ಮಕ್ಕಳ ಶಿಕ್ಷಣದ ಹಕ್ಕು ಧೂಳೀಪಟಗೊಳಿಸುತ್ತಿರುವ ಸರಕಾರ

ಒಂದು ಕೆಪಿಎಸ್ ಶಾಲೆಯನ್ನು ಸ್ಥಾಪಿಸುವುದು ಎಂದರೆ, ಅದರ ಸುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ 8-10 ಸರಕಾರಿ ಶಾಲೆಗಳನ್ನು ಕೊಂದು ಸಮಾಧಿ ಮಾಡುವುದು ಎಂದೇ ಅರ್ಥ! ಜೊತೆಗೆ ಅಲ್ಲಿನ ಅಂಗನವಾಡಿ ಕೇಂದ್ರಗಳೂ ಶಾಶ್ವತವಾಗಿ ಮುಚ್ಚಲ್ಪಡುತ್ತವೆ. ಇದಕ್ಕೆ 2018-19ರಿಂದ ವರ್ಷವರ್ಷವೂ ಅಲ್ಲಲ್ಲಿ ಪ್ರಾರಂಭವಾಗಿ ಇದುವರೆಗೆ ಕಾರ್ಯನಿರ್ವಹಿಸುತ್ತಿರುವ 308 ಕೆಪಿಎಸ್ ಶಾಲೆಗಳ ಉದಾಹರಣೆಗಳಿವೆ. ಇವುಗಳ ಹುಟ್ಟಿನಿಂದಾಗಿ ಸುತ್ತಲ ಹಳ್ಳಿಗಳ- ಮಕ್ಕಳ ಕೊರತೆ ಇಲ್ಲದಿದ್ದ ಸರಕಾರಿ ಶಾಲೆಗಳು ಕೂಡ ಶಾಶ್ವತವಾಗಿ ಮುಚ್ಚಿಕೊಂಡಿವೆ. ಅಲ್ಲಲ್ಲ- ಬಲವಂತದಿಂದ ಮುಚ್ಚಿಸಿ, ಅಲ್ಲಿಂದ ಮಕ್ಕಳನ್ನು ಈ ಕೇಂದ್ರೀಕೃತ ಕೆಪಿಎಸ್ ಶಾಲೆಗಳಿಗೆ ವರ್ಗಾಯಿಸಲಾಗಿದೆ.
ಕೆಲ ದಿನಗಳ ಹಿಂದೆ, ರಾಜಧಾನಿಯ ಸ್ವಾತಂತ್ರ್ಯ ಉದ್ಯಾನವನವು ನಾಡಿನ ಹಳ್ಳಿಹಳ್ಳಿಗಳ ಮೂಲೆಮೂಲೆಯಿಂದ ಆಗಮಿಸಿದ್ದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಮತ್ತವರ ಪೋಷಕರಿಂದ ತುಂಬಿಹೋಗಿತ್ತು. ಬಹುಶಃ ಇದೇ ಮೊದಲ ಬಾರಿಗೆ ಮುನ್ನೂರಕ್ಕೂ ಹೆಚ್ಚು ಬಡಮಕ್ಕಳ ಆಕ್ರೋಶದ ಹಕ್ಕೊತ್ತಾಯವನ್ನು ಸ್ವಾತಂತ್ರ್ಯ ಉದ್ಯಾನವನವು ಕೇಳಿಸಿಕೊಂಡಿತು. ಮಕ್ಕಳ ಒಕ್ಕೊರಲ ದನಿ ಒಂದೇ-ನಮ್ಮೂರ ಸರಕಾರಿ ಶಾಲೆ ಮುಚ್ಚಬೇಡಿ. ನಮ್ಮ ಶಾಲೆ ನಮ್ಮ ಹಕ್ಕು!
ಶಿಕ್ಷಣವು ಒಂದು ಚಳವಳಿ. ಜೀವನದಲ್ಲಿ ಪ್ರಗತಿ ಸಾಧಿಸಲು ಶಿಕ್ಷಣವೇ ಮಾರ್ಗ. ಅದು ತನ್ನ ಉದ್ದೇಶವನ್ನು ಪೂರೈಸದಿದ್ದರೆ ನಿಷ್ಪ್ರಯೋಜಕ ಎಂದರು ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್. ಜನರ ಬದುಕುವ ಹಕ್ಕಿನ ನಂತರದಲ್ಲಿ, ಪ್ರತೀ ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪ್ರಮುಖ ಹಕ್ಕೆನ್ನುತ್ತದೆ ನಮ್ಮ ಸಂವಿಧಾನ. ಅದರ ಆಶಯದಂತೆ, ತಮ್ಮ ವಾಸಸ್ಥಾನದ ಹತ್ತಿರದಲ್ಲೇ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆನ್ನುತ್ತದೆ ಸಂವಿಧಾನದ 21(ಎ) ಪರಿಚ್ಛೇದ. ಇದನ್ನು ಆಧರಿಸಿಯೇ ರೂಪುಗೊಂಡಿದ್ದು ಶಿಕ್ಷಣ ಹಕ್ಕು ಕಾಯ್ದೆ-2009. ಆ ಕಾಯ್ದೆಯನ್ವಯ ಪ್ರತೀ ಮಗುವಿಗೆ ಒಂದು ಕಿ.ಮೀ. ಒಳಗೆ ಕಿರಿಯ ಪ್ರಾಥಮಿಕ ಶಾಲೆ, ಮೂರು ಕಿ.ಮೀ. ಒಳಗೆ ಹಿರಿಯ ಪ್ರಾಥಮಿಕ ಶಾಲೆ, ಐದು ಕಿ.ಮೀ. ಒಳಗೆ ಪ್ರೌಢಶಾಲೆಯನ್ನು ಒದಗಿಸುವುದು ಸರಕಾರದ ಕರ್ತವ್ಯ. ಆದರೆ ಅಂಬೇಡ್ಕರ್‌ರ ಆಶಯವನ್ನೂ ಸಂವಿಧಾನ ಘೋಷಿಸಿದ ಶಿಕ್ಷಣದ ಹಕ್ಕನ್ನೂ, ಶಿಕ್ಷಣ ಹಕ್ಕು ಕಾಯ್ದೆಯನ್ನೂ, ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಮುಲಾಜಿಲ್ಲದೆ ಉಲ್ಲಂಘಿಸುತ್ತಲೇ ಬಂದ ರಾಜ್ಯ ಸರಕಾರ ಈಗ- ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಹೆಣ್ಣುಮಕ್ಕಳ, ಅಂಚಿಗೊತ್ತರಿಸಲ್ಪಟ್ಟ ಜಾತಿ/ವರ್ಗ/ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಶಾಶ್ವತವಾಗಿ ಬಲಿಪೀಠವನ್ನು ಸಿದ್ಧ ಮಾಡುತ್ತಿದೆ. ಇದು ನಾಡಿನ ಮಕ್ಕಳಿಗೆ ಎಸಗಲಾಗುತ್ತಿರುವ ದ್ರೋಹ.
‘ಖಾಸಗಿ ಶಾಲೆಗಳಲ್ಲಿ ಪಡೆಯುವ ಗುಣಮಟ್ಟದ ಶಿಕ್ಷಣವನ್ನು ನಾಡಿನ ಬಡಮಕ್ಕಳಿಗೆ ಒದಗಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಸರಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಈ ವರ್ಷ ವ್ಯಾಪಕವಾಗಿ ಜಾರಿಗೊಳಿಸಲು ಉದ್ದೇಶಿಸಿದೆ. ಎಲ್‌ಕೆಜಿಯಿಂದ ದ್ವಿತೀಯ ಪಿಯುವರೆಗೆ ಒಂದೇ ಸೂರಿನಡಿ 14 ವರ್ಷ ಶಿಕ್ಷಣ ನೀಡುತ್ತೇವೆ ಎಂದು ಹೇಳುತ್ತ, ಗ್ರಾಮಪಂಚಾಯತ್‌ಗೆ ಒಂದರಂತೆ ಅಂದಾಜು 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹಂತಹಂತವಾಗಿ ಸ್ಥಾಪಿಸುವುದು ಸರಕಾರದ ಗುರಿ. ಅದರಂತೆ ಈ ವರ್ಷ 700 ಶಾಲೆಗಳನ್ನು ಪ್ರಾರಂಭಿಸಲು ಭರದ ಸಿದ್ಧತೆ ನಡೆದಿದೆ.
ಒಂದು ಕೆಪಿಎಸ್ ಶಾಲೆಯನ್ನು ಸ್ಥಾಪಿಸುವುದು ಎಂದರೆ, ಅದರ ಸುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ 8-10 ಸರಕಾರಿ ಶಾಲೆಗಳನ್ನು ಕೊಂದು ಸಮಾಧಿ ಮಾಡುವುದು ಎಂದೇ ಅರ್ಥ! ಜೊತೆಗೆ ಅಲ್ಲಿನ ಅಂಗನವಾಡಿ ಕೇಂದ್ರಗಳೂ ಶಾಶ್ವತವಾಗಿ ಮುಚ್ಚಲ್ಪಡುತ್ತವೆ. ಇದಕ್ಕೆ 2018-19ರಿಂದ ವರ್ಷವರ್ಷವೂ ಅಲ್ಲಲ್ಲಿ ಪ್ರಾರಂಭವಾಗಿ ಇದುವರೆಗೆ ಕಾರ್ಯನಿರ್ವಹಿಸುತ್ತಿರುವ 308 ಕೆಪಿಎಸ್ ಶಾಲೆಗಳ ಉದಾಹರಣೆಗಳಿವೆ. ಇವುಗಳ ಹುಟ್ಟಿನಿಂದಾಗಿ ಸುತ್ತಲ ಹಳ್ಳಿಗಳ- ಮಕ್ಕಳ ಕೊರತೆ ಇಲ್ಲದಿದ್ದ ಸರಕಾರಿ ಶಾಲೆಗಳು ಕೂಡ ಶಾಶ್ವತವಾಗಿ ಮುಚ್ಚಿಕೊಂಡಿವೆ. ಅಲ್ಲಲ್ಲ- ಬಲವಂತದಿಂದ ಮುಚ್ಚಿಸಿ, ಅಲ್ಲಿಂದ ಮಕ್ಕಳನ್ನು ಈ ಕೇಂದ್ರೀಕೃತ ಕೆಪಿಎಸ್ ಶಾಲೆಗಳಿಗೆ ವರ್ಗಾಯಿಸಲಾಗಿದೆ. ದೂರದ ಈ ಶಾಲೆಗೆ ಹೋಗಿ ಕಲಿಯಲಾಗದ ನೂರಾರು ಮಕ್ಕಳು ಈಗ ಶಾಲೆಯಿಂದ ಹೊರಗುಳಿದಿದ್ದಾರೆ. ಈ ಮೊದಲೇ ಶಾಲೆಗೆ ಸೇರ್ಪಡೆಗೊಂಡಿಲ್ಲದ, ಅರ್ಧಕ್ಕೇ ಶಾಲೆ ಬಿಟ್ಟಿದ್ದ ಲಕ್ಷಕ್ಕೂ ಅಧಿಕ ಮಕ್ಕಳೊಂದಿಗೆ ಇವರೂ ಈಗ ಶಿಕ್ಷಣ ವಂಚಿತರಾಗಿ ಬೀದಿಗೆ ಬಿದ್ದಿದ್ದಾರೆ. ಹಂತಹಂತವಾಗಿ ವಿಕೇಂದ್ರೀಕೃತಗೊಂಡು ಮಕ್ಕಳ ಮನೆ ಬಾಗಿಲಿನಲ್ಲಿ ಶಾಲೆ ತೆರೆದು ನೀಡಬೇಕಿದ್ದ ಶಿಕ್ಷಣವೀಗ, ಮ್ಯಾಗ್ನೆಟ್ ಶಾಲೆಯೆಂಬ ಅಯಸ್ಕಾಂತದ ಸೆಳೆತಕ್ಕೆ ಸಿಕ್ಕು ಮಕ್ಕಳಿಂದ ದೂರದೂರವಾಗುತ್ತಾ ಉಸಿರುಗಟ್ಟಿ ವಿಲವಿಲ ಒದ್ದಾಡುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣದ ಬಾಗಿಲು ಶಾಶ್ವತವಾಗಿ ಮುಚ್ಚಿಕೊಳ್ಳುತ್ತಿದೆ. ಬಹುಶಃ ಅಂಬೇಡ್ಕರ್‌ರ ಆತ್ಮ ಇದನ್ನು ಕಂಡು ವಿಲವಿಲ ಒದ್ದಾಡುತ್ತಿರಬಹುದು!
