ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ಗ್ರಾಪಂ ಪಿಡಿಒಗಳು ವಿಫಲ: ಸಾರ್ವಜನಿಕರ ಆರೋಪ

ಗುಡಿಬಂಡೆ : ಲಕ್ಷಾಂತರ ರೂ.ಗಳ ವೆಚ್ಚಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಸಹ ಗ್ರಾಮಗಳಲ್ಲಿ ಜನರ ಬಳಕೆಗೆ ಉಪಯೋಗವಿಲ್ಲದಂತಾಗಿದೆ. ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಪಟ್ಟ ಗುತ್ತಿಗೆದಾರರು ಶುದ್ಧ ಕುಡಿಯುವ ನೀರಿನ ಘಟಕಗಳು ಹಸ್ತಾಂತರವನ್ನು ಮಾಡಿದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಗ್ರಾಪಂ ಪಿಡಿಒಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅದಿನಾರಾಯಣಹಳ್ಳಿ, ಚೆಂಡೂರು, ನಲ್ಲಗೋಂಡಯ್ಯಗಾರಹಳ್ಳಿ, ಎಲ್ಲೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನರಸಾಪುರ, ಬೀಚಗಾನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಜೇನಹಳ್ಳಿ, ಸೋಮೇನಹಳ್ಳಿ ಗ್ರಾಮ ಪಂಚಾಯತ್‌ನ ವೀರರಾವುತನಹಳ್ಳಿ ಗ್ರಾಮಗಳಲ್ಲಿ ಸರಕಾರದಿಂದ ಶುದ್ಧ ಕುಡಿಯುವ ನೀರಿನ ಘಟಗಳನ್ನು ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಆದರೇ ಘಟಕಗಳನ್ನು ನಿರ್ಮಾಣ ಮಾಡಿ 5 ವರ್ಷಗಳು ಗುತ್ತಿಗೆದಾರನೇ ಅವುಗಳನ್ನು ನಿರ್ವಹಣೆ ಮಾಡಬೇಕಾಗಿರುತ್ತದೆ. ಅವರ ಅವಧಿ ಮುಗಿದು ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳಿಗೆ ಹಸ್ತಾಂತರ ಮಾಡಿದ್ದರೂ ಅವುಗಳನ್ನು ಗ್ರಾಮ ಪಂಚಾಯತ್‌ನವರು ಸರಿಯಾಗಿ ನಿರ್ವಹಣೆ ಮಾಡದೇ ಅವುಗಳನ್ನು ಪಾಳು ಬೀಳುವಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಜನರು ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಇರುವುದನ್ನು ಗಮನಿಸಿದ ಸರಕಾರ ಗ್ರಾಮಗಳಲ್ಲಿ, ನಗರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದರೇ, ಸಂಬಂದಪಟ್ಟ ಅಧಿಕಾರಿಗಳು ಯಾವುದೇ ಕ್ರಮವನ್ನು ವಹಿಸದೇ ಬೇಜವಾಬ್ದಾರಿಯನ್ನು ತೋರಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಗ್ರಾಪಂ ಪಿಡಿಒಗಳ ಗಮನಕ್ಕೆ ತಂದರೂ ಶುದ್ಧ ನೀರಿನ ಘಟಕಗಳ ಕಡೇ ಇದುವರೆಗೂ ತಿರುಗಿ ನೋಡುತ್ತಿಲ್ಲ ,ಇನ್ನೂ ಜನರ ಸಮಸ್ಯೆಗಳನ್ನು ಯಾವ ಅಧಿಕಾರಿಗಳಿಗೆ ಹೇಳಿಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಅಸಾಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಸಂಬಂದಪಟ್ಟ ಅಧಿಕಾರಿಗಳ ಮೇಲೆ ಕ್ರಮವನ್ನು ವಹಿಸಿ ಕುಡಿಯುವ ನೀರನ್ನು ಸಾರ್ವಜನಿಕರ ಬಳಕೆ ಅನುಕೂಲ ಮಾಡಿಕೊಡಿ ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಗುತ್ತಿಗೆದಾರರು ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದ 5 ವರ್ಷಗಳ ಕಾಲ ಅವರೇ ನಿರ್ವಹಣೆ ಮಾಡುತ್ತಾರೆ. ಈಗ ಅವರ ಅವಧಿ ಮುಗಿದ ಗ್ರಾಮಗಳ ಘಟಕಗಳನ್ನು ಗ್ರಾಪಂಗೆ ಹಸ್ತಾಂತರ ಮಾಡಲಾಗಿದೆ. ಗ್ರಾಪಂನವರ ಸರಿಯಾಗಿ ನಿರ್ವಹಣೆ ಮಾಡದೇ ಹಾಗೇ ಬಿಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು.
-ನವೀನ್, ಎಡ್ಲ್ಯೂಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗುಡಿಬಂಡೆ







