಿಟಿ, ಕ್ಲಾಡ್ ಅಥವಾ ಜೆಮಿನಿ ಎನ್ನುತ್ತಾರೆ. ಆದರೆ, ಆಶ್ಚರ್ಯಕರ ವಿಚಾರವೆಂದರೆ, ಈ ಪ್ರಶ್ನೆಯ ನೈಜ ಉತ್ತರವನ್ನು ನಮ್ಮಲ್ಲಿ ಬಹುತೇಕರು ಕೇಳದಿರುವ ಸಾಧ್ಯತೆಗಳೂ ಇವೆ. ಕಳೆದ ಎರಡು ವಾರಗಳ ಅವಧಿಯಲ್ಲಿ, ಜಗತ್ತಿನಲ್ಲಿ ಅತ್ಯಧಿಕ ಬಳಕೆಯಾಗಿರುವ ಎಐ ಮಾಡೆಲ್ ಎಂದರೆ ಅದು ಕಿಮಿ ಕೆ2.6 ಎನ್ನುವ ಓಪನ್ ಸೋರ್ಸ್ ಚೀನೀ ಎಐ ಮಾಡೆಲ್ ಆಗಿದೆ. ಯಾವ ಎಐ ಮಾಡಲ್ ಅತ್ಯಧಿಕವಾಗಿ ಬಳಕೆಯಾಗುತ್ತಿದೆ ಎನ್ನುವುದನ್ನು ಗಮನಿಸುವ ಓಪನ್ ರೂಟರ್ ಎನ್ನುವ ಜಾಲತಾಣದಲ್ಲಿ ಕಿಮಿ ಕೆ2.6 ಎಲ್ಲಕ್ಕಿಂತ ಅಗ್ರ ಸ್ಥಾನದಲ್ಲಿತ್ತು.
ಇದು ನಿಜಕ್ಕೂ ಒಂದು ಎಚ್ಚರಿಕೆಯ ಕರೆ. ಪಾಶ್ಚಾತ್ಯ ನಾಯಕರು ಮತ್ತು ದೊಡ್ಡ ಕಂಪೆನಿಗಳು ಯಾರ ಬಳಿ ಅತ್ಯಂತ ಶಕ್ತಿಯುತ ಎಐ ಇದೆ, ಯಾರ ಬಳಿ ಅತ್ಯಂತ ಆಧುನಿಕ ಕಂಪ್ಯೂಟರ್ ಚಿಪ್‌ಗಳಿವೆ ಎಂದು ಕಿತ್ತಾಟದಲ್ಲಿ ತೊಡಗಿದ್ದಾರೆ. ಅವರೆಲ್ಲರೂ ಒಂದೇ ದಿಕ್ಕಿನತ್ತ ನೋಟ ಹರಿಸಿರುವಾಗ, ಚೀನಾ ಮೌನವಾಗಿಯೇ ಇನ್ನೊಂದು ದಿಕ್ಕಿನತ್ತ ಸಾಗಿ, ನೈಜ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.
ಚೀನಾದ ಯೋಜನೆ ಮತ್ತು ಯೋಚನೆ ಬಹಳ ಬುದ್ಧಿಶಾಲಿ ಮತ್ತು ಸರಳವಾಗಿದೆ. ಅತ್ಯಂತ ದುಬಾರಿ ಅಥವಾ ಅತ್ಯಂತ ಆಧುನಿಕ ಎಐಯನ್ನು ನಿರ್ಮಿಸುವ ಬದಲು, ಚೀನಾ ಈಗ ಓಪನ್ ಸೋರ್ಸ್ ಎಐ ಮಾಡೆಲ್‌ಗಳ ನಿರ್ಮಾಣದಲ್ಲಿ ತೊಡಗಿದೆ. ಓಪನ್ ಸೋರ್ಸ್ ಎಂದರೆ, ಈ ಸಾಫ್ಟ್ ವೇರ್ ಉಚಿತವಾಗಿದ್ದು, ಇದನ್ನು ಯಾರು ಬೇಕಾದರೂ ಡೌನ್‌ಲೋಡ್ ಮಾಡಬಹುದು, ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಿ ಬಳಕೆ ಮಾಡಬಹುದು. ಈ ಚೀನೀ ಎಐ ಮಾದರಿಗಳು ಬಹಳ ಅಗ್ಗವಾಗಿದ್ದು, ದೈನಂದಿನ ಕೆಲಸಗಳಿಗೆ ಸಾಕಾಗುವಂತಿವೆ. ಅದರೊಡನೆ, ಇವು ಎಲ್ಲರಿಗೂ ಸುಲಭವಾಗಿ ಲಭಿಸುತ್ತವೆ.