ಒಂದು ಗ್ರಾಮದ ಶಾಲೆಯೆಂದರೆ ಒಂದು ಸಮೃದ್ಧ ಸಾಂಸ್ಕೃತಿಕ ತಾಣವಿದ್ದಂತೆ. ಇಂತಹ ಶಾಲೆಯನ್ನು ಮುಚ್ಚಿ ಕೊಂದರೆ, ಹಳ್ಳಿಯ ಸಾಂಸ್ಕೃತಿಕ ತಳಪಾಯ ಮತ್ತು ವೇದಿಕೆಯನ್ನೇ ನಾಶಪಡಿಸಿದಂತೆ. ಒಂದೂವರೆ ದಶಕದ ಹಿಂದೆ 2011ರಲ್ಲಿ ಸರಕಾರಿ ಶಾಲೆಗಳನ್ನು ವಿಲೀನದ ನೆಪದಲ್ಲಿ ಅಧಿಕೃತವಾಗಿ ಮುಚ್ಚುವ ಪ್ರಕ್ರಿಯೆ ಪ್ರಾರಂಭವಾದಾಗ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಪ್ರಮುಖ ಸಾಹಿತಿಗಳ ಮೂಲಕ ಪ್ರಕರಣವನ್ನು ದಾಖಲಿಸಲಾಗಿತ್ತು. 2012ರ ಜೂನ್‌ನಲ್ಲಿ ಅಂತಿಮ ತೀರ್ಪು ನೀಡಿದ ನ್ಯಾಯಾಲಯವು-ಐದಕ್ಕಿಂತ ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಯನ್ನು ಮುಚ್ಚುವಂತಹ ಸಂದರ್ಭ ಬಂದರೆ ಮಾತ್ರ, ಉಳಿದ ಮಕ್ಕಳು ಹತ್ತಿರದ ಮತ್ತೊಂದು ಸರಕಾರಿ ಶಾಲೆಗೆ ಕ್ಷೇಮವಾಗಿ ತೆರಳಲು ವಾಹನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಿಕೊಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ ಎಂದಿತ್ತು.
ಆದರೆ ಜುಲೈ 2012ರಲ್ಲಿ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆಯು ‘ವಾಹನ ಸೌಲಭ್ಯ’ ಎಂಬ ತೀರ್ಪನ್ನು ಜಾಣತನದಿಂದ ‘ವಾಹನ ಭತ್ತೆ’ ಎಂದು ಬದಲಾಯಿಸಿ, ಒಂದಿಷ್ಟು ಪುಡಿ ಭತ್ತೆಯನ್ನು ಕೆಲವು ಭಾಗದ ಮಕ್ಕಳಿಗೆ ಮಾತ್ರ ನೀಡುತ್ತಿದೆ. ಈ ಮೂಲಕ, ಕಳೆದ 15 ವರ್ಷದಿಂದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜೊತೆಗೆ ನ್ಯಾಯಾಲಯದ ಆದೇಶದ ಉಲ್ಲಂಘನೆಯನ್ನೂ ಮಾಡುತ್ತಿದೆ. ಇನ್ನೀಗ ನಿಜಕ್ಕೂ ಸರಕಾರ ಈ ವ್ಯವಸ್ಥೆ ಮಾಡೀತೆ? ಉಚಿತ ವಾಹನ ಸೌಲಭ್ಯದಿಂದ ಪೋಷಕರಿಗೆ, ಮಗುವಿಗೆ ದೊರಕುವ ಸುರಕ್ಷತೆ, ನಿರಾತಂಕ, ನಿರಾಳತೆಗಳೊಂದೂ ವಾಹನ ಭತ್ತೆ ನೀಡುವುದರಿಂದ ಸಿಗುವುದಿಲ್ಲವೆಂಬುದು ನಿರ್ವಿವಾದ. ಅದರಲ್ಲೂ ನದಿ, ಗುಡ್ಡಗಾಡು, ಕಾಡು, ಕಣಿವೆಗಳಂತಹ ಪ್ರಾದೇಶಿಕ ವೈಪರೀತ್ಯಗಳ ಬಹಳಷ್ಟು ಗ್ರಾಮೀಣಪ್ರದೇಶಗಳಿಗೆ ಇಂದಿಗೂ ಸಾರಿಗೆ ವ್ಯವಸ್ಥೆಯಿರಲಿ, ರಸ್ತೆ ಸಂಪರ್ಕವೇ ಇಲ್ಲ! ಗ್ರಾಮ ಭಾರತದ ನೈಜ ತಿಳಿವಿಲ್ಲದೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಮೂಗಿನ ನೇರಕ್ಕೆ ನಿರ್ಧಾರ ತೆಗೆದುಕೊಳ್ಳುವ ಜನಪ್ರತಿನಿಧಿಗಳಿಗೆ ಹಾಗೂ ಐಎಎಸ್ ಅಧಿಕಾರಿಗಳಿಗೆ ಇದು ಅರ್ಥವಾದೀತೆ? ಇಂತಹ ತಪ್ಪು ನಿರ್ಧಾರಗಳಿಂದಾಗಿಯೇ ಇದುವರೆಗೆ 4,600 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಅಲ್ಲಿನ ಹಲವು ಮಕ್ಕಳು, ದೂರದ ಬೇರೆ ಶಾಲೆಗೆ ಸೇರ್ಪಡೆಗೊಳ್ಳಲಾಗದೆ ಹೊರಗೇ ಉಳಿದಿದ್ದಾರೆಂಬುದು ಆತಂಕಕಾರಿಯಾಗಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ, ಈಗ ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ ತೆರಳಲು ವಾಹನ ವ್ಯವಸ್ಥೆಯನ್ನು ಸರಕಾರ ಮಾಡುತ್ತಿದೆಯೇ ಎಂದು ಗಮನಿಸಿದರೆ- ‘‘ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ಮೂಲಕ ಒದಗಿಸಬೇಕು’’ ಎಂದು 10 ಅಕ್ಟೋಬರ್ 2025ರಂದು ಹೊರಡಿಸಲಾಗಿರುವ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ ಕ್ರಮ ನಿಜಕ್ಕೂ ಕಾರ್ಯಸಾಧುವೆ? ಗ್ರಾಮೀಣ, ಬಡ ಮಕ್ಕಳ ವಿಷಯದಲ್ಲಿ ಸರಕಾರ ಯಾಕಿಂತಹ ಧಾರ್ಷ್ಟ್ಯ ತೋರುತ್ತಿದೆ?
ಸದ್ಯ ರಾಜ್ಯ ಆಯವ್ಯಯದ ಅನುದಾನ, ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನಿಂದ 2,000 ಕೋಟಿ ರೂ. ಸಾಲದ ಜೊತೆಗೆ ಇನ್ನಿತರ ಪ್ರದೇಶಾಭಿವೃದ್ಧಿ ನಿಧಿಗಳನ್ನು ಕೆಪಿಎಸ್ ಶಾಲೆಗಳನ್ನು ಹೊಸದಾಗಿ ರೂಪಿಸಲು ಬಳಸಿಕೊಳ್ಳಲಾಗುತ್ತಿದೆಯೆಂದು ಇದೇ ಆದೇಶದಲ್ಲಿ ತಿಳಿಸಲಾಗಿದೆ. ‘ಮುಂದೆ- ಈ ಶಾಲೆಯ ನಿರ್ವಹಣೆಯನ್ನು ಹೊರಗುತ್ತಿಗೆಗೆ ವಹಿಸುವುದು, ಶಾಲೆಗಳು ಸ್ವಂತ ಮೂಲದಿಂದ ಆದಾಯವನ್ನು ಸಂಗ್ರಹಿಸುವುದು, ಆದಾಯ ಸಂಗ್ರಹದ ಆಯ್ಕೆಗಳನ್ನು ಒದಗಿಸುವುದು ಮತ್ತು ಶಾಲಾ ಆಡಳಿತ ಸಮಿತಿಗಳನ್ನು ಸ್ಥಾಪಿಸುವ ಮೂಲಕ ಸಂಗ್ರಹಿಸುವುದು’ ಎಂದು ಘೋಷಿಸಿದೆ. ಇದರ ಅರ್ಥ- ಮುಂದೆ ಸರಕಾರವು ತನ್ನ ಜವಾಬ್ದಾರಿಯಿಂದ ಶಾಶ್ವತವಾಗಿ ನುಣುಚಿಕೊಂಡು ಬಂಡವಾಳಶಾಹಿಗಳಿಗೆ, ಪೋಷಕರಿಗೆ, ಹೊರಗುತ್ತಿಗೆಗೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟು ತಾನು ನಿರಾಳವಾಗುವುದು! ಹಾಗಿದ್ದರೆ ಸರಕಾರದ ಜವಾಬ್ದಾರಿಯಾದರೂ ಏನು?
