ಒಳ ಮೀಸಲಾತಿ ಜಾರಿಗೆ ಸರಕಾರದಿಂದ ಯಾವುದೇ ಕುಂಟು ನೆಪಗಳು ಸಲ್ಲದು

ಒಳ ಮೀಸಲಾತಿಯು ಒಂದು ಕಡೆ ಒಡಲಿನ ಕಿಚ್ಚಿನಂತಾಗಿದೆ. ಇನ್ನೊಂದು ಕಡೆ ಅದರ ಮೂಲಕ ಒಂದಷ್ಟು ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವವರಿಗೇನು ಕೊರತೆಯಿಲ್ಲ. ಅದನ್ನು ರಾಜ್ಯ ಸರಕಾರ ಜಾರಿ ಮಾಡಲು ಮುಂದಾದಾಗ ಅನೇಕ ದತ್ತಾಂಶಗಳ ಕೊರತೆ ಜೊತೆ ಮೂಲ ಅಸ್ಪಶ್ಯರಾದ ಎಡ-ಬಲ ಬಣಗಳ ಜನಸಂಖ್ಯೆ ನಿರ್ಧರಿಸಲು ತೊಡಕಾಯಿತು. ಆವಾಗ ಒಂದು ವಿನೂತನ ಮಾದರಿ ಸಮೀಕ್ಷೆ ಅಗತ್ಯವೆನಿಸಿದಾಗ ಅದಕ್ಕೆ ಬೇಕಾದ ದತ್ತಾಂಶಗಳಿಗಾಗಿ ಒಂದು ಕೋಷ್ಟಕ ಸಹ ಸಿದ್ಧಪಡಿಸಿದೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕುಟುಂಬ ಆಧಾರಿತ ಮಾಹಿತಿ ಸಂಗ್ರಹ ರಾಜ್ಯಾದ್ಯಂತ ಭರದಿಂದ ಸಾಗಿ ಮುಗಿಯುವ ಹಂತಕ್ಕೆ ಬಂದಿದೆ. ಯಾವುದೇ ಮಾದರಿಯ ಅಥವಾ ಸಮಗ್ರ ಸಮೀಕ್ಷೆ ಮಾಡಲು ಮುಂದಾದರೆ ಅದು ತಲೆನೋವಿನ ವಿಚಾರ ಅಂದರೆ ತಪ್ಪಾಗದು. ಸಾಮಾನ್ಯವಾಗಿ ಕುಟುಂಬದಾರರು ತಮ್ಮ ಆರ್ಥಿಕ /ಸಂಪತ್ತಿನ ನೈಜ ಮಾಹಿತಿಗಳನ್ನು ಅಷ್ಟೊಂದು ಧಾರಾಳವಾಗಿ ನೀಡಲು ಮುಂದಾಗುವುದಿಲ್ಲ. ಅದರ ಅನುಭವ ಕೆಲವೇ ಜನರಿಗೆ ಮಾತ್ರ ಇರುತ್ತದೆ. ಅದರಲ್ಲೂ ಜಾತಿ ಆಧಾರಿತ ಸಾಮಾಜಿಕ-ಆರ್ಥಿಕ ಸಮೀಕ್ಷೆ ಎಂದಾಗ ಇನ್ನಿಲ್ಲದ ಸಮಸ್ಯೆಗಳು ಮೇಲೇಳುತ್ತವೆ. ನ್ಯಾಯಮೂರ್ತಿ ಸದಾಶಿವ ಆಯೋಗ ಇಂತಹ ಹತ್ತಾರು ಸಮಸ್ಯೆಗಳನ್ನು ಎದುರಿಸಿತ್ತು. ನ್ಯಾಯಮೂರ್ತಿ ನಾಗಮೊಹನ ದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಅಣಿಗೊಳಿಸಿದಾಗ ಎಂದಿನಂತಿನ ಸಾಮಾಜಿಕತೆ ಜಡತ್ವಗಳು ಇನ್ನಿಲ್ಲದಂತೆ ರೆಕ್ಕೆಬಿಚ್ಚಿ ಮೆರೆದಾಡಿವೆ. 30 ಜೂನ್ ಅಂತ್ಯಕ್ಕೆ ರಾಜ್ಯದ ಸಮೀಕ್ಷೆ ಶೇ.91.98ರಷ್ಟಾಗಿದೆ. ಈ ಶೇಕಡಾವಾರು 2025ಕ್ಕೆ ಅಂದಾಜಿಸಿದಂತೆ 1,07,21,063 ಜನಸಂಖ್ಯೆಯನ್ನು ಸಮೀಕ್ಷಾದಾರರು ದಾಖಲಿಸಿದ್ದಾರೆ. ಅಂದಾಜು ಸಮೀಕ್ಷೆಗೂ ವಾಸ್ತವಿಕ ಸಮೀಕ್ಷೆಗಳ ನಡುವೆ ಅನೇಕ ವ್ಯತ್ಯಾಸಗಳು ಮೂಡುವುದು ಸಹಜ. ಕೆಲವು ಸಲ ಇವೆರಡರ ಲೆಕ್ಕಾಚಾರ ಹಾವು -ಏಣಿ ಆಟದಂತಿರುತ್ತದೆ. ಇಲ್ಲಿಯೂ ಅಂತಹ ಧನಾತ್ಮಕವಾದ ಏರಿಕೆಗಳು 12 ಜಿಲ್ಲೆಗಳಲ್ಲಿ ಮೂಡಿವೆ.