ಇದನ್ನು ಒಂದು ನೈಜ ಉದಾಹರಣೆಯೊಡನೆ ಗಮನಿಸೋಣ. ಕಿಮಿ ಕೆ2.6 ಅನ್ನು ಮೂನ್‌ಶಾಟ್ ಎಐ ಎನ್ನುವ ಚೀನೀ ಕಂಪೆನಿ ನಿರ್ಮಿಸಿದೆ. ಇದು ಸಾಮರ್ಥ್ಯ ಪರೀಕ್ಷೆಗಳಲ್ಲಿ ಕ್ಲಾಡ್ ಓಪಸ್ 4 ಮತ್ತು ಜಿಪಿಟಿ-5.5ನಂತಹ ಉನ್ನತ ಎಐ ಮಾಡೆಲ್‌ಗಳಿಗೆ ಸಮನಾಗಿ ಕಾರ್ಯಾಚರಿಸಿದೆ. ಆದರೆ, ಇವುಗಳ ನಡುವಿನ ಬೆಲೆಯ ವ್ಯತ್ಯಾಸ ಅಗಾಧವಾಗಿದೆ. ಕಿಮಿ 1 ಮಿಲಿಯನ್ ಔಟ್‌ಪುಟ್ ಟೋಕನ್‌ಗಳಿಗೆ ಕೇವಲ ಅಂದಾಜು 4 ಡಾಲರ್ ಬೆಲೆ ಹೊಂದಿದೆ. ಟೋಕನ್‌ಗಳೆಂದರೆ ಸಣ್ಣ ಶಬ್ದಗಳ ತುಣುಕುಗಳಾಗಿದ್ದು, ಇವುಗಳನ್ನು ಎಐ ಓದಲು ಮತ್ತು ಬರೆಯಲು ಬಳಸುತ್ತದೆ. ಆದರೆ, ಅಮೆರಿಕನ್ ಮಾಡೆಲ್‌ಗಳು ಇದಕ್ಕೆ ಹೋಲಿಸಿದರೆ ಆರರಿಂದ ಎಂಟು ಪಟ್ಟು ದುಬಾರಿಯಾಗಿವೆ. ಸಾಮಾನ್ಯ ವ್ಯಕ್ತಿಗೆ ಇದು ಮುಖ್ಯವಾಗದಿರಬಹುದು. ಆದರೆ, ಪ್ರತಿದಿನವೂ ನೂರಾರು ಎಐ ಬಾಟ್‌ಗಳನ್ನು ಕಾರ್ಯಾಚರಿಸುವ ಕಂಪೆನಿಯೊಂದನ್ನು ಊಹಿಸಿಕೊಳ್ಳಿ. ಅವುಗಳಿಗೆ ಇದರಿಂದ ಆಗುವ ಉಳಿತಾಯ ಅಗಾಧವಾಗಿದ್ದು, ಅವು ಸಹಜವಾಗಿಯೇ ಕಡಿಮೆ ಬೆಲೆಯ ಆಯ್ಕೆಯನ್ನೇ ಆರಿಸುತ್ತವೆ.