ಇವೆಲ್ಲದರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಶಾಲಾ ಶಿಕ್ಷಣ ಸಚಿವರು- ‘‘ಒಂದೇ ಒಂದು ಮಗುವಿದ್ದರೂ ಆ ಸರಕಾರಿ ಶಾಲೆ ಮುಚ್ಚುವುದಿಲ್ಲ’’ವೆಂದು ಸಮರ್ಥನೆಯನ್ನು ನೀಡುತ್ತಿದ್ದಾರೆ. ಆದರೆ ಈಗಾಗಲೇ ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ’ಯ ಪೈಲೆಟ್ ಕಾರ್ಯಕ್ರಮದ ಭಾಗವಾಗಿ ಚನ್ನಪಟ್ಟಣ, ಚಿತ್ರದುರ್ಗ, ಚಿಕ್ಕಬಳ್ಳಾಪುರ... ಜಿಲ್ಲೆಗಳಲ್ಲಿ ಶಾಲೆ ಮುಚ್ಚಲು ಮ್ಯಾಪಿಂಗ್ ಮಾಡಿ ಆದೇಶ ಹೊರಡಿಸಲಾಗಿದೆ. ಚನ್ನಪಟ್ಟಣದ ಹೊಂಗನೂರು ಪಂಚಾಯತ್‌ನ ಕೆಪಿಎಸ್ ಶಾಲೆಯ ಸುತ್ತಲಿನ 7 ಹಳ್ಳಿಗಳ 70-80-100 ಮಕ್ಕಳಿದ್ದ ದೊಡ್ಡ ಶಾಲೆಗಳನ್ನು ವಿಲೀನಗೊಳಿಸಲು 2025 ಅಕ್ಟೋಬರ್ 23ರಂದು ಆದೇಶ ಹೊರಡಿಸಲಾಗಿದೆ. ಆ ಶಾಲೆಗಳ ವಿದ್ಯಾರ್ಥಿಗಳು ಕೆಪಿಎಸ್ ಶಾಲೆಗೆ ಹೋಗಲು ಒಪ್ಪದ ಕಾರಣಕ್ಕೆ, 5 ಮಂದಿ ಶಾಲಾ ಶಿಕ್ಷಕರಿಗೆ ಈ ಕೆಲಸವನ್ನು ಮಾಡಿಸಲಿಲ್ಲವೆಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ! ಈ ರೀತಿಯ ವಿಧ್ವಂಸಕ, ಬಲವಂತದ ನೀತಿಯನ್ನು ಬಡ ಮಕ್ಕಳ ಶಿಕ್ಷಣದ ವಿಷಯದಲ್ಲಿ ತೋರುತ್ತಿರುವ ಶಿಕ್ಷಣ ಇಲಾಖೆಯ ಕ್ರಮವು ಸಂವಿಧಾನ ವಿರೋಧಿಯಷ್ಟೇ ಅಲ್ಲ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಗುರುತರ ಅಪರಾಧವೂ ಆಗಿದೆ.
