ಬಂಗಾರದ ದರ ಇಳಿಕೆ; ಅಡವಿಟ್ಟ ಗ್ರಾಹಕರಿಗೆ ಸಂಕಷ್ಟದ ಬರೆ
ಹೆಚ್ಚುವರಿ ಹಣ ಅಥವಾ ಬಂಗಾರ ಪಾವತಿಸುವಂತೆ ಹಣಕಾಸು ಸಂಸ್ಥೆಗಳಿಂದ ಸಂದೇಶ!

ವಿಜಯಪುರ: ಬಂಗಾರದ ಬೆಲೆ ಇಳಿಕೆಯಾಗುತ್ತಿ ರುವುದು ಆಭರಣ ಖರೀದಿಸುವವರಿಗೆ ಸಂತಸ ತಂದಿದ್ದರೆ, ಬಂಗಾರ ಅಡವಿಟ್ಟು ಸಾಲ ಪಡೆದವರಿಗೆ ಮಾತ್ರ ಸಂಕಷ್ಟ ತಂದಿದೆ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿರುವ ಗ್ರಾಹಕರಿಗೆ ಇದೀಗ ಹೆಚ್ಚುವರಿ ಹಣ ಅಥವಾ ಬಂಗಾರ ಪಾವತಿಸುವಂತೆ ಸಂದೇಶಗಳು ಬರುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಜನರು ಮತ್ತಷ್ಟು ಆತಂಕಕ್ಕೆ ಸಿಲುಕಿದ್ದಾರೆ.
ಜೀವನ ನಿರ್ವಹಣೆ, ಕೃಷಿ ವೆಚ್ಚ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಅನೇಕರು ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಬ್ಯಾಂಕ್ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಸಾಲ ಪಡೆದಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ರೈತರು ಕೃಷಿ ಚಟುವಟಿಕೆ ಹಾಗೂ ಕುಟುಂಬದ ನಿರ್ವಹಣೆಗಾಗಿ ಚಿನ್ನದ ಮೇಲಿನ ಸಾಲವನ್ನೇ ಅವಲಂಬಿಸಿದ್ದಾರೆ. ಇದೀಗ ಬಂಗಾರದ ಮಾರುಕಟ್ಟೆ ದರ ಕುಸಿದಿರುವ ಹಿನ್ನೆಲೆಯಲ್ಲಿ ಸಾಲದ ಭದ್ರತೆಯ ಮೌಲ್ಯದಲ್ಲಿ ಬದಲಾವಣೆಯಾಗಿದ್ದು, ಹೆಚ್ಚುವರಿ ಹಣ ಅಥವಾ ಬಂಗಾರ ಒದಗಿಸುವಂತೆ ಕೆಲವು ಗ್ರಾಹಕರಿಗೆ ಸೂಚನೆಗಳು ಬರುತ್ತಿವೆ.
ಎಂಟೇ ದಿನಗಳಲ್ಲಿ 10 ಗ್ರಾಂಗೆ 10,150 ರೂ. ಇಳಿಕೆ!: ಬಂಗಾರದ ದರದಲ್ಲಿನ ಇಳಿಕೆಯ ಪ್ರಮಾಣವೂ ಗಮನಾರ್ಹವಾಗಿದೆ. ನವೆಂಬರ್ 15ರಂದು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ ಸುಮಾರು 1,26,150 ರೂ.ಇದ್ದರೆ, ನವೆಂಬರ್ 23ರಂದು 1,16,000 ರೂ.ಗೆ ಇಳಿಕೆಯಾಗಿದೆ. ಅಂದರೆ ಕೇವಲ ಎಂಟು ದಿನಗಳಲ್ಲಿ 10 ಗ್ರಾಂಗೆ 10,150 ರೂ. ಕುಸಿತ ಕಂಡಿದೆ. ಅದೇ ರೀತಿ 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 1,37,620 ರೂ. ರಿಂದ 1,26,560 ರೂ.ಗೆ ಇಳಿಕೆಯಾಗಿದ್ದು, 11,060 ರೂ. ಕಡಿಮೆಯಾಗಿದೆ.