ಹಾಗೆಂದು ಇಲ್ಲಿ ಕಿಮಿ ಮಾತ್ರ ಇಷ್ಟು ಮೇಲುಗೈ ಸಾಧಿಸಿರುವುದಲ್ಲ. ಅಲಿಬಾಬಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕ್ವೆನ್ ಎನ್ನುವ ಇನ್ನೊಂದು ಚೀನೀ ಎಐ ಸಹ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಮಾರ್ಚ್ ವೇಳೆಗೆ ಕ್ವೆನ್ ಓಪನ್ ಸೋರ್ಸ್ ಎಐ ಮಾಡೆಲ್‌ಗಳ ಒಟ್ಟು ಡೌನ್‌ಲೋಡ್ ಪ್ರಮಾಣದಲ್ಲಿ ಶೇ. 50ಕ್ಕೂ ಹೆಚ್ಚಿನ ಪಾಲು ಹೊಂದಿದ್ದು, ತನ್ನ ಅತಿದೊಡ್ಡ ಪಾಶ್ಚಾತ್ಯ ಪ್ರತಿಸ್ಪರ್ಧಿಯಾದ ಮೆಟಾದ ಲ್ಲಾಮಾವನ್ನೂ ಹಿಂದಿಕ್ಕಿತ್ತು. ಕ್ವೆನ್ ಈಗಾಗಲೇ ಜಗತ್ತಿನಾದ್ಯಂತ ಒಂದು ಬಿಲಿಯನ್‌ಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ಸಿಂಗಾಪುರದ ಸರಕಾರವೂ ಸಹ ಲ್ಲಾಮಾ ಬದಲು ಕ್ವೆನ್ ಮೂಲಕವೇ ತನ್ನ ಸ್ವಂತ ರಾಷ್ಟ್ರೀಯ ಎಐ ವ್ಯವಸ್ಥೆಯನ್ನು ನಿರ್ಮಿಸಲು ಆರಂಭಿಸಿತ್ತು. ಸಿಂಗಾಪುರಕ್ಕೆ ತನ್ನ ಎಐ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಬೇಕಿದ್ದರಿಂದ ಇದು ಸರಿಯಾದ ಪ್ರಾಯೋಗಿಕ ನಿರ್ಧಾರವಾಗಿತ್ತು.
ಚೀನಾ ಈಗ ಮಾಡುತ್ತಿರುವ ಕೆಲಸ ಅದರ ಪ್ರಸಿದ್ಧ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್‌ನ (ಬಿಆರ್‌ಐ) ಹೊಸ ಆವೃತ್ತಿಯಂತೆ ಕಾಣುತ್ತಿದೆ. ಈ ಹಿಂದೆ ಚೀನಾ ವಿವಿಧ ದೇಶಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಅಲ್ಲಿ ಬಂದರುಗಳು, ರಸ್ತೆಗಳು ಮತ್ತು ರೈಲ್ವೆ ಮಾರ್ಗಗಳನ್ನು ನಿರ್ಮಿಸುತ್ತಿತ್ತು. ಈಗಲೂ ಚೀನಾ ಅದೇ ಕೆಲಸ ಮುಂದುವರಿಸಿದ್ದರೂ ರಸ್ತೆ, ಬಂದರುಗಳ ಬದಲು ಡಿಜಿಟಲ್ ವ್ಯವಸ್ಥೆಗಳನ್ನು ಬಳಸುತ್ತಿದೆ. ಇಲ್ಲಿ ಚೀನಾಗಿರುವ ಪ್ರಯೋಜನವೆಂದರೆ, ಈ ಡಿಜಿಟಲ್ ವಿಸ್ತರಣೆ ಅದಕ್ಕೆ ಬಹುತೇಕ ಉಚಿತವೇ ಆಗಿದೆ. ಎಐಯನ್ನು ಬಳಸುವ ದೇಶವು ಸರ್ವರ್‌ಗಳು ಮತ್ತು ವಿದ್ಯುತ್ ಶಕ್ತಿಗೆ ಹಣ ಪಾವತಿಸುತ್ತದೆ. ಮೇಲ್ನೋಟಕ್ಕೆ ಇದರಲ್ಲಿ ಯಾವುದೇ ದೊಡ್ಡ ಯೋಜನೆ ಕಂಡುಬರದಿರುವುದರಿಂದ, ಯಾವುದೇ ಪ್ರತಿಭಟನೆಗಳಾಗಲಿ, ರಾಜಕೀಯ ತೊಂದರೆಗಳಾಗಲಿ ಉಂಟಾಗುವುದಿಲ್ಲ. ಚೀನಾ ಯಾವುದೇ ಗದ್ದಲವಿಲ್ಲದೆ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ.
