ಹರಪನಹಳ್ಳಿ: ಜಿಪಂ, ತಾಪಂ ಚುನಾವಣೆಗೆ ಸನ್ನದ್ಧರಾಗುತ್ತಿರುವ ಆಕಾಂಕ್ಷಿಗಳು
ಪ್ರಭಾವಿಗಳ ಮನ ಗೆಲ್ಲಲು ಪ್ರಯತ್ನ: ಕಾರ್ಯಕರ್ತರೊಂದಿಗೆ ಹೆಚ್ಚಿದ ಒಡನಾಟ

ಸಾಂದರ್ಭಿಕ ಚಿತ್ರ
ಹರಪನಹಳ್ಳಿ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಕ್ಷೇತ್ರವಾರು ಮೀಸಲಾತಿ ಕರಡು ಪಟ್ಟಿ ಪ್ರಕಟವಾಗುತ್ತಿದ್ದಂತೆ ಹರಪನಹಳ್ಳಿ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ಗರಿಗೆದರಿವೆ. ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ಹೊಂದಿರುವ ಆಕಾಂಕ್ಷಿಗಳು ಪಕ್ಷದ ಟಿಕೆಟ್ ಪಡೆಯಲು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದು, ಸಮಾಜ ಸೇವೆ, ಜನಸಂಪರ್ಕ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಯಾರಿಗೆ ಪಕ್ಷದ ಟಿಕೆಟ್ ಒಲಿಯಲಿದೆ? ಪಕ್ಷ ಸಂಘಟನೆಗಾಗಿ ವರ್ಷಗಳಿಂದ ಶ್ರಮಿಸಿದ ಕಾರ್ಯಕರ್ತರಿಗೆ ಮಣೆ ಹಾಕಲಾಗುತ್ತದೆಯೇ ಅಥವಾ ಪ್ರಭಾವಿ ಆಕಾಂಕ್ಷಿಗಳಿಗೆ ಆದ್ಯತೆ ಸಿಗುತ್ತದೆಯೇ ಎಂಬ ಚರ್ಚೆ ಹರಪನಹಳ್ಳಿ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ಚುನಾವಣೆಯ ಸುಳಿವೇ ಇಲ್ಲದ ದಿನಗಳಲ್ಲಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದ ಕೆಲವರು ಇದೀಗ ಏಕಾಏಕಿ ಸಕ್ರಿಯರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು, ಗ್ರಾಮಗಳಲ್ಲಿ ಬೀದಿ ದೀಪ ಅಳವಡಿಸಲು ಸಹಕರಿಸುವುದು ಸೇರಿದಂತೆ ವಿವಿಧ ಸಾರ್ವಜನಿಕ ಚಟುವಟಿಕೆಗಳ ಮೂಲಕ ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಇತ್ತ ಫೇಸ್ಬುಕ್, ವಾಟ್ಸ್ಆ್ಯಪ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಶುಭಾಶಯಗಳ ಸಂದೇಶಗಳು, ಸೇವಾ ಕಾರ್ಯಗಳ ಚಿತ್ರಗಳು ಹಾಗೂ ರಾಜಕೀಯ ನಾಯಕರೊಂದಿಗಿನ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ರಾಜಕೀಯ ಪ್ರವೇಶದ ಸೂಚನೆ ನೀಡುತ್ತಿದ್ದಾರೆ.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಪೋಸ್ಟರ್ಗಳನ್ನು ಸಿದ್ಧಪಡಿಸಿ, ತಮ್ಮನ್ನು ಸಂಭಾವ್ಯ ಅಭ್ಯರ್ಥಿಗಳೆಂದು ಬಿಂಬಿಸಿಕೊಳ್ಳುವ ಪ್ರವೃತ್ತಿಯೂ ಹೆಚ್ಚಾಗಿದೆ. ಒಂದೊಂದು ಕ್ಷೇತ್ರದಲ್ಲೂ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದ ಮೂರು-ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳು ಗುರುತಿಸಿಕೊಂಡಿದ್ದಾರೆ. ಚುನಾವಣೆ ಘೋಷಣೆಯಾಗುವ ವೇಳೆಗೆ ಈ ಪೈಪೋಟಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕುತ್ತಾರೆಯೇ ನಾಯಕರು? :
ಪಕ್ಷದ ಸಂಘಟನೆಗಾಗಿ ಹಲವು ವರ್ಷಗಳಿಂದ ಶ್ರಮಿಸಿರುವ ಕಾರ್ಯಕರ್ತರು ಈ ಬಾರಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ವಿಧಾನಸಭೆ, ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದವರು ತಮ್ಮ ಸೇವೆ ಮತ್ತು ಪಕ್ಷನಿಷ್ಠೆಯನ್ನು ಪರಿಗಣಿಸಿ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಆದರೆ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಕ್ರಿಯರಾಗುವ ಹೊಸ ಆಕಾಂಕ್ಷಿಗಳು, ಪ್ರಭಾವಿ ಜನಪ್ರತಿನಿಧಿಗಳ ಆಪ್ತರು, ಹಿಂಬಾಲಕರು ಹಾಗೂ ಸಂಬಂಧಿಕರು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿರುವುದು ಹಳೆಯ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಪಕ್ಷದ ಸಂಘಟನೆಗಾಗಿ ದುಡಿದವರಿಗೆ ಆದ್ಯತೆ ಸಿಗುತ್ತದೆಯೇ ಅಥವಾ ಆರ್ಥಿಕ ಬಲ, ವೈಯಕ್ತಿಕ ಪ್ರಭಾವ ಹಾಗೂ ನಾಯಕರೊಂದಿಗಿನ ನಿಕಟ ಸಂಪರ್ಕ ನಿರ್ಣಾಯಕವಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಹಾಲಿ, ಮಾಜಿ ಶಾಸಕರ ಬೆನ್ನತ್ತಿದ ಆಕಾಂಕ್ಷಿಗಳು :
ಹರಪನಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಹಾಲಿ ಹಾಗೂ ಮಾಜಿ ಶಾಸಕರನ್ನು ಭೇಟಿ ಮಾಡಿ ತಮ್ಮ ರಾಜಕೀಯ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಪ್ರಭಾವಿ ಮುಖಂಡರನ್ನು ಸಂಪರ್ಕಿಸಿ ಟಿಕೆಟ್ಗಾಗಿ ಶಿಫಾರಸು ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಬಿಜೆಪಿ ಸೇರಿದಂತೆ ಇತರ ಪಕ್ಷಗಳಲ್ಲಿಯೂ ಆಕಾಂಕ್ಷಿಗಳ ಚಟುವಟಿಕೆಗಳು ಚುರುಕುಗೊಂಡಿವೆ.
ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಕೆಲವು ಆಕಾಂಕ್ಷಿಗಳು ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ಪ್ರದರ್ಶಿಸಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ನಾಯಕರ ಭಾವಚಿತ್ರಗಳನ್ನು ಬಳಸಿಕೊಂಡು ಪ್ರಚಾರ ನಡೆಸುವುದರ ಜೊತೆಗೆ, ನಿರ್ದಿಷ್ಟ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನೂ ಪರೋಕ್ಷವಾಗಿ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರು ಪಕ್ಷದ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವರು ಟಿಕೆಟ್ ದೊರೆಯದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆಯನ್ನೂ ಮುಂದಿಟ್ಟಿದ್ದಾರೆ.
ಮೀಸಲಾತಿ ಕರಡು ಪಟ್ಟಿ ಆಕಾಂಕ್ಷಿಗಳ ಲೆಕ್ಕಾಚಾರಕ್ಕೆ ಹೊಡೆತ :
ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಮೀಸಲಾತಿ ಕರಡು ಪಟ್ಟಿ ಪ್ರಕಟವಾಗುತ್ತಿದ್ದಂತೆ ಹಲವು ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ತಾವು ಸ್ಪರ್ಧಿಸಲು ಉದ್ದೇಶಿಸಿದ್ದ ಕ್ಷೇತ್ರದ ಮೀಸಲಾತಿ ಬದಲಾವಣೆಯಾಗಿರುವುದರಿಂದ ಕೆಲವರು ಪರ್ಯಾಯ ಕ್ಷೇತ್ರಗಳತ್ತ ಗಮನ ಹರಿಸುತ್ತಿದ್ದರೆ, ಇನ್ನು ಕೆಲವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮರುಚಿಂತನೆ ನಡೆಸುತ್ತಿದ್ದಾರೆ.
ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಕೆಲವು ಆಕಾಂಕ್ಷಿಗಳು ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಅಗತ್ಯವಿದ್ದಲ್ಲಿ ಕಾನೂನು ಮಾರ್ಗ ಅನುಸರಿಸುವ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ. ಹಿಂದಿನ ಚುನಾವಣೆಯ ಕ್ಷೇತ್ರವಾರು ಮೀಸಲಾತಿ ಹಾಗೂ ಪ್ರಸ್ತುತ ಪ್ರಕಟವಾಗಿರುವ ಕರಡು ಪಟ್ಟಿಯಲ್ಲಿನ ಬದಲಾವಣೆಗಳು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ.
ಅಂತಿಮ ಮೀಸಲಾತಿ ಪ್ರಕಟವಾದ ಬಳಿಕ ಚಿತ್ರಣ ಸ್ಪಷ್ಟ :
ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 8 ಜಿಲ್ಲಾ ಪಂಚಾಯಿತಿ ಹಾಗೂ 22 ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಪ್ರಕಟವಾಗಿರುವ ಮೀಸಲಾತಿ ಕರಡು ಪಟ್ಟಿಯ ಪ್ರಕಾರ, ಈ ಕ್ಷೇತ್ರಗಳಲ್ಲಿ ಸುಮಾರು ಶೇ.50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೆ, ಕ್ಷೇತ್ರವಾರು ಮೀಸಲಾತಿ ಇನ್ನೂ ಅಂತಿಮಗೊಂಡಿಲ್ಲ. ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿದ್ದು, ಆಕ್ಷೇಪಣೆಗಳ ಪರಿಶೀಲನೆ ಬಳಿಕ ಅಂತಿಮ ಪಟ್ಟಿ ಪ್ರಕಟವಾಗಬೇಕಿದೆ.
ರಾಜ್ಯ ಸರಕಾರ ಡಿಸೆಂಬರ್-ಜನವರಿ ಅವಧಿಯಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ನಿರೀಕ್ಷೆಯ ನಡುವೆ ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿಗಳು ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ. ಅಂತಿಮ ಮೀಸಲಾತಿ ಪ್ರಕಟವಾದ ಬಳಿಕ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬಹುದು ಎಂಬುದು ಸ್ಪಷ್ಟವಾಗಲಿದೆ. ಆ ನಂತರ ಟಿಕೆಟ್ಗಾಗಿ ನಡೆಯುವ ಪೈಪೋಟಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ಟಿಕೆಟ್ ಹಂಚಿಕೆಯೇ ಪಕ್ಷಗಳಿಗೆ ಸವಾಲು :
ಈ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಯಾವ ಮಾದಂಡಕ್ಕೆ ಆದ್ಯತೆ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಹಿಂದಿನ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಸೇವೆ, ಸ್ಥಳೀಯ ಮಟ್ಟದಲ್ಲಿ ಹೊಂದಿರುವ ಜನಬೆಂಬಲ, ಸಂಘಟನಾ ಸಾಮರ್ಥ್ಯ, ಸಮಾಜ ಸೇವೆ ಹಾಗೂ ಗೆಲ್ಲುವ ಸಾಧ್ಯತೆಗಳನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಒಂದೇ ಕ್ಷೇತ್ರದಲ್ಲಿ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಪಕ್ಷಗಳಿಗೆ ಸವಾಲಾಗುವ ಸಾಧ್ಯತೆಯಿದೆ. ಯಾರಿಗೇ ಟಿಕೆಟ್ ನೀಡಿದರೂ ಉಳಿದ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆಯನ್ನು ಒಗ್ಗಟ್ಟಿನಿಂದ ಮುನ್ನಡೆಸುವುದು ವರಿಷ್ಠರ ಮುಂದಿರುವ ಪ್ರಮುಖ ಹೊಣೆಗಾರಿಕೆಯಾಗಿದೆ.
ಅಂತಿಮವಾಗಿ ಸಮಾಜ ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತದಾರರ ವಿಶ್ವಾಸ ಗಳಿಸುತ್ತವೆಯೇ ಅಥವಾ ಪಕ್ಷನಿಷ್ಠೆ ಮತ್ತು ಸಂಘಟನಾ ಬಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಮೇಲುಗೈ ಸಾಧಿಸುತ್ತವೆಯೇ ಎಂಬುದೇ ಹರಪನಹಳ್ಳಿ ತಾಲೂಕಿನ ರಾಜಕೀಯ ವಲಯದ ಪ್ರಮುಖ ಚರ್ಚೆಯಾಗಿದೆ.
ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರ ಸೇವೆ ಹಾಗೂ ಆಯಾ ಕ್ಷೇತ್ರಗಳಲ್ಲಿ ಅವರು ಹೊಂದಿರುವ ಜನಬೆಂಬಲವನ್ನು ಪರಿಗಣಿಸಿ ಟಿಕೆಟ್ ನೀಡಲಾಗುವುದು. ಪಕ್ಷ ಸಂಘಟನೆಗೆ ನೀಡಿದ ಕೊಡುಗೆ, ಜನರೊಂದಿಗಿನ ಒಡನಾಟ ಮತ್ತು ಪಕ್ಷದ ಮೇಲಿನ ಬದ್ಧತೆಯನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.
-ಎಂ.ವಿ.ಅಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಹರಪನಹಳ್ಳಿ
ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಮಾಜಿ ಸಚಿವ ಕರುಣಾಕರ ರೆಡ್ಡಿ ಅವರನ್ನು ಭೇಟಿಯಾಗಿ ಟಿಕೆಟ್ಗಾಗಿ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಆದ್ಯತೆ ನೀಡುವುದರ ಜತೆಗೆ ಸ್ಥಳೀಯರ ಅಭಿಪ್ರಾಯವನ್ನೂ ಪರಿಗಣಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಟಿಕೆಟ್ ಹಂಚಿಕೆ ಮಾಡಲಾಗುವುದು.
-ಯಡಿಹಳ್ಳಿ ಶೇಖರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ, ಹರಪನಹಳ್ಳಿ






