ಎಸೆಸೆಲ್ಸಿ ತೃತೀಯ ಭಾಷೆಗೆ ಗ್ರೇಡಿಂಗ್: ಉರ್ದು ಶಾಲೆಗಳ ಹಿನ್ನೆಲೆಯಲ್ಲಿ ಉದ್ಭವಿಸುವ ಪ್ರಶ್ನೆಗಳು

ಕರ್ನಾಟಕ ಸರಕಾರವು 2026ರಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಯಾಗಿ ಗಮನ ಸೆಳೆದಿದೆ.
ವಿದ್ಯಾರ್ಥಿಗಳ ಮೇಲಿನ ಅಂಕಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮವು ಪ್ರಶಂಸೆಗೆ ಪಾತ್ರವಾಗಿದ್ದರೂ, ಅದರ ಅನುಷ್ಠಾನದಲ್ಲಿ ಕೆಲವು ಪ್ರಮುಖ ಪ್ರಶ್ನೆಗಳು ಉದ್ಭವಿಸುತ್ತಿವೆ.
ಭಾರತದಲ್ಲಿ ದೀರ್ಘಕಾಲದಿಂದ ‘ತ್ರಿಭಾಷಾ ಸೂತ್ರ’ ಜಾರಿಯಲ್ಲಿದ್ದು, ಕರ್ನಾಟಕದಲ್ಲಿಯೂ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಿದೆ. ಆದರೆ, ಶಾಲೆಯ ಮಾಧ್ಯಮದ ಪ್ರಕಾರ ಭಾಷೆಗಳ ಸ್ಥಾನ ಬದಲಾಗುತ್ತದೆ. ಉದಾಹರಣೆಗೆ, ಸರಕಾರದ ಉರ್ದು ಮಾಧ್ಯಮ ಶಾಲೆಗಳಲ್ಲಿ ಉರ್ದು ಪ್ರಥಮ ಭಾಷೆ, ಇಂಗ್ಲಿಷ್ ದ್ವಿತೀಯ ಭಾಷೆ ಹಾಗೂ ಕನ್ನಡ ತೃತೀಯ ಭಾಷೆಯಾಗಿರುತ್ತದೆ.
ಹಿಂದಿನ ವ್ಯವಸ್ಥೆಯಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನೀಡಲಾಗುತ್ತಿತ್ತು ಮತ್ತು ಅದು ಒಟ್ಟು ಫಲಿತಾಂಶದಲ್ಲಿ ಸೇರಿಸಲಾಗುತ್ತಿತ್ತು. ಇದರಿಂದ ಒಟ್ಟು ಅಂಕಗಳು 625 ಆಗುತ್ತಿದ್ದು, ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿಯೂ ಉತ್ತೀರ್ಣರಾಗಬೇಕಾಗಿತ್ತು. ಆದರೆ, ಹೊಸ ವ್ಯವಸ್ಥೆಯ ಪ್ರಕಾರ, ತೃತೀಯ ಭಾಷೆಗೆ ಅಂಕಗಳ ಬದಲು ಎ,ಬಿ,ಸಿ,ಡಿ ಎಂಬ ಗ್ರೇಡ್‌ಗಳನ್ನು ನೀಡಲಾಗುತ್ತದೆ. ಈ ಗ್ರೇಡ್‌ಗಳು ಅಂತಿಮ ಫಲಿತಾಂಶದಲ್ಲಿ ಪರಿಗಣಿಸಲ್ಪಡುವುದಿಲ್ಲ. ಇದರ ಪರಿಣಾಮವಾಗಿ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸಲಾಗಿದೆ. ಜೊತೆಗೆ, ಪಾಸ್-ಫೇಲ್ ಪದ್ಧತಿಯನ್ನು ತೆಗೆದುಹಾಕಲಾಗಿದ್ದರೂ, ಪರೀಕ್ಷೆ ಬರೆಯುವುದು ಕಡ್ಡಾಯವಾಗಿಯೇ ಉಳಿಸಲಾಗಿದೆ.
ಈ ಹೊಸ ನಿಯಮವು ಉರ್ದು ಮಾಧ್ಯಮ ಶಾಲೆಗಳಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂಬುದು ವಿಶೇಷವಾಗಿ ಗಮನಾರ್ಹವಾಗಿದೆ. ಅಂದರೆ, ಉರ್ದು ಶಾಲೆಗಳಲ್ಲಿ ತೃತೀಯ ಭಾಷೆಯಾಗಿರುವ ಕನ್ನಡಕ್ಕೂ ಅಂಕಗಳ ಬದಲು ಗ್ರೇಡ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ಕನ್ನಡ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕು. ಆದರೆ, ಅದರ ಅಂಕಗಳು ಅಂತಿಮ ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಇದೇ ನಿಯಮ ಹಿಂದಿ, ಅರಬಿ, ಪರ್ಷಿಯನ್ ಮುಂತಾದ ಇತರ ತೃತೀಯ ಭಾಷೆಗಳಿಗೂ ಅನ್ವಯವಾಗುತ್ತದೆ.
