ಮೋಟಾರು ವಾಹನ ಸಂಗ್ರಾಹಕರ(ಒಪ್ಪಂದದಾರರ) ಮಾರ್ಗಸೂಚಿಗಳು

ಸಾಂದರ್ಭಿಕ ಚಿತ್ರ (PTI)
ಹೊಂದಾಣಿಕೆ (ನಮ್ಯತೆ), ಸ್ವಾತಂತ್ರ್ಯ ಮತ್ತು ತಾಂತ್ರಿಕ ಸುಲಭತೆಯ ಭರವಸೆಯು ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ಚಾಲಕರನ್ನು ಅಪ್ಲಿಕೇಶನ್(APP) ಆಧಾರಿತ ರೈಡ್-ಹೇಲಿಂಗ್(ಆನ್ಲೈನ್ ಅಪ್ಲಿಕೇಶನ್ ಮೂಲಕ ಸಾರಿಗೆ ವಾಹನಗಳನ್ನು ಕಾಯ್ದಿರಿಸುವ ಸೇವೆ) ವೇದಿಕೆಗಳತ್ತ ಆಕರ್ಷಿಸಿದೆ. ಆದಾಗ್ಯೂ, ಹೆಚ್ಚುತ್ತಿರುವ ಕಾರ್ಯಭಾರ(ಅಧಿಕಾರ ಒತ್ತಡ), ಅಸ್ಪಷ್ಟ ನೀತಿಗಳು, ನ್ಯಾಯವಲ್ಲದ ಅಮಾನತು ಕ್ರಮಗಳು ಮತ್ತು ರಕ್ಷಣೆಯ ಕೊರತೆಯು ಆ ಭರವಸೆಯನ್ನು ಅನೇಕರಿಗೆ ನಿರಾಶೆಯಾಗಿ ಪರಿವರ್ತಿಸಿದೆ. ಭಾರತದಾದ್ಯಂತ 3 ದಶಲಕ್ಷಕ್ಕೂ ಹೆಚ್ಚು ಗಿಗ್ ಚಾಲಕರು(ಆನ್ಲೈನ್ ವೇದಿಕೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಚಾಲಕರು) ಅನುಭವಿಸಿದ ಈ ಸವಾಲುಗಳು ಸಮಗ್ರ ಮತ್ತು ಜಾರಿಗೊಳಿಸಬಹುದಾದ ನಿಯಂತ್ರಣ ಕ್ರಮಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸಿವೆ.
ಇದಕ್ಕೆ ಸೂಕ್ತ ಸ್ಪಂದನೆಯಾಗಿ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಶ್ರೀ ನಿತಿನ್ ಗಡ್ಕರಿ ಅವರ ಮಾರ್ಗದರ್ಶನದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಹಿಂದೆ 1988ರ ಮೋಟಾರು ವಾಹನ ಕಾಯ್ದೆಯ ಅಡಿ "ಮೋಟಾರು ವಾಹನ ಸಂಗ್ರಾಹಕರ ಮಾರ್ಗಸೂಚಿಗಳು-2020" ಅನ್ನು ಬಿಡುಗಡೆ ಮಾಡಿತ್ತು. ಇವು ರೈಡ್-ಹೇಲಿಂಗ್ ಉದ್ಯಮದ ಬೆಳವಣಿಗೆಗೆ ಉತ್ತೇಜನ ನೀಡುವ ಸಂಗ್ರಾಹಕರಿಗೆ ಪರವಾನಗಿ ನೀಡಲು ಮತ್ತು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವ ನಿಯಂತ್ರಕ ಮಾರ್ಗಸೂಚಿಗಳನ್ನು ಹೊಂದಿವೆ. ಆದಾಗ್ಯೂ, ಚಾಲಕರು ಮತ್ತು ಪ್ರಯಾಣಿಕರಿಬ್ಬರಿಗೂ ಸುರಕ್ಷತೆ, ನ್ಯಾಯಸಮ್ಮತತೆ ಮತ್ತು ಹೊಣೆಗಾರಿಕೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಪರಿಹರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈಗ ಮೋಟಾರ್ ವಾಹನ ಸಂಗ್ರಾಹಕ ಮಾರ್ಗಸೂಚಿಗಳು-2025 ಅನ್ನು ಪರಿಚಯಿಸಿದೆ. ಭಾರತದ ಡಿಜಿಟಲ್ ಚಲನಶೀಲತೆಯ ಪರಿಸರ ವ್ಯವಸ್ಥೆಗೆ ಸ್ವರೂಪ, ಸುರಕ್ಷತೆ ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ತರುವ ಪ್ರಮುಖ ನೀತಿ ನವೀಕರಣ ಇದಾಗಿದೆ.
1988ರ ಮೋಟಾರು ವಾಹನ ಕಾಯ್ದೆಯ ಕಾನೂನಿನ ತಳಹದಿಯ ಮೇಲೆ ನಿರ್ಮಿಸಲಾದ ಈ ಮಾರ್ಗಸೂಚಿಗಳು ಓಲಾ, ಉಬರ್, ರಾಪಿಡೊ(Rapido) ಮತ್ತು ಇತರ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸಂಗ್ರಾಹಕರ ಕಾರ್ಯಾಚರಣೆಯನ್ನು ನಿಯಂತ್ರಿಸುವ ಗುರಿ ಹೊಂದಿವೆ. ಇನ್ನೂ ಹೆಚ್ಚಿನದಾಗಿ, ಮಾರ್ಗಸೂಚಿಗಳು ಸಾಂವಿಧಾನಿಕ ಆದೇಶಗಳು ಮತ್ತು ನ್ಯಾಯಾಂಗ ನಿರ್ದೇಶನಗಳೊಂದಿಗೆ ಹೊಂದಿಕೆಯಾಗುವಾಗ ಚಾಲಕರು ಮತ್ತು ಪ್ರಯಾಣಿಕರಿಬ್ಬರಿಗೂ ಸಮತೋಲಿತ ಪ್ರಯೋಜನ ಒದಗಿಸಲು ಪ್ರಯತ್ನಿಸುತ್ತವೆ.
2025ರ ಮಾರ್ಗಸೂಚಿಗಳ ಅತ್ಯಂತ ಗಮನಾರ್ಹ ಅಂಶವೆಂದರೆ, ಚಾಲಕರ ಹಿತಾಸಕ್ತಿಗಳ ರಕ್ಷಣೆಯಾಗಿದೆ. ಇಲ್ಲಿಯವರೆಗೆ, ಸಂಗ್ರಾಹಕರ ವೇದಿಕೆಗಳೊಂದಿಗೆ ಸಂಬಂಧ ಹೊಂದಿರುವ ಚಾಲಕರು ಅಲ್ಪ ಗಳಿಕೆ, ಮನಬಂದಂತೆ ಚಾಲಕರನ್ನು ಕಿತ್ತೊಗೆಯುವ ಕ್ರಮಗಳು, ವಿಮೆಯ ಕೊರತೆ ಮತ್ತು ಸಾಕಷ್ಟು ಕಾನೂನು ನೆರವಿಲ್ಲದ ಅನಿಶ್ಚಯ ಸಂದರ್ಭಗಳನ್ನು ಎದುರಿಸುತ್ತಿದ್ದರು. ಹೊಸ ನಿಯಮಗಳ ಮಾರ್ಗಸೂಚಿಗಳು ಈ ವ್ಯವಸ್ಥಿತ ಸಮಸ್ಯೆಗಳವನ್ನು ಪರಿಹರಿಸಲು ಪ್ರಯತ್ನಿಸುತ್ತವೆ.
ರಾಜ್ಯಗಳು ಸೂಚಿಸಿದ ಮೂಲ ದರಗಳ ಆಧಾರದ ಮೇಲೆ ಗಂಟೆಗೆ ಅಥವಾ ದಿನಕ್ಕೆ ಕನಿಷ್ಠ ಖಾತರಿಯ ಗಳಿಕೆಯನ್ನು ಖಚಿತಪಡಿಸಿಕೊಳ್ಳುವ ಸಂಗ್ರಾಹಕರ ಮಾರ್ಗಸೂಚಿಗಳ ಅಗತ್ಯವಿತ್ತು. ಸಂಗ್ರಾಹಕ ಮತ್ತು ಚಾಲಕರ ನಡುವೆ ಶುಲ್ಕ ಇತ್ಯರ್ಥವನ್ನು ಪರಸ್ಪರ ಒಪ್ಪಂದದ ಆಧಾರದ ಮೇಲೆ ದೈನಂದಿನ, ವಾರಕ್ಕೊಮ್ಮೆ ಅಥವಾ 15 ದಿನಗಳ ಆಧಾರದ ಮೇಲೆ ಮಾಡಬೇಕೆಂದು ಈ ಮಾರ್ಗಸೂಚಿ ಆದೇಶಿಸುತ್ತದೆ. ಈ ಕ್ರಮವು ಸಾವಿರಾರು ಚಾಲಕರು ಎದುರಿಸುತ್ತಿರುವ ಗಳಿಕೆಯ ಏರಿಳಿತವನ್ನು ನಿವಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ವಿಶೇಷವಾಗಿ ಕಡಿಮೆ ಅವಧಿಗಳ ಕೆಲಸದ ಸಂದರ್ಭಗಳಲ್ಲಿ. ಇದರ ಜತೆಗೆ, ಸರ್ಕಾರವು ಈಗ ಪ್ರತಿ ಸಂಗ್ರಾಹಕರೂ ಕನಿಷ್ಠ 5 ಲಕ್ಷ ರೂ. ಆರೋಗ್ಯ ವಿಮೆ ಮತ್ತು 10 ಲಕ್ಷ ರೂ. ಅವಧಿ ವಿಮೆ ಒದಗಿಸಬೇಕೆಂದು ಒತ್ತಾಯಿಸುತ್ತದೆ. ಈ ರಕ್ಷಣೆಗಳು ಗಿಗ್ ಕಾರ್ಮಿಕರನ್ನು ಔಪಚಾರಿಕ ಕಾರ್ಮಿಕ ವ್ಯವಸ್ಥೆಯ ವ್ಯಾಪ್ತಿಗೆ ತರುತ್ತವೆ.
ಇದಲ್ಲದೆ, ಹೊಸ ಮಾರ್ಗಸೂಚಿಗಳು ಆಯೋಗಗಳಲ್ಲಿ ಪಾರದರ್ಶಕತೆಯನ್ನು ಪರಿಚಯಿಸುತ್ತವೆ, ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿ ದರದಲ್ಲಿ ಸಂಗ್ರಾಹಕರ ಪಾಲನ್ನು 20%ಗೆ ಮಿತಿಗೊಳಿಸುತ್ತವೆ. ಇದು ಚಾಲಕರು ತಮ್ಮ ಗಳಿಕೆಯ ನ್ಯಾಯಯುತ ಭಾಗವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ. ಪಾವತಿ ಕಡಿತಗಳು, ದರ ವಿಭಜನೆಗಳು ಮತ್ತು ದಂಡಗಳ ಬಗ್ಗೆ ಸಂಗ್ರಾಹಕರು ಸ್ಪಷ್ಟ ಮತ್ತು ವಿಷಯವಾರು ಮಾಹಿತಿಯನ್ನು ಸಹ ಒದಗಿಸಬೇಕು.
ರೈಡ್ ರದ್ದತಿ, ಪಾವತಿ ವಿವಾದಗಳು ಅಥವಾ ಅಮಾನತುಗಳಂತಹ ಸಮಸ್ಯೆಗಳನ್ನು ಸಮಯಕ್ಕೆ ಅನುಗುಣವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಪರಿಹರಿಸಬಹುದಾದ ಔಪಚಾರಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸಲು ಮಾರ್ಗಸೂಚಿಗಳು ಪ್ರತಿಯೊಬ್ಬ ಸಂಗ್ರಾಹಕರಿಂದ ನಿರೀಕ್ಷಿಸುತ್ತವೆ. ಅಪ್ಲಿಕೇಶನ್ ಬಳಕೆ, ತುರ್ತು ಪ್ರತಿಕ್ರಿಯೆ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು, ಲಿಂಗ ಸಂವೇದನೆ, ದಿವ್ಯಾಂಗರ ಜಾಗೃತಿ, ಗ್ರಾಹಕರ ಸಂವಹನ, ಡಿಜಿಟಲ್ ಸಾಕ್ಷರತೆ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡ 40-ತಾಸುಗಳ ಸೇರ್ಪಡೆ ಕಾರ್ಯಕ್ರಮ(ಇಂಡಕ್ಷನ್ ಪ್ರೋಗ್ರಾಂ) ಸೇರಿದಂತೆ ಚಾಲಕರು ಆವರ್ತಕ ತರಬೇತಿಯನ್ನು ಸಹ ಪಡೆಯುತ್ತಾರೆ, ಇದು ಭವಿಷ್ಯದ ಚಲನಶೀಲತೆಯ ಸವಾಲುಗಳಿಗೆ ಅವರನ್ನು ಉತ್ತಮವಾಗಿ ಸಜ್ಜುಗೊಳಿಸುತ್ತದೆ.
ಪ್ರಯಾಣಿಕರಿಗೂ ಸಹ ಮಾರ್ಗಸೂಚಿಗಳು ಅಷ್ಟೇ ಪರಿವರ್ತನಾತ್ಮಕವಾಗಿವೆ. ಸವಾರಿ ಸುರಕ್ಷತೆ, ದತ್ತಾಂಶ ಗೌಪ್ಯತೆ ಮತ್ತು ಶುಲ್ಕ ಸ್ವರೂಪಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಪರಿಹರಿಸಲು ಹೊಸ ಮಾರ್ಗಸೂಚಿಗಳು, ಹೆಚ್ಚು ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ತರುತ್ತವೆ.
ಸಂಗ್ರಹಣಾ ವೇದಿಕೆಗಳಲ್ಲಿರುವ ಎಲ್ಲಾ ಚಾಲಕರು ಕಡ್ಡಾಯ ಪೊಲೀಸ್ ಪರಿಶೀಲನೆ, ಆರೋಗ್ಯ ತಪಾಸಣೆ ಮತ್ತು ನಡವಳಿಕೆಯ ತರಬೇತಿಗೆ ಒಳಗಾಗಬೇಕು. ಇದಲ್ಲದೆ, ಪ್ರತಿ ವಾಹನವು ಅಪ್ಲಿಕೇಶನ್ನಲ್ಲಿ ತುರ್ತು ಗುಂಡಿಗಳು, ಜಿ.ಪಿ.ಎಸ್ ಆಧಾರಿತ ಹಿಂಬಾಲಿಸುವುದು(ಟ್ರ್ಯಾಕಿಂಗ್) ಮತ್ತು ಟ್ರಿಪ್-ಶೇರಿಂಗ್(ಹಂಚಿಕೆ) ವೈಶಿಷ್ಟ್ಯಗಳನ್ನು ಹೊಂದಿರಬೇಕು, ಇವೆಲ್ಲವೂ ಸವಾರರ ಸುರಕ್ಷತೆಯನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಲಾಗಿದೆ. 24x7 ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ವ್ಯವಸ್ಥೆಯನ್ನು ರಾಜ್ಯಗಳ ಮೇಲ್ವಿಚಾರಣೆಯಲ್ಲಿ ಸಂಗ್ರಾಹಕರು ಸ್ಥಾಪಿಸಬೇಕು.
ಪ್ರಯಾಣಿಕರಿಗೆ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ದರಗಳು ಮತ್ತು ಏರಿಕೆ ಅಥವಾ ಹೆಚ್ಚಳದ ಬೆಲೆಗಳ ನಿಯಂತ್ರಣ. ಮಾರ್ಗಸೂಚಿಗಳು ಸ್ಪಷ್ಟ ಮಿತಿಗಳನ್ನು ನಿಗದಿಪಡಿಸುತ್ತವೆ: ಏರಿಕೆಯ ದರಗಳನ್ನು ರಾಜ್ಯ ನೀತಿಯನ್ನು ಅವಲಂಬಿಸಿ ಮೂಲ ದರದ 1.5 ರಿಂದ 2 ಪಟ್ಟು ಮಿತಿಗೊಳಿಸಲಾಗುತ್ತದೆ, ಇದು ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಪ್ರಯಾಣಿಕರ ಶೋಷಣೆ ತಡೆಯುವುದನ್ನು ಖಚಿತಪಡಿಸುತ್ತದೆ. ಇದರ ಜತೆಗೆ ಮೂಲ ದರ, ಕ್ರಿಯಾತ್ಮಕ ಶುಲ್ಕಗಳು, ಒಟ್ಟುಗೂಡಿಸುವ ಪಾಲು ಮತ್ತು ಸರ್ಕಾರಿ ತೆರಿಗೆಗಳು ಸೇರಿದಂತೆ ದರದ ವಿವರಣಾತ್ಮಕ ವಿವರಗಳನ್ನು ವೇದಿಕೆಗಳು ಪಾರದರ್ಶಕವಾಗಿ ಪ್ರದರ್ಶಿಸಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ, ಮಾರ್ಗಸೂಚಿಗಳು ಬಳಕೆದಾರರ ಗೌಪ್ಯತೆಯನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತವೆ. ಭಾರತದೊಳಗೆ ಇರುವ ಸರ್ವರ್ಗಳಲ್ಲಿ ಬಳಕೆದಾರರ ದತ್ತಾಂಶ ಸಂಗ್ರಹಿಸಲು ಮತ್ತು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ ಸೇರಿದಂತೆ ದತ್ತಾಂಶ ಸಂರಕ್ಷಣಾ ಮಾರ್ಗಸೂಚಿಗಳನ್ನು ಪಾಲಿಸಲು ಸಂಗ್ರಾಹಕರು ಅಥವಾ ಅಗ್ರಿಗೇಟರ್ಗಳಿಗೆ ಸೂಚನೆ ನೀಡಲಾಗುತ್ತದೆ, ದತ್ತಾಂಶ ದುರುಪಯೋಗ ಪಡಿಸಿಕೊಳ್ಳದಂತೆ ಅಥವಾ ಸೋರಿಕೆಯಾಗದಂತೆ ಮತ್ತು ಭಾರತದ ಸಾರ್ವಭೌಮ ದತ್ತಾಂಶ ನೀತಿಗಳ ಪ್ರಕಾರ ಉಳಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ.
ಪ್ರಧಾನ ಮಂತ್ರಿ ಮೋದಿ ಅವರ "ವಿಕಸಿತ ಭಾರತ@2047" ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ, ಇದು ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಗೆ ಒತ್ತು ನೀಡುತ್ತದೆ. ದಿವ್ಯಾಂಗ ಜನರ ಗೌರವ ಮತ್ತು ಸ್ವಾಭಿಮಾನ ಎತ್ತಿಹಿಡಿಯುವ ಅವರ ಅಚಲ ಬದ್ಧತೆಗೆ ಅನುಗುಣವಾಗಿ, ಮಾರ್ಗಸೂಚಿಗಳು ಒಟ್ಟುಗೂಡಿಸುವ ವಾಹನಗಳ ಒಂದು ಭಾಗವನ್ನು ದಿವ್ಯಾಂಗ ಜನರಿಗೆ ಸ್ನೇಹಿಯಾಗಿಸಬೇಕೆಂದು ಮತ್ತು ಕಾರ್ಯಪಡೆಯಲ್ಲಿ ಚಾಲಕರಾಗಿ ದಿವ್ಯಾಂಗ ಜನರಿಗೆ ಸೂಕ್ತ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳಬೇಕು ಎಂಬುದನ್ನು ಆದೇಶಿಸುತ್ತದೆ. ಅಂತಹ ವಾಹನಗಳ ನಿಖರವಾದ ಸಂಖ್ಯೆಯನ್ನು ಸ್ಥಳೀಯ ಅಗತ್ಯತೆಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಪ್ರತ್ಯೇಕ ರಾಜ್ಯಗಳು ನಿರ್ಧರಿಸುತ್ತವೆ.