ಹಣ ಹೊಂದಿಸುವುದಾದರೂ ಎಲ್ಲಿಂದ?: ಈಗಾಗಲೇ ಕೈಯಲ್ಲಿದ್ದ ಬಂಗಾರವನ್ನೆಲ್ಲ ಅಡವಿಟ್ಟು ಸಾಲ ಪಡೆದಿದ್ದೇವೆ. ಮತ್ತೆ ಹೆಚ್ಚುವರಿ ಬಂಗಾರ ತಂದುಕೊಡಿ ಅಥವಾ ಹಣ ಪಾವತಿಸಿ ಎಂದರೆ ಎಲ್ಲಿಂದ ಹೊಂದಿಸಬೇಕು ಎಂಬುದು ಕೆಲವು ಗ್ರಾಹಕರ ಪ್ರಶ್ನೆಯಾಗಿದೆ. ಬಂಗಾರ ಅಡವಿಟ್ಟಾಗ ಇದ್ದ ಆರ್ಥಿಕ ಪರಿಸ್ಥಿತಿಯಲ್ಲಿ ಈಗಲೂ ಯಾವುದೇ ಸುಧಾರಣೆಯಾ
ಗಿಲ್ಲ. ಬದಲಾಗಿ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ದಿಢೀರನೆ ಹೆಚ್ಚುವರಿ ಹಣ ಪಾವತಿಸುವಂತೆ ಸೂಚಿಸಿದರೆ ಸಾಮಾನ್ಯ ಜನರು ಏನು ಮಾಡಬೇಕು ಎಂಬ ಆತಂಕ ಎದುರಾಗಿದೆ.
ಮಳೆಯಿಲ್ಲ, ಬೆಳೆಯಿಲ್ಲ; ರೈತರ ಸಂಕಷ್ಟಕ್ಕೆ ಮತ್ತೊಂದು ಹೊಡೆತ ಈ ವರ್ಷ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಬೆಳೆ ನಷ್ಟದಿಂದ ರೈತರ ಆದಾಯ ಕುಸಿದಿದ್ದು, ಕೃಷಿಗಾಗಿ ಮಾಡಿದ ಖರ್ಚು ಕೂಡ ಕೈಗೆ ಮರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಬಂಗಾರದ ಬೆಲೆ ಇಳಿಕೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಹಣ ಪಾವತಿಸುವಂತೆ ಸೂಚನೆ ಬಂದಿರುವುದು ಬಂಗಾರ ಅಡವಿಟ್ಟು ಸಾಲ ಮಾಡಿದ ರೈತ ಕುಟುಂಬಗಳಿಗೆ ಮತ್ತೊಂದು ಆರ್ಥಿಕ ಹೊಡೆತ ನೀಡಿದಂತಾಗಿದೆ. ಒಂದೆಡೆ ದಿನನಿತ್ಯದ ಜೀವನ ನಿರ್ವಹಣೆಯ ಸವಾಲು, ಮತ್ತೊಂದೆಡೆ ಸಾಲದ ಬಡ್ಡಿ ಹಾಗೂ ಕಂತುಗಳ ಹೊರೆ. ಇದರ ನಡುವೆ ಹೆಚ್ಚುವರಿ ಹಣ ಪಾವತಿಸುವ ಆತಂಕವೂ ಸೇರಿಕೊಂಡಿದ್ದು, ಬಂಗಾರ ಅಡವಿಟ್ಟ ಗ್ರಾಹಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಗ್ರಾಹಕರಿಗೆ ಸ್ಪಷ್ಟನೆ ನೀಡಬೇಕಿದೆ: ಸಾಲ ನೀಡುವಾಗ ವಿಧಿಸಿರುವ ಷರತ್ತುಗಳು, ಸಾಲದ ಮೌಲ್ಯಮಾಪನದ ನಿಯಮಗಳು ಹಾಗೂ ಹೆಚ್ಚುವರಿ ಹಣ ಅಥವಾ ಬಂಗಾರ ಕೇಳುವ ಮಾನದಂಡಗಳ ಬಗ್ಗೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸೂಕ್ತ ಕಾಲಾವಕಾಶ ಕಲ್ಪಿಸಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ.






