ಕುಡುಕರ ತಾಣವಾಗಿ ಮಾರ್ಪಟ್ಟ ಹಾರಂಗಿ ಹಿನ್ನೀರು ಪ್ರದೇಶ
►ಮದ್ಯದ ಬಾಟಲಿಗಳನ್ನು ಎಸೆದು ವಿಕೃತಿ ►ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮಡಿಕೇರಿ: ಕಾವೇರಿ ನೀರಾವರಿ ನಿಗಮದ ಅಧೀನದಲ್ಲಿರುವ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ, ಪ್ರಕೃತಿಯ ಸೊಬಗನ್ನು ಸವಿಯುತ್ತಿದ್ದಾರೆ. ಇಲ್ಲಿನ ಪ್ರಶಾಂತವಾದ ವಾತಾವರಣವನ್ನು ಆನಂದಿಸಲು ಕೊಡಗು ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿದ್ದಾರೆ. ಆದರೆ, ಹಾರಂಗಿ ಹಿನ್ನೀರು ಪ್ರದೇಶವು ಇದೀಗ ಮೋಜು-ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ.
ಪ್ರವಾಸಿಗರು ನದಿಯ ಪಕ್ಕದಲ್ಲೇ ಕುಳಿತು ಮದ್ಯಪಾನ, ಮೋಜು-ಮಸ್ತಿಯ ಪಾರ್ಟಿ ಮಾಡುತ್ತಿದ್ದು, ಮದ್ಯದ ಬಾಟಲಿಗಳನ್ನು ನದಿಯ ಪಕ್ಕದಲ್ಲೇ ಎಸೆದು ವಿಕೃತಿ ಮೆರೆಯುತ್ತಿದ್ದಾರೆ. ಸುಂದರ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಕಲುಷಿತಗೊಳ್ಳುತ್ತಿರುವ ಜೀವ ನದಿ ಕಾವೇರಿ: ಜೀವ ನದಿ ಕಾವೇರಿ ಹಾರಂಗಿ ಹಿನ್ನೀರಿನ ಪ್ರದೇಶ ಮಲಿನಗೊಳ್ಳುತ್ತಿದೆ. ಹಾರಂಗಿ ಹಿನ್ನೀರಿನ ಪ್ರದೇಶವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಕಾವೇರಿ ನದಿ ದಡದಲ್ಲೇ ಪಾರ್ಟಿ ಮಾಡಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಊಟ ಮಾಡಿದ ತಟ್ಟೆಗಳನ್ನು ನದಿಗೆ ಎಸೆಯುತ್ತಿದ್ದಾರೆ. ನದಿ ದಡದಲ್ಲೇ ಕುಳಿತು ಮದ್ಯಪಾನ ಮಾಡಿ, ಬಾಟಲಿಗಳನ್ನು ಕಾವೇರಿ ನದಿಗೆ ಎಸೆಯುತ್ತಿದ್ದಾರೆ. ಪುಂಡರ ಮೋಜು-ಮಸ್ತಿಯಿಂದಾಗಿ ಕುಟುಂಬ ಸಮೇತ ಹಾರಂಗಿ ಹಿನ್ನೀರಿನ ಪ್ರದೇಶವನ್ನು ಭೇಟಿ ನೀಡಲು ಬರುವವರಿಗೆ ಕಿರಿಕಿರಿ ಉಂಟಾಗುತ್ತಿದೆ.
ಏತನ್ಮಧ್ಯೆ ಹಾರಂಗಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡುವವರು ನದಿಗೆ ವಾಹನವನ್ನು ಇಳಿಸುತ್ತಿದ್ದಾರೆ. ನದಿಯ ಪಕ್ಕದಲ್ಲೇ ಇರುವ ಬಂಡೆ ಕಲ್ಲುಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಾರಂಗಿ ಜಲಾಶಯದಿಂದ ನದಿಗೆ ನೀರನ್ನೂ ಬಿಡಲಾಗುತ್ತಿದೆ. ಆದರೆ ಯಾವುದೇ ಭಯವಿಲ್ಲದೆ ಮದ್ಯದ ಅಮಲಿನಲ್ಲಿ ನದಿಗೆ ಇಳಿದು ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನೈತಿಕ ಚಟುವಟಿಕೆ: ಹಾರಂಗಿ ಹಿನ್ನೀರಿನ ಪ್ರದೇಶವು ಪ್ರವಾಸಿಗರ ಪ್ರಿಯತಾಣವಾಗಿದ್ದರೆ ಮತ್ತೊಂದೆಡೆ ಅನೈತಿಕ ಚಟುವಟಿಕೆಗಳ ತಾಣವೂ ಆಗಿದೆ. ಕಾಲೇಜು ವಿದ್ಯಾರ್ಥಿಗಳು, ಪ್ರೇಮಿಗಳ ಅಡ್ಡವಾಗಿ ಹಾರಂಗಿ ಹಿನ್ನೀರಿನ ಪ್ರದೇಶವು ಮಾರ್ಪಟ್ಟಿದೆ. ಎಗ್ಗಿಲ್ಲದೆ ಅನೈತಿಕ ಚಟುವಟಿಕೆಗಳು ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿದೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
‘ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ’ ಎಂದು ಕೇವಲ ನಾಮಕಾವಸ್ಥೆಗೆ ಮಾತ್ರ ನಾಮಫಲಕ ಅಳವಡಿಸಲಾಗಿದೆ. ಆದರೆ, ಯಾವುದೇ ಸಿಸಿ ಕ್ಯಾಮರಾಗಳು ಕಾವೇರಿ ಹಿನ್ನೀರಿನ ಪ್ರದೇಶದಲ್ಲಿಲ್ಲ. ಆದ್ದರಿಂದ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಮೋಜು-ಮಸ್ತಿಗೆ ಕಡಿವಾಣ ಹಾಕಲು ಕಾವೇರಿ ನೀರಾವರಿ ಇಲಾಖೆಯಿಂದ ಕಾವಲುಗಾರರನ್ನು ನೇಮಕ ಮಾಡಬೇಕಾಗಿದೆ ಎಂಬ ಒತ್ತಾಯಗಳು ಕೇಳಿಬರುತ್ತಿದೆ.
ಹಾರಂಗಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಎಲ್ಲ ರೀತಿಯ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ. ನದಿ ದಡ ಪ್ರದೇಶದಲ್ಲಿ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಹಾರಂಗಿ ಹಿನ್ನೀರಿನ ಪ್ರದೇಶವನ್ನು ಅಶುಚಿತ್ವಗೊಳಿಸುವವರ ವಿರುದ್ಧ ಕ್ರಮಕೈಗೊಳ್ಳಲು ಸ್ಥಳೀಯ ಗ್ರಾಪಂಗೆ ನೋಟಿಸ್ ನೀಡುತ್ತೇವೆ.
-ಸೌಮ್ಯಾ, ಎಇ ಹಾರಂಗಿ ಯೋಜನಾ ವೃತ್ತ ಕುಶಾಲನಗರ