ಪ್ರತೀ ಹತ್ತು ವರ್ಷಗಳಿಗೊಮ್ಮ ನಡೆದಿರುವ ಜನಗಣತಿಯಲ್ಲಿಯೂ ಹತ್ತಾರು ನ್ಯೂನತೆಗಳಿರುತ್ತವೆ. ಆದರೂ ಅಂತಿಮ ಫಲಿತಾಂಶವನ್ನು ಸಾರ್ವತ್ರಿಕವಾಗಿ ಒಪ್ಪಿದ್ದೇವೆ. ಈ ಹಿಂದೆಯೂ 2015ರಲ್ಲಿ ನಡೆದ ಸಾಮಾಜಿಕ ಸಮೀಕ್ಷೆ ಬಗ್ಗೆಯೂ ಇನ್ನಿಲ್ಲದ ಪ್ರತಿರೋಧಗಳು ಬಂದಿವೆ. ಆದರೆ, ಆ ಸಮೀಕ್ಷೆಯಿಂದ ಕ್ರೋಡೀಕೃತವಾದ ಗುಣಾತ್ಮಕ ಅಂಶಗಳನ್ನು ಪರಿಶೀಲಿಸುವ ತಾಳ್ಮೆ ಯಾರಲ್ಲಿಯೂ ಇಲ್ಲದಾಯಿತು. ಬಹುಶಃ ಪ್ರಸ್ತುತ ನಡೆದಿರುವ ಸಮೀಕ್ಷೆ ಬಗ್ಗೆಯೂ ಅನೇಕ ತರಲೆ-ತಾಪತ್ರಯಗಳನ್ನು ಮುಂದುಮಾಡಿ ಬಗ್ಗು ಬಡಿಯಬೇಕೆನ್ನುವವರ ನಿರೀಕ್ಷೆಗೂ ಮೀರಿದಂತೆ ಜನರು ಭಾಗವಹಿಸಿರುವುದು ಶ್ಲಾಘನೀಯ ಸಂಗತಿ. ಇಲ್ಲಿಯ ತನಕ ದಾಖಲಾಗಿರುವ ಫಲಿತಾಂಶಗಳಿಂದ 101 ಉಪಜಾತಿಗಳೆಲ್ಲವೂ ಬದಲಾವಣೆಗಾಗಿ ಒಳಗೊಳ್ಳುವ (Inclusiveness for Changes) ಮನೋಧರ್ಮಗಳನ್ನು ಹೊರಹಾಕಿರುವುದು ಸಾಬೀತಾಗಿವೆ. ಮೂರನೆಯ ಸುತ್ತಿನ ವಿಸ್ತರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.80ರಷ್ಟು ದಾಖಲಾಗಿರುವುದು ಒಂದು ಗಂಭೀರ ಸಾಧನೆಯಂತಿದೆ. ಆದರೆ ಬೆಂಗಳೂರು ಬೃಹತ್ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ.52ರಷ್ಟು ನಡೆದಿದೆ. ಈ ವ್ಯಾಪ್ತಿಯಲ್ಲಿರುವ ಹಳೆಯ ಪರಿಶಿಷ್ಟ ಜಾತಿಗಳ ಕಾಲನಿಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಮೀಕ್ಷೆ ನಡೆದಿರುವ ಮಾಹಿತಿಗಳಿವೆ. ಬೆಂಗಳೂರು ಮಹಾನಗರದೊಳಗೂ ಜಾತಿ ಮೂಲದ ಸಾಮಾಜಿಕ ಜಡತ್ವಗಳು ತುಂಬಿರುವುದು ಸಾಬೀತಾಗಿವೆ. ಹಾಗಂತ ಒಳ ಮೀಸಲಾತಿ ಜಾರಿಗೆ ಇವುಗಳಂತೂ ಅಡ್ಡಬರುವುದಿಲ್ಲ.
ಮೈಸೂರಿನ ಕೆಲವರು ಪರಿಶಿಷ್ಟ ಜಾತಿಯ ಸಮಗ್ರ ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ. ರಾಜ್ಯದ 101 ಜಾತಿಗಳ ಬಗ್ಗೆ ಅಷ್ಟಿಷ್ಟು ಸ್ವಾತಂತ್ರ್ಯ ಪೂರ್ವದಲ್ಲಿಯೂ ಕುಲಶಾಸ್ತ್ರೀಯ ಅಧ್ಯಯನಗಳು ಪ್ರಾಂತೀಯ ಮಟ್ಟದಲ್ಲಿ ನಡೆದಿವೆ. ಆಧುನಿಕೋತ್ತರವಾಗಿಯೂ ನಡೆದಿವೆ. ಒಳ ಮೀಸಲಾತಿ ವರ್ಗೀಕರಣಕ್ಕೆ ಕುಲಶಾಸ್ತ್ರೀಯ ಅಧ್ಯಯನಗಳು ನೈಜ ಆಧಾರ ಸ್ತಂಭಗಳೇನಲ್ಲ. ಈಗಾಗಲೇ ಲಭ್ಯವಿರುವ ಮೂಲ ಮಾಹಿತಿಗಳಿಂದ ಅವುಗಳ ಸಾಮಾಜಿಕ ಹಿನ್ನೆಲೆ, ಸಾಂಪ್ರದಾಯಿಕ ವೃತ್ತಿಗಳು, ಮೂಲ ಜಾತಿಗಳಿಗಿರುವ ಉಪಜಾತಿಗಳ ಸಹ ಸಂಬಂಧಗಳು, ಸಾಂಸ್ಕೃತಿಕ ಒಳನೋಟಗಳನ್ನು ಸ್ಥೂಲಸ್ವರೂಪದಲ್ಲಿ ಕ್ರೋಡೀಕರಿಸಿ ದತ್ತಾಂಶಗಳೊಂದಿಗೆ ಜೋಡಿಸಿ ಅವುಗಳ ಅಂತರ ಹಿಂದುಳಿದಿರುವಿಕೆಯನ್ನು ಸಾದರಪಡಿಸಿದರೆ ಸಾಕೆನಿಸುತ್ತದೆ. ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗಕ್ಕೆ ಯಾವುದೇ ಜಾತಿಗಳನ್ನು ಸೇರಿಸುವ ಅಥವಾ ಕೈಬಿಡುವ ಷರತ್ತುಗಳನ್ವಯ ಅಧ್ಯಯನ ಮಾಡಲು ಸರಕಾರ ಹೇಳಿಲ್ಲ. ಹೇಳಿದ್ದರೆ ಕುಲಶಾಸ್ತ್ರೀಯ ಅಧ್ಯಯನಗಳ ಅಗತ್ಯ ಇರುತ್ತದೆ. ಸುಖಾಸುಮ್ಮನೆ ಕೆಲವರು ಒಳ ಮೀಸಲಾತಿ ಜಾರಿಗೆ ಅಡ್ಡಿಮಾಡುವ ಸಲುವಾಗಿ ಇಂತಹದೊಂದು ಮನವಿ ಸಲ್ಲಿಸಿರಬಹುದು. ಬಹುಶಃ ಆಯೋಗ ಇಂತಹ ತಕರಾರುಗಳಿಗೆ ಮನ್ನಣೆ ನೀಡಲಾರದು.
ಸಮೀಕ್ಷೆಯ ಅನುಷ್ಠಾನದ ಆರಂಭಿಕ ದಿನಗಳಲ್ಲಿ ಸಹಜವಾಗಿ ಒಂದಷ್ಟು ಗೊಂದಲಗಳಿದ್ದವು. ಆದರೆ ಅವುಗಳೆಲ್ಲವೂ ಅದರ ಅಂತಿಮ ಗಡುವಿನಲ್ಲಿ ಕಾಣಲಿಲ್ಲ. ಬೆಂಗಳೂರು ಮಹಾನಗರದಲ್ಲಿ ಸಮೀಕ್ಷೆ ಗರಿಷ್ಠ ಮಟ್ಟದಲ್ಲಿ ಜರುಗದಿರಲು ಅನೇಕ ಕಾರಣಗಳಿವೆ. ಇಲ್ಲಿನ ಅನುಷ್ಠಾನ ಪ್ರಾಧಿಕಾರವಾದ ಬಿಬಿಎಂಪಿ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ. ಹಿಂದಿನ ರಾಜ್ಯ ಸಮಗ್ರ ಸಾಮಾಜಿಕ ಸಮೀಕ್ಷೆಯಲ್ಲಿ (2015) ಶೇ. 85ರಷ್ಟು ಕುಟುಂಬಗಳನ್ನು ಮುಟ್ಟಿತ್ತು. ಆದರೆ, ಒಳ ಮೀಸಲಾತಿ ಸಮೀಕ್ಷೆಯಲ್ಲಿ ಒಟ್ಟಾರೆ ಅನೇಕ ಸಾಮಾಜಿಕ ಸಂದಿಗ್ಧತೆಗಳು ಬೆಳಕಿಗೆ ಬಂದಿವೆ. ಬಾಡಿಗೆದಾರರಾಗಿರುವ ದಲಿತರು ಯಜಮಾನರಿಗೆ ಹೇಳಿರುವ ಸುಳ್ಳು ಜಾತಿ ಸಮಸ್ಯೆಗಳಿಂದ ಅವರಾರೂ ಸಮೀಕ್ಷೆಯತ್ತ ಮುಖಮಾಡಿಲ್ಲ. ಸರ್ವರೂ ವಾಸಿಸುವ ಕಾಲನಿಗಳಲ್ಲಿ ದಲಿತರಿಗೆ ಸ್ವಂತ ಮನೆಗಳಿದ್ದರೂ ಪರಿಶಿಷ್ಟರೆಂದು ಗುರುತಿಸಿಕೊಳ್ಳುವ ಹಿಂಜರಿಕೆಗಳಿವೆ. ನಿವೃತ್ತ ಅಧಿಕಾರಿಗಳಿಗೆ/ನೌಕರರಿಗೆ, ಅನ್ಯರ ಜೊತೆ ವ್ಯಾಪಾರ ವಹಿವಾಟುಗಳಿರುವವರಿಗೆ ನೆರೆಹೊರೆಯವರಿಂದ ಬಳುವಳಿಯಾಗಿರುವ ನವ ಬ್ರಾಹ್ಮಣಿಕೆಗಳ ಚಡಪಡಿಕೆಯಿಂದ ಹೊರಬರಲಾಗದವರೇ ಜಾಸ್ತಿ ಇದ್ದಾರೆ. ಅತಿ ಹೆಚ್ಚಾಗಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರು ಸರಕಾರಿ ಸವಲತ್ತಿಗಾಗಿ ಪರಿಶಿಷ್ಟರಾಗಿರುವ ನಕಲಿ ಜಾತಿಗಳು ತಮ್ಮ ಮೂಲ ಉಪ ಜಾತಿಗಳನ್ನು ಬಹಿರಂಗಪಡಿಸಲು ಭಯಪಟ್ಟಿರುವವರೇ ಅತಿ ಹೆಚ್ಚು. ಅಂತರ್ಜಾಲಗಳ ಮೂಲಕ ದಾಖಲಿಸುವ ಅವಕಾಶಗಳಿದ್ದರೂ ಅನೇಕರು ಏನೂ ಗೊತ್ತಿಲ್ಲದವರಂತೆ ನಿರ್ಲಕ್ಷ್ಯ ತಾಳಿದ್ದಾರೆ. ಇವುಗಳಿಗೆ ಸರಕಾರ ಯಾವುದೇ ಕಾನೂನಿನ ಅಂಕುಶಗಳಿಂದ ಚುಚ್ಚಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆಯ (Demonstration of Artificial Intelligence) ಪ್ರದರ್ಶನೀಯ ಕಾಲಘಟ್ಟದಲ್ಲಿಯೂ ಭಾರತೀಯ ಸಾಮಾಜಿಕತೆಯಲ್ಲಿ ಅಳಿಯಲಾಗದ ಹಲವು ಬಗೆಯ ಜಾತಿ ರೊಚ್ಚನ್ನು ಸಮೀಕ್ಷೆ ಅನಾವರಣಗೊಳಿಸಿದೆ. ಅದರ ಹುಟ್ಟುಗುಣವನ್ನು ಜಾಹೀರುಮಾಡಿದೆ ಅಷ್ಟೇ.
ಸಮೀಕ್ಷೆ ಅನುಷ್ಠಾನಕ್ಕಾಗಿ ಸರಕಾರ ಹಾಕಿರುವಷ್ಟು ಪ್ರಚಾರವನ್ನು ಅಲ್ಲಗಳೆಯುವಂತಹ ಮಟ್ಟದಲ್ಲಿರಲಿಲ್ಲ. ಆದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 52ರಷ್ಟು ದಾಖಲಿಸಲು ಎಲ್ಲಾ ಉಪ ಜಾತಿಗಳು ಸಾಕಷ್ಟು ಶ್ರಮಿಸಿವೆ. ಈ ಸಮೀಕ್ಷೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳ ನೇತಾರರು ಪರಿಶಿಷ್ಟ ಜಾತಿಗಳಿರುವ ವಾಸಸ್ಥಳಗಳಿಗೆ ಭೇಟಿ ನೀಡಿದಾಗ ಭಯಾನಕ ನರಕ ಸದೃಶ್ಯಗಳು ಅವರ ಕಣ್ಣುಗಳಿಗೆ ರಾಚಿ ಅವರನ್ನೇ ಮಂತ್ರ ಮುಗ್ಧರನ್ನಾಗಿಸಿದೆ. ಅಂತಹ ದುಃಸ್ಥಿತಿಗಳಲ್ಲಿ ವಾಸಿಸುವುದು ಬೆಳಕಿಗೆ ಬಂದವು. ಸಮೀಕ್ಷೆಯಲ್ಲಿ ರಾಜ್ಯದ 12 ಜಿಲ್ಲೆಗಳ ಶೇಕಡಾವಾರು ಪೈಕಿ ವಿಜಯಪುರ (100), ತುಮಕೂರು(101), ಚಾಮರಾಜ ನಗರ (101), ಹಾಸನ(102), ಮಂಡ್ಯ(103), ಧಾರವಾಡ(104), ಉತ್ತರ ಕನ್ನಡ(104), ಬಾಗಲಕೋಟೆ(105), ಉಡುಪಿ(106), ದಾವಣಗೆರೆ(108), ಗದಗ(108)ಮತ್ತು ಹಾವೇರಿ(111) ಜಿಲ್ಲೆಗಳಲ್ಲಿ ಸರಾಸರಿಗಿಂತ ಅತಿ ಹೆಚ್ಚು ದಾಖಲಾಗಿದೆ. ಇನ್ನುಳಿದ ಜಿಲ್ಲೆಗಳಾದ ಕೊಪ್ಪಳ(99) ಮತ್ತು ಬೆಳಗಾವಿ (98), ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ರಾಯಚೂರು ಅನುಕ್ರಮವಾಗಿ ಶೇ. 97ರಷ್ಟು ದಾಖಲಾಗಿದೆ. ವಿಜಯನಗರ ಮತ್ತು ಕೊಡಗಿನಲ್ಲಿ ಶೇ. 96; ಮೈಸೂರು ಮತ್ತು ಕೋಲಾರ ಶೇ. 95ರಷ್ಟು ಹಾಗೂ ಕಲಬುರಗಿಯಲ್ಲಿ ಶೇ. 93 ದಾಖಲಾಗಿದೆ. ಹಾಗೆಯೇ ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶೇ. 