ಇಲ್ಲಿ ಒಂದು ಮಹತ್ವದ ಅಂಶ ಸ್ಪಷ್ಟವಾಗುವುದೇನೆಂದರೆ, ಭಾಷೆಯನ್ನು ಕಡೆಗಣಿಸಲಾಗಿಲ್ಲ ಆದರೆ ಅಂಕಗಳ ಒತ್ತಡದಿಂದ ಮಾತ್ರ ದೂರ ಇಡಲಾಗಿದೆ. ಹಿಂದಿ ಆಗಲಿ, ಕನ್ನಡ ಆಗಲಿ, ಯಾವುದೇ ತೃತೀಯ ಭಾಷೆಯೂ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಬದಲಾಗಿ, ಭಾಷಾ ಅಧ್ಯಯನವನ್ನು ಒತ್ತಡರಹಿತವಾಗಿ ಮುಂದುವರಿಸುವ ಅವಕಾಶವನ್ನು ಈ ವ್ಯವಸ್ಥೆ ಒದಗಿಸುತ್ತದೆ.
ಆದರೂ, ಈ ಬದಲಾವಣೆಯ ಹಿನ್ನೆಲೆಯಲ್ಲಿ ಒಂದು ಸೂಕ್ಷ್ಮವಾದ ಮಹತ್ವದ ಪ್ರಶ್ನೆ ಉದ್ಭವಿಸುತ್ತದೆ: ಅಂಕಗಳಿಲ್ಲದ ತೃತೀಯ ಭಾಷೆಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಅದೇ ಮಟ್ಟದಲ್ಲಿ ಗಂಭೀರವಾಗಿ ಕಲಿಯುವರೇ? ವಿಶೇಷವಾಗಿ ಉರ್ದು ಶಾಲೆಗಳಲ್ಲಿನ ಕನ್ನಡ ಅಧ್ಯಯನದ ಮಹತ್ವ ಕುಗ್ಗುವ ಸಾಧ್ಯತೆ ಇದೆಯೇ? ಕೆಲವು ಶಿಕ್ಷಕರು ವ್ಯಕ್ತಪಡಿಸುವ ಆತಂಕವೇನೆಂದರೆ, ಅಂಕಗಳ ಅಭಾವದಿಂದ ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಕಡೆಗಣಿಸುವ ಸಾಧ್ಯತೆ ಇದೆ. ಇದರಿಂದ ರಾಜ್ಯ ಭಾಷೆಯಾದ ಕನ್ನಡದ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗಬಹುದೆಂಬ ಭಯವೂ ವ್ಯಕ್ತವಾಗುತ್ತಿದೆ.
ನಿಯಮವನ್ನು ಲಾಭಗಳ ದೃಷ್ಟಿಯಿಂದ ನೋಡುವುದಾದರೆ, ಇದು ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಅಂಕಗಳ ಭಯವಿಲ್ಲದೆ ಭಾಷೆಯನ್ನು ಕಲಿಯಲು ಅವಕಾಶ ಮಾಡಿಕೊಡುತ್ತದೆ. ಮುಖ್ಯ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದರಿಂದ ಶಿಕ್ಷಣವನ್ನು ಅಂಕಕೇಂದ್ರಿತ ಮನೋಭಾವದಿಂದ ಹೊರತೆಗೆದು, ಕಲಿಕಾಕೇಂದ್ರಿತ ದಿಕ್ಕಿನತ್ತ ಸಾಗಿಸುವ ಪ್ರಯತ್ನವೆಂದು ಹೇಳಿದರೆ ತಪ್ಪಾಗಲಾರದು
ಆದರೆ, ನಿಯಮದ ಇನ್ನೊಂದು ಮುಖವಾದ ಸವಾಲುಗಳನ್ನು ನೋಡುವುದಾದರೆ, ಅಂಕಗಳಿಲ್ಲದ ಕಾರಣ ತೃತೀಯ ಭಾಷೆಯ ಗಂಭೀರತೆ ಕುಗ್ಗುವ ಸಾಧ್ಯತೆ ಇದೆ. ಮೌಲ್ಯಮಾಪನದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಕಾಪಾಡುವುದು ಶಿಕ್ಷಕರಿಗೆ ಸವಾಲಾಗಬಹುದು. ವಿಶೇಷವಾಗಿ ವಿಭಿನ್ನ ಮಾಧ್ಯಮ ಶಾಲೆಗಳಲ್ಲಿನ ಭಾಷಾ ಸಮತೋಲನವನ್ನು ಉಳಿಸುವುದು ಒಂದು ದೊಡ್ಡ ಹೊಣೆಗಾರಿಕೆಯಾಗಿದೆ.
ಹೀಗಾಗಿ, ಈ ಸುಧಾರಣೆ ಯಶಸ್ವಿಯಾಗಲು ಕೇವಲ ನೀತಿ ಬದಲಾವಣೆ ಸಾಕಾಗುವುದಿಲ್ಲ; ಅದರ ಸಮರ್ಪಕ ಅನುಷ್ಠಾನವೂ ಅಗತ್ಯವಾಗಿದೆ. ಸರಕಾರವು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವುದರ ಜೊತೆಗೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾಷೆಯ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕಾಗಿದೆ.
ಒಟ್ಟಾರೆ, ಭಾಷೆಯ ಗೌರವವನ್ನು ಉಳಿಸಿಕೊಂಡು, ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಒಂದು ಸಮತೋಲನ ಸಾಧಿಸಲು ಮಾಡಿದ ಪ್ರಯತ್ನವಾಗಿದೆ ಎಂದರೆ ಸುಳ್ಳಾಗಲಾರದು. ಆದರೆ, ಇದರ ಯಶಸ್ಸು ನಮ್ಮ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯುತ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ.
‘‘ಭಾಷೆಯ ಮೌಲ್ಯ ಅಂಕಗಳಲ್ಲಿ ಅಲ್ಲ, ಅರಿವಿನಲ್ಲಿ ಅಳೆಯಬೇಕಾಗಿದೆ’’