ಚೀನಾ ‘ಸ್ಟ್ಯಾಂಡರ್ಡ್ಸ್ 2035’ ಎನ್ನುವ ದೊಡ್ಡ ಗುರಿಯೊಂದನ್ನು ಹಾಕಿಕೊಂಡಿದೆ. ಈ ಯೋಜನೆ ಚೀನಾದ ತಂತ್ರಜ್ಞಾನವನ್ನು ಎಲ್ಲೆಡೆಯೂ ಮೊದಲ ಆದ್ಯತೆಯನ್ನಾಗಿಸುವ ಉದ್ದೇಶ ಹೊಂದಿದೆ. ಒಂದು ಬಾರಿ ಉದ್ಯಮಗಳು ಚೀನೀ ಎಐ ಬಳಸಿಕೊಂಡು ತಮ್ಮ ವ್ಯವಸ್ಥೆಗಳನ್ನು ನಿರ್ಮಿಸಲು ಆರಂಭಿಸಿದರೆ, ಅವು ಸಹಜವಾಗಿಯೇ ಚೀನಾದ ನಿಯಮಗಳು ಮತ್ತು ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ನಿಧಾನವಾಗಿ ಚೀನಾದ ಮಾನದಂಡಗಳೇ ಜಾಗತಿಕ ಮಾನದಂಡಗಳಾಗುತ್ತವೆ. ಚೀನಾ ಈಗಾಗಲೇ ತನ್ನ ಉಚಿತ ಸಾಗಣಿಕಾ ಸಾಫ್ಟ್‌ವೇರ್ ಆಗಿರುವ ಲಾಜಿಂಕ್ ಮೂಲಕ ಈ ಕೆಲಸ ಆರಂಭಿಸಿದೆ. ಚೀನಾದ ಸಾಫ್ಟ್‌ವೇರ್ ಇಂದು 24 ರಾಷ್ಟ್ರಗಳ 86 ಬಂದರುಗಳಲ್ಲಿ ಬಳಕೆಯಾಗುತ್ತಿದೆ.
ಇಲ್ಲಿನ ನೈಜ ಯುದ್ಧರಂಗವೆಂದರೆ ಗ್ಲೋಬಲ್ ಸೌತ್. ಇದು ಏಶ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಗಳ ದೇಶಗಳನ್ನು ಒಳಗೊಂಡಿದೆ. ಪಾಶ್ಚಾತ್ಯ ದೇಶಗಳು ಈಗಾಗಲೇ ಅಮೆರಿಕನ್ ಎಐ ಬಳಸುತ್ತಿದ್ದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇನ್ನೂ ಈ ಕುರಿತು ನಿರ್ಧಾರ ಕೈಗೊಂಡಿಲ್ಲ. ಮೂರು ಕಾರಣಗಳು ಅವುಗಳಿಗೆ ಚೀನೀ ಎಐ ಹೆಚ್ಚು ಆಕರ್ಷಕವಾಗುವಂತೆ ಮಾಡಿವೆ. ಮೊದಲನೆಯದಾಗಿ, ಅಮೆರಿಕನ್ ಎಐ ಅತ್ಯಂತ ದುಬಾರಿ. ಎರಡನೆಯ ಕಾರಣವೆಂದರೆ, ಅಮೆರಿಕನ್ ಎಐ ಮಾಡೆಲ್‌ಗಳನ್ನು ಪಾಶ್ಚಾತ್ಯ ಡೇಟಾ ಆಧಾರದಲ್ಲಿ ತರಬೇತುಗೊಳಿಸಲಾಗಿದೆ. ಆದ್ದರಿಂದ ಅವು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳಿಗೆ ಅನುಗುಣವಾಗಿ ಕಾರ್ಯಾಚರಿಸಲು ಕಷ್ಟಪಡುತ್ತವೆ. ಆದರೆ ಚೀನಾದ ಓಪನ್ ಸೋರ್ಸ್ ಎಐಯನ್ನು ಸ್ಥಳೀಯ ಮಾಹಿತಿಗಳನ್ನು ಒದಗಿಸಿ, ಉಚಿತವಾಗಿಯೇ ಅಗತ್ಯಕ್ಕೆ ತಕ್ಕಂತೆ ಹೊಂದಿಸಬಹುದು. ಉದಾಹರಣೆಗೆ, ಆಫ್ರಿಕ್‌ಕ್ವೆನ್-14ಬಿ ಎನ್ನುವ ಎಐ ಮಾಡೆಲ್ ಕ್ವೆನ್ ಆಧಾರದಲ್ಲೇ ನಿರ್ಮಿತವಾಗಿದ್ದು, 20 ಆಫ್ರಿಕನ್ ಭಾಷೆಗಳಲ್ಲಿ ತರಬೇತಿ ಹೊಂದಿದೆ. ಮೂರನೆಯದಾಗಿ, ಬಹಳಷ್ಟು ಪ್ರದೇಶಗಳಲ್ಲಿ ಅಮೆರಿಕದ ವಿರುದ್ಧ ಆಕ್ರೋಶ ಉಂಟಾಗಿದ್ದು, ವಾಶಿಂಗ್ಟನ್ ಎಐಯನ್ನು ಬಡ ರಾಷ್ಟ್ರಗಳಿಗೆ ಕಡಿಮೆ ಬೆಲೆಗೆ ಒದಗಿಸಿ ನೆರವಾಗುವ ಬದಲು, ಭದ್ರತಾ ಯುದ್ಧದ ಉಪಕರಣದಂತೆ ಬಳಸುತ್ತಿದೆ.
ಬಹಳಷ್ಟು ಜನರು ಚೀನಾದ ಸೆನ್ಸರ್‌ಶಿಪ್ ಕುರಿತು ಆತಂಕ ಹೊಂದಿದ್ದಾರೆ. ಏಕೆಂದರೆ, ಡೀಪ್‌ಸೀಕ್‌ನಂತಹ ಎಐ ಮಾಡೆಲ್‌ಗಳು ತೈವಾನ್, ಟಿಬೆಟ್ ಅಥವಾ ತಿಯಾನ್‌ಮೆನ್ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಆದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜನರ ದೈನಂದಿನ ಬಳಕೆಗೆ ಈ ವಿಚಾರಗಳು ಮುಖ್ಯವಾಗುವುದೇ ಇಲ್ಲವಾದ್ದರಿಂದ, ಅವು ಇದನ್ನೆಲ್ಲ ದೊಡ್ಡ ವಿಷಯವಾಗಿ ಪರಿಗಣಿಸುವುದಿಲ್ಲ. ಅಲ್ಲದೆ, ಓಪನ್ ಸೋರ್ಸ್ ಎಐ ಉಚಿತವಾಗಿ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಬಹುದಾಗಿರುವುದರಿಂದ, ಈ ಕುರಿತಂತೆ ರಾಜಕೀಯ ಗಮನ ಸೆಳೆಯುವಂತಹ ಯಾವುದೇ ಸರಕಾರಿ ಒಪ್ಪಂದಗಳು ನಡೆಯುವುದಿಲ್ಲ.
ಇಲ್ಲಿನ ಪಾಠ ಬಹಳ ಸ್ಪಷ್ಟ. ಎಐ ಸ್ಪರ್ಧೆ ಎನ್ನುವುದು ಇಂದು ಯಾರ ಬಳಿ ಅತ್ಯಂತ ಶಕ್ತಿಶಾಲಿ ಚಿಪ್ ಇದೆ, ಯಾರ ಬಳಿ ಅತ್ಯಂತ ಬುದ್ಧಿಶಾಲಿ ಎಐ ಮಾಡೆಲ್ ಇದೆ ಎನ್ನುವುದಕ್ಕೆ ಸೀಮಿತವಾಗಿಲ್ಲ. ಇದು ಯಾರ ಎಐ ಜಗತ್ತಿಗೆ ದಿನಬಳಕೆಗೆ ಸೂಕ್ತ ಎನ್ನುವ ಅಂಶವನ್ನೂ ಒಳಗೊಂಡಿದೆ. ಒಂದು ವೇಳೆ ಚೀನೀ ಎಐ ಮೌನವಾಗಿಯೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೊದಲ ಆಯ್ಕೆಯಾದರೆ, ಬೀಜಿಂಗ್ ಮುಂದಿನ ಹಲವು ದಶಕಗಳ ಕಾಲ ಬಲವಾದ ಜಾಗತಿಕ ಪ್ರಭಾವ ಹೊಂದಿರಲಿದೆ. ಪಾಶ್ಚಾತ್ಯ ದೇಶಗಳು ಬೇಗನೆ ಎಚ್ಚರಗೊಂಡು, ಕೈಗೆಟಕುವ ದರದ, ಪ್ರಾಯೋಗಿಕ ಎಐ ಪರಿಹಾರಗಳನ್ನು ಒದಗಿಸಬೇಕು. ಇಲ್ಲವಾದರೆ ಎಐ ಸ್ಪರ್ಧೆ ಆರಂಭವಾಗಿದೆ ಎಂದು ಅವುಗಳಿಗೆ ಅರಿವಾಗುವ ಮುನ್ನವೇ ಚೀನಾ ಇದನ್ನು ಗೆದ್ದುಕೊಳ್ಳಬಹುದು!