91ರಷ್ಟು ದಾಖಲಾಗಿದ್ದು; ಇನ್ನುಳಿದ ದಕ್ಷಿಣ ಕನ್ನಡ, ಬೀದರ್ ಮತ್ತು ಯಾದಗಿರಿಯಲ್ಲಿ ಶೇ. 90ರಷ್ಟು ಕುಟುಂಬಗಳನ್ನು ಸಮೀಕ್ಷೆ ಮುಟ್ಟಲು ಸಾಧ್ಯವಾಗಿದೆ. ಅಂತಿಮ ಗಡುವಿನೊಳಗೆ ಶೇ.92ಕ್ಕಿಂತ ತುಸು ಹೆಚ್ಚಿನ ಶೇಕಡಾಂಶ ದಾಟುವ ನಿರೀಕ್ಷೆಯಿದೆ. ಈ ದೃಷ್ಟಿಯಲ್ಲಿ ಸಮೀಕ್ಷೆ ಮತ್ತೆ ಮತ್ತೆ ಮುಂದೂಡುವುದರಿಂದ ಯಾವುದೇ ಲಾಭವಿಲ್ಲ. ಸಮೀಕ್ಷೆಯಲ್ಲಿ ಸಿಗುವ ದತ್ತಾಂಶಗಳನ್ನು ವರ್ಧಕ ಸ್ವರೂಪದಲ್ಲಿ ಆಯೋಗ ಬಳಸಿದಾಗ ಉತ್ಕೃಷ್ಟವಾದ ವರದಿ ಬರುತ್ತದೆ.
ಸಮೀಕ್ಷೆಯ ಫಲಿತಾಂಶದ ದತ್ತಾಂಶಗಳು ಹೊರಬಂದಿಲ್ಲ. ಆದರೂ ಕೆಲವರು ನಮ್ಮದು ಅಷ್ಟು, ಇವರದು ಇಷ್ಟೆಂದು ಸಂಖ್ಯಾಬಲದ ವ್ಯರ್ಥ ಆಟವಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಛಲವಾದಿ ಮಹಾಸಭಾದ ಪದಾಧಿಕಾರಿಯೊಬ್ಬರು ಮೈಸೂರು ಪ್ರಾಂತದ 1931ನೇ ಜನಗಣತಿ ಮುಖೇನ ಬೇರೆಯವರು ಅಷ್ಟಿರಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿದ್ದಾರೆ. ಮೈಸೂರು ರಾಜ್ಯಕ್ಕೆ 1956ರಲ್ಲಿ ಭೂ ಪ್ರದೇಶಗಳ ಜೊತೆ ಅವುಗಳಲ್ಲಿದ್ದ ಉಪ ಜಾತಿಗಳೊಂದಿಗೆ ಜನಸಂಖ್ಯೆಯೂ ಸೇರ್ಪಡೆ ಆಯಿತು. ಈ ನೈಜ ಸಾಮಾಜಿಕತೆ ಇಂತಹವರ ಅರಿವಿಗೆ ಬಾರದ ವಿಚಾರವಾಗಿದೆ. 1976ಕ್ಕೂ ಹಿಂದೆ ಭೋವಿ, ಲಂಬಾಣಿ, ಕೊರಚ/ಕೊರಮ ಜಾತಿಗಳ ಜನಸಂಖ್ಯೆ ಕಡಿಮೆಯಿತ್ತು. ಪ್ರಾದೇಶಿಕ ನಿಬಂಧನೆ ತೆಗೆದು ಹಾಕಿದ ಮೇಲೆ ಇವುಗಳ ಪ್ರಜಾ ಗಾತ್ರ ಹಿಗ್ಗಿತು. ಇದಲ್ಲದೆ, ಮಾದಿಗ ಸಮುದಾಯದ ಕೆಲವರು ಇನ್ನೂ ಆಯೋಗದಿಂದ ಅಧಿಕೃತವಾಗಿ ತನ್ನ ವರದಿ ಮತ್ತು ಶಿಫಾರಸುಗಳನ್ನು ಸರಕಾರಕ್ಕೆ ನೀಡಿಲ್ಲವೆಂಬ ಕಾರಣಗಳಡಿ ಒಳ ಮೀಸಲಾತಿ ಚರ್ಚೆಯನ್ನು ಜೀವಂತವಿಡುವ ನೆಪದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಸುಪ್ರೀಂ ಕೋರ್ಟು ತೀರ್ಪಿನ ಜಾರಿಗೆ ಬೇಕಾದ ಕಸರತ್ತು ಮಾಡುತ್ತಿಲ್ಲ ಎಂದಾಗ ಅಕ್ಷರಶಃ ಯಾರು ಬೇಕಾದರೂ ಟೀಕಿಸಬಹುದಿತ್ತು. ಇಲ್ಲಾಗಿರುವ ವಿಳಂಬವನ್ನು ಯಾರೂ ಸಮರ್ಥಿಸುವುದಿಲ್ಲ. ಈ ಸರಕಾರದಲ್ಲಿ ಮಾದಿಗರೇ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ದ್ದರೆ ಬಹುಶಃ ಒಳ ಮೀಸಲಾತಿಯ ಜಾರಿಗೆ ವಿರುದ್ಧವಾದ ಟೀಕೆಯ ಹೆಬ್ಬಂಡೆಗಳು ಅನುಷ್ಠಾನ ಹಾದಿಯಲ್ಲಿ ರಾಶಿ ರಾಶಿ ಬೀಳುತ್ತಿದ್ದವು. ಹಾಗೆಯೇ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ವಿರುದ್ಧವೂ ಟೀಕೆಗಳ ಮಹಾಪೂರ ಹರಿದಿವೆ. ಇವುಗಳೆಲ್ಲವನ್ನೂ ಪ್ರಜಾಪ್ರಭುತ್ವದ ಅಂದ-ಚಂದವೆಂದು ಅಂಬೋಣ.