ಸುಸ್ಥಿರತೆಗೆ ಪ್ರಮುಖ ಒತ್ತು ನೀಡುವಲ್ಲಿ, ಸಂಗ್ರಾಹಕರು ತಮ್ಮ ವೇದಿಕೆಯಲ್ಲಿ ವಿದ್ಯುತ್ ಚಲನಶೀಲತೆ, ಪರ್ಯಾಯ ಇಂಧನ ಅಥವಾ ಶೂನ್ಯ ಇಂಗಾಲ ಹೊರಸೂಸುವಿಕೆ ವಾಹನಗಳ ಕಡೆಗೆ ಪರಿವರ್ತನೆಗೊಳ್ಳಬೇಕಾಗುತ್ತದೆ. ಸಂಬಂಧಪಟ್ಟ ವಾಯು ನಿಯಂತ್ರಕ ಸಂಸ್ಥೆಗಳು ರೈಡ್-ಹೇಲಿಂಗ್ ವೇದಿಕೆಗಳಿಗಾಗಿ ರಾಜ್ಯವಾರು ಇವಿ ಗುರಿಗಳನ್ನು ನಿಗದಿಪಡಿಸುತ್ತವೆ, ಭಾರತದ ಹವಾಮಾನ ಮತ್ತು ಶುದ್ಧ ಗಾಳಿಯ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ. ದೆಹಲಿಯ ದೇವಿ ಬಸ್ಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಈಗಾಗಲೇ ಇವಿ ಏಕೀಕರಣದ ಉದಾಹರಣೆಗಳಾಗಿವೆ.
ಈ ಮಾರ್ಗಸೂಚಿಗಳು ರಾಜ್ಯ ನೀತಿಯ ನಿರ್ದೇಶನ ತತ್ವಗಳಿಗೆ, ವಿಶೇಷವಾಗಿ ಸಂವಿಧಾನ ವಿಧಿ 39ಕ್ಕೆ ಹೊಂದಿಕೆಯಾಗುತ್ತವೆ, ಇದು ಗಿಗ್ ಕಾರ್ಮಿಕರು ಸೇರಿದಂತೆ ನಾಗರಿಕರು ಸಾಕಷ್ಟು ಜೀವನೋಪಾಯದ ಹಕ್ಕು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯವನ್ನು ನಿರ್ದೇಶಿಸುತ್ತದೆ. ಹೆಚ್ಚುವರಿಯಾಗಿ, ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಖಾತರಿಪಡಿಸುವ ಸಂವಿಧಾನದ 21ನೇ ವಿಧಿಯನ್ನು ನ್ಯಾಯಾಲಯಗಳು ಸುರಕ್ಷಿತ ಕೆಲಸದ ವಾತಾವರಣ ಮತ್ತು ಘನತೆಯ ಚಲನಶೀಲತೆಯ ಹಕ್ಕು ಸೇರಿಸುವುದನ್ನು ವ್ಯಾಖ್ಯಾನಿಸಿವೆ.
ಹಲವಾರು ನ್ಯಾಯಾಂಗ ತೀರ್ಪುಗಳು ರೈಡ್-ಹೇಲಿಂಗ್ ವಲಯದಲ್ಲಿ ಸಮರ್ಪಕವಾದ ನಿಯಂತ್ರಣದ ಅಗತ್ಯವನ್ನು ಬಲಪಡಿಸಿವೆ. ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ(1982) ಮತ್ತು ಓಲ್ಗಾ ಟೆಲ್ಲಿಸ್ ವರ್ಸಸ್ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್(1985) ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ಜೀವನೋಪಾಯದ ಹಕ್ಕನ್ನು ಸಂವಿಧಾನ ವಿಧಿ 2ರ ಅವಿಭಾಜ್ಯ ಅಂಶವಾಗಿ ಒತ್ತಿಹೇಳಿತು. ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ(2020) ಪ್ರಕರಣದಲ್ಲಿ, ದೆಹಲಿ ಹೈಕೋರ್ಟ್ ರಾಜ್ಯ ಸರ್ಕಾರಗಳು ಒಟ್ಟುಗೂಡಿಸುವ ಬೆಲೆ ಮತ್ತು ಪರವಾನಗಿ ನಿಯಂತ್ರಿಸುವ ಹಕ್ಕನ್ನು ಎತ್ತಿಹಿಡಿದಿದೆ. ಗ್ರಾಹಕರ ಹಿತಾಸಕ್ತಿ ಸಂಪೂರ್ಣವಾಗಿ ಮಾರುಕಟ್ಟೆ-ಚಾಲಿತ ಬೆಲೆ ಮಾದರಿಗಳಿಗಿಂತ ಮೇಲುಗೈ ಸಾಧಿಸಬೇಕು ಎಂದು ಅದು ಹೇಳಿದೆ.
ಈ ತೀರ್ಪುಗಳು 2025ರ ಮಾರ್ಗಸೂಚಿಗಳ ಅಡಿ, ಗಿಗ್ ಕಾರ್ಮಿಕರಿಗೆ ವಿಸ್ತರಿಸಲಾದ ಅನೇಕ ರಕ್ಷಣೆಗಳಿಗೆ ಕಾನೂನು ಆಧಾರ ರೂಪಿಸುತ್ತವೆ, ಇದು ಪ್ರಯಾಣಿಕರ ಹಿತಾಸಕ್ತಿ ಮತ್ತು ಮೋಟಾರು ವಾಹನ ಸಂಗ್ರಾಹಕರ ಲಾಭದಾಯಕತೆ ಸಮತೋಲನಗೊಳಿಸುವ ಪ್ರಯತ್ನವಾಗಿದೆ. ಆದರೆ ಆಗಾಗ್ಗೆ ನಿರ್ಲಕ್ಷಿಸಲ್ಪಡುವ ಗಿಗ್ ಕಾರ್ಮಿಕರ ಹಕ್ಕುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ.
ಸನ್ಮಾನ್ಯ ಪ್ರಧಾನ ಮಂತ್ರಿ ಅವರ ಕನಿಷ್ಠ ಸರ್ಕಾರದ ಗರಿಷ್ಠ ಆಡಳಿತದ ಕಾರ್ಯವಿಧಾನದ ಪ್ರಕಾರ, ಹೊಸ ಮಾರ್ಗಸೂಚಿಗಳು ಲಘು ಸ್ಪರ್ಶ ನಿಯಂತ್ರಕ ವ್ಯವಸ್ಥೆಯನ್ನು ಒದಗಿಸುತ್ತವೆ. ಈಗ ಸಂಗ್ರಾಹಕರು 60 ದಿನಗಳಲ್ಲಿ ಪ್ಯಾನ್ ಇಂಡಿಯಾಗೆ ಅನ್ವಯವಾಗುವ ಎಲ್ಲಾ ರೀತಿಯ ಮೋಟಾರ್ ವಾಹನಗಳಿಗೆ ಒಂದೇ ಪರವಾನಗಿ ತೆಗೆದುಕೊಳ್ಳಬಹುದು. ಇದು ರೈಡ್-ಹೇಲಿಂಗ್ ಕಂಪನಿಗಳು ಚಾಲನಾ ಪರೀಕ್ಷಾ ಸೌಲಭ್ಯಕ್ಕಾಗಿ ವ್ಯವಸ್ಥೆಯನ್ನು ಹೊಂದಿರಬೇಕೆಂಬ ಅಗತ್ಯವನ್ನು ತೆಗೆದುಹಾಕುತ್ತದೆ. ಬದಲಿಗೆ ಈಗ ಅವರನ್ನು ಚಾಲನಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆಗಳು (ಐ.ಡಿ.ಟಿ.ಆರ್), ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರಗಳು(ಆರ್.ಡಿ.ಟಿ.ಸಿ) ಮತ್ತು ಚಾಲನಾ ತರಬೇತಿ ಕೇಂದ್ರಗಳಿಗಾಗಿ(ಡಿ.ಟಿ.ಸಿ) ಸಚಿವಾಲಯದ ಯೋಜನೆಯ ಲಾಭ ಪಡೆಯುವಂತೆ ಪ್ರೋತ್ಸಾಹಿಸಲಾಗಿದೆ. ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆದ ಈ ಕೇಂದ್ರಗಳು, ಜನಸಂಖ್ಯೆ ಮತ್ತು ಭೌಗೋಳಿಕತೆಯ ಆಧಾರದ ಮೇಲೆ ಐ.ಡಿ.ಟಿ.ಆರ್ ಗಳಿಗೆ 17.25 ಕೋಟಿ ರೂ., ಆರ್.ಡಿ.ಟಿ.ಸಿ ಗಳಿಗೆ 5.5 ಕೋಟಿ ರೂ. ಮತ್ತು ಡಿ.ಟಿ.ಸಿ ಗಳಿಗೆ 2.5 ಕೋಟಿ ರೂ.ವರೆಗೆ ಅನುದಾನದೊಂದಿಗೆ ದೂರದ ಪ್ರದೇಶಗಳಲ್ಲಿಯೂ ಸಹ ವೈಜ್ಞಾನಿಕ ತರಬೇತಿ ಪ್ರವೇಶಿಸುವಂತೆ ಮಾಡುವ ಗುರಿ ಹೊಂದಿವೆ.
ಈ ಸಂಸ್ಥೆಗಳು ವ್ಯಕ್ತಿಗಳನ್ನು ಉತ್ತಮ ಗುಣಮಟ್ಟದ ಚಾಲನಾ ಕೌಶಲ್ಯದಿಂದ ಸಜ್ಜುಗೊಳಿಸುವುದಲ್ಲದೆ, ದೇಶಾದ್ಯಂತ ವೃತ್ತಿಪರವಾಗಿ ತರಬೇತಿ ಪಡೆದ ಚಾಲಕರ ಗುಂಪನ್ನು ಸೃಷ್ಟಿಸಲು ಕೊಡುಗೆ ನೀಡುತ್ತಿವೆ. ಈ ಉಪಕ್ರಮವು ರಸ್ತೆ ಸುರಕ್ಷತೆ ಹೆಚ್ಚಿಸಲು ಮತ್ತು ಭಾರತೀಯ ರಸ್ತೆಗಳಲ್ಲಿ ಸಂಚಾರ ಅಪಘಾತಗಳ ಸಂಭವ ಕಡಿಮೆ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ. ರಸ್ತೆ ಅಪಘಾತಗಳು ಪ್ರಸ್ತುತ ರಾಷ್ಟ್ರೀಯ ಜಿ.ಡಿ.ಪಿಯ ಅಂದಾಜು 3%ರಷ್ಟು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ ಎಂದು ಒಪ್ಪಿಕೊಂಡು, 2030ರ ವೇಳೆಗೆ ರಸ್ತೆ ಅಪಘಾತ ಸಾವುಗಳನ್ನು 50%ರಷ್ಟು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ.