ಜೊತೆಗೆ ದ್ವಿಭಾಷಾ ಮಾಧ್ಯಮವೆಂದೂ ಕೆಪಿಎಸ್ ಶಾಲೆಯಲ್ಲಿ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಎರಡು ಇದೆಯೆಂದು ನಂಬಿಸಿ, ಕನ್ನಡದ ಮಾಧ್ಯಮಕ್ಕೆ ಯಾವ ಮಗುವೂ ಸೇರಿಲ್ಲವೆಂದು ತೋರಿಸಿ ಆಂಗ್ಲ ಮಾಧ್ಯಮಕ್ಕೆ ಸೇರಿಸಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ಹೊಸದಾಗಿ ಪರಿಣಿತ ಶಿಕ್ಷಕರನ್ನೂ ನೇಮಿಸಿಕೊಳ್ಳದೆ ಕನ್ನಡ ಮಾಧ್ಯಮದಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರಿಗೇ ತರಾತುರಿಯಲ್ಲಿ ಐದು ದಿನಗಳ ತರಬೇತಿ ನೀಡಿ, ಆಂಗ್ಲ ಮಾಧ್ಯಮದಲ್ಲಿ ಕನ್ನಡ-ಇಂಗ್ಲಿಷ್ ಸೇರಿಸಿ ಪಾಠ ಮಾಡಲು ತಯಾರು ಮಾಡಲಾಗಿದೆ! ಕನ್ನಡ-ಇಂಗ್ಲಿಷ್ ಬೆರೆಸಿದ ಕಲಬೆರಕೆ ಪಠ್ಯಪುಸ್ತಕಗಳೂ ಈಗಾಗಲೇ ತಯಾರಾಗಿಬಿಟ್ಟಿವೆ. ಇದೆಂತಹ ಶಿಕ್ಷಣ ಅ-ವ್ಯವಸ್ಥೆ? ಇದು ಬಡಮಕ್ಕಳನ್ನು ಬಲಿಪಶುವಾಗಿಸುವ ಬೇಕಾಬಿಟ್ಟಿ ಪ್ರಯೋಗವಷ್ಟೇ.
ದಶಕದಿಂದ ಇರುವ ಶಿಕ್ಷಣ ಕ್ಷೇತ್ರದ ಹಲವು ಗುರುತರ ಸಮಸ್ಯೆಗಳಿಗೆ ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯೊಂದೇ ಪರಿಹಾರವೆಂದು ನಿರ್ಧರಿಸಿರುವ ಸರಕಾರದ ನಿಲುವು ಅತ್ಯಂತ ಅವೈಜ್ಞಾನಿಕವಾದುದು, ಅಸಾಂವಿಧಾನಿಕವಾದುದು ಮತ್ತು ಅಂಬೇಡ್ಕರ್‌ರ ಸಮಗ್ರ ಶಿಕ್ಷಣದ ಆಶಯಕ್ಕೆ ವಿರುದ್ಧವಾದುದು. ಸರಕಾರ ಈಗಲಾದರೂ ಬಡ-ಗ್ರಾಮೀಣ ಮಕ್ಕಳ, ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಕಾರುಣ್ಯದಿಂದಲಾದರೂ ಈಗಿರುವ ವಿಕೇಂದ್ರೀಕೃತ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಎಲ್ಲೆಡೆಯೂ ಕೊರತೆಯಿಲ್ಲದಂತೆ ವ್ಯಾಪಕವಾಗಿ, ಸಮಗ್ರವಾಗಿ ಬಲಗೊಳಿಸಲು ಕಠಿಣ ತುರ್ತು ಕ್ರಮ ತೆಗೆದುಕೊಳ್ಳಲೇಬೇಕು. ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯೆಂಬ ಅವೈಜ್ಞಾನಿಕ, ಕೇಂದ್ರೀಕೃತ ವ್ಯವಸ್ಥೆಯನ್ನು ತಕ್ಷಣವೇ ಕೈಬಿಡುವ ಮೂಲಕ ಈ ಬಡ ಮಕ್ಕಳೆಡೆಗಿನ ತನ್ನ ಕಾಳಜಿಗೆ ಬದ್ಧತೆಯನ್ನು ತೋರಬೇಕು.