ಭಾಜಪ ಯಾವ ಸಂದರ್ಭದಲ್ಲಿಯೂ ಪರಿಶಿಷ್ಟರ ಜೊತೆ ಗಟ್ಟಿಯಾಗಿ ನಿಲ್ಲುವ ಆಂತರಿಕ ಮನೋಧರ್ಮಗಳನ್ನು ರೂಢಿಸಿಕೊಂಡಿಲ್ಲ. ಇತ್ತೀಚೆಗೆ ಅದರ ಕಾರ್ಯಕಾರಿಣಿ ಸಭೆಯಲ್ಲಿ ಒಳ ಮೀಸಲಾತಿ ಸಮೀಕ್ಷೆಗೆ ಕಾನೂನಿನ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿ ತನ್ನ ದ್ವಿಮುಖ ನೀತಿ ಪ್ರದರ್ಶನ ಮಾಡಿದೆ. ಅದರ ಸಂಸದೀಯ ಗುಣದೊಳಗೆ ‘ಅಕ್ಕಿಯೂ ಖರ್ಚಾಗದಂತೆ ಅಕ್ಕಳನ್ನು ಸಂಭಾಳಿಸುವ’ ಜಾಣ್ಮೆಯನ್ನು ಮೈಗೂಡಿಸಿಕೊಂಡಿದೆ. ಇನ್ನೂ ಸಮೀಕ್ಷೆ ಮುಗಿಯದಿದ್ದರೂ ಜಾರಿಯ ನೆಪದಡಿ ಆಗಸ್ಟ್ 1ರಿಂದ ಮತ್ತೊಂದು ಹೋರಾಟಕ್ಕೆ ಕರೆನೀಡಿದೆ. ಅದರೊಳಗೆ ಗುಟ್ಟೊಂದಿದೆ, 2023ರ ಚುನಾವಣೆಯಲ್ಲಿ ಭಾಜಪದಿಂದ ಜಾರಿಹೋಗಿರುವ ಮಾದಿಗರನ್ನು ‘ಘರ್‌ವಾಪಸಿ’ ಮಾಡುವುದು; ಸಾಧ್ಯವಾದಷ್ಟು ಸಿದ್ದರಾಮಯ್ಯ ಸರಕಾರಕ್ಕೆ ಇನ್ನಿಲ್ಲದ ಸಮಸ್ಯೆಗಳನ್ನು ಅದರ ಹೆಗಲ ಮೇಲಿಡುವುದು. ಮತ್ತೊಂದು ದಿಕ್ಕಿನಲ್ಲಿ ಒಳಮೀಸಲಾತಿ ವಿರೋಧಿಗಳಿಗೆ ಪರೋಕ್ಷವಾಗಿ ಅಭಯ ನೀಡುವುದು. ಈ ಮೂಲಕ 2028ರ ಚುನಾವಣೆಯ ತಾಲೀಮನ್ನು ಒಳಮೀಸಲಾತಿ ಮೂಲಕ ಭಾಜಪ ಆರಂಭಿಸಿದಂತಿದೆ. ಯಾವುದೇ ಮುಚ್ಚುಮರೆಯಿಲ್ಲದೆ ತನ್ನ ವಿರೋಧಿ ಲಾಂಛನದವರೊಂದಿಗೆ ವೇದಿಕೆ ಹಂಚಿಕೊಂಡು ಬೆತ್ತಲಾಗಿದೆ.
ಒಂದು ವೇಳೆ ನ್ಯಾಯಮೂರ್ತಿ ನಾಗಮೋಹನ ದಾಸ್‌ಆಯೋಗ 101 ಜಾತಿಗಳಿಗೆ ಒಪ್ಪಿತವಾಗುವ ವರದಿ ನೀಡಿದರೂ ಸಹ ಉದ್ದೇಶಿತ ಅನುಷ್ಠಾನಕ್ಕೆ ಒಂದಷ್ಟು ವಿಘ್ನಗಳನ್ನು ಅಸಹಕಾರ ಚಳವಳಿ ಮುಖೇನ ನೀಡುವುದು ಭಾಜಪದ ಮುಖ್ಯ ಉದ್ದೇಶವಾಗಿದೆ. ತಳ ಬುಡವಿಲ್ಲದ ಮಾಧುಸ್ವಾಮಿ ವರದಿ ಹಿಡಿದು ಬೀದಿಗಿಳಿಯುತ್ತೇವೆಂದು ಭಾಜಪ ಸಂಸದ ಗೋವಿಂದ ಕಾರಜೋಳ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ನಡೆಯಂತೂ ಪಂಚೇದ್ರಿಗಳೆಲ್ಲವೂ ನೆಟ್ಟಗಿರುವವರು ಇಳಿ ಸಂಜೆಯ ನಸುಕಿನಲ್ಲಿ ಕಾಣುವ ಕನಸಿನಂತಾಗಬಹುದು. ಒಂದುವೇಳೆ, ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರ ಇನ್ನು ಮುಂದಾದರೂ ವಿಳಂಬ ಮಾಡಿದರೆ ಅಥವಾ ಪ್ರತಿಕೂಲತೆಗಳನ್ನು ಮೈ ಮೇಲೆ ಎಳೆದುಕೊಂಡರೆ ಅವುಗಳನ್ನು ತನ್ನ ಬಲವರ್ಧನೆಗಾಗಿ ಬಳಸಿಕೊಳ್ಳುವುದು ಭಾಜಪದ ಮುಂದಾಲೋಚನೆಗಳಾಗಿವೆ. ಗ್ಯಾರಂಟಿ ಸರಕಾರಕ್ಕೆ ಆದಷ್ಟು ಗಾಯ ಮಾಡಲು ಹಾಗೂ ಅದರಲ್ಲೂ ಸಿದ್ದರಾಮಯ್ಯ ನಾಯಕತ್ವ ಮಣಿಸಲು ಸಿಗುವ ಸಣ್ಣಪುಟ್ಟ ಆಯಾಮಗಳನ್ನು ಅತ್ಯಂತ ನಯವಾಗಿ ಬಳಸಿಕೊಳ್ಳಲು ಭಾಜಪ ಸಜ್ಜಾಗಿ ನಿಂತಿದೆ.
ಒಳ ಮೀಸಲಾತಿಗಾಗಿ ಹಂಬಲಿಸುವವರಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡಗಾಲು ಹಾಕುತ್ತಾರೆಂಬ ಅನುಮಾನಗಳು ಮನೆಮಾಡಿದ್ದವು. ಹೊಸಪೇಟೆಯ ಕಾಂಗ್ರೆಸ್ ಸಾಧನೆ ಸಮಾವೇಶದಲ್ಲಿ ಬಹಿರಂಗವಾಗಿ ಖರ್ಗೆಯವರು ತನ್ನ ಪಕ್ಷದ ಮತ್ತು ಅವರ ವೈಯಕ್ತಿಕ ನಿಲುವುಗಳನ್ನು ಪ್ರತಿಪಾದಿಸಿದ್ದಾರೆ. ಆದೇ ಸಂದರ್ಭದಲ್ಲಿ ವೀರಶೈವ/ಲಿಂಗಾಯತ ಜಂಗಮರು ಬೇಡ (ಬುಡ್ಗ) ಜಂಗಮರ ಮೀಸಲಾತಿ ಮೂಲಕ ಪರಿಶಿಷ್ಟ ಜಾತಿಗಳ ಸವಲತ್ತಿಗೆ ತಡೆ ಹಾಕುತ್ತಿರುವ ಬಗ್ಗೆ ಬಲು ಗಡುಸಾಗಿಯೇ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಈ ಸಮಸ್ಯೆ ಆದಷ್ಟು ಬೇಗನೆ ಸುಖಾಂತ್ಯ ಕಾಣಬೇಕೆಂಬ ಇಂಗಿತವನ್ನು ಆಗಾಗ ರಾಜ್ಯ ನಾಯಕರುಗಳ ಮುಂದೆ ವ್ಯಕ್ತಪಡಿಸಿದ್ದಾರೆ. ಆದುದರಿಂದ, ಸಿದ್ದರಾಮಯ್ಯ ಸರಕಾರಕ್ಕೆ ಒಳ ಮೀಸಲಾತಿ ಜಾರಿಗೆ ಅವರ ವರಿಷ್ಠರ ತೊಡರುಗಾಲು ಇರದ ಕಾರಣ ನೆಮ್ಮದಿಯಿಂದ ಅನುಷ್ಠಾನಕ್ಕೆ ಮುಂದಾಗುವ ಮುಕ್ತ ಅವಕಾಶಗಳಿವೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಾಮಾಜಿಕ ಸ್ಥಿತಿಗಳಿಗೆ ಕರ್ನಾಟಕ ಹತ್ತಿರವಾಗಿದ್ದರೂ ಅಷ್ಟೇ ಚಿತ್ರವಿಚಿತ್ರ ಸಾಮಾಜಿಕ ವೈರುಧ್ಯಗಳನ್ನು ತುಂಬಿಕೊಂಡಿದೆ. ಇವುಗಳಿಗೆ ನ್ಯಾಯೋಚಿತವಾದ ಪರಿಹಾರಗಳನ್ನು ದಾಸ್ ಆಯೋಗ ಕಂಡುಕೊಳ್ಳಬೇಕಿದೆ. ಉಪಜಾತಿಗಳ ಜೋಡಣೆ ಮತ್ತು ಅವುಗಳ ಅಂತರ ಹಿಂದುಳಿದಿರುವಿಕೆಗಳನ್ನು (Intra Backwardness) ಸಮೀಕ್ಷೆಯಲ್ಲಿ ದಾಖಲಿಸಿರುವ ಅಂಕಿ-ಅಂಶಗಳ ಮುಖೇನ ಸಾಂವಿಧಾನಿಕ ಭೂಮಿಕೆಗಳಡಿ ಸಾದರಪಡಿಸುವ ಗುರುತರವಾದ ಹೊಣೆಗಾರಿಕೆ ಆಯೋಗದ ಹೆಗಲಮೇಲಿದೆ. ನ್ಯಾಯಮೂರ್ತಿ ದಾಸ್ ಅವರು ಮೀಸಲಾತಿ ಹೆಚ್ಚಳಕ್ಕೂ ದುಡಿದಿದ್ದಾರೆ. ಆ ಅನುಭವದ ಸೆಲೆಯೊಳಗಿಂದ ಒಳ ಮೀಸಲಾತಿ ದತ್ತಾಂಶಗಳನ್ನು ನ್ಯಾಯೋಚಿತವಾಗಿ ನಿರ್ಣಯಿಸುವುದು ಕಬ್ಬಿಣದ ಕಡಲೆ ಆಗದೆಂದು ಪರಿಭಾವಿಸಬಹುದಾಗಿದೆ. ಅದರೊಳಗೆ ಪರಕಾಯ ಪ್ರವೇಶವಾದರೆ ಆಯೋಗದ ದಾರಿ ಸುಗಮವಾಗುತ್ತದೆ. ಮೀಸಲಾತಿ ಹೆಚ್ಚಳ ಮತ್ತು ಒಳ ಮೀಸಲಾತಿ ವಿಚಾರಗಳು ಉತ್ತರ-ದಕ್ಷಿಣ ಧ್ರುವಗಳಂತಿದ್ದರೂ ಒಟ್ಟಾರೆಯಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಬಲೀಕರಣದ ಉದ್ದೇಶ ಹೊಂದಿವೆ. ಉಪ ಗುಂಪುಗಳ ನಡುವೆ ಮೀಸಲಾತಿ ಅನುಪಾತಗಳನ್ನು ನೀಡುವಾಗ ಮೀಸಲಾತಿ ಹೆಚ್ಚಳದ ಶೇ.17ಕ್ಕೆ ಅನುಗುಣವಾದ ಸೂತ್ರಗಳನ್ನು ನೀಡಿದರೆ ಸರಕಾರಕ್ಕೆ ಬೇಕಾದ ಸೂತ್ರಗಳನ್ನು ಆಯ್ಕೆಮಾಡಿ ಜಾರಿ ಮಾಡಲು ಸುಲಭವಾಗುತ್ತದೆ.
ಹಾಗೆಯೇ ಸಿದ್ದರಾಮಯ್ಯರ ಈಗಿನ ಸರಕಾರಕ್ಕೆ ಹಿಂದಿನ ಅವಧಿಯಲ್ಲಿದ್ದ ರಾಜಕೀಯ ವಾತಾವರಣಕ್ಕಿಂತ ಸುಪ್ರೀಂ ಕೋರ್ಟ್ ತೀರ್ಪು ಒಳ ಮೀಸಲಾತಿ ಜಾರಿಗಿದ್ದ ಎಲ್ಲಾ ಬಗೆಯ ಕಾನೂನಿನ ಕಾರ್ಮೋಡಗಳನ್ನು ಹಿಂದಕ್ಕೆ ಸರಿಸಿ ಅನುಷ್ಠಾನ ಮಾರ್ಗಗಳನ್ನು ಸುಲಭವಾಗಿಸಿದೆ. ಆದುದರಿಂದ, ಅವರ ಸರಕಾರದ ವಿರುದ್ಧ ಎಂದಿನಂತೆ ಒಳ ಮೀಸಲಾತಿ ವಿರೋಧಿ ಟೀಕೆಗಳಿಗೆ ಸೊಪ್ಪು ಹಾಕದೆ ಶಾಸನಬದ್ಧವಾಗಿ ಜಾರಿಗೊಳಿಸಲು ಅಗತ್ಯವಿರುವ ಎಲ್ಲಾ ಸಂಸದೀಯ ಮಾರ್ಗಗಳನ್ನು ಮುಕ್ತವಾಗಿ ತುಳಿಯಬೇಕಿದೆ. ಆಗ ‘ಗ್ಯಾರಂಟಿ ಸಿದ್ದರಾಮಯ್ಯ’ನವರ ರಾಜಕೀಯ ಮುತ್ಸದ್ದಿತನ ಅನಾವರಣವಾಗುತ್ತದೆ. ಇಲ್ಲದೆ ಹೋದರೆ 2018ರ ಚುನಾವಣಾ ಫಲಿತಾಂಶಕ್ಕಿಂತ ಕುಲಗೆಟ್ಟ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗುವುದಂತೂ ನಿಶ್ಚಿತವಾಗುತ್ತದೆ. ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಕಾಂಗ್ರೆಸಿಗರ ಆಯ್ಕೆ ಇಚ್ಛಾಶಕ್ತಿಯಲ್ಲಿ ಅವರ ರಾಜಕೀಯ ಭವಿಷ್ಯವೂ ಅಡಗಿದೆ.