ಈ ಮಾರ್ಗಸೂಚಿಗಳ ಪ್ರಕಟಣೆಯು ಭಾರತದ ಸದೃಢವಾದ ಒಕ್ಕೂಟ ವ್ಯವಸ್ಥೆಯ ರಚನೆ ಮತ್ತು ಸಾಂವಿಧಾನಿಕ ನಿಬಂಧನೆಗಳನ್ನು ಪ್ರತಿಬಿಂಬಿಸುತ್ತದೆ. ಭಾರತದ ಸಂವಿಧಾನದ 7ನೇ ಶೆಡ್ಯೂಲ್ ಪ್ರಕಾರ, ಸಾರಿಗೆಯು ಈ ಸಮಕಾಲೀನ ಪಟ್ಟಿಯ ಅಡಿ ಬರುತ್ತದೆ, ರಾಜ್ಯಗಳಿಗೆ ಪರವಾನಗಿ ಮತ್ತು ಸಂಗ್ರಾಹಕರ ಕಾರ್ಯ ನಿರ್ವಹಣೆಗೆ ನಿಯಮಗಳನ್ನು ರಚಿಸಲು ಅಧಿಕಾರ ನೀಡುತ್ತದೆ. ಕಾಯಿದೆಯ ಸೆಕ್ಷನ್ 93 ವಿಶೇಷವಾಗಿ ಮಹತ್ವದ್ದಾಗಿದೆ, ಏಕೆಂದರೆ ಇದು ಕೇಂದ್ರ ಸರ್ಕಾರವು ಈ ಉದ್ದೇಶಕ್ಕಾಗಿ ಅಂತಹ ಮಾರ್ಗಸೂಚಿಗಳು ಅಥವಾ ಪರವಾನಗಿ ಮಾರ್ಗಸೂಚಿಗಳನ್ನು ನೀಡಲು ಅನುವು ಮಾಡಿಕೊಡುತ್ತದೆ.
ಕೇಂದ್ರ ಸರ್ಕಾರ ಹೊರಡಿಸಿದ್ದರೂ, 2025ರ ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಸರಿಸಬಹುದು, ಸ್ಥಳೀಯ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಬಹುದು. ರಾಜ್ಯಗಳಿಗೆ ಇತರ ಅಧಿಕಾರಗಳನ್ನು ನೀಡಲಾಗಿದೆ. ಸಂಗ್ರಾಹಕರಿಗೆ ಪರವಾನಗಿ ನೀಡುವುದು, ದರ ಸಂರಚನೆಗಳು ಮತ್ತು ಏರಿಕೆ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವುದು, ಚಾಲಕ ತರಬೇತಿ ಮತ್ತು ಪರಿಶೀಲನೆಯನ್ನು ಜಾರಿಗೊಳಿಸುವುದು, ಅನುಸರಣೆಯಿಲ್ಲದ ವೇದಿಕೆಗಳಿಗೆ ದಂಡ ವಿಧಿಸುವುದು, ಹಂಚಿಕೆಯ ಚಲನಶೀಲತೆ ಮಾದರಿಗಳ ಅಡಿ ಪ್ರಯಾಣಿಕರ ಪ್ರಯಾಣಕ್ಕಾಗಿ ಸಾರಿಗೆಯಲ್ಲದ ಮೋಟಾರ್ಸೈಕಲ್ಗಳ ಬಳಕೆಯನ್ನು ಅಧಿಕೃತಗೊಳಿಸುವುದು, ಸಂಗ್ರಾಹಕ ಫ್ಲೀಟ್ಗಳಿಗೆ ವಿದ್ಯುತ್ ವಾಹನ ಗುರಿಗಳನ್ನು ನಿಗದಿಪಡಿಸುವುದು ಮತ್ತು ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ.
ಜವಾಬ್ದಾರಿಗಳ ಈ ವಿಧಾನವು ಭಾರತದ ಸಹಕಾರಿ ಒಕ್ಕೂಟದ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ನೀತಿ ಸೂತ್ರೀಕರಣವು ಕೇಂದ್ರೀಕೃತವಾಗಿದೆ, ಆದರೆ ಅನುಷ್ಠಾನವು ಸಂದರ್ಭ-ಸೂಕ್ಷ್ಮ ಮತ್ತು ರಾಜ್ಯ-ನಿರ್ದಿಷ್ಟವಾಗಿರುತ್ತದೆ.
ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳು-2025 ಭಾರತದ ಡಿಜಿಟಲ್ ಚಲನಶೀಲತೆ ಪರಿಸರ ವ್ಯವಸ್ಥೆಯನ್ನು ಸುಧಾರಿಸುವತ್ತ ಪ್ರಗತಿಪರ ಮತ್ತು ಸಕಾಲಿಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಈ ಉಪಕ್ರಮದ ಯಶಸ್ಸು ಪರಿಣಾಮಕಾರಿ ಜಾರಿ, ಸಾರ್ವಜನಿಕ ಜಾಗೃತಿ ಮತ್ತು ವೇದಿಕೆ ಅನುಸರಣೆಯ ಮೇಲೆ ಅವಲಂಬಿತವಾಗಿರುತ್ತದೆ. ರಾಜ್ಯಗಳು ಅನುಸರಿಸಿದರೆ, ಅದು ರೈಡ್-ಹೇಲಿಂಗ್ ಸೇವೆಗಳನ್ನು ಸುರಕ್ಷಿತ, ಹೆಚ್ಚು ಜವಾಬ್ದಾರಿಯುತ ಮತ್ತು ಎಲ್ಲರನ್ನೂ ಒಳಗೊಂಡ ನಗರ ಸಾರಿಗೆ ಕಾರ್ಯವಿಧಾನವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ದೇಶಾದ್ಯಂತ ಚಾಲಕರು ಮತ್ತು ಸವಾರರು ಇಬ್ಬರಿಗೂ ಗೆಲುವು ತರುವ ಸನ್ನಿವೇಶವನ್ನು ಸೃಷ್ಟಿಸುತ್ತದೆ.
ನೀತಿ ನಿರೂಪಣೆಯಲ್ಲಿ ಅನೌಪಚಾರಿಕ ಅಥವಾ ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚಾಗಿ ಅದೃಶ್ಯರಾಗುವ ದೇಶದಲ್ಲಿ, ಈ ಮಾರ್ಗಸೂಚಿಗಳು ಒಂದು ಪ್ರಮುಖ ಬದಲಾವಣೆಯನ್ನು ಸೂಚಿಸುತ್ತವೆ. ಅವರು ಅಪ್ಲಿಕೇಶನ್ ಆಧಾರಿತ ಚಾಲಕರನ್ನು ಕೇವಲ ಸೇವಾ ಪೂರೈಕೆದಾರರಾಗಿ ಮಾತ್ರವಲ್ಲದೆ ಹಕ್ಕುಗಳು, ಘನತೆ ಮತ್ತು ಆಕಾಂಕ್ಷೆಗಳನ್ನು ಹೊಂದಿರುವ ಕೆಲಸಗಾರರಾಗಿ ಪರಿಗಣಿಸುತ್ತಾರೆ. ಅವರು ಪ್ರಯಾಣಿಕರನ್ನು ಕೇವಲ ಗ್ರಾಹಕರಾಗಿ ಮಾತ್ರವಲ್ಲದೆ ಸುರಕ್ಷಿತ, ಕೈಗೆಟುಕುವ ಮತ್ತು ಪಾರದರ್ಶಕ ಸೇವೆಗಳಿಗೆ ಅರ್ಹ ನಾಗರಿಕರಾಗಿ ಗುರುತಿಸುತ್ತಾರೆ.
ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳು-2025 ಭಾರತದಲ್ಲಿ ಡಿಜಿಟಲ್ ಚಲನಶೀಲತೆ ವಲಯಕ್ಕೆ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಸಂಗ್ರಾಹಕರಿಗೆ ಸ್ಪಷ್ಟ ಮಾನದಂಡಗಳು ಮತ್ತು ಜವಾಬ್ದಾರಿಗಳನ್ನು ಹೊಂದಿಸುವ ಮೂಲಕ, ಮಾರ್ಗಸೂಚಿಗಳು ಚಾಲಕರಿಗೆ ನ್ಯಾಯಯುತ ಗಳಿಕೆ ಮತ್ತು ಸಾಮಾಜಿಕ ಭದ್ರತೆ, ಪ್ರಯಾಣಿಕರಿಗೆ ಸುಧಾರಿತ ಸುರಕ್ಷತೆ ಮತ್ತು ಅನುಕೂಲತೆ ಮತ್ತು ಪರಿಸರ ಸುಸ್ಥಿರ ಅಭ್ಯಾಸಗಳನ್ನು ಒತ್ತಿಹೇಳುತ್ತವೆ. ಈ ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಂಡ ಮಾರ್ಗಸೂಚಿಯು ಭಾರತದ ಬೆಳೆಯುತ್ತಿರುವ ಗಿಗ್ ಆರ್ಥಿಕತೆಯ ಅಡಿಪಾಯವನ್ನು ಬಲಪಡಿಸುವುದಲ್ಲದೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಕಸಿತ ಭಾರತ @2047 ದೃಷ್ಟಿಕೋನಕ್ಕೆ ಸರಾಗವಾಗಿ ಹೊಂದಿಕೊಳ್ಳುತ್ತದೆ.
ಅಜಯ್ ತಮ್ತಾ,
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರು, ಭಾರತ ಸರ್ಕಾರ.







